Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಶಶಿಕಲಾ ಬಾಯಾರು ಅವರ ‘ಪತ್ರಾರ್ಜಿತ’
    Article

    ಪುಸ್ತಕ ವಿಮರ್ಶೆ | ಶಶಿಕಲಾ ಬಾಯಾರು ಅವರ ‘ಪತ್ರಾರ್ಜಿತ’

    June 5, 20246 Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶ್ರೀಮತಿ ಶಶಿಕಲಾ ಬಾಯಾರು ಅವರ ‘ಪತ್ರಾರ್ಜಿತ’ವು ಭಾವನಾತ್ಮಕ ಸಂವಾದಗಳ ಸುಂದರ ಗುಚ್ಛ. ಸಂಬಂಧ ಸಂವಹನಗಳು ಯಾಂತ್ರಿಕವಾಗುತ್ತಿರುವ ಹೊತ್ತಿನಲ್ಲಿ ಓಲೆಗಳ ಮೇಲೆ ಭಾವನೆಗಳು ಅರಳಿರುವುದು ವಿಶೇಷ. ಚಿತ್ತಭಿತ್ತಿಯಲ್ಲಿ ಮೂಡುವ ಭಾವಚಿತ್ರಗಳನ್ನು ಜೀವಂತಿಕೆಯಿಂದ ನೇಯಬಲ್ಲ ಇವರ ಕಸೂತಿಕಲೆಯಂತೆ ಇಲ್ಲಿನ ಪತ್ರಸಂಗ್ರಹವೂ ತನ್ನದೇ ಆದ ಕುಸುರಿತನದಿಂದ ಕಂಗೊಳಿಸುತ್ತದೆ.

    ಲೇಖಕಿಯು ತಮ್ಮ ಜೊತೆ ಒಡನಾಡಿದ ವ್ಯಕ್ತಿಗಳಿಗೆ ಬರೆದ ಪತ್ರಗಳು ಮತ್ತು ಅವರ ಪ್ರತ್ಯುತ್ತರಗಳು ಓದುಗನ ಪಾಲಿಗೆ ಎಂದಿಗೂ ಮರೆಯಲಾಗದ ನೆನಪಿನ ಚಿತ್ರಗಳಾಗಿವೆ. ಒಡನಾಟದ ಹಲವು ಸಂಗತಿಗಳನ್ನೂ ಸಂದರ್ಭಗಳನ್ನೂ ಲಕ್ಷ್ಯವಾಗಿಟ್ಟುಕೊಂಡು ಮೂಡಿದ ಬರಹಗಳು ಕತೆ ಕವಿತೆಗಳಂತೆ ಆಪ್ತವಾಗಿ ಓದಿಸುತ್ತಾ ಚಿಂತನೆಗೆ ತೊಡಗಿಸುತ್ತವೆ. ಪತ್ರದಲ್ಲಿ ಅವರು ಯಾರೊಂದಿಗೆ ಸಂವಾದವನ್ನು ನಡೆಸುತ್ತಾರೋ ಅವರೆಲ್ಲರೂ ಒಂದೇ ಮನೆಯ ಮಂದಿಗಳಂತೆ ಜೊತೆಯಲ್ಲಿ ಕುಳಿತು ಮಾತನಾಡುವಂತೆ ಭಾಸವಾಗುತ್ತದೆ. ಇಲ್ಲಿನ ಓಲೆಗಳು ಕೇವಲ ಕುಶಲೋಪರಿ, ಹರಟೆಗಳಿಗೆ ಎಡೆ ಕೊಡದೆ ಜನಜೀವನ, ಜಗತ್ತಿನೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುತ್ತವೆ. ಲೇಖಕಿ ಬರೆದ ಪತ್ರಗಳಲ್ಲಿ ಅವರ ಆತ್ಮಕತೆಯ ಕೆಲವು ಪುಟಗಳು ಅನಾವರಣಗೊಳ್ಳುತ್ತವೆ.

    ಸುತ್ತಲಿನ ಜಗತ್ತನ್ನು ತೀವ್ರವಾಗಿ ನೋಡಿದ್ದರ ಫಲವಾಗಿ ಇಲ್ಲಿನ ಪತ್ರಗಳು ಮೂಡಿವೆ. ಬದುಕಿನ ಧ್ಯಾನಸ್ಥ, ಶಾಂತ ಮನಸ್ಸಿನ ಪ್ರತಿಬಿಂಬವೆಂಬಂತೆ ತೋರುವ ವಿವರಗಳಲ್ಲಿ ಕಾವ್ಯಾತ್ಮಕತೆ, ಕುಸುರಿತನದ ನಾಜೂಕು ವ್ಯಕ್ತವಾಗುತ್ತದೆ. ಏಕಾಂತ ಧ್ಯಾನದ ಮೌನದ ಅಲೆಗಳು ಓದುಗನನ್ನು ತಾಕುತ್ತವೆ. ಏಕಾಂತದಲ್ಲಿದ್ದುಕೊಂಡೇ ಸಂಬಂಧಗಳನ್ನರಸುವ ಪತ್ರಗಳು ನಿತ್ಯ ಜೀವನದ ಲಯ ರೂಪಕಗಳ ಮೂಲಕ ಮಾತನಾಡುತ್ತಿರುವುದರಿಂದ (ಒಂಟಿತನದ ಬಿಂದುವಿನ ಮೇಲಿನ ಪ್ರಶ್ನಾರ್ಥಕ ಚಿಹ್ನೆಯಂತೆ, ಒಂಟಿತನದ ಒಣಗಂಧ ತೋರುತ್ತಿದ್ದ ತುಳಸೀಗಿಡ ಒಂದೇ ಮಳೆಗೆ ತನ್ನ ಧೋರಣೆ ಬದಲಿಸಿ ಚುರುಕಾಗಿದೆ, ಸ್ವಿಚ್ಚು ತೆಗೆದ ಮೇಲೆ ಮತ್ತೂ ನಾಲ್ಕು ಸುತ್ತು ತಿರುಗುವ ಫ್ಯಾನಿನಂತೆ ಮುಂತಾದ ಪ್ರಯೋಗಗಳು) ಅದರಲ್ಲಿ ಸಾಹಿತ್ಯಿಕ ಮೌಲ್ಯಗಳು ಮೂಡಿವೆ. ತನ್ನೆಲ್ಲ ಸ್ಪಷ್ಟತೆ ಮತ್ತು ಚೆಲುವಿನೊಂದಿಗೆ ಬದುಕಿನ ಸಹಜ ಸ್ಪಂದನಗಳನ್ನು ಹಿಡಿಯುವ ಬರಹಗಳು ಸೊಗಸಾದ ಬಿಡಿಚಿತ್ರಗಳ ಮೂಲಕ ಕಾವ್ಯಾನುಭವವನ್ನು ನೀಡುತ್ತವೆ. ದೈನಂದಿನ ಬದುಕಿನ ಹಲಬಗೆಯ ಚಿತ್ರಗಳು ಲೇಖಕಿಯ ವಿಶಿಷ್ಟ ಕಾಣ್ಕೆಯನ್ನು ಅನುಭವಿಸುವಂತೆ ಮಾಡುತ್ತವೆ. ತವರು ಮನೆಯಿಂದ ದೊರೆತ ಸಾಹಿತ್ಯ ಸಂಸ್ಕಾರ, ಅವಿಭಕ್ತ ಕುಟುಂಬದಿಂದ ಪಡೆದ ಅನುಭವಗಳ ಸಮೃದ್ಧಿಯು ಲೇಖಕಿಯ ವ್ಯಕ್ತಿತ್ವವನ್ನು ನಿರ್ಮಿಸಿದ್ದರೆ ಅವರ ಸರಳ ಮನೋಧರ್ಮ, ಬದುಕನ್ನು ಸಹಜವಾಗಿ ನೋಡುವ ರೀತಿಯು ಇಲ್ಲಿನ ಪತ್ರಗಳನ್ನು ರೂಪಿಸಿದೆ. ಎಸ್ಸೆಮ್ಮೆಸ್, ವಾಟ್ಸ್ಯಾಪ್‌ಗಳಲ್ಲಿ ಮಾತುಗಳು ಬತ್ತಿಹೋಗಿ ಸಾಹಿತ್ಯವು ಸತ್ತು ಹೋಗುತ್ತಿರುವ ಹೊತ್ತಿನಲ್ಲಿ ಈ ಪತ್ರಗಳು ಮೃತಸಂಬಂಧಗಳ ಪಾಲಿಗೆ ಸಂಜೀವಿನಿಯಾಗುತ್ತವೆ.

