ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ‘ಚಾವುಂಡರಾಯ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭವು ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ದಿನಾಂಕ 28-06-2024ರಂದು ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಮಾತನಾಡಿ “ಕನ್ನಡ ಸಾಹಿತ್ಯಕ್ಕೆ ಜೈನರು ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಅದರ ಅಡಿಪಾಯದ ಮೇಲೆ ನಮ್ಮ ಭವ್ಯ ಸಾಹಿತ್ಯ ಸೌಧ ನಿರ್ಮಾಣಗೊಂಡಿದೆ. ಇವತ್ತು ಜೈನರ ಒಟ್ಟು ಜನಸಂಖ್ಯೆಯ ಪ್ರಮಾಣ ಶೇಕಡಾ ಒಂದಕ್ಕಿಂತ ಕಡಿಮೆ ಇರಬಹುದು. ಆದರೆ ಪ್ರಾಚೀನ ಕನ್ನಡ ಸಾಹಿತ್ಯದ ಆರಂಭದಿಂದ ತೊಡಗಿ ನಡುಗನ್ನಡವನ್ನೂ ಸೇರಿಸಿಕೊಂಡರೆ ಅವರ ಕೊಡುಗೆ ಸಂಖ್ಯೆಯಲ್ಲಿ ಮಾತ್ರ ಅಲ್ಲ, ಗುಣಮಟ್ಟದಲ್ಲೂ ಕನ್ನಡ ಸಾಹಿತ್ಯದ ಅರ್ಧಭಾಗವನ್ನು ಗಾಢವಾಗಿ ಆವರಿಸುತ್ತದೆ. ಒಂದು ಅಂದಾಜಿನ ಪ್ರಕಾರ ಸುಮಾರು 450 ಜೈನ ಕವಿಗಳು, 520ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಪುರಾಣ, ಮಹಾಕಾವ್ಯ, ಜನಪದ ಕಥೆ, ಕಾವ್ಯಶಾಸ್ತ್ರ, ಛಂದಸ್ಸು, ವ್ಯಾಕರಣ, ಸೂಪಶಾಸ್ತ್ರ, ಗಣಿತಶಾಸ್ತ್ರ, ಚಂಪೂ, ಗದ್ಯ, ಸಾಂಗತ್ಯ, ಮುಕ್ತಕ -ಹೀಗೆ ಹಲವು ಪ್ರಕಾರಗಳಲ್ಲಿ ಹಲವು ಪ್ರಬೇಧಗಳಲ್ಲಿ ಕನ್ನಡ ಜೈನಸಾಹಿತ್ಯದ ಹರಹು ಚಾಚಿಕೊಂಡಿದೆ” ಎಂದು ಜೈನರ ಕೊಡುಗೆಗಳನ್ನು ಶ್ಲಾ ಘಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿ (ರಿ.) ಉಜಿರೆಯ ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ಅವರು ಮಾತನಾಡಿ “ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಐವತ್ತು ವರ್ಷಗಳಲ್ಲಿ ಐದುನೂರು ವರ್ಷಗಳಿಗಾಗುವಷ್ಟು ಕೆಲಸವನ್ನು ಮಾಡಿದ್ದು ಅದನ್ನು ಮುಂದುವರೆಸುವ ಹೊಣೆ ನಮ್ಮೆಲ್ಲರ ಮೇಲಿದೆ” ಎಂದರು.
ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಬರಹಗಾರ ನಾಡೋಜ ಡಾ. ಹಂಪ ನಾಗರಾಜಯ್ಯನವರು ಮಾತನಾಡಿ “ಜೈನರಿಗೆ ಅಂತರಿಕ ಶೋಧದಷ್ಟೇ ಸಾಮಾಜಿಕ ಮುಖಗಳೂ ಮುಖ್ಯ. ಈ ಪುರಸ್ಕಾರ ಅದರ ಭಾಗವೆಂದು ಹೇಳಿದರು. ಪುರಸ್ಕೃತರಾದ ಡಾ. ಪ್ರೀತಿ ಶುಭಚಂದ್ರ ಅವರು ತಮ್ಮ ವಿದ್ಯಾರ್ಥಿನಿ. ಸೌಮ್ಯ ಸ್ವಭಾವದ ಆದರೆ ಅಧ್ಯಯನಶೀಲೆಯಾದ ಅವರಿಗೆ ಪುರಸ್ಕಾರ ದೊರಕಿರುವುದು ತಮಗೆ ಇನ್ನೊಮ್ಮೆ ಪುರಸ್ಕಾರ ದೊರಕಿದ ಭಾವವನ್ನು ತಂದಿದೆ” ಎಂದರು. ಪುರಸ್ಕೃತರಾದ ಡಾ. ಪ್ರೀತಿ ಶುಭಚಂದ್ರ ಅವರು ಮಾತನಾಡಿ “ಪಂಪ, ರತ್ನಕಾರವರ್ಣಿ ಕಾವ್ಯದಲ್ಲಿ ಚಿತ್ರಿಸಿದ ಬಾಹುಬಲಿಯನ್ನು ಚಾವುಂಡರಾಯರು ಮೂರ್ತಿರೂಪಕ್ಕೆ ತಂದವರು. ಅವರ ಹೆಸರಿನಲ್ಲಿನ ಪ್ರಶಸ್ತಿ ಧನ್ಯತೆಯನ್ನು ತಂದಿದೆ” ಎಂದು ಹೇಳಿ ಪುರಸ್ಕಾರವನ್ನು ಇತ್ತೀಚಿಗೆ ನಮ್ಮನ್ನು ಅಗಲಿದ ಡಾ. ಕಮಲಾ ಹಂಪನಾ ಅವರ ನೆನಪಿಗೆ ಅರ್ಪಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನಕಗಿರಿ ಕ್ಷೇತ್ರದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮಿಗಳು “ಕನ್ನಡವನ್ನು ಜೈನರು ತಮ್ಮ ಭಾಷೆಯನ್ನಾಗಿಸಿಕೊಂಡು ಸ್ವಾಧ್ಯಯನದಿಂದ ಬೆಳೆಸಿದ್ದಾರೆ. ಶ್ರದ್ದೆ-ಶಾಸ್ತ್ರಗಳಿಗೆ ಅವರು ನೀಡಿದ ಕೊಡುಗೆ ಮಹತ್ವದ್ದು” ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜ್ ಅವರು ಸ್ವಾಗತಿಸಿ, ಇನ್ನೊಬ್ಬ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿಯವರು ವಂದನೆಗಳನ್ನು ಅರ್ಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಕಾರ್ಯಕ್ರಮವನ್ನು ನಿರೂಪಿಸಿದರು.