‘ಕೆಂಡದ ರೊಟ್ಟಿ’ ಕಥೆಗಾರ್ತಿ ಉಷಾ ನರಸಿಂಹನ್ ಇವರ ಇತ್ತೀಚಿನ ಕಾದಂಬರಿ. ಕೆಂಡದ ಮೇಲೆ ಸುಡುವ ರೊಟ್ಟಿಯ ರೂಪಕದ ಮೂಲಕ ದಾಂಪತ್ಯ ಬದುಕಿನ ಯಶಸ್ಸು-ವೈಫಲ್ಯಗಳ ಮೇಲೆ ಲೇಖಕಿ ಬೆಳಕು ಚೆಲ್ಲಿದ್ದಾರೆ. ಗಂಡನಾಗಲಿ ಹೆಂಡತಿಯಾಗಲಿ ತುಸು ಎಚ್ಚರ ತಪ್ಪಿದರೂ ಬದುಕಿನ ಹದ ತಪ್ಪಿ ವಿನಾಶದ ಅಂಚಿಗೆ ದೂಡಲ್ಪಡುತ್ತದೆ ಅನ್ನುವ ಸತ್ಯದತ್ತ ಕಾದಂಬರಿ ಬೆರಳು ಮಾಡಿ ತೋರಿಸುತ್ತದೆ.
ಇಲ್ಲಿ ಆ ರೀತಿ ಬಾಳು ಹದ ತಪ್ಪಿ ಮುರಿದು ಹೋಗುವ ಮೂರು ದಾಂಪತ್ಯಗಳು ಒಂದೇ ಕುಟುಂಬದ ಸತ್ಯಾ-ರಾಮಣ್ಣ, ನಾಗವೇಣಿ-ಗೋಪಾಲರಾಯ ಮತ್ತು ರಮ್ಯಾ-ಪ್ರಶಾಂತರದ್ದು. ಸತ್ಯಾ ಸುಂದರಿಯಾದರೂ ಅಹಂಕಾರವಿಲ್ಲದ ಸರಳ-ಸಾಧು ಹೆಣ್ಣು. ಹಳ್ಳಿಯ ಬದುಕಿಗೆ ಚೆನ್ನಾಗಿ ಹೊಂದಿಕೊಂಡು ದೊಡ್ಡ ಕುಟುಂಬದ ಎಲ್ಲ ಕೆಲಸಗಳನ್ನು ಸಮರ್ಥವಾಗಿ ತೂಗಿಸಿಕೊಂಡು ಹೋಗುತ್ತಾಳೆ. ಆದರೆ ಅವಳ ಗಂಡ ರಾಮಣ್ಣ ಬೇಜವಾಬ್ದಾರಿ ಗಂಡಸು. ಮೇಲಾಗಿ ಪುರುಷ ಪ್ರಾಧಾನ್ಯದಲ್ಲಿ ನಂಬಿಕೆಯಿಟ್ಟವನು. ಹೆಣ್ಣಾದವಳು ಸದಾ ತಗ್ಗಿ ಬಗ್ಗಿ ಇರಬೇಕು ಮತ್ತು ಗಂಡ ಅವಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು ಅನ್ನುವವನು. ಅದ್ದರಿಂದ ಹೆಂಡತಿಯನ್ನು ಸದಾ ಕ್ರೂರವಾಗಿ ನಡೆಸಿಕೊಳ್ಳುತ್ತಾನೆ. ಪರಿಣಾಮವಾಗಿ ಸತ್ಯಾಸತ್ಯಳ ವೈಯಕ್ತಿಕ ಬದುಕಿನಲ್ಲಿ ರಾಮಣ್ಣನ ಅಣ್ಣ ಗೋಪಾಲರಾಯನ ಪ್ರವೇಶವಾಗುತ್ತದೆ.
ಗೋಪಾಲರಾಯ ಸರಳ ಸಜ್ಜನ ಪ್ರಜ್ಞಾವಂತ ವ್ಯಕ್ತಿ. ಅದರೆ ಅವನ ಹೆಂಡತಿ ನಾಗವೇಣಿ ಅವನು ಹಳ್ಳಿಗ-ಅನಾಗರಿಕನೆಂದು ಅವನನ್ನು ತಿರಸ್ಕರಿಸಿ ಪೇಟೆಯ ಮನೆಗೆ ಹೋಗಿ ಕುಳಿತುಕೊಂಡು ಅವನಿಂದ ದೂರವಿರುತ್ತಾಳೆ. ಪರಿಣಾಮವಾಗಿ ಸತ್ಯಾಳ ದುರವಸ್ಥೆಯನ್ನು ನೋಡಿ ಅವಳ ಬಗ್ಗೆ ಸಹಾನುಭೂತಿ ತಾಳಿದ ಗೋಪಾಲರಾಯ ಅವಳೊಂದಿಗೆ ಕ್ರಮೇಣ ದೈಹಿಕ ಸಂಬಂಧವನ್ನು ಬೆಳೆಸುತ್ತಾನೆ. ಸತ್ಯಾಳ ಮಗಳು ರಮ್ಯ ಎಳೆಯ ವಯಸ್ಸಿನಲ್ಲಿ ವೇಣಿ ದೊಡ್ಡಮ್ಮನ ಥಳಕು-ಬಳಕು-ಸವಿಮಾತುಗಳಿಂದ ಆಕರ್ಷಿತಳಾಗಿ ಅವಳ ಆಶ್ರಯದಲ್ಲಿ ಬೆಳೆಯುತ್ತಾಳೆ. ವೇಣಿ ತನ್ನ ಪ್ರಭಾವವನ್ನು ಬಳಸಿಕೊಂಡು ರಮ್ಯಾಳನ್ನು ತನ್ನ ಸಂಬಂಧಿ ಹುಡುಗ ಪ್ರಶಾಂತನೊಂದಿಗೆ ಮದುವೆ ಮಾಡಿಸುವುದರಲ್ಲಿ ಯಶಸ್ವಿಯಾಗುತ್ತಾಳೆ. ಆದರೆ ರಮ್ಯಾ ಪ್ರಶಾಂತರದ್ದು ವಿಷಮ ದಾಂಪತ್ಯವಾಗುತ್ತದೆ. ಅವನ ಕ್ರೌರ್ಯವನ್ನು ಸಹಿಸಿಕೊಳ್ಳಲಾರದೆ ರಮ್ಯಾ ಅವನಿಂದ ವಿಚ್ಛೇದನಕ್ಕಾಗಿ ಅರ್ಜಿ ಹಾಕುತ್ತಾಳೆ. ಆದರೆ ಈ ಹಂತಕ್ಕೆ ಬರುವಾಗ ನಾಗವೇಣಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅದ್ದರಿಂದಲೇ ಅವಳು ರಮ್ಯಾಳ ವಿಚ್ಛೇದನಕ್ಕೆ ಬೇಕಾದ ಸಹಾಯವನ್ನೂ ಮಾಡುತ್ತಾಳೆ.
ಗೋಪಾಲರಾಯನಂತಹ ಒಬ್ಬ ಒಳ್ಳೆಯ ವ್ಯಕ್ತಿಯೊಂದಿಗೆ ಸುಂದರವಾಗಬಹುದಾಗಿದ್ದ ತನ್ನ ದಾಂಪತ್ಯ ಜೀವನವನ್ನು ತನ್ನ ಹಟಮಾರಿತನದಿಂದಾಗಿ ತಾನೇ ಹಾಳು ಮಾಡಿಕೊಂಡೆ ಎಂದು ಗಂಡನ ಸಾವಿನ ನಂತರ ಕಾದಂಬರಿಯ ಕೊನೆಯಲ್ಲಿ ವೇಣಿಯಲ್ಲಿ ಉಂಟಾಗುವ ಅರಿವು ಅವಳನ್ನು ಒಬ್ಬ ಸ್ತ್ರೀವಾದಿ ಚಿಂತಕಿಯನ್ನಾಗಿಸುತ್ತದೆ. ಹೆಂಡತಿಯನ್ನು ಪ್ರೀತಿಸಿ ಗೌರವಿಸುವಂಥ ಒಬ್ಬ ಗಂಡನ ಜತೆಗೆ ಸದ್ಗೃಹಿಣಿಯಾಗಿ ಬಾಳುವುದು ಹೇಗೆ ಒಬ್ಬ ಹೆಣ್ಣಿನ ಧರ್ಮವೋ ಹೆಂಡತಿಯನ್ನು ವಿನಾಕಾರಣ ನಿರ್ಲಕ್ಷಿಸಿ ಗಂಡು ಎನ್ನುವ ಅಹಂಕಾರದಿಂದ ಅವಳ ಮೇಲೆ ಅಧಿಕಾರ ಚಲಾಯಿಸುವ ಗಂಡನನ್ನು ತಿರಸ್ಕರಿಸಿ ದಾಂಪತ್ಯದಿಂದ ಹೊರ ನಡೆದು ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಕೂಡಾ ಪ್ರಜ್ಞಾವಂತ ಮಹಿಳೆಯ ಲಕ್ಷಣವೆಂದು ಅವಳು ಮುಕ್ತವಾಗಿ ಹೇಳುತ್ತಾಳೆ.
ಮಲೆನಾಡಿನಲ್ಲಿ ನೆಲೆಸಿದ ಒಂದು ಕುಟುಂಬದ ಕಥೆ ಇದಾಗಿದ್ದು, ಹೋದಲ್ಲಿ ಬಂದಲ್ಲಿ ಗಟ್ಟಿಹಾಲಿನ ಕಾಫಿಯ ಪರಿಮಳ ಘಮ್ಮೆಂದು ಮೂಗಿಗೆ ಬಡಿಯುತ್ತದೆ. ಮಲೆನಾಡಿನ ತಂಪಿನ ವಾತಾವರಣದ ಚಿತ್ರಣ ಕಣ್ಣಮುಂದೆ ನಿಲ್ಲುತ್ತದೆ. ಇಡೀ ಕಾದಂಬರಿ ಆಧುನಿಕ ಜೀವನ ಶೈಲಿಯಲ್ಲಾದ ಕೆಲವು ಬದಲಾವಣೆಗಳನ್ನು ಬಿಟ್ಟರೆ ಎಂ.ಕೆ. ಇಂದಿರಾ ಅವರ ಕಾದಂಬರಿಗಳನ್ನು ನೆನಪಿಸುತ್ತದೆ.
ಕೃತಿಯ ಹೆಸರು : ಕೆಂಡದ ರೊಟ್ಟಿ (ಕಾದಂಬರಿ)
ಲೇಖಕಿ : ಉಷಾ ನರಸಿಂಹನ್
ಪ್ರ. : ಅಂಕಿತ ಪುಸ್ತಕ ಬೆಂಗಳೂರು
ಪುಸ್ತಕ ವಿಮರ್ಶಕರು ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಭಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಡಾ. ಪಾರ್ವತಿಯವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದ ರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕರು ಉಷಾ ನರಸಿಂಹನ್