Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಸೂರ್ಯನಾರಾಯಣ ಚಡಗರ ‘ಸೀಮಂತಿನಿ’
    Article

    ಪುಸ್ತಕ ವಿಮರ್ಶೆ | ಸೂರ್ಯನಾರಾಯಣ ಚಡಗರ ‘ಸೀಮಂತಿನಿ’

    May 18, 2024No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕನ್ನಡದ ಮಹತ್ವದ ಲೇಖಕರಾದ ಸೂರ್ಯನಾರಾಯಣ ಚಡಗರು ತಮ್ಮ ಕಾದಂಬರಿ, ಕಥಾ ಸಂಕಲನಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು. ಕರಾವಳಿ ಭಾಗದ ಕೋಟೇಶ್ವರದವರಾದ ಚಡಗರ ಕಾದಂಬರಿಗಳು ದಕ್ಷಿಣ ಕನ್ನಡ, ಉಡುಪಿ, ಕೋಟೇಶ್ವರ, ಮಂಗಳೂರು ಮೊದಲಾದ ಕರಾವಳಿ ಪ್ರದೇಶದ ಭಾಷಾ ಸೊಗಡಿನಿಂದ ಕೂಡಿದ್ದು, ಅಲ್ಲಿನ ಸಾಮಾಜಿಕ ಕೌಟುಂಬಿಕ ಚಿತ್ರಣ, ಜನರ ಕುಲ ಕಸುಬು, ಆಚಾರ – ವಿಚಾರಗಳ ವಿವರಗಳನ್ನು ನೀಡುತ್ತವೆ.

    ನಿತ್ಯ ಮುತ್ತೈದೆಯಾದ ಸೀಮಂತಿನಿಯು ಕಾದಂಬರಿಯ ಉದ್ದಕ್ಕೂ ಕಾಣಸಿಗುವ ಸಹಜ ಪಾತ್ರ. ತನ್ನ ತಾಯಿ ಚಂದ್ರಮ್ಮನ ಕಾಲದಿಂದಲೂ ಚಾಲ್ತಿಯಲ್ಲಿದ್ದ ಸೂಳೆಗಾರಿಕೆಯನ್ನು ವೃತ್ತಿಯಾಗಿ ಮುಂದುವರೆಸುತ್ತಿರುವ ಆಕೆಯು ತನ್ನ ತಾಯಿಯಂತೆ ಧನಮೋಹಿಯಲ್ಲ. ಆಸ್ತಿ, ಅಂತಸ್ತು ಹಾಗೂ ಕಾಂಚನದ ಲಾಲಸೆಗೆ ಅತಿಯಾಗಿ ಜೋತು ಬೀಳದೇ ವ್ಯಕ್ತಿಗಳ ಅಂತರಂಗಕ್ಕೆ ಮಹತ್ವ ಕೊಟ್ಟು ಸಾಗುವ ಸೀಮಂತಿನಿಯ ನಡೆ ಅವಳ ಹೆಜ್ಜೆಗಳಿಗೆ ಮುಳುವಾಗುವ ಬಗೆಯು ಕಾದಂಬರಿಯ ಪ್ರಧಾನ ಅಂಶವಾಗಿದ್ದು, ಆಕೆಯ ಬದುಕಿನ ವಾಸ್ತವ ಮತ್ತು ಭವಿಷ್ಯತ್ತಿನ ಬದುಕು ಈ ಅಂಶವನ್ನು ಬುನಾದಿಯಲ್ಲಿರಿಸಿಕೊಂಡೇ ಸಾಗುತ್ತದೆ.

    ಪ್ರತಿಷ್ಠೆ ಅಥವಾ ತೆವಲಿಗೆ ಸಿಕ್ಕುಬಿದ್ದು ಸುಖವನ್ನಷ್ಟೇ ಬಯಸಿ ಬರುವ ರುದ್ರ ಹೆಗಡೆ, ಊರ ಧನಿಕ ರಾಮಕೃಷ್ಣಯ್ಯನ ಮಗ ಮೋಹನ, ಸಂಜು ಶೆಟ್ಟಿ ಮೊದಲಾದ ಮೇನತ್ತಿನವರುಗಳನ್ನು ನಿರ್ಲಕ್ಷ್ಯಿಸಿ ಯಕ್ಷಗಾನ ಕಲಾವಿದನಾದ ವೀರನಾಯ್ಕನನ್ನು ಮೆಚ್ಚಿ ಆತನೊಂದಿಗೆ ರಮಿಸಲು ಮುಂದಾಗುತ್ತಾಳೆ. ಎಂದಿನಂತೆ ಸಿಂಗರಿಸಿಕೊಂಡು, ತನ್ನ ಬಹುದಿನಗಳ ಇಚ್ಛೆಯಾದ ಯಕ್ಷಗಾನ ಪ್ರದರ್ಶನವನ್ನು ಸವಿಯಲು ತೆರಳುವ ಸೀಮಂತಿನಿಯು ಕಲೆಗಿಂತಲೂ ಕಲಾವಿದನೆಡೆಗೆ ಮರುಳಾಗುವ ಸನ್ನಿವೇಶವು ಭವಿಷ್ಯದಲ್ಲಿ ಆಕೆ ಅನುಭವಿಸಬೇಕಾದ ಸಮಸ್ಯೆಗಳಿಗೆ ಮುನ್ನುಡಿ ಬರೆಯುತ್ತದೆ. ಕಲಾ ರಸಿಕನಾಗಿ ಕಲಾಭಿಮಾನಿಗಳ ಮನವನ್ನು ರಂಜಿಸುವ ವೀರನಾಯ್ಕನ ಹೃದಯದಲ್ಲಿ ಸೀಮಂತಿನಿಯ ಚೆಲುವು ಪ್ರೇಮದ ಕಿಡಿಯನ್ನು ಎಬ್ಬಿಸುತ್ತದೆ. ತನ್ನ ನಾಟ್ಯಾಭಿನಯ, ಸಂಭಾಷಣಾ ಪ್ರೌಢಿಮೆಯನ್ನೂ ನೀರಸಗೊಳಿಸಿ ಸೀಮಂತಿನಿಯ ಸೊಬಗಿನಲ್ಲೇ ಕಳೆದುಹೋಗುವ ವೀರನಾಯ್ಕನಿಗೆ ಇದರಿಂದ ತನ್ನ ಬದುಕು ಕರಾಳವಾಗಬಹುದು ಎಂಬ ಕಲ್ಪನೆ ಬಾರದಿದ್ದುದು ದುರಂತ.

    ವೇಶ್ಯಾ ವೃತ್ತಿ ಪ್ರಶ್ನೆಗಳಿಂದ ಹೊರತಾದದ್ದು ಎಂಬ ನಿಯಮದಲ್ಲೇ ಬದುಕುವ ಸೀಮಂತಿನಿ ಒಂದೆಡೆಯಾದರೆ ತನ್ನ ಮಗಳ ಚೆಲುವಿಗೆ ಮಣಿದು ಲೆಕ್ಕವಿಲ್ಲದಷ್ಟು ಹಣ, ಚಿನ್ನಾಭರಣ ಹಾಗೂ ಧವಸ ಧಾನ್ಯಗಳನ್ನು ಸುರಿಯುವ ಕಾಳೂರಿನ ರುದ್ರ ಹೆಗಡೆಯನ್ನು ಆರಾಧಿಸುವ ಮೂಲಕ ವೃತ್ತಿಯಲ್ಲಿ ಸುಖ ಕಾಣಬೇಕೆಂದು ಬಯಸುವ ಸೀಮಂತಿನಿಯ ತಾಯಿ ಚಂದ್ರಮ್ಮ ಇನ್ನೊಂದೆಡೆ. ವಿವಾಹಿತನಾಗಿ, ಅಂತಸ್ತು ಮತ್ತು ಪ್ರತಿಷ್ಠೆಗೆ ತಕ್ಕ ಹೆಂಡತಿ ಮನೆಯಲ್ಲಿದ್ದರೂ, ಸೀಮಂತಿನಿಯ ಒಲವು ತನ್ನ ಪಾಲಿಗೆ ಮಾತ್ರ ಮೀಸಲಾಗಿರಬೇಕು ಎಂದು ಹಾತೊರೆಯುವ ರುದ್ರ ಹೆಗಡೆಯ ಅಲಿಖಿತ ಶಾಸನದಿಂದ ಬೇಸತ್ತ ಸೀಮಂತಿನಿಗೆ ಅಚಾನಕ್ಕಾಗಿ ಸಿಕ್ಕ ವೀರನಾಯ್ಕನೇ ಎಲ್ಲ ರೀತಿಯಲ್ಲಿ ಒಪ್ಪಿಗೆಯಾದಾಗ ಅವನಿಂದ ದೂರ ಸರಿಯಲು ಒಲ್ಲದೆ, ಅವನನ್ನಷ್ಟೇ ಆರಾಧಿಸಲು ಮುಂದಾಗುವ ನಡೆಯು ರುದ್ರ ಹೆಗಡೆಯ ಕೋಪಕ್ಕೆ ಕಾರಣವಾದರೆ, ಕ್ರೋಧಾಗ್ನಿಯಲ್ಲಿ ಉರಿದು ಹೋಗುವೆನೆಂಬ ಕಲ್ಪನೆ ಇದ್ದೂ ಇಲ್ಲದಂತೆ ಸೀಮಂತಿನಿಯೊಂದಿಗೆ ಸುಖಿಸುವ ವೀರನಾಯ್ಕ, ಇವರ ನಡುವೆ ಚಡಪಡಿಸುವ ಸೀಮಂತಿನಿಯ ಗೋಳು ಈರ್ವರ ಅರಿವಿಗೆ ಬಂದೂ ಗೌಣವೆನಿಸಿಕೊಳ್ಳುತ್ತದೆ.

    ಪ್ರತಿಭೆ ಇದ್ದಲ್ಲಿ ಅಸೂಯೆ ಸಹಜವಾಗಿರುವಂತೆ ವೀರನಾಯ್ಕನ ಪ್ರತಿಭೆ, ಆತನಿಗೆ ಒದಗಿದ ಪ್ರೇಮದ ಬಗ್ಗೆ ಮತ್ಸರವನ್ನು ತಾಳುವ ಯಕ್ಷಗಾನ ತಂಡದ ಬಣ್ಣದ ವೇಷಧಾರಿ ಶೇಷಪ್ಪನು ಅದೇ ಧೋರಣೆಯಲ್ಲಿರುವ ‌ರುದ್ರ ಹೆಗಡೆಯ ಜೊತೆ ಸ್ನೇಹ ಬೆಳೆಸುತ್ತಾನೆ. ಯಾವುದೇ ಪಾತ್ರಗಳಿಗೆ ಜೀವ ತುಂಬುವ ಕಲೆ ವೀರನಾಯ್ಕನಿಗೆ ಕರಗತವಾದದ್ದೇ ಅವನ ಉಸಿರಿಗೆ ಮುಳುವಾಗುವ ಪ್ರಸಂಗ ನಿರ್ಮಾಣವಾಗುತ್ತದೆ. ತೆಕ್ಕುಂಜೆಯ ನರಸಿಂಹ ದೇವಾಲಯದ ಪ್ರಾಂಗಣದಲ್ಲಿ ಏರ್ಪಡಿಸಿದ್ದ ‘ಪ್ರಹ್ಲಾದ ಚರಿತ್ರೆ’ಯಲ್ಲಿ ಹಿರಣ್ಯಕಶಿಪುವಾಗಿ ವೀರನಾಯ್ಕ ಮೆರೆಯುವವನಾಗಿದ್ದರೆ ಅದೇ ಪಾತ್ರಕ್ಕೆ ವಿರುದ್ಧವಾಗಿ ಬರುವ ನರಸಿಂಹನಾಗಿ ಶೇಷಪ್ಪ ಕಾಣಿಸಿಕೊಳ್ಳುವುದು ವಾಡಿಕೆ. ಇದೇ ಸನ್ನಿವೇಶಕ್ಕೆ ತನ್ನ ದ್ವೇಷವನ್ನು ತುಂಬಲು ಹವಣಿಸಿದ ರುದ್ರ ಹೆಗಡೆಗೆ ಶೇಷಪ್ಪ ಸಾಥ್ ಕೊಟ್ಟದ್ದು ವೀರನಾಯ್ಕನ ಪಾಲಿಗೆ ಮುಳುವಾಗುತ್ತದೆ. ಪ್ರಹ್ಲಾದನಲ್ಲಿ ಶ್ರೀಹರಿಯ ಅಸ್ತಿತ್ವವನ್ನು ಪ್ರಶ್ನಿಸುವ ಹಿರಣ್ಯಕಶಿಪುವಿನ ನಡೆ ಕೊನೆಗೂ ಅಂತ್ಯ ಕಾಣುವುದು ಸ್ವರ್ಣಗಂಬದಿಂದ ಉಗ್ರರೂಪಿಯಾಗಿ ಬರುವ ಶ್ರೀಹರಿಯ ನರಸಿಂಹನಾವತಾರದಿಂದ. ಹಿರಣ್ಯಕಶಿಪುವನ್ನು ನೆಲಕ್ಕೆ ಕೆಡವಿ, ತನ್ನ ಉದ್ದದ ಉಗುರುಗಳಿಂದ ಅವನ ಎದೆಯನ್ನು ಬಗೆಯುವ ನರಸಿಂಹನ ಪಾತ್ರವನ್ನು ತನಗೆ ಬೇಕಾದಂತೆ ಬಳಸುವ ರುದ್ರ ಹೆಗಡೆಯ ದುರಾಲೋಚನೆ ಕಾದಂಬರಿಯ ಅಂತ್ಯದಲ್ಲಿ ವಿಷಾದವನ್ನು ಬಿತ್ತುತ್ತದೆ. ನೆಲಕ್ಕುರುಳಿದ ಹಿರಣ್ಯಕಶಿಪು ಪಾತ್ರಧಾರಿ ವೀರನಾಯ್ಕನ ಕೊರಳಿಗೆ ಹಗ್ಗವನ್ನು ಬಿಗಿದು ಉಸಿರುಗಟ್ಟಿಸಿ ಕೊಲ್ಲುವ ಶೇಷಪ್ಪನ ಕೃತ್ಯ ಯಕ್ಷಗಾನದ ಪ್ರಸಂಗದೊಳಗೆ ನಡೆಯುವ ಸಹಜ ಪ್ರಕ್ರಿಯೆಯಾಗಿ ಕಂಡು ಬರುವುದರಿಂದ ಪ್ರೇಕ್ಷಕರು ವೀರನಾಯ್ಕನನ್ನು ಪ್ರಾಣಾಪಾಯದಿಂದ ರಕ್ಷಿಸದೆ ನೋಡುತ್ತಾ ಉಳಿದುಬಿಡುವ ಸನ್ನಿವೇಶವು ದುರಂತವ್ಯಂಗ್ಯವೇ ಸರಿ. ತನ್ನ ಕೆಲಸ ಮುಗಿದ ನಂತರ ಸಾಕ್ಷಾತ್ ನರಸಿಂಹನೇ ತನ್ನ ಮೈಯೊಳಗೆ ಬಂದಿದ್ದಾನೆ ಎಂಬಂತೆ ನರಸಿಂಹ ದೇವರ ಗುಡಿಯ ಮುಂದೆ ಕುಣಿಯುವ ಶೇಷಪ್ಪ ಜನರುಗಳ ನಂಬಿಕೆಗೆ ದ್ರೋಹ ಎಸಗುತ್ತಾನೆ.

    ವೀರನಾಯ್ಕನ ಆಕಸ್ಮಿಕ ಮರಣ ಕಲಾಭಿಮಾನಿಗಳ ನೋವಿಗೆ ಒಂದೆಡೆ ಕಾರಣವಾದರೆ ಅದನ್ನೇ ಬಯಸುತ್ತಿದ್ದ ರುದ್ರಹೆಗಡೆ ಮತ್ತು ಶೇಷಪ್ಪರ ಅಟ್ಟಹಾಸಕ್ಕೆ ದಾರಿ ಮಾಡಿಕೊಡುತ್ತದೆ. ವೀರನಾಯ್ಕನ ಮರಣದಿಂದ ನಿರ್ಮಾಣಗೊಂಡ ದುಗುಡಗಳ ವಾತಾವರಣ ತಿಳಿಯಾದ ತರುವಾಯ ಶೇಷಪ್ಪನನ್ನು ಭೇಟಿ ಮಾಡುವ ರುದ್ರ ಹೆಗಡೆಗೆ ಎದುರಾಗುವ ಪರಿಸ್ಥಿತಿ ಅವನನ್ನು ದುರ್ಬಲಗೊಳಿಸುವುದಲ್ಲದೇ ಅವನನ್ನು ವಿಧಿಯ ಕೈಗೊಂಬೆಯನ್ನಾಗಿಸುತ್ತದೆ. ಯಾವ ಸೀಮಂತಿನಿ ತನ್ನ ಮಾತನ್ನು ಮೀರಿ ತಾನು ವಿರೋಧಿಸುವ ವೀರನಾಯ್ಕನನ್ನು ಪ್ರೀತಿಸಲು ಮುಂದಾಗಿದ್ದಳೋ ಅದೇ ವೀರನಾಯ್ಕನನ್ನೇ ಸಂಚು ಹೂಡಿ ಕೊಲ್ಲುವಲ್ಲಿ ಸಫಲನಾದ ರುದ್ರ ಹೆಗಡೆ ಒಂದಿರುಳಿಗಾದರೂ ಸೀಮಂತಿನಿಯನ್ನು ತನಗೆ ಬಿಟ್ಟು ಕೊಡಬೇಕೆಂಬ ಬೇಡಿಕೆ ಇಡುವ ಶೇಷಪ್ಪನ ಮಾತಿನಿಂದ ಕೆರಳಿದರೂ ಒಳಗೊಳಗೇ ಚಡಪಡಿಸುವ ಸಂದರ್ಭ ಎದುರಾಗುವುದು ಆತನ ದರ್ಪದ ಮನೋಭಾವವನ್ನು ವಿಚಲಿತಗೊಳಿಸುತ್ತದೆ. ವೀರನಾಯ್ಕನದ್ದು ಸಾವಲ್ಲ, ಅದು ರುದ್ರ ಹೆಗಡೆಯಿಂದ ನಿರ್ದೇಶನದಿಂದ ಜರಗಿದ ಕೊಲೆ ಎಂಬ ಸತ್ಯವನ್ನು ಬಯಲುಗೊಳಿಸುವೆನೆಂದು ರುದ್ರ ಹೆಗಡೆಗೆ ಬೆದರಿಸುತ್ತಾ , ಸೀಮಂತಿನಿಯನ್ನು ಬಯಸುವ ಶೇಷಪ್ಪನ ನಡೆ ರುದ್ರ ಹೆಗಡೆಗೆ ಸಹ್ಯವಾಗದಿದ್ದರೂ ಅದನ್ನು