    ಇಲ್ಲಿನ ಪತ್ರಗಳು ಲೇಖಕಿಯ ಬದುಕಿನಲ್ಲಿ ಪ್ರತಿನಿತ್ಯ ಹಾದುಹೋಗುವ ಭಾವನೆ, ಸ್ಪಂದನೆ, ನೆನಪು, ತಲ್ಲಣಗಳನ್ನು ಹಿಡಿದಿಟ್ಟಿವೆ. ಇವುಗಳೆಲ್ಲವೂ ಹೆಣ್ಣಿನ ಅಂತರಂಗದಿಂದ ರೂಪುಗೊಂಡ ಪ್ರೀತಿಯ ಬಿಂಬಗಳು. ಲೇಖಕಿಯ ಭಾವಜಗತ್ತಿನಿಂದ ಹಾದು ಬರುವ ಅವರ ಬಾಲ್ಯ, ಹೆತ್ತವರು-ಒಡಹುಟ್ಟುಗಳ ಮಧುರ ಬಾಂಧವ್ಯಗಳು ಮಳೆಯ ಅನಂತ ನೆನಪಿನಂತೆ ಎದೆಯೊಳಗೆ ಭಾವಗಳ ಒರತೆಯನ್ನೆಬ್ಬಿಸುತ್ತವೆ. ದಿನಾ ಕಾಣುವ ಜಗತ್ತಿನೊಳಗೆ ಒಮ್ಮೆಯೂ ಕಾಣದಿರುವ ಸೂಕ್ಷ್ಮತೆಗಳನ್ನು ವಿವರಿಸುತ್ತಾ ಮನಸ್ಸನ್ನು ಭಾವುಕಗೊಳಿಸುತ್ತವೆ. ಬಿರಿದ ಮಲ್ಲಿಗೆಯಂಥ ಮೋಹಕ ಶೈಲಿಯು ಓದುಗರನ್ನು ಆಕರ್ಷಿಸುತ್ತದೆ. ನೆನಪುಗಳನ್ನು ಕೆದಕಿದರೆ ಕಣ್ಣೀರ ಸೆಲೆಯುಕ್ಕಿ ಬರುವ ಅದೆಷ್ಟೋ ಸನ್ನಿವೇಶಗಳು ಇಲ್ಲಿವೆ. ತೊಯ್ದ ಪದಗಳನ್ನು ಕಾಗದದ ಮೇಲೆ ಮೂಡಿಸಲು, ಅಂಥ ಅನುಭವಗಳನ್ನು ನಿರುದ್ವೇಗದಿಂದ ಮಂಡಿಸಲು ಹೇಗೆ ಸಾಧ್ಯವಾಯಿತೋ ಎಂದು ಬೆರಗುಗೊಳ್ಳುವಂತಾಗುತ್ತದೆ. ತೀವ್ರ ಕಂಪನದ ಸಾಲುಗಳಲ್ಲೂ ಸೂಕ್ತ ರೂಪಕಗಳನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದ ಪತ್ರಗಳಲ್ಲಿ ಪ್ರೀತಿಯ ಒಳಹರಿವಿದೆ. ಬದುಕಿನ ಅನುಭವಗಳಿಂದ ಪಡೆದ ತೀವ್ರತೆಯಿದೆ. ಅನುಭವಗಳನ್ನು ಒರೆಗೆ ಹಚ್ಚುವ ರೀತಿಯು ಕೆಲವೊಮ್ಮೆ ಅಲೌಕಿಕ ಅನುಭೂತಿಯನ್ನುಂಟು ಮಾಡಿ ತಾತ್ವಿಕ ಹುಡುಕಾಟಕ್ಕೆ ಪ್ರೇರಣೆ ನೀಡುತ್ತದೆ. ಸುತ್ತಣ ಪರಿಸರ, ವ್ಯಕ್ತಿಗಳೊಂದಿಗೆ ಬೆಸೆದುಕೊಂಡ ಭಾವನಾತ್ಮಕ ಸಂಬಂಧವು ನವಿರಾದ ಆತ್ಮೀಯ ಧಾಟಿಯನ್ನು ತಂದುಕೊಡುತ್ತದೆ.

    ಸಾಹಿತ್ಯ ಪ್ರಕಾರಗಳಲ್ಲಿ ಹೊಸ ಸಾಧ್ಯತೆಯನ್ನು ಮುಂದಿಡುತ್ತಿರುವ ಕಾರಣಕ್ಕಾಗಿ, ಕನ್ನಡವನ್ನು ತನ್ನೆಲ್ಲ ಶಕ್ತಿ, ಬನಿಯಲ್ಲಿ ಕಾಣಿಸಿಕೊಡುವ ಮೂಲಕ ಕನ್ನಡ ಭಾಷೆ, ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ ಒಡ್ಡಿದ ಪ್ರತಿಕ್ರಿಯೆಗಳೆಂಬ ದೃಷ್ಟಿಯಲ್ಲೂ ಈ ಓಲೆಗಳನ್ನು ನೋಡಬಹುದು. ಹಳಹಳಿಕೆಯ ದಾರಿಯನ್ನು ಬಿಟ್ಟುಕೊಟ್ಟ ರಚನೆಗಳು ವಿವಿಧ ನೆಲೆಗಳಲ್ಲಿ ಚಿಂತಿಸುವಂತೆ ಮಾಡುವ ದನಿಯನ್ನು ಪಡೆದುಕೊಂಡಿವೆ. ಇಲ್ಲಿ ಪ್ರಚಲಿತ ಸಮಸ್ಯೆಗಳಿಗೆ ಉತ್ತರ ಹುಡುಕುವ ಇರಾದೆಯಿದೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಆಯಾಕಾಲದ ಒತ್ತಡ, ಸನ್ನಿವೇಶ, ಲೋಕದೃಷ್ಟಿಗಳು ಪತ್ರಗಳ ಮೂಲಕ ಮಾನವೀಯ ಲೋಕವನ್ನು ನಿರ್ಮಿಸುತ್ತವೆ. ತಲ್ಲಣವನ್ನು ತಣಿಸುವ ಅಂತಃಕರಣದ ತಂಪು ಒಲವಿನ ಸಂಬಂಧಗಳನ್ನು ಆಸ್ಥೆಯಿಂದ ಕಟ್ಟಿಕೊಡುತ್ತವೆ. ಅದಮ್ಯ ಜೀವನಪ್ರೀತಿಯನ್ನು ಬಿಂಬಿಸುವ ನಿರೂಪಣೆಯು ಓದುಗರನ್ನು ತನ್ಮಯಗೊಳಿಸುತ್ತದೆ. ಇತ್ತೀಚೆಗೆ ಕನ್ನಡದಲ್ಲಿ ಇಷ್ಟೊಂದು ಅಪ್ಪಟ ನುಡಿಗಟ್ಟಿನ ಬರವಣಿಗೆ ಇಂಥ ಶಬ್ದಚಿತ್ರಗಳಲ್ಲಿ ಮೂಡಿ ಬಂದಿಲ್ಲ.

    ಶ್ರೀಮತಿ ಶಶಿಕಲಾ ಬಾಯಾರು ತಮ್ಮ ಪತ್ರಗಳ ವಿನ್ಯಾಸದ ಬಗ್ಗೆ ವಹಿಸಿದ ಎಚ್ಚರ, ಕಾಳಜಿಗಳು ಇಂದಿನ ಬರಹಗಾರರಿಗೆ ಮಾದರಿ ಎನಿಸುವಂತಿದೆ. ಅವರದ್ದೇ ವ್ಯಕ್ತಿತ್ವದ ಮುದ್ರೆಯನ್ನು ಪಡೆದುಕೊಂಡ ಇಲ್ಲಿನ ಓಲೆಗಳು ಸಾಹಿತ್ಯಕ ಸಾಂಸ್ಕೃತಿಕ ಕಾರಣಗಳಿಂದ ಮುಖ್ಯವೆನಿಸುತ್ತವೆ.

    ಪುಸ್ತಕದ ಹೆಸರು : ಪತ್ರಾರ್ಜಿತ (ಪತ್ರಗಳ ಸಂಕಲನ)
    ಲೇಖಕರು : ಶ್ರೀಮತಿ ಶಶಿಕಲಾ ಬಾಯಾರು
    ಪ್ರಕಾಶಕರು : ಅಂಕನಹಳ್ಳಿ ಪ್ರಕಾಶನ ರಾಮನಗರ
    ಪುಟಗಳು : 312
    ಬೆಲೆ ರೂ. : 180/-

    ಡಾ. ಸುಭಾಷ್ ಪಟ್ಟಾಜೆ :

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.

    ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್‌ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಶ್ರೀಮತಿ ಶಶಿಕಲಾ ಬಾಯಾರು

    ಯಕ್ಷಗಾನ ಅರ್ಥಧಾರಿಗಳಾಗಿ, ಸಾಹಿತಿಗಳಾಗಿ, ಕನ್ನಡಪರ ಹೋರಾಟದ ನೇತಾರರಾಗಿ ಜನಮಾನಸದಲ್ಲಿ ಸ್ಮರಣೀಯರಾಗಿರುವ ದಿ. ಪೆರ್ಲ ಕೃಷ್ಣ ಭಟ್ಟರ ಮಗಳಾದ ಶಶಿಕಲಾ ಬಾಯಾರು ಓರ್ವ ಗೃಹಿಣಿಯಾಗಿದ್ದು, ಸಾಹಿತ್ಯ ಮತ್ತು ಕಸೂತಿ ಕಲೆಗಳಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದವರು. ಔಪಚಾರಿಕ ಶಿಕ್ಷಣವು ಹತ್ತನೇ ತರಗತಿಯವರೆಗೆ ಸೀಮಿತವಾಗಿದ್ದರೂ ಓದು, ಬರವಣಿಗೆ, ಸಂಗೀತ, ಚಿತ್ರಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಕಸೂತಿಚಿತ್ರಗಳಲ್ಲಿ ಮಾಡಿದ ಸಾಧನೆಯು ಅನನ್ಯವಾಗಿದೆ. ನುಡಿಮುತ್ತುಗಳನ್ನು ಕೋದಂತಿರುವ ಅವರ ಪತ್ರಗಳು ‘ಪತ್ರಾರ್ಜಿತ’ ಎಂಬ ಹೆಸರಿನಲ್ಲಿ ಪ್ರಕಟವಾದದ್ದು ಪತ್ರ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು. ಕಸೂತಿ ಹೆಣಿಗೆಯ ಹಾಸುಹೊಕ್ಕುಗಳಲ್ಲಿ, ಅದಕ್ಕೆ ತುಂಬುವ ಬಣ್ಣಗಳಲ್ಲಿ ಅವರು ಮೂಡಿಸುವ ವ್ಯಕ್ತಿಚಿತ್ರಗಳು, ಭಾವಪೂರ್ಣ ಸನ್ನಿವೇಶಗಳು, ಅವುಗಳಿಗೆ ಕೊಡುವ ಶೀರ್ಷಿಕೆಗಳು ಅನುಪಮವಾಗಿವೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿಯಲ್ಲದೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಇವರ ಚಿತ್ರಗಳು ಪ್ರದರ್ಶನಗೊಂಡು ಜನಮನ ಸೂರೆಗೊಂಡಿವೆ. ಮುಂಬಯಿಯ ಸ್ಪಾರೋ ಎಂಬ ಸಂಸ್ಥೆಯು ಇವರ ಸಾಧನೆಯನ್ನು ಸಾಕ್ಷ್ಯಚಿತ್ರದ ರೂಪದಲ್ಲಿ ದಾಖಲಿಸಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಗುಂಡ್ಮಿಯಲ್ಲಿ ಯಕ್ಷಗಾನ ಕಾರ್ಯಾಗಾರ ‘ಯಕ್ಷ ಮುದ್ರಾ’ | ಜೂನ್ 6
    Next Article ಮಡಿಕೇರಿಯಲ್ಲಿ ‘ಅಂತರಗಂಗೆ’ ಕೃತಿ ಲೋಕಾರ್ಪಣೆ | ಜೂನ್ 9
    roovari

    6 Comments

    1. ಟಿ. ಎ. ಎನ್. ಖಂಡಿಗೆ. on June 6, 2024 7:30 am

      ಪಠ್ಯದ ಭಾವವನ್ನು ಬಹಳ ಸಮರ್ಥವಾಗಿ ಕಟ್ಟಿಕೊಟ್ಟ ರಸವಿಮರ್ಶೆ. ಕೃತಿಯ ಬಗ್ಗೆ ಕುತೂಹಲವನ್ನು ಮೂಡಿಸುವಂತೆ ಮಾಡಿ ಕೃತಿಯನ್ನು ಓದುವಂತೆ ಪ್ರೇರೇಪಿಸುತ್ತದೆ. ಬಿಲ್ಲು ಬಾಣಗಳನ್ನು ಬದಿಗಿಟ್ಟು ಮಾಡುವ ಇಂಥ ವಿಮರ್ಶೆ ಇಂದಿನ ಅಗತ್ಯವಾಗಿದೆ.ಹಿರಿಯರಿಂದ ಬಂದ ಇಂಥ ವಿಮರ್ಶಾ ಮಾದರಿಯನ್ಬು ಸುಭಾಷ್ ಅವರು ಮುಂದುವರಿಸುತ್ತಿದ್ದಾರೆ. ಅಭಿನಂದನೆಗಳು ಸುಭಾಷ್ ಅವರೇ.

      Reply
      • ಕವಿತಾ ಕೂಡ್ಲು on June 8, 2024 7:46 pm

        ಕಾವ್ಯಾತ್ಮಕ ವಿಮರ್ಶೆ,ಸುಂದರವಾದ ಕವಿತೆಯನ್ನು ಆಸ್ವಾದಿಸಿ ಓದಿದಂತೆ ವಿಮರ್ಶೆಯನ್ನು ಓದಿದೆ.
        ಅಭಿನಂದನೆಗಳು ಸುಭಾಷ್ ಪಟ್ಟಾಜೆ.
        ಪತ್ರಾರ್ಜಿತ ಪುಸ್ತಕ ಓದಲೇ ಬೇಕು.ವಂದನೆಗಳು

        Reply
    2. ಡಾ. ಸುಭಾಷ್ ಪಟ್ಟಾಜೆ on June 6, 2024 2:15 pm

      ಧನ್ಯವಾದಗಳು ಸರ್

      Reply
    3. Shobha V Bhat on June 6, 2024 5:33 pm

      Shashikalakka asadharana vyakti. AVara patragalannu odi nanna drusti kona vanne badalisiddene. Avarondige 1/2 gante matadidare navu hosa hurupu talutteve. Namma Tumba Samasyegalige avaralli Uttar ede.

      Reply
    4. ಮಹಾಲಿಂಗೇಶ್ವರ ಎಸ್ ಪಿ on June 7, 2024 10:46 am

      ಸಹೃದಯ ವಿಮರ್ಶೆಗಾಗಿ ,ಅಭಿಮಾನದ ಅಭಿನಂದನೆಗಳು ಪ್ರಿಯ ಡಾ ಸುಭಾಷ್
      Pattaje.

      Reply
    5. ಕವಿತಾ ಕೂಡ್ಲು on June 8, 2024 7:46 pm

      ಕಾವ್ಯಾತ್ಮಕ ವಿಮರ್ಶೆ,ಸುಂದರವಾದ ಕವಿತೆಯನ್ನು ಆಸ್ವಾದಿಸಿ ಓದಿದಂತೆ ವಿಮರ್ಶೆಯನ್ನು ಓದಿದೆ.
      ಅಭಿನಂದನೆಗಳು ಸುಭಾಷ್ ಪಟ್ಟಾಜೆ.
      ಪತ್ರಾರ್ಜಿತ ಪುಸ್ತಕ ಓದಲೇ ಬೇಕು.ವಂದನೆಗಳು

      Reply

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    6 Comments

    1. ಟಿ. ಎ. ಎನ್. ಖಂಡಿಗೆ. on June 6, 2024 7:30 am

      ಪಠ್ಯದ ಭಾವವನ್ನು ಬಹಳ ಸಮರ್ಥವಾಗಿ ಕಟ್ಟಿಕೊಟ್ಟ ರಸವಿಮರ್ಶೆ. ಕೃತಿಯ ಬಗ್ಗೆ ಕುತೂಹಲವನ್ನು ಮೂಡಿಸುವಂತೆ ಮಾಡಿ ಕೃತಿಯನ್ನು ಓದುವಂತೆ ಪ್ರೇರೇಪಿಸುತ್ತದೆ. ಬಿಲ್ಲು ಬಾಣಗಳನ್ನು ಬದಿಗಿಟ್ಟು ಮಾಡುವ ಇಂಥ ವಿಮರ್ಶೆ ಇಂದಿನ ಅಗತ್ಯವಾಗಿದೆ.ಹಿರಿಯರಿಂದ ಬಂದ ಇಂಥ ವಿಮರ್ಶಾ ಮಾದರಿಯನ್ಬು ಸುಭಾಷ್ ಅವರು ಮುಂದುವರಿಸುತ್ತಿದ್ದಾರೆ. ಅಭಿನಂದನೆಗಳು ಸುಭಾಷ್ ಅವರೇ.

      Reply
      • ಕವಿತಾ ಕೂಡ್ಲು on June 8, 2024 7:46 pm

        ಕಾವ್ಯಾತ್ಮಕ ವಿಮರ್ಶೆ,ಸುಂದರವಾದ ಕವಿತೆಯನ್ನು ಆಸ್ವಾದಿಸಿ ಓದಿದಂತೆ ವಿಮರ್ಶೆಯನ್ನು ಓದಿದೆ.
        ಅಭಿನಂದನೆಗಳು ಸುಭಾಷ್ ಪಟ್ಟಾಜೆ.
        ಪತ್ರಾರ್ಜಿತ ಪುಸ್ತಕ ಓದಲೇ ಬೇಕು.ವಂದನೆಗಳು

        Reply
    2. ಡಾ. ಸುಭಾಷ್ ಪಟ್ಟಾಜೆ on June 6, 2024 2:15 pm

      ಧನ್ಯವಾದಗಳು ಸರ್

      Reply
    3. Shobha V Bhat on June 6, 2024 5:33 pm

      Shashikalakka asadharana vyakti. AVara patragalannu odi nanna drusti kona vanne badalisiddene. Avarondige 1/2 gante matadidare navu hosa hurupu talutteve. Namma Tumba Samasyegalige avaralli Uttar ede.

      Reply
    4. ಮಹಾಲಿಂಗೇಶ್ವರ ಎಸ್ ಪಿ on June 7, 2024 10:46 am

      ಸಹೃದಯ ವಿಮರ್ಶೆಗಾಗಿ ,ಅಭಿಮಾನದ ಅಭಿನಂದನೆಗಳು ಪ್ರಿಯ ಡಾ ಸುಭಾಷ್
      Pattaje.

      Reply
    5. ಕವಿತಾ ಕೂಡ್ಲು on June 8, 2024 7:46 pm

      ಕಾವ್ಯಾತ್ಮಕ ವಿಮರ್ಶೆ,ಸುಂದರವಾದ ಕವಿತೆಯನ್ನು ಆಸ್ವಾದಿಸಿ ಓದಿದಂತೆ ವಿಮರ್ಶೆಯನ್ನು ಓದಿದೆ.
      ಅಭಿನಂದನೆಗಳು ಸುಭಾಷ್ ಪಟ್ಟಾಜೆ.
      ಪತ್ರಾರ್ಜಿತ ಪುಸ್ತಕ ಓದಲೇ ಬೇಕು.ವಂದನೆಗಳು

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.