ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ಕನ್ನಡ ಮತ್ತು ತುಳು ಸಾಹಿತ್ಯಕ್ಷೇತ್ರದಲ್ಲಿ ತಮ್ಮ ಕಥೆ, ಕವನ, ಕಾದಂಬರಿ, ವಿಮರ್ಶೆ, ಸಂಪಾದನೆ ಅಂಕಣ ಮತ್ತು ಅನುವಾದ ಹಾಗೂ ಸಂಘಟನೆ ಮಾಧ್ಯಮ ಮುಂತಾದ ಬೇರೆ ಬೇರೆ ಪ್ರಕಾರ ಮತ್ತು ಕ್ಷೇತ್ರಗಳಲ್ಲಿ ದುಡಿಯುತ್ತ ವ್ಯಕ್ತಿತ್ವದ ವಿಶಿಷ್ಟ ಛಾಪು ಮೂಡಿಸಿರುವ ವಿದ್ವಾಂಸ ಮತ್ತು ವಾಗ್ಮಿ ಡಾ. ವಸಂತಕುಮಾರ ಪೆರ್ಲ ಅವರ ಮುನ್ನುಡಿ ಮತ್ತು ವಿಮರ್ಶೆಗಳ ಸಂಕಲನ ‘ಮದಿಪುದ ಪಾತೆರೊಲು’ ಲೇಖಕರ ಖಚಿತ ನಿಲುವು ಮತ್ತು ಸ್ಪಷ್ಟ ಧೋರಣೆಗಳಿಗಾಗಿ ಮುಖ್ಯವಾಗುವ ಒಂದು ಕೃತಿ. ಒಡಿಯೂರಿನ ಶ್ರೀ ಗುರುದೇವ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು (2021) ತುಳು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಗಳಿಸಿಕೊಂಡಿದೆ.
ಈ ಕೃತಿಯಲ್ಲಿ ವಿಮರ್ಶಾ ರೂಪದ ಒಟ್ಟು 25 ಲೇಖನಗಳಿವೆ. ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ತುಳುವಿನ ಬೇರೆ ಬೇರೆ ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿ ಹಾಗೂ ವಿಮರ್ಶೆಗಳ ಸಂಕಲನ ಇದು ಎಂದು ಲೇಖಕರು ಆರಂಭದಲ್ಲಿ ತನ್ನ ಮಾತಿನಲ್ಲಿ ತಿಳಿಸಿದ್ದಾರೆ. ತುಳುವಿನಲ್ಲಿ ನಾಟಕ, ಕವನ ಮತ್ತು ಯಕ್ಷಗಾನ ಪ್ರಸಂಗಗಳು ಪ್ರಕಟವಾಗುವಂತೆ ಇತರ ಪ್ರಕಾರಗಳಲ್ಲಿ ಸಾಕಷ್ಟು ಕೃತಿಗಳು ಬರುತ್ತಲಿಲ್ಲ, ಇದೊಂದು ಕೊರತೆಯೇ ಸರಿ, ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಇದು ಸಣ್ಣದೊಂದು ಪ್ರಯತ್ನ ಎಂದು ಅವರು ಹೇಳುತ್ತಾರೆ. ಅವರು ಹೇಳಿದ ಮಾತು ಸರಿ ಎಂಬುದು ಇಲ್ಲಿನ ಲೇಖನಗಳ ವಸ್ತು-ವಿಷಯ, ಆಳ-ವ್ಯಾಪ್ತಿ ಮತ್ತು ನೋಟವನ್ನು ಗಮನಿಸಿದರೆ ಗೊತ್ತಾಗುತ್ತದೆ.
ಇತರ ಲೇಖಕರ ಪುಸ್ತಕಗಳಿಗೆ ಡಾ. ಪೆರ್ಲ ಅವರು ಬರೆಯುವ ಮುನ್ನುಡಿಗಳು ಅಧ್ಯಯನಾತ್ಮಕವೂ ಹಲವು ಒಳನೋಟಗಳನ್ನು ನೀಡುವವೂ ಆಗಿದ್ದು ಬಹಳ ಮುಖ್ಯವಾದವು ಅನಿಸುತ್ತದೆ. ಕವಿ-ಲೇಖಕರ ಒಳ್ಳೆಯ ಅಂಶಗಳನ್ನು ಅವರು ಗುರುತಿಸಿ ಬೆನ್ನು ತಟ್ಟುತ್ತಾರೆ. ಹಾಗೆಂದು ನಕಾರಾತ್ಮಕ ಅಂಶಗಳ ಬಗ್ಗೆ ಹೇಳದೇ ಇರುವುದಿಲ್ಲ. ಆದರೆ ಹಾಗೆ ಹೇಳುವಾಗ ಲೇಖಕರಿಗೆ ನೋವಾಗದಂತೆ, ಮುಂದಕ್ಕೆ ಹೇಗೆ ತಿದ್ದಿಕೊಳ್ಳಬೇಕೆಂಬ ಬಗ್ಗೆ ಮನವರಿಕೆಯಾಗುವಂತೆ ತಿಳಿಸಿಕೊಡುತ್ತಾರೆ. ಕವನಗಳ ಬಗೆಗೆ ಅವರ ಮಾತು ತುಂಬ ಮೌಲಿಕ ಆಗಿರುತ್ತವೆ.
1994ರಲ್ಲಿ ಡಾ. ಪೆರ್ಲ ಅವರು ಸಂಪಾದಿಸಿದ ಪ್ರಾತಿನಿಧಿಕ ತುಳು ಕಬಿತೆಲು ಸಂಕಲನಕ್ಕೆ ಬರೆದ ದೀರ್ಘ ಆಧ್ಯಯನಾತ್ಮಕ ಪ್ರಬಂಧದಿಂದ ಆರಂಭವಾಗಿ 2019ರಲ್ಲಿ ಪ್ರಕಟವಾದ ರಘು ಇಡ್ಕಿದು ಅವರ ಗಜಲ್ ಸಂಕಲನ ‘ನಿನ್ನ ನೆಂಪುಡು’ ವರೆಗೆ ಬರೆದ ಆಯ್ದ ಇಪ್ಪತ್ತೈದು ಮುನ್ನುಡಿಗಳು ಇಲ್ಲಿ ಸಂಕಲನಗೊಂಡಿವೆ. ತಾನು ಬರೆದ ಸುಮಾರು ಐವತ್ತಕ್ಕಿಂತ ಹೆಚ್ಚು ತುಳು ಮುನ್ನುಡಿಗಳಲ್ಲಿ ಆಯ್ದ ಕೆಲವನ್ನು ಸಂಕಲಿಸಲಾಗಿದೆ ಎಂದು ಡಾ. ಪೆರ್ಲ ಅವರು ಹೇಳುತ್ತಾರೆ. ತುಳು ಕಾವ್ಯದ ಬಗ್ಗೆ ಇಲ್ಲಿ ಹಲವು ಲೇಖನಗಳಿವೆ. ಡಾ. ಪೆರ್ಲ ಅವರೇ ತುಳುವಿನಲ್ಲಿ ಮಾಡಿದ ಮೊಟ್ಟಮೊದಲ ಯಶಸ್ವೀ ಸಂಕಲನ ‘ಪ್ರಾತಿನಿಧಿಕ ತುಳು ಕಬಿತೆಲು’ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಈ ಕೃತಿಯಲ್ಲಿರುವ ಅತ್ಯಂತ ವೈಶಿಷ್ಟ್ಯಪೂರ್ಣವಾದ ಲೇಖನಗಳೆಂದರೆ ‘ಸಂವಿಧಾನೊದ ಎಣ್ಮನೇ ಪರಿಚ್ಛೇದೊಗು ತುಳು ಬಾಸೆ’, ‘ಪೊಸ ಕಾಲೊದ ತುಳು ಕಬಿತೆಲು: ಒಂಜಿ ಪೊಲಬು’, ‘ತುಳುತ್ತ ನಿಲೆ ಬಿಲೆ: ಒಂಜಿ ಚಿಂತನೆ’, ‘ತುಳು ಪತ್ರಿಕೋದ್ಯಮ ನಡತ್ತ್ ಬತ್ತಿ ಸಾದಿ’ ಮೊದಲಾದವು. ಇಲ್ಲೆಲ್ಲ ಡಾ. ಪೆರ್ಲರ ವಿಶಾಲವಾದ ಓದು, ಲೋಕಜ್ಞಾನ, ಅನುಭವ, ಪ್ರತಿಭಾಪೂರ್ಣವಾದ ವಿಶಿಷ್ಟ ತಿಳುವಳಿಕೆ, ಚಿಂತನಶೀಲವಾದ ಸ್ಪಷ್ಟ ನೇರ ಅಭಿವ್ಯಕ್ತಿಯ ದರ್ಶನವಾಗುತ್ತದೆ. ತುಳುವಿನಲ್ಲಿ ಅತ್ಯಂತ ಪಾಂಡಿತ್ಯಪೂರ್ಣವಾಗಿ ವಿಮರ್ಶೆ ಬರೆಯಬಹುದು ಎಂಬುದಕ್ಕೆ ಅವರ ಬರವಣಿಗೆ ಸಾಕ್ಷಿಯಾಗಿದೆ.
‘ಪರಪೋಕುದ ಆಚರಣೆದ ಮಹತ್ವ’ ಎಂಬ ಜಾನಪದ ಸಂಬಂಧಿ ಲೇಖನದಲ್ಲಿ ಮರದ ಬೇರಿನ ಹಾಗೆ ನಮ್ಮ ಬದುಕಿನಲ್ಲಿ ಜಾನಪದವು ಎಷ್ಟು ಪ್ರಾಮುಖ್ಯವಾದದ್ದು ಎಂಬುದನ್ನು ಪ್ರತಿಪಾದಿಸಿದ್ದಾರೆ. ಬೇರು ಇಲ್ಲದೆ ಚಿಗುರು ಉಳಿಯಲಾರದು ಎಂದು ಅವರು ಹೇಳುತ್ತಾರೆ. ಮರ ಬೆಳೆಯಬೇಕಾದರೆ ಬೇರು ಬೇಕೇ ಬೇಕು ಎಂದು ಅವರು ಸಾಕ್ಷ್ಯಾಧಾರ ಸಮೇತ ಪ್ರತಿಪಾದಿಸಿದ್ದಾರೆ. ತುಳುವಿನಲ್ಲಿ ಈ ರೀತಿಯ ಆಧ್ಯಯನ ಹೆಚ್ಚು ಬಂದಿಲ್ಲ ಎಂಬ ಮಾತನ್ನು ಇಲ್ಲಿ ಹೇಳಬೇಕು. ಪ್ರಸ್ತುತ ಈ ಕಾಲದ ಜಾನಪದ, ನಗರ ಜಾನಪದ ಮೊದಲಾದವುಗಳ ಬಗೆಗೂ ಅವರು ಬರೆಯುತ್ತಾರೆ. ನಮ್ಮ ಸಮಾಜದಿಂದ ನಿಧಾನವಾಗಿ ಕಣ್ಮರೆಯಾಗುತ್ತಿರುವ ಸಂತೆ ಜಾತ್ರೆಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯವನ್ನು ತಿಳಿಸುತ್ತಾರೆ.
ಕಳೆದ ಸುಮಾರು ಮೂವತ್ತು ವರ್ಷಗಳ ಅವಧಿಯ ತುಳು ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ದೃಷ್ಟಿಯಿಂದ ಡಾ. ಪೆರ್ಲರ ಈ ಕೃತಿ ಅತ್ಯಂತ ಮಹತ್ವದ್ದಾಗಿದೆ. ತುಳುವಿನಲ್ಲಿ ವೈಚಾರಿಕ ತಳಹದಿಯ ಸಾಹಿತ್ಯಕೃತಿಗಳು ಹೆಚ್ಚು ಹೆಚ್ಚು ಬರುತ್ತಿರಬೇಕು ಎಂಬ ಪ್ರತಿಪಾದನೆಯ ದೃಷ್ಟಿಯಿಂದಲೂ ಇದೊಂದು ಮಹತ್ವದ ಕೃತಿ ಎಂದು ಹೇಳಬಹುದು. ಇಂತಹ ಒಳ್ಳೆಯ ಕೃತಿಯನ್ನು ತುಳು ಓದುಗರಿಗೆ ನೀಡಿದ ಕವಿ-ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರಿಗೆ ಎಲ್ಲಾ ತುಳುವರ ಪರವಾಗಿ ಅಭಿನಂದನೆಗಳು.
