ಆಫ್ರಿಕಾದ ಸ್ವಾಹಿಲಿ ಭಾಷೆಯಲ್ಲಿ ‘ಝವಾದಿ’ ಎಂದರೆ ಕಾಣಿಕೆ ಎಂದರ್ಥ. ದೇವರ ಕಾಣಿಕೆಯಾಗಿರುವ ಮಾನವ ಜನ್ಮವನ್ನು ಸಾರ್ಥಕಗೊಳಿಸಬೇಕು ಎಂಬ ದನಿಯು ಇಲ್ಲಿದೆ. ಆಫ್ರಿಕಾ ದೇಶದ ಟಾಂಜಾನಿಯಾ ರಾಜ್ಯದ ಜನರ ಪಾಲಿಗೆ ಸಿಂಬಾ (ಸಿಂಹ) ಎಂದರೆ ದೇವದೂತ. ಭಾರತೀಯರ ಪಾಲಿಗೆ ಹಾವು ಗೋವುಗಳಂತೆ ಪೂಜ್ಯ ಪ್ರಾಣಿ. ಸಿಂಬಾದ ಸಂಸಾರದ ಕತೆಯು ಶಂಕರರಾಯರ ಸಂಸಾರದ ಕತೆಯ ಪ್ರತಿಬಿಂಬವಾಗಿದೆ. ಸಿಂಬಾನಲ್ಲಿ ಅವರು ತಮ್ಮನ್ನು, ಕ್ವೀನಳಲ್ಲಿ ಸೌದಾಮಿನಿಯನ್ನು, ಮರಿಗಳಲ್ಲಿ ತನ್ನ ಮಕ್ಕಳಾದ ಅಭಿ ಮತ್ತು ಅಂಜಲಿಯರನ್ನು, ಸಿಂಬಾನ ಬದುಕಿಗೆ ಪ್ರವೇಶಿಸಿದ ಸಿಂಹಿಣಿ ಕ್ಲಿಯೋಪಾತ್ರಾಳನ್ನು ತನ್ನ ಅಬಚಿಯಾಗಿ ಕಾಣುವಲ್ಲಿ ಸಿಂಹಗಳ ಬದುಕು ಕಾದಂಬರಿಯ ಸುತ್ತ ಪ್ರತೀಕವಾಗಿ ರೂಪುಗೊಳ್ಳುತ್ತದೆ. ತನ್ನ ಅಪ್ಪನ ಎರಡನೇ ಹೆಂಡತಿಯಾದ ಅಬಚಿಯೊಂದಿಗಿನ ಸಹವಾಸವು ಶಂಕರರಾಯರ ಅರ್ಧ ಆಯುಷ್ಯವನ್ನು ವ್ಯರ್ಥಗೊಳಿಸಿದರೆ ಆಫ್ರಿಕಾದ ನೀಗ್ರೋ ಜನಾಂಗಕ್ಕೆ ಸೇರಿದ ಟೆಂಬೋನ ಮಾತುಗಳು ಅವರ ಬದುಕಿನ ದೃಷ್ಟಿಯನ್ನು ಬದಲಿಸುತ್ತದೆ.
