ಬೆಂಗಳೂರು : ಬೆಂಗಳೂರಿನ ‘ರಚನಾ ಡಾನ್ಸ್ ಅಕಾಡೆಮಿ’ ತನ್ನದೇ ಆದ ವೈಶಿಷ್ಟ್ಯಗಳಿಂದ ನೃತ್ಯಕ್ಷೇತ್ರದಲ್ಲಿ ಗಮನಾರ್ಹ ಸ್ಥಾನ ಪಡೆದಿದೆ. ಈ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿದ ವಿದುಷಿ ಕಾವ್ಯ ದಿಲೀಪ್ ಸ್ವತಃ ಉತ್ತಮ ನೃತ್ಯಕಲಾವಿದೆ ಹಾಗೂ ನಿಷ್ಠೆಯಿಂದ ತಾನು ಕಲಿತ ವಿದ್ಯೆಯನ್ನು ನೃತ್ಯಾಕಾಂಕ್ಷಿಗಳಿಗೆ ಸಂಪೂರ್ಣವಾಗಿ ಧಾರೆ ಎರೆಯುವ ಬದ್ಧತೆಯುಳ್ಳ ನೃತ್ಯ ಗುರು. ಈಕೆಯ ಕಲಾತ್ಮಕ ನೃತ್ಯ ತರಬೇತಿಯಲ್ಲಿ ರೂಪುಗೊಂಡ ಕಲಾಶಿಲ್ಪ ದೀಕ್ಷಾ ಶಂಕರ್ ಇವರು ಶ್ರೀಮತಿ ಬಿ.ಹೆಚ್.ಸುಮನಾ ಮತ್ತು ಹೆಚ್.ಸಿ.ರವಿಶಂಕರ್ ಅವರ ಪುತ್ರಿಯಾಗಿದ್ದಾರೆ. ಕಳೆದ 12 ವರ್ಷಗಳಿಂದ ನೃತ್ಯ ಶಿಕ್ಷಣವನ್ನು ಆಸಕ್ತಿಯಿಂದ ಪಡೆಯುತ್ತಿದ್ದಾಳೆ. ದಿನಾಂಕ 06-08-2023ರ ಭಾನುವಾರದಂದು ಸಂಜೆ 5 ಗಂಟೆಗೆ ಬಸವೇಶ್ವರನಗರದ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ದೀಕ್ಷಾ ಶಂಕರ್ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲಿದ್ದಾಳೆ. ಕಲಾವಿದೆಯ ಈ ನೃತ್ಯ ಕಾರ್ಯಕ್ರಮಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ.
ದೀಕ್ಷಾಳಿಗೆ 7ನೆಯ ವಯಸ್ಸಿನ ಎಳವೆಯಲ್ಲಿಯೇ ನೃತ್ಯಾಸಕ್ತಿ ಮೂಡಿದ್ದು, ಅದಕ್ಕೆ ಪ್ರೋತ್ಸಾಹದ ನೀರೆರೆದವರು ತಾಯಿ ಸುಮನಾ. ಮೊದಲಗುರು ಅರ್ಚನಾ ಪುಣ್ಯೇಶ್. ಅನಂತರ ವಿದುಷಿ ಕಾವ್ಯಾ ದಿಲೀಪ್ ಅವರಲ್ಲಿ ಮಾರ್ಗದರ್ಶನ ಪಡೆದ ದೀಕ್ಷಾ ಪರಿಶ್ರಮದಿಂದ ನೃತ್ಯದ ಎಲ್ಲ ಆಯಾಮಗಳನ್ನು ಕಲಿಯುತ್ತ ಬಂದು, ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದಲ್ಲದೆ, ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಪ್ರಾರಂಭಿಕ ಹಂತದಿಂದ ವಿಶಾರದ ಪ್ರಥಮ ಹಂತದವರೆಗೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆಯಲ್ಲೂ ಆಸಕ್ತಿ ಹೊಂದಿದ ಇವಳು, ಜೂನಿಯರ್ ಗ್ರೇಡ್ ಸಂಗೀತ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾಳೆ ಪ್ರಸ್ತುತ ದೀಕ್ಷಾ ವಿದ್ವತ್ ಪರೀಕ್ಷೆಯ ತಯಾರಿಯನ್ನು ತಮ್ಮ ಗುರು ಕಾವ್ಯಾ ದಿಲೀಪ್ ಅವರ ಬಳಿ ಮುಂದುವರಿಸಿದ್ದಾಳೆ.
ದೀಕ್ಷಾ ತನ್ನ ಮಾಧ್ಯಮಿಕ ಶಿಕ್ಷಣವನ್ನು ರಾಜಾಜಿನಗರದ ವೆಂಕಟ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಮತ್ತು ಮುಂದೆ ಹನ್ನೆರಡನೆಯ ತರಗತಿಯವರೆಗೆ ಶೇಷಾದ್ರಿಪುರದ ಚೈತನ್ಯ ಟೆಕ್ನೋ ಸ್ಕೂಲಿನಲ್ಲಿ ಓದಿ ಶ್ರೇಯಾಂಕಗಳಿಂದ ತೇರ್ಗಡೆ ಹೊಂದಿದ್ದಾಳೆ. ಪ್ರಸ್ತುತ ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ 2ನೇ ವರ್ಷದ ಬಿ.ಇ. ಓದುತ್ತಿದ್ದಾಳೆ.
ಅನೇಕ ಅಂತರ್ಶಾಲಾ ಮತ್ತು ಅಂತರ ಕಾಲೇಜು – ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಲ್ಲದೆ, ನಾಡಿನ ಅನೇಕ ಗುರುಗಳೊಂದಿಗೂ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಈಕೆಯದು. ಬಸವ ಟಿ.ವಿಯಲ್ಲಿ ಭರತನಾಟ್ಯ ಮತ್ತು ಜಾನಪದ ನೃತ್ಯ, ಮಕ್ಕಳ ಕೂಟ, ಬಾಲಭವನ, ಕಬ್ಬನ್ ಪಾರ್ಕ್ – ಬೆಂಗಳೂರು ಉದ್ಯಾನವನದಲ್ಲಿ ಉದಯರಾಗ ಸರಣಿ ಕಾರ್ಯಕ್ರಮ ಮುಂತಾದ ನೃತ್ಯೋತ್ಸವಗಳಲ್ಲಿ ಭಾಗವಹಿಸಿದ ಹೆಮ್ಮೆ ದೀಕ್ಷಾಳದು.
ಚಿತ್ರಕಲೆ, ಸಂಗೀತ ಮತ್ತು ಭಾಷಣ ಕಲೆಯ ಹವ್ಯಾಸಗಳನ್ನುಳ್ಳ ದೀಕ್ಷಾ ಅನೇಕ ಸ್ಪರ್ಧೆಗಳಲ್ಲಿ ಇದಕ್ಕಾಗಿ ಮೆಚ್ಚುಗೆ ಮತ್ತು ಬಹುಮಾನಗಳನ್ನು ಪಡೆದಿದ್ದಾಳೆ. ನೃತ್ಯರಂಗದಲ್ಲಿ ಸಾಧನೆ ಮಾಡುವುದು ಇವಳ ಕನಸು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ದ ಸ್ಥಾಪಕಿ, ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.