ಮೂಡುಬಿದಿರೆ : ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ಪ್ರಸ್ತುತ ಪಡಿಸಿದ ‘ಚಾರುವಸಂತ’ ನಾಟಕವನ್ನು ದಿನಾಂಕ 29-10-2023ರಂದು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ ಕೃತಿಕಾರ ಡಾ. ಹಂ.ಪ. ನಾಗರಾಜಯ್ಯ (ಹಂಪನಾ) ಅವರು ಮಾತನಾಡುತ್ತಾ “ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದ ಕುಟುಂಬದ ಬಿಂಬ ಚಾರುವಸಂತ. ಇದು ನನ್ನ ಕನಸು ನನಸಾದ ದಿನ. ನಾನು ಯುವಕ ಅಲ್ಲ. ಆದರೆ ಯುವಕನಾಗಲು ಬಯಸುತ್ತೇನೆ. ಭಾರತೀಯ ಕುಟುಂಬಗಳಲ್ಲಿ ಮಾತ್ರವಲ್ಲ, ಎಲ್ಲಾ ಕುಟುಂಬಗಳಲ್ಲೂ ಏಳುಗಾಲ ಹಾಗೂ ಬೀಳುಗಾಲ ಇರುತ್ತದೆ. ಏಳು ಬೀಳುಗಳ ಜೀವನದ ಕಥನವೇ ಚಾರುವಸಂತ. ಎಲ್ಲಾ ಧರ್ಮ, ಮತವನ್ನು ಗೌರವಿಸಬೇಕು. ದ್ವೇಷ, ಅಸೂಯೆ ಬಿಡಬೇಕು. ಮೋಹನ ಆಳ್ವ ಅವರ ಅಂತರಂಗಕ್ಕೆ ಬಿದ್ದ ಯಾವುದೇ ಕಲೆಯಾದರೂ ಕೃತಿಯಾಗುತ್ತದೆ” ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, “ಕೃತಿಗಳು ಹೆಚ್ಚು ಮಾತನಾಡಬೇಕು. ಪರಿಸರ ರಕ್ಷಣೆಯ ಮಹತ್ವ ಮತ್ತು ಸುಖ-ದುಖವನ್ನು ಸಮಾನವಾಗಿ ಸ್ವೀಕರಿಸಿ ಎಂಬ ಸಂದೇಶ ನಾಟಕದಲ್ಲಿದೆ” ಎಂದರು. ಹಂಪನಾ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆ ವಹಿಸಿದ್ದರು. ಅವರ ಪತ್ನಿ ಕಮಲಾ ಹಂಪನಾ ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಮಾತನಾಡಿ, “2003ರಲ್ಲಿ ಹಂಪನಾ ಬರೆದ ಚಾರುವಸಂತವನ್ನು ಡಾ. ಎಂ.ಮೋಹನ ಆಳ್ವ ಅವರ ಆಶಯದಂತೆ ನಿರ್ದೇಶಿಸಲಾಗಿದೆ. ರಂಗಕರ್ಮಿ ಡಾ. ನಾ.ದಾ. ಶೆಟ್ಟಿ ರಂಗರೂಪ ನೀಡಿದ್ದಾರೆ. ಸುಮಾರು ಎರಡು ವರ್ಷಗಳ ಈ ಪಯಣ, ಮೂಡುಬಿದಿರೆ ಮೂಲಕ ರಾಜ್ಯದಾದ್ಯಂತ ತಿರುಗಾಟ ನಡೆಸಲಿದೆ” ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹಮ್ಮದ್ ಸದಾಕತ್ ಉಪಸ್ಥಿತರಿದ್ದರು. ಉಪನ್ಯಾಸಕ ವೇಣುಗೋಪಾಲ ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹದಿನಾರು ಭಾಷೆಗಳಿಗೆ ಅನುವಾದಗೊಂಡಿರುವ ಸಾಹಿತಿ ಹಂಪ ನಾಗರಾಜಯ್ಯ ಅವರ ದೇಸಿ ಮಹಾಕಾವ್ಯ ‘ಚಾರುವಸಂತ’ವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಲಾವಿದರು ಹಂಪನಾ ಅವರ ಸಮ್ಮುಖದಲ್ಲಿ ಮನೋಜ್ಞವಾಗಿ ನಾಟಕದ ಪ್ರಥಮ ಪ್ರದರ್ಶನ ನೀಡಿದರು.
ಚಾರುವಸಂತ ನಾಟಕವು ದಿನಾಂಕ 31-10-2023ರಂದು ಮೈಸೂರಿನ ಕಲಾಮಂದಿರ, ದಿನಾಂಕ 02-11-2023ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ದಿನಾಂಕ 04-11-2023ರಂದು ಗೌರಿಬಿದನೂರಿನ ಡಾ.ಎಚ್.ಎನ್. ಕಲಾಮಂದಿರ, ದಿನಾಂಕ 06-11-2023ರಂದು ತುಮಕೂರಿನ ಗುಬ್ಬಿ ವೀರಣ್ಣ ಕಲಾ ಮಂದಿರ, ದಿನಾಂಕ 08-11-2023ರಂದು ಚಿತ್ರದುರ್ಗದ ತ.ರಾ.ಸು. ರಂಗಮಂದಿರ, ದಿನಾಂಕ 10-11-2023ರಂದು ದಾವಣಗೆರೆಯ ಮಲ್ಲಿಕಾರ್ಜುನ ರಂಗಮಂದಿರ, ದಿನಾಂಕ 12-11-2023ರಂದು ಧಾರವಾಡದ ಡಾ. ಪಾಟೀಲ ಪುಟ್ಟಪ್ಪ ಸಭಾಭವನ ಹಾಗೂ ದಿನಾಂಕ 15-11-2023ರಂದು ಸುಳ್ಯದ ರಂಗಮನೆಯಲ್ಲಿ ಪ್ರದರ್ಶನಗೊಳ್ಳಲಿದೆ.