21 ಮೇ 2023ರಂದು ಮಂಗಳೂರಿನ ಕರಾವಳಿ ಲೇಖಿಕಿಯರ ಮತ್ತು ವಾಚಕಿಯರ ಸಂಘದಲ್ಲಿ ಅನಾವರಣಗೊಂಡ ಕಾಸರಗೋಡಿನ ಸೃಜನಶೀಲ ಬರಹಗಾರ್ತಿ ಶೀಲಾಲಕ್ಷ್ಮೀ ಅವರ ‘ಸರಸ-ಸಮರಸ’ ಕಾದಂಬರಿ ಮನಶಾಸ್ತ್ರ, ಸ್ತ್ರೀ ಸಬಲೀಕರಣಕ್ಕೆ ಹೆಜ್ಜೆಯಾಗಿ, ಮಾನವೀಯತೆಯ ನೆಲೆಯಾಗಿ ಗುರುತಿಸಿಕೊಂಡಿದೆ.
ಕಾದಂಬರಿ ರಚನೆಯ ಕುರಿತು ಲೇಖಕಿ ಶೀಲಾಲಕ್ಷ್ಮೀಯವರು “ಓರ್ವ ತಾಯಿಯಾಗಿ ಮಕ್ಕಳ ಮನಸ್ಸಿನ ಸೂಕ್ಷ್ಮತೆಗಳನ್ನು ಗಮನಿಸುವುದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಅವರ ಮನೋಲ್ಲಾಸಕ್ಕೆ ಮಾರಕವಾಗಿ ಅವರ ವ್ಯಕ್ತಿತ್ವ ರೂಪೀಕರಣದಲ್ಲಿ ಋಣಾತ್ಮಕ ಪರಿಣಾಮ ಬೀರುವಂಥಾ ಹಲವಾರು ಬೆಳವಣಿಗಗಳು ಅವರವರ ಮನೆಯೊಳಗೇ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಅರಿತೋ ಅರಿಯದೆಯೋ ಹೆತ್ತವರೇ ಇದಕ್ಕೆ ಕಾರಣೀಭೂತರಾಗುತ್ತಿರುವುದು ದುರದೃಷ್ಟಕರ. ಒಂದೆರಡು ದಶಕಗಳ ಹಿಂದೆ ವೈದ್ಯಲೋಕದಲ್ಲಿ ಮಾತ್ರ ಉಪಯೋಗಿಸಲ್ಪಡುತ್ತಿದ್ದ ‘ಖಿನ್ನತೆ’ ಅಥವಾ ‘ಡಿಪ್ರೆಷನ್’ ಎನ್ನುವ ಪದ ಇತ್ತೀಚೆಗೆ ಮನೆ ಮನೆಗಳಲ್ಲೂ ಕೇಳಿಬರುತ್ತಿದೆ. ಸ್ಪರ್ಧಾತ್ಮಕ ಜಗತ್ತಿನ ಒತ್ತಡ ಹೆತ್ತವರನ್ನೂ ಮಕ್ಕಳನ್ನೂ ಹೈರಾಣಾಗಿಸುವ ಬಗೆಯು ನನ್ನನ್ನು ಬಹುವಾಗಿ ಕಾಡಿದೆ. ಇದನ್ನೇ ವಸ್ತುವನ್ನಾಗಿಸಿಕೊಂಡು ‘ಸರಸ-ಸಮರಸ’ ಕಥೆ ಸೃಷ್ಟಿಯಾಗಿದೆ” ಎಂದಿದ್ದಾರೆ.
ಆಧುನಿಕ ಬದುಕಿನಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಇಂದು ತಲೆದೋರುತ್ತಿರುವ ಮಾನಸಿಕ ಸಮಸ್ಯೆಗಳು ನೂರಾರು, ಸಾವಿರಾರು. ಹತ್ತಿರವಿದ್ದೂ ದೂರವಾಗುವ ಮನಸ್ಸುಗಳ ಮಧ್ಯೆ ಜೀವಿಸುವ ಮನೋಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಸ್ತ್ರೀ ಪುರುಷರೆಂಬ ವ್ಯತ್ಯಾಸವಿಲ್ಲದೆ ಮಾನವನ ಬಾಲ್ಯಕಾಲದಿಂದ ತೊಡಗಿ ವೃದ್ಧಾಪ್ಯದ ತನಕದ ಬದುಕಿನ ಯಾವುದೇ ಕ್ಷಣದಲ್ಲಿ ಯಾವುದೇ ವಯಸ್ಸಿನಲ್ಲಿ ಆತನಲ್ಲಿ/ಆಕೆಯಲ್ಲಿ ಕಾಣಿಸಿಕೊಳ್ಳುವ ವಿವಿಧ ಜಂಜಾಟ, ಒತ್ತಡ, ಖಿನ್ನತೆ/ಡಿಪ್ರೆಷನ್, ನಿರಾಶಾಭಾವ, ಭಯ, ಅಪರಾಧೀ ಮನೋಭಾವದ ಫಲವಾಗಿ ನಡೆಸುವ ಕೃತ್ಯಗಳು, ಅಸಹಜ ನಡವಳಿಕೆಗಳು – ಅದಕ್ಕಿರುವ ಕಾರಣಗಳ ಹಾಗೂ ಪರಿಹಾರಗಳ ಕುರಿತಾದ ಚರ್ಚೆಗಳನ್ನು ವಿವರವಾಗಿ ನಡೆಸುತ್ತಾ ’ಸರಸ – ಸಮರಸ’ ಕಾದಂಬರಿ ಮುಂದೆ ಸಾಗುತ್ತದೆ. ಈ ಸಂದರ್ಭದಲ್ಲಿ ಖಿನ್ನತೆ/ಡಿಪ್ರೆಷನ್, ಕೌನ್ಸಿಲಿಂಗ್, ಕ್ಲಿನಿಕಲ್ಸೈಕಾಲಜಿ, ಮಾನಸಿಕ ಚಿಕಿತ್ಸೆಯ ವಿಧಗಳು – ಬಿಹೇವಿಯರ್ಥೆರಪಿ, ಗ್ರೂಪ್ಥೆರಪಿ, ಫ್ಯಾಮಿಲಿ ಥೆರಪಿ ಅಥವಾ ಸೈಕೋಅನಾಲಿಸಿಸ್ ಕುರಿತಾದ ವಿವರಗಳನ್ನು ನೀಡುತ್ತಾ ಮನಶ್ಶಾಸ್ತ್ರ ಎಂಬ ಅದ್ಭುತ ವಿದ್ಯೆಯ ಮಹತ್ವವನ್ನು, ಅನಿವಾರ್ಯತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಈ ಕೃತಿ ಮಾಡುತ್ತದೆ.
ಸಾಧಾರಣ ಕೌಟುಂಬಿಕ ಕತೆಯಂತೆ ತೆರೆದುಕೊಳ್ಳುವ ಈ ಕಾದಂಬರಿ ಮುಂದುವರಿದಂತೆ ಇಂದಿನ ಸಮಾಜದೊಳಗಿನ ಮಾನವ ಬದುಕಿನ ಸೂಕ್ಷ್ಮತೆಗಳನ್ನು ವಿವರ ವಿವರವಾಗಿ ಪರಿಚಯ ಮಾಡುತ್ತಾ ವಿಶ್ಲೇಷಿಸುತ್ತಾ ಮುಂದೆ ಸಾಗುತ್ತದೆ. ರಮಣ ಮತ್ತು ಸರಸ ದಂಪತಿಗಳಿಗೆ 10, 6 ಮತ್ತು 4ನೇ ತರಗತಿಯಲ್ಲಿ ಓದುತ್ತಿರುವ ಪಲ್ಲವಿ, ಸ್ವಾತಿ, ರೋಹಿತ್ ಎಂಬ ಮೂವರು ಮಕ್ಕಳು. ರಮಣನ ಬುದ್ಧಿವಾದವನ್ನು ಕಡೆಗಣಿಸಿ ಮಗನ ಕುರಿತಾಗಿ ಅತಿ ವ್ಯಾಮೋಹವನ್ನು ತಾಳಿದ ಸರಸ. ರಮಣನ ಅಕಾಲಿಕ ಮರಣದಿಂದ ಕಂಗೆಟ್ಟ ಸರಸಳ ಬದುಕಿನ ಹೋರಾಟ, ಅವಳ ಅಸಹಾಯಕತೆ. ಮೂವರು ಮಕ್ಕಳನ್ನು ಕಟ್ಟಿಕೊಂಡು ಮರ್ಯಾದಸ್ಥ ಬದುಕು ಕಟ್ಟಿಕೊಳ್ಳುವುದು ಸರಸಳಿಗೆ ಸಣ್ಣ ಸವಾಲಾಗಿರಲಿಲ್ಲ. ಯಾವುದೇ ಕುಟುಂಬದಲ್ಲಾದರೂ ಬರಬಹುದಾದ ಸಮಸ್ಯೆಯೇ ಈ ಕಾದಂಬರಿಯ ನಾಯಕಿಯಾದ ಸರಸಳನ್ನು ಕಾಡುತ್ತದೆ. ತನ್ನ ಸಹೋದರರ ಆಶ್ರಯವನ್ನು ಪಡೆಯದೆ ತನ್ನ ಅನನ್ಯತೆಗಾಗಿ, ಅಸ್ತಿತ್ವಕ್ಕಾಗಿ ಸರಸಳ ಬದುಕಿನ ಹೋರಾಟ ಆರಂಭವಾಗುತ್ತದೆ. ನೆರೆಮನೆಯ ಕಮಲಮ್ಮ ದಂಪತಿಗಳ ಸಹಾಯದಿಂದ ಪ್ರೊ.ಸುಧಾಕರರಾವ್ ಅವರ ಮನೆಯಲ್ಲಿ ದುಡಿತ ಪ್ರಾರಂಭವಾಗುತ್ತದೆ. ತನ್ನ ಮಕ್ಕಳನ್ನು ಯೋಗ್ಯವಾದ ನೆಲೆಗೆ ತರುವಲ್ಲಿ ಆಕೆಯ ನಿರಂತರ ದುಡಿತ. ಸ್ಕೂಟಿಯಿಂದ ಕಂಪ್ಯೂಟರ್ವರೆಗಿನ ಕಲಿಕೆ, ಆರ್ಥಿಕ ಸ್ವಾವಲಂಬನೆ ಸರಸಳ ಬತ್ತಳಿಕೆಯಲ್ಲಿದ್ದ ಪ್ರಬಲ ಅಸ್ತ್ರವಾದ ಸಂದರ್ಭಗಳ ಚಿತ್ರಣವನ್ನು ಸಮರ್ಥವಾಗಿ ಕಟ್ಟಿಕೊಡುವ ಕೆಲಸವನ್ನು ಈ ಕೃತಿ ತನ್ನ ಹಿನ್ನೆಲೆಯಲ್ಲಿ ನಡೆಸಿಕೊಟ್ಟಿದೆ.
ಸರಸ, ಪ್ರೊ. ಸುಧಾಕರರಾವ್ ಮತ್ತು ಸ್ನೇಹ ಈ ಕಾದಂಬರಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಲ್ಲದೆ ಆ ಮೂವರಲ್ಲಿದ್ದ ಸ್ವಪ್ರಜ್ಞೆ, ಸಮಯ ಪ್ರಜ್ಞೆ, ಸಾಮಾಜಿಕ ಪ್ರಜ್ಞೆಯ ವ್ಯಕ್ತಿತ್ವ ಓದುಗರಿಗೆ ಜೀವನದ ಪಾಠವಾಗುತ್ತದೆ. ಮಕ್ಕಳಿಂದ ಹೆತ್ತವರು ಬಯಸುವ ನಿರೀಕ್ಷೆಗಳು, ಹೆತ್ತವರಿಂದ ಮಕ್ಕಳು ಬಯಸುವ ನಿರೀಕ್ಷೆಗಳು, ಸಮಾಜ/ಬಂಧುಗಳು ಬಯಸುವ ನಿರೀಕ್ಷೆಗಳು, ವಿಘ್ನ ಬಂದಾಗ ತಳೆಯುವ ಅಡ್ಡದಾರಿಗಳು, ಪರಿಣಾಮಗಳ ಕುರಿತಾದ ವಿವರಗಳನ್ನು ಕಾದಂಬರಿ ವಿಸ್ತೃತವಾಗಿ ಚರ್ಚಿಸುತ್ತದೆ. ಸರಸಳ ಹಿರಿಯ ಮಗಳು ಪಲ್ಲವಿ ಖಿನ್ನತೆಗೆ ಜಾರಿದ ಸಂದರ್ಭದಲ್ಲಿ ‘ಸ್ನೇಹ’ ಎಂಬ ಮನಶಾಸ್ತ್ರಜ್ಞೆಯ ಸಕಾಲಿಕ ಸಹಾಯ, ಸರಸಾಳ ಮಗ ರೋಹಿತನಿಗೆ ಮಾನಸಿಕ ಒತ್ತಡ ಅತಿಯಾಗಿ, ದುರಭ್ಯಾಸಕ್ಕೆ ಬಲಿಯಾಗುವ ಸಂದರ್ಭದಲ್ಲಿ ದೊರೆತ ಪ್ರೊ. ಸುಧಾಕರರಾವ್, ಪಲ್ಲವಿ ಹಾಗೂ ಜಾಗೃತ ದೀಪ ಸಂಸ್ಥೆಯ ಸಹಾಯ, ಸರಸಾಳಿಗೆ ಖಿನ್ನತೆ ಕಾಡಿದ ಸಂದರ್ಭದಲ್ಲಿ ದೊರೆತ ಸ್ನೇಹಳ ಸಹಾಯ, ಪ್ರೊ. ಸುಧಾಕರರಾವ್ ಅವರಿಗೆ ಖಿನ್ನತೆ ಕಾಡಿದ ಸಂದರ್ಭದಲ್ಲಿ ದೊರೆತ ‘ಜಾಗೃತ ದೀಪ’ ಸಂಸ್ಥೆಯ ಸಹಾಯ ಹಸ್ತಗಳ ಕುರಿತಾದ ವಿವರಗಳಲ್ಲಿ ಇಂದಿನ ದಿನಗಳಲ್ಲಿ ಮಾನಸಿಕ ಚಿಕಿತ್ಸೆಯ ಅಗತ್ಯ ಹಾಗೂ ಅನಿವಾರ್ಯವಾಗುವುದರ ಕುರಿತಾದ ಸಮರ್ಥನೆಯಿದೆ. ಕುಟುಂಬದಲ್ಲಿ ಸದಸ್ಯನೋರ್ವನ ಜೀವನ ಪದ್ಧತಿ ಬದಲಾದಾಗ ಅದು ಉಳಿದವರ ಮೇಲೂ ಸಹಜವಾಗಿ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಈ ಕಾದಂಬರಿಯ ಸರಸ, ಪಲ್ಲವಿ, ರೋಹಿತ್, ಪ್ರೊ. ಸುಧಾಕರರಾವ್ ಸಾಕ್ಷಿಗಳಾಗುತ್ತಾರೆ.
ಪ್ರೊ. ಸುಧಾಕರರಾವ್ ಅವರ ಬದುಕಿನ ಏಳುಬೀಳುಗಳ ಚಿತ್ರಣವನ್ನು ನೀಡುತ್ತಾ, ಪ್ರೊ. ಸುಧಾಕರರಾವ್ ಅವರ ದಾಂಪತ್ಯ – ವಯಸ್ಸಿನ ಅಂತರವಿರುವ ವಿವಾಹ, ಮಡದಿಗೆ ಇಂಜಿನಿಯರಿಂಗ್ ಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕೆ ಅಮೇರಿಕಾಕ್ಕೆ ಕಳಿಸಿದ್ದು, ಮಡದಿಯ ಶಿಕ್ಷಣಕ್ಕಾಗಿ ಬ್ಯಾಂಕಿನಲ್ಲಿ ಮಾಡಿದ ಸಾಲ, ಆದರೆ ಅಲ್ಲಿನ ಜೀವನಕ್ಕೆ ಮಾರು ಹೋದ ಮಡದಿ “ಏರಿದ ಏಣಿಯನ್ನೇ ಝಾಡಿಸಿ ಬಿಟ್ಟರು” ಎನ್ನುವಂತೆ ಗಂಡನನ್ನು ಮರೆತು ‘ಲಿವಿಂಗ್ ಟುಗೆದರ್ ರಿಲೇಶನ್ ಶಿಪ್’ಗೆ ಮಾರು ಹೋಗಿ, ವಿವಾಹ ವಿಚ್ಛೇದನ ಬಯಸಿದ್ದು, ಮುಂದಕ್ಕೆ ಪ್ರೊ. ಸುಧಾಕರರಾವ್ ಅವರ ಆಸ್ತಿಗೋಸ್ಕರ ಆಕೆ ಕೋರ್ಟಿನಲ್ಲಿ ಕೇಸ್ ಹಾಕಿದುದರ ವಿವರಗಳ ಹಿನ್ನೆಲೆಯಲ್ಲಿ ಆಧುನಿಕ ಸ್ಪರ್ಧಾತ್ಮಕ ಜಗತ್ತಿನ ಒತ್ತಡ ಎಡೆಬಿಡದೆ ಕಾಡುತ್ತಿರುವುದರ ಕಂಗೆಡೆಸುತ್ತಿರುವುದರ ಕುರಿತು, ಎಲ್ಲರಕ್ಕಿಂತ ತಾವು ಮೇಲೇರಬೇಕೆಂಬ ಆಸೆ, ಹಣದ ದಾಹ, ಸ್ವಾರ್ಥ ಮೂಲವಾದ ಮನಸ್ಸುಗಳ ಅಧ್ಯಯನವನ್ನೂ ಈ ಕೃತಿ ನಡೆಸಿದೆ.
ಮಾನವ ಬದುಕನ್ನು ಕಟ್ಟಿಕೊಡುವಲ್ಲಿ ಸಂಸ್ಥೆಗಳ ಪಾತ್ರವೂ ಅತಿ ಮುಖ್ಯ ಎಂಬ ನೆಲೆಯಲ್ಲಿ ‘ಜಾಗೃತ ದೀಪ’ ಸಂಸ್ಥೆಯ ಕುರಿತು ಆಶಾವಾದದ ಚಿತ್ರಣವನ್ನು ಲೇಖಕಿ ನೀಡಿದ್ದಾರೆ. ಸಮಾಜದಲ್ಲಿ ಒಂಟಿ ಹೆಣ್ಣು ಒಂಟಿ ಗಂಡು ಬಾಳುವೆ ನಡೆಸುವ ಸಂದರ್ಭದಲ್ಲಿ ಹಲವರ ಸಂಶಯ, ಊಹನೆಗಳಿಗೆ ತುತ್ತಾಗುವ ಸನ್ನಿವೇಶ, ಅನೈತಿಕ ಸಂಬಂಧದ ಕಲ್ಪನೆಯನ್ನು ಹುಟ್ಟು ಹಾಕುವ ಸಮಾಜದ ಋಣಾತ್ಮಕ ನಿಲುವಿನ ಖಂಡನೆ, ಸುಮಂಗಲಿಯರ ನಡುವೆ ಇರಲು ಅನರ್ಹಳು ಎಂಬ ಕೀಳರಿಮೆ ವಿಧವೆಗೆ ಕಾಡದೇ ಇರಬೇಕಾದುದರ ವಿಚಾರವಾಗಿ, ಯೌವನದ ವಿಧವಾ ಸ್ಥಿತಿ, ಒಂಟಿ ಹೆಣ್ಣು ಬಿಟ್ಟಿ ಸಿಗುವಾಗ ಅದನ್ನು ದುರುಪಯೋಗ ಪಡಿಸಿಕೊಳ್ಳುವವರ ಸ್ಥಿತಿ, ಹೆಣ್ಣಿನ ಮಾನಮರ್ಯಾದೆಯ ಪ್ರಶ್ನೆ ಕಾಡುವ ಬಗೆ, ಮಹಿಳೆಯ ಬಗ್ಗೆ ಸಮಾಜದ ದೃಷ್ಟಿಕೋನ, ಮಹಿಳಾ ವಿದ್ಯಾಭ್ಯಾಸ, ಆರ್ಥಿಕ ಸ್ವಾವಲಂಬನೆ –ಉದ್ಯೋಗದ ಕುರಿತಾದ ವಿಮರ್ಶೆ, ಮಹಿಳೆ ತನ್ನ ಅಸ್ತಿತ್ವಕ್ಕಾಗಿ ಹೆಣಗಲು ಮಾನಸಿಕವಾಗಿ ತಯಾರಾಗಬೇಕಾದ ಸಂದರ್ಭ, ಗಂಡು, ಹೆಣ್ಣುಮಕ್ಕಳ ಬಗ್ಗೆ ತೋರುವ ತರತಮಭಾವ, ವಂಶೋದ್ಧಾರಕ ಮಗ/ ಪುತ್ರ ವ್ಯಾಮೋಹ, ಸಮಾಜದಲ್ಲಿರುವ ಪುತ್ರ ವ್ಯಾಮೋಹದ ಆವರಣ, ಅನಾವರಣ, ಮಕ್ಕಳ ಬೆಳೆಸುವಿಕೆಯಲ್ಲಿ ಹೆತ್ತವರ ಕರ್ತವ್ಯ, ಮಕ್ಕಳ ನೋವಿಗೆ, ಖಿನ್ನತೆಗೆ ಹೆತ್ತವರು ಕಿವಿಯಾಗಬೇಕಾದ ಸಂದರ್ಭಗಳು, ಮಾನಸಿಕ ಒತ್ತಡ ಅತಿಯಾಗಿ ದುರಭ್ಯಾಸಕ್ಕೆ ಬಲಿಯಾಗುವ ಮಕ್ಕಳ ಕುರಿತು, ಮನುಷ್ಯ ಮೂಲತಃ ಅಭ್ಯಾಸಗಳ ಬಲಿಪಶುವಾದ ಬಗ್ಗೆ, ಜೀವನದ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕೆಂಬ ಮನಸ್ಥಿತಿಯೇ ಮುಖ್ಯವಾಗುವುದರ ಕುರಿತು, ಬದುಕೆನ್ನುವುದು ಯುದ್ಧ ಎಂಬ ಅರಿವಾಗುವ ಸಂದರ್ಭಗಳು, ಇಂದು ಮನೆಮನೆಗಳಲ್ಲಿ ಹುಟ್ಟುವ ಹುಟ್ಟಿದ ಸ್ಪರ್ಧೆಗಳು, ಇಂದಿನ ಕಾಲದಲ್ಲಿ ವಿದ್ಯೆ, ಉದ್ಯೋಗ, ಪದವಿ ಇಲ್ಲದವರು ಕಸಕ್ಕಿಂತಲೂ ಕಡೆಯಾಗುವ ಸಂದರ್ಭಗಳು, ಸ್ವಾವಲಂಬನೆಯ ಪಾಠವನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಬೇಕೆಂಬ ವಿಚಾರ, ಆಧುನಿಕ ತಂತ್ರಜ್ಞಾನದ ತಿಳುವಳಿಕೆ, ಕಲಿಕೆ, ಬಳಕೆ ಎಲ್ಲರಿಗೂ ತಲುಪಬೇಕೆಂಬ ಚಿಂತನೆ, ಅವರವರ ತಲೆಯಡಿಗೆ ಅವರವರ ಕೈ, ಸಂಸಾರದಲ್ಲಿ ಕಷ್ಟ ಬಂದರೇ ಸಂಸ್ಕಾರ ಬರುವುದು, ಹೆಣ್ಣು ಮಕ್ಕಳೆಂದರೆ ಸೆರಗಲ್ಲಿ ಕಟ್ಟಿಕೊಂಡ ಕೆಂಡ, ಖರ್ಚಿನ ಬಾಬ್ತು – ಎಂಬ ಲೋಕ ನೀತಿಯ ವಿವರಣೆ, ಸಂಸಾರದಲ್ಲಿ ತಾವರೆಯ ಎಲೆಯ ಮೇಲಣ ನೀರಿನಂತಿರಬೇಕು, ತುಂಬಿದ ಕೊಡ ತುಳುಕುವುದಿಲ್ಲ, ಅಳುವ ಗಂಡಸು, ನಗುವ ಹೆಂಗಸು ನಂಬಿಕೆಗೆ ಯೋಗ್ಯರಲ್ಲ, ಹೆಣ್ಣಿಗೆ ಹೆಣ್ಣೇ ಶತ್ರು – ಗಾದೆಮಾತುಗಳ ವಿವರಣೆ, ಪೂರ್ವಜರಿಂದ ನಮಗೆ ಬಳುವಳಿಯಾಗಿ ಬಂದಿರುವ ಒಂದು ಕೆಟ್ಟ ಗುಣ – ‘ಗಂಡು ಸಂತಾನ ಶ್ರೇಷ್ಠ, ಹೆಣ್ಣು ಸಂತಾನ ಕುಟುಂಬಕ್ಕೆ ಭಾರ’ ಎನ್ನುವಂಥಾ ಮನಸ್ಥಿತಿ ಕುರಿತು, ಹೆಣ್ಣು ಮಗು ಕೀಳು ಗಂಡು ಮಗು ಮೇಲು ಎಂಬ ಭೇದಭಾವದ ಮನಸ್ಥಿತಿ, ಸಮಾಜ ನಮ್ಮನ್ನು ರೂಪಿಸುವ ರೀತಿ – ನೀನು ಗಂಡಸು……… ನೀನು ಹೆಂಗಸು – ಇಂತಹ ಅಘೋಷಿತ ಕಾನೂನುಗಳು ನಮ್ಮನ್ನು ಆಳುತ್ತಿರವುದರ ಕುರಿತು, ಹೆಣ್ಮಕ್ಕಳು ಜಾಜಿಮಲ್ಲಿಗೆಯಷ್ಟು ಮೃದುವಾಗಿರಬಾರದು, ಕೇದಿಗೆಯಷ್ಟು ಧೃಢವಾಗಿರಬೇಕಾದ ಅಗತ್ಯತೆ, ಸಮಾಜದಲ್ಲಿ ಗುರುತಿಸಿಕೊಳ್ಳುವಿಕೆ ಅಥವಾ ರೆಕಗ್ನಿಷನ್ ಎನ್ನುವುದು ಮಾನವನ ವ್ಯಕ್ತಿತ್ವದಲ್ಲಿ, ವೈಯಕ್ತಿಕ ಜೀವನದಲ್ಲಿ, ಸಮಾಜದತ್ತ ನೋಡುವ ಆತನ ದೃಷ್ಟಿಕೋನದಲ್ಲಿ ಅಗಾಧವಾದ ಬದಲಾವಣೆಯನ್ನುಂಟು ಮಾಡುವದರ ಬಗ್ಗೆ, ಆಧುನಿಕ ಬದುಕಿನ ಒತ್ತಡಗಳು – ಒಂದೇ ಊರಿನಲ್ಲಿದ್ದೂ ಭೇಟಿಯಾಗಲು ಸಮಯಾವಕಾಶವಿಲ್ಲದ ಕುಟುಂಬದ ಸದಸ್ಯರ ಕುರಿತು, ಮನುಷ್ಯನ ಮನಸ್ಸೆನ್ನುವುದು ಬಹು ವಿಚಿತ್ರ ಲೋಕ. ಅದಕ್ಕೆರಡು ಮುಖಗಳು. 1. ಸಮಾಜದೆದುರು ಬಿಂಬಿತ 2. ನಿಗೂಢ (ಒಳಮನಸ್ಸು), ಪ್ರತಿಯೊಬ್ಬರ ಬದುಕಿನಲ್ಲೂ ಗಂಭೀರ ಸಮಸ್ಯೆಗಳಿರುವುದರ ವಿವರ, ಮನಸ್ಸಿಗಾಗುವ ಗಾಯ, ನಿಷ್ಪ್ರಯೋಜಕ ಎಂಬ ಕೀಳರಿಮೆ, ಒತ್ತಡದ ಕಾರಣದಿಂದ ಉಂಟಾಗುವ ಮನೋದೈಹಿಕ ಕಾಯಿಲೆಗಳ ರೋಗಿಗಳು, ಮಾನವೀಯತೆಯ ಸೆಲೆಯ ಮಹತ್ವ, ಮಾನಸಿಕ ಚಿಕಿತ್ಸೆಯ ಅನಿವಾರ್ಯತೆ, ಸಹಾಯ ಹಸ್ತದ ಅನಿವಾರ್ಯತೆ, ಬಡತನ, ಬಡತನದ ನೋವು, ಕಷ್ಟ, ಸಂಕಟಗಳು, ಶ್ರೀಮಂತಿಕೆಯ ದರ್ಪ, ಶ್ರೀಮಂತಿಕೆ – ಅಂತಸ್ತುಗಳ ಪ್ರಭಾವ, ಪಾತಾಳ ಗರಡಿ ಪದ ಪ್ರಯೋಗ-, ಈ ವಿಚಾರಗಳ ಚರ್ಚೆಗಳು ‘ಸರಸ – ಸಮರಸ’ದಲ್ಲಿ ವಿಸ್ತೃತ ರೂಪ ಪಡೆಯುತ್ತವೆ.
ಈ ಎಲ್ಲಾ ಕಾರಣಗಳಿಗಾಗಿ ‘ಸರಸ – ಸಮರಸ’ ಕೃತಿ ನಮಗೆ ಆಪ್ತವಾಗುತ್ತದೆ. ಈ ಕೃತಿಯನ್ನು ನಾವು ಓದುತ್ತಾ ಹೋದಂತೆ ನಮ್ಮದೇ ಭೂತ, ವರ್ತಮಾನ, ಭವಿಷ್ಯತ್ತಿನ ಬದುಕಿನ ವಿಮರ್ಶೆಯನ್ನು ನಾವು ನಡೆಸುತ್ತಿದ್ದೇವೋ ಅನ್ನಿಸುತ್ತದೆ. ನಾವಿಂದು ಸಮಾಜದಲ್ಲಾಗಿರಬಹುದು ಅಥವಾ ನಮ್ಮ ಕುಟುಂಬದಲ್ಲಾಗಿರಬಹುದು ಹಲವು ಸಂಸ್ಕೃತಿಗಳ, ಹಲವು ತಲೆಮಾರುಗಳ ಜತೆ ಬದುಕನ್ನು ನಡೆಸುತ್ತಿರುತ್ತೇವೆ. ಅವುಗಳೊಳಗೆ ಮಾನವೀಯ ಮೌಲ್ಯಗಳಾದ ಪ್ರೀತಿ, ಹೊಂದಾಣಿಕೆ, ಸಹಬಾಳ್ವೆ, ತ್ಯಾಗ, ಕರುಣೆ, ಕಾಳಜಿ ಅತಿಮುಖ್ಯ ಎಂಬ ಎಚ್ಚರವನ್ನು, ಅವುಗಳ ಆವಶ್ಯಕತೆಯ ಅರಿವನ್ನು ಈ ಕಾದಂಬರಿ ನಡೆಸಿಕೊಟ್ಟಿದೆ. ಧನಾತ್ಮಕ ನಿಲುವನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕನ್ನು ನಾವು ಗೆದ್ದಂತೆ ಎಂಬ ಸಂದೇಶವನ್ನು ಈ ಕಾದಂಬರಿ ಓದುಗರಿಗೆ ನೀಡುವಲ್ಲಿ ಸಫಲವಾಗಿದೆ.
ಶೀಲಾಲಕ್ಷ್ಮೀಯವರು ಕಾದಂಬರಿಗೆ ಆರಿಸಿಕೊಂಡಿರುವ ವಿಷಯ, ಪ್ರತಿಪಾದನೆಯಲ್ಲಿನ ಅವರ ಜಾಣ್ಮೆ, ಮನಶ್ಶಾಸ್ತ್ರ, ಮಾನಸಿಕ ಚಿಕಿತ್ಸೆ, ಕೌನ್ಸಿಲಿಂಗ್ ಇವುಗಳ ಕುರಿತಾದ ಆಸಕ್ತಿ ಮೆಚ್ಚುವಂತಹದ್ದು. ಇದೊಂದು ಅತ್ಯುತ್ತಮ ಪ್ರಯತ್ನ. ಅವರ ಕಾದಂಬರಿ ‘ಸರಸ – ಸಮರಸ’ ವ್ಯವಸಾಯಕ್ಕೆ ಅಭಿನಂದನೆಗಳು, ಅಭಿವಂದನೆಗಳು.
ವಿಮರ್ಶಕರು ಡಾ.ಶೈಲಜ ಕೆ.
ಡಾ. ಶೈಲಜ ಕೆ. ಕಾಸರಗೋಡಿನಲ್ಲಿ ಹುಟ್ಟಿ ಬೆಳೆದ ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿದರು. 1991ರಿಂದ ಕನ್ನಡ ಉಪನ್ಯಾಸಕಿಯಾಗಿ ಸಂತ ಆಗ್ನೆಸ್ ಕಾಲೇಜು, ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದು, 2007ರಿಂದ 2014ರ ತನಕ ಕಂಟ್ರೋಲರ್ ಆಫ್ ಎಕ್ಸಾಮಿನೇಷನ್ ಹುದ್ದೆ, 2014ರಿಂದ ಕನ್ನಡ ಸಹ ಪ್ರಾಧ್ಯಾಪಕಿ ಹುದ್ದೆ ನಿರ್ವಹಿಸಿ ಪ್ರಸ್ತುತ ಸಂತ ಆಗ್ನೆಸ್ ಕಾಲೇಜು (ಸ್ವಾಯತ್ರ), ಮಂಗಳೂರು ಇಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2014ರಲ್ಲಿ ‘ಕನ್ನಡದಲ್ಲಿ ಮಹಿಳಾ ಆತ್ಮಕಥೆಗಳು ಸ್ವನಿರೂಪಣೆಯ ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಪಿಹೆಚ್ ಡಿ ಪದವಿ ಪಡೆದರು. ಓದು, ವಿಮರ್ಶಾ ಲೇಖನ ಮತ್ತು ಸಂಶೋಧನಾತ್ಮಕ ಲೇಖನ ಬರೆವಣಿಗೆ, ತೋಟಗಾರಿಕೆ, ಉಪನ್ಯಾಸ ಇತ್ಯಾದಿ ಹವ್ಯಾಸವಾಗಿರುವ ಇವರ ವಿಮರ್ಶಾ ಲೇಖನ ಮತ್ತು ಸಂಶೋಧನಾತ್ಮಕ ಲೇಖನಗಳೂ ಪ್ರಕಟಗೊಂಡಿವೆ.
ಡಾ. ಶೈಲಜ ಕೆ. ಕಾಸರಗೋಡಿನಲ್ಲಿ ಹುಟ್ಟಿ ಬೆಳೆದ ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿದರು. 1991ರಿಂದ ಕನ್ನಡ ಉಪನ್ಯಾಸಕಿಯಾಗಿ ಸಂತ ಆಗ್ನೆಸ್ ಕಾಲೇಜು, ಮಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದು, 2007ರಿಂದ 2014ರ ತನಕ ಕಂಟ್ರೋಲರ್ ಆಫ್ ಎಕ್ಸಾಮಿನೇಷನ್ ಹುದ್ದೆ, 2014ರಿಂದ ಕನ್ನಡ ಸಹ ಪ್ರಾಧ್ಯಾಪಕಿ ಹುದ್ದೆ ನಿರ್ವಹಿಸಿ ಪ್ರಸ್ತುತ ಸಂತ ಆಗ್ನೆಸ್ ಕಾಲೇಜು (ಸ್ವಾಯತ್ರ), ಮಂಗಳೂರು ಇಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2014ರಲ್ಲಿ ‘ಕನ್ನಡದಲ್ಲಿ ಮಹಿಳಾ ಆತ್ಮಕಥೆಗಳು ಸ್ವನಿರೂಪಣೆಯ ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಪಿಹೆಚ್ ಡಿ ಪದವಿ ಪಡೆದರು. ಓದು, ವಿಮರ್ಶಾ ಲೇಖನ ಮತ್ತು ಸಂಶೋಧನಾತ್ಮಕ ಲೇಖನ ಬರೆವಣಿಗೆ, ತೋಟಗಾರಿಕೆ, ಉಪನ್ಯಾಸ ಇತ್ಯಾದಿ ಹವ್ಯಾಸವಾಗಿರುವ ಇವರ ವಿಮರ್ಶಾ ಲೇಖನ ಮತ್ತು ಸಂಶೋಧನಾತ್ಮಕ ಲೇಖನಗಳೂ ಪ್ರಕಟಗೊಂಡಿವೆ.
ಕೃತಿಯ ಲೇಖಕಿ ಶೀಲಾಲಕ್ಷ್ಮೀ ಕಾಸರಗೋಡು:
ಶೀಲಾಲಕ್ಷ್ಮೀಯವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದ ಪದವೀಧರೆ. ಲಘು ಬರೆಹ, ಕಥೆ, ಕಾದಂಬರಿಗಳನ್ನು ಬರೆಯುವುದು ಇವರ ಹವ್ಯಾಸ. ಸರಸ-ಸಮರಸ ಕಾದಂಬರಿ ಅವರ ಮೂರನೇ ಕೃತಿ. ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯಲ್ಲಿ 2008ನೇ ಸಾಲಿನ ಪ್ರಶಸ್ತಿ ವಿಜೇತೆಯಾದ ಇವರು ಗೃಹಿಣಿಯಾಗಿದ್ದಾರೆ. ಪ್ರಾದೇಶಿಕೆ ಪತ್ರಿಕೆಯಲ್ಲಿ ಸುಮಾರು ಒಂದು ವರ್ಷ ಕಾಲ ಅಂಕಣ ಬರಹಗಾರ್ತಿಯಾಗಿ ಮತ್ತು ವಾರಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಇವರ ಹಲವಾರು ಲೇಖನಗಳು ಬೆಳಕು ಕಂಡಿವೆ. ಪ್ರತಿಲಿಪಿ ಪೋರ್ಟಲ್ ಕನ್ನಡ ವಿಭಾಗದಲ್ಲಿ ಇವರು ಶೀಲಾಲಕ್ಷ್ಮೀ ಎಂಬ ಹೆಸರಲ್ಲಿ ಖಾಯಂ ಬರೆಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಶೀಲಾಲಕ್ಷ್ಮೀಯವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದ ಪದವೀಧರೆ. ಲಘು ಬರೆಹ, ಕಥೆ, ಕಾದಂಬರಿಗಳನ್ನು ಬರೆಯುವುದು ಇವರ ಹವ್ಯಾಸ. ಸರಸ-ಸಮರಸ ಕಾದಂಬರಿ ಅವರ ಮೂರನೇ ಕೃತಿ. ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯಲ್ಲಿ 2008ನೇ ಸಾಲಿನ ಪ್ರಶಸ್ತಿ ವಿಜೇತೆಯಾದ ಇವರು ಗೃಹಿಣಿಯಾಗಿದ್ದಾರೆ. ಪ್ರಾದೇಶಿಕೆ ಪತ್ರಿಕೆಯಲ್ಲಿ ಸುಮಾರು ಒಂದು ವರ್ಷ ಕಾಲ ಅಂಕಣ ಬರಹಗಾರ್ತಿಯಾಗಿ ಮತ್ತು ವಾರಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಇವರ ಹಲವಾರು ಲೇಖನಗಳು ಬೆಳಕು ಕಂಡಿವೆ. ಪ್ರತಿಲಿಪಿ ಪೋರ್ಟಲ್ ಕನ್ನಡ ವಿಭಾಗದಲ್ಲಿ ಇವರು ಶೀಲಾಲಕ್ಷ್ಮೀ ಎಂಬ ಹೆಸರಲ್ಲಿ ಖಾಯಂ ಬರೆಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
1 Comment
ಧನ್ಯವಾದಗಳು ಡಾ.ಶೈಲಜಾ ಅವರಿಗೆ; ಪ್ರಬುದ್ಧ ವಿಮರ್ಶೆಗಾಗಿ