Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಋಷಿ ಕಾಣ್ಕೆಯ ಬೆಳಕಿನಲ್ಲಿ ಮಿಂದ ಕೃತಿ – ‘ಶೇಣಿಭಾರತ’
    Article

    ಪುಸ್ತಕ ವಿಮರ್ಶೆ | ಋಷಿ ಕಾಣ್ಕೆಯ ಬೆಳಕಿನಲ್ಲಿ ಮಿಂದ ಕೃತಿ – ‘ಶೇಣಿಭಾರತ’

    September 3, 2024No Comments8 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಭಾರತದ ಜಾನಪದ ರಂಗಭೂಮಿಗೆ ಕರ್ನಾಟಕ ಕೊಟ್ಟ ಮಹತ್ತ್ವದ ದೇಣಿಗೆ ಎಂದರೆ ‘ಯಕ್ಷಗಾನ’. ಇದೊಂದು ಪರಿಪೂರ್ಣವೂ ವಿಶಿಷ್ಟವೂ ಆದ ಸಮ್ಮಿಶ್ರ ಕಲೆ. ಸಂಗೀತ, ಸಾಹಿತ್ಯ, ಮಾತುಗಾರಿಕೆ, ಅಭಿನಯ, ನೃತ್ಯ, ಅರ್ಥಾತ್ ವಾಚಿಕ, ಆಂಗಿಕ, ಆಹಾರ್ಯ, ಸಾತ್ವಿಕಗಳೆಲ್ಲ ಅಲ್ಲಿ ಏಕತ್ರಗೊಂಡಿರುವುದು ಗಮನೀಯ ಅಂಶ. ಯಕ್ಷಗಾನ ಜನಪದ ಸಂಸ್ಕೃತಿಯ ಗತಿಬಿಂಬವಾಗಿರುವಂತೆ ಅದು ಕನ್ನಡ ಸಂಸ್ಕೃತಿಯ ಜೀವಾಳವೂ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಭಾಷೆ ಇಂದಿಗೂ ಶುದ್ಧವಾಗಿ ಉಳಿದು ಬಂದಿರುವುದು ಯಕ್ಷಗಾನದಲ್ಲಿ ಮಾತ್ರ.

    ಡಾ. ಗೋಪಾಲಕೃಷ್ಣ ಎಲ್. ಹೆಗಡೆ ವಿರಚಿತ ‘ಶೇಣಿ ಭಾರತ’ ಒಂದು ವಿದ್ವತ್ಪೂರ್ಣವೂ ಹಾಗೂ ಸೃಜನಶೀಲ ಪ್ರತಿಭೆಯ ವಿಲಾಸವನ್ನು ತೋರುವ ಉದ್ಗ್ರಂಥ. ವ್ಯಾಸಭಾರತವನ್ನು ಮರು ಸೃಷ್ಟಿ ಮಾಡಿದ ಕವಿ ಕೃತಿಗಳನ್ನು ಪಂಪ ಭಾರತ, ಕುಮಾರವ್ಯಾಸ ಭಾರತ ಎಂದು ಕರೆಯುವ ಹಾಗೆಯೇ ಶೇಣಿ ಭಾರತವೆಂದರೆ ಮಹಾಭಾರತದ ಪ್ರಸಂಗಗಳಿಗೆ ಬಹುಮುಖ ಪ್ರತಿಭೆಯ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ ಅವರು ಅಲ್ಲಲ್ಲಿ ಹೇಳಿದ ಅರ್ಥವನ್ನು ಸಂಗ್ರಹಿಸಿ ನಿರ್ಮಿಸಿದ ಆಶು ಕಾವ್ಯ ಕೃತಿ. ಇದು ಇಪ್ಪತ್ತೊಂದನೆಯ ಶತಮಾನದ ಮಹತ್ವದ ಗದ್ಯ ಕಾವ್ಯ. ಮಹಾಭಾರತದ 16 ಪ್ರಸಂಗಗಳ ವ್ಯಾಖ್ಯಾನ ಇಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇದೊಂದು ವಿಶಿಷ್ಟ ವಿನೂತನ ಅಮರ ಕೃತಿ. ಕನ್ನಡ ಭಾಷೆಯ ರಾಚನಿಕ ವೈವಿಧ್ಯಗಳನ್ನೂ ಅದರ ಆಶು ವೈಭವವನ್ನೂ ನೋಡ ಬಯಸುವವರಿಗೆ ಇದು ಸರಸ್ವತಿಯ ಕಂಠಾಭರಣ ಎಂಬುದಾಗಿ ಈ ಕೃತಿಯನ್ನು ರಚಿಸಿಕೊಟ್ಟ ಸ್ವತ: ಉತ್ತಮ ಕಲಾವಿದರೂ ಆಗಿರುವ ಡಾ. ಗೋಪಾಲಕೃಷ್ಣ ಹೆಗಡೆ ಅವರು ಅಭಿಪ್ರಾಯಪಟ್ಟಿದ್ದಾರೆ. ಯಕ್ಷಗಾನದ ಕುರಿತು ಈ ತನಕ ಬಂದ ಶ್ರೇಷ್ಠ ಗದ್ಯ ಕೃತಿಗಳಲ್ಲಿ ಇದಕ್ಕೆ ಅಗ್ರಗಣ್ಯವಾದ ಸ್ಥಾನವಿದೆ. ಆಕರ್ಷಕವೂ ಅಹ್ಲಾದಕರವೂ ಆಗಿರುವ ವಾಚಕಾಭಿನಯದ ಈ ಗ್ರಂಥ ಮಾತು ಮಥಿಸಿ ಬಂದ ನಾದದ ನವನೀತವೂ ಆಗಿದೆ.

    ಮಹಾಭಾರತದಲ್ಲಿನ ಕಥಾ ಸಾಮಗ್ರಿಯನ್ನು ಉಪಾಖ್ಯಾನ ಮತ್ತು ಮಹಾಖ್ಯಾನ ಎಂದು ಹೇಳಲಾಗುತ್ತದೆ. ಶೇಣಿ ಅವರು ಮಹಾಭಾರತದ ಮೂಲ ಕಥೆಗೆ ಅಲ್ಲಿನ ಆಶಯಕ್ಕೆ ಭಂಗಬಾರದಂತೆ ಮರು ವ್ಯಾಖ್ಯಾನ ಮತ್ತು ಅನುಸಂಧಾನ ಮಾಡಿದ್ದಾರೆ. ಆಯಾಯ ಪಾತ್ರಗಳ ಮೂಲಕ ಕಥೆ ಹೇಳುವುದರ ಜತೆ ಜತೆಗೆ ಕಥೆಗಳು ಧ್ವನಿಸುವ ಸೂಕ್ಷ್ಮ ಸಂದೇಶಗಳನ್ನು ನೀತಿಯನ್ನು ಎತ್ತಿ ಹಿಡಿದಿರುವುದು ಈ ಕೃತಿಯ ಬಲ್ಮೆ. ಶೇಣಿ ಭಾರತ ವ್ಯಾಸ ಜಗತ್ತಿನ ಪ್ರತಿಬಿಂಬವಲ್ಲ, ಅನುವಾದವೂ ಅಲ್ಲ. ಅದೊಂದು ಪುನರ್ ಸೃಷ್ಟಿ. ಶೇಣಿ ಅವರ ನಿರುಪಮವಾದ ಸಮಚಿತ್ತದಿಂದ ಕೂಡಿದ ಪ್ರತಿಭೋಜ್ವಲವಾದ ವಾಣಿ ಇಲ್ಲಿ ನೂತನ ಕೃತಿಯಾಗಿ ಮೈತಾಳಿದೆ. ಋಷಿ ಕಾಣ್ಕೆಯ ಬೆಳಕಿನಲ್ಲಿ ಮಿಂದು ಈ ಕೃತಿ ಕಂಗೊಳಿಸುತ್ತಿದೆ.

    ಯಕ್ಷಗಾನ ಆಟ ಕೂಟಗಳೆಂದ ತಕ್ಷಣ ಮೊದಲಿಗೆ ನೆನಪಿಗೆ ಬರುವ ಹೆಸರು ಶೇಣಿ ಅವರದು. ಶೇಣಿ ಗೋಪಾಲಕೃಷ್ಣ ಭಟ್ಟರು, ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಗಳಾಗಿ, ವೇಷಧಾರಿಗಳಾಗಿ, ಹರಿದಾಸರಾಗಿ, ಮಂಡಳಿಯ ಸಂಘಟಕರಾಗಿ ಜನಾನುರಾಗಿಗಳಾಗಿ ಯಕ್ಷಗಾನ ರಂಗಭೂಮಿಯ ಹಿರಿಮೆಯನ್ನು ಹೆಚ್ಚಿಸಿದವರು. ಯಕ್ಷಗಾನ ಮಾಧ್ಯಮದ ಅಂಗೋಪಾಂಗಗಳಲ್ಲಿ ವಾಚಿಕಾಭಿನಯವನ್ನು ಅದರ ಗರಿಷ್ಠ ಸಾಧ್ಯತೆಯಿಂದ ಬಳಸಿಕೊಂಡು ಪುರಾಣಪಾತ್ರಗಳನ್ನು ಕಡೆದು ನಿಲ್ಲಿಸಿದವರು. ಅವರೇ ತನ್ನ ಬಗ್ಗೆ ಹೇಳಿಕೊಳ್ಳುತ್ತಾ, ವಾಚಿಕಾಭಿನಯ ಮಾತ್ರ ತನ್ನ ಅಭಿವ್ಯಕ್ತಿಯ ಸಶಕ್ತ ವಿಧಾನ ಎಂಬುದನ್ನು ಒಪ್ಪಿಕೊಂಡಿರುವುದು ಅವರ ಪ್ರಾಮಾಣಿಕತೆಗೆ ಸಾಕ್ಷಿ.

    ಸೃಷ್ಟಿ ಪುನರ್‌ಕಥನ ಪರಂಪರೆ ಕನ್ನಡದಲ್ಲಿದೆ. ಶೇಣಿಯವರು ತನ್ನ ಅರ್ಥಗಾರಿಕೆಯ ಮೂಲಕ ಇಲ್ಲಿ ಶೇಣಿಭಾರತವನ್ನು ಪುನಃ ನಿರೂಪಿಸಿದ್ದಾರೆ. ಈ ನಿರೂಪಣೆಯಲ್ಲಿ ಅವರ ವ್ಯಕ್ತಿ ವಿಶಿಷ್ಟ ಮುದ್ರೆ ಎದ್ದು ಕಾಣುತ್ತದೆ. ಇದು ಮೌಖಿಕ ಪರಂಪರೆಯದು. ಇವನ್ನೆಲ್ಲ ಅಕ್ಷರರೂಪಕ್ಕೆ ತಂದು ಜೋಡಿಸಿದ್ದು ನಿಜವಾಗಿಯೂ ಒಂದು ಸಾಹಸವೇ ಎಂಬುದಾಗಿ ಅಭಿಜಾತ ಕಲಾವಿದ ಕೆರೆಮನೆ ಶಂಭು ಹೆಗಡೆ ಅವರು ಈ ಕೃತಿಯ ಗುಣಾತಿಶಯಗಳನ್ನು ಎತ್ತಿ ಹಿಡಿದಿದ್ದಾರೆ. ಮಾತು ಉನ್ನತ ಸ್ತರದಲ್ಲಿ ಕಾವ್ಯವಾಗುತ್ತದೆ. ‘ವಾಕ್ಯಂ ರಸಾತ್ಮಕಂ ಕಾವ್ಯಂ’ ಎಂಬ ಪ್ರಸಿದ್ಧ ಹೇಳಿಕೆಯೂ ಇದೆ. ಕಲಾವಿದ ಶೇಣಿ ಅವರ ಮಾತು ಇಲ್ಲಿ ಅಪೂರ್ವ ಗದ್ಯ ಕಾವ್ಯವಾಗಿದೆ.

    ಪ್ರಸಂಗವೆಂದರೆ ಕಾವ್ಯ ಪ್ರಯೋಗದ ರಂಗಶಿಬಿರ, ಅದು ಒಮ್ಮೊಮ್ಮೆ ವಿದ್ವತ್ಗೋಷ್ಠಿಯಾಗಿ ವಿಜೃಂಭಿಸುವ ಯೋಗಭೂಮಿಕೆ. ಅದೊಂದು ವಾದಭೂಮಿಕೆಯೂ ಹೌದು. ಅದು ‘ವಾದೇ ವಾದೇ ಜಾಯತೇ ತತ್ತ್ವಬೋಧಃ’ ಎಂಬುದನ್ನು ಮನಗಾಣಿಸುವ ಅನುಭವಮಂಟಪ. ಇಲ್ಲಿ ಸಿದ್ಧ ಕಾವ್ಯ ಗಾಯನವು ಭಾಗವತಿಕೆಯೆನಿಸಿ, ಹೊಸ ಆಶುಕಾವ್ಯದ ನಿರ್ಮಿತಿಯು ಅರ್ಥಗಾರಿಕೆಯೆನಿಸಿ, ಸಹೃದಯರ ಸಮ್ಮುಖದಲ್ಲೇ ಬಗೆಬಗೆಯ ಹಿಗ್ಗಿನ ಹಟ್ಟುಹಬ್ಬದ ಪ್ರಸಂಗವೊಂದು ಹುತ್ತಗಟ್ಟುತ್ತದೆ.

    ಪ್ರಸಂಗ -ಪಠ್ಯವನ್ನು ಆಧರಿಸಿ ಗದ್ಯಕಾವ್ಯವೊಂದು ಹಲವು ಮುಖಗಳಿಂದ ಆಶುರೂಪದಲ್ಲಿ ಮಡುಗಟ್ಟುವ ಪ್ರಸಂಗಕ್ರಿಯೆಯು ಒಂದು ಆಕಸ್ಮಿಕ ಸೃಷ್ಟಿ. ಇಲ್ಲಿ ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳ್’ ಧಾರಾಳವಾಗಿ ಸಿಗುತ್ತಾರೆ. ಕಾವ್ಯವೆಂದರೆ ಪ್ರಸಂಗ ಪದ್ಯಗಳು. ಈ ಪದ್ಯಗಳನ್ನು ಆಧರಿಸಿ ಹೊಸ ಹೊಸ ಪ್ರಯೋಗಕ್ಕೆ ಸಿದ್ಧನಾಗುವವನೇ ನಿಜವಾದ ಅರ್ಥಧಾರಿ. ಅರ್ಥಧಾರಿಗಳ ಕಾವ್ಯಪ್ರಯೋಗದ ಕೌಶಲ್ಯವನ್ನು ಆಧರಿಸಿ ಆ ದಿನದ ಪ್ರಸಂಗ-ಮೌಲ್ಯ ನಿರ್ಧಾರವಾಗುತ್ತದೆ. ಇದಕ್ಕೆ ಪೋಷಕವಾಗಿ ಕಾವ್ಯ ಗಾಯನವೂ ನಡೆಯಬೇಕಾಗುತ್ತದೆ. ಹೀಗೆ ಹಲವು ಕಲಾವಿದರ ಜವಾಬ್ದಾರಿಗಳ ಮಧ್ಯೆ ಸೃಷ್ಟಿಗೊಳ್ಳುವ ಈ ಕಾವ್ಯ ಪ್ರಕಾರವು ವಿಶಿಷ್ಟ ಜಾನಪದವೆನಿಸಿದೆ. ಹಾಗೆ ನೋಡಿದರೆ ಇದನ್ನು ಶಿಷ್ಟ ಜಾನಪದ ಎಂದು ಹೇಳಬಹುದು. ಆಗಿಂದಾಗ್ಗೆ ಸಹೃದಯರ ಸಮ್ಮುಖದಲ್ಲೇ ಶಾಬ್ದಿಕ ಸೃಷ್ಟಿಗೆ ತೊಡಗಬೇಕಾದ ಪಂಥಾಹ್ವಾನ ಇದು. ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಪದವಿಟ್ಟಳು ಪದೊಂದಗ್ಗಳಿಕೆ, ಕಂಠಪತ್ರದ ಉಲುಹುಗೆಡದಗ್ಗಳಿಕೆ ಇಲ್ಲಿ ಅರ್ಥಧಾರಿಗೆ ಮುಖ್ಯ. ಇಂತಹ ಅಗ್ಗಳಿಕೆಯನ್ನುಳ್ಳ ಮಾತಿನ ಲೋಕದ ಮಾಂತ್ರಿಕ ಕವಿಯೇ ಶೇಣಿ ಎಂಬುದಾಗಿ ಈ ಅನರ್ಘ್ಯ ಕೃತಿಯನ್ನು ಕಟ್ಟಿಕೊಟ್ಟ ಡಾ. ಗೋಪಾಲಕೃಷ್ಣ ಹೆಗಡೆ ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ.

    “ಹೊಸ ಹೊಸ ವಿಚಾರಗಳತ್ತ ತುಡಿಯುವ ಮಾತಿನ ಅಪಾರ ಸಾಧ್ಯತೆಗಳನ್ನು ಆವಿಷ್ಕರಿಸುವ, ಸಾಕ್ಷಾತ್ಕರಿಸುವ ವಿಸ್ಮಯ ಸೃಷ್ಟಿಶಕ್ತಿಯನ್ನು ಎಂದೂ ಕಳಕೊಳ್ಳದ ಅವರು ಹೇಳುವ ತಾಳಮದ್ದಳೆಯ ಒಂದೊಂದು ಅರ್ಥವೂ ಅಲಿಖಿತ ಕಾವ್ಯ. ಕಲಾ ಜಗತ್ತಿನಲ್ಲಿ ಎಂತೋ ಅಂತೆಯೇ ನಿಜದ ಜದುಕಿನಲ್ಲೂ ಅತ್ಯುನ್ನತಿಗೆ ಜೀವಂತ ಪ್ರತಿಮೆಯಾಗಿರುವ ಮೇಲ್ದರ್ಜೆಯ ಶುಚಿ-ರುಚಿಯ ಮುಗುಳನಗೆಯ ವಿನಯ ಸೌಜನ್ಯಗಳ ಅಪರೂಪದ ವ್ಯಕ್ತಿ ಶೇಣಿ” ಎಂಬ ಮಾತು ಈ ಕೃತಿಯ ಪುಟ ಪುಟಗಳ ಓದಿನಲ್ಲೂ ಅನುರಣಿಸುತ್ತದೆ.

    ಯಕ್ಷಗಾನದ ಭಾಷೆ ಕಲಾತ್ಮಕವಾದುದು. ಅದು ಗ್ರಂಥಸ್ಥ ಭಾಷೆ. ಹೀಗಾಗಿ ಅಲ್ಲಿ ಬಳಕೆಯಾಗುವ ಭಾಷೆ ವಾಚಿಕವೇ ಆಗಿದೆ. ವಾಚಿಕಾಭಿನಯ ಎಂದರೆ ಗದ್ಯರೂಪದ ಮಾತುಗಳನ್ನು ಒಳಗೊಂಡ ಅಭಿನಯ. ಯಕ್ಷಗಾನದಲ್ಲಿ ಪ್ರಸಂಗಕ್ಕೆ ಸಿದ್ಧಶೈಲಿ ಇರುತ್ತದೆ. ಅಲ್ಲಿ ಭಾಗವತ ಲಿಖಿತ ಪಠ್ಯದ ಹಾಡುಗಳನ್ನು ಭಾವಪೂರ್ಣವಾಗಿ ಸಾದರಪಡಿಸುತ್ತಾನೆ. ಅಲ್ಲಿಯ ಮಾತುಗಾರಿಕೆ ಅಲಿಖಿತವಾದುದು. ಹಾಡಿನ ಹಿನ್ನೆಲೆಯಲ್ಲಿ ಪಾತ್ರಧಾರಿ ಮಾತನಾಡುತ್ತಾನೆ. ಅದು ಆಶುಸಾಹಿತ್ಯವೇ ಆಗಿದೆ. “ಯಕ್ಷಗಾನದ ವಾಚಿಕಾಭಿನಯಕ್ಕೆ ಅರ್ಥಗಾರಿಕೆ ಅಥವಾ ಮಾತುಗಾರಿಕೆ ಎಂಬ ಹೆಸರುಂಟು. ಅರ್ಥಗಾರಿಕೆ ಎನ್ನುವುದು ಭಾವಪ್ರಧಾನವಾದ ಒಂದು ಸೃಷ್ಟಿಶೀಲ ಪ್ರಕ್ರಿಯೆ. ಅರ್ಥಗಾರಿಕೆ ಎಂದರೆ ಅರ್ಥ ಹೇಳುವುದಲ್ಲ. ಅರ್ಥ ಮಾತನಾಡುವುದು. ಮಾತನಾಡುವುದು ಎಂದರೆ ಕೇವಲ ವಿಷಯ ಸಂವಹನಗೊಳಿಸುವುದಲ್ಲ. ಸಾಮಾನ್ಯ ಆಡುಮಾತಿಗಿಂತ ಭಿನ್ನವಾಗಿ, ವಿಶಿಷ್ಟವಾಗಿ, ಕಲಾತ್ಮಕವಾಗಿ ಮಾತನಾಡುವುದು. ಒಂದು ಸಾಂಸ್ಕೃತಿಕ ಮೌಲ್ಯವನ್ನು ಪ್ರೇಕ್ಷಕನಿಗೆ ತಲುಪಿಸುವುದು. ಆಗ ಮಾತನಾಡುವ ಭಾಷೆ ಆಲಂಕಾರಿಕವಾಗಿ, ಉಪಮೆ ರೂಪಕಗಳಿಂದ ಕೂಡಿದ್ದು, ಸನ್ನಿವೇಶದ ಆವರಣ ಸೃಷ್ಟಿಯಲ್ಲಿ ನೆರವಾಗುತ್ತದೆ” ಎನ್ನುತ್ತಾರೆ ಡಾ. ಮೋಹನ ಕುಂಟಾರ್. ಹೀಗಾಗಿ ಯಕ್ಷಗಾನ ಪಾತ್ರಧಾರಿ ಆಡುವ ಮಾತು ಸೃಜನಶೀಲ, ಸೃಷ್ಟಿಶೀಲ ಪ್ರಕ್ರಿಯೆಯಾಗಿ ಪರಿಣಾಮಕಾರಿಯಾಗುತ್ತದೆ. ಅಲ್ಲಿಯ ಅರ್ಥಧಾರಿ ಆಡುವ ಮಾತು ಸೃಷ್ಟಿಶೀಲ ಮೌಖಿಕ ಸಾಹಿತ್ಯವೇ ಆಗಿದೆ.

    ಯಕ್ಷಗಾನದ ಭಾಷೆಗೆ ಅದರದೇ ಆದ ಒಂದು ಲಯ, ಶೈಲಿ ಇರುವುದನ್ನು ಕಾಣುತ್ತೇವೆ. ಕನ್ನಡ ಸಾಹಿತ್ಯದ ಇತರ ಪ್ರಕಾರಗಳಲ್ಲಿ ಬಳಕೆಯಾಗುವ ಮಾದರಿಗಿಂತ ಇದು ಭಿನ್ನ. “ಯಕ್ಷಗಾನ ಅರ್ಥಗಾರಿಕೆಯೆಂಬುದು ವಾಚಿಕಾಭಿನಯದ ಅತ್ಯಂತ ಉತ್ಕೃಷ್ಟವಾದ ಮಾದರಿ. ಇಲ್ಲಿ ಶಾಸ್ತ್ರಾಧಾರ, ವ್ಯುತ್ಪತ್ತಿ, ಲೋಕಾನುಭವಗಳ ಜೊತೆಗೆ ಅರ್ಥಧಾರಿಯ ಕಲ್ಪನೆಯೂ ಸೇರಿ ಪಾತ್ರಚಿತ್ರಣ ರೂಪುಗೊಳ್ಳುತ್ತದೆ. ಯಕ್ಷಗಾನದ ಅರ್ಥಧಾರಿ ಪ್ರಸಂಗಕರ್ತನ ಗುಲಾಮನಲ್ಲ. ಪ್ರಸಂಗಪದ್ಯಗಳ ಪರಿಧಿಯೊಳಗಿದ್ದೂ ಕೆಲವೊಮ್ಮೆ ಆತ್ಯತಿಷ್ಠದ್ದಶಾಂಗುಲವಾಗಿ ಆತ ಮೆರೆಯುತ್ತಾನೆ. ತನ್ನ ಸೃಜನಶೀಲ ಚಿಂತನೆಯಿಂದಾಗಿ ಅನೇಕ ಒಳನೋಟಗಳನ್ನು ಬೀರಿ ರಸಾವಿಷ್ಕಾರಕ್ಕೆ ಕಾರಣನಾಗುತ್ತಾನೆ. ‘ಅಭಿನಯವೆಂದರೆ ನಟನ ವ್ಯಕ್ತಿತ್ವದ ಅನಾವರಣ’ ಎಂಬ ಮಾತಿದೆ. ಇದು ಯಕ್ಷಗಾನದ ಅರ್ಥಧಾರಿಗೆ ಅತ್ಯಂತ ಸಮಂಜಸವಾಗಿ ಒಪ್ಪುತ್ತದೆ” ಎಂಬುದಾಗಿ ಪ್ರಸಿದ್ಧ ಯಕ್ಷಗಾನ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಅಭಿಪ್ರಾಯಪಟ್ಟಿದ್ದಾರೆ. ‘ಶೇಣಿಭಾರತ’ ಓದಿದಾಗ ಈ ಮೇಲಿನ ಮಾತು ನಮಗೆ ಮನದಟ್ಟಾಗುತ್ತದೆ.

    ಶoತನು ಚಕ್ರವರ್ತಿಯ ತಳಮಳ, ಭೀಷ್ಮ ವಿಜಯ, ಹಿಡಿಂಬಾ ವಿವಾಹದ ಭೀಮ, ಮಾಗಧವಧೆಯ ಜರಾಸಂಧ, ಅರ್ಜುನನ ಪಾಶುಪತ ಬಯಕೆ, ನೀತಿಯೇ ಕರುಣಾಳು ಭಾಗದ ಕೃಷ್ಣನ ಪಾತ್ರ, ಗಾಳಿಯ ಮಗ ಬೆಂಕಿಯ ಮಗಳು ಇಲ್ಲಿನ ಭೀಮನ ಪಾತ್ರ, ಸಂಕ್ರಮಣ ಸಂದರ್ಭದ ಕೃಷ್ಣನ ಪಾತ್ರ, ಚಕ್ರವ್ಯೂಹ ರಚನೆ ಮತ್ತು ದ್ರೋಣ, ಗದಾಯುದ್ಧ, ಶ್ರೀಕೃಷ್ಣ ಪರಂಧಾಮ ಹೀಗೆ ಮಹಾಭಾರತದ ಬಣ್ಣ ಬನಿಯು ಸೋರಿಹೋಗದಂತೆ 33 ಅಧ್ಯಾಯಗಳಲ್ಲಿ 17 ಪಾತ್ರಗಳ ಅಶು ವೈಭವ ಇಲ್ಲಿ ದಾಖಲಾಗಿದೆ. ಮೌಖಿಕ ಸಾಹಿತ್ಯಕ್ಕೆ ಎಂಥ ತಾಕತ್ತು, ಶಕ್ತಿ ಸೌಂದರ್ಯ ಇರುತ್ತದೆ ಎಂಬುದಕ್ಕೆ ಈ ಕೃತಿ ಮಾದರಿಯಾಗಿದೆ. ಶೇಣಿ ಅವರ ದೈತ್ಯ ಪ್ರತಿಭೆ, ಅಪಾರವಾದ ಪಾಂಡಿತ್ಯ, ಅದ್ಭುತ ದರ್ಶನ ಇಲ್ಲಿ ಪ್ರವಾಹೋಪಾದಿಯಲ್ಲಿ ಸಾಗಿ ಬಂದಿದೆ. ಮಹಾಭಾರತ ಇಲ್ಲಿ ಆಡು ಮಾತಿನ ಕಾವ್ಯವಾಗಿ ಮೈತಾಳಿದೆ. ಸಮಚಿತ್ತದ ವಿವೇಕಶಾಲಿಯಾದ ಸೋಪಜ್ಞ ಕವಿ ಚಿಂತಕ ಶೇಣಿ ಅವರ ಸಾಂದ್ರ ಆಯೋಚನೆ ಚಿಕಿತ್ಸಕ ದೃಷ್ಟಿಕೋನ ಇಲ್ಲಿ ಮಡುಗಟ್ಟಿದೆ ಅಲ್ಲದೇ ಅವರ ಪ್ರಜ್ಞಾಚಕ್ಷು ಇಲ್ಲಿ ವಿಜೃಂಭಿಸಿದೆ. ಶೇಣಿ ಅವರ ಉದಾರ, ಸಹೃದಯ ದೃಷ್ಟಿಕೋನ ಮೆಚ್ಚುಗೆಯ ಜತೆಗೆ ಮೆಚ್ಚದಿರುವುದನ್ನು ನಯವಾಗಿ ಸಕಾರಣವಾಗಿ ಖಂಡಿಸುವ ನೇರ ಆರೋಗ್ಯಕರ ನಿಲುವು ಸಹ ಇಲ್ಲಿ ಅಭಿವ್ಯಕ್ತಗೊಂಡಿದೆ. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂಬ ಕುವೆಂಪು ಅವರ ಹೇಳಿಕೆ ಇಲ್ಲಿಯೂ ಪ್ರಸ್ತುತವಾಗುತ್ತದೆ. ಈ ಕೃತಿಯನ್ನು ಓದುವುದರಲ್ಲಿಯೇ ಒಂದು ಬಗೆಯ ಸುಖವಿದೆ. ‘ಶೇಣಿಭಾರತ’ ಇಂದಿಗೂ ಎಂದಿಗೂ ಪ್ರಸ್ತುತವಾದ ಚಿರಂತನ ಕೃತಿ. ಸಮಕಾಲೀನ ಪ್ರಜ್ಞೆ, ಮಾನವ್ಯ ಧೋರಣೆ, ಅದಮ್ಯ ಜೀವನೋತ್ಸಾಹ ಇಲ್ಲಿ ಒಡೆದುಕಾಣುತ್ತದೆ. ಈ ಕೃತಿ ಬರೇ ಪುರಾಣದ ಕಥೆಯನ್ನು ಮಾತ್ರ ಹೇಳುತ್ತಿಲ್ಲ. ಪುರಾಣದ ಬೆಳಕಿನಲ್ಲಿ ವಾಸ್ತವದ ಬದುಕಿನ ನಿಜದ ನೆಲೆ, ದಾರಿಯನ್ನು ಇದು ತೋರುತ್ತದೆ. ಸಾರ್ಥಕ ಬದುಕಿಗೆ ಬೇಕಾದ ಮಾರ್ಗದರ್ಶನ, ತತ್ವಜ್ಞಾನ ಇಲ್ಲಿ ಪುಟ ಪುಟಗಳಲ್ಲಿ ಕಾಣಸಿಗುತ್ತದೆ.

    “ಪಾಪಮಿದು ಪುಣ್ಯಮಿದು ಹಿತ/ರೂಪಮಿದಹಿತ ಪ್ರಕಾರಮಿದು ಸುಖಮಿದು ದುಃ /ಖೋಪಾತ್ತ ಮಿದೆoದರಿಪುಗು/ ಮಾ ಪರಮ ಕವಿ ಪ್ರಧಾನರಾ ಕಾವ್ಯಂಗಳ್” ಎಂಬುದಾಗಿ ಕನ್ನಡದ ಆದಿ ಕವಿ ಶ್ರೀವಿಜಯ ಹೇಳಿರುವ ಮಾತು ಈ ಕೃತಿಗೂ ಚೆನ್ನಾಗಿ ಅನ್ವಯವಾಗುತ್ತದೆ. ಮಾನವನ ವಿಕಾಸದ ಪ್ರಾರಂಭದ ಚರಿತ್ರೆಯೇ ಪುರಾಣ ಎಂಬ ಮಾತಿದೆ. “ಜನತೆಯ ಜ್ಞಾನೋದಯಕ್ಕಾಗಿ, ಕಷ್ಟ ಪರಂಪರೆಗಳ ಪರಿಹಾರಕ್ಕಾಗಿ, ಹಿಂದಿನ ಮಹಾ ಪುರುಷರ ಜೀವನದಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ, ಆಧ್ಯಾತ್ಮಿಕ ಆಚರಣೆಗಳನ್ನು ಅರಿತು ಉನ್ನತಿ, ಆತ್ಮಾನಂದ ಪಡೆಯುವುದಕ್ಕಾಗಿ, ತಾನೂ ಉತ್ತಮವಾಗಿ ಬದುಕಿ ಸಮಾಜವನ್ನು ಉನ್ನತಿಗೆ ಏರಿಸುವುದಕ್ಕಾಗಿ ಪುರಾಣಗಳು ಸೃಷ್ಟಿಯಾಗಿವೆ” ಎಂದು ಪದ್ಮ ಪುರಾಣದಲ್ಲಿ ಹೇಳಲಾಗಿದೆ. ವ್ಯಕ್ತಿ ಮತ್ತು ಸಮಾಜಕ್ಕೆ ಶಿಕ್ಷಣ, ಧರ್ಮ ಪ್ರಸಾರ, ಪ್ರಚಾರದ ಉದ್ದೇಶ ಪುರಾಣಗಳಿಗಿದ್ದರೂ ಅವು ಮನುಷ್ಯನ ಸೃಜನಶೀಲತೆಯ ಹಾಗೂ ಪ್ರತಿಭೆಯ ಫಲಿತಾಂಶವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಜಗತ್ತಿನೆಲ್ಲೆಡೆ ಪುರಾಣಗಳು ಕೇಳುಗರ ಓದುಗರ ಮೆಚ್ಚುಗೆಗೆ ಸದಾ ಪಾತ್ರವಾಗಿವೆ. ಅವು ಮಿತ್ರ ಸಂಮಿತೆಯಿಂದ ಮನರಂಜನೆಯನ್ನು ನೀಡುತ್ತಾ ಬಂದಿರುವುದು ಅಷ್ಟೇ ಸತ್ಯ. ಪುರಾಣಕ್ಕೆ ಆಂಟಿಕೊಂಡಿರುವ ಅತಿಯಾದ ಅವೈಚಾರಿಕತೆ ಅವೈಜ್ಞಾನಿಕತೆ ವೈಭವೀಕರಣ ಮೊದಲಾದ ಅಂಶಗಳನ್ನು ಯಥಾಸಾಧ್ಯ ನಿವಾರಿಸಿಕೊಂಡು ಆಧುನಿಕ ಬದುಕಿಗೆ ತಕ್ಕಂತೆ ವರ್ತಮಾನಕ್ಕೆ ಅನ್ವಯಿಸಿ ಶೇಣಿ ಅವರು ಅರ್ಥ ಹೇಳಿರುವುದು ಮೆಚ್ಚು ತಕ್ಕ ಸಂಗತಿ. ವರ್ತಮಾನದ ಸಾಮಾಜಿಕ ಸಮಸ್ಯೆಗಳಿಗೆ ಮಹಾಭಾರತದ ಕಥೆ ಪಾತ್ರಗಳ ಮುಖೇನ ಪರಿಹಾರ ಹುಡುಕುವ ಕೈಂಕರ್ಯವನ್ನು ಇಲ್ಲಿ ಶೇಣಿ ಅವರು ಮಾಡಿರುವುದು ಈ ಕೃತಿಯ ಧನಾತ್ಮಕ ಅಂಶ.

    ಕನ್ನಡದ ಪ್ರಮುಖ ಕಾವ್ಯ ಕೃತಿಗಳ ಹಾಗೆ ಇಲ್ಲಿಯೂ ಸಾಕಷ್ಟು ಪಡೆನುಡಿಗಳು ಗಾದೆ ಮಾತುಗಳು, ವಿಶಿಷ್ಟ ಪದಪುಂಜಗಳು ಸಮೃದ್ಧವಾಗಿ ಬಳಕೆಯಾಗಿವೆ. ಯಕ್ಷಗಾನ ನಮ್ಮ ಕಣ್ಣಿಗೆ ಕಟ್ಟುವಂತೆ ಇಲ್ಲಿನ ಮಾತುಗಾರಿಕೆ ಆಕರ್ಷಕವಾಗಿದೆ, ಮನಮೋಹಕವಾಗಿದೆ. ಶೇಣಿ ಅವರದು ಬಹುಧಾನಕ ಪ್ರತಿಭೆ. ಒಬ್ಬನೇ ಕಲಾವಿದ ನಾಯಕ, ಪ್ರತಿನಾಯಕ ಹೀಗೆ ಹಲವು ಪಾತ್ರಗಳಿಗೆ ಅರ್ಥ ಹೇಳಿ ಜೈಸುವುದು ಸಾಮಾನ್ಯದ ಮಾತಲ್ಲ. ಇದನ್ನು ನೀರಲ್ಲಿ ಕಲ್ಲೆತ್ತಿದಷ್ಟು ಸುಲಭವಾಗಿ ಶೇಣಿ ಅವರು ಮಾಡಿರುವುದು ಒಂದು ಪವಾಡ ಸದೃಶ ಸಂಗತಿ.

    “ರಾಮನ ಅರ್ಥ ಹೇಳಿದರೆ ರಾವಣನನ್ನು ಉಳಿಸುವುದಿಲ್ಲ. ರಾವಣನ ಅರ್ಥ ಹೇಳಿದರೆ ರಾಮನನ್ನೇ ಉಳಿಸುವುದಿಲ್ಲ. ಕೃಷ್ಣನ ಅರ್ಥ ಹೇಳಿದರೆ ಕೌರವನನ್ನು ಉಳಿಸುವುದಿಲ್ಲ. ಕೌರನವ ಅರ್ಥ ಹೇಳಿದರೆ ಕೃಷ್ಣನನ್ನೇ ಉಳಿಸುವುದಿಲ್ಲ. ತಮ್ಮ ಪಾತ್ರದ ವಕಾಲತ್ತನ್ನು ಅಷ್ಟು ಚೆನ್ನಾಗಿ ನಿರ್ವಹಿಸುತ್ತಾರೆ. ಹಾಗಾಗಿ ಖಳಪಾತ್ರಗಳ ಪರವಾದ ವಾದದಿಂದ ನಮ್ಮ ಸಾಂಸ್ಕೃತಿಕ ಪರಂಪರೆಯ ನಂಬಿಕೆಗೇ ಕೂಡಲಿಯೇಟು ಎಂದು ಕೆಲವರು ನನ್ನಲ್ಲಿ ವಾದಿಸಿದ್ದುಂಟು. ಆದರೆ ಅದರ ಸತ್ಯಾಸತ್ಯತೆಯನ್ನು ಮನಗಾಣಬೇಕಾದರೆ ರಾಮನ ಅರ್ಥವನ್ನೂ, ರಾವಣನ ಅರ್ಥವನ್ನೂ, ಕೃಷ್ಣ ಕೌರವರ ಅರ್ಥವನ್ನು ಒಂದೆಡೆಗೆ ಕ್ರೋಢೀಕರಿಸಬೇಕಾಗುತ್ತದೆ. ಅವರೇ ಹೇಳಿದ ಖಳಪಾತ್ರಗಳ ಹಾಗೂ ನಾಯಕ ಪಾತ್ರಗಳ ಮುಖಾಮುಖಿ ಆಗಬೇಕು ಎಂಬ ಕಾರಣದಿಂದ ಈ ಸಂಶೋಧನೆ ಈ ಕೃತಿ ರೂಪ ಪಡೆದಿದೆ ” ಎಂಬುದಾಗಿ ಈ ಕೃತಿಯನ್ನು ರಚನೆ ಮಾಡಿಕೊಟ್ಟ ಡಾ. ಗೋಪಾಲಕೃಷ್ಣ ಹೆಗಡೆ ಅವರು ಹೇಳಿರುವ ಮಾತು ಕನ್ನಡ ರಂಗಭೂಮಿಯಲ್ಲೇ ಇದೊಂದು ವಿನೂತನ ಸಾಧನೆ ಎಂಬುದು ಸ್ಪಷ್ಟವಾಗುತ್ತದೆ.

    ಶ್ರೀ ಕೃಷ್ಣಪರಂಧಾಮದ ಸಂದರ್ಭದಲ್ಲಿ ಅವನ ಸ್ವಗತ, ಮನೋಗತ, ಕಥೆ, ವ್ಯಥೆ ಇಲ್ಲಿ ಅತ್ಯುತ್ತಮವಾಗಿ ಮೂಡಿಬಂದಿದೆ. ಸಣ್ಣ ಪದ್ಯಕ್ಕೆ ಶೇಣಿ ಅವರ ಹೇಳಿದ ಅರ್ಥ ಅತ್ಯಂತ ಪರಿಣಾಮಕಾರಿಯಾಗಿದೆ. ಸಾಕ್ಷಾತ್ ಕೃಷ್ಣನನ್ನೇ ಇಲ್ಲಿ ಕಲಾವಿದ ಪರಕಾಯ ಪ್ರವೇಶ ಮಾಡಿಕೊಂಡು ಮಾತನಾಡಿದಂತಿದೆ.

    (ವಾರ್ಧಕ)
    ಹರಿಯು ನಿಜರಮಣಿಯರೊಡಂಬಡಿಸಿ ಕಾನನಕೆ / ಬರಲು ಕೇಳಿಸಿತಭ್ರವಾಣಿಯೊಂದೆಡೆಗೆ ಪರಮ | ತೀರ್ಥಾಟನೆಗೆ ಪೋದ ನಿನ್ನವರೆಲ್ಲ ಸುರೆ ಕುಡಿದು ಹೊಯ್ದಾಡುತ |

    ಈ ಪದ್ಯಕ್ಕೆ ಶೇಣಿ ಅವರ ಅರ್ಥ, ವಿವರಣೆ ಹೀಗಿದೆ,
    “ಪಾರ್ಥನಿಗೆ ಉಪದೇಶ ಮಾಡುವ ಕಾಲಕ್ಕೆ ‘ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಅಂತ ಹೇಳಿದ್ದೆ. ಈಗಲೂ ಆ ಮಾತು ಸುಳ್ಳಲ್ಲ. ಆದರೆ ಧರ್ಮ ಸಂಸ್ಥಾಪನೆಯನ್ನು ಉದ್ದೇಶಿಸಿ, ಅವತರಣ ಮಾಡಿದ ನಾನು ಈ ದ್ವಾಪರದ ಅಂತ್ಯ, ಕಲಿಯುಗ ಪ್ರಾರಂಭಕ್ಕೆ ಹೀಗಾದೀತು, ಹೀಗಾಗಬೇಕು. ಎಂಬ ನಿರೀಕ್ಷೆಯಲ್ಲೇ ಇದ್ದಿಲ್ಲ. ಯಾಕೆ ಹೀಗಾಯ್ತು ಎಂಬುದಕ್ಕೆ ಉತ್ತರವೂ ಸಿಗೋದಿಲ್ಲ. ಕಾಯೇನ ವಾಚಾ ಮನಸಾ ‘ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ’ – ಅಧರ್ಮವು ತಲೆಯೆತ್ತಿ ನಿಂತಾಗ ನನ್ನನ್ನು ನಾನೇ ಸೃಷ್ಟಿಸಿಕೊಳ್ಳುತ್ತೇನೆ ಎಂಬ ಸಂಕಲ್ಪದಲ್ಲಿಯೇ ಅವತರಿಸಿಕೊಂಡವ ನಾನು. ಆದ್ರೂ ಯಾಕ್ ಹೀಗಾಯ್ತು? ಅಧರ್ಮ ಸಂಪೂರ್ಣ ನಾಶವಾಯಿತೇ ಅಂತ ಕೇಳಿದರೆ ಆಯಿತು ಅಂತ ಹೇಳಲಿಕ್ಕೆ ನನಗೆ ಆತ್ಮಸ್ಥೆರ್ಯವಿಲ್ಲ. ನಮ್ಮವರೇ! ಛೇ, ಒಳಜಗಳ, ಗುಂಪುಗಾರಿಕೆ ಮಾತ್ರವಲ್ಲ ಋಷಿ ಮುನಿಗಳನ್ನು ಕಂಡವಾಗ ತಾತ್ಸಾರ. ಇದು ಹುಟ್ಟಿ ಇಷ್ಟು ಎತ್ತರಕ್ಕೆ ಬೆಳೆದೀತು ಅಂತ ನನ್ನ ಅವಗಾಹನೆಗೆ ಬರಲಿಲ್ಲ. ಕಾರಣವೂ ಇಲ್ಲದೆ ಇಲ್ಲ. ಅಖಂಡ ಭಾರತ ವರ್ಷದ, ಧರ್ಮಸಿಂಹಾಸನವನ್ನು ಶುದ್ದಿಗೊಳಿಸಬೇಕು, ಶುದ್ಧನಾದ ಒಬ್ಬ ವ್ಯಕ್ತಿಯನ್ನು ಅಲ್ಲಿ ಕುಳ್ಳಿರಿಸಬೇಕು, ತದ್ವಾರಾ ಈ ಸುವರ್ಣಭೂಮಿಯಲ್ಲಿ ಮತ್ತೊಮ್ಮೆ ಬಂಗಾರದ ಹೊಳೆ ಹರಿಬೇಕು ಎಂಬುದಕ್ಕಾಗಿ ಹಲವಾರು ವರ್ಷಗಳ ನನ್ನ ಬದುಕನ್ನು ಆ ಹಸ್ತಿನಾವತಿಗೆ ಸಂಬಂಧಿಸಿಯೇ ಪಾಂಡವರ ಜೊತೆಯಲ್ಲಿ ಕಳೆದದ್ದರಿಂದಲೋಯೇನೋ… ನನ್ನ ಮತ್ತು ನಮ್ಮಣ್ಣ ಬಲರಾಮ – ನಮ್ಮ ಆಡಳಿತದ ಈ ದ್ವಾರಾವತಿಯ ಬಗ್ಗೆ ನಾನು ದೃಷ್ಟಿ ಹರಿಸಲಿಕ್ಕಾಗ್‌ಲಿಲ್ಲ. ಈಗ ತೋರುತದೆ ಅದೂ ಒಂದು ಪ್ರಮಾದವೇ ಆಯ್ತು. ದ್ವಾರಾವತಿಯನ್ನು ಒಂದು ಧರ್ಮದ ಬೀಡಾಗಿ ಎತ್ತರಿಸಿ ಪ್ರಪಂಚದ ಮುಂದೆ ಬಿತ್ತರಿಸಿದ ಬೆಳೆಸಿದ ನಾನು. ಇದನ್ನವಗಣಿಸಿದ್ದಾಗಲಿಲ್ಲ. ಆದ್ದರಿಂದಲೇ ಇರಬೇಕು ಇಲ್ಲಿ ನನ್ನ ನೋಟವೂ ಇಲ್ಲದೆ ದುರಂತ ಆಯ್ತು! ನಮ್ಮ ಅಣ್ಣನಂತೂ ಒಂದು ಥರದ ಔದಾಸೀನ್ಯವನ್ನು ತಾಳಿ, ಕೌರವರ ಪಾಂಡವರ ಯುದ್ಧ ಒದಗಿ ಬರುವ ಕಾಲಕ್ಕೆ ತೀರ್ಥಾಟನೆಗೂ ಹೊರಟು ಹೋದ! ಎಲ್ಲರೂ ಸ್ವತಂತ್ರರಾದರು.

    ಅಂಧಕರು ಭೋಜರು ಹೀಗೆ ಕೊನೆಗೆ ತಮತಮಗೆ ತಮ್ಮ ತಮ್ಮದ್ದೇ ಆದಂತಹ ಗುಂಪಿನ ಹೆಸರನ್ನು ಇಟ್ಟುಕೊಂಡು ಹೀಗೆ ಅಧಃಪತನಕ್ಕೆ ಈಡಾದರು! ಇಲ್ಲದೇ ಹೋದರೆ ಯೇನರ್ಥ? ಯಾದವರು ಒಂದು ಒಕ್ಕೂಟ – ಯಾದವರು! ವಿಭಜನೆ ಬೇಡ ಸಂಘಟನೆ ಬೇಕು ಅಂತ ಹೊರಟು ನಾನು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಯಿತು” ಎಂದು ಸ್ವತ: ಕೃಷ್ಣನೇ ಪರಿ ಪರಿಯಾಗಿ ಹಲಬುತ್ತಾನೆ. ಕಾಲ ಯಾರನ್ನೂ ಕ್ಷಮಿಸುವುದಿಲ್ಲ, ಕಾಲ ಯಾರನ್ನೂ ರಕ್ಷಿಸುವುದಿಲ್ಲ, ನಿಷ್ಪಕ್ಷಪಾತಿಯಾಗಿದೆ.

    ‘ಕಾಲಾಯ ತಸ್ಮೈ ನಮಃ’. ದೇವಾಂಶನೇ ಆಗಿರಲಿ, ದೇವನೇ ಆಗಿರಲಿ ಎಣಿಸಿದ್ದೆಲ್ಲ ಈ ಪ್ರಪಂಚದಲ್ಲಾಗೋದಿಲ್ಲ. ಯಾವಾಗ್ಲೂ ಪ್ರಕೃತಿಗೂ ಪುರುಷನಿಗೂ, ಪುರುಷನಿಗೂ ಪುರುಷೋತ್ತಮನಿಗೂ, ಸ್ಪರ್ಧೆ ನಡೆದೇ ತೀರುತ್ತದೆ. ಇದು ಪ್ರಪಂಚದ ನಿಯಮ. ಹೀಗೆ ಕೃಷ್ಣನ ಮಾತುಗಳು ವ್ಯಕ್ತಿಯೊಬ್ಬನ ಆತ್ಮಶೋಧನೆಯಂತೆ ನಮ್ಮನ್ನು ಯೋಚನೆಗೆ ಹಚ್ಚುವಲ್ಲಿ ಯಶಸ್ವಿಯಾಗಿವೆ. ಮಹಾಭಾರತ ಒಂದು ಪ್ರದೀಪ. ಅದರಿಂದ ಹೊತ್ತಿಕೊಂಡು ಬೆಳಕು ಬೀರುತ್ತಿರುವ ದೀಪಗಳಲ್ಲಿ ‘ಶೇಣಿಭಾರತ’ಕ್ಕೆ ಮೇಲಾದ ಸ್ಥಾನವಿದೆ. ‘ಶೇಣಿಭಾರತ’ ಮಹಾಭಾರತದ ಹಿರಿಮೆಯನ್ನು ಹೆಚ್ಚಿಸಿದ ನಮ್ಮ ಲೋಕಜ್ಞಾನವನ್ನು ವಿಸ್ತಾರಗೊಳಿಸಿದ ಮೌಲಿಕ ಕೃತಿ. ಭಿನ್ನಪರಿಯ ಈ ಗ್ರಂಥವನ್ನು ಸಂಕಲನ ಮಾಡಿಕೊಟ್ಟ ಡಾ. ಜಿ.ಎಲ್. ಹೆಗಡೆ ಅವರಿಗೆ ಕನ್ನಡಿಗರು ಕೃತಜ್ಞರಾಗಿರಬೇಕು.

    ಲೇಖಕ  ಡಾ. ಗೋಪಾಲಕೃಷ್ಣ ಎಲ್. ಹೆಗಡೆ

    ವಿಮರ್ಶಕ : ಪ್ರೊ. ಜಿ.ಎನ್. ಉಪಾಧ್ಯ,
    ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ವಿದ್ಯಾನಗರಿ, ಮುಂಬೈ.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸರಣಿ ತಾಳಮದ್ದಳೆ
    Next Article ಡಾ. ಪಿ. ಶ್ರೀಕೃಷ್ಣ ಭಟ್ ಇವರಿಗೆ ‘ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್ ದತ್ತಿ ಪ್ರಶಸ್ತಿ’
    roovari

    Comments are closed.

    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.