ಚಾಮರಾಜನಗರ : ರಂಗವಾಹಿನಿ, ಕರ್ನಾಟಕ ರಂಗ ಪರಿಷತ್ತು, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಕಲಾವಿದರ ಸಂಘ ಇವರ ಸಹಯೋಗದಲ್ಲಿ ದಿನಾಂಕ 27-02-2024 ಮತ್ತು ದಿನಾಂಕ 28-02-2024ರಂದು ಸಂಜೆ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಸಿಜಿಕೆ ನಾಟಕೋತ್ಸವ -2024 ಹಾಗೂ ‘ಸಿಜಿಕೆ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕೆ. ವೆಂಕಟರಾಜು ಮಾತನಾಡಿ, “ಸಿಜಿಕೆ ಎಂದರೆ ಸಿ.ಜಿ. ಕೃಷ್ಣಸ್ವಾಮಿ. ಅವರು ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದರು. ಸಿಜಿಕೆ ಎಂದರೆ ನಾಟಕ. ಅವರು ಗಾಂಧಿ ಭವನ ನಿರ್ದೇಶಕರು ಆಗಿದ್ದರು. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ದೊಡ್ಡ ಚಳವಳಿಯಾದಾಗ ರಂಗಭೂಮಿಗೆ ಬಂದವರು ಸಿಜೆಕೆ. ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಮ್ಮ ಸ್ವಶಕ್ತಿಯಿಂದ ಮೇಲೆ ಬಂದು ರಂಗಭೂಮಿಯನ್ನೂ ಬೆಳೆಸಿ, ಹಲವಾರು ರಂಗ ಕಲಾವಿದರಿಗೆ ದಾರಿದೀಪವಾಗಿದ್ದರು” ಎಂದರು.
ಸಮಾರಂಭ ಉದ್ಘಾಟಿಸಿದ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರು ಮಾತನಾಡಿ “ರಂಗಭೂಮಿಯ ದೈತ್ಯ ಪ್ರತಿಭೆ ಸಿಜಿಕೆಯವರು ರಂಗಪರಂಪರೆ ಸಂಕೇತ. ಸಿಜಿಕೆ ಕರ್ನಾಟಕ ರಂಗಭೂಮಿಯ ದೃತ್ಯ ಪ್ರತಿಭೆ. ರಂಗಭೂಮಿ ಕಲಾವಿದರಿಗೆ ಸಿಜಿಕೆ ಹೆಸರು ಚಿರಪರಿಚಿತ. ಅಂಥ ಮಹಾನ್ ವ್ಯಕ್ತಿಯನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, “ಸಿಜಿಕೆ ರಂಗಭೂಮಿಯನ್ನೆ ಉಸಿರಾಗಿ ಜೀವಿಸಿದವರು. ಒಡಲಾಳ ನಾಟಕದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿ ಉಮಾಶ್ರೀ ಅವರನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ರಂಗಭೂಮಿ ಸಂಘಟಕರು, ನಿರ್ದೇಶಕರನ್ನು, ರಂಗನಟರನ್ನು ಕೊಡುಗೆಯಾಗಿ ಕೊಟ್ಟಂತಹ ಕೀರ್ತಿ ಸಿಜಿಕೆ ಅವರಿಗೆ ಸಲ್ಲುತ್ತದೆ” ಎಂದರು.
ಇದೇ ಸಂದರ್ಭದಲ್ಲಿ ಮೈಸೂರಿನ ಪ್ರಸಿದ್ದ ಬೆನ್ನುಹುರಿ ಮೂಳೆ ರೋಗ ತಜ್ಞ ಡಾ. ಎನ್.ಎಸ್. ಮೋಹನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಘಟಂಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಸ್ಗರ್, ಗಾನಗಂಧರ್ವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕಲಾವೇದಿಕೆ ಗೌರವ ಅಧ್ಯಕ್ಷ ಸುರೇಶ್ ಗೌಡ, ಹರದನಹಳ್ಳಿ ನಟರಾಜು ಇತರರು ಹಾಜರಿದ್ದರು.
ರಾಜ್ಯಮಟ್ಟದ ಸಿಜಿಕೆ ನಾಟಕೋತ್ಸವ ಅಂಗವಾಗಿ ಬಳ್ಳಾರಿ ಜಿಲ್ಲೆ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆ ಪ್ರಸ್ತುತ ಪಡಿಸಿದ ಮೊದಲ ದಿನದ ನಾಟಕ ಹೆಚ್.ಎನ್. ಭೀಮೇಶ್ ಇವರ ನಿರ್ದೇಶನದ ‘ಶ್ರೀಕೃಷ್ಣ ಸಂಧಾನ’ ಎಂಬ ನಗೆ ನಾಟಕ ಹಾಗೂ ಎರಡನೇ ದಿನ ಶ್ರೀ ಜನದೇಶ್ ಆರ್. ಜಾಣಿ ನಿರ್ದೇಶನದ ‘ಅಕ್ಕ ನಾಗಲಾಂಬಿಕೆ’ ಜನ-ಮನ ಸೂರೆಗೊಂಡಿತು.