ಶಿವರಾಮ ಕಾರಂತರು ಕೇವಲ ಕಾದಂಬರಿಕಾರರಲ್ಲ. ಹುಚ್ಚು ಮನಸ್ಸಿನ ಹತ್ತು ಮುಖಗಳ ಮೂಲಕ ಅವರ ದಶಾವತಾರವನ್ನು ಕಾಣದವರಿಲ್ಲ. ಎಲ್ಲವೂ ಅನುಭವಕ್ಕಾಗಿ ಎಂಬ ನಿಲುವು ಅವರನ್ನು ಅನೇಕ ರಂಗಗಳಲ್ಲಿ ದುಡಿಸಿದೆ. ಇದರಿಂದಾಗಿ ಆ ಮಹಾ ಚಿಂತಕನ ಶೈಲಿ ನಿಸ್ಪೃಹವೂ ನಿರ್ಲಿಪ್ತವೂ ಆಗಿದೆ.
ಕಾದಂಬರಿಗಳೇ ಈ ಯುಗದ ಮಹಾಕಾವ್ಯಗಳೆಂಬ ಅಭಿಪ್ರಾಯ ಬರುವುದಕ್ಕೆ ಕಾರಂತರ ದುಡಿಮೆಯೂ ಕಾರಣವಾಗಿದೆ. ಅಮ್ಮನಾಗದೆಯೂ ಹೆಣ್ತನದ ವಿರಾಟ್ ರೂಪವನ್ನು ಮೆರೆದ ಮೂಕಜ್ಜಿಯ ಕನಸುಗಳ ನೋಟವು ಆಸ್ವಾದನೀಯವಾಗಿದೆ. ಇತರ ಕಾದಂಬರಿಗಳ ಅಂತರಂಗವನ್ನು ಕಾಣುವುದರ ನಡುವೆ ಕಾರಂತರ ಮಗುವಿನಂತಹ ಮನ ಮತ್ತು ಬದ್ಧತೆಗಳು ಪುಳಕವನ್ನು ಉಂಟು ಮಾಡುತ್ತವೆ.
ದೇಶಕ್ಕೆ ಸ್ವಾತಂತ್ರ್ಯ ದೊರಕುವ ಮೊದಲು ಬರೆದು ನಂತರ ಪ್ರಕಟಗೊಂಡ ‘ಕರುಳಿನ ಕರೆ’ ಎಂಬ ಕಾದಂಬರಿಯಲ್ಲಿ ಕೋರ್ಟು ಕಛೇರಿಗಳು, ಹೋಟೆಲ್, ಎತ್ತಿನ ಗಾಡಿ, ಪ್ಲೇಗು, ಮೈ ಮುರಿಯುವ ದುಡಿಮೆ, ವಿಲಾಸೀ ಬದುಕು, ನಡೆನುಡಿಯನ್ನು ಛಿದ್ರಗೊಳಿಸುವ ವ್ಯಸನ, ಬ್ಯಾಂಕುಗಳಿಲ್ಲದ್ದರಿಂದ ಬೆಳೆದ ಹಣದ ಲೇವಾದೇವಿ, ಅದರಿಂದಾದ ಎಡವಟ್ಟಿನಿಂದ ಮುನ್ನೆಲೆಗೆ ಬಂದ ವ್ಯಾಜ್ಯಗಳು, ಮೇಲು ಚೀಟಿ, ಬಡ್ಡಿಖರ್ಚುಗಳ ಸಹಿತ ಡಿಕ್ರಿ, ವಾಯ್ದೆಗೆ ಬಿಡುವು ಸಿಗದಂತೆ ತಡೆ ಹಿಂಸೆ, ಮನೆಯ ಅಡಿ ಹರಾಜು, ವಾಙ್ಮೂಲ, ತಳ್ಳಿ ಅರ್ಜಿ, ನೋಟು, ತಪಾಸಣೆ, ಕೋರ್ಟು ಖರ್ಚು, ಕಮಿಶನ್, ಫೀಸು, ಭತ್ತೆ, ಅವಧಿ, ಒಳ ವಕೀಲರ ಉಪಚಾರ- ಹೀಗೆ ಒಂದು ವಿಭಿನ್ನ ಜಗತ್ತೇ ತೆರೆದುಕೊಳ್ಳುತ್ತದೆ. ಉಡುಪಿ, ಪುತ್ತೂರು, ಬೆಟ್ಟಂಪಾಡಿಗಳ ನಡುವೆ ಶ್ರಮಜೀವಿಗಳ ಪರಸ್ಪರ ಬಂಧುತ್ವವುಳ್ಳ ಮೂರು ತಲೆಮಾರಿನ ಕಥೆಯ ಸಾರಾಂಶ ಹೀಗಿದೆ.
ಸುಬ್ರಾಯರು ಒಬ್ಬ ಶ್ರಮ ಜೀವಿ. ಬರಬರುತ್ತ ತಾನು ಕೊಟ್ಟ ಸಾಲಗಳನ್ನು ಬಡ್ಡಿ ಸಮೇತ ವಸೂಲು ಮಾಡುವ ಕೆಲಸ ಖಾಯಂ ಆಗಿಬಿಡುತ್ತದೆ. ಮಡದಿ ಭಾಗೀರಥಿ ತನ್ನ ತಂಗಿ ಗಂಗೆಗೆ ಆರ್ಥಿಕ ಸಹಾಯ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಡುತ್ತಾಳೆ. ಅಂದಿನ ಬೃಹತ್ ಮೊತ್ತವಾದ ಐದು ಸಾವಿರ ರೂಪಾಯಿ (ಇಂದಿನ ಲಕ್ಷಗಳಿಗೆ ಸಮ) ಹದಿನೈದು ವರ್ಷಕ್ಕೂ ಮರಳಿ ಬಾರದಿದ್ದಾಗ ವ್ಯಾಜ್ಯವು ಅನಿವಾರ್ಯವಾಗುತ್ತದೆ. ಅದರಿಂದ ಹೈರಾಣಾದ ಹಿರಣ್ಯ ತನ್ನ ಹೆಂಡತಿಯ ಅಕ್ಕನಾದ ಭಾಗೀರಥಿಯ ಹೆಸರಿನ ಆಸ್ತಿಯನ್ನು ಗುಟ್ಟಿನಲ್ಲಿ ಪರಭಾರೆ ಮಾಡಿ ಸಿಕ್ಕಿದ ಹಣದಿಂದ ಹತ್ತು ಸಾವಿರವನ್ನು ಅವಳ ಗಂಡನಾದ ಸುಬ್ರಾಯರಿಗೆ ತಲುಪಿಸುತ್ತಾನೆ. ಈ ವಿಷಯವನ್ನು ತಿಳಿದ ಸುಬ್ರಾಯರು ಉಗ್ರ ರೂಪವನ್ನು ತಾಳಿದ್ದರಿಂದ ಹಿರಣ್ಯ ಸಾಲ ಶೂಲಕ್ಕೆ ಬಿದ್ದು ಇನ್ನೂ ದುರಂತದೆಡೆಗೆ ಹೋಗುತ್ತಾನೆ. ಆ ಕುಟುಂಬಕ್ಕೆ ಅವಮಾನವಾಗಿ ಇದೇ ಕಾರಣಕ್ಕೆ ಲಕ್ಷ್ಮಣನೆಂಬ ಹುಡುಗನಿಂದಾಗಿ ಸುಬ್ರಾಯರ ಹತ್ಯೆಯಾಗುತ್ತದೆ. ಕೊಲೆ ಪೂರ್ವ ಯೋಜಿತವಲ್ಲ ಎಂಬುದು ಇಲ್ಲಿನ ಸಮರ್ಥನೆಯಾಗಿದೆ. ಯಾರೋ ಹುಚ್ಚ ನೂಕಿ ಹಾಕಿದಾಗ ತಲೆ ಬಂಡೆಗೆ ಬಡಿದು ಕೆನ್ನೆ ತೂತಾಗಿ ಮರಣ ಸಂಭವಿಸಿತು ಎಂಬಲ್ಲಿಗೆ ಪೊಲೀಸರು ಕೊಲೆಗಾರನಿಗಾಗಿ ಹುಡುಕಾಡದೆ ಸುಮ್ಮನಾಗುತ್ತಾರೆ. “ಕೆಟ್ಟವರು ಒಳ್ಳೆಯವರು ಕೂಡಿಯೇ ಈ ಜಗತ್ತು ಆಗುತ್ತದೆ. ಒಳ್ಳೆಯವರಲ್ಲಿ ಕೆಟ್ಟತನವೂ ಇರುತ್ತದೆ. ಕೆಟ್ಟವರಲ್ಲಿ ಒಳ್ಳೆಯತನವೂ ಇರುತ್ತದೆ. ಲೋಕದಲ್ಲಿ ನ್ಯಾಯ ನೀತಿಗಳು ಇರಬೇಕು ನಿಜ. ಅದನ್ನು ಸ್ಥಾಪಿಸಲು ಪರಮಾತ್ಮ ಅವತಾರವನ್ನೆತ್ತಿ ದುಷ್ಟ ಶಿಕ್ಷಣ ಶಿಷ್ಟ ರಕ್ಷಣ ಮಾಡುತ್ತಾನೆಂದು ನಾವು ನಾವೇ ಆ ಕೆಲಸ ಮಾಡಿದರೆ ಪ್ರಪಂಚವೇ ಅನಾಯಕವಾದೀತು. ನನ್ನ ದುಡುಕಿಗೆ ತಕ್ಕ ಶಾಸನವಾಯಿತು. ಪ್ರಾಯಶಃ 22 ವರ್ಷ ತಲೆ ಮರೆಸಿಕೊಂಡೆ. ನನ್ನ ಮನಸೇ ಜೈಲಾಗಿ ಹೋಗಿತ್ತು.” (ಪುಟ 211) ಎನ್ನುವ ಲಕ್ಷ್ಮಣನ ಮಾತುಗಳಲ್ಲಿ ಕಾದಂಬರಿಕಾರನ ನಿಲುವನ್ನು ಕಾಣಬಹುದು. ಲಕ್ಷ್ಮಣ ಊರು ಬಿಟ್ಟು ಘಟ್ಟದ ಕಡೆಗೆ ಹೋಗುತ್ತಿದ್ದವನು ಉಡುಪಿಯಿಂದ ಎತ್ತಿನ ಗಾಡಿಯಲ್ಲಿ ಹಿಂತಿರುಗುತ್ತಿದ್ದ ಬಿಂದುರಾಯ ದಂಪತಿಗಾಗಿ ದಾರಿಯುದ್ದಕ್ಕೂ ಮಾಡಿದ ಸೇವೆ ಅವನಿಗೆ ಅವರ ಮನೆಯಲ್ಲೆ ಉಳಿದುಕೊಳ್ಳುವ ಅವಕಾಶವನ್ನು ನೀಡುತ್ತದೆ. ಅವನು ತನ್ನ ಹೆಸರನ್ನು ಕೃಷ್ಣನೆಂದು ಬದಲಿಸಿ, ಆ ಮನೆಯಲ್ಲಿದ್ದು ಕೊನೆಗೆ ಮನೆ ಅಳಿಯನಾಗಿ, ಆ ಮೇಲೆ ತನ್ನ ನಿಜ ಚರಿತ್ರೆಯನ್ನು ಹೆಂಡತಿಯ ಬಳಿ ಹೇಳಿಬಿಡುತ್ತಾನೆ. ಆದರೆ ತನ್ನನ್ನು ಪೊರೆದ ಅತ್ತೆ ಮಾವನಿಗೆ ಹೇಳುವುದಕ್ಕೆ ಸಾಧ್ಯವಾಗಲಿಲ್ಲ ಎಂಬ ಕೊರಗು ಅವನಲ್ಲಿರುತ್ತದೆ.
ಸಾಂಸಾರಿಕವಾಗಿ ಮತ್ತು ನೈತಿಕವಾಗಿ ಅಪರಾಧಿ ಸ್ಥಾನದಲ್ಲಿದ್ದ ಲಕ್ಷ್ಮಣ ಮತ್ತು ಸುಬ್ರಾಯರ ಮೂರನೇ ಮಗ ಶ್ಯಾಮ ಈ ಕಾದಂಬರಿಯಲ್ಲಿ ಊರು ಬಿಟ್ಟು ಓಡಿದ ತರುಣರು. ಮುದ್ದಾದ ಮಗಳು ಹಾಗೂ ಒಪ್ಪಾದ ಮಡದಿಯಿದ್ದೂ ಬಡತನದಿಂದ ನೊಂದು, ಉದಾಸೀನದಿಂದ ಕೀಳರಿಮೆ ಹೆಚ್ಚಿ ಊರು ಬಿಟ್ಟು ಹೋದ ಶ್ಯಾಮ ಎಷ್ಟೇ ಚೆನ್ನಾಗಿ ದುಡಿದು ಸಂಪಾದನೆ ಮಾಡಿದರೂ ಇನ್ನೊಬ್ಬ ಹೆಣ್ಣಿನೊಂದಿಗೆ ಸಂಪರ್ಕ ಇಟ್ಟುಕೊಂಡು ನೈತಿಕ ಅಧಃಪತನಕ್ಕೆ ಒಳಗಾಗುತ್ತಾನೆ. ಹಣದ ಅವ್ಯವಹಾರ, ಪರಸ್ತ್ರೀ ವ್ಯಾಮೋಹ, ಸ್ವಜನ ಪಕ್ಷಪಾತ, ಮನೆಯಿಂದಲೇ ಕದಿಯುವ ಕುಬುದ್ಧಿಗಳು ಈ ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತವೆ. ಹೀಗಿದ್ದೂ ಅವರು ತಪ್ಪಿತಸ್ಥರೆ ? ಅವರಿಗೆ ಶಿಕ್ಷೆ ಬೇಕಿತ್ತೆ ? ತಾವು ಶಿಕ್ಷೆಯನ್ನು ಅನುಭವಿಸಿದೆವೆಂದು ಅವರ ಆತ್ಮಸಾಕ್ಷಿ ಅಂದುಕೊಂಡರೆ ಸಾಕೆ ? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಓದುಗರ ಮೇಲೆ ಬೀಳುತ್ತದೆ. ಅಂತೂ ಅವರಿಬ್ಬರು ಹಿಂತಿರುಗುವುದರೊಂದಿಗೆ ಕಾದಂಬರಿ ಸುಖಾಂತ ಕಾಣುವಲ್ಲಿ ಕಥನ ಅಪೂರ್ವವೆನಿಸುತ್ತದೆ.
ಪ್ರಕೃತಿ ವರ್ಣನೆ, ಮನುಷ್ಯ ಪ್ರಕೃತಿ ವರ್ಣನೆಗಳಲ್ಲಿ ಕಾರಂತರಿಗೆ ಅವರದೇ ವಿಶಿಷ್ಟ ಶೈಲಿ ಇದೆ. ಅದು ಭಾವರಹಿತ ವೈಚಾರಿಕ ರೀತಿಯದ್ದಲ್ಲ. ಹತ್ತಾರು ಕಡೆಗಳಲ್ಲಿ ಕಾದಂಬರಿ ಓದುಗನ ಕಣ್ಣು ಮಂಜಾಗಿಸುವ ಶಕ್ತಿಯನ್ನು ಪಡೆದಿದೆ. ಆದರೆ ಹಾಗೆ ಓದುಗನನ್ನು ಅಳುವಂತೆ ಮಾಡುವ ಮನಸ್ಸು ಅಥವಾ ಉದ್ದೇಶ ಕಾದಂಬರಿಕಾರರಿಗೆ ಇಲ್ಲ. ಬಿಸಿ ನೀರ ಕೆರೆಯ ಬಳಿಯಲ್ಲಿ ಶೀಲು – ಮಾಧವರ ಭೇಟಿ, ಒಂದೇ ಕ್ಷಣದಲ್ಲಿ ಪರಸ್ಪರ ಒಲವು, ಪ್ರೇಮ ಅದಕ್ಕೊಂದು ವಿಪ್ರಲಂಭ, ಕೊನೆಗೆ ಮದುವೆ ಮುಂತಾದೆಡೆಯಲ್ಲಿ ನಿಷ್ಕಲ್ಮಷ ಪ್ರೇಮ, ಗಂಡು ಹೆಣ್ಣಿನ ನಡುವೆ ಕುಡಿಯೊಡೆಯ ಬೇಕಾದ ಒಲವು, ಅದರಿಂದ ಕುಟುಂಬಗಳ ಮರುಜೋಡಣೆಯಾಗಿ ಸುಭದ್ರ ಸಮಾಜ ಸೃಷ್ಟಿಯಾಗಬೇಕಾದ್ದರ ಕುರಿತು ಕಾದಂಬರಿಕಾರರಿಗಿರುವ ನಿರೀಕ್ಷೆ ಗಮನ ಸೆಳೆಯುತ್ತದೆ. ಎಂಟು ದಶಕಗಳ ಹಿಂದಿನ ಮದುವೆಗಳ ರೀತಿ, ಬಾಲ್ಯದಲ್ಲೇ ಗಂಡು ಹೆಣ್ಣುಗಳಲ್ಲಿ ಚಿಗುರುತ್ತಿದ್ದ ಒಲವಿನ ಸ್ರೋತ ಇಲ್ಲಿ ಪ್ರಶ್ನಾರ್ಹವಾಗುವುದಿಲ್ಲ. ಲೇಖಕನಿಗೆ ಇಂಥ ಬಾಲ್ಯ ವಿವಾಹಗಳ ಬಗ್ಗೆ ಯಾವ ರೀತಿಯ ಅಭಿಪ್ರಾಯ ಇದ್ದಿರಬಹುದು ಎಂದು ತಿಳಿಯುವ ಕುತೂಹಲ ಮೂಡಿದರೂ ಕಾದಂಬರಿಕಾರನ ಉದ್ದೇಶ ಬೇರೆಯಾಗಿರುವುದರಿಂದ ವೈಚಾರಿಕತೆಯ ನಿರೀಕ್ಷೆಗೆ ಅವಕಾಶವಿಲ್ಲದಾಗುತ್ತದೆ.
ದೌರ್ಜನ್ಯ, ಅನ್ಯಾಯ, ಪ್ರೇಮಾಲಾಪ ಮುಂತಾದವುಗಳ ಕುರಿತು ದೊಡ್ಡ ಮನುಷ್ಯರಲ್ಲಿ ಸಮಾನವಾದ ತಾತ್ವಿಕ ನಿಲುವು ಇರುತ್ತದೆ. ನೂರು ವರ್ಷಗಳ ಹಿಂದೆ ಹರ್ಮನ್ ಹೆಸ್ಸೆ ಬರೆದ ‘ಸಿದ್ಧಾರ್ಥ’ದಲ್ಲಿ ಸಿದ್ಧಾರ್ಥನ ಮಾತು ಹೀಗಿದೆ : ‘ಅಪರಾಧಿಯೂ ಕೊನೆಗೆ ಬ್ರಹ್ಮವನ್ನೆ ಸೇರುತ್ತಾನೆ.’ ಸಹಜ- ಕೃತಕ, ಸತ್ಯ – ಸುಳ್ಳು, ನೀತಿ – ಅನೀತಿಗಳ ಅಂತರ ತೋರಿಸುವುದಕ್ಕೆ ಲೇಖಕ ಪ್ರಯತ್ನಿಸಬಾರದು. ಹಾಗೆ ಮಾಡಿದಲ್ಲಿ ಕೃತಿ ಸಾಯುತ್ತದೆ ಎಂಬ ಎಚ್ಚರ ಇಂಥ ಉತ್ತಮ ಸಾಹಿತಿಗಳಲ್ಲಿರುತ್ತದೆ. ‘ಕರುಳಿನ ಕರೆ’ಯಲ್ಲಿ ಲಕ್ಷ್ಮಣ ನಡೆಸುವ ಒಳ್ಳೆಯ- ಕೆಟ್ಟದ್ದರ ತುಲನೆಯನ್ನು ನೋಡಿದರೆ ಕೃತಿಕಾರ ಕಾಯ್ದುಕೊಳ್ಳುವ ಅಂತರ ಸ್ಪಷ್ಟವಾಗುತ್ತದೆ. ಈ ಕಾಲದಲ್ಲಿ ಒಳಿತು ಕೆಡುಕಿನ ವಿಮರ್ಶೆಯನ್ನು ಜೋರಾಗಿ ಮಾಡುತ್ತಿರುವವರ ಪೈಕಿ ವಿವೇಚನೆ ಉಳ್ಳವರು ಇಂಥ ಕಾದಂಬರಿಗಳನ್ನು ಓದಿದರೆ ತಮ್ಮನ್ನು ತಾವು ಖಂಡಿತ ತಿದ್ದಿಕೊಳ್ಳಬಹುದು.
ಕಾರಂತ ಒಬ್ಬ ಯುಗಪುರುಷ. ಕನ್ನಡ ಸಾಹಿತ್ಯ ಲೋಕದ ಮೇರು ಸದೃಶ ಶಕ್ತಿ.
ವಿಮರ್ಶಕ ಪಿ.ಎನ್. ಮೂಡಿತ್ತಾಯ
ಪ್ರೊ. ಪಿ.ಎನ್. ಮೂಡಿತ್ತಾಯ
ವಿಶ್ರಾಂತ ಪ್ರಾಂಶುಪಾಲರು ಭೂತಪೂರ್ವ ಅಧ್ಯಕ್ಷ , ಪಿ.ಜಿ. ರಿಸರ್ಚ್ ಸೆಂಟರ್ ಸರಕಾರಿ ಕಾಲೇಜು, ಕಾಸರಗೋಡು
ಶ್ರೀ ಲಕ್ಷ್ಮೀ, ಅಂಚೆ ಕಯ್ಯಾರು , ಉಪ್ಪಳ – 671322 .
ಪ್ರೊ. ಪಿ.ಎನ್. ಮೂಡಿತ್ತಾಯರು ಏಳು ವರ್ಷ ಆಕಾಶವಾಣಿ ಸಲಹೆಗಾರನಾಗಿಯೂ ಒಂದು ವರ್ಷ ತಲಚ್ಚೇರಿ ಸರಕಾರಿ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದು, ‘ದೇವರ ಕ್ಷಮೆ ಕೋರಿ’, ‘ಕಾರ್ಟೂನು ಬರೆಹಗಳು’, ‘ಮಿಸ್ಕಾಲು’ ಹೀಗೆ ನಾಲ್ಕು ಲಲಿತ ಪ್ರಬಂಧಗಳ ಸಂಕಲನ, ‘ಗೋವು ಮತ್ತು ಸಾವಯವ ಬದುಕು’ ಹಾಗೂ ‘ಹಸಿರುವಾಣಿ’ ಎಂಬ ಎರಡು ಪ್ರಕೃತಿ ಪರಿಸರ ಕೃತಿಗಳನ್ನು ರಚಿಸಿದ್ದಾರೆ. ಗೋಪಕುಮಾರ್ ವಿ. ಇವರ ಜೊತೆ ಸೇರಿ ಕಾರಂತರ ‘ಚೋಮನ ದುಡಿ’, ‘ಮೂಕಜ್ಜಿಯ ಕನಸುಗಳು’ ಹಾಗೂ ‘ಒಡಿಯೂರಿಲೆ ಅವಧೂತನ್’ ಹೀಗೆ ಆರು ಕೃತಿಗಳನ್ನು ಕನ್ನಡದಿಂದ ಮಲಯಾಳಕ್ಕೆ, ‘ಜ್ಞಾನಪ್ಪಾನ’, ‘ಚಟ್ಟಂಬಿ ಸ್ವಾಮಿಗಳು’, ‘ವ್ಯಾಸ ಭಾರತದ ದ್ರೌಪದಿ’ ಇತ್ಯಾದಿ ಕೃತಿಗಳನ್ನು ಮಲಯಾಳದಿಂದ ಕನ್ನಡಕ್ಕೆ ಅನುವಾದಿಸಿದ ಖ್ಯಾತಿ ಇವರದ್ದು. ಕವನ ಸಂಕಲನ ‘ಬೇರೆ ಶಬ್ದಗಳಿಲ್ಲ’ ಎಂಬ ಸ್ವರಚಿತ ಕವನ ಸಂಕಲನ ಮತ್ತು ಓರೆಗೆರೆ ಬರಹ ( ಕಾರ್ಟೂನ್) ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.