ಬದಿಯಡ್ಕ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ವತಿಯಿಂದ ದಿನಾಂಕ 01 ಮಾರ್ಚ್ 2025ರಂದು ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ‘ದತ್ತಿ ಉಪನ್ಯಾಸ ಮತ್ತು ಕವಿ ಕಾವ್ಯ ಸಂವಾದ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
‘ಎಂ.ಕೆ. ಜಿನಚಂದ್ರನ್ ದತ್ತಿ ಉಪನ್ಯಾಸ’ದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ’ ಎಂಬ ವಿಷಯದ ಕುರಿತು ಮಾತನಾಡಿದ ಖ್ಯಾತ ವಾಗ್ಮಿ ಶ್ರೀಮತಿ ಆಯಿಶಾ ಪೆರ್ಲ “ಕನ್ನಡ ಸಾಹಿತ್ಯಕ್ಕೆ ಜೈನಕವಿಗಳು ನೀಡಿದ ಕೊಡುಗೆ ಅಪಾರ. ಹತ್ತನೇ ಶತಮಾನದ ಜೈನ ಕವಿಗಳು ತಮ್ಮ ಗ್ರಂಥಗಳಲ್ಲಿ ಒಂದನ್ನು ಧರ್ಮಕ್ಕೂ ಇನ್ನೊಂದನ್ನು ಲೌಕಿಕಕ್ಕೂ ಮೀಸಲಾಗಿರಿಸಿದ್ದಾರೆ. ಲೌಕಿಕ ಕಾವ್ಯಗಳಲ್ಲಿ ಪಂಪ, ರನ್ನ, ಪೊನ್ನರು ತಮ್ಮ ಆಶ್ರಯದಾತ ಅರಸರನ್ನು ಪುರಾಣ ಪುರುಷರನ್ನಾಗಿ ಕಲ್ಪಿಸಿಕೊಂಡು ಕಾವ್ಯನಾಯಕರನ್ನಾಗಿ ಮೆರೆಸಿದ್ದಾರೆ. ಆಡಳಿತ ವರ್ಗ ಮತ್ತು ಸಾಹಿತ್ಯ ಯಾವುದೇ ಪೂರ್ವಾಗ್ರಹ ಮತ್ತು ಆಮಿಷಗಳಿಗೆ ಒಳಗಾಗದೆ ಸಾಮರಸ್ಯದಿಂದ ಬೆರೆತು ಕಾರ್ಯನಿರ್ವಹಿಸಿದರೆ ಕಲೆ ಸಂಸ್ಕೃತಿಗಳ ಅಭಿವೃಧ್ಧಿ ಸಾಧ್ಯ. ಪಂಪಯುಗದಲ್ಲಿ ಕಾವ್ಯ ಸೃಷ್ಟಿಯನ್ನು ಮಾಡಿದವರ ಕೃತಿಗಳಲ್ಲಿ ಶೌರ್ಯ ಮತ್ತು ಸಂಸ್ಕೃತಿ ಸ್ಥಾಯಿಯಾಗಿತ್ತು. ಈ ಮನೋಭಾವವನ್ನು ಆಧುನಿಕ ಕಾಲದಲ್ಲೂ ಮುಂದುವರಿಸಿಕೊಂಡು ಹೋಗಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.
‘ಶ್ರೀಮತಿ ಕಮಲಮ್ಮ ದತ್ತಿ ಉಪನ್ಯಾಸ’ದಲ್ಲಿ ಅಧ್ಯಾಪಕ, ಲೇಖಕ ಡಾ. ಸುಭಾಷ್ ಪಟ್ಟಾಜೆಯವರು ‘ಕನ್ನಡ ಕಥಾ ಸಾಹಿತ್ಯಕ್ಕೆ ಕಾಸರಗೋಡಿನ ಕತೆಗಾರರ ಕೊಡುಗೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡುತ್ತಾ “ಕನ್ನಡ ಕಥಾಪ್ರಪಂಚಕ್ಕೆ ಕಾಸರಗೋಡಿನ ಕತೆಗಾರರು ನೀಡಿದ ಕೊಡುಗೆ ಮಹತ್ತರವಾದುದು. ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳಲ್ಲಿ ಕತೆಗಳನ್ನು ರಚಿಸಿದ ಬೇಕಲ ರಾಮನಾಯಕ, ಎಂ. ವ್ಯಾಸ, ಕೆ.ವಿ. ತಿರುಮಲೇಶ್, ಜನಾರ್ದನ ಎರ್ಪಕಟ್ಟೆ ಮೊದಲಾದ ಲೇಖಕರು ಕನ್ನಡದ ಕತೆಗಳಿಗೆ ಹೊಸ ಶಕ್ತಿ ಮತ್ತು ಕಸುವನ್ನು ತುಂಬಿದರು. ಶೈಲಿ, ವಸ್ತು ಮತ್ತು ತಂತ್ರಗಳಲ್ಲಿ ಕನ್ನಡನಾಡಿನ ಇತರ ಕತೆಗಾರರಿಗಿಂತ ಭಿನ್ನತೆಯನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯಕ್ಕೆ ವಿಶೇಷ ಓಜಸ್ಸು ತೇಜಸ್ಸುಗಳನ್ನು ನೀಡಿದ ಅವರ ಕೃತಿಗಳಿಗೆ ಸಾಹಿತ್ಯ ಚರಿತ್ರೆಯಲ್ಲಿ ವಿಶೇಷ ಸ್ಥಾನ ದೊರೆಯಬೇಕು” ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಕನ್ನಡಪರ ಹೋರಾಟಗಾರ್ತಿ ನಯನಾ ಗಿರೀಶ್ ಅಡೂರು ಇವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಬಳಿಕ ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಕವಿತಾ ಕೌತುಕ ಸರಣಿ 2ರ ‘ಕವಿ ಕಾವ್ಯ ಸಂವಾದ’ ಕಾರ್ಯಕ್ರಮ ನಡೆಯಿತು. ಥೋಮಸ್ ಡಿ’ಸೋಜ, ವೆಂಕಟ ಭಟ್ ಎಡನೀರು, ಎಸ್.ಎನ್. ಭಟ್ ಸೈಪಂಗಲ್ಲು, ಜ್ಯೋತ್ಸ್ನಾ ಕಡಂದೇಲು, ನರಸಿಂಹ ಭಟ್ ಏತಡ್ಕ, ರಾಜಾರಾಮ ವರ್ಮ ವಿಟ್ಲ, ಸುಭಾಷ್ ಪೆರ್ಲ, ವನಜಾಕ್ಷಿ ಚೆಂಬ್ರಕಾನ, ಧನ್ಯಶ್ರೀ ಸರಳಿ, ಮಂಜುಶ್ರೀ ನಲ್ಕ, ರಂಜಿತಾ ಪಟ್ಟಾಜೆ, ಸುಶೀಲ ಪದ್ಯಾಣ, ಶಶಿಕಲಾ ಕುಂಬಳೆ ಕವನಗಳನ್ನು ವಾಚಿಸಿದರು. ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಮತ್ತು ಕವಯತ್ರಿ ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮವನ್ನು ನಿರೂಪಿಸಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳರ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಸುಂದರ ಬಾರಡ್ಕ ವಂದಿಸಿದರು.