ತಮ್ಮ ಮೊದಲ ಕಥಾ ಸಂಕಲನ ‘ಅಜ್ಜ ನೆಟ್ಟ ಹಲಸಿನ ಮರ’ದ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡ ಸತೀಶ್ ವಕ್ವಾಡಿಯವರು ಈಗ ತಮ್ಮ ಎರಡನೇ ಸಂಕಲನ ‘ಕೊನೆಯ ಎರಡು ಎಸೆತಗಳು’ ಮೂಲಕ ಭರವಸೆಯ ಕಥೆಗಾರರಾಗಿ ಬೆಳೆದಿದ್ದಾರೆ. ಬುಕ್ ಬ್ರಹ್ಮ ಪ್ರಕಟಿಸಿದ ಈ ಸಂಕಲನದಲ್ಲಿ ಗಮನ ಸೆಳೆಯುವ ಎಂಟು ಕಥೆಗಳಿವೆ. ಆಧುನಿಕ ಸಂದರ್ಭದಲ್ಲಿ ಗ್ರಾಮೀಣ ಮತ್ತು ನಗರ ಕೇಂದ್ರಿತ ಸಂಸ್ಕೃತಿಗಳು ಹೇಗೆ ಪಲ್ಲಟಗೊಳ್ಳುತ್ತಿವೆ ಎಂಬುದನ್ನು ಈ ಕಥೆಗಳು ತುಲನಾತ್ಮಕವಾಗಿ ಚಿತ್ರಿಸುತ್ತವೆ.
ಗಾಳಿಯನ್ನಾಗಲಿ ನೆರಳನ್ನಾಗಲಿ ಕೊಡದ ‘ಗಾಳಿಮರ’ ಮೊದಲನೆಯ ಕಥೆಯ ಶೀರ್ಷಿಕೆ. ನಗರಕ್ಕೆ ಹೋಗಿ ಬಿಳಿ ಕಾಲರ್ ಉದ್ಯೋಗ ಸಂಪಾದಿಸಿ ಜೀವನ ನಡೆಸಬೇಕೆಂಬ ಆಸೆಯಿದ್ದರೂ ವಿದ್ಯೆ ಕಲಿಯುವುದರಲ್ಲಿ ದಡ್ಡನಾದ ಸದಾಶಿವ ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ ಮನೆಯಲ್ಲೂ ಊರಲ್ಲೂ ಎಲ್ಲರಿಗೂ ಬೇಕಾದವನಾಗುತ್ತಾನೆ. ಬಂದ ಗಂಡುಗಳನ್ನೆಲ್ಲ ಒಂದಿಲ್ಲೊಂದು ಕೊರತೆ ಹೇಳಿ ತಿರಸ್ಕರಿಸುವ ತಂಗಿಗೊಂದು ಗಂಡು ಹುಡುಕುವುದರಲ್ಲಿ ಅವನ ಯೌವನ ಸವೆಯುತ್ತದೆ. ಅವಳಿಗೆ ಮದುವೆ ನಿಶ್ಚಯವಾಗುವುದಕ್ಕೆ ಮೊದಲೇ ಅವನು ಪ್ರೀತಿಸಿದ ಹುಡುಗಿ ಅವನಿಗಾಗಿ ಕಾದು ಕೊನೆಗೆ ಹಿರಿಯರ ಒತ್ತಾಯಕ್ಕೆ ಮಣಿದು ಬೇರೆ ಮದುವೆಯಾಗುತ್ತಾಳೆ. ತಂಗಿಯ ಮದುವೆ ಮುಗಿಯುತ್ತಲೇ ಪ್ರಾಯಶಃ ತನ್ನ ಬದುಕು ಗಾಳಿಮರದಂತೆ ಅಪ್ರಯೋಜಕವೆಂಬ ಭಾವದಿಂದ ಸದಾಶಿವ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಸಂಪಾದಕರೇ… ಕಥೆಯಲ್ಲಿ ಹಳ್ಳಿಯ ಪ್ರಶಾಂತ ಬದುಕಿಗೆ ಮುಖಾಮುಖಿಯಾಗಿ ನಿಲ್ಲುವ ನಗರದ ಬದುಕು ಚಿತ್ರಿತವಾಗಿದೆ. ಆಧುನಿಕತೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಕಾರ್ಪೊರೇಟ್ ವಲಯದಲ್ಲಿ ನಡೆಯುವ ಪುರುಷನ ಅಧಿಕಾರದ ದುರ್ಬಳಕೆ, ಹೆಣ್ಣಿನ ಶೋಷಣೆ, ಹೆಣ್ಣು ಪ್ರತಿ ತಂತ್ರ ಹೂಡಿ ಪ್ರತಿಭಟಿಸಿ ಗೆಲ್ಲುವುದು- ಹೀಗೆ ಹಲವಾರು ಪ್ರಸ್ತುತ ವಿಚಾರಗಳು ಹೆಣೆಯಲ್ಪಟ್ಟಿವೆ. ನಿಜದ ಜೀವನವನ್ನೇ ಕಾಲ್ಪನಿಕ ಬದುಕಾಗಿ ತೋರಿಸುವ ತಂತ್ರ ಇಲ್ಲಿದೆ.
‘ತಲ್ಲಣಿಸದಿರು ಮನವೇ’ ಕಥೆಯಲ್ಲೂ ಸ್ತ್ರೀ ಸಂವೇದನೆ ಎದ್ದು ಕಾಣುತ್ತದೆ. ಪ್ರೀತಿಸಿ ಮದುವೆಯಾದರೂ ವಿವಾಹ ಬಾಹಿರ ಸಂಬಂಧ, ವಿಚ್ಛೇದನ, ಪುನರ್ ವಿವಾಹ, ಲಿವ್ ಇನ್ ಸಂಬಂಧ, ನಂಬಿಕೆ ದ್ರೋಹಿಗಳು ಸುತ್ತ ಸುತ್ತುವ ನಗರ ಕೇಂದ್ರಿತ ಯಾಂತ್ರಿಕ ಬದುಕು ಇಲ್ಲಿನ ಫೋಕಸ್.
ಶೀರ್ಷಿಕೆ ಕಥೆ ‘ಕೊನೆಯ ಎರಡು ಎಸೆತಗಳು’ ಇತರ ಕಥೆಗಳಿಗಿಂತ ವಸ್ತು ಮತ್ತು ತಂತ್ರಗಳ ದೃಷ್ಟಿಯಿಂದ ಭಿನ್ನವಾಗಿದೆ. ಇಲ್ಲಿ ಚಿತ್ರಿತವಾಗಿರುವುದು ಗ್ರಾಮೀಣ ಬದುಕು. ಎರಡು ಹಳ್ಳಿಗಳ ನಡುವೆ ಒಂದೊಮ್ಮೆ ಇದ್ದ ನಾಗರಿಕ ಪೂರ್ವ ಸೌಹಾರ್ದಯುತ ಸಂಬಂಧವು ಗಡಿಯಲ್ಲಿ ಇದ್ದ ದೇವಸ್ಥಾನಕ್ಕೆ ನಾಮಫಲಕ ಹಾಕಿಸುವ ವಿಚಾರದಲ್ಲಿ ಒಡೆದು ಛಿದ್ರವಾಗಿ ಹೋಗುವ ಮತ್ತು ವಿವಾದಕ್ಕೆ ಗ್ರಾಸವಾಗುವ ಕಥೆ. ಇದನ್ನು ಇತ್ಯರ್ಥ ಮಾಡಲು ಎರಡು ಗ್ರಾಮಗಳ ನಡುವೆ – ಧಾರ್ಮಿಕ ವಿಚಾರಕ್ಕೆ ಸಂಬಂಧ ಪಡದೇ ಇರುವ ಕ್ರಿಕೆಟ್ ಆಟದ ಸ್ಪರ್ಧೆಯನ್ನು ಏರ್ಪಡಿಸುವುದು -ಧರ್ಮವು ಹೇಗೆ ಪೂರ್ತಿ ಲೌಕಿಕವಾಗಿ ಬದಲಾಗುತ್ತದೆ ಎಂದು ತೋರಿಸುವ ರೀತಿಯಲ್ಲಿ ವ್ಯಂಗ್ಯವೂ ವಿಡಂಬನಾತ್ಮಕವೂ ಆಗಿದೆ.
