ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠಕ್ಕೆ ಉಜಿರೆಯ ಡಾ.ಜಯಮಾಲಾ ಇವರು ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರು ರಚಿಸಿದ ಮಹಾಪುರಾಣದ ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮಾಡಿದ ಕನ್ನಡ ಅನುವಾದ ಕೃತಿಯನ್ನು ದಿನಾಂಕ 09-10-2023ರಂದು ಶಾಸ್ತ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ ಕೆ ಚಿನ್ನಪ್ಪ ಗೌಡ “ಗ್ರಂಥಾಲಯಗಳಿಗೆ ಪುಸ್ತಕದಾನ ಮಾಡುವುದು ದಾನಗಳಲ್ಲಿ ಶ್ರೇಷ್ಠವಾದದ್ದು. ಈ ದಾನವು ಅರಿವನ್ನು ವಿಸ್ತರಿಸುವ ಹಾಗೂ ಭವಿಷ್ಯದ ತಲೆಮಾರಿಗೆ ಜ್ಞಾನವನ್ನು ತಲುಪಿಸುವ ಪುಣ್ಯ ಕಾರ್ಯ. ಡಾ.ಜಯಮಾಲಾ ಅವರ ಈ ಕೊಡುಗೆ ಉಳಿದವರಿಗೂ ಪ್ರೇರಣೆಯಾಗಲಿ. ಗ್ರಂಥಾಲಯಗಳು ಸಮಾಜದ ದಾನಿಗಳ ಕೊಡುಗೆಯಿಂದ ಉತ್ತಮ ಕೃತಿಗಳ ತಾಣವಾಗಲಿ” ಎಂದು ಹಾರೈಸಿದರು.
ಮಹಾಕವಿ ರತ್ನಾಕರವರ್ಣಿ ಪೀಠದ ಸಂಯೋಜಕ ಡಾ. ಸೋಮಣ್ಣ ಮಾತನಾಡಿ “ಪೀಠದಲ್ಲಿ ಮೌಲಿಕ ಕೃತಿಗಳ ಗ್ರಂಥಾಲಯವನ್ನು ವಿಸ್ತರಿಸುವ ಯೋಜನೆಯಿದೆ. ಅದಕ್ಕೆ ದಾನಿಗಳ ಸಹಕಾರ ಬೇಕು. ಡಾ.ಜಯಮಾಲಾ ಉಜಿರೆ ಅವರು ಅಪೂರ್ವ ಕೃತಿಯನ್ನು ನೀಡಿದ್ದಾರೆ” ಎಂದು ಹೇಳಿದರು.
ಸಮಾರಂಭದಲ್ಲಿ ಡಾ. ಜಯಮಾಲಾ ಉಜಿರೆ, ಶ್ರೇಯಸ್ ಉಜಿರೆ, ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ, ಪೀಠಗಳ ಸಂಶೋಧನ ಸಹಾಯಕರಾದ ಪ್ರಸಾದ್ ಎಸ್, ಆನಂದ ಕಿದೂರು, ಕನ್ನಡ ವಿಭಾಗದ ವಿದ್ಯಾ ಹಾಗೂ ಸುರೇಖ ಉಪಸ್ಥಿತರಿದ್ದರು.