Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಡಾ. ಶ್ರೀಧರ ಎಚ್.ಜಿ. ಅವರ ‘ಶಾಸ್ತ್ರ ಸಂಕಲ್ಪ’ : ಬತ್ತದ ಸೆಲೆ
    Article

    ಪುಸ್ತಕ ವಿಮರ್ಶೆ | ಡಾ. ಶ್ರೀಧರ ಎಚ್.ಜಿ. ಅವರ ‘ಶಾಸ್ತ್ರ ಸಂಕಲ್ಪ’ : ಬತ್ತದ ಸೆಲೆ

    May 8, 2024No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕನ್ನಡದ ಮಹತ್ವದ ಸಂಶೋಧಕರಲ್ಲೊಬ್ಬರಾದ ಡಾ. ಶ್ರೀಧರ ಎಚ್. ಜಿ ಅವರು ಪ್ರಾಧ್ಯಾಪಕ ಹುದ್ದೆಯ ಜೊತೆಗೆ ಸಾಹಿತ್ಯ ವಿಮರ್ಶೆ, ಸಂಪಾದನೆ, ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು. ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದರೂ ಸಂಶೋಧನೆಯ ಮೇಲಿನ ಆಸಕ್ತಿ ಇನ್ನೂ ಬತ್ತಿಲ್ಲ ಎನ್ನುವುದಕ್ಕೆ ಇವರು ಇತ್ತೀಚೆಗೆ ಹೊರತಂದ ‘ಶಾಸ್ತ್ರ ಸಂಕಲ್ಪ’ವೇ ಸಾಕ್ಷಿ. ವಿಶೇಷ ಒಳನೋಟಗಳಿಂದ ಕೂಡಿದ ಈ ಕೃತಿಯು ಕನ್ನಡ ಸಂಶೋಧನಾ ಜಗತ್ತಿನಲ್ಲಿ ಹೊಸ ಭಾಷ್ಯವನ್ನು ಬರೆಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.

    ಯಾವುದೇ ವ್ಯಕ್ತಿಯ ಪ್ರತಿಭೆಯು ಪ್ರಕಟಗೊಂಡಾಗ ಆಯಾ ಕಾಲದ ಸನ್ನಿವೇಶ ಮತ್ತು ಪರಿಣಾಮಗಳು ಚಾರಿತ್ರಿಕ ದಾಖಲೆಗಳಾಗಿ ಉಳಿಯುತ್ತವೆ. ಅವುಗಳು ಆ ಸಂದರ್ಭದ ಸಾಮಾಜಿಕ, ರಾಜಕೀಯ ಪರಿಸ್ಥಿತಿ ಮತ್ತು ಬದುಕಿನ ಮೌಲ್ಯಗಳ ಅಭಿವ್ಯಕ್ತಿಯಾಗಿರುವುದರಿಂದ ಅವುಗಳ ಅಧ್ಯಯನ ನಿರಂತರವಾಗಿರುತ್ತವೆ. ಒಮ್ಮೆ ಓದಿದಾಗ ಗಮನಕ್ಕೆ ಬಾರದಿದ್ದ ವಿಚಾರವು ಮರು ಓದಿನ ಬಳಿಕ ಥಟ್ಟನೆ ಹೊಳೆದು, ಮೊದಲು ಅರ್ಥೈಸಿಕೊಂಡಿದ್ದ ವಿಚಾರ ಇನ್ನಷ್ಟು ಸ್ಫುಟಗೊಂಡಾಗ ಇಂಥ ಅಧ್ಯಯನ ಸಾರ್ಥಕವಾಗುತ್ತದೆ.

    ವಿಶ್ವದ ಎಲ್ಲ ಗ್ರಂಥಸ್ಥ ಭಾಷೆಗಳ ಜೀವನದಿ ಎನ್ನಬಹುದಾದ ಮಹಾಕಾವ್ಯದ ವಿವಿಧ ಮಾದರಿಗಳಿರುವುದು ಹಳೆಯ ಸಾಹಿತ್ಯದಲ್ಲಿಯೇ. ಕನ್ನಡ ಭಾಷೆಯಲ್ಲಿ ಅಂಥ ಮಾದರಿಗಳಿರುವುದು ಹಳಗನ್ನಡದಲ್ಲಿಯೇ. ಕನ್ನಡನಾಡಿನ ಪರಂಪರೆಯ ಮುಖಗಳಾದ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮಾಜ, ಧರ್ಮ, ಕಲೆಗಳ ಇತಿಹಾಸದ ಬೆಳವಣಿಗೆಯನ್ನು ಕ್ರಮವಾಗಿ ತಿಳಿದು ದಾಖಲಿಸಬೇಕಾದರೆ ಹಳಗನ್ನಡ ಭಾಷೆ, ಸಾಹಿತ್ಯಗಳ ಅನುಸಂಧಾನ-ಅಧ್ಯಯನಗಳು ಅಗತ್ಯ. ಕನ್ನಡನಾಡು-ನುಡಿಗಳ ಸುದೀರ್ಘ ಪರಂಪರೆಯ ಮಾಹಿತಿಗಳೆಲ್ಲವೂ ಹಳಗನ್ನಡ ಭಾಷೆಯ ಗ್ರಂಥಸ್ಥ ಸಾಹಿತ್ಯ ಮತ್ತು ಶಾಸನ ಸಾಹಿತ್ಯಗಳನ್ನು ಅವಲಂಬಿಸಿರುತ್ತವೆ. ನಮ್ಮ ನಡೆ ನುಡಿಗಳಿಗೆ ಬೇಕಾಗುವ ಸಾಹಿತ್ಯದ ರಸಾನುಭವ, ಜ್ಞಾನಕೋಶದ ವಸ್ತು ವಿವರಗಳು ಮತ್ತು ಮಾದರಿಗಳು, ಧರ್ಮಸೂಕ್ಷ್ಮದ ಸಂಗತಿಗಳು, ಜಿಜ್ಞಾಸೆಗಳು, ಮಾನವಿಕ – ಆಧುನಿಕ ಶೋಧಗಳ ಹಳೆಯ ನೆಲೆಗಳು ಹಾಗೂ ಶಾಸ್ತ್ರ ವಿಚಾರಗಳ ಅಗಾಧ ಭಂಡಾರವನ್ನು ಹೊರತೆಗೆಯುವವರಿಗೆ ಹಳಗನ್ನಡ ಸಾಹಿತ್ಯದಲ್ಲಿ ಹೇರಳ ಅವಕಾಶಗಳಿವೆ ಎಂಬುದನ್ನು ಈ ಕೃತಿಯು ಸಾಬೀತು ಪಡಿಸುತ್ತದೆ.

