ಮಡಿಕೇರಿ : ಬಾಳೆಲೆಯ ವಿಜಯಲಕ್ಷ್ಮೀ ಸಂಯುಕ್ತ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿನಿಧಿ ಮುಕ್ತ ಕಥಾ ಸ್ಪರ್ಧೆಯ ಬಹುಮಾನ ವಿತರಣಾ ಸಭೆಯು ದಿನಾಂಕ 19-03-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಥಾ ರಚನಾ ಕೌಶಲ್ಯದ ಕುರಿತು ಮಾತನಾಡಿದ ಪತ್ರಕರ್ತೆ ಶ್ರೀಮತಿ ಉಷಾ ಪ್ರೀತಮ್ “ಕಥೆಯ ರಚನೆಯ ಪ್ರಾರಂಭ ನಮ್ಮ ಮನೆಯಲ್ಲಿ ತಾಯಿ ಅಥವಾ ಅಜ್ಜಿ ಅವರು ಹೇಳುವ ಕಥೆಗಳಿಂದ ಪ್ರಾರಂಭವಾಗುತ್ತದೆ. ಅವರು ಹೇಳಿದ ಕಥೆಗಳನ್ನು ನೆನಪಿಸಿಕೊಂಡು ಅವುಗಳನ್ನು ಬರಹ ರೂಪಕ್ಕೆ ಇಳಿಸಿದರೆ, ಅವು ಉತ್ತಮವಾದ ಕತೆಗಳಾಗುತ್ತದೆ. ಕಥೆ ಸರಳ ಭಾಷೆಯಲ್ಲಿ ಇರಬೇಕು ಆಗ ಅದು ಎಲ್ಲರ ಮನಸ್ಸನ್ನು ತಲುಪುತ್ತದೆ” ಎಂದರು. ಕನ್ನಡದ ಹಲವಾರು ಕಥೆಗಾರರ ಉದಾಹರಣೆಗಳನ್ನು ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ “ಶಕ್ತಿ ಪತ್ರಿಕೆ ಸಂಸ್ಥಾಪಕರಾದ ದಿ. ಬಿ.ಎಸ್. ಗೋಪಾಲಕೃಷ್ಣರವರ ಜ್ಞಾಪಕಾರ್ಥ ಅವರ ಪುತ್ರ ‘ಶಕ್ತಿ’ ಪತ್ರಿಕೆಯ ಸಲಹಾ ಸಂಪಾದಕ ಹಾಗೂ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಇವರು ದತ್ತಿ ಸ್ಥಾಪಿಸಿದ್ದು, ಕೊಡಗಿನ ಲೇಖಕರಿಗೆ ಕಥೆ ಬರೆಯುವ ಸ್ಪರ್ಧೆ ಏರ್ಪಡಿಸಿ ಜಯಗಳಿಸಿದವರನ್ನು ಗೌರವಿಸುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಕೆಲಸ ಮಾಡುತ್ತಿದ್ದಾರೆ. 1954ರಲ್ಲಿ ‘ನಂದಾದೀಪ’ ಎನ್ನುವ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸುವ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಬಿ.ಎಸ್. ಗೋಪಾಲಕೃಷ್ಣರು ಕೊಡಗಿನ ಪತ್ರಿಕಾ ರಂಗದ ಭೀಷ್ಮ ಎಂದು ಗುರುತಿಸಿಕೊಂಡವರು. ಜಿಲ್ಲೆಯ ಪ್ರಪ್ರಥಮ ದೈನಿಕ ಪತ್ರಿಕೆ ‘ಶಕ್ತಿ’ ಕೊಡಗಿನ ಪ್ರಪ್ರಥಮ ಸಂಜೆ ಪತ್ರಿಕೆ ‘ಸಂಧ್ಯಾ’, ‘ಚೇತನ’ ಮತ್ತು ‘ಶಕ್ತಿ’ ಎನ್ನುವ ವಾರಪತ್ರಿಕೆಗಳನ್ನು ಪ್ರಾರಂಭಿಸಿರುತ್ತಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಹಲವಾರು ಸಾಹಿತ್ಯಿಕ ಕೃತಿಗಳನ್ನು ನೀಡಿರುವ ಗೋಪಾಲಕೃಷ್ಣರವರ ಸಾಹಿತ್ಯ ಸೇವೆ ಮಹತ್ತರವಾದದ್ದು. ಕೊಡಗು ಜಿಲ್ಲೆಯಲ್ಲಿ ಈಗಾಗಲೇ 32 ದತ್ತಿಗಳನ್ನು ಸ್ಥಾಪಿಸಿದ್ದು, ಈ ವರ್ಷ ನೂತನವಾಗಿ 12 ದತ್ತಿ ಸ್ಥಾಪಿಸಲಾಗಿದೆ” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡುತ್ತಾ “ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವಿದ್ದು, ಹಿಂದೆ ಗೋಣಿಕೊಪ್ಪಲಿನಲ್ಲಿ ನಡೆದ ತಾಲೂಕು ಸಮ್ಮೇಳನದ ಆರ್ಥಿಕ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸಿದನ್ನು ನೆನಪಿಸಿಕೊಂಡರು. ಮುಂದಿನ ದಿನಗಳಲ್ಲಿ ಬಾಳೆಲೆಯಲ್ಲಿ ಸಮ್ಮೇಳನಗಳನ್ನು ನಡೆಸುವುದಾದರೆ ಸಂಪೂರ್ಣ ಸಹಕಾರ ನೀಡುತ್ತೇವೆ” ಎಂದು ತಿಳಿಸಿದರು.
ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿಯ ಮುಕ್ತ ಕಥಾ ಸ್ಪರ್ದೆಯಲ್ಲಿ ಜಿಲ್ಲೆಯ 23 ಕತೆಗಾರರು ಭಾಗವಹಿಸಿದ್ದು ತೀರ್ಪುಗಾರರು ಮೌಲ್ಯಮಾಪನ ಮಾಡಿ ನೀಡಿದ ಪಲಿತಾಂಶದಂತೆ ಪ್ರಥಮ ಸ್ಥಾನವನ್ನು ಪಡೆದ ಕುಶಾಲನಗರದ ಶ್ರೀಮತಿ ಕುಕ್ಕನೂರು ರೇಷ್ಮಾ ಮನೋಜ್ ಮತ್ತು ದ್ವಿತೀಯ ಸ್ಥಾನವನ್ನು ಪಡೆದ ನಾಪೋಕ್ಲಿನ ಮಧುಸೂಧನ್ ಬಿಳಿಗುಲಿರವರನ್ನು ಗೌರವಿಸಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಯಿತು ಹಾಗೂ ತೃತಿಯ ಸ್ಥಾನವನ್ನು ಮೂರ್ನಾಡಿನ ಕಿಗ್ಗಾಲು ಗಿರೀಶ್ ರವರು ಪಡೆದುಕೊಂಡಿರುತ್ತಾರೆ. ತೀರ್ಪುಗಾರರಾಗಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಉಪನ್ಯಾಸಕರಾದ ಡಾ. ಮುಲ್ಲೆಂಗಡ ರೇವತಿ ಪೂವಯ್ಯ ಮತ್ತು ಬಾಳಲೆ ವಿಜಯಲಕ್ಷ್ಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಚಂದ್ರಶೇಖರ್ ಕಾರ್ಯನಿರ್ವಹಿಸಿದರು.
ಮುಖ್ಯ ಅತಿಥಿಗಳಾಗಿ ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮತ್ತು ಬಾಳೆಲೆ ಸೆಂಟರ್ ಎಜ್ಯುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡುತ್ತಾ “ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಹಳ್ಳಿಯ ಮಟ್ಟದಲ್ಲಿ ಹಳ್ಳಿಯ ಶಾಲೆಗಳಲ್ಲಿ ಮಾಡುತ್ತಿರುವುದು ಒಂದು ಉತ್ತಮ ವಿಚಾರ” ಎಂದರು. ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಳೇರ ದಯಾ ಚಂಗಪ್ಪ ಮಾತನಾಡುತ್ತಾ “ಬಾಳೆಲೆ ಹೋಬಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಸಮಿತಿ ರಚನೆಯ ಬಳಿಕ ಇದು ಮೊದಲ ಕಾರ್ಯಕ್ರಮವಾಗಿದ್ದು, ಇದೇ ರೀತಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಿ ಮಾದರಿ ಹೋಬಳಿ ಸಮಿತಿಯನ್ನಾಗಿಸಬೇಕು” ಎಂದು ಸಲಹೆಯಿತ್ತರು.
ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀಮತಿ ಮುಕ್ಕಾಟಿರ ಜಾನಕಿ ಕಾವೇರಪ್ಪ ಸ್ವಾಗತಿಸಿ, ಬಾಳೆಲೆಯ ವಿಜಯಲಕ್ಷ್ಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಚಂದ್ರಶೇಖರ್ ಪ್ರಾರ್ಥಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಳಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಡಿಞಾರಂಡ ಪ್ರಭು ಕುಮಾರ್ ಮಾತನಾಡುತ್ತ ಬಾಳಲೆ ಗ್ರಾಮದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನೂ ಶ್ಲಾಘಿಸುತ್ತಾ ಮುಂದೆ ಇದೇ ರೀತಿ ಸಹಕಾರ ನೀಡಬೇಕೆಂದು ಕೋರಿದರು.
ವೇದಿಕೆಯಲ್ಲಿ ಬಾಳೆಲೆ ಎಜುಕೇಶನ್ ಸೊಸೈಟಿಯ ನಿರ್ದೇಶಕ ಕಿರದಂಡ ದೇವಯ್ಯ, ಬಾಳೆಲೆಯ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯನ್.ಕೆ. ಪ್ರಭು, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಉಳುವಂಗಡ ಕಾವೇರಿ ಉದಯ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಿ.ವಿ. ರಾಮಕೃಷ್ಣ ಮತ್ತು ಶ್ರೀಮತಿ ಶೀಲಾ ಬೋಪಣ್ಣ, ಬಾಳೆಲೆ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಶ್ರೀಮತಿ ಸಿ.ವಿ. ಚಂದ್ರಕಲಾ ಉಪಸ್ಥಿತರಿದ್ದರು. ನಿರೂಪಣೆಯನ್ನು ಅಧ್ಯಾಪಕರಾದ ಎಂ.ಪಿ. ರಾಘವೇಂದ್ರ, ಬಹುಮಾನ ವಿವರಣೆಯ ವಿವರವನ್ನು ಉಪನ್ಯಾಸಕರಾದ ಡಿ.ಎನ್. ಸುಬ್ಬಯ್ಯ ನಡೆಸಿಕೊಟ್ಟರು. ಬಾಲಕಿ ಸೃಷ್ಟಿ ವಿನೋದ್, ಶ್ರೀಮತಿ ಪೊಡಮಾಡ ಭವಾನಿ, ಶ್ರೀಮತಿ ವತ್ಸಲಾ ನಾರಾಯಣ, ಶ್ರೀಮತಿ ಸಿ.ವಿ. ಚಂದ್ರಕಲಾ ಸಭೆಯಲ್ಲಿ ಹಾಡುಗಳನ್ನು ಹಾಡಿದರು.