Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ‘ನವಜೀವನ’ದ ಸುತ್ತ ಮುತ್ತ
    Article

    ಪುಸ್ತಕ ವಿಮರ್ಶೆ | ‘ನವಜೀವನ’ದ ಸುತ್ತ ಮುತ್ತ

    May 17, 2024No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಇತ್ತೀಚಿನ ಕಾವ್ಯದಲ್ಲಿ ಕಂಡುಬರುತ್ತಿರುವ ಆತ್ಮ ಮರುಕ, ಅನಾಥ ಪ್ರಜ್ಞೆ ಮತ್ತು ಅಂತರ್ಮುಖಿ ಭಾವಗಳನ್ನು ಕಡೆಗಣಿಸಿ, ಕವಿತೆಯ ಬಂಧವನ್ನು ಆದಷ್ಟು ಬಿಗಿಗೊಳಿಸಿ, ಲಯ ಗತಿ ಪ್ರಾಸಗಳನ್ನು ಉಳಿಸಿ, ಹಲವು ಬಗೆಯ ರೂಪಕ-ಶ್ಲೇಷೆಗಳನ್ನು ಬಳಸಿ ಬರೆಯುತ್ತಿರುವ ಮುದ್ದುಕಂದ (ಗೋಪಾಲಕೃಷ್ಣ ಭಟ್ ಶೇಂತಾರು ಬಯಲು) ತಮ್ಮ ಕಾವ್ಯದ ನಿರೂಪಣೆ ಮತ್ತು ಪರಿಣಾಮಗಳ ಮೂಲಕ ಭಿನ್ನರೆನಿಸಿಕೊಂಡಿದ್ದಾರೆ.

    ‘ನವಜೀವನ’ ಸಂಕಲನದ ಮೂಲಕ ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿದ ಕವಿಯು ಛಂದಸ್ಸಿನ ಲೀಲಾಜಾಲ ಬಳಕೆಗಳ ಮೂಲಕ ವಿವಿಧ ಭಾವಾನುಭಾವಗಳನ್ನು ಅಭಿವ್ಯಕ್ತಿಸಿರುವುದರಿಂದ ಅವರು ನವೋದಯ ಮಾರ್ಗವನ್ನು ನೆಚ್ಚಿಕೊಂಡಿದ್ದಾರೆ ಎಂದು ತಿಳಿಯುತ್ತದೆ. ಸಮಾಜವು ರೂಢಿಸಿಕೊಂಡು ಬಂದ ಶಿಷ್ಟಾಚಾರ, ಪುರಾಣಾದಿ ಸಾಹಿತ್ಯಗಳು ಮೂಡಿಸಿದ ವಿಶಿಷ್ಟ ಸಂಸ್ಕೃತಿಯ ಪ್ರಭಾವ, ಪ್ರಕೃತಿ ಮತ್ತು ಜೀವನದ ಚೆಲುವನ್ನು ಕಂಡು ಹಿಗ್ಗುವ ಪ್ರಸನ್ನ ಭಾವಗಳು ಕವಿಯ ಚೇತನವನ್ನು ಮುನ್ನಡೆಸಿವೆ. ಹಕ್ಕಿಗಳ ಇಂಚರಕ್ಕೆ ದನಿಯಾದ ಕವಿತೆಗಳು, ನದಿಯ ಮಂಜುಳ ನಾದಕ್ಕೆ ಮರುಳಾದ ಕವಿತೆಗಳು, ಮುದ್ದುಕಂದನ ನಗುವಿನಂಥ ಕವಿತೆಗಳು, ದನಿಯೆತ್ತಿ ಹಾಡಬಲ್ಲ ಕವಿತೆಗಳು, ಭಾವಬದ್ಧವಾಗಿ ಓದಬಲ್ಲ ಕವಿತೆಗಳು, ದುರಂತ ಜೀವನವವನ್ನು ಅಭಿವ್ಯಕ್ತಿಸುವ ಕವಿತೆಗಳು, ಸಮಾಜದಲ್ಲಿನ ವಿರೋಧಾಭಾಸಗಳನ್ನು ಲೇವಡಿ ಮಾಡುವ ಕವಿತೆಗಳು, ಮಾನವ ಕಲ್ಯಾಣವನ್ನು ಹಾರೈಸುವ ಕವಿತೆಗಳು ಬಹಳ ಸೊಗಸಾಗಿ, ವೈವಿಧ್ಯಪೂರ್ಣವಾಗಿ ಮೂಡಿ ಬಂದಿವೆ.

