Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ನಾರಾಯಣ ಕಂಗಿಲರ ‘ಉತ್ತರಾಪಥ’
    Article

    ಪುಸ್ತಕ ವಿಮರ್ಶೆ | ನಾರಾಯಣ ಕಂಗಿಲರ ‘ಉತ್ತರಾಪಥ’

    June 1, 2024No Comments6 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹಲವು ದಶಕಗಳ ಕಾಲ ಕನ್ನಡ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ನಾರಾಯಣ ಕಂಗಿಲರು ಓಯಸಿಸ್ (ಕಥಾಸಂಕಲನ), ಮತ್ತೇನೆಂದರೆ (ಕವನ ಸಂಕಲನ), ಶಬ್ದ ಮತ್ತು ನೂಪುರ (ಕಾದಂಬರಿ), ಅವರೋಹಣ, ಹೇ ರಕ್ಷಕ, ಗಾಂಧಿ ಪಥ (ನಾಟಕಗಳು), ಮರದ ಮರ್ಮರ (ಮಕ್ಕಳ ನಾಟಕ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ಇದುವರೆಗೆ ಬರೆದ ಕತೆಗಳನ್ನು ಒಟ್ಟಿಗೆ ಸೇರಿಸಿ ಪ್ರಕಟಿಸಿದ ಮಹತ್ವದ ಕಥಾಸಂಕಲನವೇ ‘ಉತ್ತರಾಪಥ’. ಇಲ್ಲಿರುವ ಹದಿನೈದು ಕತೆಗಳ ಪೈಕಿ ಕೆಲವು ರಚನೆಗಳು ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವೆನಿಸುತ್ತವೆ.

    ನಾರಾಯಣ ಕಂಗಿಲರು ತಮ್ಮ ಬರವಣಿಗೆಯನ್ನು ಆರಂಭಿಸುವ ವೇಳೆಗೆ ಕನ್ನಡ ಸಾಹಿತ್ಯದಲ್ಲಿ ನವ್ಯಮಾರ್ಗವು ತನ್ನ ಪ್ರಭಾವವನ್ನು ಬೀರತೊಡಗಿತ್ತು. ಅಂತರಂಗದ ಬಗೆಯೊಳಗನು ತೆರೆದು ನೋಡುವ ಕ್ರಮ ಆರಂಭಗೊಂಡಿತ್ತು. ಅಂತರಂಗವನ್ನು ಹೊಕ್ಕು ನೋಡುವ ಪರಿಯನ್ನು ನವ್ಯಮಾರ್ಗದಿಂದ ಪಡೆದುಕೊಂಡ ಲೇಖಕರು ಕತೆಯ ಒಳಹೊರಗುಗಳ ಮುಖಾಮುಖಿಯನ್ನು ತಮ್ಮದೇ ರೀತಿಯಲ್ಲಿ ಆಭಿವ್ಯಕ್ತಿಸಿದ್ದಾರೆ.

    ಈ ಸಂಕಲನದ ಪ್ರಾತಿನಿಧಿಕ ಕತೆಯಾದ ‘ಉತ್ತರಾಪಥ’ವು ಸಂಕೀರ್ಣವಾಗಿದ್ದು, ಮನು ಎಂಬ ಯುವಕನು ಅನುಭವಿಸುವ ನೋವು, ಏಕಾಕಿತನ ಮತ್ತು ಯಾತನೆಗಳನ್ನು ಒಳಗೊಂಡಿದೆ. ಈ ವಸ್ತುವಿಗೆ ವೈಯಕ್ತಿಕ ಮುಖವಿದ್ದಂತೆ ಸಾಮಾಜಿಕ ಮುಖವೂ ಇದೆ. ಮನುವಿನ ಪ್ರೇಯಸಿಯೂ, ಅವನು ರಚಿಸುವ ಚಿತ್ರಗಳ ರೂಪದರ್ಶಿಯೂ ಆಗಿದ್ದ ಪದ್ಮಿನಿಯು ಮಾಡೆಲಿಂಗ್ ಕ್ಷೇತ್ರದಿಂದ ಸಿನೇಮಾ ಜಗತ್ತಿನೆಡೆಗೆ ನೆಗೆಯುವ ರಭಸದಲ್ಲಿ ನಿರ್ಮಾಪಕನ ಆಮಿಷಕ್ಕೆ ಬಲಿಯಾಗಿ ಶೀಲವನ್ನು ಕಳೆದುಕೊಳ್ಳುತ್ತಾಳೆ. ಸಕಾಲಕ್ಕೆ ಆಸ್ಪತ್ರೆಯನ್ನು ಸೇರಿದರೂ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಕೋಮಾವಸ್ಥೆಗೆ ಜಾರುತ್ತಾಳೆ. ಆ ಹೃದಯಭೇದಕ ಯಾತನೆಯನ್ನು ಅನುಭವಿಸುವುದು ಮನು ಒಬ್ಬನೇ. ಅವಳು ತನ್ನ ಚಿತ್ರಗಳ ರೂಪದರ್ಶಿಯಾಗಿ ಪ್ರಸಿದ್ಧಳಾಗದಿರುತ್ತಿದ್ದರೆ ಎಂಬ ಕೊರಗು ಅಪರಾಧಿ ಪ್ರಜ್ಞೆಯ ರೂಪದಲ್ಲಿ ಅವನನ್ನು ಕಾಡುತ್ತದೆ. ಪದ್ಮಿನಿಯ ದುರಂತ ಕಥನವು ಮನುವಿನ ಪ್ರಜ್ಞೆಯ ಮೂಲಕ ಓದುಗರನ್ನು ತಲುಪುವುದರಿಂದ ಅವಳ ಅನುಭವವನ್ನು ಸಾಮಾಜಿಕ ಅನ್ಯಾಯ ಮತ್ತು ಪಾಪಗಳ ನೆಲೆಯಲ್ಲಿ ಗ್ರಹಿಸುವ ಮನೋಭಿತ್ತಿಯು ಸೃಷ್ಟಿಯಾಗುತ್ತದೆ. ಸಮಗ್ರತೆಯ ಶೋಧದಲ್ಲಿ ಮನು ತನ್ನ ಭೂತ-ವರ್ತಮಾನಗಳಿಂದ ಆಯ್ದ ಬದುಕನ್ನು ಅರ್ಥಪೂರ್ಣವಾಗಿ ಜೋಡಿಸುವ ಕ್ರಿಯೆಯಲ್ಲಿ ತೊಡಗುತ್ತಾನೆ. ಅವುಗಳೆರಡರಲ್ಲೂ ಕಾಣುವ ಸಮಾನ ಯಾತನೆಯ ವಿನ್ಯಾಸಗಳು ಅವನಲ್ಲಿ ಭ್ರಮನಿರಸನವನ್ನು ಹುಟ್ಟಿಸುತ್ತವೆ. ಅನಾಥನಾಗಿದ್ದಾಗ ತನ್ನನ್ನು ಸಾಕಿದ ಅಪ್ಪಾಜಿಯವರ ಸಾಮಾಜಿಕ ದಾರ್ಶನಿಕ ದೃಷ್ಟಿಕೋನಗಳ ಜೊತೆಯಲ್ಲಿ ಬದುಕಿನ ಸ್ವಾತಂತ್ರ್ಯ, ಅಂತರಂಗದ ದೌರ್ಬಲ್ಯಗಳನ್ನು ಮೀರುವ ಸಾಧ್ಯತೆಗಳನ್ನು ಒಳಗೊಳ್ಳುವುದರಿಂದ ಕತೆಯ ಪರಿಣಾಮವು ನೇತ್ಯಾತ್ಮಕವಾಗುತ್ತದೆ.

    ‘ಬಿಸಿಲು, ಸೆಖೆ, ಮಳೆ ಇತ್ಯಾದಿ’ ಎಂಬ ಕತೆಯಲ್ಲಿ ಲೇಖಕರ ವಿಶಿಷ್ಟ ಪ್ರತಿಭೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಔದ್ಯೋಗಿಕ ಜಗತ್ತಿನ ಸುಳಿಯಲ್ಲಿ ಸಿಲುಕಿಕೊಂಡ ರಮೇಶನ ಮಾನಸಿಕ-ನೈತಿಕ ಗೊಂದಲ, ಯಾತನೆ ಮತ್ತು ತಲ್ಲಣಗಳು ಅವನ ಒಳಹೊರಗುಗಳಿಂದ ಕೂಡಿಯೇ ವ್ಯಕ್ತವಾಗುತ್ತವೆ. ತಾನು ಒಳಗೊಳಗೆ ಪ್ರೀತಿಸುತ್ತಿರುವ ಚಿತ್ರಾಳ ಮೇಲೆ ಆಫೀಸಿನ ಮ್ಯಾನೇಜರ್ ತೋರುವ ವಿಶೇಷ ಆಸಕ್ತಿಯು ರಮೇಶನನ್ನು ಕಂಗೆಡಿಸಿ ವಿವಿಧ ರೀತಿಯ ಸಂಶಯಗಳನ್ನೆಬ್ಬಿಸುತ್ತವೆ. ಅವನ ಕಾಮುಕತೆಯಿಂದ ಚಿತ್ರಾಳನ್ನು ಪಾರು ಮಾಡಬೇಕೆಂದು ಹಪಹಪಿಸುವ ರಮೇಶನು ಏನೂ ಮಾಡಲಾರದೆ ಒದ್ದಾಡುತ್ತಾನೆ. ಅವನ ಭಾವಜಗತ್ತಿನ ಮೇಲೆ ಮ್ಯಾನೇಜರ್ ಮತ್ತು ಚಿತ್ರಾಳಿಂದ ಆಗುವ ಆಘಾತ ಸಾಂಕೇತಿಕವಾಗಿದ್ದು ಹಲವು ಸ್ತರಗಳಲ್ಲಿ ಓದುಗರನ್ನು ತಟ್ಟುತ್ತದೆ. ಅನಾರೋಗ್ಯದಿಂದ ಹಾಸಿಗೆ ಹಿಡಿದ ತನ್ನ ತಂದೆಯನ್ನು ನೋಡಲು ಬಂದ ರಮೇಶನ ಸುಸಂಸ್ಕೃತ ನಡವಳಿಕೆ, ತನ್ನ ಬಗ್ಗೆ ಅವನಲ್ಲಿರುವ ಪ್ರೇಮ, ಅನುಕಂಪ ಚಿತ್ರಾಳ ಮನಸ್ಸನ್ನು ಗೆಲ್ಲುತ್ತದೆ. ರಮೇಶನು ಮನೆಗೆ ಹೊರಟಾಗ ಅಪ್ಪನಿಗೆ ಮದ್ದು ತರಲೆಂದು ಅವನ ಜೊತೆಗೆ ಪೇಟೆಗೆ ಹೊರಡುತ್ತಾಳೆ. ಅರ್ಧ ದಾರಿಯಲ್ಲಿದ್ದಾಗ ಮಳೆ ಬರತೊಡಗುತ್ತದೆ. ಮಳೆಯಿಂದ ತಪ್ಪಿಸಿಕೊಳ್ಳಲು ಅವರಿಬ್ಬರು ಮರದಡಿಯಲ್ಲಿ ಒತ್ತೊತ್ತಾಗಿ ನಿಲ್ಲುತ್ತಾರೆ. ರಮೇಶನ ಸಾಮೀಪ್ಯ ಮತ್ತು ಸ್ಪರ್ಶಗಳಿಂದ ಚಿತ್ರಾ ಮೆಲ್ಲಗೆ ಅರಳತೊಡಗುತ್ತಾಳೆ. ದೈಹಿಕ-ಮಾನಸಿಕ ಸಂಕೋಚವನ್ನು ಮೀರಿ ಅವರಿಬ್ಬರೂ ಹೊಸ ಅನುಭವದತ್ತ ತೆರೆದುಕೊಳ್ಳುತ್ತಾರೆ. ಮಾನಸಿಕ ಬಂಧನವನ್ನು ಕಳಚಿ ನಿಸರ್ಗದ ನಿಯಮಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳುತ್ತಾರೆ. ಪಕೃತಿ ಸಹಜವಾದ ಈ ಕ್ರಿಯೆಗೆ ‘ಮಳೆ’ ಸಮರ್ಥ ರೂಪಕವಾಗಿ ಮೂಡಿ ಬಂದಿದೆ. ಕತೆಯಲ್ಲಿ ಶೋಧಿತವಾಗುವ ಅನುಭವಕ್ಕೆ ಪಕೃತಿಯ ಪ್ರಾತಿನಿಧ್ಯವಿದೆ. ಪ್ರಾಕೃತಿಕ ವಿದ್ಯಮಾನಗಳನ್ನು ಪ್ರತಿಮೆಯಾಗಿಟ್ಟುಕೊಂಡು ಗಂಡುಹೆಣ್ಣಿನ ಒಳಜಗತ್ತನ್ನು ಸಾಂಕೇತಿಕವಾಗಿ ಮಂಡಿಸುವ ಮೂಲಕ ಲೇಖಕರು ಮಾನವೀಯ ಸಂಬಂಧಗಳಿಗೆ ಹೊಸ ಆಯಾಮವನ್ನು ನೀಡಿದ್ದಾರೆ.

    ‘ತಾಂಡವದ ಲಯ’ ಇತರ ಕತೆಗಳಿಗಿಂತ ಭಿನ್ನವಾಗಿದ್ದು ವ್ಯಕ್ತಿಯ ಭಾವನೆಗಳು, ವಾಸ್ತವ ಘಟನೆಗಳು, ದೈಹಿಕ ಮಾನಸಿಕ ಪರಿಣಾಮಗಳು, ಪಾತ್ರದ ಬುದ್ಧಿ ಚೇತನಗಳಿಂದ ಬರುವ ಹೇಳಿಕೆ ಮತ್ತು ವಿಷಯವನ್ನು ಅಭಿನಯಿಸಿ ತೋರುವ ಕಲೆಯಿಂದಾಗಿ ಗಮನ ಸೆಳೆಯುತ್ತದೆ. ಮನುಷ್ಯನ ಅಸಹಾಯಕತೆ, ಒಂಟಿತನದ ನೋವುಗಳನ್ನು ತೆರೆದಿಡುತ್ತದೆ. ಪ್ರೀತಿಗಾಗಿ ಬಾಯಾರಿದ ಹಸುಳೆ ಮನಸ್ಸಿನವನಾದ ಈಚಣ್ಣನಿಗೆ ಅನ್ಯಾಯ ದೌರ್ಜನ್ಯಗಳನ್ನು ಸಹಿಸಿಕೊಳ್ಳುವ ಶಕ್ತಿಯಿಲ್ಲದಿದ್ದರೂ ಸುತ್ತುಮುತ್ತಲಿನ ಕ್ರೌರ್ಯ ಮತ್ತು ಭಯಾನಕ ಪರಿಸ್ಥಿತಿಯ ಅರಿವಿದೆ. ಪ್ರಜ್ಞೆಯ ಲಹರಿಗಳಲ್ಲಿ ಬದುಕಿನ ಜೀವಂತ ಕ್ಷಣಗಳ ನೆನಪುಗಳಿವೆ. ಸೋದರತ್ತಿಗೆ ಸುಮಿಯ ಪ್ರೀತಿ, ವೃದ್ಧೆ ಸೋಮಕ್ಕನ ನೆನಪು, ಎಂದೋ ಸತ್ತ ಗೋಪಿ ಕರುವಿನೊಂದಿಗಿನ ಒಡನಾಟ ಮಾತ್ರವಲ್ಲ ಮನದಲ್ಲಿ ಇನ್ನೂ ಉಳಿದುಕೊಂಡಿರುವ ಹಲವಾರು ಪ್ರಶ್ನೆಗಳು ಅವನ ಪ್ರಜ್ಞಾ ಪ್ರವಾಹದಲ್ಲಿ ತೇಲಿಬರುತ್ತವೆ. ಮಲಯಾಳದ ಹಿರಿಯ ಸಾಹಿತಿಗಳಲ್ಲೊಬ್ಬರಾದ ಎಂ.ಟಿ. ವಾಸುದೇವನ್ ನಾಯರ್ ಅವರ ಪ್ರಸಿದ್ಧ ಕತೆ ‘ಕತ್ತಲ ಆತ್ಮ’ (ಇರುಟ್ಟಿಂಡೆ ಆತ್ಮಾವ್)ವನ್ನು ಆಶ್ಚರ್ಯಕರವಾಗಿ ಹೋಲುವ ಕತೆಯು ಕೇವಲ ಮನಶಾಸ್ತ್ರೀಯ ಪಾತಳಿಯ ಮೇಲೆ ಕೆಲಸವನ್ನು ಮಾಡದೆ ಸಾಂಕೇತಿಕತೆಯನ್ನು ಸಾಧಿಸುತ್ತದೆ. ಅಪ್ಪ ಮತ್ತು ಅಣ್ಣ ದಬ್ಬಾಳಿಕೆಗೆ ಹಾಗೂ ಅಮ್ಮ ಮತ್ತು ಕೆಲಸದಾಕೆ ಪ್ರೀತಿ-ಅಂತಃಕರಣಗಳಿಗೆ ಸಂಕೇತವಾದರೆ ಪ್ರಕೃತಿಯ ವಿದ್ಯಮಾನಗಳಾದ ಗುಡುಗು ಸಿಡಿಲುಗಳು ಅದೃಶ್ಯ ಮರಣದ ಸಂಕೇತವಾಗಿದ್ದು ಮೃತ್ಯು ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ. ‘ಬಿಸಿಲು, ಸೆಖೆ, ಮಳೆ ಇತ್ಯಾದಿ’ಯಲ್ಲಿ ಹೊಸ ಜೀವನದ ಸೆಲೆಯನ್ನು ಚಿಮ್ಮಿಸುವ ಮಳೆಯು ಇಲ್ಲಿ ಮರಣದ ಸಂಕೇತವಾಗಿ ಬದಲಾಗಿದೆ.

