ಕಿನ್ನಿಗೋಳಿ : ಖ್ಯಾತ ಸಾಹಿತಿ ಅಚ್ಚುತ ಗೌಡ ಕಿನ್ನಿಗೋಳಿ ಇವರ ಶತಮಾನೋತ್ಸವ ಆಚರಣೆ ಹಾಗೂ ಡಾ. ಬಿ. ಜನಾರ್ದನ ಭಟ್ ಇವರ 99, 100 ಹಾಗೂ 101ನೇ ಕೃತಿಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 20 ಅಕ್ಟೋಬರ್ 2024ರಂದು ಸಂಜೆ 4-00 ಗಂಟೆಗೆ ಕಿನ್ನಿಗೋಳಿ ಮೇರಿವೆಲ್ ಶಾಲೆ ಬಳಿಯಿರುವ ‘ಶ್ರೀಗಂಧ’ ನಿವಾಸದಲ್ಲಿ ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ಅ.ಗೌ. ಸಂಸ್ಮರಣೆ ಮಾತುಗಳನ್ನಾಡಲಿದ್ದು, ಆಶ್ವೇಜಾ ಉಡುಪ ಅಚ್ಯುತ ಗೌಡರ ಕಾವ್ಯಗಳ ಗಾಯನ ಮಾಡಲಿದ್ದಾರೆ.
ಡಾ. ಬಿ. ಜನಾರ್ದನ ಭಟ್ ಇವರ 99ನೇ ಕೃತಿ ‘ಕಪ್ಪೆ ಹಿಡಿಯುವವನ’ ಕಥಾ ಸಂಕಲನವನ್ನು ಶ್ರೀ ಬಿ. ರಾಮಚಂದ್ರ ಆಚಾರ್ಯ, 100ನೇ ಕೃತಿ ‘ಕನ್ನಡ ಕಾದಂಬರಿ ಮಾಲೆ’ಯನ್ನು ಕ.ಸಾ.ಪ. ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹಾಗೂ ‘ಹೊಸನೋಟಗಳ ಸಮಾಜ ವಿಮರ್ಶಕ ಸಾಹಿತಿ ಅ.ಗೌ. ಕಿನ್ನಿಗೋಳಿ’ ಎಂಬ 101ನೇ ಕೃತಿಯನ್ನು ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಇವರುಗಳು ಬಿಡುಗಡೆಗೊಳಿಸಲಿದ್ದಾರೆ. ಅ.ಗೌ. ಕಿನ್ನಿಗೋಳಿ ಅವರ ಮಗಳು ಜಯಂತಿ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ ಉಪಸ್ಥಿತರಿರುವರೆಂದು ಕಸಾಪ ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದ್ದಾರೆ.
ಅ.ಗೌ. ಕಿನ್ನಿಗೋಳಿ :
ಅ.ಗೌ. ಕಿನ್ನಿಗೋಳಿ ಕಾವ್ಯನಾಮದ ಅಚ್ಯುತಗೌಡ ಕಿನ್ನಿಗೋಳಿ (1921-1976) ಕರಾವಳಿಯ ಗಣ್ಯ ಕವಿ, ನಾಟಕಕಾರ, ಕಾದಂಬರಿಕಾರ. ದ.ಕ. ಜಿಲ್ಲೆಯ ಕಿನ್ನಿಗೋಳಿ ಎಂಬ ಊರಿನವರಾದ ಅವರು ಇಲ್ಲಿಯ ಲಿಟ್ಸ್ ಫ್ಲವರ್ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಖಂಡ ಕಾವ್ಯಗಳು, ದೃಶ್ಯಲಹರಿಗಳು, ಕಾದಂಬರಿಗಳು, ಕವನಗಳು, ವಿಮರ್ಶೆ ಇತ್ಯಾದಿ ಬರಹಗಳ ಕೊಟ್ಟಿದ್ದಾರೆ. ‘ಕಾವ್ಯ ಲಹರಿ’ (ಚಿತಾಗ್ನಿ ಪುನರ್ಮಿಲನ. ಮೊದಲ ಭಿಕ್ಷುಣಿ, ಕ್ಷಾತ್ರ ದರ್ಶನ, ಶಿವಲೇಶೈ ಖಂಡ ಕಾವ್ಯಗಳು), ‘ದೃಶ್ಯ ಲಹರಿ’ ರಂಗಕೃತಿಗಳು, ‘ಒಡ್ಡಿದ ಉರುಳು’ ಮತ್ತು ‘ಬಿಡುಗಡೆ ನಾಂದಿ’ ಎಂಬ ಕಾದಂಬರಿಗಳು; ‘ವತ್ಸ- ವಿಜಯ’ (ಮುದ್ದಣನ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ಕೃತಿಯ ಗದ್ಯ ರೂಪಾಂತರ) ಮತ್ತು ‘ಸರಸ – ವಿರಸ’ (ನಾಲ್ಕು ವಿನೋದ ಚಿತ್ರಗಳು) ಈ ಕೃತಿಗಳು ಅ. ಗೌ. ಕಿನ್ನಿಗೋಳಿ ಅವರ ಮುಖ್ಯ ಕೃತಿಗಳು.
ಡಾ. ಬಿ. ಜನಾರ್ದನ ಭಟ್ :
ಉಡುಪಿ ಜಿಲ್ಲೆಯ ಬೆಳ್ಮಣ್ ಇಲ್ಲಿ ಡಾ.ಬಿ. ಜನಾರ್ದನ ಭಟ್ ಇವರು ಇಂಗ್ಲೀಷ್ ಉಪನ್ಯಾಸಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೈಸೂರು ವಿ.ವಿ. ಇಂಗ್ಲೀಷ್ ಎಂ.ಎ. ಪದವಿ, ಇಂಗ್ಲೀಷಿನಲ್ಲಿ ಎಂ.ಫಿಲ್ ಪದವಿ, ಕನ್ನಡ ಎಂ.ಎ. ಪದವಿಗಳನ್ನು ಪಡೆದು, ಮಂಗಳೂರು ವಿವಿಯಿಂದ ಪಿಎಚ್.ಡಿ. ಪಡೆದಿದ್ದಾರೆ. ಪ್ರಶಸ್ತಿ ವಿಜೇತ 8 ಕಾದಂಬರಿಗಳ ಸಹಿತ 100ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಮೂರು ಕಾದಂಬರಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು ಸಿಕ್ಕಿವೆ. ವರ್ಧಮಾನ ಪ್ರಶಸ್ತಿ, ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ, ತುಮಕೂರಿನ ವೀಚಿ ಪ್ರಶಸ್ತಿ, ಮೂಡುಬಿದಿರೆ ಶಿವರಾಮ ಕಾರಂತ ಪುರಸ್ಕಾರ, ಬೆಂಗಳೂರಿನ ಮಾಸ್ತಿ ಕಾದಂಬರಿ ಪುರಸ್ಕಾರ, ಮುಂಬೈ ವ್ಯಾಸರಾಯ ಬಲ್ಲಾಳ ಕಾದಂಬರಿ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ ಇತ್ಯಾದಿಗಳನ್ನು ಪಡೆದಿದ್ದಾರೆ. ಡಾ. ಬಿ. ಜನಾರ್ದನ ಭಟ್ ಮಹತ್ವದ 100ನೇ ಕೃತಿ ಬಿಡುಗಡೆಯಾಗಲಿದೆ.