ಪಾರ್ವತಿ ಜಿ. ಐತಾಳ್ ಅವರ ‘ಮಹಾಬೆಳಗು ಮತ್ತು ಇತರ ನಾಟಕಗಳು ‘ಎಂಬ ಕೃತಿಯನ್ನು ಶ್ರೀನಿವಾಸ ಪುಸ್ತಕ ಪ್ರಕಾಶನವು ಇತ್ತೀಚೆಗೆ ಪ್ರಕಟಿಸಿದೆ. ಇದರಲ್ಲಿ ‘ಮಹಾಬೆಳಗು’ ಎಂಬ ಪೂರ್ಣ ಪ್ರಮಾಣದ ನಾಟಕದ ಜೊತೆಗೆ ಐದು ಏಕಾಂಕ ನಾಟಕಗಳಿವೆ. ಎಲ್ಲವೂ ಮಾನವೀಯತೆಯ ಬೆಳಕಿನ ಸಂದೇಶವನ್ನು ಸಾರುವ ನಾಟಕಗಳು. ಜಾತಿ-ಧರ್ಮಗಳ ಹೆಸರಿನಲ್ಲಿ ಛಿದ್ರಗೊಳ್ಳುತ್ತಿರುವ ನಮ್ಮ ಸಮಾಜಕ್ಕೆ ಮನುಷ್ಯ ಧರ್ಮಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬ ಸಂದೇಶವನ್ನು ಈ ನಾಟಕಗಳು ಸಾರುತ್ತವೆ.
ಒಂದು ಗ್ರಾಮೀಣ ಪ್ರದೇಶದಲ್ಲಿ ಶ್ರೀಮಂತರು ಮತ್ತು ಬಲಾಢ್ಯರು ತಮ್ಮ ಪ್ರತಿಷ್ಠೆಗೋಸ್ಕರ ಜಾತಿ-ಧರ್ಮಗಳನ್ನು ಬಳಸಿಕೊಂಡು ಮುಗ್ಧ ಜನರನ್ನು ಹೇಗೆ ವಂಚಿಸುತ್ತಾರೆ ಎಂಬುದನ್ನು ‘ಮಹಾಬೆಳಗು’ ನಾಟಕವು ಮನಮುಟ್ಟುವಂತೆ ಚಿತ್ರಿಸುತ್ತದೆ. ಸ್ವಾರ್ಥಿಗಳಿಂದಾಗಿ ಊರಿನಲ್ಲಿ ಹಿಂದೂ-ಮುಸ್ಲಿಂ ಬಣಗಳು ಹುಟ್ಟಿಕೊಳ್ಳುತ್ತವೆ. ಅವುಗಳ ನಡುವೆ ಸಂಘರ್ಷಗಳು ನಡೆಯುತ್ತವೆ. ಆದರೆ ಸೂಕ್ಷ್ಮಮತಿಯಾದ ಅಂದೂಕಾಕನಿಗೆ ಇದರ ಹಿಂದಿನ ಸಂಚು ಅರ್ಥವಾಗುತ್ತದೆ. ಅವನ ಮೂಲಕ ಕಥಾನಾಯಕ ಸೂರ್ಯನಿಗೆ ಸತ್ಯದ ಅರಿವಾಗುತ್ತದೆ. ಅವನು ಮನುಷ್ಯನಾಗಲು ನಿರ್ಧರಿಸುತ್ತಾನೆ. ಕಾಸರಗೋಡಿನ ಆಡು ಭಾಷೆ, ಮಾಪಿಳ್ಳೆಗಳ ಮಲೆಯಾಳ ಮಿಶ್ರಿತ ಕನ್ನಡದ ಸಂಭಾಷಣೆಗಳು, ನಡುನಡುವೆ ಹಾಡುಗಳು ನಾಟಕಕ್ಕೆ ಮೆರುಗನ್ನಿತ್ತಿವೆ.
‘ಸ್ನೇಹಸೇತು’ ಮಕ್ಕಳ ನಾಟಕವು ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಂಕ ಗಳಿಕೆಗೆ ಮುಖ್ಯವೆಂದು ಹೇಳುತ್ತಾ ತರಗತಿಯಲ್ಲಿ ಹೆಚ್ಚು ಅಂಕ ಗಳಿಸುವವರಿಗೆ ಹೆಚ್ಚು ಪ್ರಾಮುಖ್ಯ ಕೊಡುತ್ತ ಇತರರನ್ನು ಕಡೆಗಣಿಸುವ ಅಧ್ಯಾಪಕರ ಪ್ರವೃತ್ತಿಯಿಂದ ಆಗಬಹುದಾದ ಪರಿಣಾಮಗಳತ್ತ ಈ ನಾಟಕ ಬೆರಳು ಮಾಡಿ ತೋರಿಸುತ್ತದೆ. ದುರ್ಯೋಧನನು ಮಹಾಭಾರತ ಯುದ್ಧದ ನಂತರ ಆತ್ಮಾವಲೋಕನ ಮಾಡಿಕೊಳ್ಳುವ ಏಕವ್ಯಕ್ತಿ ರೂಪಕ ‘ದುರ್ಯೋಧನನ ಪರಿತಾಪ’. ಉಳಿದ ಮೂರು ಏಕಾಂಕ ನಾಟಕಗಳು ‘ಪಿಯಲಿ ಫುಕನ್’, ‘ನಿರುಪಯೋಗಿ ರೆಕಾರ್ಡರ್’ ಮತ್ತು ‘ಬೇಗಂ ಹಜರತ್ ಮಹಲ್’ ಹಿಂದಿಯಿಂದ ಅನುವಾದಿಸಿದ ಆಕಾಶವಾಣಿ ರಾಷ್ಟ್ರೀಯ ನಾಟಕಗಳು. ಎಲ್ಲಾ ನಾಟಕಗಳ ಸಂಭಾಷಣೆಗಳು ಚುರುಕಾಗಿದ್ದು ವಸ್ತು-ತಂತ್ರಗಳಿಂದ ಗಮನ ಸೆಳೆಯುತ್ತವೆ. ರಂಗ ಪ್ರಯೋಗಕ್ಕೆ ಸೂಕ್ತವಾಗಿವೆ.
ಡಾ. ಯು. ಶಾಂತಮೂರ್ತಿ ಐತಾಳ
ಯು.ಎಸ್. ಐತಾಳರೆಂದೇ ಖ್ಯಾತರಾದ ಡಾ. ಯು. ಶಾಂತಮೂರ್ತಿ ಐತಾಳರು ಶೃಂಗೇರಿಯ ಶ್ರೀ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿ, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು. ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕನ್ನಡದಲ್ಲಿ ಹಾಗೂ ಆಂಗ್ಲ ಭಾಷೆಯಲ್ಲಿ ‘ರಸಾಯನ ವಿಜ್ಞಾನ’ ಪಠ್ಯ ಪುಸ್ತಕಗಳ ರಚನೆ ಮಾಡಿದ ಖ್ಯಾತಿ ಇವರದು. ಶೃಂಗೇರಿ ಜೇಸೀಸ್ ಅಧ್ಯಕ್ಷರಾಗಿ, ಜೇಸೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ, ವ್ಯಕ್ತಿತ್ವ ವಿಕಸನ ತರಬೇತುದಾರನಾಗಿ ಕಾರ್ಯನಿರ್ವಹಿಸಿದ ಅನುಭವಿ.
ಡಾ. ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.