ಸಂಕಲನದಲ್ಲಿರುವ ಎಂಟೂ ಕಥೆಗಳು ಪ್ರಚಲಿತ ವಿದ್ಯಮಾನಗಳನ್ನೇ ವಸ್ತುವಾಗಿಸಿಕೊಂಡಿವೆ. ಕಥೆಗಳ ಭಾಷೆ ಮತ್ತು ನಿರೂಪಣಾ ಶೈಲಿಗಳಲ್ಲಿ ಪ್ರೌಢಿಮೆಯಿದೆ. ಪಾತ್ರ ಚಿತ್ರಣಗಳು, ಪಾತ್ರಗಳು ಮತ್ತು ಸನ್ನಿವೇಶಗಳ ನಡುವೆ ನಡೆಯುವ ಸಂಘರ್ಷಗಳು ಕಥೆಯ ಓದಿನ ಅನುಭವವನ್ನು ಗಾಢವಾಗಿಸುತ್ತವೆ. ಆದ್ದರಿಂದ ಸತೀಶ್ ವಕ್ವಾಡಿಯವರು ಕನ್ನಡ ಕಥಾ ಲೋಕಕ್ಕೆ ಒಳ್ಳೆಯ ಸೇರ್ಪಡೆಯಾಗುತ್ತಾರೆ ಎಂಬುದನ್ನು ಈ ಸಂಕಲನವು ಸಾಬೀತು ಪಡಿಸುತ್ತದೆ ಎನ್ನಬಹುದು.
– ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
ಲೇಖಕ : ಸತೀಶ್ ಶೆಟ್ಟಿ ವಕ್ವಾಡಿ
ಕಥೆಗಾರ, ಲೇಖಕ ಸತೀಶ್ ಶೆಟ್ಟಿ ವಕ್ವಾಡಿ ಮೂಲತಃ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದವರು. ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಹಣಕಾಸು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ದೆಸೆಯಿಂದಲೇ ಬರವಣಿಗೆ ಮೈಗೂಡಿಸಿಕೊಂಡಿರುವ ಇವರ ಇಷ್ಟದ ಪ್ರಕಾರಗಳೆಂದರೆ ಸಣ್ಣ ಕಥೆ, ಕ್ರೀಡಾ ಲೇಖನಗಳು ಮತ್ತು ರಾಜಕೀಯ ಬರಹಗಳು.
ಇವರ ಅನೇಕ ಕಥೆ, ರಾಜಕೀಯ ಮತ್ತು ಕ್ರೀಡಾ ಬರಹಗಳು ಮಂಗಳೂರು ಆಕಾಶವಾಣಿ ಮತ್ತು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾರ್ಯಕ್ರಮ ನಿರೂಪಣೆ ಇವರ ಇನ್ನೊಂದು ಇಷ್ಟದ ಕ್ಷೇತ್ರ. ಜೊತೆಗೆ ಹಣಕಾಸು ಮತ್ತು ಆರ್ಥಿಕ ವಿಶ್ಲೇಷಣೆಯಲ್ಲಿ ಪರಿಣಿತರು. ಸತೀಶ್ ಅವರ ಮೊದಲ ಕೃತಿ ‘ಅಜ್ಜ ನೆಟ್ಟ ಹಲಸಿನ ಮರ’ 2021ರಲ್ಲಿ ಪ್ರಕಟಗೊಂಡು, ಎರಡನೇ ಮುದ್ರಣಗೊಂಡು ಸಾಹಿತ್ಯಾಸಕ್ತರ ಗಮನ ಸೆಳೆದಿತ್ತು. ‘ಕೊನೆಯ ಎರಡು ಎಸೆತಗಳು’ ಇವರ ಎರಡನೇ ಕಥಾಸಂಕಲನ