ಶಂಭೂರು : ಮಕ್ಕಳ ಕಲಾ ಲೋಕ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇವರ ನೇತೃತ್ವದಲ್ಲಿ ಹಾಗೂ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇದರ ಆಶ್ರಯದಲ್ಲಿ 18ನೇ ವರ್ಷದ ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವು ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 19 ನವೆಂಬರ್ 2024ರಂದು ಜರಗಲಿದೆ. ಮಕ್ಕಳಿಂದಲೇ ಅಧ್ಯಕ್ಷತೆ, ಉದ್ಘಾಟನೆ, ವೇದಿಕೆ ನಿರ್ವಹಣೆಗಳು ನಡೆಯಲಿದ್ದು, ಹಿರಿಯರು ಹಿನ್ನೆಲೆಯಲ್ಲಿ ಅಗತ್ಯ ಬಂದಾಗ ಮಾರ್ಗದರ್ಶನ ಮಾಡುವರು. 18 ವಯೋಮಾನದವರೆಗಿನ ಮಕ್ಕಳು ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬಹುದು. ಯಾವುದೇ ನಿರ್ಬಂಧಗಳಿರುವುದಿಲ್ಲ, ಶಾಲೆಯಿಂದ ಭಾಗವಹಿಸುವ ಮಕ್ಕಳಿಗೆ ಸಂಖ್ಯಾ ಮಿತಿ ಇರುವುದಿಲ್ಲ. ಸ್ಪರ್ಧೆ ಮತ್ತು ಬಹುಮಾನಗಳಿರದ ವಿಶಿಷ್ಟವಾದ ಕಾರ್ಯಕ್ರಮ. ಭಾಗವಹಿಸಿದವರೆಲ್ಲರಿಗೂ ಪ್ರಮಾಣ ಪತ್ರ ಮತ್ತು ಪುಸ್ತಕ ಸ್ಮರಣಿಕೆ ನೀಡಲಾಗುತ್ತದೆ. ಮಕ್ಕಳಿಗೆ ಸಾಹಿತ್ಯ ಮತ್ತು ಕಲೆಗಳಲ್ಲಿ ತೊಡಗಲು ಪ್ರೇರಣೆ ಕೊಡುವ ಮತ್ತು ಹಿಂಜರಿಕೆ, ಸಂಕೋಚ, ಭಯಗಳನ್ನು ತೊಲಗಿಸಲು ‘ಮಕ್ಕಳ ಕಲಾ ಲೋಕ’ ವಿಶೇಷ ಪ್ರಯತ್ನವನ್ನು ಮಾಡುತ್ತದೆ ಎಂದು ಮಕ್ಕಳ ಕಲಾಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ಹೇಳಿದರು.
ಸಾಹಿತ್ಯ ಸಮ್ಮೇಳನದಲ್ಲಿ ಎಂಟು ನಿಮಿಷಗಳ ಅವಧಿಯ ಹತ್ತು ಮಕ್ಕಳು ಭಾಗವಹಿಸಲು ಅವಕಾಶವಿರುವ ಕಲಾ ರಂಗ ಸಂಗಮ ಕಾರ್ಯಕ್ರಮವಿದೆ. ಬಂಟ್ವಾಳ ತಾಲೂಕಿನ ಜೀವಂತ ಕವಿಯೊಬ್ಬರ ಪ್ರಕಟಿತ ಕವನವನ್ನು ಕೆಲವರು ಹಾಡುತ್ತಿದ್ದಂತೆ ಉಳಿದವರು ಅಭಿನಯ ಮತ್ತು ಹಾಡಿಗೆ ಪೂರಕ ಚಿತ್ರವನ್ನು ಬಿಡಿಸುವ ಏಕ ಕಾಲದಲ್ಲಿ ಜರಗುವ ಕಲಾ ಕಾರ್ಯಕ್ರಮವಿದು. ಹಾಡುವವರು ಸರಳ ಪಕ್ಕ ವಾದ್ಯಗಳನ್ನು ನುಡಿಸುತ್ತಾ ಹಾಡುಬಹುದು. ಆಯ್ದ ಹಾಡಿನ ಕವಿಗಳ ಇರುವಿಕೆಯ ಮಾಹಿತಿಯನ್ನು ಸಂಘಟಕರಿಗೆ ನೀಡಿದಲ್ಲಿ ಅವರನ್ನು ವೇದಿಕೆಯಲ್ಲಿ ಗುರುತಿಸಲು ಅವಕಾಶವಿದೆ.
