ಕಾಸರಗೋಡು : ಸಂಗೀತ ಮತ್ತು ಸಂಸ್ಕೃತಿ ಪರಸ್ಪರ ಸಂಬಂಧ ಹೊಂದಿದೆ. ಕರ್ನಾಟಕ ಸಂಸ್ಕೃತಿಯಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ. ಕರ್ನಾಟಕ ಸಂಗೀತವು ರಾಗ, ತಾಳ ಮತ್ತು ಪಲ್ಲವಿಗಳನ್ನು ಆಧರಿಸಿದ್ದು, ಅಂಶಗಳನ್ನು ಗಮನದಲ್ಲಿಟ್ಟು ಹಾಡಿದಾಗ ಕೇಳುಗರು ಆಸ್ವಾದಿಸುತ್ತಾರೆ. ಸಂಗೀತದಿಂದ ಆರೋಗ್ಯವನ್ನೂ ವೃದ್ಧಿಸಿಕೊಳ್ಳಬಹುದು ಎಂದು ಚಲನಚಿತ್ರ ನಟಿ ಶೋಭಾ ಶೆಟ್ಟಿ ಹೇಳಿದರು.
ರಂಗಚಿನಾರಿ ಕಾಸರಗೋಡು ಇದರ ಸಂಗೀತ ಘಟಕವಾದ ಸ್ವರ ಚಿನ್ನಾರಿ ನೇತೃತ್ವದಲ್ಲಿ ಕರಂದಕ್ಕಾಡಿನ ವದ್ಮಗಿರಿ ಕಲಾ ಕುಟೀರದಲ್ಲಿ ದಿನಾಂಕ 20 ಜುಲೈ 2025ರಂದು ಆಯೋಜಿಸಿದ ‘ಸಿ. ಅಶ್ವಥ್ ಗಾನ – ನಮನ’ ಪ್ರತಿಭಾನ್ವಿತ ಕರೋಕೆ ಗಾಯಕರ ಸಮ್ಮಿಲನ ಅಂತರ್ಧ್ವನಿ – 6 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸಲು ಪ್ರಯತ್ನಿಸುತ್ತಿರುವ ರಂಗಚಿನ್ನಾರಿ ಸಂಸ್ಥೆಯ ಕೊಡುಗೆ ಶ್ಲಾಘನೀಯ, ಇದೀಗ ಸ್ವರ ಚಿನ್ನಾರಿಯ ಮೂಲಕ ಎಲೆಮರೆಯ ಪ್ರತಿಭಾವಂತ ಸಂಗೀತ ಕಲಾವಿದರಿಗೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ಅಭಿನಂದನಾರ್ಹ ಎಂದರು.
ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ವಿಜಯಲಕ್ಷ್ಮೀ ಶ್ಯಾನುಭೋಗ್, ರಂಗನಟ ಉದಯ ಕುಮಾರ್ ಮನಿವಾಡಿ, ಜನಾರ್ದನ, ವೈ. ಸತ್ಯ ನಾರಾಯಣ, ನ್ಯಾಯವಾದಿ ಎ. ಎಸ್. ಅಶೋಕ್ ಕುಮಾರ್ ಉಪಸ್ಥಿತರಿದ್ದರು. ರಂಗಚಿನ್ನಾರಿ ಸಂಸ್ಥೆಯ ಪ್ರದಾನ ಸಂಚಾಲಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಸಿ, ಸ್ವಾಗತಿಸಿದರು. ಬಳಿಕ ಗಾಯಕರು ಗಾಯನದ ಮೂಲಕ ಸಿ.ಅಶ್ವಥ್ ಸಲ್ಲಿಸಿದರು. ಅವರಿಗೆ ನುಡಿನಮನ ಸಲ್ಲಿಸಲಾಯಿತು.