Subscribe to Updates

    Get the latest creative news from FooBar about art, design and business.

    What's Hot

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ರಾಧಾಕೃಷ್ಣ ಕಲ್ಚಾರ್ ಅವರ ‘ಕವಚ’
    Article

    ಪುಸ್ತಕ ವಿಮರ್ಶೆ | ರಾಧಾಕೃಷ್ಣ ಕಲ್ಚಾರ್ ಅವರ ‘ಕವಚ’

    June 21, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ‘ಕವಚ’ ಎಂಬ ಕೃತಿಯು ರಾಧಕೃಷ್ಣ ಕಲ್ಚಾರ್ ಇವರ ಎರಡನೇ ಕಾದಂಬರಿಯಾಗಿದೆ. ಮಹಾಭಾರತದ ಪಾತ್ರಗಳ ಪೈಕಿ ಮುಂಚೂಣಿಯಲ್ಲಿರುವ ದಿಟ್ಟ ನಾಯಕರಲ್ಲಿ ಒಬ್ಬನಾಗಿರುವ ಕರ್ಣನ ಬದುಕಿನ ಕುರಿತು ಹೆಣೆದ ವಿಚಾರಗಳು ಇಲ್ಲಿನ ಕಥಾವಸ್ತು. ಕ್ಷತ್ರಿಯನಾಗಿ ಹುಟ್ಟಿದರೂ ಕ್ಷತ್ರಿಯನಾಗಿ ಬದುಕದೆ ‘ಸೂತಸುತ’ ಎಂಬ ಹಣೆಪಟ್ಟಿಯನ್ನು ಹೊತ್ತು ಅನುಭವಿಸಿದ ತುಮುಲಗಳನ್ನು ಪ್ರಸ್ತುತ ಕಾದಂಬರಿಯಲ್ಲಿ ಕಾಣಬಹುದು.

    ‘ಯಾರದೋ ತೋಳುಗಳು ನನ್ನನ್ನೆತ್ತಿಕೊಂಡವು’ ಎಂಬ ಸ್ವಗತದಿಂದ ತೊಡಗುವ ಕಾದಂಬರಿ ಸ್ವಗತದ ಹಾದಿಯಲ್ಲಿ ಮುಂದುವರೆಯುತ್ತಾ ಸಾಗುವುದು ಕಾದಂಬರಿಯ ವೈಶಿಷ್ಟ್ಯವಾಗಿದೆ. ಪೌರಾಣಿಕ ಪಾತ್ರವನ್ನು ಪ್ರಥಮ ಪುರುಷದಲ್ಲಿ ನಿರೂಪಿಸದೆ ಉತ್ತಮ ಪುರುಷ ವಾಚಕದಲ್ಲಿ ಪರಿಭಾವಿಸಿ ಪಾತ್ರಕ್ಕೊಪ್ಪುವ ಭಾವಗಳನ್ನು ನಿರಂತರವಾಗಿ ವಿವರಿಸುವುದು ತ್ರಾಸದಾಯಕವಾದರೂ ಲೇಖಕರು ಅದರಲ್ಲಿ ಗೆದ್ದಿದ್ದಾರೆ.

    ದೂರ್ವಾಸ ಮುನಿಗಳನ್ನು ಸತ್ಕರಿಸಿದುದರ ಫಲವಾಗಿ ವರದ ರೂಪದಲ್ಲಿ ಕುಂತಿಗೆ ಅನುಗ್ರಹದ ರೂಪದಲ್ಲಿ ದೊರಕಿದ ಮಂತ್ರಗಳನ್ನು ತೀವ್ರ ಕೌತುಕದಿಂದ ಪರೀಕ್ಷಿಸಲು ಮುಂದಾಗಿದ್ದೇ ಭವಿಷ್ಯದಲ್ಲಿ ಆಕೆಯೂ ಸೇರಿದಂತೆ ಆಕೆಯ ಪುತ್ರರು ಎದುರಿಸಿದ ಹಲವು ಘಟನೆಗಳಿಗೆ ಕಾರಣವಾಯಿತು. ಮೂಡಣದಲ್ಲಿ ಮಿಂಚುತ್ತಿದ್ದ ಸೂರ್ಯನಿಂದ ಪಡೆದ ಕಂದನನ್ನು ಸಮಾಜದ ಕಣ್ಣುಗಳಿಗೆ ಹೆದರಿ, ನದಿಯಲ್ಲಿ ತೇಲಿ ಬಿಟ್ಟ ಕುಂತಿಯ ಬದುಕು ಅಪವಾದಗಳ ಭಾರದಿಂದ ಹಗುರವಾದರೂ ಏನೂ ಅರಿಯದ ಮುಗ್ಧ ಕಂದನ ಭವಿಷ್ಯವನ್ನು ಭಾರಗೊಳಿಸಿತು. ಅಧಿರಥ ಮತ್ತು ರಾಧಾ ದಂಪತಿಗಳು ಕರ್ಣನನ್ನು ತಮ್ಮ ಕಂದನಂತೆ ಸಲಹಿದರೂ ಆತನನ್ನು ದಿಟ್ಟ ವ್ಯಕ್ತಿಯಾಗಿ ಕಾಣುವಲ್ಲಿ ಸಮಾಜ ಹೇಗೆ ವಿಫಲವಾಯಿತು ಮತ್ತು ಆ ವೈಫಲ್ಯಗಳು ಕರ್ಣನ ಬದುಕಿಗೆ ಹೇಗೆ ತಿರುವು ನೀಡಿದವು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ ಲೇಖಕರ ಶ್ರಮ ಅಭಿನಂದನಾರ್ಹವಾಗಿದೆ.