    ‘ಕಾಂಚನ ಮೃಗ’ ಎಂಬ ಕತೆಯಲ್ಲಿ ನಿರಪರಾಧಿ ಜೀವದ ದುರಂತವೇ ವಸ್ತುವಾಗಿದೆ. ಈ ದುರಂತವು ವೈಯಕ್ತಿಕ ಸ್ವರೂಪದ್ದಾಗಿದ್ದರೂ ಸಾಮಾಜಿಕ ಮುಖವನ್ನು ಹೊಂದಿದೆ. ಮಂಜಣ್ಣನ ಬದುಕು ದುರಂತಮಯವಾಗಿರುವುದಕ್ಕೆ ಅವನ ಮುಗ್ಧತೆ ಕಾರಣವಿದ್ದಂತೆ ಹೆಂಡತಿ ಕಾಂಚನಳ ಮಹತ್ವಾಕಾಂಕ್ಷೆ, ನಾಟಕ ರಂಗದಲ್ಲಿ ಮೇಲೇರಲು ಅವಳು ಅಲ್ಲಿನ ಮ್ಯಾನೇಜರನೊಂದಿಗೆ ಇಟ್ಟುಕೊಳ್ಳುವ ಸಂಬಂಧ, ತಂದೆತಾಯಿಯರಿಂದ ದೂರವಾದ ಅವಸ್ಥೆ, ಮ್ಯಾನೇಜರನಿಂದ ಕಾಂಚನಳಿಗೆ ಹುಟ್ಟಿದ ಮಗುವನ್ನು ಸಾಕಬೇಕಾದ ಗತಿ, ಮಗುವನ್ನೂ ಬಿಟ್ಟು ಯಾರ ಜೊತೆಗೋ ಓಡಿಹೋದ ಹೆಂಡತಿಯ ಕಾರಣದಿಂದ ಅನುಭವಿಸಬೇಕಾಗಿ ಬಂದ ಅವಮಾನಗಳೆಲ್ಲವೂ ದುರಂತವನ್ನು ತೆರೆತೆರೆಯಾಗಿ ಅನುಭವಿಸುವ ಮಂಜಣ್ಣನ ಮಾನಸಿಕ ಸ್ಥಿತಿಯ ದಾಖಲೆಯಾಗಿದ್ದು, ಅವನ ಪತನಕ್ಕೆ ಕಾರಣವಾಗುವ ವಿದ್ಯಮಾನಗಳೂ ಆಗಿವೆ. ಮನಸ್ಸಿನ ಆಳಕ್ಕಿಳಿಯದಿದ್ದರೂ ಸಾಧ್ಯವಾದಷ್ಟು ತೀವ್ರತೆಯೊಡನೆ ವಾಸ್ತವತೆಯನ್ನು ಸಾಧಿಸಿದ ಲೇಖಕರಿಗೆ ಮಂಜಣ್ಣನನ್ನು ಬಲಿ ತೆಗೆದುಕೊಂಡ ವ್ಯಕ್ತಿಗಳ ಬಗ್ಗೆ, ಸಮಾಜದ ಬಗ್ಗೆ ತೀವ್ರ ವಿಮರ್ಶೆಗೊಳಪಡಿಸುವ ಉದ್ದೇಶವಿಲ್ಲ. ಇವರಿಗೆ ಸಮಾಜದ ಗುಣದೋಷಗಳನ್ನು ತಿಳಿಸುವುದು ಮುಖ್ಯವೇ ಹೊರತು ನೈತಿಕ ತಾತ್ವಿಕ ಕಾಳಜಿಗಳನ್ನು ಕುರಿತು ಚಿಂತಿಸುವುದಲ್ಲ. ಏನೇ ಇದ್ದರೂ ದೈನಂದಿನ ಜೀವನದ ಅನೇಕ ಸಮಸ್ಯೆಗಳ ನಡುವೆ ಜಡವಾಗುತ್ತಾ ಹೋಗುವ ಮನಸ್ಸನ್ನು ಮಂಜಣ್ಣನ ಪಾತ್ರದ ಮೂಲಕ ಕಾಣಲು ಸಾಧ್ಯವಾಗಿದೆ. ಹೃದಯಹೀನ ಸಮಾಜದ ಭೋಗದ ಅಬ್ಬರವು ಅಂತರಂಗದ ಅಂತರ್ಜಲವನ್ನು ಬತ್ತಿಸುವ ಕ್ರಮವನ್ನು ಅಭಿವ್ಯಕ್ತಿಸಿದ ಬಗೆಯು ಮಾರ್ಮಿಕವಾಗಿದೆ.

    ವಸ್ತುವಿನ ಸಾಮಾಜಿಕ ಸ್ವರೂಪ ಮತ್ತು ಕೇಂದ್ರ ಪ್ರತೀಕವೊಂದರ ಬಳಕೆಯು ‘ಸೌಗಂಧಿಕಾ ಪ್ರಕರಣ’ದಲ್ಲಿ ಕಾಣುವ ಹೊಸ ಬೆಳವಣಿಗೆಯಾಗಿದೆ. ಕತೆಯ ಕೇಂದ್ರದಲ್ಲಿರುವ ಸಾಹುಕಾರನ ಎಸ್ಟೇಟು ದೇಶದ ಹಲವೆಡೆಗಳಲ್ಲಿರುವ ಕ್ಷುದ್ರ ಸಮಾಜವೊಂದರ ಪ್ರತೀಕ. ಕಾಣಲು ಆಕರ್ಷಕವಾದ ಈ ಎಸ್ಟೇಟು ಅನೈತಿಕ ಚಟುವಟಿಕೆಗಳ ತಾಣ. ಈಸೋಬಿನ ಮತ್ತು ಮೋಲಿಯನ್ನು ಆವರಿಸಿರುವ ಲೈಂಗಿಕ ಸಂಬಂಧಗಳ ಹೀನ ದೆಸೆ. ಇಂಥ ವಿಷಯಗಳಲ್ಲಿ ಜನರು ಹೊಂದಿರುವ ಕೆಟ್ಟ ಕುತೂಹಲ, ಸಂದಿಗ್ಧದಲ್ಲಿ ಸಿಲುಕಿಕೊಂಡ ಈಸೋಬಿನಳ ಮೇಲೆ ನಡೆಯುವ ಪೋಲೀಸರ ದೌರ್ಜನ್ಯ, ಗಂಡ ಲೆಯಾಮುವಿನ ನಿಗೂಢ ಮರಣ ಹೀಗೆ ಹಲವು ಆಯಾಮಗಳನ್ನು ಪಡೆದಿರುವ ಕತೆಯು ಸಾಮಾನ್ಯ ಮಟ್ಟದ ನಿರೂಪಣೆಗೊಳಗಾಗಿಲ್ಲ. ಅವ್ಯವಹಾರಗಳಿಗೆ ಸಾಕ್ಷಿಯಾದ ಗಾಳಿ ಮತ್ತು ಕಾಫಿಗಿಡಗಳು ಪರಿಸ್ಥಿತಿಯನ್ನು ನಿರೂಪಕನಿಗೆ ವಿವರಿಸುವ ರೀತಿಯಲ್ಲಿ ಬರವಣಿಗೆಯಿದೆ. ಸಮಾಜ ಬಾಹಿರ ಕೆಲಸವನ್ನು ಮಾಡುವವರ ಚಲನವಲನಗಳು ಅದೆಷ್ಟು ನಿಗೂಢವೆಂದರೆ ಕಾಲದೇಶಗಳ ಭೇದವಿಲ್ಲದೆ ಎಲ್ಲದಕ್ಕೂ ಸಾಕ್ಷಿಯಾಗಿರುವ, ಮನುಷ್ಯನ ಒಳಹೊರಗುಗಳಲ್ಲಿ ನಡೆಯುವ ಘಟನೆಗಳ ಪಾಲಿಗೆ ಪ್ರಾಣಾನಿಲವಾಗಿರುವ ಗಾಳಿಗೆ ಕೂಡ ಘಟನೆಯ ಸ್ವರೂಪವೇನು ಎಂದು ತಿಳಿಯುವುದಿಲ್ಲ. ಇಲ್ಲಿ ಕತೆಗಾರನು ಅದೃಶ್ಯನಾಗಿರದೆ ಸಮಾಜದ ಒಳಹೊರಗುಗಳನ್ನು ವ್ಯಾಪಿಸಿದ್ದರ ಪರಿಣಾಮವಾಗಿ ಕತೆಯು ಒಂದು ‘ರಚನೆ’ಯಾಗಿ ಉಳಿಯದೆ ‘ಪ್ರಕ್ರಿಯೆ’ಯ ರೂಪವನ್ನು ತಾಳುತ್ತದೆ.

    ಗ್ರಾಮ ನಗರಗಳೆಂಬ ಭೇದವಿಲ್ಲದೆ ಬದುಕಿನ ಪರಿಚಿತ-ಅಪರಿಚಿತ ಮುಖಗಳನ್ನು ಹುಡುಕಾಡುವ ಇವರ ಕತೆಗಳಲ್ಲಿ ನವ್ಯದ ಮರುಕಳಿಕೆಯನ್ನು ಗುರುತಿಸಬಹುದು. ‘ಅಂತರಂಗ’ದಲ್ಲಿ ವ್ಯಾಪಕವಾಗಿ ಚಿತ್ರಿತವಾದ ಕೌಟುಂಬಿಕ ವಿಷಮತೆ, ಅಸ್ವಸ್ಥತೆಗಳು ಅನಂತಮೂರ್ತಿ, ಕೆ. ಸದಾಶಿವರ ಕತೆಗಳಲ್ಲಿ ಈ ಮೊದಲೇ ಕಾಣಿಸಿಕೊಂಡಿದ್ದವು. ‘ಜೋ ಎಂಬ ಅನಾಮಿಕ’ ಮತ್ತು ‘ಕ್ರಾಂತಿ’ಯಲ್ಲಿ ರಾಜಕೀಯದ ಹೆಸರಿನಲ್ಲಿ ನಡೆಯುವ ವಂಚನೆ, ಶೋಷಣೆ, ಅನ್ಯಾಯಗಳ ಅನಾವರಣವನ್ನು ಪ್ರಗತಿಶೀಲರ ಕತೆಗಳಲ್ಲೂ ನೋಡಬಹುದು. ‘ಓಯಸಿಸ್’ನಲ್ಲಿ ಕೆ.ವಿ. ತಿರುಮಲೇಶರ ‘ಅನ್ವೇಷಣೆ; ದಾರಿ’ ಕತೆಯ ಪ್ರಭಾವವನ್ನು ಕಾಣಬಹುದು. ‘ರೂಪಾಂತರ’ದ ತಿರುಳು ಶಾಂತಿನಾಥ ದೇಸಾಯಿಯವರ ‘ದಂಡೆ’ ಮತ್ತು ವ್ಯಾಸರಾಯ ಬಲ್ಲಾಳರ ‘ವಿಷವರ್ತುಲ’ದ ತಿರುಳೂ ಆಗಿದೆ. ಅಂತರವೆಂದರೆ ಈ ಕತೆಗಳ ಹೊಸ ರಾಜಕೀಯ, ಸಾಮಾಜಿಕ ಸಂದರ್ಭ ಮತ್ತು ಕಲೆಗಾರಿಕೆ. ಲೇಖಕರು ತಮಗಿಂತ ಹಿಂದಿನ ತಲೆಮಾರಿನ ಮಹತ್ವದ ಸಾಹಿತಿಗಳಿಂದ ಸಾಕಷ್ಟು ಕಲಿತುಕೊಂಡಿರುವುದು ಮಾತ್ರವಲ್ಲ ಅವರೆಲ್ಲರ ಪ್ರಭಾವಗಳನ್ನು ಮೀರಿ ತಮ್ಮದೇ ಆದ ಮಾರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ ಎಂಬುದು ಮುಖ್ಯವಾಗುತ್ತದೆ.

    ಮನಸ್ಸಿನ ಆರ್ದತೆಯನ್ನು ಕಾಪಾಡುವ ಕಾಳಜಿಯು ಇಲ್ಲಿನ ಕತೆಗಳಿಗೆ ವಿಶೇಷ ಶಕ್ತಿಯನ್ನು ನೀಡಿದೆ. ಇವುಗಳು ನವ್ಯದ ಸಂದರ್ಭದಲ್ಲಿ ಈಗಾಗಲೇ ಬಂದು ಹೋದ ರಚನೆಗಳಂತೆನಿಸಿದರೂ ಅವುಗಳು ಲೇಖಕರ ವಿಶೇಷ ಪರಿಣತಿಯ ಫಲಗಳಾಗಿವೆ. ಸಮಕಾಲೀನ ವಾಸ್ತವವನ್ನು ಬಿಂಬಿಸುವ ಕತೆಗಳಲ್ಲಿ ಅವರ ಆಧುನಿಕ ಸಂವೇದನೆ ಮತ್ತು ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತವೆ. ಸರಳರೇಖೆಯಲ್ಲಿ ಚಲಿಸುವ ಕತೆಗಳ ಆಳಕ್ಕಿಳಿದು ಚಿಂತಿಸಿದಾಗ ಸಂಕೀರ್ಣ ಅನುಭವ ಲಭ್ಯವಾಗುತ್ತದೆ. ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶ, ಪರಸ್ಪರ ಅವಲಂಬನೆಯ ಅಗತ್ಯ, ನೈತಿಕತೆಯನ್ನು ಕುರಿತ ಚಿಂತನೆ, ದುಡಿಯುವ ಹೆಣ್ಣಿನ ಬವಣೆ ಎಲ್ಲವೂ ಸಹಜ ರೀತಿಯಲ್ಲಿ ಚಿತ್ರಿತವಾಗಿವೆ. ಅಂತರಂಗವನ್ನು ತಲ್ಲಣಗೊಳಿಸುವ ಮಾನಸಿಕ ಅಸ್ವಸ್ಥತೆಗಳನ್ನು, ಬದುಕಿನ ಕ್ರೌರ್ಯವನ್ನು ಸಂಯಮದಿಂದ ನಿರೂಪಿಸಿದ್ದಾರೆ. ನಗರವನ್ನು ಕೇಂದ್ರವಾಗಿಟ್ಟುಕೊಂಡ ಹೆಚ್ಚಿನ ಕತೆಗಳು ನೌಕರಶಾಹೀ ಬದುಕಿನ ತೊಡಕು – ಯಾಂತ್ರಿಕತೆಗಳಿಂದ ಪಾರಾಗಲು ಅರಸುವ ಪ್ರೀತಿಯ ಸಂಬಂಧಗಳ ಕಡೆಗೆ ಬೆಳಕು ಚೆಲ್ಲುತ್ತವೆ.

    ಪುಸ್ತಕದ ಹೆಸರು : ಉತ್ತರಾಪಥ – ಈವರೆಗಿನ ಕಥೆಗಳು (ಕಥಾಸಂಕಲನ)
    ಪುಟಗಳು : 103 + 7
    ಲೇಖಕರು : ನಾರಾಯಣ ಕಂಗಿಲ
    ಬೆಲೆ ರೂ : 60
    ಪ್ರಕಾಶಕರು : ಶ್ರೀರಾಮ ಪ್ರಕಾಶನ ಮಂಡ್ಯ
    ವರ್ಷ : 2010

    ಡಾ. ಸುಭಾಷ್ ಪಟ್ಟಾಜೆ :

    ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.

    ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್‌ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Article2023ನೇ ಸಾಲಿನ ‘ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ’ ಪ್ರಕಟ
    Next Article ಸಾರ್ವಜನಿಕ ಫಲಕಗಳಲ್ಲಿ ಕನ್ನಡ ಅಳವಡಿಕೆ ಕ.ಸಾ.ಪ.ದಿಂದ ಜಿಲ್ಲಾಧಿಕಾರಿಗೆ ಅಭಿನಂದನೆ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.