ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿಸಿ ಎರಡು ಕಡೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಾಯಿ ಕಲಾವಿದೆರ್ ಕುಡ್ಲ ಇವರ ನೇತೃತ್ವದ ‘ಮೋಹಿನಿ’ ಕೌಟುಂಬಿಕ ಕುತೂಹಲಭರಿತ ತುಳು ನಾಟಕ ಇದರ ಸಂಭ್ರಮಾಚರಣೆಯು ದಿನಾಂಕ 08 ಮಾರ್ಚ್ 2025ರಂದು ಸಂಜೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.
ಕಡಬ ಶ್ರೀ ಮೂಕಾಂಬಿಕಾ ಕ್ಷೇತ್ರ ಪಾಲ್ತಿಮಾರು ಇದರ ಕೇಶವ ಪಂಡಿತ್ ಮತ್ತು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಇವರು ‘ಮೋಹಿನಿ’ ತುಳು ನಾಟಕದ ಸಂಭ್ರಮಾಚರಣೆಯ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ಬಡಗನ್ನೂರು ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಸಂತೋಷ್ ಆಳ್ವ, ಚಿತ್ರನಟ ಹಾಗೂ ಕಲಾವಿದ ಚೇತನ್ ಮಾಣಿ ಇವರು ‘ಮೋಹಿನಿ’ ನಾಟಕವು ತಂಡದಿಂದ ಯಶಸ್ವಿಯಾಗಿ ಪ್ರದರ್ಶನ ಮೂಡಿ ಬರಲಿ. ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಯಶಸ್ವಿ ಪ್ರದರ್ಶನ ಕಾಣಲಿ ಪ್ರತಿ ಊರಲ್ಲೂ ತಂಡಕ್ಕೆ ಪ್ರದರ್ಶನದ ಅವಕಾಶ ಸಿಗಲಿ” ಎಂದು ಹಾರೈಸಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಈಶ್ವರ ಬೇಡೆಕರ್, ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ಶುಂಠಿಕೊಪ್ಪದ ಸರೋಜಿನಿ ರೈ ಅರ್ಬೈಲ್, ಅಶ್ವಿನ್ ರಾವ್, ಬಿಳಿನೆಲೆ ಮೆಸ್ಕಾಂ ಶಾಖಾಧಿಕಾರಿ ಮನೋಜ್ ಕುಮಾರ್ ರೈ, ವಿಶ್ವನಾಥ್ ಶೆಟ್ಟಿ ಕಿದೂರು ಜಾಲು, ಸಾಮ್ರಾಟ್ ಪಿ. ವಿ. ಸಿ. ಪೈಪ್ ಇಂಡಸ್ಟ್ರೀಸ್‌ನ ಅಮೃತ್ ಎ. ವಿ., ಪುತ್ತೂರು ವಿಭಾಗ ಸಹಾಯಕ ಅಂಚೆ ಅಧೀಕ್ಷಕರಾದ ಚಂದ್ರ ನಾಯ್ಕ, ಶರಬರೀನಾಥ್ ಕೊಯಿಲ ಬಡಗನ್ನೂರು, ಪೆರಾಬೆ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮೋಹನ್‌ದಾಸ್ ರೈ ಪರಾರಿಗುತ್ತು ಹಾಗೂ ಸವಿತಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಕಲಕಲಾವಲ್ಲಭ ಕಡಬ ತಾಲೂಕು ಆಲಂಕಾರಿನ ಶ್ರೇಯಾ ಆಚಾರ್ಯ ಇವರಿಗೆ ‘ಸಾಯಿಕಂಟ ಸಿರಿ’ ಬಿರುದು, 2500 ನಾಟಕಗಳಲ್ಲಿ ಸ್ತ್ರೀ ಪಾತ್ರದಾರಿಯಾಗಿ ರಂಜಿಸಿದ ದಯಾನಂದ ಕುಂತೂರು ಇವರಿಗೆ ‘ಸಾಯಿ ನವರಸ ಕಲಾರತ್ನ’ ಬಿರುದು, ಹಲವು ನಾಟಕಗಳನ್ನು ನಿರ್ದೇಶಿಸಿದ ನಿರ್ದೇಶಕ ಸುನಿಲ್ ಮಾಲ ಇವರಿಗೆ ‘ಸಾಯಿ ರಂಗ ಮಾಂತ್ರಿಕ ಮಹರ್ಷಿ’ ಬಿರುದು, ಹಲವು ನಾಟಕ ಮತ್ತು ಚಲನಚಿತ್ರಕ್ಕೆ ಧ್ವನಿ ಮುದ್ರಣ ನೀಡುತ್ತಿರುವ ಚಿದಾನಂದ ಕಡಬ ಇವರಿಗೆ ‘ಸಾಯಿ ಸಂಗೀತ ಮಾಂತ್ರಿಕ’ ಬಿರುದು ನೀಡಿ ಗೌರವಿಸಲಾಯಿತು. ನಾಟಕ ರಚನೆಗಾರ ಮತ್ತು ಕಲಾವಿದನಾಗಿ ಸಾಯಿ ಕಲಾವಿದೆರ್ ಸಂಸ್ಥೆಯ ಸ್ಥಾಪಕ ಶಿವಕುಮಾರ್ ರೈ ಪುತ್ತೂರು, ಸಂಗೀತ ನಿರ್ದೇಶಕ ಗೌತಮ್ ಶೆಟ್ಟಿ, ಕುಡ್ತಮುಗೇರು ರಾಜಶೇಖರ್ ಶೆಟ್ಡಿ, ಯದು ವಿಟ್ಲ ಇವರನ್ನು ಅಭಿನಂದಿಸಲಾಯಿತು. ‘ಮೋಹಿನಿ’ ನಾಟಕದ ಕಲಾವಿದರು, ತಾಂತ್ರಿಕ ವರ್ಗದವರು, ಪ್ರಸಾದನ ಹಾಗೂ ರಂಗಾಲಂಕಾರದವರನ್ನು ಗೌರವಿಸಲಾಯಿತು. ನಿರೀಕ್ಷಾ ವಿಟ್ಲ, ವಿಜಯ ಕುಮಾರ್ ವಿಟ್ಲ, ರಾಮಕೃಷ್ಣ ಪಡುಮಲೆ, ಹರೀಶ್ ಸನ್ಮಾನ ಪತ್ರ ವಾಚಿಸಿದರು. ನಾಟಕದ ಸಾರಥ್ಯ ವಹಿಸಿದ ಪ್ರಕಾಶ್ ರೈ ಮರುವಂತಿಲ, ಸಾಹಿತ್ಯ ಮತ್ತು ರಚನಾಕಾರ ಶಿವಕುಮಾರ್ ರೈ ಪುತ್ತೂರು, ಕಲಾವಿದರಾದ ವಿಜಯಕುಮಾರ್, ಜಿತೇಶ್ ಮಂಗಳೂರು, ರಾಮಕೃಷ್ಣ ಪಡುಮಲೆ ವಿವಿಧ ಕಾಯಕ್ರಮ ನಿರ್ವಹಿಸಿ, ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿ, ವಾಣಿ ವಂದಿಸಿದರು.
ಸಭಾಕಾರ್ಯಕ್ರಮದ ಬಳಿಕ ಕೌಟುಂಬಿಕ ಕುತೂಹಲಭರಿತ ತುಳು ನಾಟಕ ‘ಮೋಹಿನಿ’ ಪ್ರದರ್ಶನಗೊಂಡಿತು.