21 ಫೆಬ್ರವರಿ 2023, ಮಂಗಳೂರು: ಖ್ಯಾತ ನಾಟಕಕಾರ ನಿರ್ದೇಶಕ ಕದ್ರಿ ನವನೀತ ಶೆಟ್ಟಿ ವಿರಚಿತ ‘ಬ್ರಹ್ಮ ಕಪಾಲ’ ತುಳು ಪೌರಾಣಿಕ ನಾಟಕವು ಈಗಾಗಲೇ ಹತ್ತಾರು ಪ್ರದರ್ಶನ ಕಂಡಿದೆ. ಪೂರ್ವ ಮುದ್ರಿತ ಧ್ವನಿ ಸಂಗೀತ ಬಳಸಿಕೊಂಡು ತಾರಾನಾಥ್ ಉರ್ವ ನಿರ್ದೇಶನದಲ್ಲಿ ಫೆಬ್ರವರಿ 17ರಂದು ಪ್ರದರ್ಶನವನ್ನು ಕಂಡಿತು ಮಂಗಳೂರಿನ ಪ್ರತಿಷ್ಠಿತ ಮಹಿಳಾ ನಾಟಕ ತಂಡ. ಕಾವುಬೈಲು ಪಂಚಲಿಂಗೇಶ್ವರ ಮಹಿಳಾ ಭಕ್ತ ವೃಂದ.
ಆರತಿ ರಾಮಚಂದ್ರ ಆಳ್ವರ ಸಂಯೋಜನೆಯಲ್ಲಿ ಎರಡು ತಿಂಗಳ ರಂಗಾಭ್ಯಾಸದಿಂದ ಪರಿಪುಷ್ಟವಾದ ಈ ತಂಡ ಸತ್ಯೋದ ಸಿರಿ, ಭಗವತಿ, ಯಕ್ಷಮಣಿ, ಅಹಲ್ಯ, ನಳದಮಯಂತಿ ಮೊದಲಾದ ಪೌರಾಣಿಕ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಅನುಭವ ಪಡೆದಿದೆ. ಬಜಾಜ್ ಕಾವುಬೈಲ್ ಪರಿಸರದ ದೇವಸ್ಥಾನದ ಧಾರ್ಮಿಕ, ಸಾಂಸ್ಕೃತಿಕ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮಹಿಳೆಯರು ರಂಗಾಸಕ್ತಿಯಿಂದ ಕಟ್ಟಿ ಬೆಳೆಸಿದ ಮಹಿಳಾ ಕಲಾವಿದರ ಕೂಟ ಇದು. ಪೌರಾಣಿಕ ನಾಟಕ ಪ್ರದರ್ಶನಕ್ಕೆ ಹೋಗಿಕೊಳ್ಳುವ ರಂಗ ನಡೆಯನ್ನು ಅಭ್ಯಾಸಿಸಿ ಪ್ರಸ್ತುತಪಡಿಸಿ ಜನಾನುರಾಗ ಪಡೆದು ಅಗ್ರಪಂಗ್ತಿಯ ಮಹಿಳಾ ನಾಟಕ ತಂಡವಾಗಿ ರೂಪುಗೊಂಡಿದೆ. ಪಂಚಲಿಂಗೇಶ್ವರನ ಸಾನಿಧ್ಯದಲ್ಲಿ ಶಿವಮಹಿಮೆಯನ್ನು ಸಾರುವ ಶಾರದಾ ವಿವಾಹೋತ್ಸವದ ಸಂಭ್ರಮದ ಕಥೆಯನ್ನು ಒಳಗೊಂಡ ‘ಬ್ರಹ್ಮ ಕಪಾಲ’ ಯಶಸ್ವಿಯಾಗಿ ಈ ತಂಡದಿಂದ ನಡೆಯಿತು
ಇತ್ತೀಚಿಗೆ ಪ್ರದರ್ಶನ ಕಂಡ ತುಳು ಪೌರಾಣಿಕ ನಾಟಕ “ಬ್ರಹ್ಮ ಕಪಾಲ”ದ ಬಗ್ಗೆ
ಕಥೆ ಮತ್ತು ರಚನೆ: ಲ| ಕದ್ರಿ ನವನೀತ ಶೆಟ್ಟಿ ನಿರ್ದೇಶನ: ತಾರಾನಾಥ್ ಉರ್ವ ಸಂಗೀತ: ಇಂಚರ ಕಾರಂತ್
ಮಹಾಶಿವರಾತ್ರಿಯ ಸಂದರ್ಭದಲ್ಲಿ ಭೈರವ ಸ್ವರೂಪಿ ಮಹಾದೇವ ಶಿವನ ಪುಣ್ಯ ಕಥಾಶ್ರವಣ, ಮನನ ಪುಣ್ಯದಾಯಕ. ಬ್ರಹ್ಮನ ಐದನೆಯ ಹೆಚ್ಚುವರಿ ಶಿರವೊಂದು ಪಂಚಾಸ್ಯ ಪರಮೇಶನ ಕೈಯನ್ನು ಕಚ್ಚಿಹಿಡಿದು, ರಕ್ತ ಹೀರುತ್ತಾ ಭಿಕಾರಿಯಂತೆ ಶಿವನನ್ನು ಹಸಿವು ಬಳಲಿಕೆಯಿಂದ ಲೋಕ ಲೋಕ ಸುತ್ತುವಂತೆ ಮಾಡುತ್ತದೆ. ಆ ಶಿರವೇ “ಬ್ರಹ್ಮ ಕಪಾಲ.”
ಸೃಷ್ಟಿಕರ್ತ ಬ್ರಹ್ಮದೇವ ಯಾಗವೊಂದನ್ನು ಮಾಡಿ ಪಡೆದ ದಿವ್ಯ ಸ್ತ್ರೀರತ್ನಕ್ಕೆ `ಶಾರದಾ’ ಎನ್ನುವ ಹೆಸರಿರಿಸಿ ಬೆಳೆಸುತ್ತಾನೆ. ವಿದ್ಯಾಧೀಶ್ವರೀ ಪಟ್ಟ ಕಟ್ಟುವ ಶುಭದಿನದಂದು ಎಲ್ಲಾ ಲೋಕಗಳ ಪ್ರಮುಖರು ಉಪಸ್ಥಿತರಿರಬೇಕೆಂದು ಬಯಸುತ್ತಾನೆ. ಈಶ್ವರ ಹಾಗೂ ಮನ್ಮಥನಿಗೆ ಉದ್ದೇಶಪೂರ್ವಕವಾಗಿ ಹೇಳಿಕೆ ನೀಡುವುದಿಲ್ಲ.
ನಾರದರಿಂದ ಈ ವಿಚಾರ ತಿಳಿದ ಮನ್ಮಥ ಸಿಟ್ಟುಗೊಂಡು ಶಾರದಾ ಪಟ್ಟಾಭಿಷೇಕದ ಸಂದರ್ಭದಲ್ಲಿ ತಂದೆಮಗಳ ಮೇಲೆ ಪುಷ್ಪ ಬಾಣಗಳನ್ನು ಎಸೆಯುತ್ತಾನೆ. ಬ್ರಹ್ಮ ಶಾರದೆಯರು ತಂದೆ ಮಗಳ ಸಂಬಂಧವನ್ನು ಮರೆತು ಸತಿಪತಿಯರಂತೆ ಕಾಮಾಸಕ್ತರಾಗುತ್ತಾರೆ.
ಕಿರಾತ ರೂಪದಲ್ಲಿ ಬಂದ ಶಿವಬ್ರಹ್ಮನನ್ನು ಆಕ್ಷೇಪಿಸುತ್ತಾನೆ. ಮಾತಿಗೆ ಮಾತು ಬೆಳೆದಾಗ, ಶಿವನೇ ಬಂದು ನುಡಿದರೂ ತನ್ನ ನಿಲುವಲ್ಲಿ ಬದಲಾವಣೆ ಇಲ್ಲ ಎಂದು ಬ್ರಹ ನುಡಿಯುತ್ತಾನೆ. ತನ್ನ ಪಂಚ ಮುಖಗಳಿಂದ ಶಿವನು ಎಚ್ಚರಿಸಿದಾಗ ಚತುರ್ಮುಖ ಬ್ರಹ್ಮನು ತಾನೂ ಪಂಚಮುಖನಾಗಿ ನಿನಗಿಂತ ಪ್ರಬಲನಿದ್ದೇನೆ ಎಂದು ತಿಳಿಸಲುದ್ಯುಕ್ತನಾಗುತ್ತಾನೆ. ಐದನೇ ತಲೆಯನ್ನು ಈಶ ಕಿತ್ತು ತೆಗೆದಾಗ ಆ ಶಿರವು ಶಿವನ ಕೈಯನ್ನು ಕಚ್ಚುತ್ತದೆ.
ಬ್ರಹ್ಮ ಕಪಾಲವನ್ನು ಹಿಡಿದ ಶಿವ ಲೋಕ ಲೋಕವನ್ನು ತಿರುಗುತ್ತಾನೆ. ಭಿಕ್ಷಾಟನೆ ಮಾಡುತ್ತಾನೆ. ರಕ್ತ ಪೀಪಾಸು ಬ್ರಹ್ಮಕಪಾಲದ ಹಸಿವನ್ನು ನೀಗಿಸಲು ಭಿಕ್ಷುಕನಾಗುತ್ತಾನೆ. ಅಹಂಕಾರಿ ಮಹೋಗ್ರ ಮುನಿ ಹಾಗೂ ಪತಿವೃತೆ ತಾನೆಂಬ ಹಮ್ಮಿನಲ್ಲಿದ್ದ ಕುಮದೆಯರಿಗೆ ಶಿವದರ್ಶನ ಮಾಡುತ್ತಾನೆ. ಮಹೋಗ್ರ ಮುನಿಯಿಂದ ಸೃಷ್ಟಿಸಲ್ಪಟ್ಟ ಗಜಾಸುರ, ವ್ಯಾಷ್ರಾಸುರರನ್ನು ಕೊಂದು ಗಜ ಚರ್ಮಾಂಬರಧರನಾಗುತ್ತಾನೆ. ನಾಗಾಭರಣ ಧರಿಸಿ ತ್ರಿಶೂಲ ಪಾಣಿಯಾಗುತ್ತಾನೆ.
ಪತ್ನಿ ಪಾರ್ವತಿಯು ಅನ್ನಪೂರ್ಣೇಶ್ವರಿಯಾಗಿ ಶಿವನ ಆಯಾಸವನ್ನು ಪರಿಹರಿಸುತ್ತಾಳೆ. ಅಹಂಕಾರಿ ವಿಷ್ಣು ಭಟ ವಿಶ್ವತ್ಸೇನನ ರುಂಡ ಕತ್ತರಿಸಿ ಭೈರವ ರೂಪದಲ್ಲಿ ವೈಕುಂಠ ಪ್ರವೇಶ ಮಾಡಿದ ಶಿವನ ಕೈಯಲ್ಲಿದ್ದ ಕಪಾಲಕ್ಕೆ ವಿಷ್ಣುವೇ ಮೋಕ್ಷವನ್ನು ಕರುಣಿಸುತ್ತಾನೆ.
ಯಕ್ಷಿಣಿಯ ಗರ್ವಾಪ್ರಹಾರ, ಯಕ್ಷ ಕಿನ್ನರರ ಲಘುಹಾಸ್ಯ, ನಾರದರ ಕಲಹಪ್ರಿಯತೆಯೊಂದಿಗೆ ನವರಸಭರಿತ ಶಿವಪುರಾಣದ ಪುಣ್ಯ ಕತೆ `ಬ್ರಹ್ಮ ಕಪಾಲ’ ನಾಟಕ ರೂಪದಲ್ಲಿ ಯಶಸ್ಸನ್ನು ಕಂಡ ಕಲಾಕೃತಿ.
ಬ್ರಹ್ಮ ಕಪಾಲ – ನಾಟಕದ ಬಗ್ಗೆ ಅಭಿಪ್ರಾಯ
– ಡಾ. ಪ್ರಿಯಾ ಹರೀಶ್, ಸುದ್ದಿ ವಾಚಕರು, ಮಂಗಳೂರು
ಕಾವು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ಶಿವರಾತ್ರಿ ಪ್ರಯುಕ್ತ ಮಹಿಳಾ ತಂಡದವರ ನಾಟಕ ನಡೆಯುತ್ತೆ. ಪ್ರತಿ ವರ್ಷ ನಾಟಕ ನಾನು ನೋಡುತ್ತಾ ಬಂದಿರುವೆ. ಯಾವತ್ತೂ ಅದ್ಬುತವಾಗಿ ಮೂಡಿ ಬರುತೆ. ಆದ್ರೆ ಈ ಬಾರಿಯ ಬ್ರಹ್ಮಕಪಾಲ ನಾಟಕ ವಂತೂ ಬಣ್ಣಿಸಲು ಪದಗಳೇ ಸಿಗದಷ್ಟು ಸೊಗಸಾಗಿ ಮೂಡಿಬಂದ ಕಾರಣ ಮನದಿಂದ ಈ ನಾಟಕ ತಂಡ ದವರ ಬಗ್ಗೆ ಬರೆಯೆಲೆ ಬೇಕೆಂಬ ಇಚ್ಛೆಯಾಗಿದೆ. ಪ್ರತಿಯೊಂದು ಪಾತ್ರಧಾರಿಗಳು ಮಹಿಳೆಯರು. ತಾವು ಯಾವುದಕ್ಕೂ ಸೈ ಎನ್ನುದಕ್ಕೆ ಇವರೆಲ್ಲ ಸಾಕ್ಷಿಯಾಗಿದ್ದಾರೆ. ಕದ್ರಿ ನವನೀತ್ ಶೆಟ್ಟಿ ಯವರ ವಿರಚಿತವಾದ ಈ ಕತೆಯಿಂದ ಪುರಾಣದ ಅದೆಷ್ಟೋ ವಿಚಾರ ತಿಳಿಯೀತು. ಸಾಕ್ಷಾತ್ ದೇವಲೋಕದಲ್ಲಿ ನಾವಿದೆವ್ವೋ ಎಂಬ ಅನುಭವವಾಯೀತು. ಬ್ರಹ್ಮ, ಶಾರದೆಯರ ವಾತ್ಸಲ್ಯದ ಪ್ರೀತಿ, ಪ್ರೇಮಕ್ಕೆ ಬದಲಾವಣೆಯಾಗುವ ದೃಶ್ಯ,ನಾರದರ ಸಂದೇಶ, ಮನ್ಮಥನ ಕೋಪ, ಯಕ್ಷ ಕಿನ್ನರರ ಹಾಸ್ಯದ ಮಾತುಕತೆ, ಕಿರಾತಕನ ಕೋಪ,ಮುನಿ ಮಹೋಗ್ರ ಮತ್ತು ಮುನಿಪತ್ನಿ ಕುಮುದೆಯ ಭಕ್ತಿ ನಿಷ್ಠೆಯ ಅಭಿನಯ, ಯಕ್ಷಣಿಯ ವ್ಯಂಗ್ಯ, ಶಿವ ಭಿಕ್ಷಾ ಪಾತ್ರೆಯೊಂದಿಗೆ ಅನ್ನಪೂರ್ಣೇಶ್ವರಿ (ಪಾರ್ವತಿ)ಯೊಂದಿಗೆ ಬರುವ ಸಂಗೀತದೊಂದಿಗೆ ಬರುವ ಅಭಿನಯ, ಶಿವ ಬ್ರಹ್ಮ ಕಪಾಲ ವನ್ನು ಹಿಡಿದು ಅನುಭವಿಸುವ ಯಾತನೆ,ಕೋಪ, ನೃತ್ಯ, ವಿಷ್ಣುದೇವರ ಚಾಣಕ್ಯದ ಅಭಿನಯ, ಸಂದರ್ಭಕ್ಕೆ ಬೇಕಾದ ನೃತ್ಯ, ಹಾಡು, ಕಾರಂತರ ಸಂಗೀತ ನಿರ್ದೇಶನ ಇವೆಲ್ಲ ಸ್ವರ್ಗ ಲೋಕದ ಪೂರ್ಣ ಚಿತ್ರಣ ಕಣ್ಣ ಮುಂದೆ ನಡೆಯುತ್ತಿದೆ ಎಂಬಂತೆ ಭಾಸಾವಾಯಿತು. ಒಟ್ಟಿನಲ್ಲಿ ಹೇಳಬೇಕೆಂದರೆ ನಾಟಕ ನೋಡಲು ಸೇರಿದ, ಜನಸ್ತೋಮ ಸುರಿಸಿದ ಚಪ್ಪಾಳೆ ಯ ಸುರಿಮಳೆ ನಾಟಕ ಹೇಗಿತ್ತು ಎಂಬುದನ್ನು ಬಿಂಬಿಸಿತು.