ಎಲ್.ವಿ. ಶಾಂತಕುಮಾರಿ ಅವರು ಹಿರಿಯ ಲೇಖಕಿ. ಆಂಗ್ಲ ಸಾಹಿತ್ಯವನ್ನು ಪಾಠ ಮಾಡುತ್ತಿದ್ದವರು. ಕನ್ನಡ ಕವಯತ್ರಿಯಾಗಿ, ವಿಮರ್ಶಕಿಯಾಗಿ, ಕನ್ನಡದಿಂದ ಇಂಗ್ಲೀಷಿಗೂ ಇಂಗ್ಲೀಷಿನಿಂದ ಕನ್ನಡಕ್ಕೂ ಮಹತ್ವದ ಕೃತಿಗಳನ್ನು ಅನುವಾದಿಸಿರುವ ಅನುವಾದಕಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹಲವು ದಶಕಗಳ ಅನುಭವವುಳ್ಳವರು. ಸ್ವಭಾವತಃ ಬರಹಗಾರ್ತಿಯಾಗಿರುವುದರಿಂದ ಅವರ ಮನಸ್ಸಿನ ಭಾವನೆಗಳು ಕವಿತೆಗಳಾಗಿ ಅಕ್ಷರರೂಪ ತಳೆದಿವೆ.
ಕವಯತ್ರಿಯ ಮಾತುಗಳಿವು: “ಮನಸ್ಸಿಗೆ ಸಂತೋಷವೋ, ದುಃಖವೋ ಆದಾಗಲೋ, ಬದುಕಿನ ಹಲವಾರು ಭಾವಗಳು ಮನಸ್ಸನ್ನು ಮುತ್ತಿದ್ದಾಗಲೋ ಗುರುತು ಹಾಕಿಕೊಂಡಿದ್ದ ಬರಹಗಳಿವು. ಕೆಲವೊಮ್ಮೆ ಭಾವನೆಗಳನ್ನು ಹಂಚಿಕೊಳ್ಳಲಾಗದಿದ್ದಾಗ ಮನಸ್ಸು ತನಗೆ ತಾನೆ ಹೇಳಿಕೊಂಡ ಮಾತುಗಳು ಮಾತ್ರ. ಇವನ್ನು ಈಗ ಸುಮಾರು ನಲವತ್ತು ವರ್ಷಗಳಿಗೂ ಮುಂಚಿನಿಂದ ಬರೆಯುತ್ತಾ ಬಂದಿರುವ ಸ್ವಗತಗಳೆಂದರೆ ಹೆಚ್ಚು ಸರಿಯಾದೀತು. ಸುತ್ತಮುತ್ತಲ ವಾತಾವರಣ, ಪರಿಸ್ಥಿತಿ, ಪ್ರಕೃತಿ, ಜನರ ವರ್ತನೆಗಳು ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಉಂಟುಮಾಡಿ ನಮ್ಮನ್ನು ಪ್ರತಿಕ್ರಿಯಿಸುವಂತೆ ಒತ್ತಾಯಿಸುವುದಂತೂ ಸತ್ಯ. ಪ್ರತಿಕ್ರಿಯಿಸುವುದಕ್ಕಿಂತಲೂ ಹಲವು ಬಾರಿ ಈ ಬಾಹ್ಯ ಪ್ರಚೋದನೆಗಳಿಂದ ನಮ್ಮ ಒಳಗನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು ಎನಿಸುತ್ತದೆ. ಇಲ್ಲಿನ ಕೆಲವು ಬರಹಗಳು ಅಂತಹ ಪ್ರಯತ್ನಗಳಾಗಿರಬಹುದು. ಸುತ್ತ ಮುತ್ತಣ ಗಿಡಮರಗಳು ಗಾಳಿಯಲ್ಲಿ ಓಲಾಡಿ ತೊನೆದಾಡಿ ಬಾಗಿ ಬಳುಕಿ ಮತ್ತೆ ದೃಢವಾಗಿ ನಿಲ್ಲುವುದನ್ನು ಕಂಡಾಗಲೆಲ್ಲ ನನಗೆ ಒಂದು ರೀತಿಯ ಸಂತೋಷವುಂಟಾಗುತ್ತದೆ ಹಾಗೂ ಒಂದು ರೀತಿಯ ಅರಿವು ಮೂಡುತ್ತದೆ. ಬೇರನ್ನು ಗಟ್ಟಿಯಾಗಿ ಭೂಮಿಯಲ್ಲಿ ಊರಿರುವ ಬಲಿಷ್ಠ ಮರವೂ ಕೂಡ ತನ್ನ ರೆಂಬೆಕೊಂಬೆಗಳು ಗಾಳಿಗೆ ನರ್ತಿಸಲು ಅನುವು ಮಾಡಿಕೊಡುತ್ತದೆ. ತೆಂಗಿನಗರಿಗಳು ಅದೆಷ್ಟು ಭಾರವೆನಿಸಿದರೂ ಗಾಳಿಗೆ ಓಲಾಡುವುದನ್ನು ಕಂಡಾಗ ಈ ಸ್ಪಂದನ ಗುಣ ಮನುಷ್ಯನಿಗೂ ಬಹಳ ಅಗತ್ಯವೆನಿಸುತ್ತದೆ.”
ಇಲ್ಲಿರುವ ಒಟ್ಟು ಕವನಗಳಲ್ಲಿ ಮೂರು ಪ್ರಧಾನ ಭೂಮಿಕೆಗಳಿವೆ : ಅವು – ೧) ಸೂರ್ಯ ಅಥವಾ ಪ್ರಭು, ೨) ಈ ಅಲೌಕಿಕ ಶಕ್ತಿಯ ಅಭಿವ್ಯಕ್ತ ರೂಪವಾದ ಪ್ರಕೃತಿ ಮತ್ತು ೩) ಇವೆರಡನ್ನು ಗ್ರಹಿಸುವ ಪ್ರಜ್ಞೆಯಾದ ‘ನಾನು’ ಅಥವಾ ನಿರೂಪಕಿಯ ಪ್ರಜ್ಞೆ. ಕವನಗಳಲ್ಲಿ ಆಶೆ- ಹತಾಶೆ, ಭಯ-ಅಭಯ ಹೀಗೆ ಎರಡು ತದ್ವಿರುದ್ಧ ಭಾವಗಳ ನಡುವೆ ತಾಕಲಾಟ ನಡೆಯುತ್ತದೆ. ಅದು ಕತ್ತಲು ಮತ್ತು ಬೆಳಕು ಎನ್ನುವ ಚಿರಂತನ ರೂಪಕಗಳ ಮೂಲಕ ವ್ಯಕ್ತವಾಗಬಹುದು ಅಥವಾ ಋತುಗಳ ರೂಪಕಗಳಲ್ಲಿ ವ್ಯಕ್ತವಾಗಬಹುದು. ಉದಾಹರಣೆಗೆ, ವಸಂತಋತು ಮತ್ತು ತಕ್ಷಣವೇ ದಾಳಿಮಾಡುವ ಚಳಿಕೊರೆವ ಶಿಶಿರ – ಮಾಗಿ ಋತುಗಳು.
ರಾತ್ರಿ ಮತ್ತು ಚಳಿ – ಎರಡರಿಂದಲೂ ಪಾರಾಗಿ ಮನಸ್ಸು ಮುದಗೊಳ್ಳಬೇಕಾದರೆ ಸೂರ್ಯ ಬೇಕು. ಕತ್ತಲನ್ನು ದೂರ ಮಾಡಿ ಹಗಲು ಮೂಡಬೇಕಾದರೆ ಸೂರ್ಯ ಹೇಗೆ ಬೇಕೋ, ವಸಂತ ಋತುವಿನ ಆಗಮನಕ್ಕೂ ಸೂರ್ಯನು ಭೂಮಿಯ ಸಮೀಪ ಬರುವುದೇ ಕಾರಣವಾಗುತ್ತದೆ; ಚಳಿಗೆ ಕಾರಣ ಸೂರ್ಯನು ಭೂಮಿಯಿಂದ ದೂರ ಹೋಗುವುದೇ ಆಗಿದೆ. ಸೂರ್ಯನ ಸಾಮೀಪ್ಯ ಅಥವಾ ಸೂರ್ಯದರ್ಶನದ ಫಲಾನುಭವಿ ಭೂಮಿ. ಸೂರ್ಯ ಮರೆಯಾದಾಗ ಅಥವಾ ದೂರ ಹೋದರೆ ಕಷ್ಟವಾಗುವುದೂ ಭೂಮಿಗೆ. ಕವನ ಸಂಕಲನದ ಪ್ರಾರಂಭದಲ್ಲಿ ಕೆಲವು ಕವನಗಳು ಸೂರ್ಯನನ್ನೇ ಉದ್ದೇಶಿಸಿ ಹೇಳಿರುವ ಕವನಗಳಾಗಿವೆ. ಇಲ್ಲೆಲ್ಲ ಕವಯತ್ರಿ ಸೂರ್ಯನನ್ನು ತನ್ನ ಬದುಕಿನ ಆಶೋತ್ತರಗಳ ಗುರಿ ಎಂದು ಅವನಿಗಾಗಿ ಹಂಬಲಿಸುವುದು, ಅವನನ್ನು ಆಹ್ವಾನಿಸುವುದು ಗಮನಾರ್ಹವಾಗಿದೆ. ಇಲ್ಲಿ ಕವಯತ್ರಿಯ ಸೂರ್ಯ ಅಕ್ಕಮಹಾದೇವಿಯ ಚೆನ್ನಮಲ್ಲಿಕಾರ್ಜುನನನ್ನು ನೆನಪಿಸುತ್ತಾನೆ. ಸೂರ್ಯನಿಗಾಗಿ ಅಥವಾ ಒಂದು ಅಲೌಕಿಕ ಪ್ರಭುವಿಗಾಗಿ ಹಾತೊರೆಯುವುದು ಈ ಕವನಗಳ ಸ್ಥಾಯಿಯಾದ ವಸ್ತು ಅನಿಸುತ್ತದೆ. ‘ಒಲವು’ ಭಾಗದಲ್ಲಿ ಕವಯತ್ರಿ ‘ಸೂರ್ಯ’ ಎನ್ನುವ ಪದದ ಬದಲು ‘ಪ್ರಭು’ ಎನ್ನುವ ಪದವನ್ನು ಬಳಸಿದ್ದಾರೆ.
ನಿರೂಪಕಿಯ ಭಾವಗಳು ಭರವಸೆ ಮತ್ತು ಭಯಗಳ ನಡುವೆ ಓಲಾಡುತ್ತವೆ. ಕೆಲವೊಮ್ಮೆ ಕತ್ತಲಿನ ಭಯವೇ ಸೂರ್ಯನ ಬೆಳಕಿನ ಭರವಸೆಗಿಂತ ಬಲವಾಗಿದೆ. ‘ನಾನನಂತ ಮೌನಿ’ ಕವನದ ಕೊನೆಯ ಮಾತುಗಳಿವು: “ಕಗ್ಗತ್ತಲ ಒಂಟಿ ಗವಿಯೊಳಗು / ಬೆಳ್ಳಂಬೆಳಕು ಮೂಡಿ / ಮತ್ತೆ ಕವಿಯುವುದು ಕತ್ತಲೆಯ ಮುಸುಗು.”
ಈ ಸಂಕಲನದ ಕವನಗಳನ್ನು ‘ಸೂರ್ಯ’, ‘ಪ್ರಕೃತಿ’, ‘ಅನುಭಾವ’, ‘ಒಲುಮೆ’ ‘ಪ್ರಕಿರಣ’ ಎಂಬ ವಿಭಾಗಗಳಡಿ ವಿಂಗಡಿಸಿಕೊಟ್ಟಿರುವುದು ಉಪಯುಕ್ತವಾಗಿದೆ. ಸಂಕಲನದ ಕೊನೆಯ ಭಾಗದ ಕೆಲವು ಕವನಗಳನ್ನು ‘ಸಮಾಜಮುಖಿ’ ಕವನಗಳೆಂದೇ ಕರೆಯಬಹುದು. ಚುನಾವಣೆ, ಮೀಸಲಾತಿ, ಸೋಮಾಲಿಯಾ ಇತ್ಯಾದಿ ಸಾಮಾಜಿಕ ವಿದ್ಯಮಾನಗಳನ್ನೂ ಅವರು ಕವನಗಳಾಗಿಸಿದ್ದಾರೆ. ಜತೆಗೆ ‘ಸಂಪಾತಿ’, ‘ಕೃಷ್ಣ’ ಮುಂತಾದ ಪೌರಾಣಿಕ ಪಾತ್ರಗಳನ್ನು ಕುರಿತ ಕವನಗಳೂ ಇವೆ.
ಈ ಸಂಕಲನದ ಮುಖ್ಯ ಕವನಗಳು – ‘ವೃಕ್ಷಾರತಿ’, ‘ಕಡಲ ಉಕ್ಕು’, ‘ಲೀಲೆ ಅನವರತ’, ‘ದೈವ ಸೆರೆ’, ‘ಸಾವು’ ಇತ್ಯಾದಿ. ಇವುಗಳಲ್ಲಿ ಮೊದಲ ಎರಡು ಮೇಲೆ ಹೇಳಿದಂತೆ ಸಂಕಲನದ ಒಟ್ಟು ವಿನ್ಯಾಸದಿಂದ ಹೊರಗಿರುವ ಕವನಗಳೆಂದು ಕೂಡ ಹೇಳಬಹುದು.
ಈ ಸಂಕಲನದ ಪ್ರಕೃತಿ ಕವನಗಳಿಗೆ ಒಂದು ವಿಶೇಷ ಮಹತ್ವ ಇದೆ. ನಿರೂಪಕಿಯ ವೈಯಕ್ತಿಕ ಸ್ಪಂದನೆ ಅಥವಾ ‘ಭಾವ’, ಸೂರ್ಯನ ಮೂಲಕ ಸಂಕೇತಿಸಲ್ಪಟ್ಟಿರುವ ವಿಶ್ವಪ್ರಜ್ಞೆ ಅಥವಾ ‘ಜೀವ’ ಇವು ಸೇರುವ ‘ದೇಹ’ವೇ ಪ್ರಕೃತಿ.
ಈ ಕವನಗಳನ್ನು ಓದುವಾಗ ಅಮೇರಿಕದ ಕವಯತ್ರಿ ಎಮಿಲಿ ಡಿಕಿನ್ಸನ್ ಅವರ ನೆನಪಾಗುತ್ತದೆ. ಎಮಿಲಿ ಡಿಕಿನ್ಸನ್ ಅವರ ಕವನಗಳಂತೆ ಶಾಂತಕುಮಾರಿಯವರ ಕವನಗಳಲ್ಲಿಯೂ ಸ್ವಗತದ ರೀತಿಯ, ಮತ್ತೊಬ್ಬರನ್ನು ಉದ್ದೇಶಿಸಿ (ಇನ್ನೊಬ್ಬ ವ್ಯಕ್ತಿ ಎದುರಿಗಿದ್ದಾನೆಂದು ಭಾವಿಸಬಹುದಾದರೂ ಅವೂ ಸ್ವಗತಗಳೇ ಹೌದು) ಮನಸ್ಸಿನೊಳಗಿನ ಭಾವಗಳನ್ನು, ಭಯಗಳನ್ನು ಹೇಳಿಕೊಳ್ಳುವಂತೆ ಇರುವ ಭಾವಗಳೂ, ಅಭಿವ್ಯಕ್ತಿಯ ರೀತಿಯೂ ಇವೆ.
ಶಾಂತಕುಮಾರಿಯವರು ಸಮಾಜದ ಆಗುಹೋಗುಗಳಿಗೆ ಸ್ಪಂದಿಸಿ ಸಮಾಜಮುಖೀ ಕವನಗಳನ್ನೂ ಬರೆದಿದ್ದಾರೆ. ಹಿರಿಯ ಸಾಹಿತಿ ಶಾಂತಕುಮಾರಿಯವರಿಗೆ, ಅವರ ಕವಿತೆಗಳನ್ನು ಸಂಗ್ರಹಿಸಿ ಪ್ರಕಟಿಸಿದ ಡಾ. ಜಿ.ಎನ್.ಉಪಾಧ್ಯ ಮತ್ತು ಸಂಗ್ರಹಿಸಿಕೊಟ್ಟ ಡಾ. ಉಮಾ ರಾಮರಾವ್ ಅವರ ಅವರ ಸಾಹಿತ್ಯ ಪ್ರೀತಿಗೆ ಅಭಿನಂದನೆಗಳು.
ಡಾ. ಬಿ. ಜನಾರ್ದನ ಭಟ್
ಸೂರ್ಯಮುಖಿ (ಕವಿತೆಗಳು) ಕವಿ : ಎಲ್.ವಿ. ಶಾಂತಕುಮಾರಿ – ಪ್ರಕಾಶನ : ಅಭಿಜಿತ್ ಪ್ರಕಾಶನ, ಮುಂಬಯಿ
ಮೊದಲನೆಯ ಮುದ್ರಣ: 2023, ಪುಟಗಳು : 265. ಬೆಲೆ: ರೂ.180/-