‘ಹಂಸಾಯನ’ ರಾಜ್ಯಪ್ರಶಸ್ತಿ ವಿಜೇತ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಾವಿತ್ರಿ ಮನೋಹರ್ (ಹಂಸಾ) ಅವರ ಆತ್ಮಕಥೆ. ಲೇಖಕರ ಮಾತೃಶ್ರೀ ಹಂ.ಪು. ನಾಗಮ್ಮ ಕಳಸ ಇವರು,”ನನ್ನ ಎಂಭತ್ತನೇ ವಯಸ್ಸಿನಲ್ಲಿ ನನ್ನ ನೆನಪಿನಂಗಳ ಕೆದಕಿ ಕೆದಕಿ ನನ್ನ ಅನುಭವವನ್ನು ಪುಸ್ತಕವನ್ನಾಗಿಸಿ ಸಾಹಿತ್ಯ ಲೋಕಕ್ಕೆ ತನ್ನ ಕಾಣಿಕೆ ಅರ್ಪಿಸಿದ ಮಗಳು, ನನ್ನ ಎಂಭತ್ತೇಳರ ಪ್ರಾಯದಲ್ಲಿ ಅವಳ ಅನುಭವ ಕಥನ ‘ಹಂಸಾಯನ’ಕ್ಕೆ ನನ್ನಿಂದ ಶುಭನುಡಿ ಬರೆಸಿದ್ದಾಳೆ” ಎಂದಿದ್ದಾರೆ.
ಮುನ್ನುಡಿಯಲ್ಲಿ ಡಾ. ವಸಂತಕುಮಾರ್ ಪೆರ್ಲ ಅವರು, “ಹಂಸಾಯನ ಎಂದರೆ ಏನು? ‘ಆಯನ’ ಎಂದರೆ ಪಥ, ದಾರಿ, ದಿಕ್ಕು, ದೆಸೆ, ನಡೆ ಎಂದೆಲ್ಲ ಅರ್ಥಗಳಿವೆ. ‘ಹಂ’ದಿಗೋಡಿನ ‘ಸಾ’ವಿತ್ರಿಯವರು ಸಾಗಿಬಂದ ಪಥ ಈ ಹಂಸಾಯನ. ಹಂದಿಗೋಡು ಚಿಕ್ಕಮಗಳೂರಿನ ಕಳಸದ ಬಳಿಯ ಒಂದು ಹಳ್ಳಿ. ಹಂದಿಗೋಡಿನ ತವರಿನಿಂದ ಕಾರ್ಕಳದ ಮನೋಹರ್ ಎಂಬವರನ್ನು ವಿವಾಹವಾಗಿ ಘಟ್ಟ ಇಳಿದು ಬಂದು ಕಾರ್ಕಳವಾಸಿಯಾದ ಸಾವಿತ್ರಿಯವರು ಮುಂದಿನ ಮೂವತ್ತೈದು ವರ್ಷಗಳ ಬದುಕಿನಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಹೆಜ್ಜೆಗುರುತುಗಳನ್ನು ಈ ಕೃತಿ ರಸವತ್ತಾದ ಕಾದಂಬರಿಯ ರೂಪದಲ್ಲಿ ನಮ್ಮ ಮುಂದಿಡುತ್ತದೆ” ಎಂದಿದ್ದಾರೆ. ಹಾರೈಕೆಯಲ್ಲಿ ಡಾ.ಎಚ್.ವಿ. ನರಸಿಂಹಮೂರ್ತಿ ಅವರು,” ಈ ಕೃತಿಯಲ್ಲಿ ಘಟ್ಟದ ಮೇಲಿನ ಅಂದಿನ ಜನಜೀವನ, ಜಮೀನ್ದಾರ ಸಮಸ್ಯೆಗಳು, ಮಲೆನಾಡಿನ ಬೇಟೆ, ಕುಟುಂಬ ಸಾಮರಸ್ಯ, ಶೈಕ್ಷಣಿಕ ಸ್ಥಿತಿ -ಇವೆಲ್ಲದರ ಜೀವಂತ ಚಿತ್ರಣವಿದೆ” ಎಂದಿದ್ದಾರೆ. ರಾ.ರಾ. ಅತ್ತೂರು ಅವರು,” ಈ ಕೃತಿಯು ಲೇಖಕರ ಬದುಕ ಸಿಂಹಾವಲೋಕನವಾಗಿದೆ” ಎಂದಿದ್ದಾರೆ. ಶೀಲಾ.ಕೆ.ಶೆಟ್ಟಿ ಅವರು,” ಈ ಕೃತಿ ಲೇಖಕರ ಅಪೂರ್ವ ಜೀವನಕಥೆ. ಇದೊಂದು ಕಥೆಯಲ್ಲ, ಕಾದಂಬರಿಯೂ ಅಲ್ಲ. ಓರ್ವ ಸೃಜನಶೀಲ ಲೇಖಕಿ ತನ್ನ ಬದುಕಿನುದ್ದಕ್ಕೂ ಅನುಭವಿಸಿದ, ಆಸ್ವಾದಿಸಿದ ಸಿಹಿ-ಕಹಿ ಪ್ರಸಂಗಗಳ ಪುನರಾವಲೋಕನ” ಎಂದಿದ್ದಾರೆ. ಶಾಂತಾ ಆಚಾರ್ಯ ಅವರು,” ಈ ಕೃತಿ ತನ್ಮಯತೆಯಿಂದ ಓದಿಸುತ್ತದೆ” ಎಂದಿದ್ದಾರೆ. ಅಂಬಾತನಯ ಮುದ್ರಾಡಿ ಅವರು,” ಈ ಕೃತಿಯ ರಹಸ್ಯ-ಸ್ವಾರಸ್ಯಕ್ಕಾಗಿ ನಾವು ಕೂಡ ಹಂಸಯಾನಿಗಳಾಗಬೇಕು” ಎಂದಿದ್ದಾರೆ. ಬೆನ್ನುಡಿಯಲ್ಲಿ ಇಂದಿರಾ ಹಾಲಂಬಿ ಅವರು,” ಬದುಕಿನ ಮೊದಲ ಪುಟದಿಂದ ಈವರೆಗಿನ ಅನುಭವ, ಸುಖ, ದುಃಖ, ಸಾಧನೆ, ವೇದನೆಗಳನ್ನು ಸರಳವಾಗಿ ಓದುಗರ ಮುಂದೆ ತೆರೆದಿಟ್ಟಿರುವ ಈ ಬರಹ ಅತ್ಯಂತ ಆಪ್ತವಾಗಿ ಮನಮಿಡಿಯುವಂತಿದೆ” ಎಂದಿದ್ದಾರೆ.
ಮೂವತ್ತೆರಡು ಅಧ್ಯಾಯಗಳಲ್ಲಿ ಮೂಡಿರುವ ಈ ಕೃತಿಯನ್ನು ಓದುವಾಗ ಮನ ತಟ್ಟಿದ ವಿಷಯಗಳಿವು:-
* ಹಂಸಾ ಹುಟ್ಟಿದಾಗ ಊರಿಡೀ ಉರಿಬಿಸಿಲು. ಆದರೆ ಬೀಸಿ ಬಂದ ಮಂದಾನಿಲ ಮಳೆಯ ಮಾರುತವಾಗಿ ವೈಶಾಖದ ಬಿರು ಬೇಸಗೆಗೆ ವಿದಾಯ ಹೇಳಿ, ಕಾರ್ಮುಗಿಲು ಕರಗಿ ನೀರಾಗಿ ಸುರಿಯಿತು.
* ಮಲೆನಾಡಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ, ಗಿಡಗಂಟೆಗಳಲ್ಲಿ ಹೂ ಹಣ್ಣುಗಳ ತೋರಣ. ಅಬ್ಬಬ್ವಾ ಎಷ್ಟೊಂದು ಬಗೆಯ ಹಣ್ಣುಗಳು! ಕವಲೆ, ಬೆಮ್ಮಾರ್ಲೆ, ಗರ್ಜಿಗ, ನೇರಳೆ, ಪನ್ನೇರಳೆ, ಹಲಸು, ಹೆಬ್ಬಲಸು, ರಂಜೆ, ಗೀರ್ಕನ್, ಕಾಡುಕಿತ್ತಲೆ, ಜೇಪಳ, ಕಲ್ಲು ಜೇಪಳ….
* ಅಮ್ಮನ ಬಳಿ ಒಂದು ಚಿನ್ನದ ಸರವಾಗಲಿ, ಬಳೆಯಾಗಲಿ ಇಲ್ಲವಲ್ಲಾ ಎನಿಸಿದರೂ ಕೈತುಂಬಾ ನೀಲಿ ಬಳೆ ಧರಿಸಿ, ನೂಲಿನಲ್ಲಿ ಸುರಿದ ಕರಿಮಣಿ ತಾಳಿ ಸರ ಧರಿಸಿದ ಅಮ್ಮ, ಸಿನೆಮಾದಲ್ಲಿ ಬರುವ ಚಂದ್ರಮತಿಯಂತೆಯೇ ಕಂಡು ಬರುತ್ತಿದ್ದಳು.
* ತಂಗಿಯರಿಗೆ ಕೋಟ್ಲೆ ವಾಸಿಯಾಗುತ್ತ ಬರುವಾಗ ಹಂಸಾಳಿಗೆ ಕೋಟ್ಲೆಯ ಗುಳ್ಳೆಗಳೆದ್ದು ಅವಳು ಹಾಸಿಗೆ ಹಿಡಿದಳು. ಅಬ್ಬಬ್ಬಾ! ನೆನೆದರೆ ಹಂಸಾಳಿಗೆ ಈಗಲೂ ಚಳಿ ಜ್ವರ ಬಂದಂತಾಗುತ್ತದೆ.
* ಐದು ಮೈಲು ದೂರ ಮೂರು ಸಲ ನಡೆದು ದಣಿದು ತಂದೆ ಮತ್ತು ಗುರುಗಳಿಂದ ಪೆಟ್ಟುತಿಂದು ನೊಂದ ಮಗಳಿಗೆ ಉಣಿಸಿ, ಬೆನ್ನು ಅಂಗೈ ಅಂಗಾಲುಗಳಿಗೆ ಬಿಸಿಬಿಸಿ ಎಣ್ಣೆ ಹಚ್ಚಿ ಮಲಗಿಸುವಾಗ ಮಾತೃಹೃದಯ ಮೂಕವಾಗಿ ರೋದಿಸಿತು. ಬಿಸಿ ಕಂಬನಿ ಮಲಗಿದ್ದ ಮಗಳ ಮೇಲೆ ತೊಟ್ಟಿಕ್ಕುತ್ತಿತ್ತು.
* ಹಂಸಾಳ ಅಂತರಂಗದಲ್ಲಿ ಟೀಚರಾಗಬೇಕೆಂಬ ಆಸೆ ಹುದುಗಿ ಕುಳಿತುಕೊಂಡಿತು. ಅವಳು ಗುರುಗಳಿಗೆಲ್ಲಾ ಅಚ್ಚುಮೆಚ್ಚಿನವಳಾಗಿದ್ದಳು. ಟೀಚರಾಗುವ ಆಸೆ ಅಂತರಾಳದಲ್ಲಿ ಕುಳಿತು ಕಲಿಕೆಯತ್ತ ಮನ ಮುಳುಗುತ್ತಿತ್ತು.
* ಹಂಸಾಳಿಗೆ ತನ್ನ ಮಕ್ಕಳು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಬೇಕು, ಅದು ನೌಕರಿ, ಪದವಿ, ಅಂತಸ್ತುಗಳಲ್ಲಿ ಮಾತ್ರವಲ್ಲ, ಮಾನವೀಯತೆ, ಪ್ರಾಮಾಣಿಕತೆ, ಸತ್ಯ, ತಪ್ಪು ಮಾಡಿದರೆ ಅದನ್ನು ಒಪ್ಪಿಕೊಳ್ಳುವವರಾಗಬೇಕು. ಅವರು ಉನ್ನತ ವ್ಯಕ್ತಿಗಳಾಗಬೇಕು ಎಂದು ಬಯಸುತ್ತಿದ್ದಳು. ಶಿಕ್ಷಿಸುತ್ತಿದ್ದಳು ಕೂಡ.
* ಹಂಸಾಯನ ಮಾಡಿದ ಜೀವನ ಜಲನಿಧಿಯಾದದ್ದು ಉತ್ಪ್ರೇಕ್ಷೆಯಲ್ಲ.
ಈ ಕೃತಿ ಲೇಖಕರ ಬಾಲ್ಯ, ತಾರುಣ್ಯ, ಯೌವನದೊಡನೆ ಅವರ ಪರಿಸರ ಪ್ರೀತಿ, ಸಾಂಸಾರಿಕ ಬಂಧ, ವೃತ್ತಿ ಧನ್ಯತೆ, ಪ್ರವೃತ್ತಿ ಗೇಯತೆ, ಪರೋಪಕಾರ, ನಿವೃತ್ತಿಯ ನಂತರದ ದಿನಗಳು…. ಮೊದಲಾದುವುಗಳನ್ನು ಆಪ್ತವಾಗಿ ಪರಿಚಯಿಸಿವೆ. ಅಂದಿನ ಮಲೆನಾಡಿನ ಹಳ್ಳಿಯ ಬದುಕನ್ನು ಹೃದ್ಯವಾಗಿ ಮನಗಾಣಿಸಿದೆ. “ಒಂದಕ್ಕಾದ್ರೆ ಏನಾದರೂ ಮಾಡು, ಎರಡಕ್ಕಾದ್ರೆ ಮಾತ್ರ ದಯಮಾಡಿ ಕೂತ್ಕೋ!”,” ಶಾಲೆಯ ಹೆಡ್ಮಾಸ್ಟ್ರು ಅಲ್ವೇ? ಹೆಡ್ಡಲ್ಲಾ ಶಾಲೆಯಲ್ಲಿ ಇದ್ರೆ ಅವನಾದರೂ ಏನು ಮಾಡಬಲ್ಲ?… ಮೊದಲಾದ ಹತ್ತಾರು ಪ್ರಸಂಗಗಳು ಓದಲೇ ಬೇಕೆಂದು ಪ್ರೇರೇಪಿಸುತ್ತವೆ.
ಸಾವಿತ್ರಿ ಮನೋಹರ್ (9741501525) ಅವರ ‘ಹಂಸಾಯನ’ ಆತ್ಮಕಥೆಯಾದರೂ ಯಶಸ್ವೀ ಬದುಕ ಧೀರೆಯೊಬ್ಬರನ್ನು ಪರಿಚಯಿಸಿದ ಕೃತಿ. ಬರೆಯುವಿಕೆಯಲ್ಲಿನ ಪ್ರಾಮಾಣಿಕತೆ ಗಮನ ಸೆಳೆಯುತ್ತದೆ. ಹೇಳಲು ಇನ್ನೆಷ್ಟು ವಿಷಯಗಳು ಇರಬಹುದೆನ್ನುವ ಕುತೂಹಲವನ್ನೂ ಮೂಡಿಸುತ್ತದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ವೈವಿಧ್ಯಮಯವಾಗಿ ತಮ್ಮನ್ನು ತೊಡಗಿಸಿಕೊಂಡು ಸದಾ ಉತ್ಸಾಹಿಗಳಾಗಿರುವ ಸಾವಿತ್ರಿ ಮನೋಹರ್ ಅವರ ಕ್ರಿಯಾಶೀಲತೆ ಸದಾ ಮೇಲ್ಮುಖವಾಗಿರಲೆಂದು ಆಶಿಸುತ್ತ ಒಂದೊಳ್ಳೆಯ ನವರಸಭರಿತ ಆತ್ಮಕೃತಿಗಾಗಿ ಹಾರ್ದಿಕವಾಗಿ ಅಭಿನಂದಿಸುವೆ.
ವಿಮರ್ಶಕ ಪ್ರದೀಪ ಕುಮಾರ ಹೆಬ್ರಿ
ಕನ್ನಡ ಸಾಹಿತ್ಯ ಕ್ಷೇತ್ರದ ಬಹುತೇಕ ಎಲ್ಲ ಪ್ರಕಾರಗಳಲ್ಲೂ ಕೆಲಸ ಮಾಡಿರುವ ಡಾ. ಪ್ರದೀಪ ಕುಮಾರ ಹೆಬ್ರಿ ಇವರು ಆಕರ್ಷಕ ಬರಹಗಾರರು. ‘ಮಹಾಕಾವ್ಯಗಳ ಕವಿ’ ಎಂದೇ ಎಲ್ಲರ ಪ್ರೀತ್ಯಾಭಿಮಾನಗಳಿಗೆ ಪಾತ್ರರಾದ ಇವರು ಬಹುಮುಖ ಪ್ರತಿಭಾವಂತರಾಗಿದ್ದಾರೆ. ತಬಲ, ನೃತ್ಯ, ನಾಟಕ, ಕಾವ್ಯ ವ್ಯಾಖ್ಯಾನ ಎಲ್ಲದರಲ್ಲೂ ತಮ್ಮನ್ನು ಗುರುತಿಸಿಕೊಂಡವರು. ಇವರ ಪ್ರಕಟಿತ ಕೃತಿಗಳ ಸಂಖ್ಯೆ ಐನೂರಕ್ಕೆ ಸಮೀಪಿಸುತ್ತಿರುವುದು ಇವರ ಪುಸ್ತಕ ಪ್ರೀತಿಗೆ ಸಾಕ್ಷಿಯಾಗಿದೆ. ಇವರು ಕೃತಿಕಾರರನ್ನು ಪ್ರೋತ್ಸಾಹಿಸುವ ಪರಿ ಬಸವಣ್ಣನವರ ‘ಎನಗಿಂತ ಕಿರಿಯರಿಲ್ಲ’ ಎಂಬ ಮಾತಿಗೆ ಸಾಕ್ಷಿಯಾಗಿದೆ.
ಲೇಖಕರ ಬಗ್ಗೆ :
ಶ್ರೀಮತಿ ಸಾವಿತ್ರಿ ಮನೋಹರ್ ಇವರು 1949ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸದ ಹಂದಿಗೋಡು ಪುಟ್ಟದೇವರಯ್ಯ ಮತ್ತು ಆಗುಂಬೆಯ ನಾಗಮ್ಮ ಇವರ ಸುಪುತ್ರಿ. ಎಂ.ಎ., ಬಿ.ಎಡ್. ಪದವಿ ಗಳಿಸಿದ ಇವರು ತೆಳ್ಳಾರು ಸರಕಾರಿ ಪ್ರೌಢಶಾಲೆಯ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ ದುಡಿದು ನಿವೃತ್ತರಾದರು. 1976ರಲ್ಲಿ ಕಾರ್ಕಳ ಭುವನೇಂದ್ರ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶುಂಠಿಪಾಡಿ ಮನೋಹರ ರಾಯರ ಧರ್ಮಪತ್ನಿಯಾಗಿ ಸಾವಿತ್ರಿ ಮನೋಹರ್ ಎಂದು ಪ್ರಸಿದ್ಧರಾದರು.
ತನ್ನ ಎಳವೆಯಿಂದಲೇ ಬರೆಯಲು ಆರಂಭಿಸಿದ ಇವರ ಸಾಹಿತ್ಯಿಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಸಂಖ್ಯಾತ ಬಹುಮಾನ ವಿಜೇತೆಯಾದ ಇವರು 18 ಕೃತಿಗಳನ್ನು ರಚಿಸಿರುವುದಲ್ಲದೇ, ತಾಯಿಯ ಹೆಸರಲ್ಲಿ ಪುನ್ನಾಗ ಪ್ರಕಾಶನ ಆರಂಭಿಸಿ 8 ಕೃತಿಗಳನ್ನು ಪ್ರಕಟಿಸಿದ್ದಾರೆ. ನೂರಾರು ಕವಿಗೋಷ್ಠಿ, ಕಥಾಗೋಷ್ಠಿ, ವಿಚಾರ ಮಂಡನೆ, ಅಧ್ಯಕ್ಷತೆ, ನಿರೂಪಕಿಯಾಗಿ ಭಾಗವಹಿಸಿದ್ದಾರೆ. ನಾಟಕ ರಚನೆ, ನಿರ್ದೇಶನ ಮತ್ತು ಅಭಿನಯ ಚತುರೆಯಾದ ಇವರು ಆಕಾಶವಾಣಿ ಕಲಾವಿದೆಯೂ ಹೌದು.
10ನೇ ವರ್ಷದಲ್ಲಿ ಪ್ರಜಾವಾಣಿಯ ‘ಜಾಣ ಪುಟಾಣಿ’ ಪ್ರಶಸ್ತಿ, ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗ ‘ಬಾಲ ಸಾಹಿತಿ’ ಪ್ರಶಸ್ತಿ, ಕಾಲೇಜಿನಲ್ಲಿ ಅಭಿನಯಕ್ಕಾಗಿ ‘ಮಿಸ್ ಕ್ಯಾಟ್’ ಪ್ರಶಸ್ತಿ, ಭಾರತ ಸಂಸ್ಕೃತಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಎನ್. ಪಂಕಜಾ ಪ್ರಶಸ್ತಿ, ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ.) ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಉತ್ತಮ ಕಾರ್ಯಕ್ರಮ ನಿರ್ವಾಹಕಿ ಪ್ರಶಸ್ತಿ, ಉತ್ತಮ ಶಿಕ್ಷಕಿಗೆ ಪಂಡಿತ ಪಾವಂಜೆ ಸುಬ್ರಾಯ ಭಟ್ಟ ಪ್ರಶಸ್ತಿ, ಕರುನಾಡ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಗೋವದಿಂದ, ಆರ್.ಎಸ್.ಟಿ. ಡಿಜಿಟಲ್ ಮೀಡಿಯಾ ಪ್ರಶಸ್ತಿ ನಮ್ಮ ಕಾರ್ಲದಿಂದ, ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ ಮಂತ್ರಾಲಯ, ಕನ್ನಡ ಡಿಂಡಿಮ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಕ್ಕಳ ಸಾಹಿತ್ಯ ಸಂಗಮ ಮಂಗಳೂರಿನಿಂದ, ರಾಷ್ಟ್ರೀಯ ಪ್ರತಿಭೋತ್ಸವ ಪ್ರಶಸ್ತಿ ಉಡುಪಿ, ನೀಳಾದೇವಿ ದತ್ತಿ ನಿಧಿ ಪ್ರಶಸ್ತಿ ಬೆಂಗಳೂರು ಇವು ಇವರ ಅಪ್ರತಿಮ ಬಹುಮುಖ ಪ್ರತಿಭೆಗೆ ಸಂದ ಗೌರವ.
ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಗಣ್ಯರ ಎದುರು ಲೆಕ್ಕವಿಲ್ಲದಷ್ಟು ಪುರಸ್ಕಾರಗಳನ್ನು ಸ್ವೀಕರಿಸಿದ ಖ್ಯಾತಿ ಇವರದ್ದು. ಗ್ರಾಮ ಪಂಚಾಯತ್ ಸಾಕ್ಷರತಾ ಆಂದೋಲನ ಮಹಿಳಾ ತರಬೇತುದಾರರಾಗಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ಕಾಂತಾವರ ಕನ್ನಡ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ, ಭಾರತ್ ಸ್ಕೌಟ್ಸ್ ಗೈಡ್ಸ್ ನ ಅತ್ಯುನ್ನತ ತರಬೇತಿಯಾದ ಹಿಮಾಲಯ ವುಡ್ ಬ್ಯಾಡ್ಜ್ ಪಡೆದ ತಾಲೂಕಿನ ಪ್ರಥಮ ಗೈಡ್ ಕ್ಯಾಪ್ಟನ್ ಆಗಿರುವ ಹೆಗ್ಗಳಿಕೆ ಇವರದ್ದು. ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಕಾರ್ಯ ನಿರ್ವಹಿಸಿದ ಅನುಭವಿಯಾಗಿದ್ದಾರೆ.
ತೋಟಗಾರಿಕೆ, ಪೈಂಟಿಂಗ್, ನಾಟಕ ರಚನೆ, ನಿರ್ದೇಶನ, ಅಭಿನಯ, ಮೂಕಾಭಿನಯ, ಓದು, ಸಾಹಸ ಪ್ರವಾಸಗಳು, ಸಾರ್ವಜನಿಕ ಭಾಷಣಗಳು, ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡುವುದು. ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಕೊಡಿಸುವುದು, ಮಾರ್ಗದರ್ಶನ, ಶಟ್ಲ್-ಬ್ಯಾಡ್ಮಿಂಟನ್ ಆಡುವುದು, ಆಕಾಶವಾಣಿಯ ಚಿಂತನ, ವನಿತಾವಾಣಿಯಲ್ಲಿ ಕಾರ್ಯಕ್ರಮ ನೀಡುವರು, ಸಾಹಿತ್ಯ, ಕಮ್ಮಟಗಳ ಜೊತೆಗೆ ಶಿಬಿರಗಳನ್ನು ಏರ್ಪಡಿಸುವುದು ಇವರ ಹವ್ಯಾಸವಾಗಿದೆ.
ಎಪ್ಪತ್ತರ ಇಳಿ ವಯಸ್ಸಿನಲ್ಲೂ ಇಪ್ಪತ್ತರ ಲವಲವಿಕೆಯ ಅವರ ಜೀವನ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ. ಅವರ ಬಾಳು ಆರೋಗ್ಯ ನೆಮ್ಮದಿಯ ಬೀಡಾಗಲಿ ಎಂದು ಹಾರೈಸೋಣ.