ಮಂಗಳೂರು: ರಾಷ್ಟ್ರೀಯ ಸಾಂಸ್ಕೃತಿಕ ಸಂಘಟನೆಯಾದ ‘ಸ್ಪಿಕ್ ಮೆಕೆ’ಯ ಪ್ರಾದೇಶಿಕ ಕೇಂದ್ರಗಳಲ್ಲಿ ಒಂದಾದ ಎನ್. ಐ. ಟಿ. ಕೆ. ಸುರತ್ಕಲ್ ಇಲ್ಲಿನ ವಿದ್ಯಾರ್ಥಿಗಳು ಆಯೋಜಿಸುವ ‘ಆರಾಧನ 2025’ರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ಚಿನ್ಮಯೀ ಕೋಟಿಯಾನ್ ಇವರಿಂದ ಭರತನಾಟ್ಯ ಕಾರ್ಯಕ್ರಮ ದಿನಾಂಕ 06 ಫೆಬ್ರವರಿ 2025 ರಂದು ನಡೆಯಿತು. ಈಕೆ ಡಾ. ಭ್ರಮರಿ ಶಿವಪ್ರಕಾಶ್ ನೇತೃತ್ವದ ‘ನಾದನೃತ್ಯ ಕಲಾಸಂಸ್ಥೆ’ಯಲ್ಲಿ 7 ವರ್ಷಗಳಿಂದ ನೃತ್ಯ ಶಿಕ್ಷಣ ಪಡೆಯುತ್ತಿದ್ದಾರೆ.
ಮಂಗಳೂರಿನಲ್ಲಿರುವ ಶಾರದಾ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಈಕೆ ಸಂಗೀತ, ಭರತನಾಟ್ಯ, ಭಾಗವದ್ಗೀತ ಕಂಠಪಾಠ, ಮೂಕಾಭಿನಯ, ಪ್ರಬಂಧ ಸ್ಪರ್ಧೆ ಮುಂತಾದವುಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗೆದ್ದಿರುತ್ತಾಳೆ. ಸಂಗೀತದಲ್ಲೂ ಆಸಕ್ತಿ ಹೊಂದಿರುವ ಈಕೆ ಸಂಗೀತದ ಆರಂಭಿಕ ಶಿಕ್ಷಣವನ್ನು ವಿದುಷಿ ಸಾವಿತ್ರಿ ರಾವ್ ಇವರಿಂದ ಪಡೆದು ಇದೀಗ ಸೀನಿಯರ್ ಹಂತದ ಶಿಕ್ಷಣವನ್ನು ವಿದುಷಿ ಶಿಲ್ಪಾ ರಾವ್ ಇವರ ಬಳಿ ಮುಂದುವರಿಸುತ್ತಿದ್ದಾಳೆ.
ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ 96% ಅಂಕಗಳೊಂದಿಗೆ ತೇರ್ಗಡೆ ಹೊಂದಿರುವ ಈಕೆ ವೀಣಾ ವಾದನದಲ್ಲೂ ಆಸಕ್ತಿ ಹೊಂದಿದ್ದು, ಗುರು ವಿದ್ವಾನ್ ಗೋಪಾಲ್ ಎಂ. ಇವರ ಬಳಿ ಅಭ್ಯಾಸ ನಡೆಸುತ್ತಿದ್ದಾಳೆ. ವೀಣಾ ವಾದನ ಪರೀಕ್ಷೆಯಲ್ಲಿ 79% ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾಳೆ.