Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಡಾ. ಸಬಿತಾ ಮರಕಿಣಿ ಅವರ ‘ಮಾಂಗ್ಣಿ ಮಾಸ್ಟ್ರಂಗೆ ನಮಸ್ಕಾರ’ : ಮಾನಿನಿ ಮನಸ್ಸು
    Article

    ಪುಸ್ತಕ ವಿಮರ್ಶೆ | ಡಾ. ಸಬಿತಾ ಮರಕಿಣಿ ಅವರ ‘ಮಾಂಗ್ಣಿ ಮಾಸ್ಟ್ರಂಗೆ ನಮಸ್ಕಾರ’ : ಮಾನಿನಿ ಮನಸ್ಸು

    May 14, 2024No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕನ್ನಡದಲ್ಲಿ ಸಣ್ಣಕತೆಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನಲಾಗುತ್ತಿದ್ದರೂ ಅವುಗಳೆಲ್ಲ ಏಕಕಾಲದಲ್ಲಿ ಅಸ್ತಿತ್ವದಲ್ಲಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ ಬಂಡಾಯ ಯುಗ ಮುಗಿದರೂ ಅದರ ಸೂಕ್ಷ್ಮ ಧ್ವನಿಯನ್ನು ಹೊಂದಿದ ಅನೇಕ ಕತೆಗಳು ಬರುತ್ತಿವೆ. ನವೋದಯ ಮಾರ್ಗದ ಕತೆಗಳೂ ಬೆಳಕು ಕಾಣುತ್ತಿವೆ.

    ಡಾ. ಸಬಿತಾ ಮರಕಿಣಿಯವರ ‘ಮಾಂಗ್ಣಿ ಮಾಸ್ಟ್ರಂಗೆ ನಮಸ್ಕಾರ’ ಎಂಬ ಹವಿಗನ್ನಡ ಕಥಾಸಂಕಲನವು ನವೋದಯ ಮತ್ತು ಬಂಡಾಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ಯಾವುದೇ ಸಿದ್ಧ ಮಾನದಂಡವಿಲ್ಲದೆ ಆರಂಭಗೊಳ್ಳುವ ಆರು ಕತೆಗಳಲ್ಲಿ ಆತ್ಮಶೋಧನೆ, ದ್ವಂದ್ವ ಮತ್ತು ಪ್ರತಿಮೆ ಸಂಕೇತಗಳಿಲ್ಲ. ಹವಿಗನ್ನಡದ ಆಡುಮಾತಿನ ಲಯವಿದೆ. ಆಕರ್ಷಕ ಆರಂಭ ಮತ್ತು ಅನಿರೀಕ್ಷಿತ ಮುಕ್ತಾಯಗಳಿಲ್ಲ. ಆಪ್ತವೆನಿಸುವ ನಿರೂಪಣೆಯಿದೆ. ‘ಅಬ್ಬೆ: ಮಣ್ಣಿಲಿ ಮಣ್ಣಾಗಿ’, ‘ಎಂಕಿಯ ದಿಬ್ಬಾಣ’, ‘ಮಾಂಗ್ಣಿ ಮಾಸ್ತ್ರನೂ ಹೊನ್ನಕ್ಕತ್ತೆಯೂ’ ಎಂಬ ಕತೆಗಳು ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸಿದರೆ ‘ರತ್ನಮಾಲನ ವರಾನ್ವೇಷಣೆ’, ‘ಗೌಡರ ಮನೇಲಿ ಕಳವು’, ‘ರಾಮತೀರ್ಥದ ರಾಚಪ್ಪನ ರಾದ್ಧಾಂತ’ ಎಂಬ ಕತೆಗಳು ಆರಂಭ, ಮಧ್ಯ, ಮುಕ್ತಾಯಗಳನ್ನು ಕಾಲಾನುಕ್ರಮವಾಗಿ ವಿವರಿಸುತ್ತಾ ಒಂದು ಕಾಲದ ಜೀವನಕ್ರಮವನ್ನು ಹಿಡಿದಿಡುತ್ತವೆ.

    ಇಲ್ಲಿನ ಕತೆಗಳು ಸಾಂಪ್ರದಾಯಿಕ ಗ್ರಾಮೀಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬದುಕುತ್ತಿರುವ ಹೆಂಗಸರ ಸ್ಥಿತಿಗತಿಗಳನ್ನು ಚಿತ್ರಿಸುತ್ತವೆ. ಈ ವಸ್ತುವಿನ ನಿರ್ವಹಣೆಯು ನವೋದಯ-ಬಂಡಾಯ ಸಾಹಿತಿಗಳಿಗಿಂತ ಭಿನ್ನವಾಗಿದೆ. ಇಲ್ಲಿ ಸುಧಾರಣೆಯ ಆವೇಶವಾಗಲೀ ಸಮಾಜದ ಅಂಧಶ್ರದ್ಧೆಗಳ ಬಗ್ಗೆ ಆಕ್ರೋಶವಾಗಲೀ ಇಲ್ಲ. ಬರವಣಿಗೆಯು ಕತೆಯ ದನಿಯನ್ನು ನಿಯಂತ್ರಿಸಿಕೊಂಡಿದ್ದು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತದೆ. ಹೆಣ್ಣಾದವಳು ತನಗೊದಗಿದ ಕಷ್ಟಕರ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕಳಾದಾಗ ಆಕೆಯು ಸ್ವೀಕರಿಸುವ ದಿಟ್ಟ ನಿಲುವು ಮತ್ತು ಸಮಸ್ಯೆಯನ್ನು ಎದುರಿಸುವ ರೀತಿ ಮುಖ್ಯವಾಗುತ್ತದೆ.

    ‘ಅಬ್ಬೆ; ಮಣ್ಣಿಲಿ ಮಣ್ಣಾಗಿ’ ಎಂಬ ಕತೆಯು ತನ್ನ ಬದುಕಿಗೆ ಆಸರೆಯಾಗಿದ್ದ ಕಿರಿಯ ಮಗನನ್ನು ಕಳೆದುಕೊಂಡ ತಾಯಿಯ ನೋವು, ಹಳ್ಳಿಯಲ್ಲಿ ಅವಳು ವಾಸಿಸುತ್ತಿದ್ದ ಮನೆ, ಜಮೀನುಗಳನ್ನು ಮಾರಿ ಲಾಭವನ್ನು ದೋಚಲೆತ್ನಿಸುವ ಹಿರಿಯ ಮಗ, ಅತ್ತೆ ಬಂದರೆ ಮನೆಗೆಲಸಕ್ಕೆ ಉಪಯೋಗಿಸಬಹುದೆಂದು ನಿರೀಕ್ಷಿಸುವ ನಗರದ ಸೊಸೆ ಹೀಗೆ ಮನಸ್ಸಿನ ವಿವಿಧ ಮುಖವನ್ನು ಅನಾವರಣಗೊಳಿಸುತ್ತದೆ. ಹದಗೆಡುತ್ತಿರುವ ಸಾಮಾಜಿಕ ಕೌಟುಂಬಿಕ ಪರಿಸರಕ್ಕೆ ಕನ್ನಡಿ ಹಿಡಿಯುತ್ತದೆ. ಆಸೆ-ಆಕಾಂಕ್ಷೆಗಳನ್ನು ಹುಟ್ಟಿಸಿ ನಿರಾಶೆಗೊಳಿಸುವ ವಿಧಿಯ ಅಣಕ, ಮುಗ್ಧ ಬದುಕಿಗೆ ಒದಗುವ ಅಕಾರಣ ಸಂಕಟಗಳನ್ನು ವಿಷಾದ ಬೆರೆತ ಧಾಟಿಯಲ್ಲಿ ಔಚಿತ್ಯ ಮೀರದಂತೆ ಚಿತ್ರಿಸುವ ಲೇಖಕಿಯ ಸಂಯಮ ಗಮನ ಸೆಳೆಯುತ್ತದೆ. ಕತೆಯ ಪಾತ್ರಗಳು ಬಹುಮಟ್ಟಿಗೆ ಕಪ್ಪು ಬಿಳುಪು. ಮುಖ್ಯ ಪಾತ್ರಗಳು ಕೆಲವು ಬಾರಿ ಪರಂಪರಾಗತ ವಿಚಾರಗಳ ಬಗ್ಗೆ ತೋರುವ ಒಲವು, ಮೌಲ್ಯಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದರ ತಿಳುವಳಿಕೆ ಹಲವರಿಗೆ ತೃಪ್ತಿಯನ್ನು ನೀಡಲಾರದು. ಹಿರಿಸೊಸೆಯ ದೌರ್ಜನ್ಯಕ್ಕೆ ಸಿಲುಕಿ ನೊಂದ ತಾಯಿಯ ಬಳಿ ಕಿರಿಯ ಮಗನು ‘ಅಬ್ಬೆ ಆನು ಮದುವೆ ಆವುತ್ತಿಲ್ಲೆ. ನಿನ್ನ ಈ ಸ್ಥಿತಿಲಿ ಎನಗೆ ನೋಡ್ಳೆ ಆವುತ್ತಿಲ್ಲೆ. ಒಂದರ ಕೈಲೇ ನೀನು ಬೇಕಾದಷ್ಟು ಹೈರಾಣ ಆಯಿದೆ. ಇನ್ನೊಂದರ ಮನೆ ಹೊಗುಸಿ ನಿನ್ನ ಸಂಕಷ್ಟಕ್ಕೆ ಗುರಿ ಮಾಡುತ್ತಿಲ್ಲೆ’ ಎಂಬ ಮಾತು, ‘ಹಾಗಾಗಿ ನಾನು ಉಳಿದೆ’ ಎಂದು ತೃಪ್ತಿಗೊಳ್ಳುವ ತಾಯಿಯ ಮನಸ್ಸು ಚರ್ಚೆಗೆ ಒಳಗಾಗಬಲ್ಲವು. ಇಂಥ ಏಕಪಕ್ಷೀಯ ವಿವರಗಳಿದ್ದರೂ ಇತರರಲ್ಲಿ ಭಾವಪರವಶಗೊಳ್ಳಬಹುದಾಗಿದ್ದ ವಸ್ತು ಸಂಯಮದಿಂದ ಮಂಡಿತವಾದದ್ದು ವಿಶೇಷ. ಯೌವನವು ವೃದ್ಧಾಪ್ಯದ ಮೇಲೆ ತೋರುವ ಕ್ರೌರ್ಯ ತಿರಸ್ಕಾರಗಳ ಚಿತ್ರಣವು ಈ ಹೊತ್ತಿನ ಜ್ವಲಂತ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ. ಸಂಪ್ರದಾಯದ ಸಿದ್ಧ ಚೌಕಟ್ಟಿನೊಳಗಿದ್ದುಕೊಂಡೇ ಪ್ರತಿಭಟನೆಯ ದನಿಯನ್ನು ಸಾಧಿಸಿಕೊಂಡದ್ದು ಗಮನಾರ್ಹವಾಗಿದೆ. ಮನೆಯನ್ನು ಮಾರಲು ಬಿಡದೆ ಹಿರಿಮಗನ ಜೊತೆ ನಗರದಲ್ಲಿ ನೆಲೆಸಿಕೊಳ್ಳಲು ಒಪ್ಪದ ತಾಯಿಯು ಪ್ರತಿಭಟನೆಯ ಪ್ರತೀಕವಾಗಿದ್ದಾಳೆ.

    ‘ರತ್ನಮಾಲಾಳ ವರಾನ್ವೇಷಣೆ’ ಎಂಬ ಕತೆಯಲ್ಲಿ ನವೋದಯ ಕಾಲದ ಸುಧಾರಣಾವಾದವು ಎದ್ದು ಕಾಣುತ್ತದೆ. ಸ್ತ್ರೀ ಶಿಕ್ಷಣ, ಸ್ತ್ರೀ-ಪುರುಷ ಸಮಾನತೆ, ಪ್ರೇಮ ವಿವಾಹ ಮೊದಲಾದ ವಿಷಯಗಳಲ್ಲಿ ಅವರು ಆಧುನಿಕತೆಯ ಪರವಾಗಿದ್ದಾರೆ. ಆದರೆ ಎಲ್ಲೂ ‘ಅತಿ’ಯನ್ನು ಒಪ್ಪುವುದಿಲ್ಲ. ಇದನ್ನು ವಿನೋದಕತೆ ಎಂಬ ದೃಷ್ಟಿಯಿಂದ ನೋಡಿದಾಗ ಸಾಕಷ್ಟು ಸಂತೋಷವನ್ನು ನೀಡುತ್ತದೆ. ಕೊನೆಗೆ ರತ್ನಮಾಲಾ ತನ್ನ ಬಾಲ್ಯದ ಸಹಪಾಠಿಯಾಗಿದ್ದ ಗೋವಿಂದನನ್ನು ಮದುವೆಯಾಗುವ ನಿರ್ಧಾರವು ಗಂಡು ಹೆಣ್ಣುಗಳ ಪರಸ್ಪರ ಮೆಚ್ಚುಗೆಯ ವಿಷಯದಲ್ಲಿ ಲೇಖಕಿಯು ತಳೆದಿರುವ ಪ್ರಬುದ್ಧ ನಿಲುವನ್ನು ಸೂಚಿಸುತ್ತದೆ.

    ಮಾಂಗ್ಣಿ ಮಾಸ್ಟ್ರನೂ ಹೊನ್ನಕ್ಕತ್ತೆಯೂ (ಮಹಾಲಿಂಗಣ್ಣ ಎಂಬ ಹೆಸರು ಜನರ ಬಾಯಿಯಲ್ಲಿ ಮಾಲಿಂಗಣ್ಣೋ ಎಂದು ಮಾರ್ಪಟ್ಟು ಕೊನೆಗೆ ಮಾಂಗ್ಣೋ ಆಗಿಬಿಟ್ಟು ಕಾಲಕ್ರಮೇಣ ಮಾಂಗ್ಣಿ ಎಂದು ಬದಲಾಗಿದೆ) ಎಂಬ ಕತೆಯು ಮಧ್ಯವಯಸ್ಸಿನ ಹೆಣ್ಣೊಬ್ಬಳ ವ್ಯಗ್ರ ಮನಸ್ಸನ್ನು ವಿಶ್ಲೇಷಿಸುತ್ತದೆ. ಬದುಕಿನಲ್ಲಿ ಮನುಷ್ಯತ್ವಕ್ಕೆ ಮನ್ನಣೆ ನೀಡಬೇಕಲ್ಲದೆ ವ್ಯಕ್ತಿಯ ಲಿಂಗ, ರೂಪ, ಯೌವನಗಳಿಗಲ್ಲ. ಹುಟ್ಟುವಾಗ ಎಲ್ಲರ ಮನಸ್ಸೂ ನಿಷ್ಕಲ್ಮಶವಾಗಿರುತ್ತದೆ. ತಂದೆ ತಾಯಿಯರು ತನ್ನನ್ನು ಹೆಣ್ಣೆಂದು ಹಳಿದು ಮೂಲೆಗುಂಪಾಗಿಸಿ ತಮ್ಮನನ್ನು ಮುದ್ದಿನಿಂದ ಬೆಳೆಸಿದುದರಿಂದ ಹುಟ್ಟಿದ ನೋವು, ಅಸೂಯೆ ಅಸಹನೆಗಳು ಮಧ್ಯವಯಸ್ಸಿನಲ್ಲೂ ಕಾರ್ಯಪ್ರವೃತ್ತವಾಗಿರುತ್ತದೆ ಎಂಬುದಕ್ಕೆ ವಾರ್ಧಕ್ಯದ ಹೊಸ್ತಿಲಲ್ಲಿರುವ ಹೊನ್ನಕ್ಕನು ತನ್ನ ತಮ್ಮನನ್ನೂ ಅವನ ಹೆಂಡತಿಯನ್ನೂ ತನ್ನ ಮುಷ್ಠಿಯಲ್ಲಿರಿಸಿಕೊಂಡು ಪೀಡಿಸುತ್ತಿರುವುದೇ ಸಾಕ್ಷಿ. ಲಿಂಗ, ರೂಪಗಳಿಂದಾಗುವ ಅವಮಾನಗಳು ಕ್ರಮೇಣ ಸೇಡಿನ ರೂಪಕ್ಕೆ ಪರಿವರ್ತನೆಯಾಗಬಲ್ಲವು. ವ್ಯಕ್ತಿಯು ಎಷ್ಟೇ ಪ್ರಯತ್ನಿಸಿದರೂ ಅದರಿಂದ ಉಂಟಾದ ತಿರಸ್ಕಾರ ಮತ್ತು ಅವಮಾನಗಳು ಮನಸ್ಸಿನಿಂದ ಮರೆಯಾಗಲಾರವು. ತಾಳ್ಮೆಯು ಮಿತಿ ಮೀರಿದಾಗ ಅದು ಸೇಡಿನ ರೂಪಕ್ಕೆ ಪರಿವರ್ತನೆಯಾಗುತ್ತದೆ ಎಂಬ ವಿಚಾರದ ಆಧಾರದಲ್ಲಿ ಕತೆಯು ಹೊನ್ನಕ್ಕನ ವ್ಯಗ್ರತೆ, ತುಮುಲ ಮತ್ತು ಆಲೋಚನೆಯ ಲಯವನ್ನು ಸೆರೆಹಿಡಿಯುತ್ತದೆ. ಕಾರಣಾಂತರಗಳಿಂದ ಹತ್ತಿಕ್ಕಿಕೊಂಡ ಅವಮಾನ, ರೋಷ, ಆವೇಶಗಳು ಸೂಕ್ತ ಸಂದರ್ಭದಲ್ಲಿ ಹೊರಹೊಮ್ಮುವ ಸಹಜ ಪ್ರಕ್ರಿಯೆಗೆ ಹೊನ್ನಕ್ಕ ಪ್ರತಿನಿಧಿಯಾಗಿದ್ದಾಳೆ.

    ಬಾಂಧವ್ಯದ ಸುಖವು ಇಲ್ಲದಾಗುತ್ತಿರುವುದರ ಕುರಿತು ಗಾಢ ವಿಷಾದವನ್ನು ಕಟ್ಟಿಕೊಡುವ ಕತೆಗಳು ಹೆಂಗಸರ ಸಹನೆ, ಸೈರಣೆ, ತಾಳ್ಮೆಗಳನ್ನು ಇತ್ಯಾತ್ಮಕ-ಕ್ರಿಯಾತ್ಮಕ ರೂಪದಲ್ಲಿ ದಾಖಲಿಸುತ್ತವೆ. ಹೆಣ್ಣಿನ ಅಸಹಾಯಕತೆ, ಬವಣೆ, ದುಃಖ ದುಮ್ಮಾನಗಳಿಗೆ ಲೇಖಕಿಯ ಹೃದಯ ಸ್ಪಂದಿಸಿದೆ. ವಿವಿಧ ಮನೋಧರ್ಮದ ಹೆಂಗಸರನ್ನು ಜೀವಂತ ಪಾತ್ರಗಳನ್ನಾಗಿ ಚಿತ್ರಿಸಿರುವುದರಿಂದ ಅವರ ಕತೆಗಳಲ್ಲಿ ಹೆಣ್ಣಿನ ಚಿತ್ರ ಏಕಮುಖವಾಗಿಲ್ಲ. ವಿವಿಧ ಸಂದರ್ಭಗಳಲ್ಲಿ ಅಂತರಂಗದ ಭಾವನೆಗಳು ಹಲವು ರೀತಿಯಲ್ಲಿ ಚೆಲ್ಲಿಕೊಳ್ಳುತ್ತವೆ. ಅನ್ಯಾಯಕ್ಕೊಳಗಾದ ಹೆಣ್ಣು ತನ್ನ ಸಮಾಜಕ್ಕೆ ಕೊಡುವ ತೀಕ್ಷ್ಣ ಪ್ರತಿಕ್ರಿಯೆ ಮತ್ತು ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸುವ ವಿಧಾನವು ಮುಖ್ಯವೆನಿಸುತ್ತದೆ. ಗಂಡೇ ಇರಲಿ ಹೆಣ್ಣೇ ಇರಲಿ ಸ್ವೇಚ್ಛಾಚಾರವಂತೂ ಸಂಪೂರ್ಣ ನಿಷೇಧಕ್ಕೊಳಗಾಗಿದೆ. ವೃದ್ಧಾಪ್ಯವನ್ನು ಎದುರಿಸುವ ವಿಚಾರವು ಲೇಖಕಿಯನ್ನು ಕಾಡಿದೆ. ಕೆಲವೊಂದು ಸಮಸ್ಯೆಗಳ ಪರಿಹಾರವು ಸರಳವೆನಿಸುತ್ತಿದ್ದರೂ ಅವರ ಅನುಭವ ಲೋಕವು ಈಗಿನ ಸಮಾಜವು ಎದುರಿಸುತ್ತಿರುವ ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತದೆ. ನೈತಿಕ ಅಧಪತನದ ಕಡೆ ಬೊಟ್ಟು ಮಾಡುತ್ತದೆ. ಹಳ್ಳಿಯ ಬದುಕನ್ನು ವೈಭವೀಕರಿಸುವ ರಚನೆಗಳೇ ತುಂಬಿಕೊಳ್ಳುತ್ತಿರುವ ಸಂದರ್ಭದಲ್ಲಿ ಇವರ ಕತೆಗಳು ಅಲ್ಲಿನ ಶ್ರೀಮಂತರ ಅಷಾಢಭೂತಿತನ, ಮಧ್ಯಮ ವರ್ಗದವರ ತಲ್ಲಣ ಮತ್ತು ಬಡವರ ಸಂಕಷ್ಟಗಳನ್ನು ಚಿತ್ರಿಸುತ್ತಾ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ವಾದವು ಭದ್ರವಾಗಿ ನೆಲೆಗೊಂಡ ನಂತರ ರೂಪುಗೊಂಡ ಇವರ ಕತೆಗಳು ಯಾವುದೇ ಸಿದ್ಧಾಂತಕ್ಕೆ ಕಟ್ಟುಬಿದ್ದಿಲ್ಲ. ಗಂಡು ಹೆಣ್ಣಿನ ಸಂಘರ್ಷ ಕೂಡ ಸೈದ್ಧಾಂತಿಕ ಸ್ವರೂಪದ್ದಾಗಿಲ್ಲ. ಈಗಾಗಲೇ ಓದಿರುವ ಹಲವು ಕತೆಗಳ ಸಾಲಿಗೆ ಸೇರಿ ಮರೆತು ಹೋಗಲು ಕಾದಿರುವ ಕತೆಗಳ ನಡುವೆ ಅನುಭವ ಮತ್ತು ಸೂಕ್ಷ್ಮ ಒಳನೋಟಗಳ ಮೂಲಕ ಸ್ಮರಣೀಯವೆನಿಸಿರುವ ರಚನೆಗಳೂ ಇವೆ. ಹಿತಮಿತವಾದ ಬರವಣಿಗೆ ಮತ್ತು ಆಡಂಬರವಿಲ್ಲದ ನಿರೂಪಣೆ ಗಮನ ಸೆಳೆಯುತ್ತದೆ. ಗಟ್ಟಿ ಪಾತ್ರಗಳು, ಸಾಂದ್ರ ಅನುಭವ, ಹೆಣ್ಣಿನ ಸಮಸ್ಯೆಗಳು, ಹುರುಳಿಲ್ಲದ ವಿಚಾರಗಳ ವಿರುದ್ಧ ಎತ್ತುವ ಪ್ರಶ್ನೆಗಳು, ಬದುಕಿನ ತತ್ವಗಳು ಮುಖ್ಯವಾಗುತ್ತವೆ. ಪಳಗಿದ ಬರವಣಿಗೆಯಲ್ಲಿ ಪ್ರಬುದ್ಧ ಮನಸ್ಸನ್ನು ಕಾಣುತ್ತೇವೆ. ಚಮತ್ಕಾರಿಕ ತಿರುವಿಲ್ಲದ ನೇರ ಕಥನ, ಆರೋಗ್ಯಪೂರ್ಣ ಜೀವನ ದೃಷ್ಟಿ ಎಲ್ಲ ವರ್ಗದ ಓದುಗರಿಗೂ ಆಪ್ತವೆನಿಸುವಂತೆ ಮಾಡುತ್ತವೆ. ಪ್ರಚಲಿತ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧ್ವನಿಸುವ ಕತೆಗಳು ಈ ಹೊತ್ತಿನಲ್ಲೂ ಅರ್ಥಪೂರ್ಣವೆನಿಸುತ್ತವೆ.

    ಪುಸ್ತಕದ ಹೆಸರು : ಮಾಂಗ್ಣಿ ಮಾಸ್ಟ್ರಂಗೆ ನಮಸ್ಕಾರ (ಕಥಾ ಸಂಕಲನ)
    ಲೇಖಕರು : ಡಾ. ಸಬಿತಾ ಮರಕಿಣಿ
    ಪ್ರಕಾಶಕರು : ಹವ್ಯಕ ಅಧ್ಯಯನ ಕೇಂದ್ರ ಬೆಂಗಳೂರು
    ಪುಟಗಳು : 89
    ಬೆಲೆ : 60 ರೂಪಾಯಿಗಳು

    ಡಾ. ಸುಭಾಷ್ ಪಟ್ಟಾಜೆ :

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.

    ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್‌ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕಿಯ ಕುರಿತು : ಮಂಜೇಶ್ವರ ತಾಲೂಕು ಕುಂಬಳೆ ಸಮೀಪದ ನಾರಾಯಣ ಮಂಗಲದ ಪಿಳ್ಳೆ ಮನೆಯ ‘ಮಾಂಗ್ಣಿ ಮಾಸ್ಟ್ರ’ರೆಂದು ಪ್ರಸಿದ್ಧಿರಾಗಿದ್ದ ಎಚ್.ಎಂ. ಮಹಾಲಿಂಗ ಭಟ್ಟ ಮತ್ತು ಪರಮೇಶ್ವರಿ ಇವರು ಸುಪುತ್ರಿಯಾದ ಸಬಿತಾ ಅವರು ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಕತೆ ಕವಿತೆಗಳನ್ನು ಬರೆಯಲು ತೊಡಗಿದ್ದರು. ಅವರ ರಚನೆಗಳು ‘ಅಂಕಿತ’ ಎಂಬ ನಾಮದಿಂದ ಪತ್ರಿಕೆಗಳಲ್ಲಿಯೂ ಪ್ರಕಟಗೊಳ್ಳುತ್ತಿದ್ದುವು. ಅವರು ಇಂಗ್ಲೀಷ್‌ನಿಂದ ಅನುವಾದಿಸಿದ ರಚನೆಗಳು ಅಂದಿನ ಜನಪ್ರಿಯ ಪತ್ರಿಕೆಗಳಾದ ‘ಪ್ರಪಂಚ’ ಮೊದಲಾದವುಗಳಲ್ಲಿ ಪ್ರಕಟಗೊಂಡು ಜನಪ್ರಿಯವೆನಿಸಿಕೊಂಡವು.

