ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುತ್ತಿರುವ ಜನಪದ ಕಲೆಗಳ ಸರಣಿಯ 15ನೆಯ ಕಾರ್ಯಾಗಾರದಲ್ಲಿ ಕರ್ನಾಟಕದ ಹೆಮ್ಮೆಯ ಚನ್ನಪಟ್ಟಣದ ಗೊಂಬೆಗಳ ತಯಾರಿಕೆಯ ಕಾರ್ಯಾಗಾರವನ್ನು ದಿನಾಂಕ 04 ಜನವರಿ 2025ರಿಂದ 06 ಜನವರಿ 2025ರವರೆಗೆ ಉಡುಪಿಯ ಬಡಗುಪೇಟೆಯಲ್ಲಿ ಮಣಿಪಾಲ ವಿಶ್ವವಿದ್ಯಾಲಯ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ.
ನೈಸರ್ಗಿಕವಾದ ವರ್ಣಲೇಪನವುಳ್ಳ ಹಗುರವಾದ ಈ ಮರದ ಆಟಿಕೆಗಳು ಮತ್ತು ಗೊಂಬೆಗಳು ಈ ದೇಶೀಯ ಕಲೆಯ ವೈಶಿಷ್ಟ್ಯವಾಗಿದ್ದು, ಈ ಆಟಿಕೆಗಳು ಮಕ್ಕಳ ಆಟಕ್ಕಾಗಿ ಹಾಗೂ ಶೈಕ್ಷಣಿಕ ಬಳಕೆಗಾಗಿ ಬಹಳಷ್ಟು ಖ್ಯಾತಿಯನ್ನು ಪಡೆದಿವೆ. ಚನ್ನಪಟ್ಟಣದ ಕಲಾವಿದೆಯರಾದ ಶ್ರೀಮತಿ ಸುಕನ್ಯಾ ಹಾಗೂ ಶ್ರೀಮತಿ ಕಲಾ ಇವರುಗಳು ಈ ಕಲೆಯನ್ನು ಕಾರ್ಯಾಗಾರದಲ್ಲಿ ಕಲಿಸಿಕೊಡುತ್ತಿದ್ದು, ಉಡುಪಿಯ ಕಲಾಪ್ರಿಯರಿಗೆ ನವ ವರ್ಷಕ್ಕೆ ಹೊಸತೊಂದು ಕಲೆಯನ್ನು ಕಲಿಯುವ ಅವಕಾಶ ಲಭಿಸಲಿದೆ.
ತಿರುಗಣೆ ತಂತ್ರಗಾರಿಕೆಯಲ್ಲಿ ಮರದ ಅಲಂಕೃತ ವಿನ್ಯಾಸಗಳನ್ನು ರಚಿಸಿಕೊಂಡು, ಅಂತೆಯೇ ವರ್ಣ ಲೇಪಿಸುವ ಈ ವಿಧಾನ ಪರ್ಶಿಯನ್ ಆಟಿಕೆಗಳ ಪ್ರಭಾವದಿಂದ ರೂಪಿಸಲ್ಪಟ್ಟಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸುವವರು ದಿನದ ಅಂತ್ಯದಲ್ಲಿ ತಮ್ಮದೇ ಕೈಯಲ್ಲಿ ಮೂಡಿದ ಚನ್ನಪಟ್ಟಣದ ಗೊಂಬೆಯೊಂದನ್ನು ಮನೆಗೊಯ್ಯಲಿದ್ದಾರೆ. ದಿನಾಂಕ 04 ಜನವರಿ 2025ರಂದು ಕಪ್ ಆ್ಯಂಡ್ ಬಾಲ್ ಅಥವಾ ಹಕ್ಕಿ, ದಿನಾಂಕ 05 ಜನವರಿ 2025ರಂದು ಗೊಂಬೆಗಳು ಮತ್ತು ದಿನಾಂಕ 06 ಜನವರಿ 2025ರಂದು ‘ಆಡಿಸಿ ನೋಡು ಬೀಳಿಸಿ ನೋಡು’ ಮುಂತಾದ ಗೊಂಬೆಗಳ ತಯಾರಿ ದಿನಕ್ಕೊಂದರಂತೆ ಈ ಕಾರ್ಯಾಗಾರಗಳಲ್ಲಿ ಪರಿಚಯಿಸುತ್ತಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 9855650544 ಸಂಯೋಜಕರಾದ ಡಾ. ಜನಾರ್ದನ ಹಾವಂಜೆಯವರನ್ನು ಸಂಪರ್ಕಿಸಬಹುದು.