ವೈಕಂ ಮುಹಮ್ಮದ್ ಬಷೀರ್ ಇವರ ‘ಶಬ್ದಗಳು’ ಮತ್ತು ‘ಸಾವಿನ ನೆರಳಿನಲ್ಲಿ’ ಎಂಬ ಎರಡು ಅನನ್ಯ ಕಾದಂಬರಿಗಳನ್ನು ಪಾರ್ವತಿ ಜಿ. ಐತಾಳ್ ಮಲೆಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಾದಂಬರಿಗಳ ಭಾಷೆ ಮತ್ತು ಶೈಲಿ ಅನುವಾದಕರಿಗೊಂದು ಸವಾಲು. ಅನೇಕ ಅಮೂರ್ತ ವಿವರಗಳು ಮತ್ತು ವಿಚಾರಗಳು, ಕಲ್ಪನೆಗಳು ಕಾವ್ಯಾತ್ಮಕ ರೂಪ ಕಲಾತ್ಮಕವಾಗಿ ನವ್ಯ ರೂಪಕಗಳಿಂದ ಮುಪ್ಪುರಿಗೊಂಡಿವೆ. ಮನುಷ್ಯನ ಸುಪ್ತಪ್ರಜ್ಞೆಯಲ್ಲಿರಬಹುದಾದ ಅನೂಹ್ಯ ಅತೀತದ ರೂಪಕಗಳು ಕೃತಿಗಳಿಗೆ ಸಂಕೀರ್ಣತೆಯನ್ನು ತಂದುಕೊಟ್ಟಿವೆ.
ಕಾಫ್ಕಾ ಅಥವಾ ದೊಸ್ತೊವಸ್ಕಿ ಬರೆಯುವ ಅಧೋ ಲೋಕದ ಚಿತ್ರಣಗಳಿದ್ದಂತೆಯೇ ಈ ಕಾದಂಬರಿಗಳಲ್ಲಿ ಕೂಡ ಅತೀತದ ಭೀಭತ್ಸ ಚಿತ್ರಣಗಳಿವೆ. ಆ ಚಿತ್ರಣಗಳು ಮನುಷ್ಯನ ಒಳ ವ್ಯಕ್ತಿತ್ವಗಳ ಚಿತ್ರಣಗಳೇ ಆಗಿವೆ. ಮಾರ್ಕ್ವಿಸ್ ‘ಒಂದು ನೂರು ವರ್ಷಗಳ ಏಕಾಂತ’ದಲ್ಲಿ ಮಾನವನ ವಿಕಾಸವನ್ನು ಚಿತ್ರಿಸಿದಂತೆ ಬಷೀರ್ ಇಡೀ ಬ್ರಹ್ಮಾಂಡದ ಉಗಮ ಅಥವಾ ಸೃಷ್ಟಿಯಿಂದ ಹಿಡಿದು ಈ ಆಧುನಿಕ ಯುಗದವರೆಗಿನ ಏಕಾಂತವನ್ನು ಚಿತ್ರಿಸುತ್ತಾರೆ. ಕಾದಂಬರಿಯಲ್ಲಿ ಕಥಾನಕಕ್ಕಿಂತ ಕಥಾನಾಯಕನ ಮನೋವಿಕಾರಗಳಿಗೆ (ಆ ವಿಕಾರಗಳು ಎಲ್ಲ ಮನುಷ್ಯರಲ್ಲಿ ಇರುವಂತವೆ) ಶಬ್ದಗಳನ್ನು ಟಂಕಿಸುತ್ತಾರೆ. ಅಸಂಗತ ಎಂದೆನಿಸಿದರೂ ಕಥಾನಕದಲ್ಲಿ ಸಾಂಗತ್ಯವಿದೆ.
ಮೊದಲ ಕಾದಂಬರಿ ‘ಶಬ್ದಗಳು’ ಕಾದಂಬರಿಯಲ್ಲಿ ಬಷೀರರು ಯುದ್ಧಗ್ರಸ್ತ ಪಟ್ಟಣದ ವಿನಾಶ ಅಂದರೆ ಆಧುನಿಕ ನಾಗರಿಕತೆಯು ತಂದೊಡ್ಡೊವ ವಿನಾಶವನ್ನು ಮತ್ತು ಕೊಳೆತು ಹೋದ ಸಾಂಸ್ಕೃತಿಕ ಸ್ಥಿತಿಯನ್ನು ಕಥಾನಾಯಕನಾದ ಸೈನಿಕನ ಮೂಲಕ ಚಿತ್ರಿಸುತ್ತಾರೆ.
ಒಂದು ಮಧ್ಯರಾತ್ರಿ ಕಥಾನಾಯಕ ಈ ಕಾದಂಬರಿಕಾರನ ಮನೆಗೆ ಬಂದು ತನ್ನ ಕಥೆಯನ್ನು ಬಿತ್ತರಿಸುವುದರೊಂದಿಗೆ ಪ್ರಾರಂಭಗೊಂಡು ಅವನ ವಿಫಲ ಆತ್ಮಹತ್ಯಾ ಪ್ರಯತ್ನದೊಂದಿಗೆ ಕೊನೆಗೊಳ್ಳುತ್ತದೆ.
ಎರಡನೆಯ ಕಾದಂಬರಿ ‘ಸಾವಿನ ನೆರಳಿನಲ್ಲಿ’ ಬರಹಗಾರನೊಬ್ಬ ಅಂತೆಯೇ ಮನುಷ್ಯಲೋಕದ ಅನೇಕ ಜನ ಸಾವಿನ ನೆರಳಲ್ಲಿ ಭಯಮಿಶ್ರಿತ ವಿಕಾರಗಳಲ್ಲಿ ನಿದ್ರಾವಸ್ಥೆಯಲ್ಲಿದ್ದಂತೆ ಕಂಡು ಬರುತ್ತಾರೆ. ಇಡೀ ಕಥಾನಕ ಒಂದು ಸುದೀರ್ಘ ಕನಸಿನಂತೆ ಬೆಳೆದು ಅತೀತದಲ್ಲಿ ಅನಂತದಲ್ಲಿ ಕೊನೆಗೊಳ್ಳುತ್ತದೆ. ಈ ಎರಡನೆಯ ಕಾದಂಬರಿ ಬಷೀರ್ ಅವರ ಅತ್ಮಕಥಾನಕದಂತೆ ಗೋಚರಿಸುತ್ತದೆ. ಬಷೀರರು ಭಾಷೆಯನ್ನು ವಿಡಂಬನೆ ಅಸಹಾಯಕತೆ ಮತ್ತು ತಮಾಷೆಗಾಗಿಯೋ ಎಂಬಂತೆ ಸಂಕೀರ್ಣ ಬದುಕಿನ ಚಿತ್ರಣ ಅಥವಾ ರೂಪಕಗಳನ್ನು ಸೃಷ್ಟಿಸಲು ಅತೀ ಸಂಕ್ಷಿಪ್ತತೆಯಿಂದ ಬಳಸುತ್ತಾರೆ.
ಕನ್ನಡದಲ್ಲಿ ಈ ಬಗೆಯ ಶೈಲಿಯ ಕಾದಂಬರಿಯೇ ಇಲ್ಲ ಅನ್ನಬಹುದು. ಕಟು ವಾಸ್ತವದ ಘೋರ ಕ್ರೂರ ರೂಪಕಗಳು ಇಲ್ಲಿ ನಮಗೆ ಆಘಾತವನ್ನುಂಟು ಮಾಡುತ್ತವೆ. ಇಂತಹ ಸಂಕ್ಷಿಪ್ತತೆ (brevity) ಇವರ ಅನನ್ಯ ಶೈಲಿ. ಕಥೆಗಳೇ ಇಲ್ಲದಂತೆ ಕಾಣುವ ಕಲೆಗೆ ಯಾವ ಉದ್ದೇಶವೆಂದರೆ ದೇವರು ಏನೆಲ್ಲ ಸೃಷ್ಟಿಸಿದನೋ, ಯಾವ ಉದ್ದೇಶದಿಂದ ಸೃಷ್ಟಿಸಿದನೋ ಅದೇ ಉದ್ದೇಶದಿಂದ ಬರಹಗಾರ- ಕಲೆಗಾರನು ಕಲಾಕೃತಿಗಳನ್ನು ಸೃಷ್ಟಿಸುತ್ತಾನೆ ಎಂಬುದನ್ನು ನಿರೂಪಿಸುವುದು. ಬದುಕಿಗೊಂದು ಉದ್ದೇಶವಿದೆ ಎಂಬುದನ್ನು ಈ ಕೃತಿಗಳು ನಿರಾಕರಿಸುತ್ತವೆ. ಪಾರ್ವತಿ ಐತಾಳ್ ಅವರ ಸಮರ್ಥ ಅನುವಾದದ ಮೂಲಕ ಬಷೀರರ ಈ ಭಿನ್ನ ಶೈಲಿಯ ಕಾದಂಬರಿಗಳು ಕನ್ನಡಕ್ಕೆ ಬಂದಿರುವುದು ಅಭಿನಂದನೀಯ.
ಉದಯಕುಮಾರ್ ಹಬ್ಬು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾದ ಉದಯಕುಮಾರ್ ಹಬ್ಬು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನ ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕವನ, ಕಥೆ, ಕಾದಂಬರಿ, ವಿಮರ್ಶೆ, ವ್ಯಕ್ತಿತ್ವ ವಿಕಸನದ ಬಗ್ಗೆ ಕೃತಿಗಳು ಹೀಗೆ ಸಾಹಿತ್ಯದ ವಿವಿಧ ಮಜಲುಗಳಲ್ಲಿ ಕೃಷಿ ಮಾಡಿದವರು. ಬಸವಣ್ಣ, ಬುದ್ಧ ಬೌದ್ಧಧರ್ಮದ ಬಗ್ಗೆ, ಪ್ರಾಚೀನ ಭಾರತೀಯ ತತ್ವದರ್ಶನಗಳು ಈ ಬಗ್ಗೆಯೂ ಕೃತಿ ರಚನೆ ಮಾಡಿದ್ದಾರೆ. ನಾಥ ಪಂಥ- ಸಿದ್ಧಾಂತಗಳು ಮತ್ತು ಆಚರಣೆಗಳು ಇದು ಇವರ ಸಂಶೋಧನಾತ್ಮಕ ಗ್ರಂಥ. ಕಾಂತಾವರ ಕನ್ನಡ ಸಂಘದ ನಾ ಮೊಗಸಾಲೆ ಸಾಹಿತ್ಯ ಪುರಸ್ಕಾರ ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.
ಲೇಖಕಿ ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು