ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು ಇದರ ಆಶ್ರಯದಲ್ಲಿ ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಪ್ರಭಾತ 42ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸೇವಾ ಕಾರ್ಯಕ್ರಮವು ದಿನಾಂಕ 30-06-2024ರಂದು ಬೆಳಗ್ಗೆ 7-30 ಗಂಟೆಗೆ ಕಟೀಲು ದೇವಸ್ಥಾನದಲ್ಲಿ ನಡೆಯಲಿದೆ. ಕುಮಾರಿ ಪ್ರಣತಿ ಕೂಳೂರು ಇವರ ಹಾಡುಗಾರಿಕೆಗೆ ಶ್ರೀ ನಾಗಶಯನ ಪದಕಣ್ಣಾಯ ಪಿಟೀಲು ಮತ್ತು ಮಾಸ್ಟರ್ ಪ್ರಣವ್ ಕೂಳೂರು ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ.
ಪ್ರಣತಿಯು ಪ್ರಸ್ತುತ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ.ಯ ವಿದ್ಯಾರ್ಥಿನಿಯಾಗಿದ್ದು ಶಾಸ್ತ್ರೀಯ ಸಂಗೀತವನ್ನು ಹತ್ತು ವರ್ಷಗಳ ಕಾಲ ದಿವಂಗತ ವಿದುಷಿ ಶೀಲಾ ದಿವಾಕರ್ ಇವರಲ್ಲಿ ಅಭ್ಯಾಸ ಮಾಡುತ್ತಿದ್ದು, ಪ್ರಸ್ತುತ ಅವರ ಶಿಷ್ಯರಾಗಿರುವ ಆದರ್ಶ್ ಮುಲ್ಕಿ ಇವರಲ್ಲಿ ಅಭ್ಯಾಸ ಮುಂದುವರಿಸುತ್ತಿದ್ದಾರೆ. ಅದಲ್ಲದೆ ಭರತನಾಟ್ಯದಲ್ಲಿ ಸೀನಿಯರ್ ಗ್ರೇಡ್ ಮುಗಿಸಿ ವಿದ್ವತ್ತಿಗಾಗಿ ಗುರುಗಳಾದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಪ್ರಣವರವರು ಪ್ರಸ್ತುತ ಜೆ.ಎಸ್.ಎಸ್. ವಿಶ್ವವಿದ್ಯಾಲಯ, ಮೈಸೂರಿನಲ್ಲಿ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಮೃದಂಗ ಅಭ್ಯಾಸವನ್ನು ಹಲವು ವರ್ಷಗಳಿಂದ ವಿದ್ವಾನ್ ಶ್ರೀ ರವಿಕುಮಾರ್ ಕುಂಜೂರ್ ಇವರಲ್ಲಿ ಮಾಡುತ್ತಿದ್ದಾರೆ. ಇವರು ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಪಂಜಾಬಿನ ಲೂಧಿಯಾನಾದಲ್ಲಿ ನಡೆದ ರಾಷ್ಟ್ರೀಯ ಯುವಜನ ಉತ್ಸವದಲ್ಲಿ ಚರ್ಮವಾದ್ಯ ಸ್ಪರ್ಧೆಯಲ್ಲಿ ಮೃದಂಗವನ್ನು ನುಡಿಸಿ ತೃತೀಯ ಬಹುಮಾನವನ್ನು ಪಡೆದಿದ್ದಾರೆ. ಇವರಿಬ್ಬರೂ ಪ್ರಸನ್ನ ಮತ್ತು ಅಪರ್ಣ ದಂಪತಿಗಳ ಮಕ್ಕಲಾಗಿದ್ದು, ಖ್ಯಾತ ವಯಲಿನ್ ವಾದಕರಾದ ದಿವಂಗತ ಕಿನ್ನಿಮುಲ್ಕಿ ರಾಘವೇಂದ್ರ ಭಟ್ಟರ ಮರಿಮಕ್ಕಳಾಗಿದ್ದಾರೆ.