    ಆಹಾರಕ್ಕೆ ಸಂಬಂಧಿಸಿದ ಬೇಟೆಯ ಕ್ರಿಯೆಯು ಮನುಷ್ಯನ ಮೂಲ ಪ್ರವೃತ್ತಿಗಳಿಗೆ ಸಂಬಂಧಪಟ್ಟದ್ದು. ಆದರೆ ‘ಬರೇ ಠಕ್ಕ ನಗರದಲ್ಲಿ’ ಎಂಬ ಕವಿತೆಯೊಳಗೆ ನಡೆಯುವ ಪಕ್ಷಿ ಬೇಟೆಯು ಇಂದಿನ ಸಮಾಜದ ಎಲ್ಲೆಡೆಯೂ ನೋಡಬಹುದಾದ ಬಡಪಾಯಿಗಳ ವ್ಯಕ್ತಿಸ್ವಾತಂತ್ರ್ಯದ ಬೇಟೆ. ಭೋಗ ಸಂಸ್ಕೃತಿಯನ್ನು ಪ್ರತಿನಿಧಿಸುವ ಬೇಟೆಗಾರರು ಆಕಾಶದಲ್ಲಿ ಸಂತೋಷದಿಂದ ವಿಹರಿಸುವ ಹಕ್ಕಿಯೊಂದರ ಬೆನ್ನು ಹತ್ತುತ್ತಾರೆ. ಅದನ್ನು ಕೊಂದು ಚರ್ಮ ಸೀಳಿ ಮಾಂಸವನ್ನು ಮಾರಾಟಕ್ಕೆ ಇರಿಸುತ್ತಾರೆ. ಆದರೆ ಅದನ್ನು ಯಾರೂ ಕೊಳ್ಳುವವರಿಲ್ಲ. ಹಕ್ಕಿಯ ಹಾರಾಟವನ್ನು ನೋಡುತ್ತಾ ಸಂತೋಷಪಡುತ್ತಿದ್ದ ಪುಟ್ಟ ಮಕ್ಕಳ ಅಳುವನ್ನು ಕೇಳುವವರಿಲ್ಲ. ಕೊನೆಗೆ ಬೇಟೆಗಾರರು ತಾವೂ ಮೊಸಳೆಗಣ್ಣೀರು ಸುರಿಸುತ್ತಾ ಹಕ್ಕಿಯ ಮಾಂಸವನ್ನು ಬೀದಿಯ ಬದಿಯಲ್ಲಿ ಚೆಲ್ಲಿ ಹೋಗುವ ದುರಂತ ಚಿತ್ರಣವನ್ನು ಸರಳ ಮಾತುಗಳಲ್ಲಿ ಪ್ರಾಸಬದ್ಧವಾಗಿ ಕಟ್ಟಿಕೊಡುವುದರೊಂದಿಗೆ ಬದುಕಿನ ಬೇರುಗಳನ್ನೇ ಅಲುಗಾಡಿಸಿ ಅದರ ನಾಶಕ್ಕಾಗಿ ಹೊಂಚುಹಾಕುವ ಇಂಥ ಸನ್ನಿವೇಶದಲ್ಲಿ ಬಾಳ್ವೆಗೆ ಏನು ಅರ್ಥವಿದೆ? ಇದರಿಂದ ಪಾರಾಗಿ ಬರುವ ಸಾಧ್ಯತೆಗಳಿವೆಯೇ? ಇಂಥ ಸನ್ನಿವೇಶ ಹುಟ್ಟಿದ್ದಾದರೂ ಯಾಕೆ? ಹೇಗೆ? ಇದಕ್ಕೆ ಹೊಣೆಗಾರರು ಯಾರು? ಎಂಬ ಪ್ರಶ್ನೆಗಳನ್ನು ಎತ್ತಿದ ರೀತಿ ಧ್ವನಿಪೂರ್ಣವಾಗಿದೆ. ಇದು ಹತ್ತೊಂಭತ್ತನೇ ಶತಮಾನದ ಅಂಗ್ಲ ಕವಿ ಕೋಲರಿಜ್‌ನ ‘ಇನ್ ಲಂಡನ್ ಟೌನ್’ ಎಂಬ ಕವಿತೆಯ ಆಧಾರದಿಂದ ಮೂಡಿ ಬಂದ ರಚನೆಯಾಗಿದ್ದರೂ ದೇಶ ಕಾಲಗಳನ್ನು ಮೀರಿ ಹರಿದ ವಿಚಾರಗಳು, ಚರ್ಚಿಸಿದ ಸಮಸ್ಯೆಗಳು ಇಂದಿಗೂ ಪ್ರಸ್ತುತವಾಗಿದೆ. ಬದುಕಿನ ಸಂಕೀರ್ಣತೆ, ಮನುಷ್ಯನ ಕ್ರೌರ್ಯ ಮತ್ತು ಕ್ಷುದ್ರ ಕ್ಷುಲ್ಲಕತನಗಳನ್ನು ವಿವರಿಸುವ ಕವಿತೆಗಳು ಸಮಾಜಮುಖಿಯಾಗುವತ್ತ ಒಲವನ್ನು ತೋರುತ್ತವೆ.

    ಅಮ್ಮನ ಸೆರಗ ಹಿಂದೆ/ ಅಂದು ಕಂದನು ಅಂದ/ ಆಗುವೆನು ಆಸರೆ/ ಬಾಳ ಸಂಜೆಗೆ ನಿನಗೆ/
    ಮಡದಿಯ ಕೈ ಪಿಡಿದಂದೇ/ ಅಂಧ ಕಂದನು ಅಂದ/ ಆಶ್ರಮದ ಆ ಸೆರೆ/ ಸೊಬಗೆಂದು ನಿನಗೆ (ಆಸ(ಸೆ)ರೆ:ಪುಟ 23)
    ಇಲ್ಲಿರುವ ವ್ಯಂಗ್ಯ ಮುಖಕ್ಕೆ ಹೊಡೆಯುವಷ್ಟು ಹರಿತ. ಹೃದಯ ಕಲಕುವಷ್ಟು ಭಾವಪೂರ್ಣ. ಪದವಿನ್ಯಾಸವೂ ಉಲ್ಲೇಖನೀಯ.

    ವಿಚಾರಿಸಿದಾಗ ನಾನಲ್ಲವೆಂದ/ ನೀನೇನಲ್ಲ ಎಂದುಸುರಿದಳು ನೀರೆ.
    ಮಿತ್ರವೃಂದವುಲಿಯಿತು ಅವನೇನಲ್ಲ/ ವಂಶವಾಹಿ ಪರೀಕ್ಷೆಯಲ್ಲಿ ತಿಳಿಯಿತು ಅವನೇನಲ್ಲ (ಅವನೇನಲ್ಲ: ಪುಟ 31)
    ಇಲ್ಲಿ ಶ್ಲೇಷೆಯ ರೂಪದಲ್ಲಿ ಬರುವ ಅವನೇನಲ್ಲ (ಅವನೇನೂ ಅಲ್ಲ ಮತ್ತು ಅವನೇ ನಲ್ಲ) ಎಂಬ ನುಡಿಗಳು ಕವಿಯ ಸ್ವೋಪಜ್ಞತೆಗೆ ಸಾಕ್ಷಿಯಾಗಿವೆ. ಇಲ್ಲಿನ ಪದಚಮತ್ಕಾರ ಮತ್ತು ಇಬ್ಬಗೆಯ ಅರ್ಥಸಾಧ್ಯತೆಗಳು ಉಂಟುಮಾಡುವ ಪರಿಣಾಮವನ್ನು ಓದಿಯೇ ಅನುಭವಿಸಬೇಕು. ಕವಿಯು ತನ್ನ ಬರವಣಿಗೆಯಲ್ಲಿ ತೋರಿದ ಚಾಕಚಕ್ಯತೆಯನ್ನು ಮೆಚ್ಚಬೇಕು. ಮಾತಿನ ಅಂಕುಡೊಂಕುಗಳನ್ನು ಬಳಸಿದ ರೀತಿ, ಹಿತವಾಗಿ ಚುಚ್ಚುತ್ತಾ ಸಮಾಜದ ಅವ್ಯವಹಾರಗಳತ್ತ ಬೊಟ್ಟು ಮಾಡುವ ವಿಧಾನದ ಮೇಲೆ ಓದುಗರ ವಿಶೇಷ ಗಮನ ಹರಿಯಬೇಕು.

    ಮುಂಗೈ ಮುಷ್ಟಿಲಿ ಅಡಗಿಹುದಿಂದು/ ಮಾಹಿತಿ ಮಲ್ಲನ ವಿರಾಟ್ ಸ್ವರೂಪ
    ಅನ್ವರ್ಥಗೊಂಡಿತು ಋಷಿವಾಣಿಯದು/ ಆಯಿತು ವಿಶ್ವವು ಏಕ ಕುಟುಂಬ (ಮಾಹಿತಿ ಕ್ರಾಂತಿ: ಪುಟ 32)
    ಮಾಹಿತಿ ತಂತ್ರಜ್ಞಾನದ ಮೂಲಕ ಮನುಷ್ಯರ ನಡುವೆ ಸಂಪರ್ಕ ಸಾಧ್ಯತೆಗಳು ಹೆಚ್ಚಿ ‘ವಸುಧೈವ ಕುಟುಂಬಕಂ’ ಎಂಬ ವೇದಕಾಲದ ಆಶಯವು ಸಾಕ್ಷಾತ್ಕಾರಗೊಂಡ ಬಗ್ಗೆ ಈ ಸಾಲುಗಳು ಸಂತೋಷವನ್ನು ವ್ಯಕ್ತಪಡಿಸುತ್ತವೆ.

    ಅಂತರ್ಜಾಲವ ಜಾಲಾಡಿದರೆ/ ಸಮುದ್ರಮಥನದ ನೆನಪು
    ಅಮೃತ ಪಡೆಯುವ ನೆಪದಲ್ಲಿ/ ಹಾಲಾಹಲವೇ ಬಂದಂತೆ (ಅಂತರ್ಜಾಲ: ಪುಟ 33)
    ಎಂಬ ಸಾಲುಗಳು ತಂತ್ರಜ್ಞಾದ ದೋಷವನ್ನು ವಿವರಿಸಲು ಯತ್ನಿಸುತ್ತವೆ. ವಸ್ತುಸ್ಥಿತಿಯ ಎರಡೂ ಮಗ್ಗುಲುಗಳಿಗೆ ಕವಿಯು ತನ್ನ ಕಣ್ಣು ಹಾಯಿಸಿದ್ದು ಗಮನಾರ್ಹವಾಗಿದೆ.

    ‘ಆಕಾಶಗಂಗೆಯಲ್ಲೊಂದು ದೇವಾಲಯ’ ಎಂಬ ಕವಿತೆಯು ತನ್ನ ಉಪಮೆಯ ತಾಜಾತನದಿಂದ ಕಂಗೊಳಿಸುತ್ತದೆ. ಸೂರ್ಯನನ್ನು ದೇವರಿಗೂ ಅದಕ್ಕೆ ಪ್ರದಕ್ಷಿಣೆ ಬರುವ ಗ್ರಹಗಳನ್ನು ಭಕ್ತರಿಗೂ ಹೋಲಿಸಿರುವುದು ಕನ್ನಡಕ್ಕೇ ಹೊಸತು.

    ದೂರ ಸರಿದ ಆತ್ಮವದು/ ದೇವನಲ್ಲಿ ಲೀನವಾಗಿ
    ತವಕದಿಂದ ಸುತ್ತುತಿಹುದು/ ಗ್ರಹಗಳೋಪಾದಿಯಲಿ
    ಎಂಬ ಸಾಲುಗಳು ಇಂದ್ರಿಯಗಮ್ಯ ವಿಚಾರವನ್ನು ಅಲೌಕಿಕ ನೆಲೆಯಲ್ಲಿ ಹಿಡಿದಿಡುತ್ತದೆ.

    ತೂರಿ ಬಿಡಲು/ ನಿಯಮಗಳ ಗಾಳಿಯಲಿ
    ಭಾವಗಳು ಹರಿಯುವುದು/ ಪೂರದೊಲು
    ನವ್ಯ ಕವಿತೆಯ/ ಕಿರಿಯ ಪಾದದಲಿ (ನವ್ಯ ಕವಿತೆ: ಪುಟ 31)
    ಎಂಬ ಸಾಲುಗಳು ನವ್ಯ ಕವಿತೆಯ ಹೊರಮೈ ವಿನ್ಯಾಸವನ್ನು ಮಾತ್ರ ಹೇಳುತ್ತದೆ. ಆದರೆ ನವ್ಯಕಾವ್ಯ ಛಂದೋ ನಿಯಮವನ್ನು ಎಂದೂ ಗಾಳಿಗೆ ತೂರಲಿಲ್ಲ. ಗೋಪಾಲಕೃಷ್ಣ ಅಡಿಗ, ಎ.ಕೆ. ರಾಮಾನುಜನ್, ಕೆ.ವಿ. ತಿರುಮಲೇಶ್ ಮೊದಲಾದವರು ರೂಢಿಗತವಾಗಿದ್ದ ಲಯವನ್ನು ಮುರಿದು ಕಟ್ಟಿದರು. ಇದರಿಂದ ನವ್ಯ ಕಾವ್ಯ ಬಲಿಷ್ಠವಾಯಿತು. ಕೇವಲ ಮಾತ್ರಾಗಣದ ಕಟ್ಟುಗಳು ಮತ್ತು ತಾಳದ ಪುನರಾವರ್ತನೆಗಳು ಮಾತ್ರ ಛಂದಸ್ಸು ಎನಿಸಿಕೊಳ್ಳುವುದಿಲ್ಲ. ಲಯಗಾರಿಕೆಯಲ್ಲೇ ಅದರ ಅಸ್ತಿತ್ವವಿದೆ. ಅಂತೆಯೇ ‘ನವಜೀವನ’ ಸಂಕಲನದ ಎಲ್ಲಾ ಕವಿತೆಗಳೂ ತನ್ನದೇ ಆದ ಲಯದ ಮೂಲಕ ಓದುಗರ ಮನಗೆಲ್ಲುತ್ತದೆ. ರ್ಯಾ ಗಿಂಗ್’, ‘ಬರೇ ಠಕ್ಕ ನಗರದಲ್ಲಿ’ ಎಂಬ ಕವಿತೆಗಳಲ್ಲಿ ಬಾಳ್ವೆಯ ನೋವು ಮತ್ತು ಸಮಾಜದ ಕ್ರೌರ್ಯ ದೌರ್ಜನ್ಯಗಳಿಗೆ ಮರುಗಿ ಸಂಕಟಪಡುವ ಕವಿಯ ಆರ್ದ ಹೃದಯವನ್ನು ಕಾಣಬಹುದು. ‘ಅಸೂಯೆ’ ಕವಿತೆಯು ಮಾಮೂಲು ವಿಚಾರಗಳನ್ನೇ ಹೇಳುತ್ತಿದ್ದರೂ

    ಏಡಿಯ ಪಾಡಲಿ ಕುತಂತ್ರ ಬೆಸೆದು/ ಶಿಷ್ಟರ ಬಲಿಗೆ ಷಡ್ಯಂತ್ರ ಮಸೆದು
    ಅನ್ಯರ ಜಡವನೆ ಮೆಟ್ಟಿಲು ಮಾಡಿ/ ವಿಜಯ ಶಿಖರವ ಏರುವ ನೋಡಿ
    ಎಂಬ ಸಶಕ್ತ ಉಕ್ತಿಗಳ ಮೂಲಕ ಓದುಗರ ಮನಗೆಲ್ಲುತ್ತದೆ. ಪ್ರಶಸ್ತಿ, ಪ್ರಚಾರ, ಸನ್ಮಾನ ಮುಂತಾದ ಮನ್ನಣೆಗಳ ಒತ್ತಾಸೆ, ಲಾಲಸೆಗಳಿಗೆ ಬಲಿಯಾಗಿ ಅಪ್ರತಿಮ ಸಾಧಕನೆಂಬ ಹಣೆಪಟ್ಟಿಯನ್ನು ತಾವೇ ಹಚ್ಚಿಕೊಂಡು ತಿರುಗುವವರ ಅಹಂಕಾರ, ಅಧಿಕಾರದ ಬಲ, ಲಾಭಕೋರತನ ಮತ್ತು ಕ್ರೌರ್ಯಗಳನ್ನು ಬಂಡವಾಳವಾಗಿಸಿಕೊಂಡು ಮೆರೆಯುವ ಗೋಮುಖವ್ಯಾಘ್ರರ ವಿರುದ್ಧ ಕವಿಯಲ್ಲಿ ಮೂಡಿದ ಸಾತ್ವಿಕ ರೋಷದ ಕಾವಿನ ಅನುಭವವಾಗುತ್ತದೆ. ಈ ಮೂಲಕ ಅವರು ಮಾನವ ಜೀವಿತದ ಸತ್ಯಪ್ರಪಂಚವನ್ನು ತೆರೆದು ತೋರಿಸುತ್ತಾರೆ.

    ‘ಮುದ್ದುಕಂದ’ ಮೂಲತಃ ಸಾಹಿತ್ಯದ ವಿದ್ಯಾರ್ಥಿಯಲ್ಲದಿದ್ದರೂ ಕವಿತೆಯನ್ನು ಕಟ್ಟಲು ಅಗತ್ಯವಾದ ಸಾಹಿತ್ಯ ಪರಂಪರೆಯೊಂದಿಗೆ ತಕ್ಕಮಟ್ಟಿನ ಸಂವಾದವನ್ನು ನಡೆಸಿದ್ದಾರೆ ಎನ್ನುವುದಕ್ಕೆ ಈ ಸಂಕಲನದ ಕವಿತೆಗಳು ಸಾಕ್ಷಿಯಾಗಿವೆ. ಇವುಗಳ ರಚನಾ ವಿನ್ಯಾಸವು ನವೋದಯದ ಕೊಡುಗೆಗಳೆಂಬಂತೆ ತೋರಿದರೂ ಅವುಗಳು ಕವಿಯ ವಿಶೇಷ ಅನುಭವದ ಅಭಿವ್ಯಕ್ತಿಯಾಗಿವೆ. ನಿಶ್ಚಿತ ಪದ್ಯಬಂಧಗಳನ್ನು ದಾಟಿ ಮುಕ್ತಛಂದೋ ವಿಧಾನದಲ್ಲಿ ಮೂಡಿದ ಕವಿತೆಗಳು ತಮ್ಮ ಲಯ, ಗತಿಗಳನ್ನು ಕಳೆದುಕೊಳ್ಳದೆ ಚಲನಶೀಲತೆಯನ್ನು ಉಳಿಸಿಕೊಂಡು ಆಧುನಿಕ ಬದುಕಿನ ವಿಷಮ ಸ್ಥಿತಿಗೆ ಮುಖಾಮುಖಿಯಾಗಿವೆ. ಅರ್ಥ ಜಾಳಾಗದೆ, ಮಾತು ಅತಿಯಾಗದೆ ಸಂಯಮದಿಂದಲೇ ಮನಸ್ಸನ್ನು ಆವರಿಸಬಲ್ಲ ಕವಿತೆಗಳು ಇಲ್ಲಿವೆ. ಪದಪ್ರಯೋಗಗಳ ಹಿಡಿತ, ಅರ್ಥ ಭಾವಗಳ ಮಿಡಿತ ಹೀಗೆ ಶಬ್ದಾರ್ಥಗಳ ಸಮ್ಮಿಲನದಿಂದ ಕವಿತೆಗಳು ಓದುಗರಲ್ಲಿ ಉಲ್ಲಾಸವನನ್ನು ಮಾತ್ರ ಉಂಟುಮಾಡುವುದಲ್ಲದೆ ಸಮಾಜದಲ್ಲಿ ತಾಂಡವವಾಡುತ್ತಿರುವ ಅನ್ಯಾಯ, ಅವ್ಯವಹಾರ ಮತ್ತು ಕ್ರೌರ್ಯಗಳ ಕುರಿತು ಗಾಢವಾಗಿ ಚಿಂತಿಸುವಂತೆ ಮಾಡುತ್ತದೆ. ಯಾವುದೇ ರೀತಿಯ ಸಂದಿಗ್ಧತೆ ಕ್ಲಿಷ್ಟತೆಗಳಿಲ್ಲದ ಸರಳ ಅಭಿವ್ಯಕ್ತಿ ಇಲ್ಲಿನ ಕವಿತೆಗಳ ವೈಶಿಷ್ಟ್ಯ. ಬದುಕಿನ ಸಂಘರ್ಷ, ಸಂಕೀರ್ಣತೆಗಳ ಅರಿವಿದ್ದೂ ಆ ವಿಚಾರಗಳನ್ನು ಬಹಳ ಮೃದುವಾಗಿ ಹೇಳುವ ‘ಮುದ್ದುಕಂದ’ನ ಕವಿತೆಗಳಿಗೆ ದಾರ್ಶನಿಕತೆಯ ಆಳ ಇನ್ನಷ್ಟು ದಕ್ಕಲಿ. ಕನ್ನಡ ಸಾಹಿತ್ಯ ಲೋಕಕ್ಕೆ ಅವರಿಂದ ಇನ್ನಷ್ಟು ಕಾಣ್ಕೆಗಳು ದೊರೆಯುವಂತಾಗಲಿ.

    ಪುಸ್ತಕದ ಹೆಸರು : ನವಜೀವನ (ಕವನ ಸಂಕಲನ)
    ಲೇಖಕರು : ಮುದ್ದುಕಂದ, ಶೇಂತಾರು ಬಯಲು
    ಪ್ರಕಾಶಕರು : ಮುದ್ದು ಪ್ರಕಾಶನ, ಶೇಂತಾರು ಬಯಲು, ನೀರ್ಚಾಲು 671321
    ಬೆಲೆ ರೂ : 40
    ಪುಟಗಳು : 40

    ಡಾ. ಸುಭಾಷ್ ಪಟ್ಟಾಜೆ :

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.

    ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್‌ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕ ಗೋಪಾಲಕೃಷ್ಣ ಭಟ್ ಶೇಂತಾರು ಬಯಲು ಇವರು ಎಸ್.ವಿ. ಶಂಭಟ್ಟ ಮತ್ತು ಹೇಮಾವತಿ ದಂಪತಿಗಳ ಸುಪುತ್ರ. ನವಜೀವನ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ವಿಜ್ಞಾನ ಅಧ್ಯಾಪಕರಾಗಿರುವ ಇವರು ಹವ್ಯಾಸ ಕವನ ರಚನೆ.

    Share. Facebook Twitter Pinterest LinkedIn Tumblr WhatsApp Email
    Previous Articleಮೇ ಸಾಹಿತ್ಯ ಮೇಳದ ಕರಪತ್ರ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ
    Next Article ಪರಿಚಯ ಪ್ರತಿಷ್ಠಾನ (ರಿ) ಪಾಂಬೂರು ಸಂಸ್ಥೆಯಿಂದ ಬಹುಮುಖಿ 2024 ಸಾಂಸ್ಕೃತಿಕ ಉತ್ಸವ | ಮೇ 19
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.