ಇಳಕಲ್ : ಬೀದಿ ನಾಟಕ ಅಕಾಡೆಮಿ, ರಂಗ ಪರಿಮಳ ಹಾಗೂ ಸ್ನೇಹರಂಗದ ಸಹಯೋಗದಲ್ಲಿ ರಂಗಕರ್ಮಿ ಸಿ.ಜಿ. ಕೃಷ್ಣಸ್ವಾಮಿ (ಸಿ. ಜಿ. ಕೆ. ) ಸ್ಮರಣೆಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 22 ಜುಲೈ 2025ರಂದು ಇಳಕಲ್ ಇಲ್ಲಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ ಗುರುಮಹಾಂತ ಶ್ರೀಗಳು ಮಾತನಾಡಿ “ಮನರಂಜನೆಯೊಂದಿಗೆ ಮನಸ್ಸನ್ನು ಪ್ರಭಾವಿಸುವ ರಂಗಭೂಮಿಯು ಬದುಕಿನ ಕನ್ನಡಿಯಾಗಿದೆ. ಕಲೆಯ ಹಲವು ಸಾಧ್ಯತೆಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಮೊಬೈಲ್, ಟಿವಿ ಹಾಗೂ ಸಿನಿಮಾದಿಂದಾಗಿ ರಂಗಭೂಮಿಯ ವೈಭವ ಸ್ವಲ್ಪ ಕಡಿಮೆಯಾಗಿದೆ. ಜೀವಂತ ಹಾಗೂ ವಾಸ್ತವವನ್ನು ಮಾತ್ರ ತೋರಿಸುವ ರಂಗಭೂಮಿಯಲ್ಲಿ ನೈಜ ಕಲಾವಂತಿಕೆ ಇರುತ್ತದೆ. ರಂಗಭೂಮಿ ಹಿನ್ನಲೆಯ ಸಿನೆಮಾ ನಟರು ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಪ್ರೇಕ್ಷಕರು ನಾಟಕ ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು” ಎಂದು ಹೇಳಿದರು.
ಎಲೆ ಮರೆಯ ಕಾಯಿಯಂತಿದ್ದು ರಂಗಭೂಮಿಯಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದೆ ಸುಗುಣಾತಾಯಿ ಸಪ್ಪಂಡಿ, ಬಿಬಿಜಾನ್ ಕಂದಗಲ್ಲ ಹಾಗೂ ತಬಲಾ ವಾದಕ ಅಮರೇಶ ಹಡಪದ ಇವರಿಗೆ ಸಿಜೆಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು..
ಮುಖ್ಯ ಅತಿಥಿಯಾಗಿ ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ, ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಬಲವಂತಗೌಡ ಪಾಟೀಲ ಉಪಸ್ಥಿತರಿದ್ದರು. ಸಿಜಿಕೆ ಬೀದಿ ನಾಟಕ ಅಕಾಡೆಮಿಯ ಬಾಗಲಕೋಟೆ ಜಿಲ್ಲಾ ಸಂಚಾಲಕ, ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಪ್ರಾಸ್ತಾವಿಕವಾಗಿ ಮಾತನಾಡಿದರು.