    ‘ಹೆಸರಿಡದ ಕವನ’ ಸಂಕಲನ ಭಾಗ 1 ಮತ್ತು 2 (ಪದ್ಯ), ಮುಗಿಲು ಬಿರಿಯಿತು, ಪಾಮಕ್ಕನ ಸಂಸಾರ (ಹವಿಗನ್ನಡ ಕಾದಂಬರಿಗಳು), ಕಮಲಕ್ಕನ ಕತೆಗಳು, ಹಳೇಮರಕ್ಕೆ ಹೊಸ ಚಿಗುರು, ಗೆದ್ದಳು ಕಾವೇರಿ (ಗದ್ಯ ಕಥಾ ಸಾಹಿತ್ಯ ಕಾದಂಬರಿಗಳು), ಮಾಂಗ್ಣಿ ಮಾಸ್ಟ್ರಂಗೆ ನಮಸ್ಕಾರ (ಸಣ್ಣ ಕತೆಗಳು). ಆರೋಗ್ಯ ರಕ್ಷಣೆ ಭಾಗ-1, ಚುಚ್ಚು ಮದ್ದಿನ ರಕ್ಷಾ ಕವಚ, ಜಂತು ಹುಳುಗಳು, ತುರಿಸುವ ಕಚ್ಚಿ, ನಾವು ಕುಡಿಯುವ ನೀರು. ನಿನ್ನ ಬಳಕೆಯ ವಿಷ ವಸ್ತುಗಳು, ನೈರ್ಮಲ್ಯ ರಕ್ಷಣೆ, ಮಕ್ಕಳಿಗೆ ಮಾರಕ ಅತಿಸಾರ ಭೇದಿ, ಮದ್ದಿಲ್ಲದ ರೋಗ ಏಡ್ಸ್, ಮಸಾಲೆ ಮದ್ದು, ಸುಲಭ ಚಿಕಿತ್ಸೆ, ಸುಲಭ ಚಿಕಿತ್ಸೆಯ ಮನೆ ಮದ್ದುಗಳು ಇವರ ಪ್ರಕಟಿತ ಕೃತಿಗಳು ಹಾಗೂ ‘ಅವಿಗನ್ನಡ ಸೂರಿ ಪ್ರಶಸ್ತಿ’ ಹಾಗೂ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿರುವುದು ಇವರ ಸಾಹಿತ್ಯ ಕೃಷಿಗೆ ಸಂದ ಗೌರವ. ಇವರ ಕುರಿತಾಗಿ ಡಾ. ಹರಿಕೃಷ್ಣ ಭರಣ್ಯ ಇವರು ಸಂಪಾದಿಸಿದ ಜೀವನ ಚರಿತ್ರೆಯನ್ನು ಕಾಂತಾವರದ ಕನ್ನಡ ಸಂಘದವರು ಪ್ರಕಾಶಿಸಿರುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleವಿಠ್ಠಪ್ಪ ಗೋರಂಟ್ಲಿ ಕೊಪ್ಪಳ ಸೀಮೆಯ ಸಮಾನತೆ ಕನಸಿನ ಚಿಂತಕ ಮತ್ತು ಬರಹಗಾರ
    Next Article ಯಕ್ಷಗಾನ ವಿಮರ್ಶೆ | ಪ್ರೊ. ಪವನ್ ಕಿರಣಕೆರೆ ವಿರಚಿತ ‘ಹಂಸ ಪಲ್ಲಕ್ಕಿ’
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.