ಚೆನ್ನೈ: ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಹಾಗೂ ಚೆನ್ನೈಯ ಮಧುರಧ್ವನಿ ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 13-05-2023, ಶನಿವಾರ ಸಂಜೆ ಗಂಟೆ 6ಕ್ಕೆ ಅರ್ಕೆ ಕನ್ವೆಂಷನ್ ಸೆಂಟರ್, ಮೈಲಾಪುರ್, ಚೆನ್ನೈ ಇಲ್ಲಿ ನಡೆಯಲಿದೆ.
ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 11 ಕಚೇರಿಗಳು ನಡೆದಿದ್ದು, ಈ 12ನೆಯ ಸಂಗೀತ ಕಚೇರಿಯು ಹೊರ ರಾಜ್ಯದಲ್ಲಿ ನಡೆಯುತ್ತಿರುವ ಪ್ರಪ್ರಥಮ ಕಾರ್ಯಕ್ರಮವಾಗಿರುತ್ತದೆ.
‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಶ್ರುತಿ ಎಸ್. ಭಟ್ ಚೆನ್ನೈ, ಶ್ರೇಯಾ ಕೊಳತ್ತಾಯ ಮಂಗಳೂರು, ಅತ್ರೆಯೀ ಕೃಷ್ಣಾ ಕಾರ್ಕಳ, ಅದಿತಿ ಬಿ. ಪ್ರಹ್ಲಾದ್ ಬೆಂಗಳೂರು, ದಿವ್ಯಶ್ರೀ ಮಣಿಪಾಲ, ಕೆ. ಆಶ್ವೀಜಾ ಉಡುಪ ಕಿನ್ನಿಗೋಳಿ ಮತ್ತು ಮೇಧಾ ಉಡುಪ ಮಂಗಳೂರು, ವಯಲಿನ್ ನಲ್ಲಿ ಶ್ರೀಲಕ್ಷ್ಮೀ ಎಸ್. ಭಟ್ ಚೆನ್ನೈ, ಮೃದಂಗದಲ್ಲಿ ಸರ್ವೇಶ ಕಾರ್ತಿಕ್ ಚೆನ್ನೈ, ಖಂಜೀರದಲ್ಲಿ ಆರ್. ಸಾಯಿ ಭರತ್ ಚೆನ್ನೈ ಹಾಗೂ ತಂಬೂರದಲ್ಲಿ ಸುಮೇಧಾ ಸಾಯಿ ಚೆನ್ನೈ ಸಹಕರಿಸಲಿರುವರು.
ಈ ಸಂದರ್ಭದಲ್ಲಿ ಸಂಗೀತಗಾರರು ಮತ್ತು ಸಂಗೀತ ಸಂಯೋಜಕರಾದ ಡಾ. ರಾಜಕುಮಾರ ಭಾರತಿ ಇವರಿಗೆ ಅವರ ಗುರುಗಳಾದ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಸಂಗೀತ ಕಲಾನಿಧಿ ಡಾ. ಟಿ.ವಿ.ಗೋಪಾಲಕೃಷ್ಣನ್ ಅಭಿನಂದಿಸಲಿರುವರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ನಲ್ಲಿ ಕುಪ್ಪುಸ್ವಾಮಿ ಚೆಟ್ಟಿ ವಹಿಸಲಿದ್ದು, ಅತಿಥಿಗಳಾಗಿ ಯುಎಸ್ಎ ಕ್ಲೀವ್ಲ್ಯಾಂಡ್ ತ್ಯಾಗರಾಜ ಉತ್ಸವದ ಸಂಸ್ಥಾಪಕ ಮತ್ತು ಕಾರ್ಯದರ್ಶಿ ಶ್ರೀ ವಿ.ವಿ. ಸುಂದರಾಂ, ಕರುಂಬಿತ್ತಿಲ್ ಶಿಬಿರದ ಸಂಘಟಕರು ಹಾಗೂ ಹಿರಿಯ ಪಿಟೀಲು ವಾದಕ ವಿದ್ವಾನ್ ವಿಠಲ್ ರಾಮಮೂರ್ತಿ, ಶ್ರೀಮತಿ. ಡಾ ಮಣಿ ಕೃಷ್ಣಸ್ವಾಮಿ ಫೌಂಡೇಶನ್ ಚೆನ್ನೈ ಇದರ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಎಂ.ಕೆ. ಸುದರ್ಶನ್, ಕರ್ನಾಟಕ ಸಂಘ, ಚೆನ್ನೈ ಮಾಜಿ ಅಧ್ಯಕ್ಷರು ಶ್ರೀ ಪಿ. ನಾರಾಯಣ ಭಟ್ ಭಾಗವಹಿಸಲಿರುವರು.