ಈಡೇರಿಸದೆ ಅನ್ಯ ಮಾರ್ಗವಿಲ್ಲದೇ ಹೋಗುವುದು ಹೆಗಡೆಯ ದೌರ್ಬಲ್ಯವನ್ನು ಸೂಚಿಸುತ್ತದೆ. ಬೇರೆ ದಾರಿಯಿಲ್ಲದೆ ಬಲಪ್ರಯೋಗದ ಮೂಲಕವಾದರೂ ಸೀಮಂತಿನಿಯನ್ನು ಶೇಷಪ್ಪನ ಬಳಿಗೆ ಕರೆದೊಯ್ಯುತ್ತೇನೆ ಎಂದು ಭಾವಿಸಿ ಠೀವಿಯಿಂದ ಬರುವ ರುದ್ರ ಹೆಗಡೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣಗೊಳ್ಳುವುದು, ಆತ ಇದುವರೆಗೂ ಕೈಗೊಂಡ ಯೋಚನೆಗಳಿಗೆ ತಿಲಾಂಜಲಿ ಇಡುವಂತೆ ಮಾಡಿಬಿಡುತ್ತದೆ. ಸಹಜ ದನಿಯಿಂದಲೇ ಮೊದಮೊದಲು ಸೀಮಂತಿನಿಯೊಂದಿಗೆ ಮಾತನಾಡುವ ಹೆಗಡೆಗೆ ತನ್ನ ದರ್ಪದ ತಳಪಾಯ ಕುಸಿಯುತ್ತಿದೆ ಎಂದು ಅರಿವಾಗುತ್ತಿದ್ದಂತೆ ಆಕೆಯನ್ನು ಹಿಂಸಿಸಲು ಮುಂದಾಗುವುದು ಕೃತಿಯ ಅಂತ್ಯದಲ್ಲಿ ಮಾರ್ಮಿಕವಾಗಿ ಮೂಡಿಬಂದಿದೆ. ವೇಶ್ಯೆಯಾದರೂ, ವೀರನಾಯ್ಕನ ಗೆಳೆತನ ಸೀಮಂತಿನಿಯನ್ನು ವೇಶ್ಯಾ ವೃತ್ತಿಯಿಂದ ವಿಮುಖಗೊಳಿಸಿದುದರ ಪರಿಣಾಮ ಆಕೆ ತೆಗೆದುಕೊಳ್ಳುವ ಆತ್ಮಹತ್ಯೆಯ ನಿರ್ಧಾರದಲ್ಲಿ ಸಾಬೀತಾಗುತ್ತದೆ.

    ಕಾಂಚನದ ಪರಿಧಿಯಲ್ಲಷ್ಟೇ ವಿಹರಿಸದೇ ವ್ಯಕ್ತಿಯಲ್ಲಿರುವ ಪ್ರೀತಿ, ಪ್ರೇಮ ಮತ್ತು ಗುಣಗಳಿಗೆ ಆದ್ಯತೆ ನೀಡಿ ಅಂಥವರನ್ನಷ್ಟೇ ಆರಾಧಿಸಲು ಬಯಸುವ ಸೀಮಂತಿನಿ ಸಾಮಾನ್ಯವಾಗಿ ಕಾಣಸಿಗುವ ವೇಶ್ಯೆಯರಿಂದ ಬೇರೆಯಾಗಿ ಕಾಣಿಸಿಕೊಳ್ಳುತ್ತಾಳೆ. ಮನಸ್ಸಿಗೆ ಒಲ್ಲದ ಕೆಲಸಗಳಿಗೆ ಬಲವಂತವಾಗಿಯಾದರೂ ಸಜ್ಜುಗೊಳಿಸುತ್ತಾ ದಿನಗಳನ್ನು ದೂಡಿದ ಸೀಮಂತಿನಿಗೆ ಮನಸ್ಸು ಬಯಸಿದ ಭಾವನೆಗಳೊಂದಿಗೆ ಮನಸಾರೆ ಬೆರೆಯುವ, ಹಾಗೊಂದು ಮನೋಜ್ಞ ನಂಟು ಬೆಸೆಯುವ ಅವಕಾಶ ಅಚಾನಕ್ಕಾಗಿ ಒದಗಿ ಬಂದರೂ ಅದು ಅವಳ ಬಾಳಿಗೆ ದಕ್ಕದೇ ಮುಳುವಾಗಿ ಹೋದದ್ದು ಆಕೆಯ ಬದುಕಿಗಷ್ಟೇ ಆಗಿರದೇ ವೀರನಾಯ್ಕ, ರುದ್ರ ಹೆಗಡೆ ಹಾಗೂ ಆಕೆಯ ತಾಯಿ ಚಂದ್ರಮ್ಮನ ಬಾಳಿಗೂ ದುರಂತಮಯ ಕ್ಷಣಗಳನ್ನು ಅನುಭವಿಸುವಂತೆ ಮಾಡುತ್ತದೆ. ‘ವೇಶ್ಯೆ’ ಎಂದಾಕ್ಷಣಕ್ಕೆ ಮೂಗು ಮುರಿಯುವ ಜನರು ತಮ್ಮ ಜೀವನದ ಹೆಜ್ಜೆಗಳಿಂದ ಅವರನ್ನು ಪ್ರತ್ಯೇಕಗೊಳಿಸಿ ಕೀಳಾಗಿ ಕಾಣುವ ಸ್ಥಿತಿ ಇಂದಿಗೂ ಹೊರತಲ್ಲ. ಅಂಥದರಲ್ಲಿ ನೈತಿಕತೆಯ ಅಧಃಪತನಕ್ಕೆ ಬದುಕನ್ನು ಸಮರ್ಪಿಸದೇ, ದೇಹ ಸುಖಕ್ಕಿಂತಲೂ ಭಾವನಾತ್ಮಕ ಸುಖಕ್ಕಾಗಿ ಹಂಬಲಿಸಿ, ಅದು ಈಡೇರಿದಾಗ ಅದಕ್ಕೆ ಬದ್ಧತೆಯನ್ನು ತೋರಿ ಅಲ್ಲೇ ಬದುಕು ಕಟ್ಟಿಕೊಳ್ಳಲು ಬಯಸಿದ ಸೀಮಂತಿನಿ ಗೌರವಾದರಗಳಿಗೆ ಯೋಗ್ಯ ವ್ಯಕ್ತಿಯಾಗಿ ಗೋಚರಿಸುತ್ತಾಳೆ. ಸಹಜ ವಿಷಯಗಳ ಸರಳ ನಿರೂಪಣೆ, ಅತಿಶಯವಾದ ವಿವರಣೆಗಳಿಂದ ಮುಕ್ತವಾದ ಕಾದಂಬರಿ ಹೆಣ್ಣಿನ ಬದುಕಿನ ಏರಿಳಿತಗಳನ್ನು ಕಟ್ಟಿಕೊಡುವ ಮೂಲಕ ಓದುಗರ ಹೃದಯದಲ್ಲಿ ಸ್ಥಾನವನ್ನು ಪಡೆಯುತ್ತದೆ.

    ಪುಸ್ತಕದ ಹೆಸರು : ಸೀಮಂತಿನಿ
    ಲೇಖಕರು : ಸೂರ್ಯನಾರಾಯಣ ಚಡಗ
    ಮುದ್ರಣ : 1966, 2011
    ಪುಟಗಳ ಸಂಖ್ಯೆ : 184 ಬೆಲೆ : 90/-
    ಪ್ರಕಾಶಕರು : ಇಂದಿರಾ ಪ್ರಕಾಶನ, ರಾಜಾಜಿನಗರ, ಬೆಂಗಳೂರು

    ನಯನಾ ಜಿ.ಎಸ್ :


    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ, ಪಿ.ಯು.ಸಿ. ಶಿಕ್ಷಣವನ್ನು ಸರಕಾರಿ ಪದವಿ ಪರ್ವಮ ಕಾಲೇಜು ಬೆಳ್ಳಾರೆ ಎಂಬಲ್ಲಿ ಪೂರೈಸಿರುತ್ತಾರೆ. ಇವರು ತಮ್ಮ ಬಿ.ಎ. ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿಂದ ಪಡೆದಿರುತ್ತಾರೆ. ಹವ್ಯಾಸಿ ಬರಹಗಾರ್ತಿಯಾಗಿರುವ ಇವರ ಅನೇಕ ಲೇಖನಗಳು, ಪ್ರವಾಸ ಕಥನಗಳು, ಕವನಗಳು, ಗಜಲ್ ಗಳು, ಲಲಿತ ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ‘ಕುವೆಂಪು ಸಾಹಿತ್ಯ ಪ್ರತಿಷ್ಠಾನ (ರಿ) ಕುಪ್ಪಳ್ಳಿ ಇವರು ಆಯೋಜಿಸಿದ್ದ ‘ಕುವೆಂಪು ಅವರ ನಾಡು – ನುಡಿ ಚಿಂತನೆ’ ವಿಷಯದ ಬಗೆಗಿನ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿದ್ದಾರೆ. 2021-22ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಇವೆರಡರ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನೂ, 2022-23ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರ ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು ಇವರ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದ ಇವರ ಕಥೆಗಳು ಮತ್ತು ಕವನಗಳು ಆಕಾಶವಾಣಿಯ ದನಿಯಲ್ಲಿ ಬಿತ್ತರಗೊಂಡಿದೆ.

    ಚಡಗ ಸೂರ್ಯನಾರಾಯಣ ರಾವ್

    ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಚಿರಪರಿಚಿತರಾದ ಚಡಗ ಸೂರ್ಯನಾರಾಯಣ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕೋಟೇಶ್ವರದ ನಾರಾಯಣ ಚಡಗ ಮತ್ತು ಶೇಷಮ್ಮ ದಂಪತಿಗಳ ಸುಪುತ್ರ. 30ಕ್ಕೂ ಹೆಚ್ಚು ಕಾದಂಬರಿಗಳು, 3 ಸಣ್ಣ ಕಥಾ ಸಂಕಲನಗಳು, ಕಾಮಧೇನು, ನಗೆ ನಂದನ, ಸುಹಾಸ, ದಿಗಂತ ಮತ್ತು ಮೆಚ್ಚಿನ ಕನ್ನಡ ಬರಹಗಾರರು ಹಾಗೂ ಮೂರು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕಾವೇರಿ, ಕ್ಷಮೆ ಇರಲಿ ಪ್ರಭುವೆ, ಸೀಮಂತಿನಿ, ಅಮರಸರಸ್ವತಿ, ಬಂಗಾಲಕ್ಷ್ಮೀ ಧರ್ಮ, ಕರ್ಮ, ಹೃದಯರಾಣಿ ಕಾದಂಬರಿಗಳನ್ನು ರಚಿಸಿದ ಚಡಗ ಅವರು ‘ಕಾಮಧೇನು, ನಗೆನಂದನ’ – ಎಂಬ ಸಂಪಾದಿತ ಕೃತಿಯನ್ನು ಹೊರತಂದಿರುತ್ತಾರೆ. ‘ಜಯದೇವಿತಾಯಿ’, ‘ಕಾರಂತ ಕೊಂಗಾಟೆ’, ‘ಸೃಜನ’ ಎಂಬ ಸಂಭಾವನಾ ಗ್ರಂಥಗಳನ್ನು ಕೂಡ ಸಂಪಾದಿಸಿರುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ‘ಮನೆಯೇ ಗ್ರಂಥಾಲಯ’ ವಿನೂತನ ಕಾರ್ಯಕ್ರಮ | ಮೇ 21 
    Next Article ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲೆಯಲ್ಲಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.