ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2024ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಪ್ರಕಟವಾದ ಕೃತಿಗಳನ್ನು ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿತ್ತು. ಆ ಪೈಕಿ ವಸುದೇವ ಭೂಪಾಲಂ ದತ್ತಿಯಲ್ಲಿ ನಾಲ್ಕು ಪುಸ್ತಕಗಳಿಗೂ ಮತ್ತು ರತ್ನಾಕರವರ್ಣಿ-ಮುದ್ದಣ ಅನಾಮಿಕ ದತ್ತಿಯಲ್ಲಿ ಎರಡು ಪುಸ್ತಕಗಳಿಗೂ ಬಹುಮಾನ ನೀಡಲಾಗುತ್ತದೆ ಎಂದು ಕ.ಸಾ.ಪ. ಆಡಳಿತಾಧಿಕಾರಿ ತಿಳಿಸಿದ್ದಾರೆ.
ರಾಜ್ಯ, ದೇಶ ಮತ್ತು ವಿದೇಶಗಳಿಂದ ಸುಮಾರು 900 ಕೃತಿಗಳು ಬಂದಿದ್ದು, ಡಾ. ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ 19 ಜನ ಪರಿಣಿತ ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಆಯಾ ಪ್ರಕಾರಗಳಲ್ಲಿ ವಿದ್ವತ್ ಹೊಂದಿದ ಸದಸ್ಯರುಗಳ 5 ತಂಡಗಳನ್ನು ರಚಿಸಿ ಪುಸ್ತಕಗಳನ್ನು ಆಯ್ಕೆ ಮಾಡಲಾಯಿತು.
ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಮತ್ತು ಡಾ. ಮದನಕೇಸರಿ ಜೈನ ದತ್ತಿಗೆ ಡಾ. ಹೆಚ್.ಡಿ. ಜಯಪದ್ಮಕುಮಾರ್ ಅವರ ಆರಾಧ್ಯಪುಣ್ಯಸೂತ್ರ. ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿಗೆ ಡಾ. ಪದ್ಮರಾಜ ದಂಡಾವತಿ ಇವರ ಜೈನ ಧರ್ಮ, ಡಾ. ಹೆಚ್.ಎಸ್. ಮದನಕೇಸರಿ ಮತ್ತು ಎಂ.ಪಿ. ಗುಣಮಾಲ ದತ್ತಿಗೆ ರವಿ ಸೋಮಣ್ಣ ಅಂಬೋಜಿ ಇವರ ಮಾರ್ಗದಾಳು, ಕೆ.ಎಸ್. ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿಗೆ ಶಾರದಾ ವಿ. ಮೂರ್ತಿ ಇವರ ಸಾಧನೆ. ಗೌರುಭಟ್ ದತ್ತಿ ಪ್ರಶಸ್ತಿಗೆ ಸುನೀತಾ ರಾಜು ಇವರ ‘ನೇಪಥ್ಯೆಯರು’, ಡಾ. ವೀಣಾ ಶಾಂತೇಶ್ವರ ದತ್ತಿಗೆ ರೇಣುಕಾ ಕೋಡಗುಂಟಿ ಇವರ ‘ಚಿಗುರೊಡೆದ ಬೇರು’ ಸೇರಿದಂತೆ 54 ವಿಧದ ದತ್ತಿ ಪ್ರಶಸ್ತಿಗೆ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಪಿ. ಶಾಂತಿಲಾಲ್ ದತ್ತಿ ಪ್ರಶಸ್ತಿ ಹಾಗೂ ಅಸುಂಡಿ ಹುದ್ದಾರ್ ಕೃಷ್ಣರಾವ್ ದತ್ತಿ ಪ್ರಶಸ್ತಿ ಆಯ್ಕೆಗೆ ಯಾವುದೇ ಪುಸ್ತಕಗಳು ಬಂದಿರುವುದಿಲ್ಲ. ಆದ್ದರಿಂದ ಎರಡು ಪ್ರಶಸ್ತಿಗಳನ್ನು ಆಯ್ಕೆಗೆ ಪರಿಗಣಿಸಿಲ್ಲ.
