ಮಲಯಾಳಂ ಭಾಷೆ ಮತ್ತು ಸಾಹಿತ್ಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಸಾಹಿತಿಗಳಲ್ಲಿ ತಗಳಿ ಶಿವಶಂಕರ ಪಿಳ್ಳೈಯವರೂ ಒಬ್ಬರು. ಅವರು ತಮ್ಮ ಕೃತಿಗಳಲ್ಲಿ ಸಾಮಾಜಿಕ ಅಸಮಾನತೆ, ಅನಾಚಾರಗಳನ್ನು ಚಿತ್ರಿಸಿದರು. ಕೆಳಸ್ತರದವರು, ಬೆಸ್ತರು ಮತ್ತು ರೈತಾಪಿ ವರ್ಗದವರ ಶ್ರಮಜೀವನವನ್ನು ತೋರಿಸಿದರು. ಮಲಯಾಳಂ ಸಾಹಿತ್ಯದಲ್ಲಿ ದೀನ ದಲಿತರ ಬದುಕನ್ನು ಮೊದಲ ಬಾರಿಗೆ ದಾಖಲಿಸಿದ ತಗಳಿ ಶಿವಶಂಕರ ಪಿಳ್ಳೈಯವರು ನಗರ ಸಭೆಯ ಕೆಲಸಗಳ ಮೂಲಕ ನಗರದ ದುರ್ವಾಸನೆಯನ್ನು ನಿವಾರಿಸುವ ಜಾಡಮಾಲಿಗಳ ಬಗ್ಗೆ ಬರೆದ ‘ತೋಟಿಯುಡೆ ಮಗನ್’ (1947) ಎಂಬ ಕಾದಂಬರಿಯಲ್ಲಿ ಅಧಿಕಾರಶಾಹಿಯು ಜಾಡಮಾಲಿಗಳನ್ನು ನಿರಂತರವಾಗಿ ಶೋಷಿಸುವ ಚಿತ್ರಣವಿದೆ. ಮೂರು ತಲೆಮಾರುಗಳಿಗೆ ಸೇರಿದ ಜಾಡಮಾಲಿಗಳ ಬದುಕಿನ ಏರುಪೇರುಗಳನ್ನು ಚಿತ್ರಿಸುತ್ತಾ ದುಡಿಯುವ ಜನರ ನಿಕೃಷ್ಟ ಬದುಕನ್ನು ಅನಾವರಣಗೊಳಿಸಿದ್ದಾರೆ. ದುಡಿಯುವ ಜನರಿಗೆ ವ್ಯವಸ್ಥೆಯು ಬದುಕುವ ಅವಕಾಶವನ್ನು ಕೊಡದೆ, ನಿಕೃಷ್ಟವಾಗಿ ಕಾಣುವ ರೀತಿಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ತರಾದ ಡಾ. ಮೋಹನ ಕುಂಟಾರರು ಈ ಕೃತಿಯನ್ನು ‘ತೋಟಿಯ ಮಗ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಮೊದಲ ತಲೆಮಾರಿಗೆ ಸೇರಿದ ಇಶುಕ್ಕುಮುತ್ತು ಅಧಿಕಾರಿಗಳಿಗೆ ವಿಧೇಯನಾಗಿ ನಗರದ ಶೌಚಾಲಯಗಳನ್ನು ಶುಚಿಗೊಳಿಸುತ್ತಾ ಬಾಳಿದರೆ ಎರಡನೇ ತಲೆಮಾರಿಗೆ ಸೇರಿದ ಅವನ ಮಗ ಚುಡಲಮುತ್ತು ಶೋಷಣೆಯ ವಿರುದ್ಧ ಸೆಟೆದು ನಿಲ್ಲುವ ಪ್ರಯತ್ನವನ್ನು ಮಾಡಿದರೂ ಅಧಿಕಾರಶಾಹಿತ್ವದ ಬಲಪ್ರಯೋಗದ ಮುಂದೆ ಸೋಲೊಪ್ಪಿಕೊಳ್ಳಬೇಕಾಗುತ್ತದೆ. ಆತನು ಕಾರ್ಮಿಕರ ಸಂಘವನ್ನು ಸಂಘಟಿಸಿ ಸಭೆಯನ್ನು ಆಯೋಜಿಸಿದಾಗ ಪುರಸಭೆಯ ಅಧ್ಯಕ್ಷ ಮತ್ತು ಓವರ್ಸಿಗಯರ್ ಕೇಶವ ಪಿಳ್ಳೆಯು ಆತನನ್ನು ಕರೆದು ಬೆದರಿಸುತ್ತಾರೆ. ಉದ್ಯೋಗಕ್ಕೆ ಸಂಚಕಾರ ಬರಬಹುದು ಎಂಬ ಭಯದಿಂದ ಚುಡಲಮುತ್ತು ಕಾರ್ಯಕರ್ತರ ಹೆಸರುಗಳನ್ನು ಹೇಳುತ್ತಾನೆ. ಅಧಿಕಾರಿ ವರ್ಗವು ಇವನನ್ನೇ ಉಪಯೋಗಿಸಿಕೊಂಡು ಸಂಘವನ್ನು ಮುರಿಯುವ ತಂತ್ರವನ್ನು ರೂಪಿಸುತ್ತದೆ. ಚುಡಲಮುತ್ತುವಿಗೆ ಇಕ್ಕಟ್ಟಿನ ಪರಿಸ್ಥಿತಿಯು ಎದುರಾಗುತ್ತದೆ. ಅವನು ಮಾಲೀಕರ ಜೊತೆಗೂ ಕೈಜೋಡಿಸಬೇಕು. ಸಂಘದ ಹಿತೈಷಿಯಂತೆ ಇದ್ದುಕೊಂಡು ಅವರ ಒಗ್ಗಟ್ಟನ್ನು ಮುರಿಯಬೇಕು. ಆದರೆ ಅವನ ಆಂತರಿಕ ತುಮುಲ, ದ್ವಂದ್ವಗಳು ಚಿತ್ರಿತವಾಗದಿರುವುದರಿಂದ ಸಮಸ್ಯೆಯು ಮೇಲುಮಟ್ಟದ ತೇಲುಗ್ರಹಿಕೆಯಲ್ಲಿ ಉಳಿದುಬಿಡುತ್ತದೆ. ಅವನ ಗೆಳೆಯನಾದ ಪಿಚ್ಚಾಂಡಿಯ ಮೇಲೆ ಕಳವಿನ ಸುಳ್ಳು ಆರೋಪವನ್ನು ಹೊರಿಸಿದಾಗ ಅವನ ಹೆಂಡತಿ ಮಕ್ಕಳು ಬೀದಿಗೆ ಬೀಳುತ್ತಾರೆ. ಇದಕ್ಕೆ ಕಾರಣನಾದ ಚುಡಲಮುತ್ತುವಿನ ಪಾಪಪ್ರಜ್ಞೆಗೆ ಒತ್ತನ್ನು ನೀಡಿದ್ದರೆ ಕಾದಂಬರಿಯು ಸಂಕೀರ್ಣವಾಗುತ್ತಿತ್ತು. ಆದರೆ ಪಿಚ್ಚಾಂಡಿಯ ಅನುಪಸ್ಥಿತಿಯಲ್ಲಿ ತಮ್ಮ ಕೈಗೊಂಬೆಯಾಗಿರುವ ಕಾರ್ಮಿಕ ಸಂಘವನ್ನು ರಚಿಸಲು ಬಯಸುವ ಅಧಿಕಾರಿಗಳ ಕುಟಿಲನೀತಿಯನ್ನು ಚಿತ್ರಿಸುವ ಉದ್ದೇಶವು ಲೇಖಕರಿಗೆ ಮುಖ್ಯವಾಗಿದೆ.
ಶಿಕ್ಷಣದ ಮೂಲಕ ಶೋಷಣೆಯ ಅರಿವಾಗಿ ಪ್ರತಿಭಟನೆಯು ಹುಟ್ಟಿದರೆ ಆಡಳಿತ ವರ್ಗವು ವ್ಯವಸ್ಥೆಯ ಪರ ನಿಂತು ಕುತಂತ್ರಗಳ ಮೂಲಕ ಅದನ್ನು ದಮನಿಸುತ್ತದೆ. ಜಾಡಮಾಲಿಗಳಿಗೂ ತಮ್ಮ ಹಕ್ಕುಗಳ ಬಗ್ಗೆ ಪ್ರಜ್ಞೆಯಿದೆ. ಆದರೆ ಅವರ ಉತ್ಸಾಹವನ್ನು ಹತ್ತಿಕ್ಕಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತದೆ. ಇಂಥ ಸನ್ನಿವೇಶವು ನಿರಂಜನರ ‘ವಿಮೋಚನೆ’ ಎಂಬ ಕಾದಂಬರಿಯಲ್ಲೂ ಇದೆ. ಎರಡನೇ ವಿಶ್ವ ಮಹಾಯುದ್ಧದ ಹೊತ್ತಲ್ಲಿ ನಿರುದ್ಯೋಗಿಗಳಾಗಿದ್ದ ಕಾರ್ಮಿಕರು ತಮಗೆ ಮೂರು ತಿಂಗಳ ಭತ್ಯೆ ಮತ್ತು ಯುದ್ಧದ ಕಾಲದ ಲಾಭದ ಪಾಲನ್ನು ಕೊಡಬೇಕೆಂದು ಮುಷ್ಕರವನ್ನು ಹೂಡಿ ಗೆಲ್ಲುತ್ತಾರೆ. ಭತ್ಯೆಯನ್ನು ಕೊಟ್ಟಾಗ ಮಾಲೀಕನ ಪಾಲಿಗೆ ಎರಡೂವರೆ ಲಕ್ಷ ರೂಪಾಯಿಗಳ ನಷ್ಟವಾಗುತ್ತವೆ. ಇದರಿಂದ ಸಿಟ್ಟುಗೊಂಡ ಮಾಲೀಕನು ಕಾರ್ಖಾನೆಯ ಮೂರನೇ ಪಾಳಿಯ ಕೆಲಸವನ್ನು ಮೊಟಕುಗೊಳಿಸಿ ಮೂರರಲ್ಲಿ ಎರಡಂಶ ಕಾರ್ಮಿಕರನ್ನು ವಜಾಗೊಳಿಸಿ, ಕಾರ್ಮಿಕರ ಸಂಘದ ಮಾನ್ಯತೆಯನ್ನು ರದ್ದುಗೊಳಿಸುತ್ತಾನೆ. ಭತ್ಯೆಯನ್ನು ಕೊಟ್ಟಿರುವುದರಿಂದ ಕಾರ್ಮಿಕರ ಒಂದು ಗುಂಪು ಇದರ ವಿರುದ್ಧ ಸೊಲ್ಲೆತ್ತದೆ ಸುಮ್ಮನಾದರೆ ಮತ್ತೊಂದು ಗುಂಪು ಉಗ್ರ ಹೋರಾಟಕ್ಕೆ ಕರೆ ಕೊಡುತ್ತದೆ. ಆದರೆ ಸಂಘಟನೆಯ ಬಲವು ಎರಡು ಗುಂಪುಗಳ ನಡುವಿನ ಹೊಡೆದಾಟದಲ್ಲಿ ಅಂತ್ಯವಾಗುತ್ತದೆ. ಒಗ್ಗಟ್ಟಿಲ್ಲದ ಹೋರಾಟವನ್ನು ಆರಕ್ಷಕರು ಸುಲಭವಾಗಿ ಹತ್ತಿಕ್ಕುತ್ತಾರೆ. ಮಾಲೀಕರ ಪರವಾಗಿ ನಿಂತುಕೊಳ್ಳುವ ಗುಂಪು ಅಧಿಕಾರಕ್ಕೆ ಬರುತ್ತದೆ. ನಾಯಕನು ದುಡಿಯುವ ವರ್ಗದ ಹಿನ್ನಲೆಯಿಂದ ಬಂದವನಾದರೂ ಮಾಲೀಕರ ಹಿಂಬಾಲಕನಾಗಿದ್ದು, ಕಾರ್ಮಿನಾದ ನಾರಾಯಣನು ಉದ್ಯೋಗವನ್ನು ಕಳೆದುಕೊಂಡು, ಅವನಿಗಾಗಿ ಏನೂ ಮಾಡಲಾರದ ಪರಿಸ್ಥಿತಿಯಲ್ಲಿರುತ್ತಾನೆ.
ಚುಡಲಮುತ್ತು ವಳ್ಳಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾದರೂ ಅವರ ಸಾಂಸಾರಿಕ ಬದುಕಿನಲ್ಲಿ ಬಿರುಕುಗಳು ಕಾಣತೊಡಗುತ್ತವೆ. ಅವನು ಆಕೆಯ ಮೇಲೆ ಸಿಟ್ಟಿಗೆದ್ದು, ಬೈದು, ಬಡಿದು ನೋಯಿಸದಿದ್ದರೂ ಶುಚಿತ್ವ, ಖರ್ಚುವೆಚ್ಚ, ನೆರೆಮನೆಯ ಹೆಂಗಸರೊಡನೆ ಮಾತುಕತೆ ಮುಂತಾದ ವಿಚಾರಗಳಲ್ಲಿ ನಿರ್ಬಂಧಗಳನ್ನು ಹೇರುವಾಗ, ಕಾರ್ಮಿಕ ಸಂಘದ ಸದಸ್ಯರಿಗೆ ಹೇಳುವಂತೆ ಹೆಂಡತಿಗೂ ನಿರ್ದೇಶನಗಳನ್ನೇ ಕೊಡುತ್ತಿದ್ದುದರಿಂದ ಅವಳಿಗೆ ಅಸಹ್ಯವೆನಿಸುತ್ತದೆ. ಮೇಲಧಿಕಾರಿಗಳಿಂದ ಕಲಿತುಕೊಂಡು ಬಂದ ವಿಚಾರಗಳನ್ನು ನಿಜ ಬದುಕಿನಲ್ಲಿ ಅಳವಡಿಸಲು ಯತ್ನಿಸುವಾಗ ಆತನ ನಿರ್ಧಾರ ಮತ್ತು ಉದ್ದೇಶಗಳು ಏನೆಂದು ಆಕೆಗೆ ಅರ್ಥವಾಗುವುದಿಲ್ಲ. ಗಂಡನಿಂದ ದೊರಕುವ ಶಾರೀರಿಕ ಸುಖದ ಪ್ರಮಾಣವು ಕಡಿಮೆಯಾಗತೊಡಗಿದಾಗ ಅವಳಿಗೆ ತನ್ನ ಯೌವನವು ವ್ಯರ್ಥವಾದಂತೆನಿಸುತ್ತದೆ. ಗಂಡನಿಗೆ ಬೇಕಾದ್ದು ತನ್ನ ದೈನಂದಿನ ಕೆಲಸವನ್ನು ನಿರ್ವಹಿಸುವ ಪಾಲುಗಾರ್ತಿಯೇ ಹೊರತು ಎಲ್ಲ ಬಗೆಯ ಸುಖದುಃಖಗಳನ್ನು ಹಂಚಿಕೊಳ್ಳುವ ಗೆಳತಿಯಲ್ಲ ಎಂದು ಅನುಭವದ ಮೂಲಕ ಅರಿವಾದಾಗ ಆಕೆಗೆ ಭ್ರಮನಿರಸನವಾಗುತ್ತದೆ. ಗಂಡನ ಅಪ್ಪುಗೆಯ ಬಿಸಿ, ಚೇಷ್ಟೆಗಳ ಒರತೆ ಅಷ್ಟೂ ಬೇಗನೆ ಆರಿ ಹೋಗಬೇಕಿದ್ದರೆ ಆತನಿಗೆ ಬೇರೆ ಹೆಣ್ಣಿನೊಡನೆ ಸಂಬಂಧವಿರಬಹುದು ಎಂಬ ಅನುಮಾನವು ಬೆಳೆಯತೊಡಗುತ್ತದೆ. ಅವಳ ಮನಸ್ಸಿನಲ್ಲಿ ಮನೆ ಮಾಡಿದ ಸಂಶಯವನ್ನು ನಿವಾರಿಸದ್ದರೆ ಅದು ತನ್ನ ಶಿಸ್ತುಬದ್ಧ ಬದುಕನ್ನು ನಾಶ ಮಾಡಬಹುದೆಂದು ಹೆದರಿ ಆಕೆಯನ್ನು ಸಮಾಧಾನಿಸುವ ನಿಟ್ಟಿನಲ್ಲಿ ಹಿಂದಿಲ್ಲದಂತೆ ರಮಿಸುತ್ತಾನೆ. ಆಕೆಯು ತನ್ನ ಬದುಕಿಗೆ ನಿಜವಾಗಿಯೂ ಅಗತ್ಯ ಎಂದು ಆ ಮೂಲಕ ಕಂಡುಕೊಳ್ಳುತ್ತಾನೆ.
