ಬೆಂಗಳೂರು : ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್ ಹುಳಿಯಾರು ಹಾಗೂ ಸೆಂಟರ್ ಸ್ಟೇಜ್ ಬೆಂಗಳೂರು ಇವರು ಕನ್ನಡ ಸಾಂಸ್ಕೃತಿಕ ಲೋಕದ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಅವರ ಹೆಸರಿನಲ್ಲಿ ನೀಡುತ್ತಿರುವ ‘ಸೆಂಟರ್ ಸ್ಟೇಜ್ ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’ಗೆ ಪ್ರಸಿದ್ಧ ರಂಗಕರ್ಮಿ, ಸುಳ್ಯದ ರಂಗಮನೆಯ ಡಾ. ಜೀವನ್ ರಾಂ ಸುಳ್ಯ ಹಾಗೂ ‘ಸೆಂಟರ್ ಸ್ಟೇಜ್ ಕಪ್ಪಣ್ಣ ಸಾಂಸ್ಕೃತಿಕ ಯುವ ಪ್ರಶಸ್ತಿ’ಗೆ ಸಂಘಟಕ ಹಾಗೂ ನಿರ್ದೇಶಕರಾದ ನರೇಶ್ ಡಿಂಗ್ರಿ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 13-02-2024ರಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯಲಿದೆ. ‘ಸೆಂಟರ್ ಸ್ಟೇಜ್ ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’ 50 ಸಾವಿರ ನಗದು ಹಾಗೂ ‘ಸೆಂಟರ್ ಸ್ಟೇಜ್ ಕಪ್ಪಣ್ಣ ಸಾಂಸ್ಕೃತಿಕ ಯುವ ಪ್ರಶಸ್ತಿ’ಯು 25 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಡಾ. ಜೀವನ್ ರಾಂ ಸುಳ್ಯ
ಜೀವನ್ ರಾಂ ಅವರು ಕಳೆದ 25 ವರ್ಷಗಳಿಂದ ರಂಗಭೂಮಿಯಲ್ಲಿ ದುಡಿಯುತ್ತಿದ್ದು, ಸುಳ್ಯದ ಹಳೆಗೇಟಿನಲ್ಲಿ ತನ್ನ ವಾಸದ ಮನೆಯನ್ನು ‘ರಂಗ ಮನೆ’ ಹೆಸರಿನಲ್ಲಿ ಸಾಂಸ್ಕೃತಿಕ ಕಲಾ ಕೇಂದ್ರವನ್ನಾಗಿಸಿ, ನಿರಂತರ ರಂಗ ಕಲೆಯ ತರಬೇತಿ ಹಾಗೂ ಪ್ರದರ್ಶನಗಳ ಮೂಲಕ ರಾಜ್ಯದ ಗಮನ ಸೆಳೆದವರು ಮತ್ತು ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಕಾರ್ಕಳದ ಯಕ್ಷರಂಗಾಯಣದ ಪ್ರಥಮ ನಿರ್ದೇಶಕರಾಗಿರುವ ಇವರು ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದಾರೆ.
ನರೇಶ್ ಡಿಂಗ್ರಿ
ರಾಯಚೂರು ಜಿಲ್ಲೆಯ ಆಶಾಪೂರ ಗ್ರಾಮದವರಾದ ನರೇಶ್ ಡಿಂಗ್ರಿ ಸತತ 17 ವರ್ಷಗಳಿಂದ ಬೀದಿ ನಾಟಕ, ನೀನಾಸಂ, ಆದಿಮ, ಜನಮನದಾಟ, ಮತ್ತು ಹಲವಾರು ರಂಗ ತಂಡಗಳಲ್ಲಿ ನಟ, ಸಂಗೀತಗಾರ, ತಂತ್ರಜ್ಞ ಹಾಗೂ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಬೆಂದು ಬೂದಿಯಾದವರು’, ‘ಬುದ್ಧನ ಬೆಳಕು’, ‘ಮಳೆ ಬೇಕ್ರಿ ಮಳೆ’, ‘ಕೆಂಡ ಬಿಟ್ಟ ಉಸಿರು’ ಹೀಗೆ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ.