ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸುವ ನಾಡೋಜ ಹಂಪನಾ ವಿರಚಿತ ದೇಸೀ ಕಾವ್ಯದ ರಂಗರೂಪ ‘ಚಾರುವಸಂತ’ ನಾಟಕದ ಪ್ರದರ್ಶನವನ್ನು 18 ಆಗಸ್ಟ್ 2025 ರಿಂದ 21 ಆಗಸ್ಟ್ 2025ರ ವರೆಗೆ ನಾಲ್ಕುದಿನ ಸಂಜೆ 6. 45ರಿಂದ ಮೂಡುಬಿದಿರೆಯ ಸ್ಕೌಟ್ಸ್- ಗೈಡ್ಸ್ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.
ಡಾ. ಜೀವನ್ ರಾಂ ಸುಳ್ಯ ನಿರ್ದೇಶಿಸಿದ ಈ ನಾಟಕಕ್ಕೆ ಡಾ. ನಾ. ದಾಮೋದರ ಶೆಟ್ಟಿಯವರು ರಂಗರೂಪ ನೀಡಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಯಶಸ್ವೀ 26 ಪ್ರದರ್ಶನಗಳನ್ನು ಕಂಡ ಚಾರುವಸಂತ ನಾಟಕವು ಕನ್ನಡ ರಂಗಭೂಮಿಯಲ್ಲಿ ಬಹುಬೇಡಿಕೆಯ ದೃಶ್ಯಕಾವ್ಯವಾಗಿದೆ.
ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ಆರಂಭವಾಗುವ ನಾಟಕಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಹೇಳಿದ್ದಾರೆ.
17 ಭಾಷೆಗಳಿಗೆ ಅನುವಾದಗೊಂಡಿರುವ ಹಂಪನಾರ ಮಹಾಕಾವ್ಯ ‘ಚಾರುವಸಂತ’ವು ಆಳ್ವಾಸ್ ನ ಹೆಮ್ಮೆಯ ರಂಗ ಪ್ರಯೋಗ. ದೇಶದ ಪ್ರಾಚೀನ ಕಥಾ ಪರಂಪರೆಯಲ್ಲಿ ಚಾರುದತ್ತನ ಕಥೆಗೆ ವಿಶಿಷ್ಠ ಸ್ಥಾನವಿದೆ. ಕ್ರಿಸ್ತಪೂರ್ವದಿಂದ ತೊಡಗಿ ಜೈನ- ಅಜೈನ ಎಂಬ ಭೇದಭಾವವಿಲ್ಲದೆ ಈ ಕಥೆಯನ್ನು ಪ್ರೇರಣೆಯಾಗಿಟ್ಟುಕೊಂಡು ಹಲವು ಮಂದಿ ಹಲವು ರೀತಿಯಲ್ಲಿ ಕಾವ್ಯಗಳನ್ನು ರಚಿಸಿದ್ದಾರೆ. ಪ್ರಸ್ತುತ ಹಂಪನಾರವರು ಶೃಂಗಾರ ಮತ್ತು ಸಾಹಸ ಪ್ರಧಾನವಾದ ಈ ಕಥೆಯ ಮೂಲಕ ವರ್ತಮಾನದ ತಲ್ಲಣಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದಾರೆ.