Subscribe to Updates

    Get the latest creative news from FooBar about art, design and business.

    What's Hot

    ಗದಗದಲ್ಲಿ ‘ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಹಾಗೂ ಕೃತಿಗಳ ಬಿಡುಗಡೆ ಸಮಾರಂಭ | ನವೆಂಬರ್ 02

    October 30, 2025

    ರಂಗ ಚಿನ್ನಾರಿ ಸಂಸ್ಥೆಯಿಂದ ಎಂ. ಗಂಗಾಧರ ಭಟ್ ಸಂಸ್ಮರಣೆ

    October 30, 2025

    ‘ಸಮುದಾಯ’ ಮುಂಗಾಣ್ಕೆಯ ದಿಕ್ಕಿನಲ್ಲಿ ಜನಾಂದೋಲನದ ಅಭಿವ್ಯಕ್ತಿಯಾಗಿ ಚಾಲನೆ ಪಡೆದ ಚಿಂತನೆಗಳಿಗೆ ಈಗ 50ರ ಸಂಭ್ರಮ

    October 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಸಮುದಾಯ’ ಮುಂಗಾಣ್ಕೆಯ ದಿಕ್ಕಿನಲ್ಲಿ ಜನಾಂದೋಲನದ ಅಭಿವ್ಯಕ್ತಿಯಾಗಿ ಚಾಲನೆ ಪಡೆದ ಚಿಂತನೆಗಳಿಗೆ ಈಗ 50ರ ಸಂಭ್ರಮ
    Article

    ‘ಸಮುದಾಯ’ ಮುಂಗಾಣ್ಕೆಯ ದಿಕ್ಕಿನಲ್ಲಿ ಜನಾಂದೋಲನದ ಅಭಿವ್ಯಕ್ತಿಯಾಗಿ ಚಾಲನೆ ಪಡೆದ ಚಿಂತನೆಗಳಿಗೆ ಈಗ 50ರ ಸಂಭ್ರಮ

    October 30, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    1970ರ ದಶಕ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಪ್ರಜಾಪ್ರಭುತ್ವದ ಪಯಣದಲ್ಲಿ ಒಂದು ನಿರ್ಣಾಯಕ ಪರ್ವ. ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ಕನಸುಗಳು ಭಗ್ನವಾಗುತ್ತಿರುವ ಆತಂಕಗಳು ಹೆಚ್ಚಾಗಿ ವ್ಯಕ್ತವಾಗತೊಡಗಿದ್ದು 1960-70ರ ದಶಕದಲ್ಲೇ. ಇದು ಭ್ರಮಾಧೀನ ಸಮಾಜದ ಅಭಿವ್ಯಕ್ತಿಯಾಗಿರಲಿಲ್ಲ, ಬದಲಾಗಿ ನೆಲದ ವಾಸ್ತವವಾಗಿತ್ತು (Ground Reality). ಸ್ವಾತಂತ್ರ್ಯದ ಪೂರ್ವಸೂರಿಗಳು ಬಯಸಿದ ಅಥವಾ ಕನಸಿದ ಆದರ್ಶ ಭಾರತವನ್ನು ಕಟ್ಟುವುದರಲ್ಲಿ ಆಳುವ ವರ್ಗಗಳು ಎಡವುತ್ತಲೇ ಬಂದಾಗ, ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುಸಂಖ್ಯೆಯ ಜನರಲ್ಲಿ ಸಹಜವಾಗಿಯೇ ತಲ್ಲಣಗಳು, ಆತಂಕಗಳು ಹೆಚ್ಚಾಗುತ್ತಾ ಹೋಗಿದ್ದವು. ಸಮಾಜದ ಒಂದು ಸಣ್ಣ ವರ್ಗ ಫಲಾನುಭವಿಗಳಾಗಿ ಮೇಲೇರುತ್ತಾ ಹೋದಂತೆಯೇ ಮತ್ತೊಂದು ದೊಡ್ಡ ವರ್ಗ ಅವಕಾಶವಂಚಿತರಾಗಿ ನಾಳೆಗಳನ್ನು ಎಣಿಸುವಂತಾಗಿದ್ದು ಚಾರಿತ್ರಿಕ ಸತ್ಯ.

    ಈ ತುಮುಲಗಳಿಗೆ ಸ್ಪಂದಿಸುವ ಒಂದು ಪ್ರಜ್ಞಾವಂತ, ಸಂವೇದನಾಶೀಲ ಸಮಾಜವೂ ಜೊತೆಜೊತೆಗೇ ನಡೆದುಬಂದಿದ್ದು, ಈ ಸಮಾಜದ ಸದಸ್ಯರು ಅಥವಾ ಸಾಮಾನ್ಯ ಪರಿಭಾಷೆಯಲ್ಲಿ ಬುದ್ಧಿಜೀವಿಗಳು, ನೆಲ ನೋಡುತ್ತಾ ನಡೆಯುತ್ತಿದ್ದರಿಂದ, ತಳಸಮಾಜದ ತಲ್ಲಣಗಳನ್ನು, ನಾಡಿಮಿಡಿತವನ್ನು ಗ್ರಹಿಸಲು ಸಾಧ್ಯವಾಗಿತ್ತು. ಇದು ಹಲವು ಆಯಾಮಗಳಲ್ಲಿ ಪ್ರಕಟಗೊಂಡಿತ್ತು. ಸಾಹಿತ್ಯ, ರಂಗಭೂಮಿ, ಸಂಘಟನೆ, ಹೋರಾಟ, ಪ್ರತಿರೋಧ ಇತ್ಯಾದಿ ಮಾದರಿಗಳು ನೋವುಂಡ ಜನತೆಯ ಪರ ದನಿ ಎತ್ತುವಂತಹ ಒಂದು ವರ್ಗವನ್ನು ಸೃಷ್ಟಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಮಾರ್ಕ್ಸ್, ಲೋಹಿಯಾ, ಪೆರಿಯಾರ್, ಅಂಬೇಡ್ಕರ್, ಮಾವೋ, ಗಾಂಧಿ ಹೀಗೆ ದಾರ್ಶನಿಕರು ಬಿಟ್ಟುಹೋದ ಹಾದಿಯ ಮೈಲುಗಲ್ಲುಗಳನ್ನು ದಾಟುತ್ತಾ, ತಳಸಮಾಜವನ್ನು ತಲುಪಲು ಮುಂದಾಗಿದ್ದು, ಈ ವರ್ಗದ ಔದಾತ್ಯ ಎನ್ನುವುದಕ್ಕಿಂತಲೂ ನೈತಿಕ ಬಾಧ್ಯತೆ ಎಂದು ಹೇಳಬಹುದು.

    ಸಂವಹನ ಮಾಧ್ಯಮಗಳು ಸೀಮಿತವಾಗಿದ್ದ ಈ ಪರಿಸರದಲ್ಲಿ ತಳಸಮಾಜದ ಶೋಷಿತ ಜನತೆಯನ್ನು ತಲುಪುವುದೇ ಒಂದು ದುಸ್ಸಾಹಸವಾಗಿದ್ದುದರಿಂದ, ಸಂವಿಧಾನ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಮಹಿಳಾ ಸಂವೇದನೆ, ಲಿಂಗಸೂಕ್ಷ್ಮತೆ, ಕಾರ್ಮಿಕ ಹಕ್ಕುಗಳು, ರೈತಾಪಿ ಕಾಳಜಿ ಮತ್ತು ಅತ್ಯಂತ ಶೋಷಿತ ಸಮಾಜಗಳನ್ನು ತಲುಪಲು ಭಿನ್ನ ಹಾದಿಗಳನ್ನು ಆಯ್ದುಕೊಳ್ಳುವುದೂ ಮುಖ್ಯವಾಗಿತ್ತು. ಕನ್ನಡ ಸಾಹಿತ್ಯ ವಲಯ ಇದಕ್ಕೆ ಅಕ್ಷರ ರೂಪದಲ್ಲಿ ಚಾಲನೆ ನೀಡಿತ್ತು. ಆದರೆ ಅನಕ್ಷರಸ್ಥರೇ ಹೆಚ್ಚಾಗಿದ್ದ ಗ್ರಾಮೀಣ ಭಾರತದ ಶೋಷಿತರನ್ನು ತಲುಪಲು ಇದು ಸಾಲುತ್ತಿರಲಿಲ್ಲ. ಈ ಸಂದಿಗ್ಧತೆಯ ನಡುವೆ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ನೇರವಾಗಿ, ಪರಿಣಾಮಕಾರಿಯಾಗಿ ತಲುಪಿ, ಅವರಿಗೆ ಶೋಷಣೆಯ ಕಾರಣಗಳನ್ನು ಮತ್ತು ಅದರಿಂದ ವಿಮೋಚನೆ ಪಡೆಯುವ ಮಾರ್ಗಗಳನ್ನು ತೋರಿಸುವ ಅತ್ಯುತ್ತಮ ಸಂವಹನ ಮಾಧ್ಯಮವಾಗಿ ಕಂಡಿದ್ದು ರಂಗಭೂಮಿ.

    ಈ ಉದಾತ್ತ ಕಲ್ಪನೆಯೊಂದಿಗೆ ಕರ್ನಾಟಕದಲ್ಲಿ ಹುಟ್ಟಿಕೊಂಡಿದ್ದು ʼಸಮುದಾಯʼ ಎಂಬ ಜನಾಂದೋಲನದ ರಂಗರೂಪ. ʼಸಮುದಾಯʼ ಜನ್ಮ ತಳೆದದ್ದು ನಗರ ಪ್ರದೇಶದಲ್ಲಿ ಆದರೆ ಇದರ ಗುರಿ ಇದ್ದುದು ʼಗ್ರಾಮ ಭಾರತʼ ಅಥವಾ ನಗರೀಕರಣದಿಂದ ಬಹಳ ದೂರವೇ ಉಳಿದಿದ್ದ ಅವಕಾಶವಂಚಿತ ಸಮಾಜಗಳು. ಅಕ್ಷರ ಕಲಿತ, ಸಾಹಿತ್ಯಾಧ್ಯಯನ ಮಾಡಿದ್ದ, ದಾರ್ಶನಿಕರ ತಾತ್ವಿಕ ದರ್ಶನಗಳನ್ನು ಬಲ್ಲವರಾಗಿದ್ದ, ಸಮಾಜಮುಖಿ ವ್ಯಕ್ತಿಗಳ ಒಂದು ಪ್ರಯತ್ನವಾಗಿ ಹುಟ್ಟಿಕೊಂಡ ʼಸಮುದಾಯʼ, ಭಿನ್ನ ಸವಾಲುಗಳನ್ನು ಎದುರಿಸುತ್ತಾ, ಏಳು ಬೀಳುಗಳ ನಡುವೆ, 50 ವರ್ಷಗಳನ್ನು ಪೂರೈಸಿದೆ. ಭಾರತೀಯ ಸಮಾಜದ ಒಳಸುಳಿಗಳನ್ನು ಹಾಗೂ ಒಳಹುಳುಕುಗಳನ್ನು ಶೋಷಿತರ ಮುಂದಿಡುತ್ತಾ, ಅವರ ಶೋಷಣೆಗೆ ಮೂಲ ಕಾರಣಗಳು ಇರುವುದೇ ಈ ಪ್ರಾಚೀನ ಸಾಮಾಜಿಕ ಮನಸ್ಥಿತಿ, ಸಂಸ್ಕೃತಿ ಮತ್ತು ಧಾರ್ಮಿಕ ಸಂಹಿತೆಗಳಲ್ಲಿ ಎಂದು ಮನದಟ್ಟು ಮಾಡುವ ಒಂದು ಆದ್ಯತೆಯೊಂದಿಗೆ ʼಸಮುದಾಯʼ ರಂಗ ಪ್ರಯೋಗಗಳ ಮುಖೇನ ರಾಜ್ಯದ ಮೂಲೆ ಮೂಲೆಯನ್ನೂ ತಲುಪಲು ಸಾಧ್ಯವಾಗಿತ್ತು.

    ಬೀದಿ ನಾಟಕಗಳ ಮೂಲಕ ಸಾಮಾಜಿಕ ಅರಿವು, ಸಾರ್ವಜನಿಕ ಪ್ರಜ್ಞೆ ಮೂಡಿಸುವ ಪ್ರಯತ್ನದಲ್ಲಿ ʼಸಮುದಾಯʼದ ಸಾಧನೆ ಅಪಾರವಾದದ್ದು. ಆಗಸ್ಟ್ 1975ರಲ್ಲಿ ಕೆ.ವಿ. ನಾರಾಯಣ್ ರಚಿಸಿದ್ದ ‘ಹುತ್ತವ ಬಡಿದರೆ’ ನಾಟಕ ಪ್ರಸನ್ನ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಸಮುದಾಯ ಕರ್ನಾಟಕದಲ್ಲಿ ತನ್ನ ಮೊದಲ ಹೆಜ್ಜೆ ಇರಿಸಿತ್ತು. ಇದೇ ಸಮಯದಲ್ಲಿ 1977ರಲ್ಲಿ ಸ್ಥಾಪಿಸಲಾದ ಸಮುದಾಯ ರಾಜ್ಯ ಸಮಿತಿ (ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ರಿ.) ಸಮುದಾಯದ ಪ್ರಯೋಗಗಳನ್ನು ರಾಜ್ಯದ ಉದ್ದಗಲಕ್ಕೂ ಪಸರಿಸುವ ಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಈ ಎರಡೂ ಸಾಂಸ್ಕೃತಿಕ ಚಳುವಳಿಗಳ 50 ಹೆಜ್ಜೆಗಳನ್ನು ಕನ್ನಡ ನಾಡು ಕಂಡಿದೆ. ಈ ಸಂಭ್ರಮದ ನಡುವೆ, ನಡೆದು ಬಂದ ಹಾದಿ, ನಡೆಯಬೇಕಾದ ಮಾರ್ಗ, ತಲುಪಲಾಗದಿರುವ ಆದರೆ ತಲುಪಲೇಬೇಕಾದ ಅಂತಿಮ ಗುರಿ (Goal Post) ಇವುಗಳನ್ನು ಅವಲೋಕನ ಮಾಡುವ ಸಂದರ್ಭ ಇದಾಗಿದೆ. 50 ವರ್ಷಗಳ ನಂತರ ನಮ್ಮ ನಡುವಿನ ವಿಷಕೂಟಗಳ ಹುತ್ತಗಳ ಸಂಖ್ಯೆಯೂ ಹೆಚ್ಚಾಗಿದ್ದು, ಅವುಗಳನ್ನು ಬಡಿಯಲು ಸಮುದಾಯ ಸಜ್ಜಾಗಬೇಕಿದೆ.

    ಈ 50 ವರ್ಷಗಳಲ್ಲಿ ಸಮುದಾಯ ನಡೆದು ಬಂದ ಹಾದಿಯನ್ನು ಅವಲೋಕನ ಮಾಡುವುದೇ ಅಲ್ಲದೆ, ವರ್ತಮಾನದ ಸಂದಿಗ್ಧತೆ ಮತ್ತು ರಾಜಕೀಯ ಅಪಾಯಗಳ ನಡುವೆ ʼಸಮುದಾಯʼ ದನಿಯನ್ನು ಮತ್ತಷ್ಟು ವಿಸ್ತರಿಸಲು, ಹೊಸ ಪೀಳಿಗೆಯ ಮಿಲೆನಿಯಂ ಸಮಾಜವನ್ನು ತಲುಪಲು ಹಾಗೂ ಚಾರಿತ್ರಿಕ ಹೆಜ್ಜೆಗಳನ್ನು ಅರಿಯುತ್ತಲೇ ಭವಿಷ್ಯದ ಹೆಜ್ಜೆಗಳನ್ನು ನಿರ್ಧರಿಸುವ ಸಲುವಾಗಿ ಮೈಸೂರಿನ ಸಮುದಾಯ ತಂಡದ ರಂಗಕರ್ಮಿಗಳು, ಸಾಹಿತಿಗಳು, ಕಾರ್ಯಕರ್ತರು ಹಾಗೂ ಸಾಂಸ್ಕೃತಿಕ ನಗರಿಯ ರಂಗಭೂಮಿಯ ಪರಿಚಾರಕರು, ಕಲಾವಿದರು, ಇಲ್ಲಿನ ಪ್ರಗತಿಪರ ಎಡಪಂಥೀಯ ಸಂಘಟನೆಗಳ ಜೊತೆಗೂಡಿ ‘ಮನುಷ್ಯತ್ವದೆಡೆಗೆ ಸಮುದಾಯ 50’ ಎಂಬ ಮೂರು ದಿನಗಳ ರಂಗೋತ್ಸವವನ್ನು ಅಕ್ಟೋಬರ್ 31ರಿಂದ ನವಂಬರ್ 2ರವರೆಗೆ ಆಚರಿಸಲು ಸಿದ್ಧವಾಗಿದೆ.

    ಅಕ್ಟೋಬರ್ 31ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿ ಕಲಾಶಿಬಿರದ ಉದ್ಘಾಟನೆಯೊಂದಿಗೆ ಈ ರಂಗೋತ್ಸವ ಚಾಲನೆ ಪಡೆಯಲಿದೆ. ಡಾ. ಎಂ.ಎಸ್. ಮೂರ್ತಿ ಇವರಿಂದ ಉದ್ಘಾಟಿಸಲ್ಪಡುವ ಈ ರಂಗೋತ್ಸವ ಮತ್ತು ಶಿಬಿರದ ಹಂದರದಲ್ಲೇ ಸಂಜೆ ಗಂಟೆ 5-00ಕ್ಕೆ ಜನಪದ ಗೀತ ಗಾಯನದ ಮೂಲಕ, 6-00 ಗಂಟೆಗೆ ರಂಗೋತ್ಸವದ ಉದ್ಘಾಟನೆಯನ್ನು ಡಾ. ಕೆ. ಮರುಳಸಿದ್ದಪ್ಪ ಇವರು ನೆರವೇರಿಸಲಿದ್ದಾರೆ. ನವಂಬರ್ 1ರಂದು ಸಂಜೆ ಗಂಟೆ 6-00ಕ್ಕೆ ಎಡಪಂಥೀಯ, ಪ್ರಗತಿಶೀಲ ಸಾಹಿತಿ ನಿರಂಜನ ಅವರ ಪಯಣವನ್ನು ಕುರಿತ ʼನಿರಂಜನ ಮರು ಓದುʼ ಕೃತಿಯ ಅನಾವರಣವಾಗಲಿದ್ದು ಸಂವಾದವನ್ನು ಏರ್ಪಡಿಸಲಾಗಿದೆ. ನವಂಬರ್ 2ರಂದು ವಿಚಾರ ಸಂಕಿರಣಗಳು ಆರಂಭವಾಗಲಿದ್ದು, ರಂಗಭೂಮಿಯಲ್ಲಿ ವಿಜ್ಞಾನ ಸಂವಹನ, ಸಮಕಾಲೀನ ಸಾಂಸ್ಕೃತಿಕ ಎಚ್ಚರ, ರಂಗಭೂಮಿಯಲ್ಲಿ ಸಾಂಸ್ಕೃತಿಕ ಎಚ್ಚರ ಎಂಬ ವಿಷಯಗಳನ್ನು ಚರ್ಚಿಸಲಾಗುತ್ತದೆ. ಸಂಜೆ ಗಂಟೆ 5-00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

    1970ರಲ್ಲಿ ಮೊಳಕೆಯೊಡೆದ ʼಸಮುದಾಯʼ ಇಂದು ಸಾಂಸ್ಕೃತಿಕ ಆಲವಾಗಿ ನಮ್ಮ ನಡುವೆ ನಿಂತಿದೆ. ಆದರೆ ಮೂಲ ಆಶಯಗಳನ್ನೂ ದಾಟಿ, ದೇಶ ಸಾಗುತ್ತಿರುವ ಹಾದಿಯನ್ನು ಗಮನದಲ್ಲಿಟ್ಟುಕೊಂಡು, ಸಂವಾದ ನಡೆಸುವ ಉದಾತ್ತ ಧ್ಯೇಯದೊಂದಿಗೆ ಈ ರಂಗೋತ್ಸವ ಮೊದಲ ಹೆಜ್ಜೆ ಇರಿಸಲಿದೆ. ನವ ಉದಾರವಾದ, ಮತೀಯವಾದ, ಮತಾಂಧತೆ, ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ, ಶಿಕ್ಷಣ-ಆರೋಗ್ಯ ಸೇವೆಗಳ ವಾಣಿಜ್ಯೀಕರಣ ಹಾಗೂ ನೈಸರ್ಗಿಕ ಸಂಪನ್ಮೂಲಗಳ ವ್ಯವಸ್ಥಿತ ಲೂಟಿ, ನೈಸರ್ಗಿಕ ವಿನಾಶ ಈ ಎಲ್ಲ ಸಂಕೀರ್ಣ ಸಮಸ್ಯೆಗಳ ನಡುವೆ ಬೃಹದಾಕಾರವಾಗಿ ಬೆಳೆಯುತ್ತಿರುವ ಬಲಪಂಥೀಯ ರಾಜಕಾರಣ ʼಸಮುದಾಯʼ ಎದುರಿಸಬೇಕಾದ ಹಿಮಾಲಯದೆತ್ತರದ ಸಮಸ್ಯೆಯಾಗಿ ಕಾಣುತ್ತಿದೆ.

    ಬದಲಾದ ಭಾರತದಲ್ಲಿ, ವಿಕಸಿತವಾಗುವ ಕಡೆ ಸಾಗುತ್ತಿರುವ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳ ಚೌಕಟ್ಟಿನೊಳಗೆ ಮಾನವೀಯ ಸಮಾಜವೊಂದನ್ನು ಮರುಕಟ್ಟು ಅಗತ್ಯತೆ ಇಡೀ ಸಮಾಜದ ಮುಂದಿದೆ. ʼಸಮುದಾಯʼ ಈ ನೊಗದ ಭಾರವನ್ನು ಹೊತ್ತು ಮುನ್ನಡೆಯಬೇಕಿದೆ. ಪ್ರತಿಯೊಂದು ಹೆಜ್ಜೆಯಲ್ಲೂ ಎಲ್ಲರನ್ನೂ, ಎಲ್ಲ ವರ್ಗಗಳನ್ನೂ ಒಳಗೊಳ್ಳುತ್ತಾ ಉಜ್ವಲ ಭವಿಷ್ಯದೆಡೆಗೆ ಸಾಗುವ ದೊಡ್ಡ ಜವಾಬ್ದಾರಿ ಮತ್ತು ಸವಾಲು ʼಸಮುದಾಯʼದ ಮುಂದಿದೆ. ಚರಿತ್ರೆಯನ್ನು ಅರಿಯುತ್ತಾ, ವರ್ತಮಾನವನ್ನು ಅವಲೋಕನ ಮಾಡುತ್ತಾ, ಭವಿಷ್ಯವನ್ನು ರೂಪಿಸುತ್ತಾ ನಡೆಯುವ ಉದಾತ್ತ ಆಲೋಚನೆಯೊಂದಿಗೆ ‘ಸಮುದಾಯ 50’ ಮನುಷ್ಯತ್ವದೆಡೆಗೆ ಸಮಾಜವನ್ನು ಕೊಂಡೊಯ್ಯುವ ರಥವಾಗಿ ನಮ್ಮ ನಡುವೆ ಮೂರು ದಿನಗಳ ಕಾಲ ಚಲಿಸಲಿದೆ.

    ಈ ಸದಾಶಯ ಮತ್ತು ಉದಾತ್ತ ಚಿಂತನೆಗಳು ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರ, ಜನಪರ ಸಂಘಟನೆಗಳ ಹಾಗೂ ಸಾಂಸ್ಕೃತಿಕ ಸಂಸ್ಥೆಗಳ ಸಹಕಾರ, ಸಹಭಾಗಿತ್ವ ಮತ್ತು ಸಹಯೋಗ ಬೇಕಿದೆ. ಮೈಸೂರಿನ ಜನತೆ ಈ ಮೂರೂ ನೆಲೆಗಳಲ್ಲಿ ರಂಗೋತ್ಸವದ ಭಾಗವಾಗಿ, ಹೆಗಲು ಕೊಟ್ಟು ʼಸಮುದಾಯʼದ ಹೆಜ್ಜೆಯೊಡನೆ ಹೆಜ್ಜೆ ಹಾಕಬೇಕಿದೆ. ತನ್ಮೂಲಕ ರಂಗೋತ್ಸವನ್ನು ಯಶಸ್ವಿಗೊಳಿಸಬೇಕಿದೆ.

    – ನಾ ದಿವಾಕರ

    article baikady camp drama felicitation folk Literature Music roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 12
    Next Article ರಂಗ ಚಿನ್ನಾರಿ ಸಂಸ್ಥೆಯಿಂದ ಎಂ. ಗಂಗಾಧರ ಭಟ್ ಸಂಸ್ಮರಣೆ
    roovari

    Add Comment Cancel Reply


    Related Posts

    ಗದಗದಲ್ಲಿ ‘ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಹಾಗೂ ಕೃತಿಗಳ ಬಿಡುಗಡೆ ಸಮಾರಂಭ | ನವೆಂಬರ್ 02

    October 30, 2025

    ರಂಗ ಚಿನ್ನಾರಿ ಸಂಸ್ಥೆಯಿಂದ ಎಂ. ಗಂಗಾಧರ ಭಟ್ ಸಂಸ್ಮರಣೆ

    October 30, 2025

    ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 12

    October 30, 2025

    ಸ್ಕೌಟ್ಸ್ ಗೈಡ್ಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ

    October 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.