ಗಿರಿಮನೆ ಶ್ಯಾಮರಾವ್ ಅವರ ಮನೋವೈಜ್ಞಾನಿಕ ಕಾದಂಬರಿ ಸರಣಿಯ ನಾಲ್ಕನೇ ಕೃತಿಯಾಗಿರುವ ‘ಸಂಪ್ರಾಪ್ತಿ’ ಎಂಬ ಕಾದಂಬರಿಯು ಬದುಕಿನ ಪ್ರತಿಯೊಂದು ಆಯಾಮಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಮಾನಸಿಕ ಸ್ವಾಸ್ಥ್ಯದ ಕುರಿತು ಚರ್ಚಿಸುತ್ತದೆ.
ಮೇಲ್ನೋಟಕ್ಕೆ ಸಾಮಾಜಿಕ ಕಾದಂಬರಿಯಂತೆ ಕಾಣುತ್ತಿದ್ದರೂ ಮನೋವೈಜ್ಞಾನಿಕ ಅಂಶಗಳನ್ನು ಓದುಗರ ಸೂಕ್ಷ್ಮ ದೃಷ್ಟಿಗೆ ಕಾಣುವಂತೆ ಚಿತ್ರಿಸಿರುವ ಲೇಖಕರು ವ್ಯಕ್ತಿಯ ಮನಸ್ಥಿತಿಗಳು ಕೌಟುಂಬಿಕ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರುವ ರೀತಿ, ಹದಗೆಟ್ಟ ಮಾನಸಿಕ ಪರಿಸ್ಥಿತಿಯಿಂದ ಏಳಬಹುದಾದ ಗುಲ್ಲುಗಳು ಜೀವನದ ಏರು ಪೇರುಗಳಿಗೆ ಮುನ್ನುಡಿ ಬರೆಯುವ ವಿಧಾನವನ್ನು ವಿವರಿಸುತ್ತದೆ.
ಸಭ್ಯನೂ, ಸಹೃದಯಿಯೂ, ಅಪಾರ ತಾಳ್ಮೆಯುಳ್ಳವನೂ ಆದ ರವಿಶಂಕರ್ ಯಾರಿಗೂ ಕೇಡು ಬಗೆಯದ ವ್ಯಕ್ತಿ. ತನಗೆ ಕೇಡು ಬಗೆದವರನ್ನು ದ್ವೇಷಿಸದೆ, ಅವರಲ್ಲಿ ನೈತಿಕತೆಯನ್ನು ಪೋಷಿಸುವ ವಿಶಾಲ ಮನೋಭಾವದವನು. ತಾಯಿಯ ಮುದ್ದಿನ ಮಗನಾಗಿ, ಕವಿತಾಳ ಪ್ರೀತಿಯ ಅಣ್ಣನಾಗಿ ಕುಟುಂಬದ ಹೊಣೆ ಹೊತ್ತ ರವಿಶಂಕರ್ ವೃತ್ತಿಧರ್ಮದಲ್ಲೂ ಸಾರ್ಥಕತೆ ಕಾಣುವ ಸಲುವಾಗಿ ಉನ್ನತ ವ್ಯಾಸಂಗಕ್ಕೆ ಸಿದ್ಧತೆ ನಡೆಸುವಾಗ ಪರಿಚಿತಳಾದ ತನ್ನ ತಂಗಿಯ ಗೆಳತಿ ವಿನುತಾಳ ಅಕ್ಕ ಚಿತ್ರಾಳನ್ನು ಪ್ರೇಮಿಸಿ, ಕುಟುಂಬಸ್ಥರ ಸಮ್ಮುಖದಲ್ಲೇ ವಿವಾಹವಾಗುವ ಮೂಲಕ ದಾಂಪತ್ಯ ಬದುಕಿಗೆ ಕಾಲಿಡುವ ಸಂತಸದ ವಾತಾವರಣವನ್ನು ನಿರ್ಮಿಸಿದ ಲೇಖಕರು ಭವಿಷ್ಯದಲ್ಲಿ ನಡೆಯಬಹುದಾದ ಭೀಕರ ಘಟನಾವಳಿಗಳ ಪರಿಕಲ್ಪನೆ ಕೊಂಚವೂ ಇಲ್ಲದಂತೆ ಚಿತ್ರಿಸಿರುವುದು ಅವರ ಕಥನ ಕಲೆಗೆ ಸಾಕ್ಷಿಯಾಗಿದೆ. ರಾಂಕ್ ವಿಜೇತ ವಿದ್ಯಾರ್ಥಿನಿಯಾದ ಚಿತ್ರ ಕಾಲೇಜಿನಲ್ಲಿದ್ದಾಗಲೇ ‘ಬ್ಯೂಟಿ ಕ್ವೀನ್’ ಎಂದು ಕರೆಸಿಕೊಂಡರೂ ಹೊಗಳಿಕೆಗೆ ಉಬ್ಬದ, ಗುರಿಯನ್ನು ಮರೆಯದ ನಿರ್ಲಿಪ್ತ ಸ್ವಭಾವದವಳಾಗಿರುತ್ತಾಳೆ. ರಾಂಕ್ ಪದವಿ ಮತ್ತು ನಿರಂತರವಾಗಿ ಹರಿದು ಬರುತ್ತಿದ್ದ ಓಲೈಕೆಗಳ ಕಾರಣದಿಂದ ಅಹಂಭಾವ ರೂಢಿಸಿಕೊಳ್ಳದೆ ಎಲ್ಲರನ್ನೂ ನಿಷ್ಕಲ್ಮಶ ಮನಸ್ಸಿನಿಂದ ಕಾಣುತ್ತಿದ್ದ ಶಾಂತ ಮನಸ್ಸಿನ ಚಿತ್ರ ಅಚಾನಕ್ಕಾಗಿ ಮನೆ ಬಿಟ್ಟು ಹೋಗುವುದರೊಂದಿಗೆ ಗಂಡನಾದ ರವಿಶಂಕರನ ಬದುಕಿನಲ್ಲಿ ವಿರಹದ ಬಿರುಗಾಳಿಯನ್ನು ಎಬ್ಬಿಸುವುದಲ್ಲದೆ, ರವಿ ಮತ್ತು ಚಿತ್ರಾಳ ಜೊತೆ ಹೆಣೆದ ಇತರ ನಂಟುಗಳೂ ಬೆಳಕಿಗೆ ಬಂದು ಕಾದಂಬರಿಯ ಅಚ್ಚರಿದಾಯಕ ತಿರುವಿಗೆ ಕಾರಣವಾಗುತ್ತದೆ.
ತನ್ನ ಒಲವಿನ ದೇವತೆಯಾಗಿ, ಬಾಳ ಸಂಗಾತಿಯಾಗಿ, ತನ್ನ ಎಲ್ಲ ವಿಧದ ಸಂತಸಗಳಿಗೆ ಕಾರಣಳಾಗಿದ್ದ ಚಿತ್ರಾಳ ಅನಿರೀಕ್ಷಿತ ಕಣ್ಮರೆ ರವಿಶಂಕರನನ್ನು ಅತೀವ ಚಿಂತೆಗೆ ದೂಡುವುದರೊಂದಿಗೆ ನಾನಾ ತರಹದ ಯೋಚನೆಗಳಿಗೆ ನಾಂದಿ ಹಾಡುತ್ತದೆ. ಒಂದೆಡೆ ಪತಿಯಾದ ತನ್ನ ಮನಸ್ಸನ್ನು ಅರಿತುಕೊಳ್ಳದೆ, ತನ್ನ ಚಿಂತೆಯನ್ನು ಹಂಚಿಕೊಳ್ಳದೆ ತನ್ನಿಂದ ಬೇರ್ಪಟ್ಟ ಚಿತ್ರಾಳನ್ನು ಕುರಿತ ಅಸಹನೆ ರವಿಶಂಕರನನ್ನು ಪರಿಸ್ಥಿತಿಗೆ ಒಗ್ಗಿಕೊಳ್ಳುವಂತೆ ಮಾಡಿದರೆ ಇನ್ನೊಂದೆಡೆ ತನ್ನ ಮನಸ್ಸಿನಲ್ಲಿ ಈ ಮೂಲಕ ಏಳಬಹುದಾದ ತಲ್ಲಣಗಳನ್ನು ಹಂಚಿಕೊಳ್ಳುವ ಮುನ್ನವೇ ಅದನ್ನು ಗ್ರಹಿಸಿ ಸಮಾಧಾನಿಸುವ ಚಿತ್ರಾಳ ತಂಗಿ ವಿನುತಾಳ ನಡವಳಿಕೆಯಿಂದ ನೆಮ್ಮದಿ ಕಾಣುವ ಬಗೆ ರವಿಶಂಕರನ ತಾಯಿ ಸುನಂದಮ್ಮನಲ್ಲಿ ಹೊಸ ಚಿಂತನೆಯೊಂದನ್ನು ಮೂಡಿಸುತ್ತದೆ. ತನ್ನ ನಿರ್ಧಾರವನ್ನು ಸಮರ್ಥಿಸುತ್ತಾ ಮನೆ ಬಿಟ್ಟು ಹೋದ ಅಕ್ಕನನ್ನು ಖಂಡಿಸುವ ವಿನುತಾಳನ್ನು ಚಿತ್ರಾಳಿಗಿಂತ ಹೆಚ್ಚು ನೆಚ್ಚಿಕೊಳ್ಳುವ ಸುನಂದಮ್ಮ ಆಕೆಯ ಬಳಿ ರವಿಶಂಕರನ ಎರಡನೇ ವಿವಾಹದ ಪ್ರಸ್ತಾಪವನ್ನು ಮಾಡುತ್ತಾಳೆ. ಈ ಮಧ್ಯೆ ತನ್ನಕ್ಕ ಚಿತ್ರಾಳೊಂದಿಗೆ ಕಾಲೇಜು ದಿನಗಳಲ್ಲಿ ಸಲುಗೆಯಿಂದ ಇರುತ್ತಿದ್ದ ಶಚೀಂದ್ರ ಚಿತ್ರಾಳ ಸುತ್ತ ಹೆಣೆದ ಬಲೆಯನ್ನು ಭೇದಿಸುವ ವಿನುತಾ, ತನ್ನಕ್ಕನ ಕಠಿಣ ನಿರ್ಧಾರದ ಹಿನ್ನಲೆಯನ್ನು ರವಿಶಂಕರನಿಗೆ ತಿಳಿಸುವಲ್ಲಿಗೆ ಕಥೆ ಒಂದು ಹಂತಕ್ಕೆ ತಲುಪುವುದರೊಂದಿಗೆ, ತೀವ್ರಗತಿಯಲ್ಲಿ ಕಾಣುವ ಸಾಮಾಜಿಕ ಬದಲಾವಣೆಗಳೇ ಅಕ್ಕನ ನಡತೆಗೆ ಕಾರಣ ಎಂಬ ನಿಗಮನವು ಸದ್ಯದ ಸಾಮಾಜಿಕ ಪರಿಸ್ಥಿತಿಯನ್ನು ಪ್ರತಿ ಬಿಂಬಿಸುತ್ತದೆ. ಹುಟ್ಟಿನಿಂದಲೇ ಅಕ್ಕನನ್ನು ಬಲ್ಲ ವಿನುತಾ ಅದಕ್ಕೆ ವ್ಯತಿರಿಕ್ತವಾಗಿ ವರ್ತಿಸಿದಾಗಲೂ ವಿನುತಾಳ ವರ್ತನೆಯನ್ನು ವಿರೋಧಿಸುವ ರವಿಶಂಕರ್ ಪುರುಷ ಪ್ರಧಾನ ಸಮಾಜದಲ್ಲೂ ಸ್ತ್ರೀಯನ್ನು ಗೌರವಿಸುವ ವ್ಯಕ್ತಿಯಾಗಿ ಕಂಡು ಬರುವುದು ಪ್ರಸ್ತುತ ಸಮಾಜದಲ್ಲಿ ಘಟಿಸಲೇಬೇಕಾದ ಬಹುಮುಖ್ಯ ಬದಲಾವಣೆಯನ್ನು ಸೂಚಿಸುತ್ತದೆ. ಎಲ್ಲರೊಂದಿಗೂ ನಗು ನಗುತ್ತಾ ಬೆರೆತು ಬದುಕಲು ಬಯಸುತ್ತಿದ್ದ ಚಿತ್ರಾಳ ವರ್ತನೆ ನಿಗೂಢವಾಗುತ್ತಾ ಹೋಗುತ್ತಿದ್ದರೂ ಚಿತ್ರಾಳ ಬಗ್ಗೆ ರವಿಶಂಕರನ ಮನದಲ್ಲಿ ಬೇರೂರಿದ್ದ ಪ್ರೇಮವು ಮಾಸದೇ ಉಳಿಸಿಕೊಳ್ಳುವ ಬಗೆಯು ಮಾಡುತ್ತಿದ್ದದ್ದು ಗಂಡ ಹೆಂಡತಿಯರ ನಡುವೆ ಇರಬೇಕಾದ ನಂಬುಗೆಯನ್ನು ಧ್ವನಿಸುತ್ತದೆ.
ಅತಿಯಾದ ಆಪ್ತತೆ ಕ್ರಮೇಣ ಪ್ರೇಮಕ್ಕೆ ತಿರುಗಿ ಹೊಸ ಬಗೆಯ ಭಾವನೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಅರಿವಿಗೆ ತಂದುಕೊಳ್ಳುವ ರವಿಶಂಕರ್ ಮತ್ತು ವಿನುತಾ ಅದನ್ನು ಪರಸ್ಪರ ತೋರಿಸಿಕೊಳ್ಳದೆ, ಅವುಗಳಿಂದ ವಿಮುಖಗೊಳ್ಳುವುದು ಅವರ ಮಾನಸಿಕ ಸದೃಢತೆಯನ್ನು ವ್ಯಕ್ತಪಡಿಸುತ್ತದೆ. ಭಾವನಾತ್ಮಕತೆ ಹಾಗೂ ಮನಸ್ಸಿನ ವಿಚಾರದಲ್ಲಿ ಪುರುಷನಷ್ಟು ಹೆಣ್ಣು ದೃಢಮನಸ್ಕಳಲ್ಲ ಎಂದು ವ್ಯಾಖ್ಯಾನಿಸಿರುವ ಕಾಲದಲ್ಲಿ ವಿನುತಾಳಂಥ ಪಾತ್ರ ಅವುಗಳಿಂದ ಹೊರತಾಗಿ ನಿಂತು, ಬದುಕಿನಲ್ಲಿ ನೈತಿಕವಾಗಿ ಮುನ್ನಡೆಯುವ ಕ್ರಮವು ಆಕೆಯ ಸಕಾರಾತ್ಮಕ ಬೆಳವಣಿಗೆಗೆ ಪೂರಕವಾಗಿದೆ. ಕಾಲೇಜು ದಿನಗಳಲ್ಲೇ ತನ್ನನ್ನು ಪ್ರೀತಿಸುತ್ತಾ, ತನ್ನ ಸಾಮೀಪ್ಯವನ್ನೇ ನಿರೀಕ್ಷಿಸುತ್ತಿದ್ದ ಸಹಪಾಠಿ ಸಂತೋಷನ ಪ್ರೇಮ ನಿವೇದನೆಗೆ ಸ್ಪಂದಿಸುವ ವಿನುತಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ಸು ಕಾಣುತ್ತಾಳಲ್ಲದೇ ಮನೆ ತೊರೆದು ಹೋದರೂ ಎಲ್ಲಿಯಾದರೂ ಒಂದು ಕಡೆ ಉಸಿರಾಡುತ್ತಿರುವ ಅಕ್ಕ ಚಿತ್ರಾಳ ದೃಷ್ಟಿಯಲ್ಲಿ ತಪ್ಪಿತಸ್ಥಳಾಗುವುದರಿಂದ ತಪ್ಪಿಸಿಕೊಂಡು ತನ್ನ ಸಂಯಮದ ಶಕ್ತಿಯನ್ನು ಎತ್ತಿ ಹಿಡಿಯುವ ಮೂಲಕ ಈಗಿನ ಹೆಂಗಸರ ಮಾರ್ಗದರ್ಶಕಳಾಗಿ ಗೋಚರಿಸುತ್ತಾಳೆ.
‘ಕಾಲ ಎಲ್ಲವನ್ನೂ ಮರೆಸುತ್ತದೆ’ ಎಂಬ ಮಾತನ್ನು ಅದೆಷ್ಟು ಅನ್ವರ್ಥವಾಗಿ ವಿನುತಾ ಹಾಗೂ ರವಿಶಂಕರ್ ಭಾವಿಸುತ್ತಾರೋ? ಒಟ್ಟಿನಲ್ಲಿ ವಿನುತಾಳ ವಿವಾಹ ರವಿಶಂಕರನ ಬದುಕಿಗೊಂದು ತಿರುವು ನೀಡಿದ್ದು ಸುಳ್ಳಲ್ಲ. ಪತಿ ಸಂತೋಷನೊಂದಿಗೆ ಹೊರ ರಾಜ್ಯಕ್ಕೆ ತೆರಳಿದ ವಿನುತಾ ಮನಃಶಾಸ್ತ್ರದ ಅಧ್ಯಯನವನ್ನು ಬಲು ಆಸ್ಥೆಯಿಂದ ಮುಂದುವರೆಸಿದರೆ ಇತ್ತ ರವಿಶಂಕರ್ ದಿನೇ ದಿನೇ ಹದಗೆಡುತ್ತಿರುವ ತನ್ನ ತಾಯಿಯ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡನೇ ಮದುವೆಗೆ ಒಪ್ಪಿಗೆ ಸೂಚಿಸುತ್ತಾನೆ. ತನ್ನ ಈ ನಿರ್ಧಾರಕ್ಕೆ ತಾನೆಷ್ಟರ ಮಟ್ಟಿಗೆ ನ್ಯಾಯ ಒದಗಿಸಲು ಸಾಧ್ಯ ಎಂಬ ಪ್ರಶ್ನೆಗೆ ಸ್ವತಃ ರವಿಶಂಕರನಲ್ಲೇ ಉತ್ತರವಿರುವುದಿಲ್ಲ. ತನ್ನ ತಂಗಿ ಕವಿತಾಳ ಗಂಡನ ದೂರದ ಸಂಬಂಧಿಯಾಗಿದ್ದ ಸರಸಿ ಅಷ್ಟೇನೂ ಚೆಲವೆಯಾಗಿರದಿದ್ದರೂ ಮನೆವಾರ್ತೆಯ ಮಟ್ಟಿಗೆ ಜಾಣೆಯಾಗಿದ್ದಳೆಂಬ ಕಾರಣಕ್ಕೆ ಸ್ವತಃ ಕವಿತಾಳೇ ಮುಂದೆ ನಿಂತು ತನ್ನಣ್ಣನಿಗೆ ಈ ಸಂಬಂಧದ ಕುರಿತು ಮನವರಿಕೆ ಮಾಡುತ್ತಾಳೆ. ಪರಿಸ್ಥಿತಿಗೆ ಮಣಿದು, ವಯಸ್ಸಾದ ತನ್ನ ತಾಯಿಯ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಮುಂದುವರೆದ ರವಿಶಂಕರ್ ಸರಸಿಯನ್ನು ವಿವಾಹವಾಗುವ ಮೂಲಕ ಎರಡನೇ ದಾಂಪತ್ಯ ಜೀವನಕ್ಕೆ ಮುಂದಡಿಯಿಡುವ ಬಗೆ ಕಾದಂಬರಿಯಲ್ಲಿ ತಿರುಳನ್ನು ನಿರೂಪಿಸುವ ಅಂಶವಾಗಿ ಕಂಡುಬರುತ್ತದೆ.
ಚಿತ್ರಾಳ ಅಗಲಿಕೆಯನ್ನೇ ನೆಪವಾಗಿಟ್ಟುಕೊಂಡು ದಿನಚರಿ ಬರೆಯುವ ರವಿಶಂಕರನಿಗೆ ಸರಸಿಯ ಆಗಮನದಲ್ಲಿ ಅಂಥ ವಿಶೇಷತೆ ಕಂಡುಬರುವುದಿಲ್ಲ. ದಿನವಿಡೀ ದುಡಿದು ಸಂಜೆಯ ಹೊತ್ತಿಗೆ ಮನೆಗೆ ಬರುವ ತನ್ನನ್ನೇ ಚಾತಕ ಪಕ್ಷಿಯಂತೆ ನಿರೀಕ್ಷಿಸುತ್ತಾ, ತನ್ನೆಲ್ಲಾ ಬೇಕು ಬೇಡಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾ, ಪ್ರೀತಿಯನ್ನು ಮೊಗೆ ಮೊಗೆದು ನೀಡುತ್ತಿದ್ದ ಚಿತ್ರಾಳಲ್ಲೇ ಅನುರಕ್ತನಾಗಿದ್ದ ರವಿಶಂಕರನಿಗೆ ಹೆಂಡತಿಯಾದ ತನ್ನ ಪರಿವೆ ಇಲ್ಲದಂತೆ ಇಪ್ಪತ್ನಾಲ್ಕು ಗಂಟೆ ದುಡಿಯುತ್ತಾ ಕೃಶವಾಗಿ ತನ್ನ ಬಳಿ ಬರುತ್ತಿದ್ದ ಸರಿಸಿಯೆಡೆಗೆ ಯಾವುದೇ ಭಾವನೆಗಳನ್ನು ತೋರಲು ಅಸಮರ್ಥನಾಗುವ ಬಗ್ಗೆ ಕಾದಂಬರಿಯಲ್ಲಿ ಮನಮುಟ್ಟುವಂತೆ ವಿವರಿಸಿದ ಬಗೆಯು ಸರಸಿಯ ವೈಯಕ್ತಿಕ ಬದುಕನ್ನು ಓದುಗರ ಮುಂದೆ ಅನಾವರಣಗೊಳಿಸುವ ಪೂರ್ವ ಸಿದ್ಧತೆಯಂತೆ ಕಂಡು ಬರುತ್ತದೆ.
ವರ್ತಮಾನ ಮತ್ತು ಭವಿಷ್ಯದ ಕುರಿತು ಸ್ಪಷ್ಟ ನಿಲುವು ತಾಳಲಾರದೆ ಡೋಲಾಯಮಾನಗೊಳ್ಳುವ ರವಿಶಂಕರನ ಮನೆಯಲ್ಲಿ ಸರಸಿ ಸೊಸೆಯ ಪಟ್ಟವನ್ನೇರಿದರೂ ಆತನ ಮನಸ್ಸು ಸರಸಿಗೆ ಪತ್ನಿಯ ಸ್ಥಾನವನ್ನು ನೀಡುವಲ್ಲಿ ಹಿಂಜರಿಯುವ ಬಗೆ ಎಲ್ಲೋ ಜೀವಂತವಾಗಿರುವ ಚಿತ್ರಾಳ ಬಗೆಗೆ ಆತ ಉಳಿಸಿಕೊಂಡಿರುವ ಪ್ರೇಮದ ಆಳವನ್ನು ಪ್ರತಿನಿಧಿಸುತ್ತದೆ. ಹುಟ್ಟಿನಿಂದಲೂ ಬೈಗುಳ, ಮನೆವಾರ್ತೆಯಂತಹ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದುಕೊಂಡು ತುಂಬು ಕುಟುಂಬದಲ್ಲಿ ಮನೆ ಮಗಳಾಗಿ ಬೆಳೆದ ರೀತಿ ಸರಸಿಯ ವರ್ತಮಾನದ ಬದುಕಿನಲ್ಲಿ ಉಸಿರಾಡುವ ಬಗೆಯನ್ನು ಗಮನಿಸಿದ ರವಿಶಂಕರನಿಗೆ ಆ ಕುರಿತು ಏನೂ ಮಾಡಲಾಗದ ಅಸಹಾಯಕತೆ ತಲೆದೋರಿದರೂ ಪತಿಯಾಗಿ ತನ್ನ ಕರ್ತವ್ಯದಿಂದ ವಿಮುಖನಾಗದ ರವಿಶಂಕರ್ ಸರಸಿಯ ಮಡಿಲು ತುಂಬುವಲ್ಲಿ ಸಫಲನಾದರೂ ಆ ಕುರಿತು ಸಂತಸ ವ್ಯಕ್ತಪಡಿಸುವುದಿಲ್ಲ. ದಾಂಪತ್ಯ ಬದುಕಿನ ಸಾರ್ಥಕತೆಯನ್ನು ಮಗುವನ್ನು ಪಡೆಯುವ ಮೂಲಕ ಸಂಪನ್ನಗೊಳಿಸಲು ಬಯಸಿದ ಸರಸಿಯ ನಡೆ ಯಶಸ್ಸು ಕಂಡರೂ ಅವಳ ಯೋಚನೆಗೆ ವಿರುದ್ಧವಾಗಿ ಸಾಗುವ ರವಿಶಂಕರನಿಗೆ ಪ್ರೀತಿ, ಪ್ರೇಮ ಮತ್ತು ಸಾಮರಸ್ಯವಿಲ್ಲದ ದಾಂಪತ್ಯದಲ್ಲಿ ಸಾರ್ಥಕತೆ ಎಂಬುದು ಮುಗಿಲು ಮಲ್ಲಿಗೆ ಎಂದು ಭಾವಿಸುವ ಬಗೆ ನಿಜವಾದ ದಾಂಪತ್ಯ ಬದುಕಿನ ವ್ಯಾಖ್ಯೆಯನ್ನು ಓದುಗರ ಮುಂದೆ ಕಟ್ಟಿಕೊಡುತ್ತದೆ.
ಓಡುತ್ತಿರುವ ಕಾಲ ಯಾರನ್ನೂ ನಿರೀಕ್ಷಿಸದೇ ಸಾಗುವಂತೆ ರವಿಶಂಕರನ ಬದುಕಿನ ನಾವೆ ಸುಖ ದುಃಖಗಳ ನಡುವೆ ತೇಲುತ್ತಾ ಸಾಗುವಾಗಲೇ ಸರಸಿಯ ಮತ್ತೊಂದು ಮುಖದ ಅನಾವರಣವು ಸಮಾಜದಲ್ಲಿ ಜ್ವಲಂತವಾಗಿರುವ ಸಮಸ್ಯೆಗಳ ತೀವ್ರತೆಯನ್ನು ತಿಳಿಯ ಪಡಿಸುತ್ತದೆ. ವಿನಾಕಾರಣ ಮಾತಿಗೆ ಮಾತು ಬೆಳೆಸಿ ತನ್ನತ್ತೆಯೊಡನೆ ಜಗಳವಾಡುವ ಸರಿಸಿ ಪತಿಯ ಬೇಕು ಬೇಡಗಳನ್ನು ಯಾಂತ್ರಿಕವಾಗಿ ಪೂರೈಸುತ್ತಿದ್ದರೂ ರವಿಶಂಕರನ ಮನಸ್ಸಿಗೆ ಹಿತವೆನಿಸದ ಭಾವ ಅವನ ನಿತ್ಯದ ಬದುಕಿನ ಬದಲಾವಣೆಗಳಿಗೆ ಕಾರಣವಾಗುತ್ತದೆ. ಸರಸಿ ಹಾಗೂ ತನ್ನ ದಾಂಪತ್ಯ ಜೀವನದ ಕುರುಹಾಗಿ ಜನಿಸಿದ ಮಗಳು ‘ಕ್ಷಮಾ’ಳಲ್ಲಾದರೂ ತಕ್ಕಮಟ್ಟಿನ ನೆಮ್ಮದಿಯನ್ನು ಕಾಣುತ್ತಾ ಉಪನ್ಯಾಸಕ ವೃತ್ತಿಯಲ್ಲಿ ಮುನ್ನಡೆಯುತ್ತಿದ್ದ ರವಿಶಂಕರ್ ತನ್ನ ಅಧ್ಯಯನವನ್ನು ಮುಂದುವರೆಸುತ್ತಾ, ತನ್ನ ಪ್ರಾಮಾಣಿಕ ಸೇವೆಯೇ ಫಲವಾಗಿ ಕಾಲೇಜಿನ ಪ್ರಾಂಶುಪಾಲನ ಹುದ್ದೆಯನ್ನಲಂಕರಿಸುವುದರೊಂದಿಗೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ನಡೆಯುವ ವ್ಯಕ್ತಿತ್ವ ವಿಕಸನ ಶಿಬಿರಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬದುಕಿನ ಏಳು ಬೀಳುಗಳನ್ನು ಸರಿದೂಗಿಸುವ ಬಗೆಯನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾಗುತ್ತಾನೆ. ಈ ಮಧ್ಯೆ ಸರಸಿಯ ನಡೆ ಆಕೆಯ ಮಾನಸಿಕ ಅಸ್ವಸ್ಥತೆಯನ್ನು ಸ್ಪಷ್ಟಪಡಿಸುವುದಲ್ಲದೇ ಸರಸಿಯ ಜೀವನದಲ್ಲಿ ಒದಗಿ ಬರಬಹುದಾದ ದಾರುಣ ಅಂತ್ಯವನ್ನು ಮೊದಲೇ ಸೂಚಿಸುವ ಅಂಶವಾಗಿ ಗೋಚರಿಸುತ್ತದೆ. ಅತ್ತೆ ಸುನಂದಮ್ಮನೊಡನೆ ಮಾತು ಮಾತಿಗೂ ಜಗಳ ಮಾಡುವ ಸರಸಿ ಮಗಳು ಕ್ಷಮಾಳ ವಿಚಾರದಲ್ಲಿ ಮಾತ್ರ ಯಾವುದೊಂದು ಲೋಪವನ್ನೂ ಎಸಗದಿರುವುದು ತಾಯ್ತತನ ಸಂಪೂರ್ಣತೆಯನ್ನು ಓದುಗರಿಗೆ ಸ್ಪಷ್ಟಪಡಿಸುತ್ತದೆ. ನಿಮಿಷಕ್ಕೊಮ್ಮೆ ತನ್ನ ಗುಣಸ್ವಭಾವಕ್ಕೆ ನಿರ್ದಿಷ್ಟತೆಯನ್ನು ಒದಗಿಸಲಾರದೇ ಚಡಪಡಿಸುವ ಸರಸಿಯನ್ನು ಮನೋರೋಗಿಯಾಗಿ ಚಿತ್ರಿಸುವ ಕಾದಂಬರಿ ಆ ಮೂಲಕ ಮಾನಸಿಕ ಅಸ್ವಸ್ಥತೆ ಬದುಕಿನ ಸಂಪನ್ನತೆಯನ್ನು ಯಾವ ರೀತಿ ಕಸಿಯಬಲ್ಲದು ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಜಗಳ, ಸ್ವಾರ್ಥ, ಅಳು, ನಗು, ನಿರಾಸೆಯಂತಹ ಭಾವನೆಗಳನ್ನು ನಿಯಂತ್ರಿಸಲಾಗದೆ ದಿನನಿತ್ಯದ ಬದುಕಿನಲ್ಲಿ ಹೊಯ್ದಾಡುವ ಸರಸಿಗೆ ಮನೋವೈದ್ಯನಾದ ಡಾ. ಯಶೋಧರನ್ ಕೂಡ ಪರಿಹಾರ ಸೂಚಿಸಲು ವಿಫಲನಾಗುತ್ತಾನೋ ಎಂಬಂತೆ ಘಟಿಸುವ ಸರಸಿಯ ಅಕಾಲಿಕ ಮರಣ ಓದುಗರ ಮನದಲ್ಲಿ ಅವಳ ಬಗ್ಗೆ ಕನಿಕರವನ್ನು ಉಂಟು ಮಾಡುತ್ತದೆ. ಬಾಲ್ಯದ ತುಂಟಾಟಗಳಲ್ಲಿ ಮುಳುಗಿ ಹೋಗಿದ್ದ ಮಗಳು ಕ್ಷಮಾಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿ, ಆಕೆಯನ್ನು ಶಿಕ್ಷಿಸಲು ಮುಂದಾಗುವುದೇ ಸರಸಿಯ ಪ್ರಾಣಕ್ಕೆ ಎರವಾಗುತ್ತದೆ. ಕೋಪದ ಕೈಗೆ ಬುದ್ಧಿ ಕೊಟ್ಟ ಸರಸಿ ಮಗಳನ್ನು ದಂಡಿಸುವ ಬಗೆ ಪರಿಣಾಮದಲ್ಲಿ ಆಕೆ ಪ್ರಜ್ಞೆ ತಪ್ಪಿ ಬೀಳುವಂತೆ ಮಾಡುವುದು ಸರಸಿಯ ಮನದಲ್ಲಿ ಸಲ್ಲದ ಚಿಂತೆಯ ತರಂಗವನ್ನು ಎಬ್ಬಿಸುತ್ತದೆ. ಇಹದ ಪರಿವೆ ಇಲ್ಲದಂತೆ ಮಲಗಿದ್ದ ಕ್ಷಮಾಳ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ದುಡುಕುವ ಸರಸಿ ತಾನೆಸಗಿದ ತಪ್ಪನ್ನು ಆತ್ಮಹತ್ಯೆಯ ಮೂಲಕ ನೀಗಿಕೊಳ್ಳಲು ನಿರ್ಧರಿಸುವ ಸ್ಥಿತಿ ಆಕೆಯ ಮನೋವ್ಯಾಧಿಯ ಪರಮಾವಧಿಯಾಗಿ ಮೂಡಿ ಬಂದಿದೆ. ವಾಸ್ತವದಲ್ಲಿ ಕೇವಲ ತಲೆತಿರುಗಿ ಕುಸಿದು ಬಿದ್ದ ಕ್ಷಮಾ ಕಣ್ತೆರೆಯುವ ಹೊತ್ತಿನಲ್ಲಿ ಸರಸಿ ಇನ್ನಿಲ್ಲವಾಗುವುದು ಆಕೆಯ ಮಾನಸಿಕ ಅಸ್ವಸ್ಥತೆಯನ್ನು ಸ್ಪಷ್ಟಪಡಿಸುತ್ತದೆ. ಮಡದಿ ಎಂಬ ಪಟ್ಟವನ್ನು ರವಿಶಂಕರ್ ಸರಸಿಗೆ ನೀಡದೇ ಹೋದರೂ ಆಕೆ ಅವನ ಮಗುವಿನ ತಾಯಿಯಾಗಿ ಕೃತಿಯಲ್ಲಿ ನಿರೂಪಿಸಲ್ಪಟ್ಟಿರುವ ಬಗೆ ಗಮನಾರ್ಹವಾಗಿದೆ. ತನ್ನೊಂದಿಗೆ ಇದ್ದಾಗಲೂ ಇಲ್ಲದಂತಾಗುತ್ತಿದ್ದ ಸರಸಿಯ ಅನುಪಸ್ಥಿತಿ ರವಿಶಂಕರನಲ್ಲಿ ಯಾವುದೇ ಬದಲಾವಣೆಗಳನ್ನು ಉಂಟು ಮಾಡದಿದ್ದರೂ ಮಗಳ ಒಡನಾಟ ತಂದೆ ಮಗುವಿನ ಸಂಬಂಧದ ಕೊಂಡಿಯನ್ನು ಬಿಗುಗೊಳಿಸುತ್ತದೆ.
ಕಾಲಚಕ್ರ ತಿರುಗುತ್ತಿದ್ದಂತೆ ವಿನುತಾಳ ಬದುಕು ಉನ್ನತ ಮಟ್ಟಕ್ಕೇರುವುದು ಶ್ಲಾಘನೀಯವಾದರೆ ರವಿಶಂಕರನ ಪ್ರತಿಭೆ ಹಾಗೂ ಸಾಮರ್ಥ್ಯ ಕುಸಿಯದೆ ನಿರಂತರವಾಗಿ ಅರಳುತ್ತದೆ. ವಿಸ್ಮಯವೂ ವಿಚಿತ್ರವಾಗಿಯೂ ಇರುವ ಮನಸ್ಸನ್ನೇ ಅಧ್ಯಯನದ ಕೇಂದ್ರವಾಗಿರಿಸಿಕೊಂಡ ವಿನುತಾ ತನ್ನ ವೃತ್ತಿ ಬದುಕನ್ನು ಕೂಡ ಅದೇ ನೆಲೆಯಲ್ಲಿ ಕಂಡುಕೊಂಡು ರವಿಶಂಕರನ ಮೆಚ್ಚುಗೆಗೆ ಪಾತ್ರವಾಗುವುದು ಮಾತ್ರವಲ್ಲದೇ ಈರ್ವರೂ ಜೊತೆ ಸೇರಿ ಸಾಕಷ್ಟು ಮಾನಸಿಕ ಸ್ವಾಸ್ಥ್ಯ ಹಾಗೂ ದೃಢತೆಯನ್ನು ಜಾಗೃತಗೊಳಿಸುವಲ್ಲಿ ಕೈಗೊಳ್ಳುವ ಕ್ರಮಗಳನ್ನು ಕೈಗೊಳ್ಳುತ್ತಾರೆ. ಮನಃಶಾಸ್ತ್ರದ ಮುಖ್ಯ ಭಾಗವಾಗಿ ವಿನುತಾ ಕೈಗೊಳ್ಳುತ್ತಿದ್ದ ಕೌನ್ಸಿಲಿಂಗ್ ಕಾರ್ಯಕ್ರಮಕ್ಕೆ ರವಿಯ ಪಾತ್ರವೂ ಮಹತ್ವದ ಕೊಡುಗೆ ನೀಡುತ್ತದೆ. ಮನೋವ್ಯಾಧಿಗಳು, ಜೀವವನ್ನೇ ಹಿಂಡುವ ಮಾರಕ ರೋಗಗಳಲ್ಲೊಂದಾದ ಕ್ಯಾನ್ಸರ್ ಪೀಡಿತ ರೋಗಿಗಳಿರುವ ಆಸ್ಪತ್ರೆಗೆ ಭೇಟಿ ನೀಡಿ, ಬದುಕಿಗೊಂದು ಆಶಾದಾಯಕ ನಾಳೆಗಳನ್ನು ಕಟ್ಟಿಕೊಡಲು ಶ್ರಮಿಸುತ್ತಿದ್ದ ವಿನುತಾ ಮತ್ತು ರವಿಯ ಯತ್ನದಲ್ಲಿ ಕಾಣಸಿಗುವ ಶಚೀಂದ್ರನ ವಾಸ್ತವ ಸ್ಥಿತಿ ಈರ್ವರ ಮನಸ್ಸನ್ನೂ ದ್ರವಿಸುವಂತದ್ದು. ಮಾಡಿದ್ದುಣ್ಣೋ ಮಹರಾಯ ಎಂಬ ಮಾತಿನಂತೆ ಹಣದ ಮದದಿಂದ ನೈತಿಕತೆ ಮೀರಿ ನಡೆಯುತ್ತಾ ಸ್ವೇಚ್ಛೆಯಿಂದ ಮನಬಂದಂತೆ ವರ್ತಿಸಿ ಅನ್ಯರ ಬದುಕಿನ ಸಂತೋಷಕ್ಕೆ ಬೆಂಕಿ ಹಚ್ಚಿದ ಶಚೀಂದ್ರನ ಕರ್ಮಗಳೇ ಆತನ ಜೀವಕ್ಕೆ ಪಾಶವಾಗುತ್ತಿದಂತೆ ಆತ ಅನುಭವಿಸುವ ಮಾರಕ ಕ್ಯಾನ್ಸರ್ ರೋಗ ಆತನ ಕೆಟ್ಟ ಜೀವನಶೈಲಿಗೆ ವಿಧಿಯೇ ವಿಧಿಸಿದ ಶಿಕ್ಷೆ ಎಂಬುದನ್ನು ಮನದಟ್ಟು ಮಾಡಿಕೊಂಡಂತೆ ನಿಟ್ಟುಸಿರಿಡುವ ರವಿ ಹಾಗೂ ವಿನುತಾ ಮರು ಮಾತನಾಡದೇ ತಮ್ಮ ಕರ್ತವ್ಯದಲ್ಲಿ ಜಾಗೃತಗೊಳ್ಳುವುದು ಮಾನವೀಯತೆ ಮತ್ತು ವೃತ್ತಿ ಧರ್ಮದಲ್ಲಿ ಅವರುಗಳು ಹೊಂದಿದ್ದ ಶ್ರದ್ಧೆಯನ್ನು ತೋರಿಸುತ್ತದೆ. ಹೊರ ರಾಜ್ಯಗಳಿಗೂ ಪಾಠ – ಪ್ರವಚನಕ್ಕೆಂದು ಅತಿಥಿಯಾಗಿ ತೆರಳಿ ಅಲ್ಲಿನ ಸಭೆ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದ ರವಿಶಂಕರನಿಗೆ ಒರಿಸ್ಸಾದಿಂದ ಬರುವ ಕರೆ ಅವನ ಬದುಕಿನಲ್ಲಿ ಊಹೆಗೂ ಮೀರಿದ ಅಚ್ಚರಿದಾಯಕ ಘಟನೆಯನ್ನು ಘಟಿಸುವಂತೆ ಮಾಡುತ್ತದೆ.
ಒರಿಸ್ಸಾದ ಕಾಲೇಜೊಂದರಲ್ಲಿ ಸಂಸ್ಕೃತ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಾ, ತನ್ನ ಬದುಕಿನ ನೆನ್ನೆಗಳನ್ನು ನೆನೆದು ಆ ನಿಮಿತ್ತ ಕೊರಗುತ್ತಾ ಬದುಕಿನ ಬಂಡಿಯನ್ನು ಏಕಾಂಗಿಯಾಗಿ ಮುನ್ನಡೆಸುತ್ತಿರುವ ಚಿತ್ರಾಳಿಗೆ ಪತಿ ರವಿಶಂಕರನ ಕುರಿತಾದ ಪ್ರತಿಯೊಂದು ವಿಚಾರಗಳು ಕೂಡ ತಿಳಿದಿರುತ್ತವೆ. ಅವನ ಮುಂದುವರೆದ ಅಧ್ಯಯನ, ಪ್ರಾಂಶುಪಾಲನಾಗಿ ಸಿಕ್ಕಿರುವ ಭಡ್ತಿ, ಸರಸಿಯೊಡನೆ ಮರು ವಿವಾಹ – ಕ್ಷಮಾಳ ಜನನ, ರಾಜ್ಯ ಹೊರರಾಜ್ಯಗಳಲ್ಲಿ ಯಶಸ್ಸು ಕಾಣುತ್ತಿರುವ ಅವನ ಸುದ್ದಿಗಳಿಂದಲೇ ತೃಪ್ತಿ ಕಾಣುವ ಚಿತ್ರಾಳಿಗೆ ತನ್ನ ಕಾಲೇಜಿಗೆ ವ್ಯಕ್ತಿತ್ವ ವಿಕಸನದ ತರಬೇತಿ ನಿಮಿತ್ತ ಬಂದಿರುವ ಪತಿಯನ್ನು ಮಾತನಾಡಿಸಲು ಹಿಂಜರಿಯುವುದು ಆಕೆಯಲ್ಲಿ ಆಳವಾಗಿ ಬೇರೂರಿರುವ ಕೀಳರಿಮೆ ಮತ್ತು ಪಶ್ಚಾತ್ತಾಪದ ಭಾವವನ್ನು ಪ್ರತಿಬಿಂಬಿಸುತ್ತದೆ. ಪ್ರೀತಿಯ ಮಳೆ ಸುರಿಸುತ್ತಿದ್ದ ರವಿಶಂಕರನನ್ನು ಮಾತನಾಡಿಸುವ ಇಚ್ಛೆ ಇದ್ದೂ ಗತಿಸಿದ ಘಟನೆಗಳಿಂದ ದುಃಖತಪ್ತಳಾಗಿ ಹಿಂಜರಿದು ಕೊರಗುವ ಚಿತ್ರಾ ಒಂದೆಡೆಯಾದರೆ ಒರಿಸ್ಸಾದಲ್ಲಿರುವ ಕನ್ನಡತಿಯ ಕುರಿತು ಕಾಲೇಜಿನ ಪ್ರಾಂಶುಪಾಲರಿಂದ ಮಾಹಿತಿ ಪಡೆದು ಆಕೆಯ ಕುರಿತಾಗಿ ತೀವ್ರ ಕೌತುಕಕ್ಕೆ ಒಳಗಾಗುತ್ತಾ ಆಕೆಯಲ್ಲಿ ಆಸಕ್ತನಾಗುವ ರವಿಶಂಕರ್ ಇನ್ನೊಂದೆಡೆ. ಈ ಬಗೆಯ ದ್ವಂದ್ವಗಳಲ್ಲಿ ಸಿಲುಕಿ, ಏನೂ ಮಾಡಲಾಗದ ಸ್ಥಿತಿಯಲ್ಲಿ ತೊಳಲಾಡುವ ಚಿತ್ರ ಮೌನಿಯಾದರೆ, ದ್ವಂದ್ವಗಳನ್ನು ಎದುರಿಸಿ ಸ್ಪಷ್ಟವಾದ ತೀರ್ಮಾನಕ್ಕೆ ಬರುವ ಆಕಾಂಕ್ಷೆಯಿಂದ ಮುಂದುವರೆಯುವ ರವಿಶಂಕರನ ಯೋಚನೆ ಚಿತ್ರಾಳ ಬದುಕಿಗೊಂದು ಭರವಸೆಯ ತಿರುವಿಗೆ ಕಾರಣವಾಗುತ್ತದೆ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ ರವಿ ತನ್ನ ಪ್ರೇಮದಲ್ಲಿ ಇರಿಸಿದ್ದ ಭರವಸೆಯಿಂದಲೇ ಮುಂದುವರೆಯುವ ಯತ್ನ ಮಾಡುತ್ತಾ, ನಟ್ಟಿರುಳಲ್ಲೂ ಹಿಂಜರಿಯದೇ ಕಾಲೇಜಿನ ಹೊರವಲಯದಲ್ಲಿರುವ ವಸತಿ ಗೃಹದಲ್ಲಿ ಏಕಾಂಗಿಯಾಗಿದ್ದ ಚಿತ್ರಾಳನ್ನು ಸಂಧಿಸುತ್ತಾನೆ. ತನ್ನಿಂದ ದೂರ ಸರಿದು ವರುಷಗಳೇ ಸಂದಿದ್ದರೂ ಚಿತ್ರಾ ಮತ್ತು ತನ್ನ ಪುನರ್ಮಿಲನದ ಕ್ಷಣಗಳನ್ನು ಅತ್ಯಂತ ಭರವಸೆಯಿಂದ ನಿರೀಕ್ಷಿಸುತ್ತಿದ್ದ ರವಿಶಂಕರನ ಪಾಲಿಗೆ ಒದಗಿ ಬಂದ ಚಿತ್ರಾಳ ಸಾಮಿಪ್ಯ ಆತ ಈ ತನಕ ಕಳೆದುಕೊಂಡಿದ್ದ ಸಂತೋಷಗಳು ಹಿಂತಿರುಗಿದಂತೆ ಭಾಸವಾಗುತ್ತದೆ. ಪತಿಯಾದ ತನ್ನಲ್ಲಿ ಒಂದು ಮಾತೂ ಆಡದೇ ಮನೆ ತೊರೆದು ಹೋದ ಚಿತ್ರಾ ಆ ಕುರಿತು ನೀಡುವ ಸ್ಪಷ್ಟೀಕರಣಗಳನ್ನು ಕೇಳಲು ನಿರಾಕರಿಸುವ ರವಿಶಂಕರನ ಮನೋಭಾವವು ಆತನು ತನ್ನ ಮಡದಿಯ ಮೇಲೆ ಹೊಂದಿರುವ ಹೊಂದಿದ್ದ ನೈಜ ಪ್ರೀತಿಯ ದ್ಯೋತಕವಾಗಿದೆ. ಈ ಹಿಂದೆ ವಿನುತಾ ನುಡಿದ ಶಚೀಂದ್ರನ ಪ್ರಕರಣವನ್ನೇ ಒತ್ತಿ ಹೇಳುವ ಚಿತ್ರಾ ಆತನಿಂದ ತಾನು ದಮನಕ್ಕೊಳಗಾದ ಸನ್ನಿವೇಶಕ್ಕೆ ಕಿವಿಯಾಗಿಯೂ ಮೊದಲಿನ ರವಿಯಾಗಿಯೇ ಉಳಿಯುವ ಬಗೆಯು ಗಂಡ ಹೆಂಡತಿಯರ ನಡುವಿನ ಸಂಬಂಧದ ಬಿಗಿಯನ್ನು ಓದುಗರಿಗೆ ಅರಿಕೆ ಮಾಡಿಕೊಡುತ್ತದೆ. ತನ್ನಂತೆಯೇ ತನ್ನ ಚಿತ್ರಾ ಎಂಬ ಭಾವವನ್ನು ಮನದಾಳದಲ್ಲಿ ಹೊಂದಿದ್ದ ರವಿಯ ಹೃದಯ ಸಮಯದ ಕೈಗೊಂಬೆಯಾಗಿ ಬದುಕನ್ನು ಯಾತನಾಮಯಗೊಳಿಸಿದ ಚಿತ್ರಾಳೆಡೆಗೆ ನೋವಿನಿಂದ ಮಿಡಿಯುತ್ತದೆಯೇ ಹೊರತು ಕ್ರೋಧದಿಂದಲ್ಲ. ಪಶ್ಚಾತ್ತಾಪದ ಬೆಂಕಿಯಲ್ಲಿ ದಹಿಸಿ ನಿರಾಳತೆಯನ್ನು ಅನುಭವಿಸಿದ ಚಿತ್ರಾಳಿಗೆ ಹಿತವಾದ ಅಪ್ಪುಗೆಯ ಮೂಲಕ ಸಾಂತ್ವನ ನೀಡಿದ ರವಿ ತಮ್ಮಿಬ್ಬರ ಅಗಲಿಕೆಗೆ ವಿದಾಯ ಕೋರುತ್ತಾ, ಬರಲಿರುವ ನಾಳೆಗಳಲ್ಲಿ ಹೊಸ ಕನಸುಗಳನ್ನು ಬಿತ್ತುವ ಬಗೆ ಕಾದಂಬರಿಯ ಅಂತ್ಯದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಗತಿಸಿದ ನಿನ್ನೆಗಳ ನೆನವರಿಕೆಯಲ್ಲಿ ಸುಖವಿಲ್ಲ ಎಂಬ ತೀರ್ಮಾನಕ್ಕೆ ಬರುವ ರವಿ ಹಾಗೂ ಚಿತ್ರಾಳಿಗೆ ನಾಳೆಗಳು ಸುಂದರವಾಗಿ ಕಾಣಿಸುವುದಲ್ಲದೇ ಸಂದು ಹೋದ ವರ್ಷಗಳು ಅಂತರಂಗದಲ್ಲಿ ಬೆಳಗುತ್ತಿರುವ ಪ್ರಾಂಜಲ ಪ್ರೇಮ ಬಂಧವನ್ನು ಅನಾವರಣಗೊಳಿಸುತ್ತದೆ.
ಯಾಂತ್ರಿಕಗೊಳ್ಳುತ್ತಿರುವ ವರ್ತಮಾನದ ಬದುಕಿನಲ್ಲಿ ನಶಿಸುತ್ತಿರುವ ಪ್ರೀತಿ, ಪ್ರೇಮ, ಕಾಳಜಿ, ಸಾಮರಸ್ಯದಿಂದ ತುಂಬಿದ ಬದುಕಿನ ಅಸ್ತಿತ್ವಕ್ಕಾಗಿ ತಡಕಾಡುತ್ತಿರುವ ಸಂದರ್ಭದಲ್ಲಿ ಮೂಡಿಬಂದ ‘ಸಂಪ್ರಾಪ್ತಿ’ ಸಾರುವ ಸಂದೇಶಗಳು ವರ್ತಮಾನದ ಗಹನವಾದ ಸ್ಥಿತಿ ಗತಿಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ತಿಳಿಸುತ್ತಾ, ಪರಿಸ್ಥಿತಿಗಳನ್ನು ತಿಳಿಗೊಳಿಸಲು ಅಗತ್ಯವಾದ ಪರಿಹಾರೋಪಾಯಗಳನ್ನು ಪರಿಚಯಿಸುತ್ತದೆ. ಪ್ರಸ್ತುತ ಕೃತಿಯು ಮಾನವ ಸಹಜ ಗುಣಗಳಿಂದಲೂ ಹಾಗೂ ಪ್ರಚಲಿತದಲ್ಲಿರುವ ತೀವ್ರಗತಿಯ ಸಂಧಿಗ್ಧತೆಗಳನ್ನು ಕೂಲಂಕುಷವಾಗಿ ವಿವರಿಸುತ್ತಾ ಸಾಗುವ ಬಗೆಯು ವರ್ತಮಾನ ಹಾಗೂ ಭವಿಷ್ಯತ್ತಿನಲ್ಲಿ ಸಂಘಟಿಸಬೇಕಾದ ಬದುಕಿನ ಚಿತ್ರಣವನ್ನು ನೀಡಿದರೆ ಎಲ್ಲ ವಿಧದ ಮೆಚ್ಚುಗೆ ಹಾಗೂ ಶ್ಲಾಘನೆಗೆ ಪಾತ್ರವಾಗುವುದರಲ್ಲಿ ಸಂದೇಹವಿಲ್ಲ.
ನಯನ ಜಿ.ಎಸ್.
ಕಾದಂಬರಿಯ ಹೆಸರು : ‘ಸಂಪ್ರಾಪ್ತಿ’
ಲೇಖಕರು : ಗಿರಿಮನೆ ಶ್ಯಾಮರಾವ್
ಪ್ರಕಾಶಕರು : ಗಿರಿಮನೆ ಪ್ರಕಾಶನ, ಸಕಲೇಶಪುರ.
ಬೆಲೆ : ರೂ. 200/-
ನಯನಾ ಜಿ.ಎಸ್ :
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಸರಕಾರಿ ಪದವಿ ಪರ್ವಮ ಕಾಲೇಜು ಬೆಳ್ಳಾರೆ ಎಂಬಲ್ಲಿ ಪೂರೈಸಿರುತ್ತಾರೆ. ಇವರು ತಮ್ಮ ಬಿ.ಎ. ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿಂದ ಪಡೆದಿರುತ್ತಾರೆ. ಹವ್ಯಾಸಿ ಬರಹಗಾರ್ತಿಯಾಗಿರುವ ಇವರ ಅನೇಕ ಲೇಖನಗಳು, ಪ್ರವಾಸ ಕಥನಗಳು, ಕವನಗಳು, ಗಜಲ್ ಗಳು, ಲಲಿತ ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಕುವೆಂಪು ಸಾಹಿತ್ಯ ಪ್ರತಿಷ್ಠಾನ (ರಿ) ಕುಪ್ಪಳ್ಳಿ ಇವರು ಆಯೋಜಿಸಿದ್ದ ‘ಕುವೆಂಪು ಅವರ ನಾಡು – ನುಡಿ ಚಿಂತನೆ’ ವಿಷಯದ ಬಗೆಗಿನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. 2021-22ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಇವೆರಡರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನೂ, 2022-23ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರ ಕಥೆಗಳು ಮತ್ತು ಕವನಗಳು ಆಕಾಶವಾಣಿಯ ದನಿಯಲ್ಲಿ ಬಿತ್ತರಗೊಂಡಿದೆ.
ಲೇಖಕರ ಬಗ್ಗೆ :
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದು, ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.