ಸುಮಾರು ನಾಲ್ಕು ದಶಕಗಳಿಂದ ಮಲಯಾಳಂ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುತ್ತಾ ಬಂದಿರುವ ಮೋಹನ ಕುಂಟಾರ್ ಅವರು 1981ರಿಂದ 2021ರವರೆಗೆ ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ ಹತ್ತು ಕತೆಗಳು ‘ಶಬ್ದಗಳು’ ಎಂಬ ಹೆಸರಿನಲ್ಲಿ ಸಂಗ್ರಹಗೊಂಡಿವೆ. ಮಲಯಾಳಂನ ಎಲ್ಲ ಪ್ರಮುಖ ಕತೆಗಾರರ ಕತೆಗಳು ಇಲ್ಲಿ ಇಲ್ಲದಿದ್ದರೂ ಕನ್ನಡದ ಪ್ರಗತಿಶೀಲ, ನವ್ಯ ಮತ್ತು ಬಂಡಾಯ ಸಾಹಿತ್ಯಗಳಿಗೆ ಸಂವಾದಿಯಾದ ರಿಯಲಿಸಂ, ಪುರೋಗಮನವಾದಂ, ನವೀನ ಭಾವಕತ್ವಂ ಮತ್ತು ಆಧುನಿಕೋತ್ತರ ಸಾಹಿತ್ಯ ಘಟ್ಟಗಳಿಗೆ ಸೇರಿದ ಕಾರೂರ್ ನೀಲಕಂಠ ಪಿಳ್ಳೆ (ಬುತ್ತಿ), ವೈಕಂ ಮಹಮ್ಮದ್ ಬಷೀರ್ (ಶಬ್ದಗಳು), ಎಂ.ಟಿ. ವಾಸುದೇವನ್ ನಾಯರ್ (ಭಾಗ್ಯ), ಮಾಧವಿ ಕುಟ್ಟಿ (ಕಳೆದು ಹೋದ ನೀಲಾಂಬರಿ), ಪುನತ್ತಿಲ್ ಕುಂಞಬ್ದುಲ್ಲ (ಹದಿನಾಲ್ಕರ ಪ್ರಾಯದಲ್ಲಿ), ಇ. ಹರಿಕುಮಾರ್ (ಮುಗಿಸಲಾರದ ಪಯಣ), ಪಾಲ್ ಸಕ್ಕರಿಯ (ತಟ್ಟಿಂಗಲ್ ಕುಂಞುವರೀದ್ ಹಿಂತಿರುಗಿ ನೋಡುತ್ತಾನೆ), ಸಿ.ವಿ. ಬಾಲಕೃಷ್ಣನ್ (ದೇವರು ಹೋಗುವ ದಾರಿ), ಅಶಿತಾ (ಪೆಸಹಾ ಹಬ್ಬ), ಶೋಭಾ ವಾರಿಯರ್ (ಹೂವಾಡಗಿತ್ತಿ) ಮುಂತಾದವರ ಕತೆಗಳ ಅನುವಾದವನ್ನು ಕಾಣಬಹುದು. ಆದ್ದರಿಂದ ಇಲ್ಲಿರುವ ಕತೆಗಳ ವಸ್ತು, ಆಶಯ, ನಿರೂಪಣೆ, ಕಥನ ತಂತ್ರಗಳು ಭಿನ್ನವಾಗಿವೆ. ಕನ್ನಡದಲ್ಲಿರುವಂತೆ ಮಲಯಾಳಂನಲ್ಲೂ ಪ್ರಾದೇಶಿಕ ಭಾಷೆಗಳು ಅಸ್ತಿತ್ವದಲ್ಲಿದ್ದು, ಕೋಝಿಕೋಡ್, ತ್ರಿಶೂರು, ಮಲಪ್ಪುರಂ, ವಳ್ಳುವನಾಡ್, ಕುಟ್ಟನಾಡ್, ತಿರುವನಂತಪುರಂ, ಭಾಷಾ ಶೈಲಿಗಳ ಪರಿಚಯವಿಲ್ಲದಿದ್ದರೆ ಅನುವಾದಕನಿಗೆ ಅದೊಂದು ಸವಾಲಾಗುತ್ತದೆ. ಈ ಸವಾಲುಗಳನ್ನು ಮೀರಿ ನಿಂತ ಅನುವಾದಕರು ಮೂಲಕ್ಕೆ ನಿಷ್ಠರಾಗಿದ್ದುಕೊಂಡು ಓದುಗನಿಗೆ ಸಂವಹನಕ್ಕೆ ಅಡ್ಡಿಯಾಗದಂತೆ ಭಾಷಾಂತರಿಸಿದ್ದಾರೆ.
‘ಮುಗಿಸಲಾರದ ಪಯಣ’ ಎಂಬ ಕತೆಯ ನಾಯಕಿ ಗ್ರೇಸಿಯು ಬಂಜೆತನದ ನೋವನ್ನು ಮನದಲ್ಲಿಟ್ಟುಕೊಂಡು ಬಾಳುತ್ತಾಳೆ. ಆಕೆ ಬಂಜೆಯೆಂದು ತಿಳಿದೂ ಅವಳ ಗಂಡ ಜೋಸ್ ಆಕೆಯನ್ನು ಪ್ರೀತಿಸುತ್ತಾನೆ. ಆತನು ಇನ್ನೊಂದು ಮದುವೆಯಾಗಿ ಮಕ್ಕಳನ್ನು ಪಡೆದು ನೆಮ್ಮದಿಯಿಂದ ಬಾಳಲಿ ಎಂದುಕೊಂಡು ಗ್ರೇಸಿಯು ಅವನಿಂದ ದೂರವಾಗುತ್ತಾಳೆ. ಆದರೆ ವಯೋಸಹಜ ಬಯಕೆಗಳನ್ನು ಹತ್ತಿಕ್ಕಲಾಗದೆ ಮನೆಪಾಠವನ್ನು ಹೇಳಿಸಿಕೊಳ್ಳಲು ಬಂದ ಜಯನೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುತ್ತಾಳೆ. ಜಯನ ಬದುಕು ಸಮಸ್ಯಾತ್ಮಕವಾಗದಿರಲಿ ಎಂದುಕೊಂಡು ಆಕೆಯು ಅಲ್ಲಿಂದಲೂ ಹೊರಟು ಕ್ರೈಸ್ತ ಸನ್ಯಾಸಿನಿಯಾಗುತ್ತಾಳೆ. ಒಳ್ಳೆಯ ಹುಡುಗನ ಚಾರಿತ್ರ್ಯವನ್ನು ಕೆಡಿಸಿದ್ದರ ಪಶ್ಚಾತ್ತಾಪವೂ ಇದಕ್ಕೆ ಕಾರಣವಾಗಿರಬಹುದು. ಆಕೆಯನ್ನು ಕಳೆದುಕೊಂಡ ಜಯನು ಬಹಳ ಹೊತ್ತು ಅಳುತ್ತಾನೆ. ಆಮೇಲೆ ಅವನು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದು ಉದ್ಯೋಗವನ್ನು ಸಂಪಾದಿಸಿದ ಬಳಿಕ ಆಕೆಯನ್ನು ಹುಡುಕಿ ಮದುವೆಯಾಗಬೇಕೆಂದು ನಿರ್ಧರಿಸಿಕೊಂಡು ಆಕೆ ವಾಸಿಸುವ ಆಶ್ರಮಕ್ಕೆ ಬರುತ್ತಾನೆ. ಒಂದೇ ಮನೆಯಲ್ಲಿ ಉಳಿದುಕೊಂಡು ಆಕೆಯೊಂದಿಗೆ ಮಲಗುತ್ತಾನೆ. ಅವಳ ಎದೆಯ ಮೇಲೆ ಕೈ ಇರಿಸಿದಾಗ “ತುಂಟ! ನಾನು ಹೇಳಲಿಲ್ಲವೇ ಒಳ್ಳೆಯ ಹುಡುಗನಾಗಬೇಕೆಂದು?” (ಪುಟ 95) ಎಂಬ ಮಾತು ಅವನನ್ನು ಅಧೀರನನ್ನಾಗಿಸುತ್ತದೆ. ಹಿಂದಿನ ದಿನಗಳಲ್ಲಿ ಆಕೆಯೊಂದಿಗೆ ಕಳೆದ ರಸ ನಿಮಿಷಗಳನ್ನು ನೆನೆದು ಅಳತೊಡಗಿದಾಗ ಆಕೆಯು ಅವನನ್ನು ಸಮಾಧಾನಪಡಿಸಿ, ಸೊಂಟಕ್ಕೆ ಕೈಹಾಕಿ ಹತ್ತಿರಕ್ಕೆಳೆದುಕೊಂಡು ಹಣೆಗೆ ಮುತ್ತಿಡುತ್ತಾಳೆ. ಅವನು ನಿದ್ದೆ ಹೋಗುವಲ್ಲಿವರೆಗೂ ಎಚ್ಚರವಾಗಿದ್ದು ಬಳಿಕ ಯೇಸುವಿನ ಚಿತ್ರದ ಮುಂದೆ ಮೊಣಕಾಲೂರಿ, ಪ್ರಲೋಭನೆಗಳಿಂದ ತನ್ನನ್ನು ಕಾಪಾಡಿದ್ದಕ್ಕೆ ಕೃತಜ್ಞತೆಯನ್ನು ಅರ್ಪಿಸುತ್ತಾಳೆ. ಆದರೆ ಆಕೆಯ ಗೊಂದಲಗಳು ಇಲ್ಲವಾಗುವುದಿಲ್ಲ. ಕಾಲಗಳು ಉರುಳಿದಂತೆ ಜಯನು ಬೇರೊಬ್ಬಳನ್ನು ಮದುವೆಯಾಗುತ್ತಾನೆ. ಗ್ರೇಸಿಯು ಆತನ ಒಳಿತನ್ನೇ ಬಯಸುವವಳಾದರೂ ಜಯನು ತನ್ನ ಪಾಲಿಗೆ ಇಲ್ಲ ಎಂಬ ಯಾತನೆಯು ಆಕೆಯನ್ನು ಕಾಡುತ್ತದೆ. ಮದುವೆಗೆ ಮುನ್ನ ಆರು ತಿಂಗಳಿಗೊಮ್ಮೆ ಬಂದು ಹೋಗತ್ತಿದ್ದ ಜಯನನ್ನು ಒಮ್ಮೆಯಾದರೂ ಕಾಣಬೇಕೆಂಬ ಆಸೆಯಿಂದ ಆಕೆಯು ಪತ್ರವನ್ನು ಬರೆದರೂ ಕೌಟುಂಬಿಕ ಜವಾಬ್ದಾರಿ ಮತ್ತು ಕೆಲಸದ ಒತ್ತಡಗಳಿರುವುದರಿಂದ ಆತನಿಗೆ ಆ ಪತ್ರಕ್ಕೆ ಮಾರೋಲೆಯನ್ನು ಬರೆಯಲು ಸಾಧ್ಯವಾಗುವುದಿಲ್ಲ. ಇತ್ತ ವಿವಾಹಿತೆಯೂ ಆಗಲಾರದೆ, ಸನ್ಯಾಸಿನಿಯೂ ಆಗಲಾರದೆ ಮಾನಸಿಕ ಒತ್ತಡವನ್ನು ತಡೆಯಲಾರದೆ ಆಕೆಯು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾಳೆ.
ವಿವಾಹಬಾಹಿರ ಸಂಬಂಧಗಳ ಸಮಸ್ಯೆಗಳನ್ನು ವಸ್ತುವಾಗಿರಿಸಿಕೊಂಡ ಕತೆಯನ್ನು ಗ್ರೇಸಿಯ ಮೂಲಕ ನಿರೂಪಿಸಲಾಗಿದೆ. ಇಪ್ಪತ್ತಾರು ವಯಸ್ಸಿನ ಆಕೆಗೆ ತನ್ನ ಬಳಿ ಮನೆಪಾಠವನ್ನು ಹೇಳಿಸಿಕೊಳ್ಳಲು ಬಂದ ಜಯನೆಂಬ ಹದಿಹರೆಯದ ಹುಡುಗನೊಂದಿಗೆ ಸಂಬಂಧವನ್ನು ಸಾಧಿಸುವಾಗಲೇ ತನ್ನ ವೈವಾಹಿಕ ಜೀವನದಲ್ಲಿ ಅನಾಸ್ಥೆಯು ಹುಟ್ಟಿಕೊಂಡಿರುತ್ತದೆ. “ಜಯ, ನಾನು ಇಬ್ಬರನ್ನು ಅಧಿಕವಾಗಿ ಪ್ರೀತಿಸಿದೆ. ಅವರು ನಾಶವಾಗದಿರಲೆಂದು ಅಲ್ಲಿಂದ ಓಡಿಹೋದೆ. ನಾನು ತಾಯಿಯಾಗಲಾರೆ ಎಂದು ತಿಳಿದೂ ಜೋಸ್ ನನ್ನನ್ನು ಅತಿಯಾಗಿ ಪ್ರೀತಿಸಿದ. ನಾನು ದೂರ ಉಳಿದರೆ ಪ್ರಾಯಶಃ ಅವನು ಬೇರೆ ಮದುವೆಯಾದಾನು. ಮಕ್ಕಳೂ ಆದಾವು. ಆ ಎರಡನೇ ವ್ಯಕ್ತಿ ಯಾರೆಂದು ನಿನಗೆ ಗೊತ್ತಲ್ಲ?” (ಪುಟ 93) ಗಂಡನಿಂದ ದೂರವಾದ ಬಳಿಕ ಜಯನನ್ನು ಕಂಡಾಗ, ಮನೆಪಾಠದ ನೆಪದಲ್ಲಿ ಅವನು ಹತ್ತಿರವಾದಾಗ ಅವಳೊಳಗಿನ ಪ್ರೇಮ ಪುಟಿದು ಎದ್ದಿರಬೇಕು. ಸಂಬಂಧಕ್ಕೆ ಮೊದಲು ಮಾಡಿದವರು ಗ್ರೇಸಿಯೇ ಅಥವಾ ಜಯನೇ ಎಂದು ತಿಳಿಯದಿದ್ದರೂ ಅವರಿಬ್ಬರ ನಡುವಿನ ಸಂಬಂಧದ ಆಳವನ್ನು ಪರಿಶೀಲಿಸುವ ಬಗೆಯು ಮುಖ್ಯವಾಗುತ್ತದೆ. ಜಯನೊಂದಿಗೆ ಸರಸದಲ್ಲಿರುವಾಗಲೂ ಆಕೆಯು ಆತಂಕವನ್ನು ಅನುಭವಿಸುತ್ತಾಳೆ. ಜಯನಿಗೆ ಹೊಸ ಅನುಭವವು ದೊರಕಿದರೂ ಗ್ರೇಸಿಯು ತನ್ನ ಜೀವನೋತ್ಸಾಹವನ್ನು ಕಳೆದುಕೊಂಡು ನಿರ್ಜೀವವಾಗಿ ಬಿಡುತ್ತಾಳೆ. ಆದರೆ ಉದ್ಯೋಗವನ್ನು ಸಂಪಾದಿಸಿದ ಬಳಿಕ ಜಯನು ಆಕೆಯನ್ನು ಹುಡುಕಿಕೊಂಡು ಬಂದು ಮದುವೆಯ ಪ್ರಸ್ತಾಪವನ್ನಿಟ್ಟಾಗ ಆಕೆಯೊಳಗಿನ ಹೆಣ್ಣು ಎಚ್ಚರಗೊಂಡು ಚಿತ್ತವನ್ನು ಕದಡತೊಡಗುತ್ತಾಳೆ. ಜಯನ ಜೊತೆ ಮಲಗಿದಾಗ ಬಯಕೆಯನ್ನು ಹತ್ತಿಕ್ಕಿಕೊಂಡರೂ ಆಕೆಯೊಳಗಿನ ಹೆಣ್ಣು ಮತ್ತು ಸನ್ಯಾಸಿನಿಯ ನಡುವೆ ಸಮನ್ವಯವು ಸಾಧ್ಯವಾಗುವುದಿಲ್ಲ. ಪ್ರೇಮದಲ್ಲಿ ಕಾಮವೇ ಕಾಣುವುದರಿಂದ ಉದಾತ್ತತೆಯು ಕಾಣಿಸುವುದಿಲ್ಲ. ವೈಚಾರಿಕ ದ್ವಂದ್ವಗಳಿಂದ ಮುಕ್ತಳಾಗಲು ಸಾಧ್ಯವಾಗುವುದಿಲ್ಲ. ಪಾಪ ನಿವೇದನೆಯ ಮೂಲಕ ಬಳಿಕ ದೇವರ ಸೇವೆಗಾಗಿ ಬದುಕನ್ನು ಮುಡಿಪಾಗಿಟ್ಟುಕೊಂಡದ್ದರಿಂದ ಆಕೆಯು ಮನೋವಿಕಾರಕ್ಕೆ ಒಳಗಾಗದೆ ವರ್ತಿಸಿದ್ದು ಒಂದು ಕ್ಷಣಕ್ಕೆ ಆಕೆಯ ಮನೋದಾರ್ಢ್ಯದ ಬಗ್ಗೆ ಯೋಚಿಸುವಂತೆ ಮಾಡಿದರೂ ಒಟ್ಟಾರೆಯಾಗಿ ನೋಡುವಾಗ ಆಕೆಯು ದುರ್ಬಲಳಂತೆ, ಪಲಾಯನವಾದಿಯಂತೆ ಭಾಸವಾಗುತ್ತಾಳೆ. ಆಕೆಯ ಸನ್ಯಾಸವೂ ಅದರ ಭಾಗವಾಗಿಯೇ ಮೂಡಿ ಬಂದಿದೆ. ಮೇಲ್ನೋಟಕ್ಕೆ ವಿವೇಕದ ಮೂರ್ತಿಯಾಗಿ, ಪೊರೆಯುವ ಶಕ್ತಿಯಾಗಿ ಕಾಣಿಸಿಕೊಂಡ ಹೆಣ್ಣು ಬದುಕಿನ ಆಯ್ಕೆಯನ್ನು ಮಾಡಿಕೊಳ್ಳಲಾರದೆ ನೋವನ್ನು ಅನುಭವಿಸುತ್ತಾಳೆ. “ಈ ದ್ವೀಪ ನನಗೊಂದು ಕಾರಾಗೃಹವಾಗಿ ತೋರುತ್ತದೆ. ಒಮ್ಮೆ ನಾನು ಇಲ್ಲಿಂದ ಪಾರಾಗುತ್ತೇನೆ. ಕಡವಿನ ಟಿಕೆಟ್ ಕುರಿತು ನಾನು ಹೇಳಿದ್ದು ನಿಜ. ನನ್ನ ಪ್ರಯಾಣ ಅರ್ಧವಷ್ಟೆ ಮುಗಿದಿದೆ ಎಂಬ ಅನ್ನಿಸಿಕೆಯನ್ನು ಆ ಟಿಕೆಟ್ ನನಗೆ ಕೊಡುತ್ತಿದೆ. ಅದನ್ನು ನನ್ನ ಡೈರಿಯಲ್ಲಿ ಜೋಪಾನವಾಗಿರಿಸಿದ್ದೇನೆ. ಆಗಾಗ ಅದನ್ನು ತೆಗೆದು ನೋಡುತ್ತೇನೆ. ಈ ಕಡವು ದಾಟುವುದಕ್ಕೆ ನನಗೆ ಅದರ ಅಗತ್ಯವಿಲ್ಲ. ಆದರೆ ಅದು ನನಗೆ ಎಂದಾದರೂ ಒಮ್ಮೆ ಪಾರಾಗಬಹುದೆಂಬ ಆಸೆಯನ್ನು ಹುಟ್ಟಿಸುತ್ತದೆ. ಸಮಾಧಾನವನ್ನೂ ಕೂಡ” (ಪುಟ 99) ಎಂಬ ಮಾತಿನ ಮೂಲಕ ಮೃತ್ಯುಪ್ರಜ್ಞೆಯನ್ನು ಸೂಕ್ತ ಪ್ರತೀಕದೊಂದಿಗೆ ಕಲಾತ್ಮಕವಾಗಿ ಹಿಡಿದಿಡುವ ಕತೆಯಲ್ಲಿ ಗಾಢವಾದ ವಿಷಾದವು ಸ್ಥಾಯಿಯಾಗಿದೆ. ಸಂಯಮದ ಬರಹವಾಗಿರುವುದರಿಂದ ಅತಿ ವಿಷಾದ ಮತ್ತು ಭಾವಾತಿರೇಕಗಳಿಗೆ ಸ್ಥಾನವಿಲ್ಲ. ಅತಿಯಾದ ಪ್ರೀತಿ ಮತ್ತು ಮೇರೆ ಮೀರಿದ ತ್ಯಾಗವು ಸಾಂಸಾರಿಕ ವಿರಸ, ನೋವು, ಅನೈತಿಕ ಸಂಬಂಧ, ಇಬ್ಬಂದಿತನಗಳಿಗೆ ಕಾರಣವಾಗುತ್ತವೆ ಎಂಬುದನ್ನು ಸೊಗಸಾಗಿ ನಿರೂಪಿಸುವ, ಬದುಕಿನ ಜಟಿಲತೆಯನ್ನು ಅಸ್ತಿತ್ವವಾದಿ ನೆಲೆಯಲ್ಲಿ ವಿಶ್ಲೇಷಿಸುವ ಕತೆಯು ತಂತ್ರದ ದೃಷ್ಟಿಯಿಂದಲೂ ವಿಶಿಷ್ಟವಾಗಿದೆ.
ಮಲಯಾಳಂ ಸಾಹಿತ್ಯದಲ್ಲಿ ಸೂಳೆಯರು ಮತ್ತು ತೃತೀಯ ಲಿಂಗಿಗಳ ಲೋಕವನ್ನು ದಾಖಲಿಸಿದ ಕಾರಣಕ್ಕಾಗಿ ಬಷೀರ್ ಅವರ ‘ಶಬ್ದಗಳು’ ಎಂಬ ಕತೆಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಮನುಷ್ಯನು ಸಂಸ್ಕೃತಿಯ ಮುಖವಾಡವನ್ನು ಕಳಚಿದರೆ ಇಂಥ ಲೋಕವು ನಿರ್ಮಾಣವಾಗುತ್ತದೆ. ವ್ಯವಸ್ಥಿತ ರೂಪದಲ್ಲಿರದ ಈ ಕತೆಯು ಚರ್ಚೆಯ ರೂಪದಲ್ಲಿ ಚಲಿಸುತ್ತವೆ. ಕತೆಗಿಂತಲೂ ಅನುಭವ, ವೈಚಾರಿಕತೆ ಮತ್ತು ಗೋಜಲು ಗೋಜಲಾದ ಬದುಕಿನ ಚಿತ್ರಣಗಳು ಮುಖ್ಯವಾಗುತ್ತವೆ. ನಾಗರಿಕರ ಕಣ್ಣುಗಳಿಗೆ ಅಷ್ಟೇನೂ ತೆರೆದುಕೊಳ್ಳದ ಸಮುದಾಯವೊಂದರ ಅಗೋಚರ ಪ್ರಪಂಚದ ಅನುಭವಗಳನ್ನು ತಕ್ಕೈಸಿಕೊಂಡು ಜೀವ ತಳೆದಿರುವ ಈ ಕತೆಯು ತನ್ನೊಳಗಿನ ಕುದಿತಗಳನ್ನು ಪ್ರತೀಕಾರ ಮತ್ತು ದ್ವೇಷವಾಗಿ ಬದಲಿಸದೆ ಸಾಮರಸ್ಯದ ನೆಲೆಯಲ್ಲಿ ಬಿಚ್ಚಿಡುತ್ತದೆ. ಸಾಮಾಜಿಕ ಅಸ್ತಿತ್ವವೇ ಇಲ್ಲದ ಸಮುದಾಯಗಳ ಬದುಕಿನ ಕಡೆಗೆ ಬೆಳಕು ಬೀರುವ ಕತೆಯು ಛಿದ್ರಗೊಂಡ ಬದುಕನ್ನು ಕಾಠಿಣ್ಯವಿಲ್ಲದೆ ಪ್ರಕಟಿಸುತ್ತದೆ. ವ್ಯವಸ್ಥೆಯ ವೈಫಲ್ಯಗಳನ್ನು ಬಯಲುಗೊಳಿಸುತ್ತದೆ. ಬೆಚ್ಚಿ ಬೀಳಿಸುವ ಕೆಟ್ಟ ಕನಸಿನಂಥ ಚರಿತ್ರೆಯನ್ನು ಬೆನ್ನಿಗೆ ಕಟ್ಟಿಕೊಂಡಿರುವ ಇಂಥ ವರ್ಗದವರಿಗೆ ವರ್ತಮಾನ ಕೂಡ ಕಣ್ಣಿಗಿರಿಯುವ ಸೂಜಿಯಂತೆ. ಮೇಲ್ನೋಟಕ್ಕೆ ಸರಳೀಕರಣದಂತೆ ಕಂಡರೂ ಪರಿಧಿಯ ಆಚೆಗೆ ಉಳಿದು ನಲುಗಿರುವ ಸಮುದಾಯವೊಂದರ ದನಿಯಾಗಿ ಇಂಥ ಕವಿತೆಗಳನ್ನು ಗುರುತಿಸಿದಾಗ ಅವುಗಳ ಆಳದಲ್ಲಿರುವ ಮಾನವಪ್ರೀತಿ, ಸಮಾನತೆಯ ದಾಹ, ಮುಖ್ಯವಾಹಿನಿಯಿಂದ ದೂರ ಉಳಿದವರ ಬದುಕನ್ನು ಚರಿತ್ರೆಗೆ ಜೋಡಿಸುವ ಹಂಬಲ ಮತ್ತು ಎಲ್ಲ ಬಗೆಯ ಸಾಮಾಜಿಕ ಅಸಮಾನತೆಗಳಿಂದ ಬಿಡುಗಡೆಯನ್ನು ಪಡೆಯಲು ಬಯಸುವ ತುಡಿತ ಅರಿವಿಗೆ ಬರುತ್ತದೆ. ಸಮುದಾಯದ ಬದುಕಿನ ಮೇಲೆ ನಾಗರಿಕ ಸಮಾಜ ಮತ್ತು ಪ್ರಭುತ್ವಗಳು ಏಕ ಕಾಲದಲ್ಲಿ ಎಸಗಿರುವ ದಾಳಿಯನ್ನು ಹೇಳುವುದರೊಂದಿಗೆ ನಯವಂಚಕ ಸಮಾಜವು ಪ್ರಭುತ್ವದ ಕಣ್ಗಾವಲಿನಲ್ಲಿ ವರ್ತಿಸುವ ದ್ವಿಮುಖ ರೀತಿಯ ಬದುಕನ್ನು ವ್ಯಕ್ತಪಡಿಸುತ್ತದೆ.
ಕಾರೂರ್ ನೀಲಕಂಠ ಪಿಳ್ಳೆಯವರ ‘ಬುತ್ತಿ’ ಎಂಬ ಕತೆಯಲ್ಲಿ ದುಡಿಮೆಗೆ ತಕ್ಕ ಸಂಬಳವಿಲ್ಲದಿದ್ದುದರಿಂದ ತಿನ್ನಲು ಆಹಾರವಿಲ್ಲದೆ ವಿದ್ಯಾರ್ಥಿಯ ಬುತ್ತಿಯೂಟವನ್ನು ಕದ್ದು ತಿನ್ನುವ ಮೇಷ್ಟ್ರ ದಯನೀಯ ಪರಿಸ್ಥಿತಿಯ ಚಿತ್ರಣವಿದೆ. ಕನ್ನಡದ ಮಹತ್ವದ ಕವಿ ಕಯ್ಯಾರ ಕಿಂಞಣ್ಣ ರೈಯವರ ‘ಅನ್ನದೇವರು’ ಎಂಬ ಕತೆಯೂ ಸೇರಿದಂತೆ ಪ್ರಗತಿಶೀಲ ಮತ್ತು ದಲಿತ ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಹಸಿದವರ ದಯನೀಯ ಪರಿಸ್ಥಿತಿಯನ್ನು ಬಿಂಬಿಸುವ ಕತೆಗಳ ನಡುವಿನ ಸಾಮ್ಯತೆಗಳನ್ನು ಗುರುತಿಸಬಹುದು.
ಎಂ.ಟಿ. ವಾಸುದೇವನ್ ನಾಯರ್ ಅವರ ‘ಭಾಗ್ಯ’ ಎಂಬ ನಾಯಿಯ ಬವಣೆಯನ್ನು ವಸ್ತುವನ್ನಾಗಿಟ್ಟುಕೊಂಡಿದ್ದರೂ ನಾಯರ್ ತರವಾಡಿನ ಕುಟುಂಬದ ಸದಸ್ಯನಾಗಿದ್ದುಕೊಂಡು ಅನುಭವಿಸಿದ ನೋವಿನ ಮೊತ್ತವೇ ಆಗಿದೆ ಎಂದು ಯೋಚಿಸುವಂತೆ ಮಾಡುವ ಕಥನವಾಗಿ ಬದಲಾಗುವುದು ವಿಶೇಷ. ಪಟ್ಟ ಪಾಡು ಹುಟ್ಟು ಹಾಡಾದ ಬಗೆ ವ್ಯಕ್ತವಾಗುತ್ತದೆ. ನಾಯರ್ ಜನಾಂಗದವರು ಜಮೀನ್ದಾರರಾಗಿದ್ದು ತರವಾಡಿನ ಮನೆಗಳಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ಅನುಸರಿಸಿದ್ದರು. ಅತ್ತೆ, ಮಾವ, ಅಳಿಯಂದಿರು, ಸೋದರ-ಸೋದರಿಯರು ಹೀಗೆ ಮನೆಯಲ್ಲಿ ಹೆಚ್ಚು ಕಡಿಮೆ ಏಳೆಂಟು ಕುಟುಂಬಗಳಿರುತ್ತಿದ್ದವು. ಮನೆಯ ಯಜಮಾನನು ತನ್ನ ದರ್ಪದ ಮೂಲಕ ಉಳಿದವರನ್ನು ಹದ್ದುಬಸ್ತಿನಲ್ಲಿರಿಸುತ್ತಿದ್ದ. ಹೀಗೆ ಉಸಿರುಗಟ್ಟಿಸುವ ಸಾಂಪ್ರದಾಯಿಕ ಬದುಕಿನ ಹಿಂದೆ ಇರುವ ಮಾನವಜೀವಿಗಳ ನೋವಿನ ಪ್ರತಿಫಲನವೇ ‘ಭಾಗ್ಯ’ ಎಂಬ ಕತೆಯ ನಾಯಿಯ ನಡವಳಿಕೆಗಳಲ್ಲಿ ಕಾಣಬಹುದು. ತುಳಿತಕ್ಕೊಳಗಾಗಿ ಸಾಂಪ್ರದಾಯಿಕ ಬದುಕನ್ನು ಅನಿವಾರ್ಯವಾಗಿ ಒಪ್ಪಿಕೊಂಡರೂ, ತಾಳ್ಮೆಯು ಮಿತಿಮೀರಿದ ಸಿಡಿದು ಪ್ರತಿಭಟಿಸಿದ, ಬದುಕಿನುದ್ದಕ್ಕೂ ಅನಾಥ ಪರಿಸ್ಥಿತಿಯಲ್ಲಿ ಬಾಳಿದ ಪಾಡನ್ನು ಎಂ.ಟಿ. ಯವರು ನಾಯಿಯ ಪ್ರಜ್ಞೆಯ ಹಿನ್ನೆಲೆಯಲ್ಲಿ ವಿವರಿಸುತ್ತಾರೆ.
ತಿರಸ್ಕಾರ ಮತ್ತು ಭೇದಭಾವಕ್ಕೊಳಗಾಗಿ ಒಂಟಿತನದ ನೋವಿನಿಂದ ಬಳಲುವ, ಅವಿಭಕ್ತ ಕುಟುಂಬದ ನಡುವೆ ಅನೇಕ ಮಂದಿಗಳ ಜೊತೆ ಬದುಕುವಾಗಲೂ ಅವರು ಏಕಾಕಿತನವನ್ನು ಅನುಭವಿಸುವ, ಹಿರಿಯವರಿಂದ ಬೈಗುಳ, ಹಿಂಸೆ ಮತ್ತು ಶಾಪಗಳಿಗೆ ಗುರಿಯಾದಾಗ ತಮ್ಮನ್ನು ಪ್ರೀತಿಸುವವರು ಯಾರೂ ಇಲ್ಲ ಎಂಬ ಯೋಚನೆಯಿಂದ ನೊಂದುಕೊಳ್ಳುವ, ಒಳ್ಳೆಯ ಊಟ, ಬಟ್ಟೆಬರೆ, ಹುಟ್ಟುಹಬ್ಬಕ್ಕೊಂದು ಪಾಯಸ ಹೀಗೆ ಸೀಮಿತ ಆಸೆಗಳು ಪೂರೈಸದಿದ್ದಾಗ ಸಮವಯಸ್ಕರ ಮುಂದೆ ಅಪಹಾಸ್ಯಕ್ಕೀಡಾಗಿ ಸಂಕಟಪಡುವ, ಸಂಬಂಧ ಮತ್ತು ನಂಬಿಕೆಗಳು ಹಾಳಾಗುವುದರಿಂದ ಅರಕ್ಷಿತ ಭಾವದಿಂದ ತಲ್ಲಣಿಸುವ, ಮನೆಯ ಅವ್ಯವಸ್ಥೆ, ಅಸ್ವಸ್ಥತೆ, ಮತ್ತು ಸುತ್ತುಮುತ್ತಲಿನವರ ಅಪಹಾಸ್ಯಗಳಿಂದ ತಪ್ಪಿಸಿಕೊಂಡು ನಿಶ್ಚಿಂತರಾಗಲು ಹಲವಾರು ಜಾಗಗಳನ್ನು ಹುಡುಕಿಕೊಂಡು ಅಲೆಯುವ ‘ನರಿಯ ಮದುವೆ’ಯ ಕುಂಞ, ‘ಅಕ್ಕ’ ಕತೆಯ ಅಪ್ಪು, ‘ಕತ್ತಲ ಆತ್ಮ’ದ ವೇಲಾಯುಧನ್, ‘ಚಿಕ್ಕ ಚಿಕ್ಕ ಭೂಕಂಪಗಳು’ ಕತೆಯ ಜಾನಕಿಯ ಮನಸ್ಸಿನ ಪ್ರತೀಕವಾಗಿ ‘ಭಾಗ್ಯ’ ಕತೆಯ ನಾಯಿಯ ಪಾತ್ರವು ಮೂಡಿ ಬಂದಿದೆ.
ತಗಳಿ ಶಿವಶಂಕರ ಪಿಳ್ಳೈಯವರು ‘ವೆಳ್ಳಪೊಕ್ಕತ್ತಿಲ್’ (ನೆರೆ) ಮತ್ತು ವೈಕಂ ಮುಹಮ್ಮದ್ ಬಷೀರ್ ಅವರ ‘ಟೈಗರ್’ ಎಂಬ ಕತೆಗಳನ್ನು ಈ ಕತೆಯೊಂದಿಗೆ ಹೋಲಿಸಬಹುದು. ‘ನೆರೆ’ಯಲ್ಲಿ ತಗಳಿಯವರು ನಾಯಿಯ ಸ್ವಾಮಿನಿಷ್ಠೆಯನ್ನು ಮುಖ್ಯವಾಗಿಟ್ಟುಕೊಂಡು ಮಾನವರ ಕೃತಘ್ನತೆಯನ್ನು ವಿಡಂಬಿಸಿದರೆ ‘ಟೈಗರ್’ ಎಂಬ ಕತೆಯಲ್ಲಿ ವೈಕಂ ಮುಹಮ್ಮದ್ ಬಷೀರ್ ಅವರು ನಾಯಿಯ ಪಾತ್ರವನ್ನು ಸಾಂಕೇತಿಕವಾಗಿ ಬಳಸಿಕೊಳ್ಳುತ್ತಾರೆ. ಎಲ್ಲಿಂದಲೋ ಬಂದು ಆರಕ್ಷಕ ಠಾಣೆಯೊಳಗೆ ಸೇರಿಕೊಂಡ ಬೀದಿನಾಯಿಯು ಅಲ್ಲಿನ ಅವಿಭಾಜ್ಯ ಅಂಗವೆನಿಸಿಕೊಳ್ಳುತ್ತದೆ. ಆರಕ್ಷಕರಿಂದ ಟೈಗರ್ ಎಂದು ಕರೆಸಿಕೊಂಡು ಅವರ ವಿಶೇಷ ಆರೈಕೆಯಲ್ಲಿರುವ ಪುಕ್ಕಲು ನಾಯಿಯನ್ನು ಖೈದಿಗಳಿಗೆ ಕಂಡರಾಗದು. ಅವಕಾಶ ಸಿಕ್ಕಾಗಲೆಲ್ಲ ಸೆರೆಮನೆಯ ಕಂಬಿಗಳೆಡೆಯಿಂದ ಕೈಹಾಕಿ, ನಾಯಿಯನ್ನು ಹಿಡಿದು, ಹೊಡೆದು ರೊಚ್ಚು ತೀರಿಸಿಕೊಂಡರೂ ಆರಕ್ಷಕರಿಂದ ಕ್ರೂರ ಶಿಕ್ಷೆಗಳಿಗೆ ಒಳಗಾಗುತ್ತಾರೆ. ಎಲ್ಲಿಂದಲೋ ಬಂದು ಆಡಳಿತ ವ್ಯವಸ್ಥೆಯ ಭಾಗವಾದ ಬೀದಿನಾಯಿಯು ಹೊರಗಿನಿಂದ ಬಂದು ಭಾರತದಲ್ಲಿ ಮೆರೆಯುವ ಬ್ರಿಟಿಷರಿಗೆ ಸಂಕೇತ. ಕಣ್ಣುಕುಕ್ಕುವ ವ್ಯಂಗ್ಯ. ಆ ವ್ಯವಸ್ಥೆಯನ್ನು ವಿರೋಧಿಸುವ ಹೋರಾಟಗಾರರು ಭಾರತೀಯ ಅಧಿಕಾರಿಗಳಿಂದಲೇ ಶಿಕ್ಷೆಯನ್ನು ಅನುಭವಿಸುವುದು ವಿಪರ್ಯಾಸ. ಮನಸ್ಸಿನಲ್ಲಿ ಅಗ್ನಿಪರ್ವತವು ಕುದಿಯುತ್ತಿದ್ದರೂ ಬಷೀರರು ಅದಕ್ಕೆ ಸಂಯಮದ ಚೌಕಟ್ಟನ್ನು ಒದಗಿಸಿರುವುದು ಗಮನಾರ್ಹ.
ಪುನತ್ತಿಲ್ ಕುಂಞಬ್ದುಲ್ಲ ಅವರು ಬರೆದ ‘ಹದಿನಾಲ್ಕರ ಪ್ರಾಯದಲ್ಲಿ’ ಎಂಬ ಕತೆಯು ಮರಣವನ್ನು ವಸ್ತುವನ್ನಾಗಿಸಿಕೊಂಡಿದೆ. ಹದಿನಾಲ್ಕರ ಹರೆಯದ ಹುಡುಗನ ಪ್ರಾಣವನ್ನು ಕೊಂಡೊಯ್ಯಲು ಪ್ರತ್ಯಕ್ಷಗೊಂಡ ಮಲಕ್ಕುಲ್ ಮೌತ್ತ್ (ಸಾವಿನ ದೇವತೆ) “ನಾವು ಪ್ರಯಾಣ ಮಾಡಬೇಕಾದ ಅರಬಿ ಕತೆಗಳ ಅದ್ಭುತದಂತೆ ಕುದುರೆಗಳಿಲ್ಲದ ರಥ ಕೆಳಗಿಳಿದು ಬರುತ್ತದೆ. ಅದರಲ್ಲಿ ಇನ್ನು ನಮ್ಮ ಪ್ರಯಾಣ ದೇವರ ಬಳಿಗೆ. ಅಲ್ಲಿ ನಿನ್ನ ಪಾಪ ಪುಣ್ಯಗಳ ವಿಚಾರಣೆ ಮಾಡಲು ದೇವರು ಕಾಯುತ್ತಿದ್ದಾನೆ. ಒಳಿತು ಕೆಡುಕುಗಳ ಸಚಿವರಾದ ರಶೀದ್ ಹತೀಬರೂ ಅಲ್ಲಿದ್ದಾರೆ” (ಪುಟ 87-88) ಎನ್ನುತ್ತಾನೆ. ಇಸ್ಲಾಂ ಧರ್ಮದ ಮಿಥ್ ಮಿಳಿತಗೊಂಡಿರುವುದರಿಂದ ಈ ಕತೆಯು ಹೊಸತನ ಮತ್ತು ಧ್ವನಿಪೂರ್ಣತೆಯನ್ನು ಗಳಿಸಿಕೊಂಡಿದೆ. ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬರಾದ ವಿ.ಜಿ. ಭಟ್ಟರ ‘ಯಮದೇವನಿಗೆ’ ಎಂಬ ಕವಿತೆಯೊಂದಿಗೆ ಈ ಕತೆಯನ್ನು ಹೋಲಿಸಬಹುದು ಎರಡೂ ಕೃತಿಗಳಲ್ಲೂ ಸಾವನ್ನು ಕುರಿತ ನಿಲುವು ಪ್ರಕಟವಾಗಿದೆ. ಯಮನೊಂದಿಗೆ ಮುಖಾಮುಖಿಯಾಗಿ ಮಾತನಾಡುವ ಕವಿಯು ಸಾವಿನ ಬಗ್ಗೆ ನಿರ್ಭೀತನಾಗಿದ್ದರೆ ‘ಹದಿನಾಲ್ಕನೇ ಪ್ರಾಯದಲ್ಲಿ’ನ ಹುಡುಗನು ಮಲಕ್ಕಿನ ಜೊತೆ ಉಭಯ ಕುಶಲೋಪರಿಯನ್ನು ವಿಚಾರಿಸಿದರೂ ಒಳಗೊಳಗೆ ತಲ್ಲಣಿಸುತ್ತಾನೆ. ಮೃತ್ಯುದೇವತೆಯನ್ನೇ ಲಘುಧಾಟಿಯಲ್ಲಿ ಮಾತನಾಡಿಸಿ ಅವನ ಚಟುವಟಿಕೆಗಳ ಬಗ್ಗೆ ಸೂಕ್ತ ಸೂಚನೆಗಳನ್ನು ಕೊಡುವ ಕವಿಯ ಪರಿ ವಿಲಕ್ಷಣವೆನಿಸಿದರೆ ಹದಿನಾಲ್ಕರ ಹರೆಯದ ಹುಡುಗನು ಮಲಕ್ಕಿನ ಕಾರ್ಯವೈಖರಿಗಳ ಬಗ್ಗೆ ಕುತೂಹಲವನ್ನು ವ್ಯಕ್ತಪಡಿಸುವ ಮೂಲಕ ಅವರ ಚಟುವಟಿಕೆಗಳನ್ನು ತಿಳಿದುಕೊಳ್ಳುತ್ತಾನೆ. ಕವಿಯ ಪಾಲಿಗೆ ಯಮ, ಹುಡುಗನ ಪಾಲಿಗೆ ಮಲಕ್ಕ್ ಅತಿಥಿಯಾಗಿರುವಾಗ ಅವರಿಗೆ ಉಪಚಾರ ಮಾಡಬೇಕೆನ್ನುವ ಪ್ರಜ್ಞೆ ಇಬ್ಬರಿಗೂ ಇದೆ. “ನಮ್ಮ ದೇವರ ಕೋಣೆಯಲ್ಲಿ ನಿನಗೆ ಮಂಚಾ ಹಾಕಿ, ಗಾದಿ ಹಾಸಿ, ದಿಂಬು ಕೊಡುತ್ತೇನೆ ಆರಾಮವಾಗಿ ಪವಡಿಸು. ಯಾವ ಹೊತ್ತಿಗೆ ಬೇಕಾದರೂ ನನ್ನ ಮಡದಿ ಕಾಫಿ ಮಾಡಿಕೊಡುತ್ತಾಳೆ” (ಮಯೂರ – ಸಂಪುಟ 36-ಸಂಚಿಕೆ 5 – 2003 ಪುಟ 8) ಎಂದು ಕವಿಯು ಯಮನಿಗೆ ಹೇಳಿದರೆ ಹುಡುಗನು “ಮಲಕ್ಕ್, ನೀನು ತುಂಬಾ ದೂರದಿಂದ ಬರುತ್ತಿದ್ದೀಯಲ್ಲವೇ? ದೇವರ ಬಳಿಯಿಂದಲ್ಲವೇ? ತುಂಬಾ ದಣಿದಿರಬೇಕಲ್ಲ? ಕಣಾರ, ಒಂದು ಎಳನೀರು ಬೇಕಾಗಿದೆ. ಬೇಗ ಕೆಡಹು” ಎಂದು ಕೆಲಸದಾಳಿಗೆ ಹೇಳುತ್ತಾನೆ. ಮಲಕ್ಕಿಗೆ ಬೆಣ್ಣೆ ಸವರುವ ಉದ್ದೇಶ ಹುಡುಗನಿಗಿದ್ದರೆ ಯಮನನ್ನು ಕರ್ತವ್ಯದಿಂದ ವಿಮುಖಗೊಳಿಸುವ ಉದ್ದೇಶ ಕವಿಗೆ ಇಲ್ಲ. “ನಾನು ಹೊರಡುವ ಸಮಯ ಬಂದ ಕೂಡಲೇ ನನ್ನ ಹೆಂಡತಿ ಮಕ್ಕಳಿಗೆ ಗೊತ್ತಾಗದಂತೆ ಸೂಚನೆ ಕೊಡು. ನಿನ್ನ ಬೆಂಬದಿಗೆ ಕೋಣನ ಮೇಲೆ ಕುಳಿತು ನಾನೂ ಬರುತ್ತೇನೆ. ನಗುನಗುತ್ತ ಬಂದು ಬಿಡುತ್ತೇನೆ” (ಮಯೂರ – ಸಂಪುಟ 36 -ಸಂಚಿಕೆ 5 – 2003 ಪುಟ 8) ಎಂದು ಸ್ಪಷ್ಟವಾಗಿ ಹೇಳುತ್ತಾನೆ. ಮಲಕ್ಕಿನ ಜೊತೆ ಅಂತಿಮ ಪಯಣಕ್ಕೆ ಸಿದ್ಧನಾಗುವಾಗ ಹುಡುಗನು “ರಬ್ಬೂಲ್ ಆಲಮಿನಾಣೆಯಾಗಿಯೂ ನಾನು ಹೆದರಲಿಲ್ಲ. ಭಯ ಒಂದು ಗಾಳಿಯಂತೆ. ನನ್ನಿಂದ ಅಗಲಿ ಹೋಗಿದೆ” (ಶಬ್ದಗಳು- ಪುಟ 87) ಎಂದರೂ ಕೊನೆಗೆ ಭಾವುಕನಾಗುತ್ತಾನೆ. “ನನಗೆ ಒಂದು ಅವಕಾಶವನ್ನಾದರೂ ಕರುಣಿಸು. ಹದಿನಾಲ್ಕು ವರ್ಷದ ಬದುಕನ್ನು ಮತ್ತೊಮ್ಮೆ ನಕ್ಕು ನಲಿದು ತೀರಿಸಲು ಅನುಮತಿ ನೀಡುವೆಯಾ?” (ಪುಟ 88) ಎಂದು ಬೇಡಿಕೊಳ್ಳುತ್ತಾನೆ. ಯಾಕೆಂದರೆ ಆತ ಹದಿಹರೆಯದ ಹುಡುಗ. ‘ಯಮದೇವನಿಗೆ’ ಕವಿತೆಯ ನಾಯಕನಂತೆ ಇಳಿವಯಸ್ಸಿನವನಲ್ಲ. ‘ದೇವರು ಹೋಗುವ ದಾರಿ’, ‘ಹದಿನಾಲ್ಕರ ಪ್ರಾಯದಲ್ಲಿ’ ಎಂಬ ಕತೆಗಳು ಮತ್ತು ‘ಯಮದೇವನಿಗೆ’ ಎಂಬ ಕವಿತೆಯು ಲಘು ಧಾಟಿಯಲ್ಲಿ ಸಾಗುವ ರಚನೆಗಳಾಗಿದ್ದರೂ ಅವುಗಳ ಹಿಂದಿರುವ ಧ್ವನಿಯು ಹಗುರವಲ್ಲ. ಸಾವನ್ನು ಹೇಗೆ ಸ್ವೀಕರಿಸಬೇಕೆಂಬ ಗಂಭೀರ ಚಿಂತನೆಯು ಇಲ್ಲಿದೆ. ಇದನ್ನು ಓದಿದಾಗ ರವೀಂದ್ರನಾಥ ಠಾಕೂರ್, ಎಮಿಲಿ ಡಿಕನ್ಸನ್ ಅವರ ಕವಿತೆಗಳಂತೆ ಕನ್ನಡದ ಕತೆಗಳು ಕೂಡ ನೆನಪಿಗೆ ಬರುತ್ತವೆ.
ಮಾಧವಿ ಕುಟ್ಟಿ ಅವರ ‘ಕಳೆದುಹೋದ ನೀಲಾಂಬರಿ’ ಮತ್ತು ಕನ್ನಡದ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಅವರ ‘ಇಲ್ಲ ಇಲ್ಲ’ ಎಂಬ ಕತೆಗಳಿಗೆ ಆಶ್ಚರ್ಯಕರವಾದ ಹೋಲಿಕೆಗಳಿವೆ. ಒಬ್ಬನನ್ನು ಪ್ರೀತಿಸಿ ಇನ್ನೊಬ್ಬನನ್ನು ಮದುವೆಯಾದ ಹೆಣ್ಣಿನ ದ್ವಂದ್ವವು ಎರಡೂ ಕತೆಗಳ ವಸ್ತುವಾಗಿದೆ. ಈ ದ್ವಂದ್ವವು ‘ಕಳೆದುಹೋದ ನೀಲಾಂಬರಿಯ’ ನಾಯಕಿ ಸುಭದ್ರಾದೇವಿ ಮತ್ತು ‘ಇಲ್ಲ ಇಲ್ಲ’ದ ನಾಯಕಿ ಪದ್ಮಳ ಇಬ್ಬಂದಿತನದ ಅನುಭವಕ್ಕೆ ಕಾರಣವಾಗುತ್ತದೆ. ಸುಭದ್ರೆ ತನ್ನ ಅಲ್ಪತೃಪ್ತ ಗಂಡ ಚಂದ್ರಶೇಖರ ಮೆನೋನ್ ಮತ್ತು ಪದ್ಮಳು ಶಂಕರನ ಜೊತೆ ಮುಖವಾಡವನ್ನು ಧರಿಸಿಯೇ ಬಾಳುತ್ತಾರೆ. ಆದರೆ ಏಕಾಂತದಲ್ಲಿ ಮುಖವಾಡವು ಕಳಚಿದಾಗ ಸುಭದ್ರೆಗೆ ತನ್ನ ರಾಮಾನುಜ ಶಾಸ್ತ್ರಿ ಮತ್ತು ಪದ್ಮಳಿಗೆ ಪ್ರಭಾಕರನ ನೆನಪುಗಳು ಕಾಡುತ್ತವೆ. ಇಬ್ಬರು ನಾಯಕಿಯರಿಗೂ ತಮ್ಮ ಗಂಡ ಮತ್ತು ಪ್ರಿಯಕರರ ನಡುವಿನ ಅಂತರವನ್ನು ತುಂಬಲಾಗುವುದಿಲ್ಲ. ಗಂಡಂದಿರ ಪ್ರಪಂಚವು ಸಣ್ಣದು. ಚಂದ್ರಶೇಖರ ಮೆನೋನ್ ಲೆಕ್ಕ ಹಾಕಿ ವ್ಯವಸ್ಥಿತವಾದ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದ. ಮೂರೋ, ನಾಲ್ಕೋ ಜನ ಸ್ನೇಹಿತರು ಮಾತ್ರವೇ ಅವನಿಗಿರುವುದು. ಅವರನ್ನು ಮಾತ್ರವೇ ತನ್ನ ಮನೆಗೆ ಕರೆಯುತ್ತಿದ್ದುದು. ಪರಿಚಿತರನ್ನು ಕ್ಲಬ್ಬುಗಳಲ್ಲೋ ಸಾರ್ವಜನಿಕ ಸ್ಥಳಗಳಲ್ಲೋ ಕಂಡರೆ ಬರೇ ಒಂದು ಮುಗುಳ್ನಗುವಿಗಷ್ಟೇ ಸೀಮಿತನಾದರೆ ಶಂಕರನಿಗೆ ಉದ್ಯೋಗ, ಪಾರ್ಟಿ ಮತ್ತು ಭಡ್ತಿಗಳನ್ನು ಬಿಟ್ಟು ಬೇರೆ ಲೋಕವಿಲ್ಲ. ಆರ್ಥಿಕ ಸ್ಥಿರತೆಯನ್ನೇ ನಂಬಿದ ಸುಭದ್ರೆಯ ತಂದೆಯು ಆಕೆಯನ್ನು ಸುಂದರನೂ, ಸರಳ ಸಜ್ಜನನೂ, ವಿನಯವಂತನೂ ಆದ ರಾಮಾನುಜ ಶಾಸ್ತ್ರಿಯಿಂದ ದೂರ ಮಾಡಿದರೆ ಅದೇ ದೃಷ್ಟಿಯನ್ನು ಇಟ್ಟುಕೊಂಡ ಪದ್ಮಳ ಹೆತ್ತವರು ಆಕೆಯನ್ನು ಪ್ರಭಾಕರನಿಂದ ಬೇರ್ಪಡಿಸುತ್ತಾರೆ. ಪರಿಸ್ಥಿತಿಯನ್ನು ಒಪ್ಪಿಕೊಂಡ ಸುಭದ್ರೆಯು ಮೆನೋನರನ್ನು, ಪದ್ಮಳು ಶಂಕರನನ್ನು ಮದುವೆಯಾಗಿ ನಗರವನ್ನು ಸೇರಿದರೂ ದಾಂಪತ್ಯದ ಬದುಕು ಅವರ ಅಂತರಂಗವನ್ನು ತುಂಬುವುದಿಲ್ಲ. ಶ್ರೀಮಂತಿಕೆಯ ವಾತಾವರಣ ಮತ್ತು ಬೆಲೆಬಾಳುವ ಸೀರೆಗಳು ಪ್ರೀತಿಗಾಗಿ ದಹಿಸುವ ಅವರ ಮನೋಲೋಕವನ್ನು ಸ್ಪರ್ಶಿಸುವುದಿಲ್ಲ. ಈ ಅರಿವಿನಲ್ಲೇ ಸುಭದ್ರೆ ಮತ್ತು ಪದ್ಮಾ ಬದುಕುತ್ತಾರೆ. ಅದೇ ಅವರಿಬ್ಬರ ದುರಂತ. ಈ ಕತೆಗಳಲ್ಲಿ ಮೂಡಿಬರುವ ವೈಫಲ್ಯಕ್ಕೆ ಹಲವಾರು ಮುಖಗಳಿವೆ. ತನ್ನ ಸೌಂದರ್ಯ ಮತ್ತು ಮನಸ್ಸಿಗೊಪ್ಪದ ಜ್ಞಾನಾಂಬಾಳನ್ನು ಮದುವೆಯಾಗಿ, ಆಕೆಯ ಮನೋರೋಗವನ್ನು ಸಹಿಸಿಕೊಂಡು, ಸಂಗೀತವನ್ನಷ್ಟೇ ಹೇಳಿಕೊಡಲು ಗೊತ್ತಿರುವುದರಿಂದ ಅರೆ ಹೊಟ್ಟೆಯಲ್ಲಿ ಬದುಕುತ್ತಾ ಮೇಲಿನಿಂದ ಮೇಲೆ ಪೆಟ್ಟು ತಿನ್ನುವ ರಾಮಾನುಜ ಶಾಸ್ತ್ರಿ, ಕಾರ್ಮಿಕ ಮುಖಂಡನಾಗಿ ಸೆರೆಮನೆಯನ್ನು ಸೇರಿದ ಪ್ರಭಾಕರ, ತಮ್ಮ ಸಣ್ಣ ಜಗತ್ತಿನೊಳಗೆ ಉಳಿಯುವ ಮೆನೋನ್ ಮತ್ತು ಶಂಕರ, ರಾಮಾನುಜ ಶಾಸ್ತ್ರಿಯನ್ನು ಮದುವೆಯಾಗದೆ ಇಬ್ಬಂದಿತನಕ್ಕೆ ಒಳಗಾದ ಸುಭದ್ರೆ ಮತ್ತು ಪ್ರಭಾಕರನನ್ನು ಪಡೆಯಲಾರದೆ ದ್ವಂದ್ವವನ್ನು ಅನುಭವಿಸುವ ಪದ್ಮ ಇವರೆಲ್ಲರೂ ವಿಫಲರೇ. ಇವರಿಗೆ ಮುಕ್ತಿಯ ಸಾಧ್ಯತೆಗಳು ಇಲ್ಲ. ಸಂಕೀರ್ಣ ವಸ್ತುವನ್ನು ಸಮರ್ಥವಾಗಿ ನಿರ್ವಹಿಸುವ ಕತೆಗಳು ಖಚಿತ ದೃಷ್ಟಿಕೋನ, ಸೂಕ್ತ ವಿವರಗಳು, ಅನುಭವದ ನೈಜತೆ ಮತ್ತು ವಿವಿಧ ಸ್ತರಗಳಲ್ಲಿ ನಡೆಯುವ ಅರ್ಥಕ್ರಿಯೆಗಳಿಂದಾಗಿ ಸಾರ್ಥಕತೆಯನ್ನು ಪಡೆಯುತ್ತವೆ.
ಈ ಕತೆಗಳಿಗೂ ವೀಣಾ ಶಾಂತೇಶ್ವರರ ‘ಹೊರಟು ಹೋದವನು’ ಎಂಬ ಕತೆಗೂ ಸಾಕಷ್ಟು ಸಾಮ್ಯ ವ್ಯತ್ಯಾಸಗಳಿವೆ. ಈ ಕತೆಯ ನಾಯಕಿಯೂ ಇಬ್ಬಂದಿತನವನ್ನು ಅನುಭವಿಸುತ್ತಾಳೆ. ಮಾಧವಿಕುಟ್ಟಿ ಮತ್ತು ರಾಜಲಕ್ಷ್ಮಿ ಎನ್. ರಾವ್ ಅವರ ನಾಯಕಿಯರು ಮುಖವಾಡಗಳ ಬದುಕಿನಲ್ಲಿ ಪರಿಹಾರವನ್ನು ಕಂಡುಕೊಂಡರೆ ವೀಣಾ ಅವರ ಕತೆಯ ನಾಯಕಿಯು ದಾಹ, ಪ್ರತೀಕಾರಗಳ ಭಾವನೆಗಳಲ್ಲಿ ಸುಡುತ್ತಿರುತ್ತಾಳೆ. ಗಂಡನ ಪ್ರೀತಿ, ಕಾಳಜಿ, ಒಳ್ಳೆಯತನಗಳು ಅವಳ ದಾಹವನ್ನು ತಣಿಸುವುದಿಲ್ಲ. ಮದುವೆಯಾಗಿ ಹನ್ನೆರಡು ವರುಷಗಳಾದರೂ ತಾನು ತೀವ್ರವಾಗಿ ಪ್ರೀತಿಸಿದ್ದ ಪ್ರೊಫೆಸರನ್ನು ಅವಳಿಗೆ ಮರೆಯಲಾಗುವುದಿಲ್ಲ. ‘ಕಳೆದುಹೋದ ನೀಲಾಂಬರಿ’ಯ ಸುಭದ್ರೆಗೂ ದಾಹವಿದೆ. ಮದುವೆಯಾಗಿ ಮೂವತ್ತಮೂರು ವರುಷಗಳು ಕಳೆದರೂ ಆಕೆಗೆ ತನ್ನ ಸಂಗೀತ ಗುರುಗಳಾದ ರಾಮಾನುಜ ಶಾಸ್ತ್ರಿಯನ್ನು ಮರೆಯಲಾಗುವುದಿಲ್ಲ. ಗುರುವಾಯೂರಿಗೆ ಬಂದಾಗ ಆಕೆಯು ಅವನನ್ನು ಅರಸಿ ಕಂಡು ಹಿಡಿಯುತ್ತಾಳೆ. ಆದರೆ ಆಕೆಗೆ ಹೆತ್ತವರ ಮೇಲೆ ಸಮಾಜದ ಮೇಲೆ ಸೇಡಿನ ಭಾವ ಇರುವುದಿಲ್ಲ. ಕೃಷ್ಣನ ಮೇಲೆ ರಾಧೆಗೆ ಇದ್ದಂಥ ಪ್ರೇಮವೇ ರಾಮಾನುಜ ಶಾಸ್ತ್ರಿಯ ಬಗ್ಗೆ ತುಂಬಿರುತ್ತದೆ. ‘ಹೊರಟು ಹೋದವನು’ ಕತೆಯ ನಾಯಕಿಯ ಪ್ರಿಯಕರನಾಗಿದ್ದ ಪ್ರೊಫೆಸರ್ ತೀರಿಕೊಂಡಿದ್ದರೂ ಲೋಂಡಾ ನಿಲ್ದಾಣದಲ್ಲಿ ಕಣ್ಣಿಗೆ ಬಿದ್ದ ಮಿಠಾಯಿವಾಲನಲ್ಲಿ ಆಕೆಯು ಅವನ ನೆರಳನ್ನು ಕಾಣುತ್ತಾಳೆ. ಈ ನೆರಳನ್ನು ಅರಸಿಕೊಂಡೇ ಅವಳು ಮುಂಬೈಯಿಂದ ಹುಬ್ಬಳ್ಳಿಯವರೆಗೆ ವರ್ಷಕ್ಕೆ ಮೂರು ನಾಲ್ಕು ಬಾರಿ ಪ್ರಯಾಣವನ್ನು ಮಾಡುತ್ತಾಳೆ. ಕತೆಯ ಕೊನೆಗೆ ಅವಳು ತನ್ನ ಮನೋರೋಗದಿಂದ ಮುಕ್ತಳಾಗುವ ಸೂಚನೆಯಿದೆ. ಹೊರಟುಹೋದ ಮಿಠಾಯಿವಾಲಾ ಇದನ್ನು ಸಾಧ್ಯವಾಗಿಸುತ್ತಾನೆ. “ಬಹಳ ಕಾಲದಿಂದ ಬೆನ್ನ ಮೇಲಿದ್ದೊಂದು ಭಾರ ತಟ್ಟನೆ ಕಳಚಿ ಬಿದ್ದು ಬೆನ್ನು ನೇರವಾದಾಗ ಒಂದು ಕ್ಷಣ ತಡೆಯಲಾರದೆ ಮುಗ್ಗರಿಸಿದಂಥ ಅನುಭವ. ಶೆಲಿ ಕಲಿಸಿದ ಪ್ರೊಫೆಸರು ಮತ್ತೊಮ್ಮೆ ಸತ್ತುಹೋದ ಅನುಭವ.” ಇದು ವೀಣಾ ಶಾಂತೇಶ್ವರ ಅವರ ಕತೆಯನ್ನು ಮಾಧವಿಕುಟ್ಟಿ ಮತ್ತು ರಾಜಲಕ್ಷ್ಮಿ ಎನ್. ರಾವ್ ಅವರ ಕತೆಗಳಿಂದ ಬೇರ್ಪಡಿಸುವ ಅಂಶವಾಗಿದೆ.
ಜಗತ್ತಿಗೆ ದಯೆ, ಕರುಣೆಯ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿಗಳಲ್ಲಿ ಏಸುವೂ ಒಬ್ಬ. ಸಾವಿನ ಸಂಕಟದಲ್ಲಿಯೂ ವಿಚಲಿತನಾಗದೆ ಲೋಕ ಕಲ್ಯಾಣಕ್ಕಾಗಿ ಮಿಡಿದ ಆತನ ವ್ಯಕ್ತಿತ್ವವು ಇವತ್ತಿಗೂ ಪ್ರಸ್ತುತವಾಗಿದೆ. ಆಧುನಿಕ ಸಮಾಜದ ಲಕ್ಷಣವೆಂಬಂತೆ ಹಿಂಸೆಯು ವಿಶ್ವವ್ಯಾಪಿಯಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಏಸುವಿನ ಪ್ರೀತಿ, ಕರುಣೆ, ಔದಾರ್ಯಗಳು ನಮ್ಮ ಹೃದಯದೊಳಗೆ ನೆಲೆಗೊಳ್ಳಬೇಕಾದ ಅಗತ್ಯವಿದೆ ಎಂಬ ಆಶಯವನ್ನು ವ್ಯಕ್ತಪಡಿಸುವ ಅಶಿತಾ ಅವರ ‘ಪೆಸಹಾ ಹಬ್ಬ’ ಎಂಬ ಕತೆಯು ಏಸುವಿನ ಸಾವನ್ನು ವಿಷಾದದಿಂದ ನೋಡುತ್ತಿದ್ದರೂ ಮಗುವಿನಲ್ಲಿ ಪ್ರೀತಿ ಮತ್ತು ತಾಯ್ತನದ ಭಾವವನ್ನು ಪ್ರಚೋದಿಸುವ ಮೂಲಕ ಎದೆಯಾಳದಲ್ಲಿ ಮಾನವೀಯತೆಯ ಬೆಳಕನ್ನು ಹಚ್ಚುವ ಬಗ್ಗೆ ಹೆಮ್ಮೆ ಮತ್ತು ಸಾರ್ಥಕತೆಯ ಭಾವವನ್ನು ತಾಳುತ್ತದೆ.
ಗೌರಿ ಎಂಬ ಪುಟ್ಟ ಹುಡುಗಿಯು ‘ಪೆಸಹಾ ಹಬ್ಬ’ದ ಬಗ್ಗೆ ಕೇಳಿದಾಗ ಅವಳ ತಾಯಿಯು ಏಸುವಿನ ಕತೆಯನ್ನು ಹೇಳುತ್ತಾಳೆ. ಅವನ ಹುಟ್ಟು, ಬೆಳವಣಿಗೆ ಮತ್ತು ಪವಾಡಗಳ ಬಗ್ಗೆ ಹೇಳುವಾಗ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ ಮಗಳು ಏಸುವನ್ನು ಶಿಲುಬೆಗೇರಿಸುವ ಮುನ್ನ ಆತನ ಮೇಲೆ ನಡೆಸುವ ದೌರ್ಜನ್ಯದ ವಿವರಗಳು ಬಂದಾಗ “ನನಗೆ ಈ ಕತೆ ಕೇಳಬೇಕಾಗಿಲ್ಲ. ಕೆಟ್ಟ ಕತೆ. ಕೆಟ್ಟ ಅಮ್ಮ” (ಪುಟ 129) ಎಂದು ಸಂಕಟ ಪಡುವಲ್ಲಿ ಹಿಂಸೆಯನ್ನು ನಿರಾಕರಿಸುವ ಮನೋಭಾವವನ್ನು ಕಾಣಬಹುದು. ‘ರಾಜ ಹಿಂದುವೋ ಮುಸ್ಲಿಮೋ? ನೀನು ಹಿಂದುವೋ ಮುಸ್ಲಿಮೋ? ನೀನು ದೇವರನ್ನು ನೋಡಿದ್ದೀಯಾ?’ ಎಂಬ ಮುಗ್ಧ ಪ್ರಶ್ನೆಗಳು ಜಾತಿಧರ್ಮಗಳ ಮೂಲವನ್ನು ಅಲುಗಾಡಿಸಲು ಯತ್ನಿಸುತ್ತವೆ. ಆದರೆ ಅವಳ ಪ್ರಶ್ನೆಗಳ ಮೂಲ ಬೇರುಗಳು ಹಬ್ಬುವ ನೆಲೆಗಳನ್ನು ಕಂಡು ತಲ್ಲಣಿಸುವ ತಾಯಿಯು ಏಸುವನ್ನು ಶಿಲುಬೆಗೇರಿಸಿದ ರಾಜನ ಜಾತಿಯನ್ನು ಹೇಳಿ ಮಗಳ ಮನಸ್ಸಿನಲ್ಲಿ ಜನಾಂಗೀಯ ದ್ವೇಷವು ಮೂಡದ ಧಾಟಿಯಲ್ಲಿ ಕತೆಯನ್ನು ಹೇಳುತ್ತಲೇ ತನ್ನ ಮಾನಸಿಕ ತುಮುಲವನ್ನು ಎದುರಿಸುತ್ತಾಳೆ. ತಂತ್ರದ ದೃಷ್ಟಿಯಿಂದ ಕತೆಯ ನಾಟಕೀಯತೆಯೂ ಮುಖ್ಯವಾಗುತ್ತದೆ. ಏಸುವು ಪ್ರಭುತ್ವದ ದೌರ್ಜನ್ಯಕ್ಕೆ ತುತ್ತಾಗುವ ಕತೆಯನ್ನು ಕೇಳುತ್ತಿರುವಂತೆಯೇ ಆಧುನಿಕ ಯುಗದಲ್ಲಿ ಅಧಿಕಾರದ ಕ್ರೌರ್ಯಕ್ಕೆ ಬಲಿಯಾಗುವ ಚೀರಾಟವನ್ನು ಕೇಳುತ್ತೇವೆ. “ಕೆಳಗಿನಿಂದ ಒಂದು ಶಬ್ದ. ಉದ್ರಿಕ್ತ ಮಾತುಗಳು. ಘೋಷಣೆಗಳು. ಪೋಲೀಸು ಜೀಪು, ರಸ್ತೆಯ ಮತ್ತೊಂದು ತುದಿಯಲ್ಲಿ ಎಲ್ಲಿಯೋ ಒಂದು ಆರ್ತನಾದ. ಮತ್ತೆ ನಿಶ್ಶಬ್ದ. ನಿಶ್ಶಬ್ದ ಮಾತ್ರ” (128-129) ಏಸುವಿನ ಪರಿಸ್ಥಿತಿಯನ್ನು ಸೂಚ್ಯವಾಗಿ ಚಿತ್ರಿಸುವುದರೊಂದಿಗೆ ಆ ಕಾಲದ ಹಿಂಸೆ ಮತ್ತು ಕ್ರೌರ್ಯಗಳು ಹೊಸ ರೂಪದಲ್ಲಿ ಮುಂದುವರಿಯುತ್ತಿರುವ ದುರಂತವನ್ನು ಕಟ್ಟಿಕೊಡುವ ಕತೆಯು ನಿರಾಶೆಯಲ್ಲಿ ಮುಕ್ತಾಯವಾಗುವುದಿಲ್ಲ. ಗೌರಿಯು ಚಿತ್ರದಲ್ಲಿರುವ ಏಸುವಿನ ಗಾಯಗಳನ್ನು ಸವರುತ್ತಾ, ಸಾಂತ್ವನದ ಮಾತುಗಳನ್ನು ಹೇಳಿ ಆತನ ತಾಯಿಯಾಗುವ ವಿದ್ಯಮಾನವು ಈ ಕತೆಯಲ್ಲಿ ನಡೆಯುವ ಮುಖ್ಯ ಘಟನೆಯಾಗಿದೆ. ಇದು ಅವಳ ಸ್ವಭಾವಕ್ಕೆ ತಕ್ಕಂತೆ ಸರಳವಾದ ಸಂಗತಿಯಾಗಿದ್ದರೂ ಪುಟ್ಟ ಮಗುವಿನ ಹೆಂಗರುಳು, ಹಿಂಸೆಗೆ ವಿರುದ್ಧವಾಗಿ ಕೊಡುವ ಮಾನವೀಯ ನೆಲೆಯ ಪ್ರತಿಕ್ರಿಯೆಯು ಮುಖ್ಯವಾಗುತ್ತದೆ. “ಅವಳ ಮುಂದೆ ಮೊಣಕಾಲೂರುತ್ತೇನೆ. ಅವಳ ಪುಟ್ಟ ಕೈಗಳನ್ನು ಮುದ್ದಿಸಿ ಕಾಂತಿಯ ತುಣುಕು ಉಳಿದು ಹೊಳೆಯುತ್ತಿರುವ ಆ ಕಣ್ಣುಗಳನ್ನು ನೋಡಿ ಹೇಳುತ್ತೇನೆ- ಹೌದು ದೇವರನ್ನು ಮಾತ್ರವೇ ಕಾಣುತ್ತೇನೆ.” (ಪುಟ 130) ಎಂಬ ತಾಯಿಯ ಮಾತಿನಲ್ಲಿ ಲೇಖಕಿಯು ನಿಜವಾದ ಪ್ರೀತಿಯನ್ನು ಮನಗಾಣಿಸುತ್ತಾರೆ. ಈ ಕತೆಯ ವಸ್ತು ಸಾರ್ವತ್ರಿಕವಾಗಿದೆ. ಅದಕ್ಕೆ ಕಾಲದ ಮಿತಿಯಿಲ್ಲ.
ಶೋಭಾ ವಾರಿಯರ್ ಅವರ ‘ಹೂವಾಡಗಿತ್ತಿ’ ಎಂಬ ಕತೆಯು ಹೆಣ್ಣಿನ ಶೋಷಣೆಯ ಕರಾಳ ಮುಖವನ್ನು ತೆರೆದಿಡುತ್ತದೆ. ರಾಗಾ ಎಂಬ ಹೆಸರಿನ ತಬ್ಬಲಿ ಹುಡುಗಿಯು ಹೊಟ್ಟೆಪಾಡಿಗಾಗಿ ಹೂ ಮಾರುತ್ತಾಳೆ. ನಿರೂಪಕಿಗೆ ಅವಳ ನಡವಳಿಕೆಗಳು ಇಷ್ಟವಾಗಿ ಇಬ್ಬರೂ ಆತ್ಮೀಯ ಗೆಳತಿಯರಾಗುತ್ತಾರೆ. ಹೂವಾಡಗಿತ್ತಿಯು ‘ಸಮುದ್ರದ ಬಗಲಲ್ಲೇ ನನ್ನ ಮನೆ’ ಎನ್ನುತ್ತಿದ್ದಂತೆ ನಿರೂಪಕಿಯು ಆಕೆಯ ಭದ್ರತೆಯ ಬಗ್ಗೆ ಮಾತೆತ್ತಿದಾಗ “ಕತ್ಲಾದ್ರೆ ಯಾಕೆ ಎರ್ಬೇ ಕು? ಚಂದಮಾಮ ನಂಜೊತೆ ನಡ್ದು ರ್ತಾ ನೆ” (ಪುಟ 133) ಎನ್ನುತ್ತಾಳೆ. ಆದರೆ ಆಕೆಯ ಮನೆಯೊಳಗೆ ನುಗ್ಗಿದ ಪುಂಡರು ಅವಳನ್ನು ಬಲಾತ್ಕಾರ ಮಾಡುತ್ತಾರೆ. ಆಕೆಯನ್ನು ರಕ್ಷಿಸಬೇಕಿದ್ದ ಕಡಲು, ಚಂದ್ರ, ಮನುಷ್ಯರು ಸೇರಿದಂತೆ ಪ್ರಕೃತಿಯೇ ಅವಳನ್ನು ಕಾಪಾಡಲಿಲ್ಲ ಎಂಬ ಯಾತನೆಯ ಧ್ವನಿಯೊಂದಿಗೆ ಕತೆಯು ಮುಗಿಯುತ್ತದೆ. ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ಸಾಮೂಹಿಕ ಬಲಾತ್ಕಾರ ಮುಂತಾದ ವಿಷಯಗಳು ಕಮಲಾದಾಸ್ ಅವರ ‘ಸ್ವಯಂವರ’, ‘ಕಲ್ಯಾಣಿ’ ಮೊದಲಾದ ಕತೆಗಳಲ್ಲಿ ಈ ಮೊದಲೇ ಕಾಣಿಸಿಕೊಂಡಿದ್ದರೂ ಅವುಗಳಲ್ಲಿ ಮಂಡನೆಯು ಮುಖ್ಯವಾಗಿತ್ತೇ ಹೊರತು ಪ್ರತಿಕ್ರಿಯೆಯಲ್ಲ.
‘ಶಬ್ದಗಳು’ ಸಂಕಲನದಲ್ಲಿರುವ ‘ಮುಗಿಸಲಾರದ ಪಯಣ’ವು ಮೋಹನ ಕುಂಟಾರ್ ಅವರ ಮೊದಲ ಅನುವಾದಿತ ರಚನೆಯಾಗಿದೆ. ತಮ್ಮ ಅಭಿರುಚಿಗೆ ಅನುಸರಿಸಿ ಆಯ್ಕೆ ಮಾಡಿ ಕನ್ನಡಕ್ಕೆ ತಂದ ಮಲಯಾಳಂ ಕತೆಗಳ ಪೈಕಿ ವೈಕಂ ಮುಹಮ್ಮದ್ ಬಷೀರ್, ಎಂ.ಟಿ. ವಾಸುದೇವನ್ ನಾಯರ್, ಕಾರೂರ್ ನೀಲಕಂಠ ಪಿಳ್ಳೈ, ಪುನತ್ತಿಲ್ ಕುಂಞಬ್ದುಲ್ಲ, ಸಕ್ಕರಿಯ ಮುಂತಾದವರ ಕತೆಗಳು ಇದ್ದರೂ ಅವುಗಳು ಮಲಯಾಳಂ ಭಾಷೆಯ ಮಹತ್ವದ ಅಥವಾ ಪ್ರಾತಿನಿಧಿಕ ರಚನೆಗಳಲ್ಲ. ಆದರೂ ತಮ್ಮ ಮೊದಲ ಪ್ರಯತ್ನದಲ್ಲೇ ಭರವಸೆಯನ್ನು ಹುಟ್ಟಿಸುವಂಥ ಭಾಷಾಂತರ ಕಾರ್ಯವನ್ನು ಮಾಡುವಲ್ಲಿ ‘ಶಬ್ದಗಳು’ ಬಹುತೇಕ ಸಫಲವಾಗಿದೆ.
ಲೇಖಕ ಮೋಹನ ಕುಂಟಾರ್
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.