ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿರಿಯ ಸಾಹಿತಿ, ಚಿಂತಕ, ವಿಮರ್ಶಕ, ಹೋರಾಟಗಾರ ಚಂದ್ರಶೇಖರ ಪಾಟೀಲ್ ಅವರ 84ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಪುಷ್ಪನಮನ ಕಾರ್ಯಕ್ರಮ ಪರಿಷತ್ತಿನ ಪಂಪ ಸಭಾಂಗಣದಲ್ಲಿ ದಿನಾಂಕ : 19-06-2023ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಮಾತನಾಡುತ್ತಾ “ಕನ್ನಡವನ್ನು ಸದಾ ತಮ್ಮ ಸಂಗಡ ಇಟ್ಟುಕೊಂಡಿದ್ದ ಚಂದ್ರಶೇಖರ ಪಾಟೀಲರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಹತ್ವದ ಕೊಡುಗೆಯನ್ನು ನೀಡುವುದರ ಜೊತೆ ‘ಕನ್ನಡ ಕನ್ನಡ ಬರ್ರೀ ನಮ್ಮ ಸಂಗಡ’ ಎಂಬ ಕವಿತೆಯನ್ನು ನೀಡುವ ಮೂಲಕ ಸಮಸ್ತ ಕನ್ನಡ ನಾಡನ್ನು ಒಂದಾಗಿಸುವ ಮಹತ್ತರ ಕಾರ್ಯವನ್ನು ಮಾಡಿದ್ದ ಇವರು, ಕನ್ನಡ ನಾಡು, ನುಡಿ ಸಮುದಾಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದರು. ತಮ್ಮ ನಿಷ್ಠೂರ ವಾದದ ಮೂಲಕವೇ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಚಂಪಾರವರು ನೆಲೆ ನಿಂತಿದ್ದ ಚಂಪಾರವರು ಮೈಸೂರಿನಲ್ಲಿ ನಡೆದ 83ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದು, ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳಲ್ಲಿ ಗುರುತಿಸಿಕೊಂಡವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭಿಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲೇ ತಮ್ಮ ಕಾವ್ಯ ಹಾಗೂ ನಾಟಕಗಳ ಮೂಲಕ ಪ್ರಸಿದ್ಧರಾಗುತ್ತಾ ಬಂದವರು. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಗೋಕಾಕ ಚಳವಳಿ ಸೇರಿದಂತೆ ಅನೇಕ ಜನಪರ ಚಳವಳಿಗಳಲ್ಲೂ ತಮನ್ನು ತೊಡಗಿಸಿಕೊಂಡ ಇವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 26 ದಿನ ಜೈಲುವಾಸವನ್ನೂ ಅನುಭವಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂಪಾ ಅವರು ಶನಿವಾರದ ಪುಸ್ತಕ ಸಂತೆ ಏನ್ನುವ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದರು ಮತ್ತು ಕನ್ನಡ ಪುಸ್ತಕ ಪ್ರಕಾಶಕರನ್ನು ಮತ್ತು ಮಾರಾಟಗಾರರನ್ನು ಆಹ್ವಾನಿಸಿ ರಿಯಾಯಿತಿ ದರದಲ್ಲಿ ಓದುಗರಿಗೆ ಪುಸ್ತಕಗಳು ದೊರೆಯುವಂತೆ ವ್ಯವಸ್ಥೆ ಮಾಡಿದ್ದರು” ಎಂದು ಚಂಪಾ ಅವರ ಕುರಿತು ಅಭಿಮಾನ ವ್ಯಕ್ತಪಡಿಸಿದರು.
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಬೋಧನಾ ಮಾಧ್ಯಮವಾಗಿರಬೇಕು, ಬೇಕಿದ್ದರೆ ಇಂಗ್ಲಿಷನ್ನು ಪ್ರಾಥಮಿಕ 5ನೇ ತರಗತಿಯಿಂದ (ಮಿಡ್ಲ್ ಸ್ಕೂಲ್) ಕಲಿಸಬೇಕು, ಕರ್ನಾಟಕದಲ್ಲಿ ಕೇಂದ್ರ ಪಠ್ಯಕ್ರಮದ (ಹಿಂದಿ ಇಂಗ್ಲಿಷ್) ಮಾಧ್ಯಮಗಳ ಶಾಲೆಗಳಲ್ಲಿ ಕರ್ನಾಟಕದಲ್ಲಿ ಕನ್ನಡವನ್ನು ಕಲಿಸಬೇಕು- ಎಂಬ ವಿಷಯಗಳ ಬಗ್ಗೆ ಚಂಪಾ ಅವರು ಸರ್ಕಾರದೊಡನೆ ಹೋರಾಡಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ,ರಾಮಲಿಂಗ ಶೆಟ್ಟಿ ಅವರು ಹೇಳಿದರು.
ಪರಿಷತ್ತಿನ ಇನ್ನೋರ್ವ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು ಅವರು ಮಾತನಾಡಿ ಚಂಪಾ ಅವರ ನೆನಪಿನ ಶಕ್ತಿಯನ್ನು ಯಾರಾದರೂ ಮೆಚ್ಚಿಕೊಳ್ಳಲೇ ಬೇಕು. ತಾವು ಆರಂಭಿಸಿದ ʻಸಂಕ್ರಮಣʼ ಪತ್ರಿಕೆಯನ್ನು ಸತತ 50 ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿ, ಸಮರ್ಥವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಪುಸ್ತಕಗಳನ್ನು ಕ್ರಯ ಮಾಡಿಯೇ ಓದಬೇಕು ಎನ್ನುವ ಸ್ಪಷ್ಟ ನಿಲುವನ್ನು ಸಮಾಜಕ್ಕೆ ತಿಳಿಸಿ ಹೇಳುತ್ತಲೇ ಇದ್ದರು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್. ಪಟೇಲ್ ಪಾಂಡು, ಪರಿಷತ್ತಿನ ವಿಶೇಷ ಆಡಳಿತಾಧಿಕಾರಿ ಸಿ. ಚಿಕ್ಕ ತಿಮ್ಮಯ್ಯ ಮತ್ತು ಪರಿಷತ್ತಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.