ಕೋಟ : ಕೋಟೇಶ್ವರದ ಎನ್.ಆರ್.ಎ.ಎಮ್.ಎಚ್. ಪ್ರಕಾಶನದ ವತಿಯಿಂದ ಕೋಟದ ಮಿತ್ರಮಂಡಳಿಯ ಸಹಕಾರದೊಂದಿಗೆ ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ. ಕಾರಂತ ಸಭಾಂಗಣದಲ್ಲಿ ದಿನಾಂಕ 07 ಜನವರಿ 2026ರಂದು ‘ವರ್ಣತಂತು’ ಕಾದಂಬರಿಯ ಲೇಖಕಿ ರಮ್ಯ ಎಸ್. ರವರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಇವರು ಪ್ರಶಸ್ತಿಯ ಮಹತ್ವದ ಕುರಿತು ಮಾತನಾಡಿ, ಯಾವುದೇ ಬಣಕ್ಕೆ ಸಾಹಿತ್ಯಕ ವಲಯಕ್ಕೆ ಸೇರದಿರುವ ಮೂವರು ಸಾಮಾನ್ಯ ಓದುಗರ ಅಭಿಪ್ರಾಯದೊಂದಿಗೆ ಪ್ರಶಸ್ತಿಗೆ ಪಾತ್ರವಾಗುವ ಕೃತಿಯ ಆಯ್ಕೆಯು ಸಂಪೂರ್ಣವಾಗಿ ಪಕ್ಷಪಾತ ರಹಿತವಾಗಿರುತ್ತದೆ ಎಂಬುವುದೇ ಮುಖ್ಯ. ಅಂತೆಯೇ ಹಲವರ ಓದಿಗೆ ಪರ್ಯಾಯವಾಗಿ ಕಾರಣವಾಗುವ ಸ್ಪರ್ಧಾ ಪ್ರಾಯೋಜಕರು ಅಭಿನಂದನಾರ್ಹರು” ಎಂದರು.

“ಬದುಕು ಸವಾಲು ಗಳನ್ನು ಒಡ್ಡುತ್ತಾ ಹೋದ ಹಾಗೆ ವಿಜ್ಞಾನ ಹೊಸ ಉತ್ತರಗಳನ್ನು ಹುಡುಕಿ ಕೊಡುತ್ತಾ ಹೋಗುವ ಚೋದ್ಯವನ್ನು ರಮ್ಯ ಎಸ್.ರವರ ‘ವರ್ಣತಂತು’ ಕಾದಂಬರಿ ತೆರೆದಿಡುತ್ತದೆ. ಸಾಹಿತ್ಯ ಇರುವುದು ಮನರಂಜನೆಗಾಗಿ ಮಾತ್ರವಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಕೆಲಸವನ್ನು ಈ ಕಾದಂಬರಿಯು ಮಾಡಿದಂತಿದೆ” ಎಂದು ಬೆಳಗೋಡು ರಮೇಶ ಭಟ್ಟರು ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಚಡಗರ ಸಂಸ್ಮರಣೆಗೈದರು. ಚಡಗರ ಸುಪುತ್ರ ಬೆಂಗಳೂರಿನ ಶೇಷನಾರಾಯಣ ಚಡಗ ಶುಭಾಶಂಸನೆಗೈದರು. ಪ್ರಶಸ್ತಿ ಪ್ರಾಯೋಜಕ ಕೋಟೇಶ್ವರದ ಡಾ. ಎನ್. ಭಾಸ್ಕರ ಆಚಾರ್ಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಪಿ. ಶೀಪತಿ ಹೇರ್ಳೆ ವಂದಿಸಿ, ನಿವೃತ್ತ ಶಿಕ್ಷಕಿ ಕಮಲಾ ಪ್ರಾರ್ಥನೆಗೈದರು. ಬ್ಯಾಂಕ್ ನಿವೃತ್ತ ಉದ್ಯೋಗಿ ಮಂಜುನಾಥ ಉಪಾಧ್ಯ ನಿರೂಪಿಸಿ ಸಹಕರಿಸಿದರು. ‘ಸ್ಥಿತಿ ಗತಿ’ ಪ್ರಕಾಶಕಿ ಡಾ. ಸಬಿತಾ ಆಚಾರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