    ಈ ಸಂಕಲನದ ಮೊದಲ ಮೂರು ಲೇಖನಗಳು ಪಂಪನ ಕುರಿತಾಗಿದ್ದು, 10ನೇ ಶತಮಾನದ ಸಾಹಿತ್ಯ ಚಿಂತನೆ ಮತ್ತು ಅಭಿವ್ಯಕ್ತಿಗಳ ನಡುವಿನ ಸಂಬಂಧವನ್ನು ವಿವರಿಸುತ್ತವೆ. ಆ ಕಾಲದ ಮಹತ್ವವಿರುವುದು ಅಂದಿನ ಹಲವು ವಿಧದ ಬಿಕ್ಕಟ್ಟುಗಳಲ್ಲಿ. ಕನ್ನಡನಾಡಿನ ಜನರ ಬದುಕು, ಅದರ ಹಿಂದಿನ ವಾಸ್ತವವನ್ನು ಪಂಪನ ಕಾವ್ಯಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಲೇಖನಗಳು ಸಾಮಾಜಿಕ ಅಸಮತೋಲನ, ಜಾತಿಭೇದ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸರದ ಪ್ರಭಾವಗಳ ಕುರಿತು ಮಾತನಾಡುತ್ತಾ 10ನೇ ಶತಮಾನದ ಸಾಮಾಜಿಕ ಚಿತ್ರಣದ ಬಗ್ಗೆ ಸಾಕಷ್ಟು ಹೊಳಹು, ಚಾರಿತ್ರಿಕ ಒಳನೋಟಗಳನ್ನು ನೀಡುತ್ತವೆ. ಪಂಪನ ಕಾವ್ಯಗಳು ಪ್ರತಿ ತಲೆಮಾರಿನಲ್ಲೂ ನವೀಕರಣಗೊಳ್ಳುವ ಬಗೆಯನ್ನು ಮನಗಾಣಿಸುತ್ತವೆ.
    ಕಾವ್ಯವು ತನ್ನ ಒಡಲಲ್ಲಿರಿಸಿಕೊಂಡ ಆಶಯಗಳನ್ನು ಮೀರಿ ಇನ್ನೊಂದು ಕಾಲದ, ಇನ್ನೊಂದು ಪ್ರದೇಶದ ಸವಾಲುಗಳಿಗೆ, ಸಮಾಧಾನಗಳಿಗೆ ಕನ್ನಡಿಯಾಗಬಲ್ಲುದೇ ಎಂಬ ಪ್ರಶ್ನೆಗೆ ರಾಮಾಯಣ, ಮಹಾಭಾರತದಂಥ ಕೃತಿಗಳು ಸಮರ್ಥ ಉತ್ತರಗಳಾಗಿವೆ. ವ್ಯಾಸಭಾರತವನ್ನು ಹೊಸ ಕಾಲದ ಕಣ್ಣಿನಿಂದ ನೋಡಿದ ಮೇರು ಕವಿಗಳ ಪ್ರಯತ್ನಗಳು ಪಂಪನ ‘ವಿಕ್ರಮಾರ್ಜುನ ವಿಜಯ’, ರನ್ನನ ‘ಸಾಹಸಭೀಮ ವಿಜಯಂ’, ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯ ರೂಪದಲ್ಲಿ ಮೈದಳೆದಿವೆ. ಇಂಥ ಮರುಸೃಷ್ಟಿಗಳಿಗೆ ಅವುಗಳದ್ದೇ ಆದ ಧ್ಯೇಯ ಧೋರಣೆಗಳಿವೆ. ವಿಮರ್ಶೆಯ ಕಣ್ಣುಗಳಿವೆ. ಜನಾನುರಾಗಿ ಅಂತಃಕರಣವಿದೆ. ಅಂದಿನ ಕಾಲದ ಜೀವನ ಮೌಲ್ಯಗಳನ್ನು ಇಂದಿನ ಭಾವನಾತ್ಮಕ, ತಾರ್ಕಿಕ ಮತ್ತು ತಾತ್ವಿಕ ವಿಶ್ಲೇಷಣೆಗೊಳಪಡಿಸಿ ಓದುಗನನ್ನು ಹೊಸ ಹುಡುಕಾಟಗಳಿಗೆ ಸಜ್ಜುಗೊಳಿಸುವ ಶಕ್ತಿಯಿದೆ. ‘ಲಕ್ಷ್ಮೀಶನು ಚಿತ್ರಿಸಿರುವ ಶೃಂಗಾರ ಪ್ರಸಂಗಗಳು’ ಎಂಬ ಲೇಖನದಲ್ಲಿ ‘ಜೈಮಿನಿಭಾರತ’ವನ್ನು ಆಧಾರವಾಗಿಟ್ಟುಕೊಂಡು ಶೃಂಗಾರ ರಸಗ್ರಹಣ ಪ್ರಕ್ರಿಯೆಗೆ ಅನುಕೂಲ ಮಾಡಿಕೊಡುವಂಥ ಅನೇಕ ಕಾವ್ಯಭಾಗಗಳನ್ನು ಲೇಖಕರು ಆಯ್ದು ಕೊಟ್ಟಿದ್ದಾರೆ. ಪದ್ಯದ ಸಾಲುಗಳ ಹಿನ್ನೆಲೆಯಲ್ಲಿ ಶೃಂಗಾರದ ಅರ್ಥ ಆಶಯಗಳನ್ನು ಬಗೆಯುವುದರೊಂದಿಗೆ ಮನಸೂರೆಗೊಳ್ಳುವ ರಚನೆ ಮತ್ತು ಉಕ್ತಿಗಳ ಮೂಲಕ ಕವಿಯ ವರ್ಣನಾ ವೈಖರಿ, ಭಾಷಾ ಸಂಪತ್ತು, ತಾತ್ವಿಕ ಜಿಜ್ಞಾಸೆಯ ಗುಣ, ಚತುರೋಕ್ತಿಗಳ ಸ್ವಾರಸ್ಯಗಳನ್ನು ವಿವರಿಸಿದ್ದಾರೆ. ಜೀವನಪ್ರೀತಿ, ಗಂಡುಹೆಣ್ಣಿನ ಸಂಬಂಧ, ದೈವೀಕತೆ ಮತ್ತು ಮಾನವೀಯತೆಗಳ ಮೇಲಿನ ಕಾಳಜಿ, ವ್ಯಕ್ತಿತ್ವದ ಎತ್ತರವನ್ನು ಅಳೆಯುವ ಮಾನದಂಡದ ಬಗ್ಗೆ ಇರುವ ಕುತೂಹಲಗಳು ದಾಖಲಾಗಿವೆ.

    ‘ಸೀಮೆಯ ಪರಿಕಲ್ಪನೆ’ಯಲ್ಲಿ ಹವ್ಯಕ ಸಂಸ್ಕೃತಿ ನಡೆದು ಬಂದ ದಾರಿಯ ಸ್ಥೂಲ ಚಿತ್ರಣವಿದೆ. ಶಾಸನ ಸಾಮಾಗ್ರಿಗಳನ್ನು ಆಧಾರವಾಗಿಟ್ಟುಕೊಂಡು ನಾಡು-ಸೀಮೆ, ಮಂಡಲ-ಗ್ರಾಮ, ದೇವಾಲಯ ಪೌರೋಹಿತ್ಯಗಳ ವಿವರಗಳನ್ನು ಲೇಖನವು ತರ್ಕಬದ್ಧವಾಗಿ ವಿವೇಚಿಸುತ್ತದೆ. ಹವ್ಯಕ ಸಂಸ್ಕೃತಿಯ ಬಗ್ಗೆ ಇಂಥ ಅಧ್ಯಯನ ನಡೆಯದಿರುವುದರಿಂದ ಈ ಲೇಖನಕ್ಕೆ ಸಾಂಸ್ಕೃತಿಕ ಮಹತ್ವವಿದೆ.

    ಈ ಕೃತಿಯೊಳಗೆ ಚಿರಪರಿಚಿತ, ತುಸು ಪರಿಚಿತ ಮತ್ತು ಅಪರಿಚಿತ ಚೇತನಗಳು ಬೆಳಗುತ್ತವೆ. ಕಾಡೊಳಗಿನ ಹೂವಾಗಿ, ಎಲೆಮರೆಯ ಹಣ್ಣಾಗಿ, ಗೂಡಿನೊಳಗಿನ ದೀಪವಾಗಿ, ಉರಿದು ಪರಿಮಳ ಬೀರಿದ ಕರ್ಪೂರದಂಥ ಅದೆಷ್ಟೋ ಮಂದಿ ಕನ್ನಡ ಸಾಹಿತ್ಯ ಲೋಕದಲ್ಲಿದ್ದಾರೆ. ಅಧ್ಯಾಪಕರಾಗಿ ಜೀವನವನ್ನು ಆರಂಭಿಸಿ ಕವಿ, ಕತೆಗಾರ, ನಾಟಕಕಾರ, ಅನುವಾದಕರಾಗಿ ಸಾಹಿತ್ಯದ ಸೇವೆಯನ್ನು ಮಾಡಿದರೂ ತಮ್ಮ ಪ್ರತಿಭೆಗೆ ತಕ್ಕ ಮನ್ನಣೆಯನ್ನು ಪಡೆಯದ ಎಂ.ಎನ್. ಕಾಮತ್, ‘ಸದ್ಗುಣಿ ಕೃಷ್ಣಾಬಾಯಿ’ ಎಂಬ ಕೃತಿಯನ್ನು ರಚಿಸುವ ಮೂಲಕ ಕನ್ನಡದ ಮೊದಲ ಕಾದಂಬರಿಗಾರ್ತಿ ಎನಿಸಿಕೊಳ್ಳಬೇಕಿದ್ದರೂ ಕಾರಣಾಂತರಗಳಿಂದ ಆ ಪಟ್ಟವನ್ನು ಕಳೆದುಕೊಂಡ ಸಂತೂಬಾಯಿ, ತೆರೆಮರೆಯಲ್ಲೇ ಉಳಿದ ಲೇಖಕಿ ಯಮುನಾ ಲಿಂಗಪ್ಪ ಮುಂತಾದವರ ಸಾಹಿತ್ಯಿಕ ಸಾಮಾಜಿಕ ಬದುಕಿನ ವಿಸ್ತೃತ ರೂಪ ದೊರಕುತ್ತದೆ. ಹುಟ್ಟಿದ ಊರು, ವಿದ್ಯಾಭ್ಯಾಸ, ವೃತ್ತಿ, ಕೌಟುಂಬಿಕ ವಿವರಗಳನ್ನು ನೀಡಿರುವುದರಿಂದ ಅವರ ಬದುಕಿನ ಹಲವು ಮಗ್ಗುಲುಗಳ, ಬಹುಮುಖಿ ಆಯಾಮಗಳ ಪರಿಚಯವಾಗುತ್ತದೆ. ಬರಹದ ಭಿತ್ತಿಯಲ್ಲಿ ಅವರ ವ್ಯಕ್ತಿತ್ವ ಅರಳುತ್ತದೆ. ಅವರು ಬಾಳಿ ಬದುಕಿದ ಕಾಲದ ಸಾಮಾಜಿಕ ಸ್ಥಿತ್ಯಂತರಗಳ ಕುರಿತ ಮೌಲಿಕ ವಿಚಾರಗಳು ವ್ಯಕ್ತವಾಗುತ್ತವೆ. ಸಾಹಿತ್ಯಿಕ ಸಾಧನೆಯ ಕುರಿತು ಹೆಚ್ಚಿನ ಕುತೂಹಲ ತಳೆಯುವಂತೆ ಮಾಡುತ್ತದೆ. ಎಲ್ಲೂ ದೊರಕದ ಬದುಕಿನ ವಿವರಗಳು, ಸಾಹಿತ್ಯ ಲೋಕದಲ್ಲಿ ಅವರು ನಡೆಸಿದ ಸಾಹಸ-ಸಾಧನೆಗಳ ನಿರೂಪಣೆಯೊಂದಿಗೆ ಅವರಿಗೆ ಸೂಕ್ತ ಗೌರವ ದೊರಕದಿರುವ ಬಗೆಗಿನ ವಿಷಾದ ಮಿಡಿಯುತ್ತಿದೆ. ಯಾವುದೇ ಕಾಂಡದ ಹಂಗಿಲ್ಲದೆ ಮಣ್ಣಿನ ನಂಟನ್ನುಳಿಸಿಕೊಂಡು ಬೆಳೆಯುವ, ತನ್ನೆಲ್ಲಾ ಎಲೆಗಳನ್ನು ಕಳೆದುಕೊಂಡರೂ ಬೇಸಿಗೆ ಕಾಲದಲ್ಲಿ ಅರಳಿ ಪರಿಮಳ ಬೀರುವ ನೆಲಸಂಪಗೆಯಂತೆ ಹೆಚ್ಚಿನವರ ಗಮನಕ್ಕೆ ಬಾರದೆ, ಪ್ರಶಸ್ತಿ, ಪ್ರಚಾರ, ಸನ್ಮಾನ ಮುಂತಾದ ಮನ್ನಣೆಗಳ ಒತ್ತಾಸೆ, ಲಾಲಸೆಗಳಿಗೆ ಬಲಿಯಾಗದೆ, ಸಾಹಿತ್ಯದ ಅಪ್ಪಟ ಸೇವೆಯನ್ನು ಮಾಡಿ ಜನ್ಮಸಾಫಲ್ಯವನ್ನು ಪಡೆದ ಕನ್ನಡ ಮಣ್ಣಿನ ಮಹನೀಯರನ್ನು ಕುರಿತ ಲೇಖನಗಳನ್ನು ಅವರ ಸಾಹಿತ್ಯದ ಪ್ರವೇಶಿಕೆಯಾಗಿಯೂ ಯುಗಧರ್ಮದ ದರ್ಶನವಾಗಿಯೂ ನೋಡಬಹುದು.

    ದಕ್ಷಿಣ ಕನ್ನಡದ ಪಂಡಿತ ಪರಂಪರೆಯ ಮೇಲೆ ಕರ್ನಾಟಕಕ್ಕೆ ವಿಶೇಷ ಗೌರವವಿದೆ. 20ನೇ ಶತಮಾನದ ಆದಿಭಾಗದಿಂದ ತೊಡಗಿ ಇವತ್ತಿನವರೆಗೆ ಈ ಸಮೂಹವು ಸಾಹಿತ್ಯ, ಸಂಶೋಧನೆ, ಹಳಗನ್ನಡ ಕಾವ್ಯಾಧ್ಯಯನ, ಅಧ್ಯಾಪನ, ಶಾಸ್ತ್ರಸಾಹಿತ್ಯ ವಿಚಾರ, ವಿಮರ್ಶೆಗಳಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದೆ. ಮೊಗ್ಲಿಂಗ್, ಕಿಟ್ಟೆಲ್, ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಶಿವರಾಮ ಕಾರಂತ, ಸೇಡಿಯಾಪು ಕೃಷ್ಣ ಭಟ್ಟ, ಕಡವ ಶಂಭು ಶರ್ಮ ಮುಂತಾದವರಿಂದ ತೊಡಗಿ ವೆಂಕಟರಾಜ ಪುಣಿಂಚಿತ್ತಾಯ, ಪಾದೆಕಲ್ಲು ವಿಷ್ಣು ಭಟ್ಟ, ಡಾ. ವಿಘ್ನರಾಜರ ಸಾಧನೆಗಳನ್ನು ಅನುಲಕ್ಷಿಸಿ ಬರೆದ ‘ಗ್ರಂಥ ಸಂಪಾದನೆಗೆ ದಕ್ಷಿಣ ಕನ್ನಡದ ಕೊಡುಗೆ’ ಎಂಬ ಲೇಖನವು ದಕ್ಷಿಣ ಕನ್ನಡದಲ್ಲಿ ನಡೆದ ಹಸ್ತಪ್ರತಿ ಸಂಗ್ರಹ, ಸಂಪಾದನೆಯ ವೈಜ್ಞಾನಿಕ ಕ್ರಮಗಳನ್ನು ವಿವರಿಸುವುದರೊಂದಿಗೆ ತುಳುಗ್ರಂಥಗಳ ಸಂಪಾದನೆಯ ಹಿಂದಿನ ಶ್ರಮಗಳನ್ನು ಗುರುತಿಸುತ್ತದೆ.

    ಪಂಪನ ಕಾವ್ಯಗಳಿಂದ ತೊಡಗಿ ನಿರಂಜನ ವಾನಳ್ಳಿಯ ಪ್ರಬಂಧಗಳವರೆಗೆ ಹಬ್ಬಿರುವ ಲೇಖನಗಳು ಸಂಶೋಧನ ವಿದ್ಯಾರ್ಥಿಗಳಿಗೆ ಹೊಸ ನೋಟ, ಹೊಳಹುಗಳನ್ನು ನೀಡುತ್ತವೆ. ಗಂಭೀರವಾದ ಓದು, ಆಳವಾದ ವಿದ್ವತ್ತು, ಸೂಕ್ಷ್ಮಾವಲೋಕನ, ಪ್ರಖರ ವಿಮರ್ಶಾ ದೃಷ್ಟಿಯಿಂದ ಕೂಡಿದ ವಿಚಾರಗಳು ಕನ್ನಡ ಸಂಸ್ಕೃತಿ ಚಿಂತನೆಗೆ ಹೊಸ ಎಳೆಗಳನ್ನು ಜೋಡಿಸುತ್ತವೆ. ಈ ಕೃತಿಯ ನಿರ್ಮಾಣದ ಹಿಂದೆ ಲೇಖಕರ ಧ್ಯಾನ, ಅಧ್ಯಯನಗಳು ವ್ಯಕ್ತವಾಗುತ್ತಿದ್ದು ಸಾಹಿತ್ಯ ಸಂಶೋಧನೆಗಳೆಡೆಗೆ ತೆರೆದುಕೊಂಡ ಮುಕ್ತ ಮನಸ್ಸಿನ ಪ್ರತಿಫಲನವನ್ನು ಕಾಣುತ್ತೇವೆ. ಕನ್ನಡ ಸಾಹಿತ್ಯ ಸಂಶೋಧನ ಜಗತ್ತಿನಲ್ಲಿ ಇದುವರೆಗೆ ಯಾರೂ ಗಮನಿಸದ ವ್ಯಕ್ತಿ ವಿಚಾರಗಳ ಕುರಿತು ವಿಶೇಷ ವ್ಯಾಸಂಗ, ಚಿಂತನ, ಕ್ಷೇತ್ರಕಾರ್ಯಗಳ ಮೂಲಕ ಸಮಗ್ರ ಮಾಹಿತಿಯನ್ನು ಕೊಡುವ ಲೇಖಕರ ಉದ್ದೇಶ ಸಫಲವಾಗಿದೆ. ವೈವಿಧ್ಯಮಯ ತೋಟಗಳ ಸಮೃದ್ಧ ಫಲಗಳನ್ನು ನೀಡುವ ‘ಶಾಸ್ತ್ರ ಸಂಕಲ್ಪ’ವು ಕನ್ನಡ ನಾಡಿನ ಸಾಂಸ್ಕೃತಿಕ ಅಧ್ಯಯನಕ್ಕೆ ಸಂದ ಮಹತ್ವದ ಕೊಡುಗೆಯಾಗಿದೆ.

    ಪುಸ್ತಕದ ಹೆಸರು : ಶಾಸ್ತ್ರ ಸಂಕಲ್ಪ (ವಿಮರ್ಶಾ ಲೇಖನಗಳ ಸಂಗ್ರಹ)
    ಲೇಖಕರು : ಡಾ. ಶ್ರೀಧರ ಎಚ್.ಜಿ.
    ಪ್ರಕಾಶಕರು : ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಮೈಸೂರು
    ಪ್ರಕಟಗೊಂಡ ವರ್ಷ : 2017
    ಪುಟಗಳು : 155
    ಬೆಲೆ ರೂ : 120

    ಡಾ. ಸುಭಾಷ್ ಪಟ್ಟಾಜೆ :


    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.

    ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್‌ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    ಲೇಖಕರ ಪರಿಚಯ : ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ‘ವಿನಾಯಕ ಸಮುದ್ರ ಗೀತೆಗಳು’, ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಚಿತ್ರಗಳು’, ‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ’, ‘ಪ್ರೊ. ಎಂ. ಮರಿಯಪ್ಪ ಭಟ್‌-ಜೀವನ ಸಾಧನೆ’, ‘ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಯುದ್ಧವರ್ಣನೆಗಳು – ಇವು ಅನನ್ಯ ಕೊಡುಗೆಗಳು. “ಕರ್ಲಮಂಗಲಂ ಶ್ರೀಕಂಠಯ್ಯನವರ ಲೇಖನಗಳು, ‘ಸಮರಸ’, ‘ವಿವಾಹ ನಾಟಕ, ‘ನವನಾಥ ಕಥಾ ಮತ್ತು ಚರ್ಪಟನಾಥ ಶತಕ’, ‘ಕನ್ನಡ ರಾಮಾಯಣ ಗ್ರಂಥ ಸೂಚಿ’, ‘ಕಾರಂತ ಸ್ಮರಣೆ 1’, ‘ಕಡವ ಶಂಭು ಶರ್ಮ ಕೃತಿ ಸಂಚಯ 1, 2, 3, 4 ‘ಕಡವ ಶಂಭು ಶರ್ಮ ಅನುವಾದಿಸಿದ ಕದಲಿ ಮಂಜುನಾಥ ಮಾಹಾತ್ಮ’, ‘ಕಡವ ಶಂಭು ಶರ್ಮರ ಶ್ರೀಮದ್ಭಗವದ್ಗೀತಾ’, ‘ನೆಲದ ಬದುಕು’ ಹಾಗೂ ‘ಭಾರತೀಸುತರ ಕಾದಂಬರಿಗಳು ಮತ್ತು ಸಾಮಾಜಿಕ ಸಂದರ್ಭ’ ಇವರ ಸಂಪಾದಕತ್ವದಲ್ಲಿ ಪ್ರಕಟವಾದ ಕೃತಿಗಳು.

    Share. Facebook Twitter Pinterest LinkedIn Tumblr WhatsApp Email
    Previous Articleವೋಪ್‌ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ
    Next Article ‘ಮನುಶ್ರೀ ದತ್ತಿ ಪ್ರಶಸ್ತಿ’ಗೆ ಹಿರಿಯ ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ಆಯ್ಕೆ
    roovari

    Add Comment Cancel Reply


    Related Posts

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.