ಹೆಂಡತಿಯ ಮೇಲೆ ಸಿಟ್ಟುಗೊಂಡ ಶಂಕರರಾಯರು ಉದ್ಯೋಗ ನಿಮಿತ್ತ ಆಫ್ರಿಕಾಕ್ಕೆ ತೆರಳಿದ ಬಳಿಕ ಅಲ್ಲಿನ ಅರಣ್ಯದಲ್ಲಿ ಸಿಂಹ ಸಿಂಹಿಣಿಯರ ಸಂಸಾರವನ್ನು ಕಂಡು, ತಮ್ಮ ನಡೆನುಡಿಗಳನ್ನು ತಿದ್ದಿಕೊಂಡು ಊರಿಗೆ ಮರಳಿ ಹೆಂಡತಿ ಸೌದಾಮಿನಿಯ ಮುಂದೆ ತಪ್ಪೊಪ್ಪಿಕೊಂಡು ಪರಿಪೂರ್ಣತೆಯೆಡೆಗೆ ಚಲಿಸುವ ಪ್ರಕ್ರಿಯೆಯು ಈ ಕಾದಂಬರಿಯ ವಸ್ತುವಾಗಿದೆ. ಅವರು ತಮ್ಮ ಬದುಕಿನ ಬೇರೆ ಬೇರೆ ಸಂದರ್ಭಗಳಲ್ಲಿ ಬಂದ ಹೆಂಗಸರ ಸ್ವಭಾವಗಳನ್ನು, ಅವರೊಂದಿಗಿನ ಸಂಬಂಧಗಳ ಸ್ವರೂಪವನ್ನು ವಿಮರ್ಶಿಸುವ, ಆತ್ಮವಿಮರ್ಶೆಯನ್ನು ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದವರು ಎಂಬುದಕ್ಕೆ “ಆಶಾ, ರೂತ ಪತಿಯಿದ್ದೂ ಪರಪುರುಷನಿಗೆ ಮನಸೋತು ಮಜಾ ಮಾಡುವ ಚಂಚಲೆಯರು. ಆದರೆ ಪೂರ್ಣಿಮಾ ಎಳೆ ಜೀವ. ಯೌವನದ ಶಾರೀರಿಕ ಎಳೆತ. ರೂಪ ಮೋಹಿಸಿ ಭಾವನೆಗಳಿಗೆ ಬಲಿಯಾಗಿ, ಭವಿಷ್ಯದ ಕಲ್ಪನೆಯಿಲ್ಲದೆ ತಪ್ಪುದಾರಿ ತುಳಿದದ್ದು ಕೇವಲ ಅವಳ ಯೌವನದ ತಪ್ಪಲ್ಲ. ಸಮಾಜದಲ್ಲಿ ಸಜ್ಜನ, ಪ್ರತಿಷ್ಠಿತ, ಬುದ್ಧಿವಂತ, ಐಶ್ವರ್ಯವಂತ ಎಂದು ಬೀಗುತ್ತಿದ್ದ ತಮ್ಮ ತಪ್ಪು” (ಪುಟ 221) ಎಂಬ ಸಾಲುಗಳು ಸಾಕ್ಷಿಯಾಗುತ್ತವೆ. ಕಾದಂಬರಿಯು ಶಂಕರರಾಯರನ್ನು ಸಮರ್ಥಿಸದೆ, ಅವರ ಮೂಲಕ ಜಟಿಲವೂ ಸಂಕೀರ್ಣವೂ ಆದ ಪ್ರಶ್ನೆಗಳನ್ನು ಸೂಕ್ಷ್ಮವಾದ, ಪ್ರಬುದ್ಧವಾದ ಅನುಭವ, ವಿಶ್ಲೇಷಣೆಯ ಬೆಳಕಿನಲ್ಲಿ ಶೋಧಿಸಿ ತನ್ನ ದರ್ಶನಕ್ಕೆ ಅಧಿಕೃತತೆಯನ್ನು ಗಳಿಸಿಕೊಳ್ಳುತ್ತದೆ.
ಸಾಂಪ್ರದಾಯಿಕ ಬ್ರಾಹ್ಮಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬದುಕುತ್ತಿರುವ ಹಳ್ಳಿಯ ಜನರ ಸ್ಥಿತಿಗತಿಗಳನ್ನು ಚಿತ್ರಿಸುವ ಕಾದಂಬರಿಯಲ್ಲಿ ಸುಧಾರಣೆಯ ಆವೇಶವಾಗಲೀ ಸಮಾಜದ ಅಂಧಶ್ರದ್ಧೆಗಳ ಬಗ್ಗೆ ಆಕ್ರೋಶವಾಗಲೀ ಇಲ್ಲ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಒಂದು ಕಾಲದ ಜೀವನಕ್ರಮವನ್ನು ಹಿಡಿದಿಡುವ ಕಾದಂಬರಿಯು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತದೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ತಮಗೊದಗಿದ ಕಷ್ಟಕರ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕರಾದವರು ಸ್ವೀಕರಿಸುವ ದಿಟ್ಟ ನಿಲುವು, ಸಮಸ್ಯೆಗಳನ್ನು ಎದುರಿಸುವ ರೀತಿಯು ಮುಖ್ಯವಾಗುತ್ತದೆ. ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ ಕಲ್ಪಿಸಿ ಅಭ್ಯಾಸವಾದ ಹೊತ್ತಿನಲ್ಲಿ ಹೆಣ್ಣು ಕೂಡ ಹೆಣ್ಣನ್ನು ಶೋಷಣೆ ಮಾಡಬಲ್ಲಳು ಎಂಬುದನ್ನು ಧ್ವನಿಸುವ ಮೂಲಕ ಲೇಖಕಿಯು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣುಹಾಯಿಸಿದ್ದಾರೆ. ಹಿಂದಿನ ತಲೆಮಾರಿನ ಬದುಕು ಮತ್ತು ಸಾಹಿತ್ಯದ ಅಧ್ಯಯನದ ಮೂಲಕ ಶಾಶ್ವತವಾದ ಜೀವನಸೂತ್ರಗಳನ್ನು ಕಂಡುಕೊಳ್ಳುವ ಕಾದಂಬರಿಯು ಸಂಪ್ರದಾಯ ನಿಷ್ಠ ಸಮಾಜವನ್ನು ಅತ್ಯಂತ ಕಾಳಜಿಯಿಂದ, ನಿಷ್ಠೆಯಿಂದ ಚಿತ್ರಿಸುತ್ತಾ ಅದರಲ್ಲಿನ ಒಳಿತನ್ನು ಸ್ವೀಕರಿಸುವುದರೊಂದಿಗೆ ಜಡತ್ವವನ್ನು ಪ್ರಶ್ನಿಸುತ್ತದೆ.
ಧಾರವಾಡದ ಸಾಂಪ್ರದಾಯಿಕ ಬದುಕು ಮತ್ತು ದೇಸೀಯತೆಯು ಈ ಕಾದಂಬರಿಯ ವಿಶೇಷತೆಯಾಗಿದೆ. ನಿರೂಪಣೆಯನ್ನು ಶಿಷ್ಟ ಭಾಷೆಯಲ್ಲಿ ಬರೆದ ಲೇಖಕಿಯು ಸಂಭಾಷಣೆಯಲ್ಲಿ ದೇಸೀಯತೆಯನ್ನು ಮೆರೆದಿದ್ದಾರೆ. ಅವರ ಮನೋಭಾವವು ಸಂಕ್ಷೇಪಕ್ಕಿಂತ ವಿಸ್ತಾರದ ಕಡೆಗೆ ಒಲಿದಿದೆ. ರಚನೆಯ ರೂಪವನ್ನು ಗಮನಿಸದೆ, ಆತ್ಮೀಯರ ಎದುರು ಕುಳಿತು ನೆನಪುಗಳನ್ನು ತೋಡಿಕೊಳ್ಳುವ ರೀತಿಯಲ್ಲಿ ಬರೆದುದರಿಂದ ಪ್ರಸ್ತುತವಲ್ಲದ ವಿಷಯಗಳು ಸೇರಿಕೊಂಡಿವೆ. ಆಫ್ರಿಕಾ ಮತ್ತು ಭಾರತ ದೇಶಗಳ ನಡುವಿನ ಸಾಂಸ್ಕೃತಿಕ ಭಿನ್ನತೆಯನ್ನು ಅಂಶಿಕವಾಗಿ, ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕದ ಜೀವನ ವಿಧಾನವನ್ನು ದಟ್ಟವಾಗಿ ಕಟ್ಟಿಕೊಡುವ ಸಂದರ್ಭದಲ್ಲಿ ಕಾದಂಬರಿಯ ಮೊದಲ ಭಾಗಗಳು ಯಾತ್ರಾ ವಿವರಣೆಯಂತೆ ಭಾಸವಾಗುತ್ತವೆ. ಲೋಕಾಭಿರಾಮದ ಮಾತುಗಳು ಕಾದಂಬರಿಯ ಒಡಲಿಗೆ ಬೊಜ್ಜು ತರಿಸುತ್ತವೆ. ಏನೇ ಇದ್ದರೂ ಕಾದಂಬರಿಯ ವಸ್ತುವನ್ನು ಗ್ರಾಮ ಜೀವನದಿಂದಲೇ ಆರಿಸಿಕೊಂಡಿರುವ ಅವರು ಹಳ್ಳಿಯ ಬದುಕನ್ನು ಬಹಳ ಚೆನ್ನಾಗಿ ಪುನರ್ ಸೃಷ್ಟಿಸಿದರೇ ಹೊರತು ವೈಭವೀಕರಿಸಲಿಲ್ಲ.
ಈ ಕಾದಂಬರಿಯು ಪಾಪ, ಪಶ್ಚಾತ್ತಾಪ ಮತ್ತು ಪ್ರಾಯಶ್ಚಿತ್ತಗಳ ಕಥನವಾಗಿದೆ. ಇದು ಶಂಕರರಾಯರ ಮಡದಿ ಸೌದಾಮಿನಿಯ ಬದುಕಿನ ಘಟ್ಟಗಳನ್ನು, ಅನುಭವಿಸಿದ ಕಷ್ಟಗಳನ್ನು ಎದುರಿಸುತ್ತಾ, ಅವರ ವ್ಯಕ್ತಿತ್ವ ಮಾಗುತ್ತಾ ಹೋಗುವುದನ್ನು, ಪ್ರಬುದ್ಧ ನೋಟದಲ್ಲಿ ಬದುಕು ವ್ಯಾಖ್ಯಾನಕ್ಕೆ ಒಳಗಾಗುವುದನ್ನು ಧಾರವಾಡದ ಆಡುಮಾತಿನ ಲಯದಲ್ಲಿ ನಿರೂಪಿಸುತ್ತದೆ. ಇದು ಶಂಕರರಾಯ ಅಥವಾ ಸೌದಾಮಿನಿಯ ಮೂಲಕ ಉತ್ತಮಪುರುಷ ನಿರೂಪಣೆಯ ಮೊರೆ ಹೋಗದೆ ಸರ್ವಸಾಕ್ಷಿತ್ವ ಪ್ರಜ್ಞೆಯ ಮೂಲಕ ಹೇಳುವುದರಿಂದ ಕಥನವು ಭಾವುಕವಾಗುವುದಿಲ್ಲ. ಸರಳವಾದ ನೀತಿಪಾಠವಾಗುವುದಿಲ್ಲ. ಕಾದಂಬರಿಯು ವ್ಯಕ್ತಿಚರಿತೆಯಾಗದಿರುವಲ್ಲಿ ಕಥನದ ಹೆಚ್ಚುಗಾರಿಕೆಯಿದೆ. ದುಷ್ಟರೆಂದರೆ ಪೂರ್ತಿಯಾಗಿ ದುಷ್ಟರಲ್ಲದ, ಪ್ರೇಮಿಗಳೆಂದರೆ ತಮ್ಮ ಪ್ರೇಮವನ್ನು ಸರಿಯಾಗಿ ಅಭಿವ್ಯಕ್ತಿಸಲಾರದ, ಸಂಬಂಧಗಳನ್ನು ಸರಿಯಾಗಿ ನಿರ್ವಹಿಸಲಾರದ ಪಾತ್ರಸರಣಿಯು ಇಲ್ಲಿ ಕಂಡುಬರುತ್ತದೆ. ಆಫ್ರಿಕಾದಲ್ಲಿ ಸಿಂಬಾ ಮತ್ತು ಕ್ವೀನ್ ಎಂಬ ಸಿಂಹ ದಂಪತಿಗಳು ಅನುಭವಿಸುವ ಐಹಿಕ ಸುಖ ಶಂಕರರಾಯರ ದಾಂಪತ್ಯದ ಸೋಲಿಗೆ ವಿರುದ್ಧ ಪ್ರತಿಮೆಯಾಗುತ್ತದೆ. ಆ ಹಿನ್ನೆಲೆಯಲ್ಲಿ ಗಂಡು ಹೆಣ್ಣಿನ ಸಂಬಂಧದ ಮಾದರಿಗಳು, ಉಚ್ಛ ನೀಚ ತರತಮಗಳನ್ನು ಮೀರಿ ನಿಲ್ಲುವ ದುಃಖ ಯಾತನೆಗಳು, ತ್ಯಾಗ ಶರಣಾಗತಿಗಳ ಮೂಲಕ ದೊರಕುವ ಶಾಂತಿ, ಮನುಷ್ಯನ ಒಳ್ಳೆಯತನ ಮತ್ತು ಕೆಟ್ಟತನಗಳ ನಿದರ್ಶನಗಳು, ಸೋಲು ಗೆಲುವುಗಳು ಮೊದಲಾದ ಆಶಯಗಳು ಮೈದಾಳುತ್ತವೆ. ಗಂಡು ಹೆಣ್ಣಿನ ಸಂಬಂಧಗಳನ್ನು ಅವುಗಳ ಹಲವು ನೆಲೆಗಳಲ್ಲಿ, ವಿನ್ಯಾಸಗಳಲ್ಲಿ ಶೋಧಿಸುವ ಲೇಖಕಿಯು ‘ದಾಂಪತ್ಯ ಬದುಕು ಮಾತ್ರ ಪೂರ್ಣ. ಆರೋಗ್ಯಕಾರಿ. ಉಳಿದ ರೀತಿಯ ಸಂಬಂಧಗಳು ಅಪೂರ್ಣ; ಅತೃಪ್ತಿಕರ. ಗಂಡುಹೆಣ್ಣಿನ ಸಂಬಂಧಗಳು ಎಲ್ಲಿ ಯಾವಾಗ ಬೇಕಿದ್ದರೂ ಏರ್ಪಡಬಹುದು. ಆದರೆ ಆ ಸಂಬಂಧಗಳು ವೈವಾಹಿಕ ಚೌಕಟ್ಟಿನಲ್ಲಿ ಮಾತ್ರ ಅರ್ಥಪೂರ್ಣವೆನಿಸುತ್ತದೆ. ಇದು ಕೇವಲ ಹೊರಗಿನ ಅವಲೋಕನಕ್ಕೆ ದಕ್ಕುವ ಸತ್ಯವಲ್ಲ. ಪ್ರತಿಯೊಂದು ಗಂಡು ಹೆಣ್ಣು ತಮ್ಮ ಅನುಭವದಲ್ಲಿ ಕಂಡುಕೊಳ್ಳಬೇಕಾದ ನಿಜ ಎಂಬ ತೀರ್ಮಾನಕ್ಕೆ ಬರುತ್ತಾರೆ. ಶಂಕರರಾಯ ಮತ್ತು ಸೌದಾಮಿನಿಯ ಚಾರಿತ್ರ್ಯವನ್ನು ನಿರೂಪಿಸುವಾಗ ಲೇಖಕಿಯು ಯಾರನ್ನೂ ವೈಭವೀಕರಿಸುವುದಿಲ್ಲ. ತೆಗಳುವುದಿಲ್ಲ. ಸೌದಾಮಿನಿಯ ಕಷ್ಟಗಳ ಬಗೆಯನ್ನು ಬಣ್ಣಿಸಿ ಕಣ್ಣೀರು ತರಿಸುವುದಿಲ್ಲ. ಇಬ್ಬರ ಸ್ಥಿತಿಯನ್ನು ವಿವರಿಸಿ ಅವರ ವ್ಯಕ್ತಿತ್ವದಲ್ಲಿ ಸುಪ್ತವಾಗಿದ್ದ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತಾರೆ. ಸೌದಾಮಿನಿಯ ತಾಳ್ಮೆಯನ್ನು ಮಾತ್ರ ಹೊಗಳದೆ ಆಕೆಯ ಸಂಕಲ್ಪಬಲ ಮತ್ತು ಸಾತ್ವಿಕ ಛಲಗಳನ್ನು ಮುಂದಿಡುತ್ತಾರೆ. ತಾತ್ವಿಕವಾಗಿ ಆಕೆಯ ಲೋಕಗ್ರಹಿಕೆಯನ್ನು ಮತ್ತು ಭಾರತೀಯ ನಾರಿಯ ಪರಿಕಲ್ಪನೆಯನ್ನು ಒಪ್ಪಲು ಹಿಂದೇಟು ಹಾಕುವವರೂ ಆಕೆಯ ಸಾಚಾತನವನ್ನು ಅನುಮಾನಿಸಲಾರರು. ಆ ರೀತಿಯ ಪಾತ್ರ ಮಾದರಿಯನ್ನು ಲೇಖಕಿಯು ನೀಡಿದ್ದಾರೆ. ಆದರೆ ಮಾಸ್ತಿ, ಕಾರಂತ, ತ್ರಿವೇಣಿ, ಎಂ.ಕೆ. ಇಂದಿರಾ ಮೊದಲಾದವರ ಕೃತಿಗಳಲ್ಲಿ ಇಂಥ ಮಹಿಳೆಯರು ಕಾಣಿಸಿಕೊಂಡಿರುವುದರಿಂದ ಆ ಪಾತ್ರವನ್ನು ಒಂಟಿ ಮಾದರಿ ಎನ್ನಲು ಸಾಧ್ಯವಿಲ್ಲ.
