‘ಕಪ್ಪೆಟ್ಟಜ್ಜನ ಮನೆಯ ಪಡ್ಡೆ ಕೋಣೆ’ ವೆಂಕಟಗಿರಿ ಕಡೇಕಾರ್ ಅವರ ಇತ್ತೀಚಿನ ಕಾದಂಬರಿ. ಈಗಾಗಲೇ ಅವರ ‘ಕೃಷ್ಣವೇಣಿ’ ಎಂಬ ಕಾದಂಬರಿ ಜನಪ್ರಿಯವಾಗಿದೆ. ಈ ಕಾದಂಬರಿಯಲ್ಲಿ ಅವರು ಉಡುಪಿಯ ಒಂದು ಸಂಪ್ರದಾಯ ಶರಣ ಶಿವಳ್ಳಿ ಬ್ರಾಹ್ಮಣ ಮನೆತನದ ನಾಲ್ಕು ತಲೆಮಾರುಗಳ ಜೀವನದ ಏಳು ಬೀಳುಗಳ ಸವಿವರ ಚಿತ್ರಣವನ್ನು ಕೊಡುತ್ತಾರೆ. ಜೊತೆಗೆ, ಲಾಗಾಯ್ತಿನಿಂದ ಅವರು ಆಚರಿಸಿಕೊಂಡು ಬಂದ ಸಂಪ್ರದಾಯಗಳು, ಪದ್ಧತಿಗಳು, ನಂಬಿಕೆಗಳು, ಜೀವನಕ್ರಮ ಮೊದಲಾದ ಸಾಂಸ್ಕೃತಿಕ ವಿವರಗಳೂ ಇಲ್ಲಿ ಸಿಗುತ್ತವೆ.
ಮೊದಲನೆಯ ತಲೆಮಾರಿನ ವೆಂಕಟ್ರಮಣ-ವೆಂಕಟಲಕ್ಷ್ಮೀ ಬೇಸಾಯದ ಕೆಲಸ ಬೇಡವೆಂದು ಉಡುಪಿಯ ಅಷ್ಟ ಮಠಗಳ ಸ್ವಾಮೀಜಿಗಳ ಬಳಿ ಬಂದು ಅವರ ಕೃಪೆಯಿಂದ ಕೆಲಸ ಪಡೆದು ಉಡುಪಿಯಲ್ಲಿ ನೆಲೆಸುವುದರಿಂದ ಕಥೆ ಆರಂಭವಾಗುತ್ತದೆ. ಅವರ ಐದು ಮಂದಿ ಮಕ್ಕಳಲ್ಲಿ ಗೋವಿಂದ ಎಂಬುವನು ಚೆನ್ನಾಗಿ ಓದಿ ತನ್ನ ಸ್ವಂತ ಪರಿಶ್ರಮದಿಂದ ಮೇಲೆ ಬಂದು ಕಲೆಕ್ಟರ್ ಆಫೀಸಿನಲ್ಲಿ ಅಮಲ್ದಾರನಾಗುತ್ತಾನೆ. ಅಣ್ಣ ತಮ್ಮಂದಿರು ಎಲ್ಲರೂ ಕೂಡು ಕುಟುಂಬದಲ್ಲಿ ಆರಾಮವಾಗಿರುತ್ತಾರೆ. ಗೋವಿಂದನ ಹೆಂಡತಿ ತಾಯಿ ಇಲ್ಲದ ತವರಿನ ಕಾವೇರಿ. ಆಗಿನ ಕಾಲಮಾನಕ್ಕೆ ತಕ್ಕಂತೆ ಅವಳಿಗೆ ಮದುವೆಯಾದಾಗ 11 ವರ್ಷ. ಅತ್ತೆ ವೆಂಕಟಲಕ್ಷ್ಮಿ ಅವಳನ್ನು ಸ್ವಂತ ಮಗಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಮುಂದೆ ಕಾವೇರಿ- ಗೋವಿಂದರ ಮಕ್ಕಳಾದ ಕಮಲು, ವೇದು, ರಾಜು, ಸಾವಿತ್ರಿಯರ ಸಂಸಾರಗಳ ಕಥೆ. ಕಾದಂಬರಿಯಲ್ಲಿರುವ ನಾಲ್ಕನೇ ತಲೆಮಾರು ಪದ್ಮಾ ಮತ್ತು ಸುಬ್ಬುಲಕ್ಷ್ಮೀ.
ಕಾಲಮಾನ ಮತ್ತು ಜೀವನ ಕ್ರಮಗಳಲ್ಲಿ ನಿಚ್ಚಳ ಪಲ್ಲಟಗಳು ಕಾಣತೊಡಗಿದ್ದು ನಾಲ್ಕನೇ ತಲೆಮಾರಿನಲ್ಲಿ. ಪದ್ಮಾ ಕಾಲೇಜಿಗೆ ಓದಲು ಹೋಗಿ ಹುಡುಗನೊಬ್ಬನನ್ನು ಪ್ರೀತಿಸಿ ಮದುವೆಯಾದದ್ದನ್ನು ಕಾವೇರಿ ದೊಡ್ಡ (ದೊಡ್ಡ ಅಂದರೆ ತಂದೆಯ ತಾಯಿ) ವಿರೋಧಿಸುವುದರೊಂದಿಗೆ ಸಂಘರ್ಷ ಆರಂಭವಾಗುತ್ತದೆ. ಅದೇ ಕಾರಣಕ್ಕೆ ಮುಂದೆ ಸುಬ್ಬುಲಕ್ಷ್ಮೀ ಕಾಲೇಜಿಗೆ ಹೋಗುವುದಕ್ಕೂ ಆಕೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ. ಸಂಪ್ರದಾಯ ಶರಣೆಯಾದ ಆಕೆ ಬದಲಾವಣೆಯನ್ನು ಸ್ವೀಕರಿಸದಿರುವುದು ಅಸಹಜವಲ್ಲ. ಒಂದೆಡೆ ಆಕೆ ಅಮಾನವೀಯವಾಗಿ ವರ್ತಿಸುತ್ತಾಳೆ ಕೂಡಾ. ಆದರೆ ಮರಣಶಯ್ಯೆಯಲ್ಲಿದ್ದಾಗ ಆಕೆಗೆ ತಾನು ಮಾಡಿದ್ದು ತಪ್ಪೆಂದು, ಬದಲಾವಣೆ ಸಹಜವೆಂದೂ ಅರಿವಿಗೆ ಬಂದು ಆಕೆ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಾಳೆ.
ಕಾದಂಬರಿಯ ತುಂಬಾ ಅಂದಿನ ಕಾಲದ ಶಿವಳ್ಳಿ ಬ್ರಾಹ್ಮಣ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ಸಂಪ್ರದಾಯ ಕಟ್ಟುಕಟ್ಟಳೆಗಳ ಸಾಂದರ್ಭಿಕ ಚಿತ್ರಣಗಳಿವೆ. ಹುಟ್ಟಿನ ಸಂಭ್ರಮ, ಹೆಣ್ಣು ಮಗು ಋತುಮತಿಯಾದಾಗ ಮಾಡುವ ಶಾಸ್ತ್ರಗಳು, ಉಪನಯನ, ಮದುವೆಗಳ ವಿಧಿ ವಿಧಾನಗಳು, ಸಾವಿನ ಸಂದರ್ಭಗಳಲ್ಲಿ ಮಾಡುವ ಅಪರಕರ್ಮಗಳು, ದೇವಸ್ಥಾನದಲ್ಲಿ ನಡೆಯುವ ಜಾತ್ರೆಯ ಸಂಭ್ರಮ, ಹೊಸ್ತು (ಹೊಸ ಅಕ್ಕಿಯ ಊಟ) ಇತ್ಯಾದಿ. ಮುಖ್ಯವಾಗಿ ಪಡ್ಡೆ ಕೋಣೆಯ (ಮನೆಯೊಳಗೆ ರಚಿಸಿದ ಹೆರಿಗೆ ಕೋಣೆ) ಚಿತ್ರಣಕ್ಕೆ ಲೇಖಕರು ಹೆಚ್ಚು ಗಮನ ಕೊಟ್ಟಿದ್ದಾರೆ. ಕಾದಂಬರಿಯ ಶೀರ್ಷಿಕೆಯಲ್ಲಿ ಪಡ್ಡೆ ಕೋಣೆಯನ್ನು ತನ್ನ ಮನೆಗೆ ಸೇರಿದಂತೆ ಕಟ್ಟಿಸಿದ್ದು ಎರಡನೇ ತಲೆಮಾರಿನ ಗೋವಿಂದ. ತನ್ನ ಹೆಂಡತಿಗೆ ತಾಯಿ ಇಲ್ಲ ಎನ್ನುವ ಕಾರಣಕ್ಕೆ ಆಕೆಯ ಹೆರಿಗೆಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆತ ಸುವ್ಯವಸ್ಥಿತವಾದ ಒಂದು ಪಡ್ಡೆ ಕೋಣೆಯಯನ್ನು ಸ್ವತಃ ನಿಂತು ಕಟ್ಟಿಸುತ್ತಾನೆ. ಆಗಿನ ಕಾಲದಲ್ಲಿ ಸೂಲಗಿತ್ತಿಯನ್ನು ಮನೆಗೆ ಕರೆಸುವ ಪದ್ಧತಿಯಿತ್ತು. ಆಕೆ ಅತ್ಯಂತ ಸಮರ್ಥವಾಗಿ ಹೆರಿಗೆ ಮಾಡಿಸುತ್ತಿದ್ದಳು. ತನ್ನ ಕೂಡು ಕುಟುಂಬದ ಎಲ್ಲ ಹೆಣ್ಣು ಮಕ್ಕಳ ಹೆರಿಗೆಗಳೂ ಅಲ್ಲೇ ನಡೆಯಬೇಕೆಂಬ ಆಗ್ರಹ ಅವರದ್ದು. ಆದರೆ ನಾಲ್ಕನೇ ತಲೆಮಾರಿನ ಪದ್ಮಾಳ ಹೆರಿಗೆಯ ಸಮಯದಲ್ಲಿ ಅವಳು ಗಂಡನ ಮನೆಯಲ್ಲಿಯೇ ಇದ್ದುದರಿಂದಾಗಿ ಪಡ್ಡೆ ಕೋಣೆಯ ಮಹತ್ವ ಕುಸಿಯುತ್ತದೆ. ಅಲ್ಲದೆ ಕಾಲದ ಹರಿವಿನೊಂದಿಗೆ ಹೆರಿಗೆ ಕೋಣೆ, ಸೂಲಗಿತ್ತಿಯ ಸೇವೆಗಳು ಕುರಿತಾಗಿದ್ದ ನಂಬಿಕೆಗಳು ಮರೆಯಾಗಿ ಹೆರಿಗೆಗಳು ಆಸ್ಪತ್ರೆಗಳಲ್ಲಿ ನಡೆಯುವುದು ಸಾಮಾನ್ಯವಾಗುತ್ತದೆ.
ಕಾದಂಬರಿಯ ಇಡೀ ಕಥೆಯನ್ನು ನಿರೂಪಿಸುವವಳು ನಾಲ್ಕನೇ ತಲೆಮಾರಿನ ಪದ್ಮಾ. ಕುಟುಂಬದ ಸಮಗ್ರ ಚಿತ್ರಣವನ್ನು ಅಧಿಕೃತವಾಗಿ ಕೊಡುವ ದೃಷ್ಟಿಯಿಂದ ಇದು ಸಮಂಜಸವೇ ಆಗಿದೆ. ಕಪ್ಪೆಟ್ಟು ಅನ್ನುವುದು ಅವಳ ಅಮ್ಮನ ತೌರುಮನೆ. ಆದ್ದರಿಂದ ಗೋವಿಂದ ಅವಳ ಪಾಲಿಗೆ ಕಪ್ಪೆಟ್ಟಜ್ಜ. ಹೀಗೆ ಕಾದಂಬರಿಗೆ ಕುತೂಹಲ ಮೂಡಿಸುವ ಒಂದು ವಿಶಿಷ್ಟ ಶೀರ್ಷಿಕೆಯನ್ನು ಲೇಖಕರು ಕೊಡುತ್ತಾರೆ. ಕಾದಂಬರಿಯ ನಿರೂಪಣೆಯ ಭಾಷೆ ಸರಳವಾಗಿದ್ದು ಚೆನ್ನಾಗಿದೆ.
ಕೃತಿ ವಿಮರ್ಶಕರು ಡಾ. ಪಾರ್ವತಿ ಜಿ. ಐತಾಳ್ :
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು