Subscribe to Updates

    Get the latest creative news from FooBar about art, design and business.

    What's Hot

    ಪಿಲಿಕುಳದಲ್ಲಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಸಮಾರಂಭ

    May 12, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಇವರ ‘ನಾಸು’ ಕಾದಂಬರಿ
    Article

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಇವರ ‘ನಾಸು’ ಕಾದಂಬರಿ

    September 28, 2024No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕನ್ನಡದ ಮುಖ್ಯ ಲೇಖಕಿಯರಲ್ಲೊಬ್ಬರಾದ ಶ್ರೀಮತಿ ಸುನಂದಾ ಬೆಳಗಾಂವಕರ ಇವರ ‘ಕಜ್ಜಾಯ’, ‘ಕೈತುತ್ತು’, ‘ಕೊಡುವುದೇನು ಕೊಂಬುವುದೇನು’, ‘ಕಾಕ ಭುಶುಂಡಿ’ (ಲಲಿತ ಪ್ರಬಂಧಗಳ ಸಂಕಲನ), ‘ಮೃದ್ಗಂಧ’ (ಕಥಾಸಂಕಲನ), ‘ಶಾಲ್ಮಲಿ’ (ಕವನ ಸಂಕಲನ), ‘ನಾಸು’, ‘ಝವಾದಿ’, ‘ಕಾಯಕ ಕೈಲಾಸ’ (ಕಾದಂಬರಿ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಚೊಚ್ಚಲ ಕಾದಂಬರಿಯಾದ ‘ನಾಸು’ ಇವರಿಗೆ ಕನ್ನಡ ಸಾಹಿತ್ಯದಲ್ಲಿ ಭದ್ರ ನೆಲೆಯನ್ನು ಒದಗಿಸಿದೆ.

    ‘ನಾಸು’ ಎಂದರೆ ‘ನಾಯಿ ಸೂಳೆಮಗ’ ಎಂಬ ಬೈಗುಳ ಪದದ ಅಪಭ್ರಂಶವಾಗಿದೆ. ಆಕರ್ಷಕವಾದ ತಲೆಬರಹದ ಬದಲು ಇಂಥ ಶೀರ್ಷಿಕೆಯನ್ನು ಇಡುವುದರ ಮೂಲಕ ಲೇಖಕಿಯು ಹೊಸತನವನ್ನು ಮೆರೆದಿದ್ದಾರೆ. ವಿದ್ವತ್ತಿಗೆ ಹೆಸರಾದ ಮಾಧ್ವ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಅನಂತಾಚಾರ್ಯರು ಬುದ್ಧಿ ಪಳಗಿದ, ಶ್ರದ್ಧೆ ಬೆಳಗಿದ ಶಿಕ್ಷಕರಾಗಿದ್ದು, ಕಾಳಿದಾಸನ ನಾಟಕಗಳು, ಕಾವ್ಯಗಳು, ವೇದಶಾಸ್ತ್ರ ಪುರಾಣಗಳನ್ನು ಅರಗಿಸಿಕೊಂಡವರು. ಜಾಣರನ್ನು ಬೆಳಗಿಸುವ ಗುರುಗಳು. ಆದರೆ ದಡ್ಡರನ್ನು ದಾರಿಗೆ ಹಚ್ಚುವ ತಾಳ್ಮೆ ಇಲ್ಲದವರು. ಅವರ ಮಕ್ಕಳ ಪೈಕಿ ವಿಷ್ಣು ಮತ್ತು ಅರುಂಧತಿಯರು ಮೇಧಾವಿಗಳಾಗಿ ತಂದೆಯ ಪ್ರೀತಿಗೆ ಪಾತ್ರರಾದರೆ, ಹಿರಿಯ ಮಗನಾಗಿ ಹುಟ್ಟಿ, ಓದು ತಲೆಗೆ ಹತ್ತದೆ ಅಪ್ಪನ ಸಿಟ್ಟಿಗೆ ಕಾರಣನಾಗಿ ‘ನಾಯಿ ಸೂಳೆಮಗ’ ಎಂಬ ಬೈಗಳು ತಿನ್ನುತ್ತಾ ತಿರಸ್ಕೃತನಾಗಿ ಬಾಳುವ ನಾನಿ (ನಾರಾಯಣ) ಅವರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ತನ್ನಂಥ ವಿದ್ವಾಂಸನ ಮಗನು ದಡ್ಡನೆಂಬ ವಿಚಾರ ಅವರ ಮನದಲ್ಲಿ ಕೊರೆಯತೊಡಗಿದ್ದರಿಂದ ಅವರು ಮಗನ ಪಾಲಿಗೆ ಕ್ರೂರಿಯಾಗುತ್ತಾರೆ. ಅವರು ತಮ್ಮ ಮಗನ ಬುದ್ಧಿಗೇಡಿತನಕ್ಕೆ ನೊಂದು ಮಾನವೀಯತೆಯನ್ನು ಕಳೆದುಕೊಂಡಿದ್ದಾರೆಯೇ ಹೊರತು ನೀಚರಲ್ಲ. ಕರುಳ ಕುಡಿಯನ್ನು ಅರ್ಥಮಾಡಿಕೊಳ್ಳಲಾರದವರು ಬೇರೆಯವರಿಗೆ ಏನು ವಿದ್ಯೆ ನೀಡಬಹುದು ಎಂಬ ಜಿಜ್ಞಾಸೆಯೊಂದಿಗೆ ತಂದೆ ಮಗನ ನಡುವಿನ ವಿರೋಧದ ವೈಚಾರಿಕ ಮೂಲವನ್ನು ಮನಶಾಸ್ತ್ರೀಯ ನೆಲೆಯಲ್ಲೂ ನೋಡುವ ಅವಕಾಶ ಸೃಷ್ಟಿಯಾಗುತ್ತದೆ.

    ಹರೆಯದ ಕಿಶೋರಾವಸ್ಥೆಯಿಂದ ಯೌವನದತ್ತ ಸಾಗುವ ನಾನಿಯ ಮಾನಸಿಕ ಗೊಂದಲ, ತೊಳಲಾಟಗಳಿಗೂ ಅವನ ಸಾಮಾಜಿಕ ಪರಿಸರಕ್ಕೂ ಸಂಬಂಧವಿದೆ. ವಿಷ್ಣು ಹಳ್ಳಿಯಲ್ಲಿ ಹುಟ್ಟಿ ಬೆಳೆದವನಾದರೂ ಶಿಕ್ಷಣದಿಂದಾಗಿ ಅವನ ಸಂವೇದನೆಯಲ್ಲಿ ಬದಲಾವಣೆಗಳಾಗಿವೆ. ಆದರೆ ನಾನಿಯು ದಡ್ಡನಾಗಿರುವುದರಿಂದ ಅಂಥ ಪರಿವರ್ತನೆ ಆಗಿಲ್ಲ. ಈ ಬದಲಾವಣೆಗಳು ಅವನನ್ನು ಪ್ರತ್ಯೇಕಿಸುತ್ತವೆ. ಕಾದಂಬರಿಯ ಎರಡನೇ ಅಧ್ಯಾಯದಲ್ಲಿ ನಾನಿಯ ಪ್ರತ್ಯೇಕತೆಯ ಸೂಚನೆಗಳಿವೆ. ‘ಪ್ರಾಣಿಗಳೆಂದರೆ ಬಲುಪ್ರೀತಿ. ಸಾಧನಕೇರಿ, ಅತ್ತಿಕೊಳ್ಳ, ಕೆಲಗೇರಿ, ಎತ್ತಿನಗುಡ್ಡ, ಸೋಮೇಶ್ವರ, ನುಗ್ಗಿಕೇರಿ ಸಪ್ತಾಪುರ ಸುತ್ತುತ್ತಿದ್ದ. ಸೂರ್ಯ ಹುಟ್ಟುವುದನ್ನು ನೋಡುತ್ತ, ಚಿತ್ರವಿಚಿತ್ರ ಬಣ್ಣವಾಗಿ ಬದಲಾಗುವ ಆಕಾಶವನ್ನು ಮೂಕವಿಸ್ಮಿತನಾಗಿ ನೋಡುತ್ತ ನಿಂತುಬಿಡುತ್ತಿದ್ದ. ಹೂವು ಅರಳುವುದನ್ನು, ಹಕ್ಕಿ ಗೂಡು ಕಟ್ಟುವುದನ್ನು, ಗೆದ್ದಲು ನೆಲ ತೋಡುವುದನ್ನು ನೋಡುವುದೇ ಅವನಿಗೆ ಆನಂದ.” (ಪುಟ 34) ಆದರೆ ಸೃಷ್ಟಿಯ ಸಮಸ್ತ ವಸ್ತುಗಳಲ್ಲಿ ಚೆಲುವನ್ನು ಕಾಣುವ ಅವನ ವಿಶಾಲ ಹೃದಯವನ್ನು ಅರ್ಥಮಾಡಿಕೊಳ್ಳುವವರು ಇಲ್ಲ. ಅವನ ಜಗತ್ತು ಪ್ರೌಢಜಗತ್ತಿನಿಂದ ಭಿನ್ನವಾಗಿದೆ. ಒಳಿತಿನ ಪಕ್ಷಪಾತಿಗಳಾದ ನಾನಿ, ಗೋವಿಂದ, ವಿರಜಾ, ಅರುಂಧತಿ ಮತ್ತು ಕೆಡುಕಿನ ಗುಂಪಿಗೆ ಸೇರಿದ ವಿಷ್ಣು, ಕಿಟ್ಯಾ, ಶೀನ್ಯಾ, ತುಂಗಾ ಮೊದಲಾದ ಗೆಳೆಯರ ಸ್ವಭಾವಗಳ ವೈರುಧ್ಯವನ್ನು ಕಾದಂಬರಿಯು ಅವರ ಮಾತು, ಉಡುಗೆ, ಮತ್ತು ನಡತೆಗಳ ಮೂಲಕ ಕಡೆದು ನಿಲ್ಲಿಸುತ್ತದೆ. ‘ನಿನ್ನಪ್ಪ ಸೂಳೆ ಇಟ್ಟಾನ’ ಎಂದು ವಿರಜಾಳನ್ನು ಕೆಣಕಿದ ಶೀನ್ಯಾ ಮತ್ತು ಲಕ್ಷ್ಮೀಯ ಸೆರಗು ಹಿಡಿದ ಕಿಟ್ಯಾನನ್ನು ಹೊಡೆದು ಬೀಳಿಸುವ ಮೂಲಕ ನಾಯಕತ್ವದ ಗುಣವನ್ನು ಪ್ರದರ್ಶಿಸುವ ನಾನಿಯು ಲಕ್ಷ್ಮೀಯ ಮನಸ್ಸನ್ನು ಗೆಲ್ಲುತ್ತಾನೆ. ಇಬ್ಬರ ಕುಟುಂಬಗಳ ನಡುವಿನ ವೈಮನಸ್ಸು ಅವರ ಸ್ನೇಹಕ್ಕೆ ಅಡ್ಡಿಯಾಗುವುದಿಲ್ಲ. ಹೊಸ ಹರೆಯದ ಮಧುರಭಾವನೆಗಳ ಸೆಳೆತದಲ್ಲಿ ಕೊಚ್ಚಿಹೋಗುವ ನಾನಿಯಂತೂ ಸುಮ್ಮನಿರಲಾರದೆ ಆಕೆಯ ಬಳಿ ಪ್ರೀತಿಯನ್ನು ತೋಡಿಕೊಳ್ಳುತ್ತಾನೆ. ಆದರೆ ಆತನು ಅಕ್ಷರಸ್ಥನಲ್ಲದಿರುವುದರಿಂದ ಆಕೆಯನ್ನು ಮದುವೆಯಾಗಲಾರದ ಪರಿಸ್ಥಿತಿಯಿದೆ. ಹದಿಹರೆಯದ ಕುದಿಹೃದಯವು ನಾನಿಯಲ್ಲಿ ಉಂಟುಮಾಡುವ ತಳಮಳ, ಮೂಡಿಸುವ ಕನಸುಗಳನ್ನು ಲೇಖಕಿಯು ನವಿರಾಗಿ ಚಿತ್ರಿಸಿದ್ದಾರೆ. ಲಕ್ಷ್ಮೀಯ ತುಟಿಗೆ ಅನಿರೀಕ್ಷಿತವಾಗಿ ಮುತ್ತಿಡುವ ನಾನಿಯ ಕ್ರಿಯೆಯು ಅನಿಯಂತ್ರಿತ ನೈಸರ್ಗಿಕ ಪ್ರವೃತ್ತಿಯಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಆಕೆಯನ್ನು ತನ್ನ ತಮ್ಮನಾದ ವಿಷ್ಣುವಿಗೆ ಕೊಟ್ಟು ಮದುವೆ ಮಾಡಿಸುವ ವಿಚಾರವನ್ನು ತಿಳಿದು ಆತನು ಅನುಭವಿಸುವ ದುಃಖವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸುತ್ತದೆ. ವಿಷ್ಣುವೂ ಆಕೆಯನ್ನು ಬಯಸಿದವನೇ. ಆದರೆ ನಾನಿಯ ಕೃತಿ ಅವನಿಗೆ ಸಾಧ್ಯವಾಗಿರುವುದಿಲ್ಲ. ಅವನಿಗೆ ತಂದೆಯ ಮೂಲಕ ಶಿಕ್ಷೆಯಾಗಬೇಕೆಂದು ವಿಷ್ಣು ಹಾತೊರೆಯುವುದರ ಹಿಂದೆ ಆತನ ಅಸೂಯೆಯು ಕೆಲಸ ಮಾಡಿರುತ್ತದೆ. ಆತನು ಯಶಸ್ವೀ ಮನುಷ್ಯ. ಯಶಸ್ಸಿನ ವಾಸನೆಯನ್ನು ಹಿಡಿದ ಅವನಿಗೆ ಯಾವ ಮಾರ್ಗವೂ ಅನೈತಿಕವಲ್ಲ. ತನ್ನೊಂದಿಗೆ ದೈಹಿಕ ಸಂಪರ್ಕ ಮಾಡಿದ ತುಂಗಾಳನ್ನು ಬಿಟ್ಟು, ಅಣ್ಣನ ಪ್ರೇಯಸಿಯಾದ ಲಕ್ಷ್ಮೀಯನ್ನು ಮೋಹಿಸುವುದು, ಅವಳ ಜೊತೆಗೆ ನಿಶ್ಚಿತಾರ್ಥವನ್ನು ಮುಗಿಸಿ, ವಿದೇಶದಲ್ಲಿ ಇನ್ನೊಬ್ಬಳನ್ನು ಕಟ್ಟಿಕೊಳ್ಳುವ ಕ್ರಿಯೆಗಳು ಇದಕ್ಕೆ ಉದಾಹರಣೆಗಳಾಗಿವೆ. ಎಂಥ ಸನ್ನಿವೇಶದಿಂದಲೂ ಪಾರಾಗಬಲ್ಲ ಚತುರನಾಗಿದ್ದಾನೆ. ಕುತಂತ್ರಿ ವಿಷ್ಣುವಿನದ್ದು ಸ್ವೇಚ್ಛೆಯ ಹಾದಿ. ಯಾರ ವಿರೋಧವನ್ನೂ ಲೆಕ್ಕಿಸದೆ ಮುನ್ನುಗ್ಗುತ್ತಾನೆ. ವಿಷ್ಣುವಿನ ಕೆಟ್ಟ ವ್ಯವಹಾರಗಳನ್ನು ಹೇಳುವೆನೆಂದು ತಂಗಿ ಅರುಂಧತಿ ಪ್ರತ್ಯಸ್ತ್ರವನ್ನು ಪ್ರಯೋಗಿಸಿದಾಗ, ತಂದೆಯನ್ನು ಕೆದಕಿ, ರೊಚ್ಚಿಗೆಬ್ಬಿಸಿ ನಾನಿಗೆ ಹೊಡೆಯಿಸುವ ಅವನ ಹಂಚಿಕೆಗಳು ನಾಶವಾಗುತ್ತವೆ. ನಾನಿಯ ಪರವಾಗಿ ಅಕ್ಕವ್ವ, ಪದ್ದಕ್ಕ ಮತ್ತು ಅರುಂಧತಿಯ ರಕ್ಷೆಯಿದೆ. ವಿಷ್ಣು ತನ್ನ ಓದು ಬುದ್ಧಿಮತ್ತೆಗಳಿಂದಾಗಿ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಮತ್ತು ಕಾಲೇಜು ವಿದ್ಯಾಭ್ಯಾಸದ ಸಂದರ್ಭದಲ್ಲಿ ಇಡೀ ವಿಶ್ವವಿದ್ಯಾಲಯಕ್ಕೆ ಮೊದಲಿಗನಾಗಿ ತೇರ್ಗಡೆಯನ್ನು ಹೊಂದಿ, ವೈದ್ಯಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಪಡೆದು, ಅಪ್ಪನ ಪ್ರೀತಿಯನ್ನು ಸಂಪಾದಿದರೂ ಸರಳ ಸ್ವಭಾವದ, ಮುಗ್ಧ ನಾನಿಯ ಮುಂದೆ ತನ್ನ ಯುಕ್ತಿ, ಮೋಸ, ದ್ವೇಷ ಸಾಧನೆ, ನಿರಾಶಾವಾದ ಮತ್ತು ಇತರ ಚಿಲ್ಲರೆತನಗಳಿಂದಾಗಿ ಸಣ್ಣವನೆನಿಸಿಕೊಳ್ಳುತ್ತಾನೆ. ಅಕ್ಕವ್ವನ ಗೆಳತಿ ಅಂಬವ್ವ ನಾನಿಯ ರಕ್ತ ಸಂಬಂಧಿಯಲ್ಲದಿದ್ದರೂ ಆತನ ಹೆಸರಿನಲ್ಲಿ ತನ್ನ ಮನೆಯನ್ನು ಬರೆದಿಟ್ಟು, ಅವನ ಭವಿಷ್ಯದ ಸಂಸಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ತನ್ನ ಆಭರಣ, ಮನೆದೇವರು ಮತ್ತು ವಸ್ತ್ರಗಳನ್ನು ಆತನಿಗೆ ಕೊಟ್ಟು, ಹರಸಿ ಕಾಶಿಗೆ ತೆರಳುತ್ತಾಳೆ. ನಾನಿಯ ಒಳ್ಳೆಯತನಕ್ಕೆ ದೊರಕಿದ ಆ ಕೊಡುಗೆಯ ಮೇಲೆ ವಿಷ್ಣುವಿನ ಕಣ್ಣು ಬೀಳುತ್ತದೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ಅಗತ್ಯವಿದೆಯೆಂದು ಹೇಳಿ ನಾನಿಯ ಆಭರಣಗಳನ್ನು ಅಡವಿಟ್ಟು ಹಣವನ್ನು ಲಪಟಾಯಿಸಲು ಹಂಚಿಕೆ ಹಾಕುತ್ತಾನೆ. ನಾನಿಯ ಹೆಸರಿನಲ್ಲಿರುವ ಮನೆಯನ್ನು ಒತ್ತೆಯಿಟ್ಟು ಕಾಸು ಕೊಡಿ ಎನ್ನಲೂ ಹಿಂಜರಿಯುವುದಿಲ್ಲ. ಆರ್ಥಿಕ ಮುಗ್ಗಟ್ಟನ್ನು ಅನುಭವಿಸುತ್ತಿದ್ದ ಅನಂತಾಚಾರ್ಯರು ಆಭರಣಗಳನ್ನು ಐದುಸಾವಿರ ರೂಪಾಯಿಗಳಿಗಾಗಿ ಲಕ್ಷ್ಮೀಯ ತಂದೆ ಜನಾರ್ದನಾಚಾರ್ಯರಲ್ಲಿ ಅಡವಿಡುತ್ತಾರೆ. ಜನಾರ್ದನರಾಯರ ಕೈಯಲ್ಲಿ ಅಷ್ಟು ಹಣವಿಲ್ಲದಿರುವುದರಿಂದ ಲಕ್ಷ್ಮೀಯನ್ನು ವಿಷ್ಣುವಿಗೂ, ಅರುಂಧತಿಯನ್ನು ಮದ್ಧುವಿಗೂ ವರದಕ್ಷಿಣೆಯಿಲ್ಲದೆ ಮದುವೆ ಮಾಡಿಕೊಡಲು ತೀರ್ಮಾನಿಸುತ್ತಾರೆ. ನಾನಿಯನ್ನು ಪ್ರೀತಿಸುತ್ತಿದ್ದ ಲಕ್ಷ್ಮೀಯ ತಲ್ಲಣಿಸಿದರೆ, ಹಯಗ್ರೀವಾಚಾರ್ಯರ ಮಗಳು ವಿರಜಾಳನ್ನು ಬಯಸುತ್ತಿದ್ದ ಮದ್ಧು, ಗೋವಿಂದನನ್ನು ಬಯಸುತ್ತಿದ್ದ ಅರುಂಧತಿ ತಮ್ಮ ಹೆತ್ತವರ ಏಕಪಕ್ಷೀಯ ನಿರ್ಧಾರದ ವಿರುದ್ಧ ಸಿಡಿದೇಳುತ್ತಾರೆ. ಪ್ರೇಮ ಮದುವೆ ಮುಂತಾದ ಭಾವನಾತ್ಮಕ ವಿಚಾರಗಳ ನಡುವೆ ಆರ್ಥಿಕ ಮತ್ತು ವ್ಯಾವಹಾರಿಕತೆಗಳು ಅಡ್ಡಬಂದು ಸಂಬಂಧಗಳನ್ನು ಶಿಥಿಲಗೊಳಿಸುವ, ಮನೆ ಮನಗಳನ್ನು ಮುರಿಯುವ ಬಗೆಯು ಇಲ್ಲಿ ವ್ಯಕ್ತವಾಗುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಕಾಲ ಬದಲಾಗುತ್ತಿರುವ ಸೂಚನೆ ಇದ್ದರೂ ನಿರ್ಣಾಯಕ ಘಟ್ಟದಲ್ಲಿ ಎಲ್ಲರೂ ಪರಿಸ್ಥಿತಿಗೆ ತಲೆಬಾಗುತ್ತಾರೆ. ತನ್ನ ಪ್ರಾಣವೆನಿಸಿದ ಲಕ್ಷ್ಮೀಯನ್ನು ಸ್ವಂತ ತಮ್ಮನಿಗೆ ಧಾರೆ ಎರೆದು ಕೊಡಲು ಹೊರಟಾಗ ನಾನಿಯ ಪರಿಸ್ಥಿತಿ ಹೀಗಿದೆ. “ಆತನ ಜೀವನದಲ್ಲಿ ಮೊದಲ ಸಾರಿ ದ್ವೇಷ ಮೂಡಿತು. ಉಗ್ರವಾದ ದ್ವೇಷ. ಆನೆಯಂತೆ ಘೀಳಿಡಬೇಕು. ಹುಲಿಯಂತೆ ಗರ್ಜಿಸಬೇಕು. ಹಾವಿನಂತೆ ಕಚ್ಚಬೇಕು. ಹುಚ್ಚುನಾಯಿಯಂತೆ ಕಡಿಯಬೇಕು. ಎದ್ದು ಕೂತ. ಘೀಳಿಟ್ಟ. ಗರ್ಜಿಸಿದ. ತನ್ನ ಕೈಗಳೆರಡನ್ನೂ ಕಡಿದುಕೊಂಡು ‘ನಾಯಿ ಸೂಳಿಮಗನ’, ‘ನಾಯಿ ಸೂಳಿಮಗನ’ ಎಂದು ಚೀರಿ ಒದರಿದ. ನಾಯಿಯಂತೆ ಬೊಗಳಿ ನಾಯಿಯಂತೆ ಅಳಹತ್ತಿದ” (ಪುಟ 223) ನಾನಿಯ ವಿರಹಯಾತನೆಯನ್ನು ಮಾತ್ರ ಬಣ್ಣಿಸದೆ ಅದುವರೆಗೂ ಮನುಷ್ಯನಾಗಿದ್ದವನ ಒಳಗಿನಿಂದ ಮೃಗೀಯತೆ ಎದ್ದು ಬರುವ ವಿವರಗಳು ಚಿಕ್ಕಪುಟ್ಟ ವಾಕ್ಯಗಳ ಮೂಲಕ ಸ್ಪಷ್ಟವಾದ, ಮೂರ್ತ ವಿವರಗಳಿಂದ ಕೂಡಿದ, ಭಾವತೀಕ್ಷಣತೆಯಿಂದ ಶಕ್ತಿಯನ್ನು ಪಡೆಯುವ ಶೈಲಿ, ವೇಗವಾಗಿ ಸಾಗುವ ಕ್ರಿಯೆ, ಬಾಣವು ಗುರಿಯನ್ನು ಮುಟ್ಟುವಂತೆ ಪರಿಣಾಮವನ್ನು ಸಾಧಿಸುವ ಕಲೆಗಾರಿಕೆಯನ್ನು ಹೊಂದಿದೆ. ತನ್ನ ಕುಟುಂಬದ ಬೇರೆ ಯಾರಲ್ಲೂ ಇಲ್ಲದ ಸೂಕ್ಷ್ಮಸಂವೇದನೆಯನ್ನು ಹೊಂದಿದ್ದಾನೆ. ಇದುವೇ ಬೀದಿನಾಯಿ ಗೆಣ್ಯಾನೊಡನೆ ಪ್ರೀತಿಗೂ ಕಾರಣವಾಗಿರುತ್ತದೆ. ಲಕ್ಷ್ಮೀಯನ್ನು ಕಳೆದುಕೊಳ್ಳುವ ಆತಂಕದಿಂದ ಹುಟ್ಟಿದ ಕೋಪದಿಂದಾಗಿ ಆತನು ಗೆಣ್ಯಾನನ್ನು ಎಸೆದು ಕೊಲ್ಲುತ್ತಾನೆ. ಆತನು ತನ್ನೊಳಗಿರುವ ನಾಯಿಯ ಗುಣಗಳನ್ನು ಕಳೆದುಕೊಳ್ಳುವುದನ್ನು ವ್ಯಕ್ತಪಡಿಸಲು ಗೆಣ್ಯಾನ ಸಾವು ಅನಿವಾರ್ಯವಾಗುತ್ತದೆ. ನಾನಿಗೆ ಅಥವಾ ಅರುಂಧತಿಗೆ ಮನೆಯನ್ನು ರಣರಂಗ ಮಾಡಿ, ವಿಷ್ಣುವಿಗೆ ಹೊಡೆದು, ಆತನಿಂದ ಕನ್ಯತ್ವವನ್ನು ಕಳೆದುಕೊಂಡಿದ್ದ ತುಂಗಾಳನ್ನು ಅವನ ಕೊರಳಿಗೆ ಕಟ್ಟಿದ್ದರೆ ಎಲ್ಲವೂ ಸರಿಯಾಗುತ್ತಿರಲಿಲ್ಲವೇ ಎಂಬ ಪ್ರಶ್ನೆಯು ಅಪ್ರಸ್ತುತವೆಂಬಂತೆ ಒಳಿತಿನ ಶಕ್ತಿಗಳು ಅಸಹಾಯಕವಾಗಿ ಕೆಡುಕು ವಿಜೃಂಭಿಸುತ್ತದೆ. ಒಳ್ಳೆಯವರ ಕಾಲಿಗೆ ದೈವ ಮುಳ್ಳು ಹಾಕಿದರೆ ಕೆಟ್ಟವರ ಹಾದಿಯಲ್ಲಿ ಹೂವು ಹಾಸುತ್ತದೆ ಎಂಬ ವಿಷಾದವನ್ನು ಧ್ವನಿಯು ಕೇಳಿಸುತ್ತದೆ.

    ಕೊನೆಗೆ ನಾನಿಯು ಅಪ್ಪನ ಎದುರು ಕೈಯೆತ್ತಿ ಊರು ಬಿಟ್ಟು ಹೋಗಿ, ತನ್ನ ಕುಲಗೋತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನುಗ್ಗಿಕೇರಿ ಗೌಡರ ಮನೆಯ ಆಳಾಗಿ ದುಡಿದು ಹೊಟ್ಟೆಯನ್ನು ಹೊರೆದುಕೊಳ್ಳುತ್ತಾನೆ. ಇದರಿಂದ ತಮ್ಮ ಅಂತಸ್ತು ಅಭಿಮಾನಗಳಿಗೆ ಭಂಗವಾಯಿತೆಂದು ಅನಂತಾಚಾರ್ಯರು ರೊಚ್ಚಿಗೆದ್ದರೆ “ಗೌಡರ ಹಸಿದವಗ ಊಟ ಕೊಟ್ಟೀರಿ. ಅನ್ನದಾನಕ್ಕ ಜಾತಿ ಇಲ್ಲರಿ. ನಾ ದುಡದು ತಿಂತೀನಿ. ಹನಮಪ್ಪನ ಪೂಜಿ ಮಾಡೋ ಮುಂದ ಆಕಿ (ಅಂಬವ್ವಜ್ಜಿ) ದೇವರ ಪೂಜೀನೂ ಮನಸ್ಸಿನ್ಯಾಗ ಮಾಡ್ತೀನಿ. ದೇವರಿದ್ರ ಅವಂಗ ಮುಟ್ಟೇ ಮುಟ್ತದ” (ಪುಟ 242) ಎಂಬ ಮಾತುಗಳು ನಾನಿಯ ಪ್ರಬುದ್ಧತೆಯನ್ನು ಸಾರುತ್ತದೆ. ಆತ್ಮಶುದ್ಧಿಯಿದ್ದರೆ ಆಚಾರ. ಚಿತ್ತಶುದ್ಧಿಯಿದ್ದರೆ ಪೂಜೆ ಎಂಬ ಆಶಯವು ಇಲ್ಲಿದೆ. ವಿಷ್ಣುವು ಮನೆ ಮನಗಳನ್ನು ಒಡೆದರೆ ನಾನಿಯು ಅವುಗಳನ್ನು ಒಂದುಗೂಡಿಸುತ್ತಾನೆ. ವಿಷ್ಣುವಿನ ಪರವಾಗಿ ಕ್ಷಮೆಯನ್ನು ಕೇಳಿ ತುಂಗಾಳನ್ನು ಆಕೆಯ ಪ್ರಿಯಕರನಾದ ಶೀನ್ಯಾನೊಡನೆ ಸೇರಿಸುತ್ತಾನೆ. ವಿಷ್ಣುವು ವಿದೇಶಿ ಹೆಣ್ಣನ್ನು ಮದುವೆಯದಾಗ ಆತನಿಗೆ ಲಕ್ಷ್ಮೀಯನ್ನು ಕೊಡಬಯಸಿದ್ದ ಜನಾರ್ದನರಾಯರು ಸಿಟ್ಟುಗೊಂಡು ಅರುಂಧತಿಯೊಡನೆ ಮದ್ಧುವಿನ ವಿವಾಹವನ್ನು ರದ್ದುಗೊಳಿಸುತ್ತಾರೆ. ಮದ್ಧು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಪ್ರೇಯಸಿ ವಿರಜಾಳನ್ನು ಮದುವೆಯಾಗುತ್ತಾನೆ. ಇದರಿಂದ ಎರಡೂ ಕುಟುಂಬಗಳ ಯೋಜನೆಗಳು ಮುರಿದು ಬಿದ್ದು ಗೊಂದಲಪುರವೇ ನಿರ್ಮಾಣಗೊಳ್ಳುತ್ತದೆ. ಅನಂತಾಚಾರ್ಯರು ಬೇರೆ ಕಡೆ ವರರನ್ನು ಹುಡುಕಾಡಿದರೆ ನಾನಿಯ ದೈನೇಸಿ ಬಾಳು, ವಿಷ್ಣುವಿನ ಲಂಪಟತನದ ಬಗ್ಗೆ ಪ್ರಶ್ನೆಗಳು ಬರುವುದರಿಂದ ಸಂಬಂಧಗಳು ಕೈಗೂಡುವುದಿಲ್ಲ. ಮುದ್ದಿನ ಮಗನಾದ ವಿಷ್ಣುವಿನ ಅವಿವೇಕದಿಂದಾಗಿ ಮಾನಸಿಕ ಒತ್ತಡಕ್ಕೆ ಬಲಿಯಾದ ವಿಪರೀತ ಹಯಗ್ರೀವಾಚಾರ್ಯರು ತನ್ನ ತಂಗಿಗಾಗಿ ಹಯಗ್ರೀವಾಚಾರ್ಯರ ಮಗ ಗೋವಿಂದನ ಪ್ರಸ್ತಾಪವನ್ನು ತಂದ ನಾನಿಗೆ ಮಾತನಾಡಲು ಅವಕಾಶವನ್ನು ಕೊಡದೆ ಒದ್ದು ಓಡಿಸುತ್ತಾರೆ. ಚಂದ್ರಾಳ ಮನೆಗೆ ಹೋಗುತ್ತಿದ್ದ ದಿನಗಳಲ್ಲಿ ಸುಬ್ಬವ್ವ ಅನುಭವಿಸುತ್ತಿದ್ದ ಸಂಕಟವನ್ನು ಅರಿತು ಆಚಾರ್ಯರನ್ನು ತಡೆದಾಗ ಹುಟ್ಟಿದ ವೈಮನಸ್ಯವನ್ನು ಅವರ ಅಂತಿಮ ದಿನಗಳಲ್ಲಿ ಸೇವೆ ಮಾಡುವ ಮೂಲಕ ನಿವಾರಿಸಿದ ನಾನಿಯ ಔದಾರ್ಯಕ್ಕೆ ಮನಸೋತ ಸುಬ್ಬವ್ವನು ತನ್ನ ಮಗನಾದ ಗೋವಿಂದನಿಗೆ ಅರುಂಧತಿಯನ್ನು ತರಬೇಕೆಂದು ಹೇಳಿದಾಗ ಮಗನ ಅಂತಃಕರಣವನ್ನು ಅರಿತ ಅನಂತಾಚಾರ್ಯರಿಗೆ ಪಶ್ಚಾತ್ತಾಪವಾಗುತ್ತದೆ. ತಾವು ಮಾಡಿದ ತಪ್ಪುಗಳ ನೆನಪನ್ನು ಹೊತ್ತುಕೊಂಡು ಅಪರಿಚಿತ ಜಾಗಗಳಲ್ಲಿ ನಾನಿಯನ್ನು ಅರಸುತ್ತಾ ಅಲೆದಾಡಿದರೂ ಅವರ ಹುಡುಕಾಟವು ಸೋಲು ಮತ್ತು ಪಶ್ಚಾತ್ತಾಪದಲ್ಲಿ ಕೊನೆಗೊಳ್ಳುತ್ತದೆ. ನಾನಿಯು ಕಾಶಿಗೆ ಹೋಗಿ ಅಂಬವ್ವಳನ್ನು ಕೂಡಿಕೊಳ್ಳುವನೇ? ಆಕೆಯನ್ನು ಮನೆಗೆ ಕರೆದುಕೊಂಡು ಬಂದು ಅಜ್ಜಿ, ತಂದೆ, ತಾಯಿ, ತಂಗಿ, ಗೆಳೆಯ, ಗೆಳತಿಯರನ್ನು ಸಂತಸಪಡಿಸುವನೇ? ಲಕ್ಷ್ಮೀಯನ್ನು ಮದುವೆಯಾಗುವನೇ? ಎಂಬ ಪ್ರಶ್ನೆಗಳನ್ನು ಹಾಗೆಯೇ ಉಳಿಸಿಕೊಂಡಿರುವುದರಿಂದ ಕಾದಂಬರಿಯು ಹೃದಯಸ್ಪರ್ಶಿಯೆನಿಸಿಕೊಳ್ಳುತ್ತದೆ.

    ಸುನಂದಾ ಬೆಳಗಾಂವಕರರು ಕಾದಂಬರಿಯನ್ನು ಬರೆಯತೊಡಗಿದ ವೇಳೆಗೆ ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದವು ತನ್ನ ಪ್ರಭಾವವನ್ನು ಬೀರತೊಡಗಿತ್ತು. ಹೆಣ್ಣಿನ ಅಂತರಂಗದ ಬಗೆಯೊಳಗನು ತೆರೆದು ನೋಡುವ ಕ್ರಮ ಆರಂಭಗೊಂಡಿತ್ತು. ಆದರೆ ಅವರು ಯಾವುದೇ ಸಿದ್ಧಾಂತಕ್ಕೆ ಕಟ್ಟುಬೀಳದೆ ಸಾಮಾಜಿಕ ಬದುಕಿನ ಒಳಹೊರಗುಗಳ ಮುಖಾಮುಖಿಯನ್ನು ತಮ್ಮದೇ ರೀತಿಯಲ್ಲಿ ಆಭಿವ್ಯಕ್ತಿಸಿದ್ದಾರೆ. ಹೆಣ್ಣಿನ ಪಾತ್ರದ ಬದಲು ನಾನಿಯನ್ನು ಕೇಂದ್ರವಾಗಿಟ್ಟುಕೊಂಡು ಬದುಕನ್ನು ನೋಡಿದ್ದಾರೆ. ಅಪ್ಪ ಮತ್ತು ತಮ್ಮ ತನಗೆ ಎರಡು ಬಗೆದರೂ ಸಹಜ ಔದಾರ್ಯದಿಂದ ಕುಟುಂಬವನ್ನು ಕಾಪಾಡುವ ಸಾಮರ್ಥ್ಯವನ್ನು ಹೊಂದಿದ ನಾನಿಯು ಸಾರ್ಥಕ ಬದುಕಿನ ಸಂಕೇತವಾಗಿದ್ದಾನೆ. ಮನುಷ್ಯರ ತೃಪ್ತಿ ಅತೃತಪ್ತಿಗಳು, ಆಕ್ರಮಣಕಾರಿ ಪ್ರವೃತ್ತಿಗಳು, ಅಲ್ಪತನ, ಜಿದ್ದು, ಸ್ವಾರ್ಥ, ತಪ್ಪು ಗ್ರಹಿಕೆ, ದುಡುಕು, ಟೊಳ್ಳುತನ ಮತ್ತು ನಿರಪರಾಧಿಯ ಯಾತನೆಗಳ ನಡುವೆ ಒಳ್ಳೆಯತನವನ್ನು ಉಳಿಸಿಕೊಂಡ ಅನಕ್ಷರಸ್ಥನೊಬ್ಬನ ಹಿರಿಮೆಯು ಮುಖ್ಯವಾಗುತ್ತದೆ. ನಿಜವಾದ ಪ್ರೇಮ ಅರಳುವ ಕ್ರಮವನ್ನು, ಬದುಕಿನ ಚೆಲುವಿನ ಅರ್ಥವನ್ನು ನಿರೂಪಿಸುವ ಕಾದಂಬರಿಯು ಅಲ್ಲಿನ ಸಮಸ್ಯೆಗಳನ್ನು ವೈಯಕ್ತಿಕ ಮತ್ತು ಕೌಟುಂಬಿಕ ನೆಲೆಗಳಲ್ಲಿ ನೋಡುತ್ತದೆ. ಸಂತೋಷಕ್ಕಿಂತಲೂ ಹೆಚ್ಚಾಗಿ ಕೇಳಿಸುವ ದುಃಖ ಮತ್ತು ವಿಷಾದದ ದನಿಯ ಹಿನ್ನೆಲೆಯಲ್ಲಿ ನಾನಿಯ ವ್ಯಕ್ತಿತ್ವದ ಪೂರ್ಣ ದರ್ಶನವಾಗುತ್ತದೆ. ಜೀವನಮೌಲ್ಯಗಳನ್ನು ಪಾಲಿಸುವವನು ವಿದ್ಯಾವಂತನೆನಿಕೊಳ್ಳುತ್ತಾನೆಯೇ ಹೊರತು ಕೇವಲ ಅಕ್ಷರಾಭ್ಯಾಸವನ್ನು ಪಡೆದುಕೊಂಡವನಲ್ಲ. ಕೆಲಸ ಮುಗಿದ ಬಳಿಕ ಒದ್ದು ಹೋಗುವ ವಿಷ್ಣುವಿನಂಥ ವ್ಯವಹಾರಸ್ಥರ ಬದಲು ಸಹಜ ಬದುಕನ್ನು ಸಾಗಿಸುವ ಮೂಲಕ ಸಂಸ್ಕೃತಿಯ ಪ್ರತೀಕವೆನಿಸುವ ನಾನಿಯಂಥವರ ಅಗತ್ಯವಿದೆ. ಈ ಕಾದಂಬರಿಯು ಸಾಂಪ್ರದಾಯಿಕ ಬ್ರಾಹ್ಮಣ ಸಮಾಜವನ್ನು ಚಿತ್ರಿಸುತ್ತಿದ್ದರೂ ಆಧುನಿಕ ಬದುಕಿನ ತಲ್ಲಣಗಳನ್ನು ಸೂಕ್ಷ್ಮವಾಗಿ ವಿವರಿಸುತ್ತದೆ. ತಂದೆ ಮಕ್ಕಳ ಸಂಬಂಧ ಹಲವು ಕಾರಣಗಳಿಂದ ಶಿಥಿಲವಾಗಿ ದೂರವಾಗುವ ಸಂದರ್ಭಗಳು ಇಲ್ಲಿವೆ. ಹಳಹಳಿಕೆ, ಕೊರಗುಗಳು ಇದ್ದರೂ ಬದಲಾದ ಸಂದರ್ಭವನ್ನು ಅರ್ಥಮಾಡಿಕೊಂಡು, ಪರಿಸ್ಥಿತಿಯೊಂದಿಗೆ ಹೊಂದಿಕೊಂಡು, ಮಾನವೀಯ ಸಂಬಂಧಗಳ ಮಹತ್ವವನ್ನು ಅರಿತುಕೊಂಡು, ನೆಮ್ಮದಿಯಿಂದ ಬದುಕುವ ಮನೋಭಾವವು ಪ್ರಧಾನವಾಗುತ್ತದೆ. ಆಧುನಿಕ ಬದುಕಿನ ವಾಸ್ತವಗಳನ್ನು ತಿಳಿದು ಬದುಕುವುದು ನಮ್ಮ ಕರ್ತವ್ಯವಾಗಬೇಕು. ಹಿರಿಯರಿಗೆ ಕಿರಿಯರ ಮೇಲಿನ ಅಪನಂಬಿಕೆ, ಕಿರಿಯರಿಗೆ ಹಿರಿಯರ ಮೇಲಿರುವ ಅಸಮಾಧಾನ- ತಿರಸ್ಕಾರ, ತಲೆಮಾರುಗಳ ಅಂತರ, ಪೀಳಿಗೆಗಳ ನಡುವಿನ ಸಂಘರ್ಷಗಳಲ್ಲಿ ಹಿರಿಯರು ಕಿರಿಯರ ಚಿಂತನೆಗಳನ್ನು ಗ್ರಹಿಸಲಾರದೆ ಜಡವಾಗುತ್ತಿದ್ದಾರೆ. ಮನುಷ್ಯರ ನಡುವಿನ ಗೋಡೆಗಳು, ಮನಸ್ಸುಗಳ ನಡುವಿನ ಕಂದರಗಳನ್ನು ಕೂಡಿಸುವ ಸೇತುವೆಯನ್ನು ಕಟ್ಟಬೇಕಲ್ಲದೆ ಸಂಬಂಧಗಳನ್ನು ಕಡಿದುಕೊಳ್ಳಬಾರದು. ಮಕ್ಕಳಿಗೂ ಅವರದ್ದೇ ಆದ ನೆಲೆ ಬೆಲೆಗಳಿವೆ ಎಂದು ಹಿರಿಯರು ಮನಗಾಣಬೇಕಾದ ಅಗತ್ಯವನ್ನು ಧ್ವನಿಸುವುದರಲ್ಲಿ ಕಾದಂಬರಿಯು ಯಶಸ್ವಿಯಾಗಿದೆ.

    ‘ನಾಸು’ ಕಾದಂಬರಿಯು ಧಾರವಾಡ, ವಿಜಯಪುರ, ಬೆಳಗಾವಿ ಜಿಲ್ಲೆಗಳ ಸಂಪ್ರದಾಯಸ್ಥ ಮಾಧ್ವ ಬ್ರಾಹ್ಮಣ ಕುಟುಂಬಗಳ ಜೀವನ ವಿಧಾನ, ಆಚರಣೆಗಳು ಮತ್ತು ನಂಬಿಕೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಒಂದು ಕಾಲಘಟ್ಟದ ಧಾರವಾಡ ಭಾಗದ ಸಾಮಾಜಿಕ ಸಾಂಸ್ಕೃತಿಕ ಚಿತ್ರಣವನ್ನು ಜೀವಂತವಾಗಿ ಕಟ್ಟಿಕೊಡುತ್ತದೆ. ಧಾರವಾಡದ ದೇಸಿ ಶೈಲಿಯ ಆಡುಭಾಷೆಯು ಕಾದಂಬರಿಯ ಸೊಗಸನ್ನು ಹೆಚ್ಚಿಸಿದೆ. ಕಾದಂಬರಿಯು ಮೊದಲಿನಿಂದ ಕೊನೆಯವರೆಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸುನಂದಾ ಬೆಳಗಾಂವಕರರಿಗೆ ಅಪಾರ ಹೆಸರನ್ನು ತಂದುಕೊಟ್ಟ ‘ನಾಸು’ ಕನ್ನಡಕ್ಕೆ ಸಂದ ಉತ್ತಮ ಕೊಡುಗೆಯಾಗಿದೆ.

    ಡಾ. ಸುಭಾಷ್ ಪಟ್ಟಾಜೆ :

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.

    ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್‌ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Article‘ಕಾವ್ಯ ಸಂಸ್ಕೃತಿ ಯಾನ’ ತೊಗರಿ ನಾಡಿನಲ್ಲಿ ಜನರೆಡೆಗೆ ಕಾವ್ಯ ತೃತೀಯ ಕವಿಗೋಷ್ಠಿ | ಸೆಪ್ಟೆಂಬರ್ 29
    Next Article ಬೆಂಗಳೂರಿನಲ್ಲಿ ‘ಬೀದಿ ನಾಟಕ ಸ್ಪರ್ಧೆ 2024’ | ಅಕ್ಟೋಬರ್ 5
    roovari

    Comments are closed.

    Related Posts

    ಪಿಲಿಕುಳದಲ್ಲಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಸಮಾರಂಭ

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025

    ‘ಬಾಲ ಸಾಹಿತ್ಯ ಚಿಗುರು ಪುರಸ್ಕಾರ’ಕ್ಕಾಗಿ ‘ನಕ್ಷತ್ರ ಪಟಲ’ ಕೃತಿ ಆಯ್ಕೆ

    May 12, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿ ಪ್ರಧಾನ

    May 12, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.