– ದಾ.ನ. ಉಮಾಣ್ಣ, ಕೊಕ್ಕಪುಣಿ, ಬಂಟ್ವಾಳ ತಾಲೂಕು – 574 222 [ಮೊ.7026118215]
‘ದೇವರ ಬೇಸಾಯ’ ಕವನಸಂಕಲನ ಮೂಲಕ ಸಾಹಿತ್ಯಕ್ಷೇತ್ರ ಪ್ರವೇಶಿಸಿದ ಬಂಟ್ವಾಳದ ಬೋಳಂತೂರಿನವರಾದ ದಾ.ನ. ಉಮಾಣ್ಣ ಪ್ರಸ್ತುತ ತುಳುವಿನಲ್ಲಿ ‘ತುಳುವೆರೆ ಕಟ್ಟ್’ಪಾಡ್’ ಎಂಬ ಕೃತಿ ಪ್ರಕಟಿಸುತ್ತಿದ್ದಾರೆ. ಬೋಳಂತೂರು ಗ್ರಾಮದ ಕೊಕ್ಕಪುಣಿಯ ಮುದ್ದ ಮತ್ತು ನೀಲು ದಂಪತಿಯರ ಮಗನಾಗಿರುವ ಇವರು ಪಾರಂಪರಿಕ ವೈದ್ಯ ವೃತ್ತಿ ನಡೆಸುತ್ತಿದ್ದಾರೆ.
ಯಕ್ಷಗಾನ, ಸಾಹಿತ್ಯ, ಶಿಕ್ಷಣ, ಧಾರ್ಮಿಕ, ವೈದಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಸರು ಗಳಿಸಿರುವ ಲೇಖಕ ವಸಂತಕುಮಾರ ಪೆರ್ಲ ಅವರು ಕಾಸರಗೋಡಿನ ಪುಟ್ಟ ಊರಾದ ಪೆರ್ಲದಲ್ಲಿ 1958ರ ಜುಲೈ 2ರಂದು ಜನಿಸಿದರು. ಪೆರ್ಲ ಊರಿನ ಹೆಸರಿಗೆ ಕೀರ್ತಿ ತಂದವರಲ್ಲಿ ವಸಂತಕುಮಾರ್ ಒಬ್ಬರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಳಮ್ಮಡ್ಕ ಶಾಲೆಯಲ್ಲಿ ಮತ್ತು ಪ್ರೌಢಶಿಕ್ಷಣವನ್ನು ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪೂರೈಸಿದರು. ಪದವಿ, ಉನ್ನತ ಪದವಿಯನ್ನು ಮತ್ತು ರಂಗಭೂಮಿ ವಿಷಯದಲ್ಲಿ ಡಾಕ್ಟರೇಟ್, ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ.
ಹೈಸ್ಕೂಲ್ ವಿದ್ಯಾಭ್ಯಾಸದ ಕಾಲದಲ್ಲೇ ಕಥೆಗಳನ್ನು ಬರೆಯ ತೊಡಗಿದ ಅವರು ಬೆಂಗಳೂರಿನ ಪ್ರಜಾಪ್ರಭುತ್ವ ವಾರಪತ್ರಿಕೆಯಲ್ಲಿ ಉಪಸಂಪಾದಕ- ವರದಿಗಾರರಾಗಿ ಔದ್ಯೋಗಿಕ ಜೀವನವನ್ನು ಆರಂಭಿಸಿದರು. ಆನಂತರ ಕರ್ನಾಟಕದ ಹಲವು ಪ್ರಸಿದ್ಧ ಪತ್ರಿಕೆಗಳಲ್ಲಿ ಅಂಕಣಗಾರ, ವರದಿಗಾರರಾಗಿ ದುಡಿದು ಪ್ರಸಿದ್ಧರಾದರು. ಬಳಿಕ ಆಕಾಶವಾಣಿಗೆ ಸೇರ್ಪಡೆಗೊಂಡರು. ಕರ್ನಾಟಕದ ಹಾಸನ, ಮೈಸೂರು, ಕಾರವಾರ, ಮಂಗಳೂರು ಮೊದಲಾದ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ಅವುಗಳನ್ನು ವಿಶೇಷ ರೀತಿಯಲ್ಲಿ ಬೆಳೆಸಿದರು. ಸುಮಾರು 29 ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.
ಡಾ. ಪೆರ್ಲ ಅವರ ಪ್ರತಿಭೆ, ಪಾಂಡಿತ್ಯ, ಸಾಮರ್ಥ್ಯ ಅಪ್ರತಿಮವಾದುದು. ಅವರ ಹಲವಾರು ಸಂದರ್ಶನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಟಿ.ವಿ. ಚಾನೆಲ್ ಗಳಲ್ಲಿ ಪ್ರಸಾರವಾಗಿವೆ. ಹಲವಾರು ಸ್ಮರಣ ಸಂಚಿಕೆ, ಅಭಿನಂದನ ಗ್ರಂಥಗಳಲ್ಲಿ ವಿದ್ವತ್ ಪೂರ್ಣ ಲೇಖನಗಳು ಪ್ರಕಟವಾಗಿವೆ. ಮನೆಮಾತು ಹವ್ಯಕ ಕನ್ನಡವಾಗಿದ್ದರೂ ತುಳು ಭಾಷೆಗೆ ಮಾಡಿದ ಅಸದೃಶ ಸೇವೆಯು ಗಣನೀಯವಾದದ್ದು. ಆಕಾಶವಾಣಿಯ ಮೂಲಕ ಸಾರ್ವಜನಿಕವಾಗಿ ಮತ್ತು ತುಳು ಸಾಹಿತ್ಯ ರಚನೆಯ ಮೂಲಕ ಅವರು ಮಾಡಿದ ತುಳು ಭಾಷಾ ಸೇವೆಯು ವಿಶೇಷವಾಗಿದೆ. ಅವರ ಕವನಗಳು ತುಳು ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಂಡಿವೆ. ಅವರ ತುಳು ಕೃತಿಗಳ ಅಧ್ಯಯನವನ್ನು ಸ್ನಾತಕೊತ್ತರ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.
ಹತ್ತರೊಡನೊಂದು, ನಾನು ಮತ್ತು ಗಣೇಶ (ಕಥಾಸಂಕಲನ), ಮಾತಿನಾಚೆಯ ಮೌನ, ಹುತ್ತದೊಳಗಿನ ಹಾವು, ಕೋಟಿಲಿಂಗ, ರಂಗಸ್ಥಳ, ಒಡ್ಡೋಲಗ (ಕವನ ಸಂಕಲನ), ತಪಸ್ವಿನಿಯ ಮಡಿಲಲ್ಲಿ (ಕಾದಂಬರಿ), ಅಭ್ಯಾಸ, ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಜಾನಪದ ಒಳನೋಟಗಳು (ಸಂಶೋಧನಾ ಕೃತಿ), ಕಾಡಾನೆಗಳ ದವಡೆಯಲ್ಲಿ (ಪ್ರವಾಸ ಕಥನ) ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪೆರ್ಲ ಕೃಷ್ಣ ಭಟ್ ಸ್ಮಾರಕ ಪ್ರಶಸ್ತಿ, ಕಯ್ಯಾರ ಸಾಹಿತ್ಯ ಪ್ರಶಸ್ತಿ, ಕಾವ್ಯಗಂಗಾ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಸಂದಿವೆ.
1 Comment
Congratulations v nice