ಬೆಂಗಳೂರು : ಬೆಂಗಳೂರಿನ ವಿಜಯನಗರ ಬಡಾವಣೆಯಲ್ಲಿರುವ ವಿಜಯನಗರ ಬಿಂಬ, ರಂಗ ಶಿಕ್ಷಣ ಕೇಂದ್ರದವರು ಕಳೆದ ಇಪ್ಪತ್ತೆಂಟು ವರ್ಷಗಳಿಂದ ಮಕ್ಕಳಿಗಾಗಿ ಮಕ್ಕಳ ಬೇಸಿಗೆ ಶಿಬಿರಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಈ ವರ್ಷದ ಮಕ್ಕಳ ಬೇಸಿಗೆ ಶಿಬಿರವು ದಿನಾಂಕ 29-03-2024ರಂದು ಪ್ರಾರಂಭವಾಗಿ ದಿನಾಂಕ 01-05-2024ರಂದು ಮುಕ್ತಾಯವಾಯಿತು.
3 ವರ್ಷದಿಂದ 8 ವರ್ಷದ ಮಕ್ಕಳಿಗಾಗಿ ‘ಚಿಣ್ಣರ ಚಿತ್ತಾರ’ ಮತ್ತು 8ರಿಂದ 15 ವರ್ಷದ ಮಕ್ಕಳಿಗಾಗಿ ‘ಚಿಣ್ಣರ ಚಾವಡಿ’ ಈ ಶೀರ್ಷಿಕೆಗಳ ಅಡಿಯಲ್ಲಿ ಬೇಸಿಗೆ ಶಿಬಿರಗಳು ನಡೆಯತ್ತವೆ. ಈ ಎರಡೂ ಶಿಬಿರಗಳಲ್ಲೂ ಮಕ್ಕಳ ವಯೋಮಾನಕ್ಕೆ ತಕ್ಕಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಮನೋವಿಕಾಸಕ್ಕೆ, ಬೌದ್ಧಿಕ ಬೆಳವಣಿಗೆಗೆ ಅನಕೂಲಕರವಾಗುವಂತಹ ತರಗತಿಗಳು ನಡೆಯಿತು.
ಚಿತ್ರಕಲೆ, ಕುಶಲ ಕಲೆ, ರಂಗ ಸಂಗೀತ, ಸುಗಮ ಸಂಗೀತ, ರಿದಂ, ಸಂವಾದ, ಪ್ರಶ್ನಾರ್ಥ ಪತ್ರಿಕಾಗೋಷ್ಠಿ, ಸಮೂಹ ಮಾಧ್ಯಮಗಳಾದ ದೂರದರ್ಶನ, ರೇಡಿಯೋ ಸೃಜನಶೀಲ ಮಾಧ್ಯಮಗಳಾದ ಅನಿಮೇಷನ್, ರೋಬೋಟಿಕ್ಸ್, ಪಬ್ಲಿಕ್ ಫೋರಂನಲ್ಲಿ ಮಕ್ಕಳಿಂದಲೇ ನಡೆದ ಹೊರಾಂಗಣ ಚಿತ್ರೀಕರಣ, ಮಕ್ಕಳೇ ಬರೆದ ಸ್ವರಚಿತ ಕವನಗಳ ವಾಚನ ಹೀಗೇ ಅನೇಕ ವೈವಿಧ್ಯಮಯವಾದ ಕಾರ್ಯಕ್ರಮಗಳು ಜರುಗಿದವು.
ಆಯಾಯ ಕ್ಷೇತ್ರಗಳಲ್ಲಿ ನುರಿತ, ಅನುಭವಿ, ಪ್ರತಿಭಾವಂತ ಪರಿಣಿತರ ಉಪಸ್ಥಿತಿಯಲ್ಲಿ ಈ ಎಲ್ಲ ತರಗತಿಗಳನ್ನು ನಡೆಸಲಾಯಿತು. ಇವುಗಳೇ ಅಲ್ಲದೆ ಮಕ್ಕಳಿಗೆ ಕ್ವಿಝ್ ಕಾರ್ಯಕ್ರಮ, ಚಿತ್ರಕಲೆ ಹಾಗೂ ಗಾಯನ ಸ್ಫರ್ಧೆಗಳು ಮತ್ತು ಪಿಕ್ ಅಂಡ್ ಆಕ್ಟ್ ಸ್ಫರ್ಧೆಗಳಿದ್ದವು. ಮಕ್ಕಳು ಎಲ್ಲಾ ಸ್ಪರ್ಧೆಗಳಲ್ಲೂ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು.