ಹತ್ತು ನಿಮಿಷಗಳ ಅವಧಿಯ ಕಿರು ನಾಟಕ ಪ್ರದರ್ಶನ ನೀಡಲು ಅವಕಾಶವಿದೆ. ವೇದಿಕೆಯೇರಬಹುದಾದ ಮಕ್ಕಳ ಸಂಖ್ಯೆಗೆ ಮಿತಿಯಿಲ್ಲ, ಸರಳ ವೇಷ ಭೂಷವಿದ್ದರೆ ಸಾಕು. ನಾಟಕದಿಂದ ಸಮಾಜಕ್ಕೊಂದು ಉತ್ತಮ ಸಂದೇಶದ ರವಾನೆಯಾಗಬೇಕೆಂಬ ಸದಾಶಯವಿದೆ. ಮಾತುಕತೆ ಕಾರ್ಯಕ್ರಮದಲ್ಲಿ ಆಶು ಭಾಷಣ ಮಾಡಿಸಲಾಗುತ್ತದೆ. ಭಾಗವಹಿಸಿದವರಲ್ಲಿ ಕೆಲವು ಉತ್ತಮಗಳನ್ನು ಸಾಹಿತ್ಯ ಗೋಷ್ಠಿಯ ಜೊತೆಗೆ ಸಂಯೋಜಿಸಿ ಮುಖ್ಯ ವೇದಿಕೆಯಲ್ಲಿ ಭಾಷಣ ಮಾಡಲು ಅವಕಾಶ ನೀಡಲಾಗುವುದು. ಸ್ವ-ಸಾಹಿತ್ಯ ರಚನೆಗೆ ಸ್ಥಳದಲ್ಲಿಯೇ ವಿಷಯ ನೀಡಲಾಗುತ್ತದೆ. ಮಕ್ಕಳು ತಮ್ಮ ಆಸಕ್ತ ಕ್ಷೇತ್ರದಲ್ಲಿ ಕೊಟ್ಟ ವಿಷಯದಲ್ಲಿಯೇ ಸಾಹಿತ್ಯ ಸ್ವರಚನೆ ಮಾಡಬಹುದು. ಯಾರ ನೆರವನ್ನೂ ಪಡೆಯದೇ ಸ್ವರಚನೆಯಲ್ಲಿ ತೊಡಗುವುದು. ಭಾಗವಹಿಸಿದವರಿಂದ ಪ್ರತಿಭೆಗಳನ್ನು ಆಯ್ದು ಗೋಷ್ಠಿಯ ವೇದಿಕೆಗೆ ತರಲಾಗುವುದು.
ಸಾಹಿತ್ಯ ಗೋಷ್ಠಿಯು ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಅವರ ಯೋಚನೆಯ ಒರೆಯನ್ನು ವಿಸ್ತರಿಸಲು ಒಂದು ಸದವಕಾಶ. ಇನ್ನೂ ಉತ್ತಮ ಹಂತಕ್ಕೆ ಯೋಚನೆ ಮಾಡಲು ಮಕ್ಕಳಿಗೆ ಗೋಷ್ಠಿ ಪ್ರೇರಣೆಯಾಗಲಿದೆ. ಈ ಸಾಲಿನ ಸಾಹಿತ್ಯ ಸ್ವರಚನೆಯ ಪ್ರೇರಣಾ ಕಮ್ಮಟಗಳಲ್ಲಿ ಭಾಗವಹಿಸಿದ ಮಕ್ಕಳ ಸ್ವರಚನೆಗಳಿಂದ ಆಯ್ದವುಗಳನ್ನು ಸಂಕಲಿಸಿ ಮುದ್ರಿತ ಕೃತಿರೂಪದಲ್ಲಿ ಬಿಡುಗಡೆಗೊಳಿಸುವ ಯೋಜನೆಯೂ ಇದೆ. ಅಲ್ಲದೆ ಮಕ್ಕಳ ಸ್ವರಚಿತ ಮುದ್ರಿತ ಕೃತಿಗಳ ಬಿಡುಗಡೆಯಿರುತ್ತದೆ. ತಾಲೂಕಿನ ಸ್ವರಚಿತ ಸಾಹಿತ್ಯ ಕೃತಿಯೊಂದಕ್ಕೆ ಮಕ್ಕಳ ಕಲಾ ಲೋಕ ಸಣ್ಣ ಮೊಬಲಗಿನ ನೆರವು ನೀಡುತ್ತದೆ. ಈ ನೆರವಿನಲ್ಲಿ ಸಾಹಿತ್ಯಾಸಕ್ತರು ಕೈ ಜೋಡಿಸುತ್ತಾರೆ. ಸರಕಾರದ ಸಹಾಯವಿರುವುದಿಲ್ಲ. ಸಾರ್ವಜನಿಕರ ಸಹಕಾರವೇ ಮುಖ್ಯವಾಗಿರುತ್ತದೆ. ಮಕ್ಕಳ ಕಲಾ ಲೋಕದ ಸಾಹಿತ್ಯ ಸಮ್ಮೇಳನವನ್ನು ಊರವರೇ ನಡೆಸಿಕೊಡುತ್ತಾ ಬರುವಷ್ಟರ ತನಕ ಮಕ್ಕಳ ಕಲಾ ಲೋಕ ಪಾರದರ್ಶಕರಾಗಿರುವುದು ನಮ್ಮ ಹೆಗ್ಗಳಿಕೆ. ಬಹುಸಂಖ್ಯೆಯಲ್ಲಿ ಬಂಟ್ವಾಳ ತಾಲೂಕಿನಿಂದ ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕರು ಮತ್ತು ಸಾಹಿತ್ಯ ಪ್ರೇಮಿಗಳು ಭಾಗವಹಿಸಿ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಮೆರುಗು ನೀಡಲು ಮಕ್ಕಳ ಕಲಾ ಲೋಕದ ವಿನಂತಿಯಿದೆ.