‘ಶತಾಮೃತಧಾರೆ’ ಇದು ಅಶೋಕ ಪಕ್ಕಳರ ಚೊಚ್ಚಲ ಕೃತಿ. ಮುಂಬೈನ ಬಂಟರ ಸಂಘದ ಮುಖವಾಣಿ ಬಂಟರವಾಣಿಯಲ್ಲಿ ಅವರು ಬರೆದ ನೂರು ಸಂಪಾದಕೀಯಗಳ ದೊಡ್ಡ ಸಂಕಲನವಿದು. ಇದರಲ್ಲಿ ವೈವಿಧ್ಯಮಯವಾದ ಓದಿಸಿಕೊಂಡು ಹೋಗುವ ನೂರು ಲೇಖನಗಳಿವೆ. ಇವೆಲ್ಲ ನಮ್ಮ ಸಾಂಪ್ರತ ಸಂದರ್ಭಗಳಿಗೆ ಸಂಬಂಧಿಸಿದ ಗಂಭೀರ ಕಾಳಜಿಯುಳ್ಳ ಲೇಖಕನೊಬ್ಬನ ತುಡಿತವೂ ಆಗಿವೆ. ಕವಿ ಮನದ ಚಿಂತಕರಾಗಿರುವ ಪಕ್ಕಳ ಇವರು ಸಮಕಾಲೀನ ತವಕ ತಲ್ಲಣಗಳಿಗೆ ಮುಖಾಮುಖಿಯಾದ ಪ್ರತಿಭೆಯ ಸ್ವರೂಪ ಇಲ್ಲಿ ವಿಸ್ತ್ರತವಾಗಿ ಅನಾವರಣಗೊಂಡಿದೆ. ಹಾಗೆ ನೋಡಿದರೆ ಸಂಪಾದಕೀಯ ಬರಹಗಳು, ಅಂಕಣ ಬರಹಗಳು ಸಮಯ ಸಾಹಿತ್ಯವೇ. ಆದರೆ ಅಶೋಕ ಪಕ್ಕಳ ಇವರ ಪ್ರತಿಭೆ, ಸೃಜನಶೀಲ ಚಿಂತನೆಯಿಂದ ಇಲ್ಲಿನ ಬರವಣಿಗೆ ಸಮಯಾತೀತವೂ ಆಗಿ ತಾಳುವ ಬಾಳುವ ಗುಣವನ್ನು ಹೊಂದಿರುವುದು ವಿಶೇಷ. ಇಲ್ಲಿನ ಲೇಖನಗಳಲ್ಲಿ ಬದುಕನ್ನು ನೋಡುವ, ಅನ್ವೇಷಿಸುವ ಪರಿ ಮನಂಬುಗುವಂತಿದೆ.
ಅಶೋಕ ಪಕ್ಕಳ ಅವರದು ನಾನಾ ಮುಖಗಳ ವ್ಯಕ್ತಿತ್ವ, ಅವರು ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ಯಕ್ಷಗಾನ ತಾಳಮದ್ದಳೆಯ ಕಲಾವಿದರಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹೀಗೆ ನಾನಾ ನೆಲೆಗಳಲ್ಲಿ ದೂರದ ಮುಂಬೈ ಮಹಾನಗರದಲ್ಲಿ ತುಳು ಕನ್ನಡದ ಸಾಂಸ್ಕೃತಿಕ ಪರಿಚಾರಿಕೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರೊಬ್ಬ ಉತ್ತಮ ಚಿಂತನಶೀಲ ಲೇಖಕರೂ ಹೌದು ಎಂಬುದನ್ನು ಈ ಕೃತಿ ಸಾಬೀತುಪಡಿಸಿದೆ. ಪಕ್ಕಳ ಅವರದು ಜನಪರ ನಿಲುವು. ಇಲ್ಲಿನ ಬರವಣಿಗೆಯಲ್ಲಿ ಪಡಿಮೂಡಿರುವ ಚಿಂತನೆಗಳಿಗೆ ಒಂದೇ ಓದು ಸಾಲದು. ಕೆಲವು ಓದುಗರನ್ನು ಅಪೇಕ್ಷಿಸುವ ಸಾಮರ್ಥ್ಯ ಇದೆ. ಸಮಾಜದ ಜನರು ಸರಿದಾರಿಯಲ್ಲಿ ನಡೆಯಬೇಕು, ಬಾಳು ನಮಗೆ ದಕ್ಕಿದ ಅಪೂರ್ವ ಅವಕಾಶ. ರಾಗ ದ್ವೇಷಗಳು ನಮ್ಮಿಂದ ದೂರವಾಗಲಿ, ಪ್ರೀತಿ ಪ್ರೇಮದ ಎಣ್ಣೆ ಮುಗಿಯದಿರಲಿ, ಒಲವು ಗೆಲುವು ನಲಿಯುತ್ತಿರಲಿ ಎಂಬ ಮಹದಾಸೆ ಇಲ್ಲಿನ ಲೇಖನಗಳಲ್ಲಿ ಢಾಳಾಗಿ ಕಾಣಸಿಗುತ್ತದೆ. ನಾವು ಬದುಕುತ್ತಿರುವ ಜಗತ್ತನ್ನು ನಾಳಿನ ತಲೆಮಾರಿಗೆ ಇನ್ನಷ್ಟು ಚೆಲುವಿನದಾಗಿ ಬಿಟ್ಟು ಹೋಗೋಣ ಎಂಬ ಉದಾತ್ತವಾದ ಆಶಯ ಈ ಕೃತಿಯ ಉದ್ದಕ್ಕೂ ಗುಪ್ತಗಾಮಿನಿಯಾಗಿ ಹರಿದಿರುವುದು ವಿಶೇಷ.
ಅಂಕಣ ಸಾಹಿತ್ಯಕ್ಕೆ ರಾಷ್ಟ್ರೀಯ ಮಟ್ಟದ ಸ್ಥಾನಮಾನವನ್ನು ತಂದುಕೊಟ್ಟ ಕೀರ್ತಿ ಖ್ಯಾತ ಸಾಹಿತಿ ಹಾಮಾನಾ ಅವರಿಗೆ ಸಲ್ಲುತ್ತದೆ. ಈ ಅಂಕಣಗಳ ಕುರಿತು ಅವರು ಹೇಳಿರುವ ಒಂದು ಮಾತನ್ನು ಇಲ್ಲಿ ಸ್ಮರಿಸಿಕೊಳ್ಳಬೇಕಾಗಿದೆ. “ಯಾವ ಲೇಖಕನೇ ಆದರೂ ಒಂದಲ್ಲ ಒಂದು ಸಂಸ್ಕೃತಿಗೆ ಸೇರಿದವನಾಗಿರುತ್ತಾನೆ. ಆ ಸಂಸ್ಕೃತಿ ತನ್ನದೇ ಆದ ಮೌಲ್ಯಗಳನ್ನು ಹೊಂದಿರುತ್ತದೆ. ಸಮರ್ಥ ಲೇಖಕ ಈ ಮೌಲ್ಯಗಳನ್ನು ಸೋಸುವ ಕೆಲಸವನ್ನು ಮಾಡುತ್ತಾನೆ. ಹೀಗೆ ಸೋಸಿ ಉಳಿಯುವ ಮೌಲ್ಯಗಳ ಕಡೆಗೆ ತನ್ನ ಓದುಗರನ್ನು ಎಚ್ಚರಿಸುತ್ತಾನೆ. ಲೇಖಕ ತಾನು ಪ್ರತಿಪಾದಿಸುವ ಮೌಲ್ಯಗಳನ್ನು ಮಾನವೀಯ ಮೌಲ್ಯಗಳನ್ನಾಗಿಸುತ್ತಾನೆ. ಇದು ಸತತವಾಗಿ ನಡೆಯುವ ಅನ್ವೇಷಣೆ. ಲೇಖಕರು ಲೋಕಕ್ಕಾಗಿಯಲ್ಲ, ಮೊದಲು ತಮಗಾಗಿ ಬರೆದುಕೊಳ್ಳಬೇಕು” ಎಂಬ ಮಾತು ಅವಲೋಕನೀವಾಗಿದೆ.
ಅಶೋಕ ಪಕ್ಕಳ ಅವರ ಚಿಂತನೆಯೂ ಇದೇ ಬಗೆಯದಾಗಿದೆ. ನಾವು ಒಳ್ಳೆಯವರಾಗಬೇಕು, ನಮ್ಮಲ್ಲಿ ಧನಾತ್ಮಕ ಚಿಂತನೆ ಮೊಳೆಯಬೇಕು. ತಿಳಿದವರು, ಅಕ್ಷರಸ್ಥರು ಹೊಣೆಗೇಡಿಗಳಂತೆ ವರ್ತಿಸಬಾರದು. ಬದುಕು ಬಂಧನವಲ್ಲ, ಬದುಕುವುದು ತೊಳಲಾಟವಲ್ಲ, ಬದುಕಿನಲ್ಲಿ ಮುಖಾಮುಖಿಯಾಗುವ ಪ್ರೀತಿ, ಸುಖ – ದುಃಖ, ನೋವು, ವಿಸ್ಮಯ, ಕೌತುಕಗಳನ್ನು ಒಪ್ಪಿಕೊಳ್ಳುತ್ತಾ ಸಾರ್ಥಕತೆಯನ್ನು ಸಾಧಿಸುವುದು ಸರಿಯಾದ ದಾರಿ ಎಂಬ ದೃಢ ನಿಲುವು ಇಲ್ಲಿ ಪ್ರಕಟವಾಗಿದೆ. ಆತ್ಮಾವಲೋಕನ, ಚಿಕಿತ್ಸಕ ದೃಷ್ಟಿಕೋನ, ಸಾಂಸ್ಕೃತಿಕ ಎಚ್ಚರ, ಪ್ರಗತಿಪರ ನಿಲುವು ಇಲ್ಲಿನ ಬರವಣಿಗೆಯಲ್ಲಿ ಎದ್ದು ಕಾಣುತ್ತದೆ. ನಿಷ್ಠಾವಂತ ಅಂಕಣಕಾರನಿಗೆ ಇರಲೇಬೇಕಾದ ನೈತಿಕ ಧೈರ್ಯ ಪಕ್ಕಳ ಅವರಲ್ಲಿ ಇದೆ. ಹೀಗಾಗಿ ಸುತ್ತಲಿನ ಸಮಾಜವನ್ನು, ನಾಡನ್ನು, ದೇಶವನ್ನು ಕಾಡುತ್ತಿರುವ ನಾನಾ ಸಮಸ್ಯೆಗಳಿಗೆ ಅವರು ಸಶಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಇಲ್ಲಿನ ಪ್ರತಿಯೊಂದು ಲೇಖನವೂ ಬೋಧಪ್ರದವಾಗಿದೆ. ಸುಲಲಿತ ಸುಕುಮಾರ ಶೈಲಿಯಿಂದ ಈ ಕೃತಿ ವಾಚನೀಯವಾಗಿದೆ. ಇಂಗ್ಲೀಷಿನಲ್ಲಿ ಒಂದು ಲೇಖನ ಬರೆಯುವುದನ್ನು ಸ್ಟೋರಿ ಮಾಡುವುದು ಎಂದೇ ಕರೆಯುತ್ತಾರೆ. ಪಕ್ಕಳ ಅವರ ಪ್ರತಿಯೊಂದು ಲೇಖನದಲ್ಲೂ ಕಥನಗುಣ, ಗಾದೆಮಾತು. ವಿಶೇಷವಾದ ವಾಗ್ರೂಢಿಗಳು, ಪಡೆನುಡಿ, ಪುರಾಣ, ಇತಿಹಾಸ, ಐತಿಹ್ಯಗಳ ವಿವರ, ಪ್ರಸಿದ್ಧ ಕವಿ, ಸಾಹಿತಿಗಳ ಹೇಳಿಕೆಗಳಿಂದ ಸುಪುಷ್ಟವಾಗಿರುವುದನ್ನು ಕಾಣಬಹುದು. ಮನುಷ್ಯ ಮನುಷ್ಯನಾಗಿ ಉಳಿಯಬೇಕು ಎಂಬ ಹಂಬಲ ಇಲ್ಲಿ ವ್ಯಕ್ತವಾಗಿದೆ. ಸುಂದರವಾಗಿ ನೇಯ್ದಿರುವ ಇಲ್ಲಿನ ಬರವಣೆಗೆ ನಮ್ಮನ್ನು ಚಿಂತನೆಗೆ ಗುರಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಟೀಕೆ – ಟಿಪ್ಪಣಿ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಮರ್ಶೆ ಎಂಬ ಶಬ್ದ ನಮ್ಮ ಬದುಕಿನ ಎಲ್ಲ ಮಗ್ಗುಲುಗಳಿಗೂ ಸಂಬಂಧಪಟ್ಟದ್ದು. ಲೇಖಕನಾಗುವುದೆಂದರೆ ಸಮಾಜದ ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ನಿಂತು ಮಾತನಾಡತೊಡಗುವುದು. ತನ್ನ ಸುತ್ತಲಿನ ಜೀವನ ವ್ಯಾಪಾರವನ್ನು ಭೂತ ವರ್ತಮಾನ ಭವಿಷ್ಯತ್‌ಗಳ ಹಿನ್ನೆಲೆಯಲ್ಲಿ ಅಳೆದು ಅರ್ಥೈಸುವುದು. ಈ ಕಾರಣದಿಂದಲೇ ಸಾಹಿತ್ಯ ಜೀವನದ’ ಗತಿಬಿಂಬ’ ಎನಿಸಿಕೊಳ್ಳುತ್ತದೆ. ಲೇಖಕನಾದವನು ಒಂದಲ್ಲ ಒಂದು ನಿಟ್ಟಿನಲ್ಲಿ ಸಮಾಜ ವಿಮರ್ಶೆಯನ್ನು ಮಾಡುತ್ತಲೇ ಇರುತ್ತಾನೆ. ಕೆಲವೊಮ್ಮೆ ಅದು ಪ್ರತ್ಯಕ್ಷ ರೂಪದಲ್ಲಿರಬಹುದು ಇಲ್ಲವೇ ಪರೋಕ್ಷವಾಗಿಯೂ ಕಾಣಿಸಿಕೊಳ್ಳಬಹುದು. ಈ ಸಮಾಜ ಸಾಂಸ್ಕೃತಿಕ ವಿಮರ್ಶೆ ಸ್ವವಿಮರ್ಶೆಗೆ ಅರ್ಥಾತ್ ಆತ್ಮ ವಿಮರ್ಶೆಗೆ ಅನುವು ಮಾಡಿಕೊಟ್ಟರೆ ಆ ಬರವಣಿಗೆ ನಿಜವಾಗಿಯೂ ಸಾರ್ಥಕವಾಗುತ್ತದೆ. ಅಶೋಕ ಪಕ್ಕಳ ಅವರ ಬರವಣಿಗೆ ಗಮನಾರ್ಹವಾಗಿದೆ. ಕನ್ನಡದಲ್ಲಿ ಬಂದಿರುವ ಉತ್ತಮ ಸಂಪಾದಕೀಯ ಬರಹಗಳ ಸಂಗ್ರಹಗಳ ಸಾಲಿಗೆ ಪ್ರಸ್ತುತ ಕೃತಿಯೂ ಸೇರ್ಪಡೆಯಾಗಿದೆ. ಅಶೋಕ ಪಕ್ಕಳ ಅವರ ಪ್ರತಿಭೆ, ವಿದ್ವತ್ತಿಗೆ ಈ ಕೃತಿ ಸಾಕ್ಷಿಯಾಗಿದೆ. ಅವರ ಗದ್ಯದ ಕಾವ್ಯಾತ್ಮಕತೆಗೆ ಯಾರೂ ಮನಸೋಲಬೇಕು. ಸಾಹಿತ್ಯದ ಇತಿಹಾಸದಲ್ಲಿ ಉಳಿಯುವಂಥ ಒಳ್ಳೆಯ ಬೃಹತ್ ಕೃತಿಯೊಂದನ್ನು ಕನ್ನಡ ಜಗತ್ತಿಗೆ ನೀಡಿದ ಅಶೋಕ ಪಕ್ಕಳ ಅವರಿಗೆ ಹಾರ್ದಿಕ ಅಭಿನಂದನೆಗಳು.
ಲೇಖಕ ಅಶೋಕ ಪಕ್ಕಳ
ವಿಮರ್ಶಕರು : ಪ್ರೊ. ಜಿ.ಎನ್. ಉಪಾಧ್ಯ ಮುಂಬೈ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ವಿದ್ಯಾನಗರಿ, ಮುಂಬೈ.