ಈ ವರ್ಷದ ಈ ಬೇಸಿಗೆ ಶಿಬಿರದಲ್ಲಿ ಶಿಬಿರಾರ್ಥಿಗಳೇ ನಡೆಸಿಕೊಡುವ ಮಕ್ಕಳ ಪ್ರಶ್ನಾರ್ಥ ಕಾರ್ಯಕ್ರಮವನ್ನು ಏಷ್ಯಾ ನೆಟ್ ಸುವರ್ಣ ನ್ಯೂಸ್ನ ಸಂಪಾದಕ ಶ್ರೀ ಅಜಿತ್ ಹನುಮಕ್ಕನವರ್ ನಡೆಸಿಕೊಟ್ಟರು. ಈ ಬೇಸಿಗೆ ಶಿಬಿರದ ಮುಖ್ಯ ಆಕರ್ಷಣೆ ಮಕ್ಕಳಿಗಾಗಿ ಮಕ್ಕಳಿಂದ ಪ್ರದರ್ಶನಗೊಳ್ಳುವ ನಾಟಕಗಳು. ಇದಕ್ಕಾಗಿ ಮಕ್ಕಳಿಗೆ ವಿಶೇಷವಾಗಿ ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಶಿಕ್ಷಕರಿಂದ ತಾಲೀಮು ಕೊಡಲಾಯಿತು.
ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಪ್ರತಿಭಾವಂತ ನಿರ್ದೇಶಕರುಗಳಾದ ಡಾ. ಕಶ್ಯಪ್, ಡಾ. ಸುಷ್ಮಾ, ಡಾ. ಬೃಂದಾ ಇವರ ನಿರ್ದೇಶನದಲ್ಲಿ ಒಟ್ಟು ನಾಲ್ಕು ನಾಟಕಗಳು ಪ್ರದರ್ಶನಗೊಂಡವು. ಆರ್.ಪಿ.ಸಿ. ಲೇಔಟ್ ಚಿತ್ರಕೂಟ ಮಾಂಟೆಸ್ಸರಿ ಶಾಲೆಯ ಸಭಾಂಗಣದಲ್ಲಿ ಚಿಣ್ಣರ ಚಿತ್ತಾರ ತಂಡದ ಮಕ್ಕಳಿಂದ ದಿನಾಂಕ 13-04-2024ರಂದು ‘ಬಣ್ಣದ ಲೋಕ’ ಹಾಗೂ ‘ಒಂದೇ ಸರ್ತಿ’ ಎಂಬ ಎರಡು ನಾಟಕಗಳು ಪ್ರದರ್ಶಿತವಾಯಿತು. ದಿನಾಂಕ 30-04-2024ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಚಿಣ್ಣರ ಚಾವಡಿ ತಂಡದಿಂದ ‘ಕಲಿತವರು’ ಹಾಗೂ ‘ಆ ಮನಿ ಈ ಮನಿ’ ಎಂಬ ಮತ್ತೆರಡು ನಾಟಕಗಳು ಪ್ರದರ್ಶನಗೊಂಡವು.
ವಿಜಯನಗರ ಬಿಂಬದ ಮುಖ್ಯಸ್ಥೆ ಶ್ರೀಮತಿ ಶೋಭಾ ಮತ್ತು ಶ್ರೀ ವೆಂಕಟೇಶ್ ದಂಪತಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಈ ವರ್ಷದ ಬೇಸಿಗೆ ಶಿಬಿರ ಬಹಳ ಯಶಸ್ವಿಯಾಗಿ ನೆರವೇರಿತು. ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೂ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೂ ಪ್ರಮಾಣಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ‘ಮೂರರಿಂದ ನೂರು’ ಇದು ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ ಧ್ಯೇಯ ವಾಕ್ಯ. ವರ್ಷದುದ್ದಕ್ಕೂ ಎಳೆಯರಿಗಾಗಿ ರಂಗಭೂಮಿಯ ಚಟುವಟಿಕೆಗಳನ್ನು ಹಾಗೂ ಹಿರಿಯರಿಗೆ ಡಿಪ್ಲೊಮಾ ತರಗತಿಗಳನ್ನು ನಡೆಸುತ್ತಾ ಬರುತ್ತಿದ್ದಾರೆ.