    ಮಹಾಭಾರತವು ಕರ್ಣನ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಲು ಬಾಕಿಯಾದ ವಿಚಾರಗಳನ್ನು ಪ್ರಸ್ತುತ ಕೃತಿಯಲ್ಲಿ ಓದಿ ಚಿಂತನೆ ನಡೆಸಬಹುದು. ನಿಂದನೆ ತಿರಸ್ಕಾರಗಳು ಕರ್ಣನ ಮನವನ್ನು ಜರ್ಜರಿತಗೊಳಿಸಿತು ಎನ್ನುವುದಕ್ಕಿಂತ ಆತನ ಬದುಕಿನ ದುರಂತ ಅಂತ್ಯಕ್ಕೆ ಕಾರಣವಾದವು ಎನ್ನುವುದು ಸೂಕ್ತ. ಸೂತಸುತನಾಗಿ ಉಂಡ ಬದುಕಿನ ಕಹಿ ಆತ ಅಂಗರಾಜ್ಯಾಧಿಪತಿಯಾದ ನಂತರವೂ ಮುಂದುವರೆದದ್ದು, ಸಮಾಜವೊಂದರ ಆಲೋಚನೆಗಳು ಅದೆಷ್ಟು ಕೆಳಮಟ್ಟದಲ್ಲಿದ್ದವು ಎಂಬುದನ್ನು ಲೇಖಕರು ಚಿಂತನಾರ್ಹ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

    ಮಹಾಭಾರತದ ಮಹಾ ಸಂಗ್ರಾಮವು ಹದಿನೆಂಟು ದಿನಗಳ ಅವಧಿಯಲ್ಲಿ ಘಟಿಸಿ ಧರ್ಮದ ಏಳ್ಗೆಯೊಂದಿಗೆ ಹೇಗೆ ಕೊನೆಗೊಂಡಿತೋ ಹಾಗೆಯೇ ಈ ಕಾದಂಬರಿ ಹದಿನೆಂಟು ಅಧ್ಯಾಯಗಳ ಮೂಲಕ ಕರ್ಣನಿಗೆ ವಿಶಿಷ್ಟ ವ್ಯಕ್ತಿತ್ವ ನೀಡುವುದರ ಮೂಲಕ ಮುಕ್ತಾಯ ಕಂಡಿದೆ. ತೋಳುಗಳಲ್ಲಿ ತ್ರಾಣವಿದ್ದೂ ರಣಾಂಗಣದಲ್ಲಿ ವೈರಿ ಪಡೆಗಳನ್ನು ಸದೆ ಬಡಿಯಲಾರದೆ, ಯೋಚನೆಗಳ ಸಾರವನ್ನು ಯೋಜನೆಗಳಲ್ಲಿ ಅನುಷ್ಠಾನಗೊಳಿಸಲಾರದೆ, ಬಲವಿದ್ದೂ ಬದುಕು ಕಂಡುಕೊಳ್ಳಲಾರದೆ ನೊಂದು, ಬೆಂದರೂ ಛಲ ಬಿಡದೆ ತನ್ನ ಅಸ್ತಿತ್ವಕ್ಕಾಗಿಯೇ ಕಾದಾಡಿದ ಕರ್ಣ ಸ್ಮರಣೀಯನೇ ಸರಿ ಎಂದು ಸಾರುವ ಕೃತಿ ಮೆಚ್ಚುಗೆ ಹಾಗೂ ಗೌರವಗಳಿಗೆ ಯೋಗ್ಯವಾಗಿದೆ.

    ಆಚಾರ್ಯ ದ್ರೋಣರಿಂದ ತಿರಸ್ಕೃತನಾಗಿ, ಜಮದಗ್ನಿ ಸುತ ಭಾರ್ಗವರಾಮರಿಂದ ಶಪಿತನಾಗಿ, ಕ್ಷತ್ರಿಯ ಸಭೆಯಲ್ಲಿ ಅವಮಾನಿತನಾಗಿ, ನಂತರ ಸುಯೋಧನಿಂದ ಅಂಗಾಧಿಪತಿ ಎಂದು ಸನ್ಮಾನಿತನಾದರೂ ಸುಖ ಕಾಣದೇ, ಗೆಲುವಿನ ಹಾದಿಗಳನ್ನು ಕಿರಿದಾಗಿಸಿಕೊಂಡು ಭೀಷ್ಮ, ಶಲ್ಯ, ಪಾಂಡವಾದಿಗಳ ಸಾಲಿಗೆ ಸೇರುವ ಅರ್ಹತೆ ಇದ್ದೂ ಯೋಗವಿಲ್ಲದೇ, ಅಂಥ ಅವಕಾಶವನ್ನು ಹೊಂದಲಾರದೆ, ಗೌರವಾದರಗಳಿಂದ ವಿಮುಖನಾಗಿ, ತನ್ನವರೆನಿಸಿಕೊಂಡವರ ನಡುವೆ ಅಸ್ಮಿತೆಯನ್ನು ಸ್ಥಾಪಿಸಲಾಗದೆ ಒಬ್ಬಂಟಿಯಾಗಿ ಉಳಿದ ಕರ್ಣ ಕೊನೆಗೂ ಇಹವನ್ನು ತ್ಯಜಿಸಿ, ಅನಾಥವಾದ ತನ್ನ ಅಸುವನ್ನು ದೈವೀ ಶಕ್ತಿಯ ಮುಂದೆ ಅಂತ್ಯ ಕಾಣಿಸಿಕೊಳ್ಳುವ ಬಗೆ ಕೃತಿಯ ಕೊನೆಗೆ ಅತ್ಯಂತ ಭಾವುಕ ನೆಲೆಯಲ್ಲಿ ವ್ಯಕ್ತವಾಗಿದೆ.

    ಪೌರಾಣಿಕ ಪಾತ್ರಗಳಲ್ಲಿ ಪ್ರೀತಿ ಹೊಂದಿದ, ಅದರಲ್ಲೂ ಮುಖ್ಯವಾಗಿ ಕರ್ಣನ ಅಂತರಂಗವನ್ನು ಆಳವಾಗಿ ತಿಳಿಯ ಬಯಸುವ ಪ್ರತಿಯೊಬ್ಬ ವ್ಯಕ್ತಿಯೂ ಓದಬಹುದಾದ, ಓದಿದ ನಂತರವೂ ಚಿಂತನೆಗೆ ಹಚ್ಚುವ ವಿಶೇಷ ಹಾಗೂ ವಿಭಿನ್ನ ಕೃತಿ ‘ಕವಚ’ವಾಗಿದೆ. ನೀರಸ ಎನಿಸದ ಪಕ್ವ ನಿರೂಪಣ ಶೈಲಿ, ಸರಳ ಭಾಷೆಯಿಂದಾಗಿ ಈ ಕೃತಿಯು ಓದುಗರಿಂದ ಮನ್ನಣೆ ಪಡೆಯುವುದರಲ್ಲಿ ಎರಡು ಮಾತಿಲ್ಲ.

    ಕೃತಿಯ ಹೆಸರು : ‘ಕವಚ’
    ಲೇಖಕರು : ರಾಧಾಕೃಷ್ಣ ಕಲ್ಚಾರ್
    ಕೃತಿಯ ಬೆಲೆ : 185 ರೂಪಾಯಿಗಳು
    ಪ್ರಕಾಶಕರು : ವೀರಲೋಕ ಪುಸ್ತಕ ಪ್ರಕಾಶನ, ಬೆಂಗಳೂರು.
    ಮೊದಲ ಮುದ್ರಣ : ಜೂನ್ 2024
    ಪುಟಗಳ ಸಂಖ್ಯೆ : 149

    ವಿಮರ್ಶಕರು ನಯನಾ ಜಿ.ಎಸ್ :

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಸರಕಾರಿ ಪದವಿ ಪರ್ವರ ಕಾಲೇಜು ಬೆಳ್ಳಾರೆ ಎಂಬಲ್ಲಿ ಪೂರೈಸಿರುತ್ತಾರೆ. ಇವರು ತಮ್ಮ ಬಿ.ಎ. ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿಂದ ಪಡೆದಿರುತ್ತಾರೆ. ಹವ್ಯಾಸಿ ಬರಹಗಾರ್ತಿಯಾಗಿರುವ ಇವರ ಅನೇಕ ಲೇಖನಗಳು, ಪ್ರವಾಸ ಕಥನಗಳು, ಕವನಗಳು, ಗಜಲ್ ಗಳು, ಲಲಿತ ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಕುವೆಂಪು ಸಾಹಿತ್ಯ ಪ್ರತಿಷ್ಠಾನ (ರಿ) ಕುಪ್ಪಳ್ಳಿ ಇವರು ಆಯೋಜಿಸಿದ್ದ ‘ಕುವೆಂಪು ಅವರ ನಾಡು – ನುಡಿ ಚಿಂತನೆ’ ವಿಷಯದ ಬಗೆಗಿನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. 2021-22ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಇವೆರಡರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನೂ, 2022-23ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರ ಕಥೆಗಳು ಮತ್ತು ಕವನಗಳು ಆಕಾಶವಾಣಿಯ ದನಿಯಲ್ಲಿ ಬಿತ್ತರಗೊಂಡಿದೆ.

    ಕೃತಿಯ ಲೇಖಕರ ಬಗ್ಗೆ :

    ಮಾಣಿಪ್ಪಾಡಿ ಕೇಶವ ಭಟ್ಟ ಮತ್ತು ಕನಕಲಕ್ಷ್ಮಿ ದಂಪತಿಗಳ ಸುಪುತ್ರರಾದ ರಾಧಾಕೃಷ್ಣ ಕಲ್ವಾರ್ ಇವರು ಸುಳ್ಯ ತಾಲೂಕಿನ ಪಂಜ ಗ್ರಾಮದ ಕಲ್ಟಾರ್ ಎಂಬಲ್ಲಿಯವರು. ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದು, ನಾಡಿನ ಸುಪ್ರಸಿದ್ಧ ಅರ್ಥಧಾರಿ ಕಲಾವಿದರಾಗಿರುವ ಇವರು ಉಪನ್ಯಾಸಕ, ಅಂಕಣಕಾರ, ಸಾಹಿತಿ, ವಿಮರ್ಶಕ, ಭಾಷಣಕಾರ ಹೀಗೆ ಹತ್ತು ಹಲವು ರಂಗಗಳಲ್ಲಿ ತೊಡಗಿಸಿಕೊಂಡ ಬಿಡುವಿಲ್ಲದ ಸಾಧಕ. ‘ಕೂಡುಮನೆ’ (ಕಾದಂಬರಿ), ‘ಅವರವರ ದಾರಿ’ (ಕಥಾಸಂಕಲನ), ‘ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ’ – ಇವರ ಕೃತಿಗಳು. ಜೊತೆಗೆ ತರಂಗ, ಉತ್ಥಾನಗಳಲ್ಲಿ ಅಂಕಣಕಾರಾಗಿದ್ದಾರೆ. ಸದ್ಯ ಹೊಸದಿಗಂತ ಪತ್ರಿಕೆಯಲ್ಲಿ ಆ ಲೋಚನ ಹಾಗೂ ತುಷಾರ ಪತ್ರಿಕೆಯಲ್ಲಿ ಉಲಿಯ ಉಯ್ಯಾಲೆ ಅಂಕಣದ ಲೇಖರಾಗಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ‘ಅರ್ಥಾಂತರಂಗ’ ಸರಣಿ ಪ್ರಾತ್ಯಕ್ಷಿಕೆಗಳ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಶಕ್ತಿನಗರದಲ್ಲಿ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭ | ಜೂನ್ 22
    Next Article ಕಾರಡ್ಕದಲ್ಲಿ ಡಿಜಿಟಲ್ ರೂಪ ಪಡೆದ ‘ರಜೆಯ ಮಜಾ’
    roovari

    Add Comment Cancel Reply


    Related Posts

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    ಗಣೇಶ ಪ್ರಸಾದಜೀಯವರ 9ನೆಯ ಕೃತಿ ‘ಕಾಂತೆ ಕವಿತೆ’ ಲೋಕಾರ್ಪಣೆ

    May 13, 2025

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ಕಥಾಸಂಕಲನ ‘ಮೃದ್ಗಂಧ’

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.