ಶ್ರೀಮತಿ ಸುನಂದಾ ಬೆಳಗಾಂವಕರರು ಧಾರವಾಡದ ಮಣ್ಣಿನ ಕಂಪು ಮರುಕಳಿಸುವಂತೆ ಕೃತಿಗಳನ್ನು ಬರೆದಿದ್ದಾರೆ. ಉದ್ಯೋಗದ ನಿಮಿತ್ತ ಅವರು ತಮ್ಮ ಬದುಕಿನ ಬಹುಭಾಗವನ್ನು ವಿದೇಶದಲ್ಲಿ ಕಳೆದರೂ ಅವರ ಕೃತಿಗಳಲ್ಲಿ ಅಲ್ಲಿನ ಅನುಭವಗಳು ಕಂಡುಬರುವುದು ವಿರಳ. ಆದರೆ ‘ಝವಾದಿ’ಯಲ್ಲಿ ಆ ಅನುಭವಗಳನ್ನು ತರಲು ಶ್ರಮಿಸಿದ್ದಾರೆ. ಕೃತಿಗಳ ಗುಣಮಟ್ಟದ ಆಧಾರದಲ್ಲಿ ನೋಡಿದರೆ ಕನ್ನಡದ ಕಾದಂಬರಿ ಪರಂಪರೆಯಲ್ಲಿ ಶ್ರೀಮತಿ ಸುನಂದಾ ಬೆಳಗಾಂವಕರರಿಗೂ ಸ್ಥಾನ ದೊರೆಯಬೇಕಿದೆ.
ವಿಮರ್ಶಕ : ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ, ಡಾ. ಯು. ಮಹೇಶ್ವರಿಯವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಸಂಶೋಧನ ಮಹಾ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಬರೆದ ಕತೆ, ಕವನ, ಲೇಖನ ಮತ್ತು ಸುಮಾರು 200ಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳು ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ), ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ), ಕಥನ ಕಾರಣ (ಸಂಶೋಧನ ಕೃತಿ), ನುಡಿದು ಸೂತಕಿಗಳಲ್ಲ (ಸಂಪಾದಿತ) ಎಂಬ ಕೃತಿಗಳನ್ನು ಪ್ರಕಟಿಸಿರುವ ಇವರು ಕಾಸರಗೋಡು ಜಿಲ್ಲೆಯ ಶೇಣಿ ಗ್ರಾಮದ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಕವಾದ ಓದು, ವಿಸ್ತಾರವಾದ ಅಧ್ಯಯನಕ್ಕೆ ಹೆಸರಾಗಿರುವ ಇವರು ಉತ್ಸಾಹಿ ಸಂಘಟಕರಾಗಿದ್ದು ನಾಡಿನ ವಿವಿಧೆಡೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ವೇದಿಕೆಯ ಸಂಚಾಲಕರಲ್ಲಿ ಒಬ್ಬರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.
ಲೇಖಕಿಯ ಬಗ್ಗೆ : ಸುನಂದಾ ಬೆಳಗಾಂವಕರ
ಇಪ್ಪತ್ತನೆ ಶತಮಾನದ ಪೂರ್ವಾರ್ಧದ ಸಮಕಾಲೀನ ಲೇಖಕಿಯರಲ್ಲಿ ಒಂದು ಗಣನೀಯ ಹೆಸರೆಂದರೆ ಸುನಂದಾ ಬೆಳಗಾಂವಕರ. ಇವರು ಬರೆದ ‘ಕಜ್ಜಾಯ (ಪ್ರಬಂಧ)’ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ ಅವರು ‘ಶಾಲ್ಮಲಿ’ ಎನ್ನುವ ಕಾವ್ಯಸಂಕಲನ, ‘ನಾಸು’, ‘ಝವೇರಿ’, ‘ಕಾಯಕ ಕೈಲಾಸ’ ಎನ್ನುವ ಕಾದಂಬರಿಗಳನ್ನು ಬರೆದಿದ್ದಾರೆ. ಅವರ ‘ನಾಸು’ ಕಾದಂಬರಿಗೆ 1990ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಲಭಿಸಿದೆ.