ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಇವರ ಸಹಯೋಗದಲ್ಲಿ ಜನನಿ ಫೌಂಡೇಶನ್ ಚಿಕ್ಕ ಕೊಂಡಗೋಳ ಹಾಗೂ ಹಾಸನಾಂಬ ಮಹಿಳಾ ಸಂಘ ಹೇಮಾವತಿ ನಗರ ಇವರ ಸಹಕಾರದಲ್ಲಿ 10ರಿಂದ 16 ವಯೋಮಾನದ ಮಕ್ಕಳಿಗಾಗಿ ಉಚಿತ ‘ಚಿಣ್ಣರ ಪ್ರತಿಭಾ ಕಲರವ’ ಶಿಬಿರವು ದಿನಾಂಕ 16 ಮೇ 2025 ರಿಂದ 18 ಮೇ 2025 ರವರೆಗೆ ಹಾಸನದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ನಡೆಯಿತು.
ಈ ಶಿಬಿರದ ಕಾರ್ಯಕ್ರಮದಲ್ಲಿ ‘ಕವಿ ಸಮಯ’ ವಿಷಯದಡಿ ಮಾತನಾಡಿದ ತುಮಕೂರು ಜಿಲ್ಲೆ ಪ್ರಸಿದ್ಧ ಕವಯಿತ್ರಿ ಲತಾಮಣಿ ಎಂ.ಕೆ. ತುರುವೇಕೆರೆ “ಭಾಷೆಯಲ್ಲಿನ ಅತ್ಯಂತ ವಿನೋದದ ಭಾಗವೇ ಶಿಶುಪ್ರಾಸ. ಮಕ್ಕಳ ತೊದಲು ನುಡಿಗಳಿಗೆ ಇದು ಅಡಿಪಾಯ ಹಾಕುತ್ತದೆ. ಶಿಶು ಕಾವ್ಯ ಜಗತ್ತಿನ ಜಂಜಡಗಳನ್ನೆಲ್ಲಾ ಮರೆಸಿ ಆನಂದದ ಕಡಲಲ್ಲಿ ತೇಲುವಂತೆ ಮಾಡುತ್ತದೆ. ಮಕ್ಕಳ ಮನೋವಿಕಾಸದಲ್ಲಿ ಶಿಶು ಪ್ರಾಸಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ದಿನಕರ ದೇಸಾಯಿ, ಪಂಜೆ ಮಂಗೇಶರಾಯ, ಸಿದ್ದಯ್ಯ ಪುರಾಣಿಕ, ಕುವೆಂಪು ಸೇರಿದಂತೆ ಕನ್ನಡದ ಅನೇಕ ಹಿರಿಯ ಸಾಹಿತಿಗಳು ಮಕ್ಕಳಿಗಾಗಿ ಕಥೆ, ನಾಟಕ, ಕವಿತೆಗಳನ್ನು ಬರೆದಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಶಿಬಿರದಲ್ಲಿ ಹಮ್ಮಿಕೊಂಡಿರುವ ಕವಿಸಮಯ ಶಿಶುಗೀತೆ ಕಮ್ಮಟ ಬಹಳ ಔಚಿತ್ಯಪೂರ್ಣವಾಗಿದೆ” ಎಂದು ಅಭಿಪ್ರಾಯಪಟ್ಟರು. ಮಕ್ಕಳಿಗೆ ಮಾದರಿ ಪ್ರಾಸ ಪದ್ಯಗಳನ್ನು ಪರಿಚಯಿಸುತ್ತಾ ಮಕ್ಕಳಿಂದಲೇ ಗೊತ್ತಿರುವ ವಿಷಯಗಳಡಿಯಲ್ಲಿ ಚಿಕ್ಕ ಚಿಕ್ಕ ಪ್ರಾಸಭರಿತ ಪದ್ಯಗಳನ್ನು ಬರೆಸಿದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಿಸ್ತಾರ ಅಕಾಡೆಮಿಯ ವೇದಶ್ರೀ ನಿಶಿತ್ ರವರು ‘ಮೋಜಿನ ಗಣಿತ’ ಹಾಗೂ ಚಿತ್ರ ಕಲಾವಿದೆ ಬಿಂದು ಎಚ್.ಎಸ್.ರವರು ‘ಮಂಡಲ ಕ್ರಾಫ್ಟ್’ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ರಾಜ್ಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾ, ತಾಲೂಕು ಕಾರ್ಯದರ್ಶಿ ಸಿ.ಎನ್. ನೀಲಾವತಿ, ಜಿಲ್ಲಾ ಮುಖ್ಯ ಆಯುಕ್ತ ಡಾ. ವೈ.ಎಸ್. ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ಜಿಲ್ಲಾ ಖಜಾಂಚಿ ಆರ್.ಎಸ್. ರಮೇಶ್, ಜನನಿ ಫೌಂಡೇಷನ್ ಅಧ್ಯಕ್ಷೆ ಎಚ್.ಎಸ್. ಭಾನುಮತಿ, ಹಾಸನಾಂಬ ಮಹಿಳಾ ಸಂಘದ ಅಧ್ಯಕ್ಷೆ ಪದ್ಮಾವತಿ ವೆಂಕಟೇಶ್, ಪೋಷಕರಾದ ಚಂದನ ಚನ್ನರಾಯಪಟ್ಟಣ, ಕಾವ್ಯ, ಮಮತ, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.