ಊರಿಗೆ ದಡಾರದ ಹಾವಳಿ ತಲೆದೋರಿದಾಗ ನಡೆಯುವ ವಿದ್ಯಮಾನಗಳು ಪರಿಸ್ಥಿತಿಯ ಕ್ರೂರ ವ್ಯಂಗ್ಯಕ್ಕೆ ಕನ್ನಡಿಯನ್ನು ಹಿಡಿಯುತ್ತವೆ. ದಡಾರಕ್ಕೆ ಮದ್ದಿಲ್ಲದಿರುವುದರಿಂದ ಜನರ ಗೋಳು ಹೇಳತೀರದು. ರಾಜಕೀಯ ಪ್ರಭಾವವನ್ನು ಹೊಂದಿದ ವ್ಯಕ್ತಿಗಳು ಆಡುವ ಆಟ ಮತ್ತು ಅವುಗಳ ಮುಂದೆ ಅಸಹಾಯಕರಾಗುವ ಜನರು. ದಡಾರಕ್ಕೆ ಚಿಕಿತ್ಸೆಯ ಏರ್ಪಾಡನ್ನು ಮಾಡುವ ಬದಲು ನಗರ ಸಭಾಧ್ಯಕ್ಷ ಕೇಶವ ಪಿಳ್ಳೆ ಮತ್ತು ಚುಡಲಮುತ್ತು ಈ ಮೂವರೂ ಸೇರಿ ಜನರಿಂದ ಹಣ ಸಂಗ್ರಹಿಸಿ ಗುಡಿ, ಮಸೀದಿ ಮತ್ತು ಇಗರ್ಜಿಗೆ ಸಾಮೂಹಿಕ ಹರಕೆಯನ್ನು ಹೇಳುವ ನೆಪದಲ್ಲಿ ಜನರಿಂದ ಹಣವನ್ನು ಕಬಳಿಸುತ್ತಾರೆ. ಚುಡಲಮುತ್ತುವಿಗೆ ಹಣ ಸಂಗ್ರಹಿಸಿಡುವ ಮೋಹ ಎಷ್ಟಿದೆಯೆಂದರೆ ರೋಗದಿಂದ ನರಳುತ್ತಿದ್ದ ತನ್ನ ಹೆಂಡತಿಯ ಅತ್ತೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲೂ ಮನಸ್ಸಿರುವುದಿಲ್ಲ. ಧರ್ಮ ದೇವರುಗಳನ್ನು ವಿರೋಧಿಸಿ ದೀನ ದುರ್ಬಲರ ಪರ ನಿಲ್ಲುವ ಸಂಘಟನೆಯ ವಕ್ತಾರನಾಗಿದ್ದುಕೊಂಡು ಮನೆಯೊಳಗೆ ದೇವರ ಭಜನೆಯನ್ನು ಮಾಡುವ, ಹರಕೆಯನ್ನು ಹೇಳುವ, ಬಂಡವಾಳ ಶಾಹಿತ್ವವನ್ನು ವಿರೋಧಿಸುತ್ತಿದ್ದರೂ ಬಲಹೀನ ಹೆಂಗಸಿಗೆ ಸಹಾಯವನ್ನು ಮಾಡದೆ ಹಣವನ್ನು ಕೂಡಿಡುವ ಹಪಾಹಪಿಯನ್ನು ಹೊಂದಿದ ಅವನ ವ್ಯಕ್ತಿತ್ವದೊಳಗಿನ ವಿರೋಧಾಭಾಸಗಳನ್ನು ಕಾದಂಬರಿಯು ಬಯಲಿಗೆಳೆಯುತ್ತದೆ.
ಚುಡಲಮುತ್ತುವಿಗೆ ಮಗು ಹುಟ್ಟಿದ ಬಳಿಕ ನಡೆಯುವ ಕ್ರಿಯೆಯು ತಂದೆಯ ಅಂತರಂಗಕ್ಕೆ ಸಂಬಂಧಪಟ್ಟಿದೆ. ವಳ್ಳಿಯು ಬಸುರಿಯಾದಾಗ ಆತನು ಹೆಮ್ಮೆಯಿಂದ “ನಿನ್ನ ಹೊಟ್ಟೆಯಲ್ಲಿರುವುದು ಯಾರೆಂದು ಯೋಚಿಸಿದ್ದಿ?” (ಪುಟ 82) ಎಂದಾಗ ಆಕೆ “ತೋಟಿಯ ಮಗ” (ಪುಟ 82) ಎಂದು ನಗುತ್ತಾ ಹೇಳಿದಾಗ ಅವನ ಅಂತರಂಗ ನಡುಗುತ್ತದೆ. ‘ನಮ್ಮ ಮಗ’ ಎಂಬ ಉತ್ತರವನ್ನು ಆತ ನಿರೀಕ್ಷಿಸಿದ್ದಿರಬಹುದು. ತಂದೆಯಾಗಲಿರುವ ತುಡಿತದಲ್ಲಿ ತಾನೊಬ್ಬ ತೋಟಿಯೆಂಬ, ಹುಟ್ಟಲಿರುವವನು ತೋಟಿಯ ಮಗನೆಂಬ ಸತ್ಯದ ಅರಿವಿನಿಂದ ಹುಟ್ಟಿದ ಒಳತುಮುಲ-ಹೊರನೋಟಗಳಿಂದ ಕತೆ ಮುಂದುವರಿಯುತ್ತದೆ. ಮಲವನ್ನು ಬಾಚುವ ಕೈಯಲ್ಲಿ ಅವನನ್ನು ಎತ್ತಿಕೊಳ್ಳಲು, ಮುದ್ದಿಸಲು, ತುತ್ತು ನೀಡಲು, ಪಕ್ಕದಲ್ಲಿ ಮಲಗಿಸಲು ಹಿಂಜರಿಯುತ್ತಾನೆ. ಹುಟ್ಟಿದ ಮಗನ ಜಾತಕ ದೋಷ, ಮಗುವಿಗೆ ಮೋಹನ ಎಂಬ ಆಕರ್ಷಕ ಹೆಸರಿಟ್ಟದ್ದಕ್ಕೆ ಸುತ್ತಲಿನವರ ಕುಹಕಗಳು ನೆನಪಾಗಿ ಕೀಳರಿಮೆಯಿಂದ ನರಳುವ ಆತನ ಮನಸ್ಸನ್ನು ಚೆನ್ನಾಗಿ ಚಿತ್ರಿಸಲಾಗಿದೆ. “ತೋಟಿಯಾಗಿರುವುದರ ಅಂದಿನಂತೆ ಒಮ್ಮೆಯೂ ಚುಡಲಮುತ್ತುವಿಗೆ ಅಸಹ್ಯದ ಅನುಭವವಾಗಿರಲಿಲ್ಲ. ಆ ಮಗುವಿಗೂ ಅಸಹ್ಯವೆನಿಸುತ್ತಿರಬಹುದು. ಅದಕ್ಕೆ ವಾಸನೆ ಮುಟ್ಟದೆ ಬೆಳೆಸಬೇಕು. ಆದರೆ ಮಗುವನ್ನು ಮರಳಿ ಕೈಯಲ್ಲಿ ಕೊಟ್ಟಾಗ ಅವನನ್ನು ಮತ್ತೊಮ್ಮೆ ಎತ್ತಿಕೊಳ್ಳಬೇಕೆನಿಸಿತು” (ಪುಟ 84) ಹೀಗೆ ಕಾದಂಬರಿಯನ್ನು ಸತ್ವಪೂರ್ಣವಾಗಿಸುವ ಪ್ರತಿಯೊಂದು ಪದಗಳು, ವಾಕ್ಯದ ಸಾಲುಗಳು ಆತನ ಮನದ ವ್ಯಾಪಾರವನ್ನು ಹಂತಹಂತವಾಗಿ ಬಿಚ್ಚುತ್ತಾ ಹೋಗುತ್ತವೆ. ಆದರೆ ಮಗು ತಂದೆಯ ಪ್ರೀತಿಯಿಂದ ವಂಚಿತವಾಗುವುದಿಲ್ಲವೇ ? ಎಂಬ ಪ್ರಶ್ನೆಗೆ ಕಾದಂಬರಿಯು ಉತ್ತರಿಸುವುದಿಲ್ಲ. ಮಗುವಿಗೆ ಒಳ್ಳೆಯ ಬಟ್ಟೆಯನ್ನು ಹೊದಿಸಿ ಪೌಡರ್ ಲೇಪಿಸಿ ಶುಚಿಯಾಗಿ ಬೆಳೆಸುತ್ತಾರೆ. ಇದು ಅವರ ಕೀಳರಿಮೆಯನ್ನು ಮುಚ್ಚಿಡುವ ಶ್ರಮವೂ ಆಗಿದೆ. ತಂದೆಯ ವಾತ್ಸಲ್ಯವು ಎದೆ ತುಂಬಿ ಬರುತ್ತಿದ್ದರೂ ಪ್ರೀತಿ ಕಾಳಜಿ, ಸಾರ್ಥಕತೆಯ ಭಾವಗಳು ಹಗ್ಗವಾಗಿ ಹೊಸೆದು ಮಗುವಿನ ಕಡೆ ಎಳೆಯುವುದಿಲ್ಲ. ತನಗಾಗಿ ಜೀವಂತ ಜಗತ್ತು ಅಳುತ್ತಿರುವಾಗ ಯಾರದೋ ಮಾತಿಗೆ ಎರವಾಗುತ್ತಿದ್ದೇನೆ ಎಂಬ ಪಶ್ಚಾತ್ತಾಪವೂ ಇಲ್ಲ. ಮಗು ಮಲಮೂತ್ರಗಳನ್ನು ವಿಸರ್ಜಿಸಿ, ಅದನ್ನೇ ಹಿಡಿದು ಆಟವಾಡುವುದನ್ನು ನೋಡಿದಾಗ ಜಾಡಮಾಲಿಯಾದ ಚುಡಲಮುತ್ತುವಿನ ಸಿಟ್ಟು ತಲೆಗೇರಿ ಅಬ್ಬರಿಸುವ ಸನ್ನಿವೇಶವು ಧ್ವನಿಪೂರ್ಣವಾಗಿದೆ. ಮಗನ ಭವಿಷ್ಯವನ್ನು ಕಲ್ಪಿಸಿ ಕಂಪಿಸುವ ಅವನ ಮನೋವ್ಯಾಪಾರವನ್ನು ಓದುಗರ ಊಹೆಗೆ ಬಿಟ್ಟುಕೊಡುವ ರೀತಿಯು ಮುಖ್ಯವಾಗುತ್ತದೆ. ದಡಾರದ ಪ್ರಸಂಗ ಮತ್ತು ಮಗು ಹುಟ್ಟಿದ ಸನ್ನಿವೇಶದಲ್ಲಿ ಚುಡಲಮುತ್ತು ಅನುಭವಿಸುವ ತಲ್ಲಣಗಳನ್ನು ಅನುಭವಿಸಿದ ಎರಡು ಅಧ್ಯಾಯಗಳು ಬಿಡಿ ಕತೆಗಳನ್ನು ಓದಿದ ಅನುಭವವನ್ನು ಉಂಟು ಮಾಡುತ್ತವೆ.
ಮಗನು ತನಗೆ ಅನ್ಯನಾಗಿ ಉಳಿದರೆ ಆತನು ತೋಟಿಯಾಗಲಾರ ಎಂದು ಚುಡಲಮತ್ತು ಭಾವಿಸುತ್ತಾನೆ. ಇದರಿಂದ ಮೋಹನನು ‘ತಂದೆ’ಯಿಂದ ಬೇರೆಯಾಗುವನೇ ಹೊರತು ‘ತೋಟಿ’ಯಿಂದಲ್ಲ ಎಂದು ಅರಿವಾಗುವುದಿಲ್ಲ. ಆದ್ದರಿಂದ ಅವನು ಮಮತೆಯ ಕೈಗಳನ್ನು ಬಲವಂತವಾಗಿ ಹಿಂದಕ್ಕೆ ಎಳೆದುಕೊಳ್ಳುತ್ತಾನೆ. ತನ್ನನ್ನು ತೋಟಿಯೆಂದು ಅಸಹ್ಯಪಟ್ಟಾದರೂ ಮಗನು ಆ ವೃತ್ತಿಯನ್ನು ದ್ವೇಷಿಸಲಿ ಎಂದು ಯೋಚಿಸುತ್ತಾನೆ. ತಂದೆ ಜಾಡಮಾಲಿಯೆಂದು ಗೊತ್ತಾದಾಗ ಮೋಹನ ಬೆಚ್ಚಿ ಬಿದ್ದರೂ ಅವನು ತನ್ನ ತಂದೆಯನ್ನು ಮತ್ತು ಆತನ ವೃತ್ತಿಯನ್ನು ದ್ವೇಷಿಸುವುದಿಲ್ಲ. ತಂದೆ ತನಗಾಗಿ ಬೆವರಿಳಿಸುತ್ತಾನೆ ಎಂದು ಅನುಕಂಪವನ್ನು ತೋರಿಸುತ್ತಾನೆ. ತೋಟಿಯ ಮಗನಾಗಿರುವುದರಿಂದ ಅವನನ್ನು ಸಹಪಾಠಿಗಳು ದೂರ ಮಾಡುತ್ತಾರೆ. ತಂದೆತಾಯಿರನ್ನು ಕಳೆದುಕೊಂಡ ಅಲೆಮಾರಿ ಹುಡುಗ ಗೆಳೆಯನಾಗುತ್ತಾನೆ. ಅವನು ಚುಡಲಮುತ್ತುವಿನ ಮಸಲತ್ತಿಗೆ ಬಲಿಯಾದ ಪಿಚ್ಚಾಂಡಿಯ ಮಗನೇ ಆಗಿರುತ್ತಾನೆ. ಇಪ್ಪತ್ತು ರೂಪಾಯಿಗಳನ್ನು ಇಸಿದುಕೊಂಡ ಓವರಸಿಯರನು ಬೇರೊಬ್ಬ ಪೋಷಕನನ್ನು ಮೋಹನನ ತಂದೆ ಎಂಬಂತೆ ತೋರಿಸಿಕೊಂಡು ಪ್ರವೇಶ ಶುಲ್ಕವಿಲ್ಲದೆ ದಾಖಲಾತಿಯನ್ನು ಕೊಡಿಸಿದರೂ ಮುಖ್ಯೋಪಾಧ್ಯಾಯನು ತಿಂಗಳಿಗೆ ಎರಡು ರೂಪಾಯಿಗಳನ್ನು ಪಡೆದುಕೊಳ್ಳುತ್ತಾನೆ. ನಿರಂಜನರ ‘ವಿಮೋಚನೆ’ಯಲ್ಲೂ ಇಂಥದ್ದೇ ಸನ್ನಿವೇಶಗಳು ಇವೆ. ಬಡವನಾದ ತನ್ನನ್ನು ಕೆಣಕಿದ ಸಿರಿವಂತ ಹುಡುಗರಿಗೆ ಚಂದ್ರಶೇಖರನು ಹೊಡೆದಾಗ ಅಧ್ಯಾಪಕರು ಅವನ ಮೇಲೆಯೇ ತಪ್ಪು ಹೊರಿಸಿ ಅವನನ್ನು ಹೊರಗೆ ಹಾಕುತ್ತಾರೆ. ಕ್ಷಮಾಪಣೆಯನ್ನು ಕೇಳಲು ಬಂದ ತಂದೆಯ ಕೈಯಿಂದ ಸೌದೆಯನ್ನು ಒಡೆಸಿ ಪ್ರತಿ ತಿಂಗಳು ಬಿಟ್ಟಿಯಾಗಿ ಸೌದೆ ಒಡೆದರೆ ಮಗನ ವಿದ್ಯಾಭ್ಯಾಸವನ್ನು ಮುಂದುವರಿಸಲು ಒಪ್ಪುತ್ತಾನೆ. ತೋಟಿಯ ಮಗನಾದ ಮೋಹನನೂ ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಾನೆ. ಮೋಹನ ಮತ್ತು ಚಂದ್ರಶೇಖರನ ಬಾಲ್ಯದ ಭಾವನೆಗಳ ಮೇಲೆ ಸಹಪಾಠಿಗಳು, ಮೇಷ್ಟ್ರು ಉಂಟು ಮಾಡುವ ಆಘಾತಗಳು ಬೇರೆ ಬೇರೆ ಸ್ತರಗಳಲ್ಲಿ ಓದುಗರನ್ನು ತಟ್ಟುತ್ತವೆ. ಸಾಮಾಜಿಕ ಅಸಮಾನತೆಯನ್ನು ಇಲ್ಲವಾಗಿಸಬೇಕಿದ್ದ ಶಾಲೆಯೇ ಸಾಮಾಜಿಕ ಅಸಮಾನತೆಯ ತಾಣವಾಗಿರುವ ವ್ಯಂಗ್ಯವನ್ನು ಕಾಣುತ್ತೇವೆ. ಆದ್ದರಿಂದ ತನ್ನ ತಂದೆ ಸತ್ತಾಗ ಊಟ ಹಾಕಿದ ಪಿಚ್ಚಾಂಡಿಯ ಕುಟುಂಬವನ್ನು ಬೀದಿಗೆಸೆಯಲೂ ಹಿಂಜರಿಯುವುದಿಲ್ಲ. ಅವನಿಗೆ ಊರು ಬಿಟ್ಟು ಹೋಗಬೇಕೆನಿಸುತ್ತದೆ. ಆದರೆ ಅವನ ಸಂಪಾದನೆಯು ಪುರಸಭಾಧ್ಯಕ್ಷನ ಕೈಯಲ್ಲಿದೆ. ಕಾರ್ಮಿಕರ ಒಗ್ಗಟ್ಟನ್ನು ಮುರಿಯುವ ಆಯುಧ. ಆತನಿಗೆ ಇವರ ನೆರವು ಬೇಕು. ಆದ್ದರಿಂದ ಮನೆ ಹಿತ್ತಿಲುಗಳನ್ನು ಕಂಡುಕೊಳ್ಳುವಷ್ಟು ಮೊತ್ತ ಸಂಗ್ರಹವಾದಾಗ ನೀಡುತ್ತೇನೆ ಎಂದು ಹೇಳುತ್ತಾ ಅವನನ್ನು ಸಾಗ ಹಾಕುತ್ತಾನೆ.
ಜಾಡಮಾಲಿಯ ಕೆಲಸದಿಂದ ಬೇಸತ್ತು ಮಸಣದಲ್ಲಿ ಹೆಣ ಸುಡುವ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಕಾಲರಾ ಹಬ್ಬತೊಡಗಿದ್ದರಿಂದ ಎಲ್ಲೆಲ್ಲೂ ಮರಣದ ಅಟ್ಟಹಾಸವು ಕೇಳಿಸತೊಡಗುತ್ತದೆ. ಸುಟ್ಟಷ್ಟೂ ಮುಗಿಯದ ಹೆಣಗಳು ಚುಡಲಮುತ್ತುವಿನ ಮನದಲ್ಲಿ ಮೃತ್ಯುಪ್ರಜ್ಞೆಯನ್ನು ಹುಟ್ಟಿಸುತ್ತವೆ. ತಬ್ಬಲಿ ಮೋಹನನ ಪಾಡು ನಾಯಿಪಾಡಾಗುತ್ತದೆ. ಪ್ರಾಯಕ್ಕೆ ಬಂದಾಗ ಅವನೂ ಜಾಡಮಾಲಿಯಾಗುತ್ತಾನೆ. ತಲೆಮಾರುಗಳು ಬದಲಿದರೂ ದೀನ ದಲಿತರು ಅಧಿಕಾರಿಗಳ ಕೈಕೆಳಗೆ ದುಡಿದು ಬದುಕುವುದಷ್ಟೇ ವಾಸ್ತವ ಎಂಬುದನ್ನು ಹೃದಯ ಕಲಕುವ ಭಾಷೆಯಲ್ಲಿ ತಗಳಿಯವರು ನಿರೂಪಿಸಿದ್ದಾರೆ. ಆದರೆ ಅವನ ಕಾಲಕ್ಕೆ ಬರುವಾಗ ತೋಟಿಗಳು ಸಂಘಟಿತರಾಗಿದ್ದಾರೆ. ಅವರ ನಾಯಕನಾಗಿ ಬೆಳೆದ ಮೋಹನನು ಪುರಸಭೆಯ ಅಧ್ಯಕ್ಷನ ಕಟ್ಟಡಕ್ಕೆ ಬೆಂಕಿಯನ್ನು ಹಚ್ಚಿ ನಾಶ ಮಾಡುತ್ತಾನೆ. ಅವನ ದ್ವೇಷ ಬಂಡವಾಳಶಾಹಿಯ ವಿರುದ್ಧವಾದರೂ ತನ್ನ ತಂದೆಯ ಹಣವನ್ನು ಕಟ್ಟಿಟ್ಟ ಪುರಸಭೆಯ ಅಧ್ಯಕ್ಷರ ಮೇಲೆ ಹಗೆಯನ್ನು ತೀರಿಸಬೇಕೆಂಬ ಮನೋಭಾವವೂ ಇದಕ್ಕೆ ಕಾರಣವಾಗಿರುತ್ತದೆ. ಈ ಅಪ್ಪಟ ಪ್ರಗತಿಶೀಲ ಕೃತಿಯು ಮೋಹನ ಬಡವರ ನಾಯಕನಾಗಿ ಬೆಳೆಯುವ ಸಾಧ್ಯತೆಯನ್ನು ಸೂಚಿಸುತ್ತದೆ. ಇದರಲ್ಲಿ ಆಕರ್ಷಕ ಕಥಾವಸ್ತುವಿಲ್ಲ. ಆಕರ್ಷಕ ಕತೆಯನ್ನು ಹೇಳುವ ಉದ್ದೇಶವಿಲ್ಲ. ಜಾಡಮಾಲಿಗಳ ಬದುಕಿನ ಪರಿಸ್ಥಿತಿಯ ವರ್ಣನೆ, ನಿರೂಪಣೆಗಳಲ್ಲಿ ವಾಸ್ತವತೆಯಿದ್ದರೂ ‘ವೈಷಮ್ಯಪೂರಿತ ಜಗತ್ತಿನಲ್ಲಿ ಬಾಳಬೇಕಾದರೆ ಪ್ರೀತಿಯೊಂದೇ ಸಾಲದು. ಕಾಂಚಾಣವೂ ಬೇಕು’ ಎಂಬ ಅನುಭವವು ಮುಖ್ಯವಾಗುತ್ತದೆ. ಆದರೆ ಕತೆಯಲ್ಲಿ ಎದ್ದು ಕಾಣುವ ಅದಮ್ಯ ಆಶಾ ಭಾವನೆ, ಕ್ರಾಂತಿಯಿಂದಲೇ ಬದುಕು ಉತ್ತಮಗೊಳ್ಳುವುದೆಂಬ ಭರವಸೆ ಮತ್ತು ಬದುಕಿನ ಉರಿಯಲ್ಲೂ ಬತ್ತದ ಪ್ರೇಮ ಅಂತಃಕರಣಗಳು ಕಾದಂಬರಿಯ ಧನಾತ್ಮಕ ಅಂಶಗಳಾಗಿವೆ.
1936ರಲ್ಲಿ ‘ಅಖಿಲ ಭಾರತ ಪ್ರಗತಿಶೀಲ ಲೇಖಕರ ಸಂಘ’ದ ಮೊದಲ ಅಧಿವೇಶನವು ಪ್ರೇಮಚಂದರ ಅಧ್ಯಕ್ಷತೆಯಲ್ಲಿ ಲಖನೌನಲ್ಲಿ ನಡೆದಾಗ ಕರ್ನಾಟಕದಿಂದ ನಿರಂಜನರೂ, ಕೇರಳದಿಂದ ತಗಳಿಯವರೂ ಪ್ರತಿನಿಧಿಗಳಾಗಿ ಬಂದಿದ್ದರು. ಆ ಸಮ್ಮೇಳನವು ಅವರ ಮೇಲೆ ಪ್ರಭಾವವನ್ನು ಬೀರಿರುವುದರಿಂದ ಅವರ ಕಾದಂಬರಿಗಳಲ್ಲಿ ಸಾಮ್ಯತೆಗಳು ಕಂಡುಬರುವುದು ಸಹಜವಾಗಿದೆ. ಯುಗಧರ್ಮ ಮತ್ತು ಎಡಪಂಥೀಯ ಧೋರಣೆಗಳೂ ಕಾರಣವಾಗಿವೆ. (ಲಖನೌ ಅಧಿವೇಶದ ಪ್ರಣಾಳಿಕೆಯನ್ನು ತಯಾರಿದವರ ಪೈಕಿ ಒಬ್ಬರಾದ ಮುಲ್ಕ್ ರಾಜ್ ಆನಂದ್ ಅವರ ‘ಅನ್ಟಿಚೇಬಲ್ಸ್’ ಎಂಬ ಕಾದಂಬರಿಯೂ ಜಾಡಮಾಲಿಯ ಬದುಕನ್ನು ವಸ್ತುವನ್ನಾಗಿರಿಸಿಕೊಂಡಿದೆ ಎಂಬುದೂ ಗಮನಾರ್ಹ.) ತಗಳಿಯವರ ಆರಂಭಿಕ ಕೃತಿಗಳಲ್ಲಿ ಒಂದೆನಿಸಿದ ‘ತೋಟಿಯ ಮಗ’ ಕಾದಂಬರಿಯಲ್ಲಿ ಪ್ರಗತಿಶೀಲ ಕಾದಂಬರಿಗಳ ಬಗ್ಗೆ ಸಾಹಿತ್ಯ ಚರಿತ್ರೆಯು ಗುರುತಿಸಿದ ಗುಣದೋಷಗಳೆಲ್ಲವೂ ಸೇರಿಕೊಂಡಿವೆ. 1948ರಲ್ಲಿ ರಂಡ್ ಇಡಂಗಳಿ’ (ಎರಡು ಬಳ್ಳ) ಪ್ರಕಟಗೊಂಡ ಬಳಿಕ ತಗಳಿಯವರಿಗೆ ಸಮರ್ಥ ಕಾದಂಬರಿಕಾರನೆಂಬ ಪಟ್ಟ ದೊರಕಿತು. ಇದು ಅವರ ಕಾದಂಬರಿ ಜಗತ್ತಿನಲ್ಲಿ ಭದ್ರವಾದ ಮೈಲಿಗಲ್ಲೆನಿಸಿತು. ನಂತರದ ದಿನಗಳಲ್ಲಿ ‘ಚೆಮ್ಮೀನ್’, ‘ಏಣಿಪ್ಪಡಿಗಳ್’, ‘ಕಯರ್’ ಮುಂತಾದ ಕಾದಂಬರಿಗಳ ಮೂಲಕ ಅವರು ತಮ್ಮ ಬರವಣಿಗೆಯ ಮಿತಿಗಳನ್ನು ಮೀರುವುದರಲ್ಲಿ ಯಶಸ್ವಿಯಾದರು.
ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ತಗಳಿ ಶಿವಶಂಕರ ಪಿಳ್ಳೈ
ಡಾ. ಮೋಹನ ಕುಂಟಾರರು