ಬೆಂಗಳೂರಿನ ‘ಸಾಧನಾ ಡ್ಯಾನ್ಸ್ ಸೆಂಟರ್’ ನೃತ್ಯ ಶಾಲೆಯ ಹೆಸರಾಂತ ನೃತ್ಯಗುರು ಭಾವನಾ ವೆಂಕಟೇಶ್ವರ ಬದ್ಧತೆ ಮತ್ತು ಪ್ರಯೋಗಶೀಲತೆಗಳಿಗೆ ಹೆಸರಾದವರು. ಸುಮಾರು ಎರಡು ದಶಕಗಳಿಗೂ ಹೆಚ್ಚಿನ ನೃತ್ಯಾನುಭಾವವುಳ್ಳ ಈಕೆ ನೃತ್ಯಾಕಾಂಕ್ಷಿಗಳಿಗೆ ಉತ್ತಮ ವಿದ್ಯೆಯನ್ನು ಧಾರೆಯೆರೆಯುತ್ತ ಭರವಸೆಯ ಕಲಾವಿದೆಯರನ್ನು ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಪ್ರಸ್ತುತ ಅವರ ಬಳಿ ಬಹು ಆಸಕ್ತಿಯಿಂದ ಭರತನಾಟ್ಯವನ್ನು ಕಲಿಯುತ್ತಿರುವ ಲಿಖಿತಾ ನಾರಾಯಣ ಶ್ರೀಮತಿ ನಾಗವೇಣಿ ಮತ್ತು ಶ್ರೀ ನಾರಾಯಣ ರೆಡ್ಡಿಯವರ ಪುತ್ರಿಯಾಗಿದ್ದು, ಕಳೆದ ಒಂಭತ್ತು ವರ್ಷಗಳಿಂದ ಸತತವಾಗಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ. ನೃತ್ಯದ ಹಲವು ಆಯಾಮಗಳನ್ನು ಕಲಿತಿರುವ ಲಿಖಿತಾ, ದಿನಾಂಕ 05-11-2023ರಂದು ಸಂಜೆ 5 ಗಂಟೆಗೆ ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಳ್ಳಲಿದ್ದಾಳೆ. ಅವಳ ಸೊಬಗಿನ ನೃತ್ಯ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಎಲ್ಲಾ ಕಲಾರಸಿಕರಿಗೂ ಆದರದ ಸ್ವಾಗತ.
ನೃತ್ಯ ಲಿಖಿತಳ ಬಾಲ್ಯದ ಒಲವು. ಅವಳ ಪ್ರತಿಭೆಯನ್ನು ಗಮನಿಸಿದ ಹೆತ್ತವರು ಅವಳ ಏಳನೆಯ ವಯಸ್ಸಿಗೆ ‘ಸಾಧನಾ ಡ್ಯಾನ್ಸ್ ಸೆಂಟರ್’ನ ಗುರು ಭಾವನಾ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಬಹು ಆಸಕ್ತಿಯಿಂದ-ಪರಿಶ್ರಮದಿಂದ ನೃತ್ಯ ಕಲಿಯತೊಡಗಿದ್ದು, ನೃತ್ಯ ಪರೀಕ್ಷೆಗಳ ಎಲ್ಲಾ ಹಂತಗಳಲ್ಲೂ ಅತ್ಯುಚ್ಚ ಅಂಕವನ್ನು ಗಳಿಸಿದ ಹೆಮ್ಮೆ ಅವಳದು. ಜೊತೆಗೆ ಕಳೆದ 5 ವರ್ಷಗಳಿಂದ ಮುಕ್ತ ಮಧುಸೂದನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ಪರೀಕ್ಷೆಯಲ್ಲಿ ಜಯಶಾಲಿಯಾಗಿದ್ದಾಳೆ.
ಹತ್ತನೆಯ ತರಗತಿಯಲ್ಲಿ ಓದಿದ ಸಿನ್ಸಿಸಿಯರ್ ವಿದ್ಯಾ ಸಂಸ್ಥೆಗೆ ಪ್ರಥಮ ಸ್ಥಾನ ಪಡೆದ ಲಿಖಿತಳಿಗೆ, ಶಾಲೆಯಿಂದ “ಮೆರಿಟ್ ಸ್ಟೂಡೆಂಟ್ ಅವಾರ್ಡ್” ಪಡೆದ ಶ್ರೇಯಸ್ಸು. ಪ್ರಸಕ್ತ ಆರ್.ಎಂ.ಎಸ್. ಪ್ರೀಯುನಿವರ್ಸಿಟಿ ಕಾಲೇಜಿನಲ್ಲಿ ಮೊದಲ ವರ್ಷದ ಪಿಯು ವಿದ್ಯಾರ್ಥಿನಿ. ನಾಡಿನ ಅನೇಕ ದೇವಾಲಯಗಳಲ್ಲಿ ನರ್ತಿಸಿರುವ ಇವಳು, ಆಂಧ್ರದ ವಿಜಯವಾಡದ ನಾಟ್ಯಾಂಜಲಿ ಫೆಸ್ಟಿವಲ್, ಚೆನ್ನೈನ ವೆಲ್ಲೂರು ಗೋಲ್ಡನ್ ಟೆಂಪಲ್, ಶಿಲ್ಪರಾಮಂ-ಹೈದರಾಬಾದ್, ಬೆಂಗಳೂರಿನ ಕಲಾಯಾನ ನೃತ್ಯೋತ್ಸವ, ಚಿಣ್ಣರ ಕಲರವ, ವೇಮನ ವಿಶ್ವವಿದ್ಯಾಲಯ ಮುಂತಾದೆಡೆ ಅಲ್ಲದೆ ರಾಮಾಯಣ, ದಶಾವತಾರ ಮತ್ತು ಅಷ್ಟಲಕ್ಷ್ಮೀ ಮುಂತಾದ ನೃತ್ಯರೂಪಕಗಳಲ್ಲಿ ಭಾಗವಹಿಸಿದ ವಿಶೇಷತೆ ಅವಳದು. ಭವಿಷ್ಯದಲ್ಲಿ ಸತತ ನೃತ್ಯಾಭ್ಯಾಸ ಮಾಡುತ್ತಾ ಈ ರಂಗದಲ್ಲಿ ಸಾಧನೆ ಮಾಡುವಾಸೆ ಲಿಖಿತಳದು.
– ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.